ಪಾರಿವಾಳಗಳಿಗೆ ಕಾಳು ಕೊಡುವ ಅಭ್ಯಾಸ ನಿಮಗಿದ್ಯಾ? ಇದ್ರಿಂದ ಆರೋಗ್ಯಕ್ಕೆ ಏನೆಲ್ಲಾ ತೊಂದ್ರೆ ಆಗುತ್ತೆ ನೋಡಿ

ನಿಮಗೂ ಪಾರಿವಾಳಗಳಿಗೆ ಆಹಾರ ನೀಡುವ ಅಭ್ಯಾಸವಿದೆಯೇ? ಹಾಗಿದ್ದರೆ, ತಕ್ಷಣ ಅದನ್ನು ನಿಲ್ಲಿಸುವುದು ನಿಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಮಾತು ನಿಮಗೆ ಆಶ್ಚರ್ಯ ಹುಟ್ಟಿಸಬಹುದು ಆದರೆ ಇದು ಸತ್ಯ. ಪಕ್ಷಿಗಳಿಗೆ ಆಹಾರ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ವಾಸ್ತವವಾಗಿ, ಇದು ಒಳ್ಳೆಯ ಅಭ್ಯಾಸ. ಆದರೆ, ಪಾರಿವಾಳಗಳ ವಿಷಯಕ್ಕೆ ಬಂದಾಗ, ಇದು ಖಂಡಿತವಾಗಿಯೂ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು. ಹಾಗಾದರೆ ಪಾರಿವಾಳಗಳಿಗೆ ಯಾಕೆ ಆಹಾರ ನೀಡಬಾರದು? ಇದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಉದ್ಭವಿಸಬಹುದು? ಈ ಅಭ್ಯಾಸ ಏಕೆ ಒಳ್ಳೆಯದಲ್ಲ? ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪಾರಿವಾಳಗಳಿಗೆ ಕಾಳು ಕೊಡುವ ಅಭ್ಯಾಸ ನಿಮಗಿದ್ಯಾ? ಇದ್ರಿಂದ ಆರೋಗ್ಯಕ್ಕೆ ಏನೆಲ್ಲಾ ತೊಂದ್ರೆ ಆಗುತ್ತೆ ನೋಡಿ
Pigeon Feeding

Updated on: Aug 02, 2025 | 3:28 PM

ಪಾರಿವಾಳಗಳನ್ನು (Pigeons) ಕಂಡ ತಕ್ಷಣ, ಕೆಲವರು ಅವುಗಳಿಗೆ ತಿನ್ನುವುದಕ್ಕೆ ಕಾಳುಗಳನ್ನ ಹಾಕುತ್ತಾರೆ. ಬಳಿಕ ಅವು ಗುಂಪು ಗುಂಪಾಗಿ ಬಂದು ಆಹಾರ ತಿನ್ನುತ್ತವೆ. ಇದೇ ರೀತಿ ಪ್ರತಿದಿನ ಆಹಾರ ನೀಡುವುದಕ್ಕೆ ಪ್ರಾರಂಭ ಮಾಡಿದರೆ ಅವು ಬಂದು ಒಂದೊಂದೇ ಕಾಳುಗಳನ್ನು ಹೆಕ್ಕಿ ತಿನ್ನುವಾಗ ನೋಡುವುದಕ್ಕೆ ಚೆಂದ ಕಾಣುತ್ತದೆ. ಇದಲ್ಲದೆ, ಪಕ್ಷಿಗಳಿಗೆ ಆಹಾರ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಈ ಅಭ್ಯಾಸ ಹಲವಾರು ಆರೋಗ್ಯ ಸಮಸ್ಯೆಗಳ ಅಪಾಯಕ್ಕೆ ಕಾರಣವಾಗಬಹುದು ಎಂದರೆ ನಂಬುತ್ತೀರಾ? ಹೌದು. ಈ ಬಗ್ಗೆ ಸ್ವತಃ ವೈದ್ಯರೇ ಎಚ್ಚರಿಸುತ್ತಿದ್ದಾರೆ. ಮುಂಬೈನ ಸೈಫೀ ಆಸ್ಪತ್ರೆಯ ಕನ್ಸಲ್ಟೆಂಟ್ ಫಿಸಿಶಿಯನ್ ಮತ್ತು ಕ್ರಿಟಿಕಲ್ ಕೇರ್ ಮೆಡಿಸಿನ್ ಮುಖ್ಯಸ್ಥ ಡಾ. ದೀಪೇಶ್ ಜಿ. ಅಗರ್ವಾಲ್ (Dr. DEEPESH G. AGGARWAL) ಹೇಳುವ ಪ್ರಕಾರ, ಈ ರೀತಿಯ ಅಭ್ಯಾಸ ಇದ್ದರೆ ಅದನ್ನು ಆದಷ್ಟು ಬೇಗ ಬಿಡುವುದು ಉತ್ತಮ ಎನ್ನುತ್ತಾರೆ. ಹಾಗಾದರೆ ಪಾರಿವಾಳಗಳಿಗೆ ಯಾಕೆ ಆಹಾರ ನೀಡಬಾರದು? ಇದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಉದ್ಭವಿಸಬಹುದು? ಈ ಅಭ್ಯಾಸ ಏಕೆ ಒಳ್ಳೆಯದಲ್ಲ? ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪಾರಿವಾಳದ ಹಿಕ್ಕೆಗಳಿಂದ ಹರಡುತ್ತೆ ಭಯಾನಕ ರೋಗ;

ಅನೇಕರು ಛಾವಣಿಗಳ ಮೇಲೆ ಪ್ರತಿದಿನವೂ ಪಾರಿವಾಳಗಳಿಗೆ ಆಹಾರ ನೀಡುತ್ತಾರೆ. ಅವು ವಿವಿಧ ಸ್ಥಳಗಳಿಂದ ಆಹಾರಕ್ಕಾಗಿ ಅಲ್ಲಿ ಬಂದು ಸೇರುತ್ತವೆ. ಈ ರೀತಿಯ ಅಭ್ಯಾಸ ಹೆಚ್ಚಾಗಿ ಬೆಂಗಳೂರು, ಹೈದರಾಬಾದ್, ದೆಹಲಿ ಮತ್ತು ಮುಂಬೈನಂತಹ ನಗರಗಳಲ್ಲಿ ಕಂಡುಬರುತ್ತದೆ. ಪಕ್ಷಿಗಳಿಗೆ ಆಹಾರ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ವಾಸ್ತವವಾಗಿ, ಇದು ಒಳ್ಳೆಯ ಅಭ್ಯಾಸ. ಆದರೆ, ಪಾರಿವಾಳಗಳ ವಿಷಯಕ್ಕೆ ಬಂದಾಗ, ಇದು ಖಂಡಿತವಾಗಿಯೂ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು. ಡಾ. ದೀಪೇಶ್ ಜಿ. ಅಗರ್ವಾಲ್ ಅವರು ನೀಡಿರುವ ಮಾಹಿತಿ ಅನುಸಾರ ಇದು ತಿಳಿಯದೆಯೇ ರೋಗಗಳನ್ನು ತರುವ ಅಭ್ಯಾಸವಾಗಿದ್ದು, ಅನೇಕ ವೃದ್ಧರು ಮತ್ತು ಬೆಳಿಗ್ಗೆ ವಾಕ್ ಹೋಗುವವರು ಪಾರಿವಾಳಗಳಿಗೆ ಆಹಾರ ನೀಡುವಂತಹ ಕೆಲವು ಜಾಗಗಳಿಗೆ ಭೇಟಿ ನೀಡುತ್ತಾರೆ. ಮಾತ್ರವಲ್ಲ ಅಂತಹ ಜಾಗದ ಸುತ್ತಲೂ ಇರುವ ಸ್ಥಳೀಯರಿಗೆ, ವ್ಯಾಪಾರಸ್ಥರು ಕೆಲವು ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುವ ಸಾಧ್ಯತೆ ಇರುತ್ತದೆ. ಪಾರಿವಾಳಗಳನ್ನು ವಾಸ್ತವದಲ್ಲಿ ಹಾರುವ ಇಲಿಗಳು ಎಂದು ಕರೆಯಲಾಗುತ್ತದೆ. ಇದರರ್ಥ ಇಲಿಗಳಿಂದ ಅನೇಕ ಆರೋಗ್ಯ ಸಮಸ್ಯೆಗಳು ಉದ್ಭವಿಸುವಂತೆಯೇ, ಪಾರಿವಾಳಗಳು ಇದೇ ರೀತಿಯ ಸಮಸ್ಯೆಗಳನ್ನು ಉಂಟುಮಾಡಬಹುದು. ಮಾತ್ರವಲ್ಲ ಪಾರಿವಾಳಗಳ ಮೂಲಕ ರೋಗಗಳು ವೇಗವಾಗಿ ಹರಡುತ್ತವೆ. ಪಾರಿವಾಳದ ಹಿಕ್ಕೆಗಳು ಸಹ ಅಪಾಯಕಾರಿ. ಅವು ಹೆಚ್ಚಿನ ಮಟ್ಟದ ಯೂರಿಕ್ ಆಮ್ಲ ಮತ್ತು ಅಮೋನಿಯಾವನ್ನು ಹೊಂದಿರುತ್ತವೆ. ಈ ಕಾರಣದಿಂದಾಗಿ, ಈ ಹಿಕ್ಕೆಗಳು ಇರುವಲ್ಲೆಲ್ಲಾ ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ರೂಪುಗೊಳ್ಳುವ ಸಾಧ್ಯತೆ ಹೆಚ್ಚು. ಇವು ಎಲ್ಲೆಡೆ ಬೇಗನೆ ಹರಡುತ್ತವೆ. ಇದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಇದರಿಂದ ಯಾವ ರೀತಿ ರೋಗಗಳು ಬರುತ್ತೆ?

ಹಿಸ್ಟೋಪ್ಲಾಸ್ಮಾಸಿಸ್ ಎಂಬ ರೋಗವು ಪಾರಿವಾಳಗಳಿಂದ ಉಂಟಾಗುತ್ತದೆ ಎಂದು ಡಾ. ದೀಪೇಶ್ ಜಿ. ಅಗರ್ವಾಲ್ ಹೇಳುತ್ತಾರೆ. ಇದು ಶ್ವಾಸಕೋಶದ ಸೋಂಕಾಗಿದ್ದು ಪಾರಿವಾಳದ ಹಿಕ್ಕೆಗಳ ಮೂಲಕ ಹರಡುತ್ತದೆ. ಇದರೊಂದಿಗೆ, ಕ್ರಿಪ್ಟೋಕೊಕೊಸಿಸ್ ಎಂಬ ಮತ್ತೊಂದು ರೀತಿಯ ಶಿಲೀಂಧ್ರ ಸೋಂಕಿನ ಅಪಾಯವಿದೆ. ಇದು ಶ್ವಾಸಕೋಶದ ಜೊತೆಗೆ ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ. ಈ ಸ್ಥಿತಿ ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ಜನರ ಮೇಲೆ ಪರಿಣಾಮ ಬೀರುತ್ತದೆ. ಸೈಟೋಕೊಕೊಸಿಸ್ ಎಂಬ ಮತ್ತೊಂದು ಕಾಯಿಲೆಯ ಅಪಾಯವೂ ಇದೆ, ಇದನ್ನು ಗಿಳಿ ಜ್ವರ ಎಂದೂ ಕರೆಯುತ್ತಾರೆ. ಇದು ಬಹುತೇಕ ನ್ಯುಮೋನಿಯಾವನ್ನು ಹೋಲುತ್ತದೆ. ಇದರ ಜೊತೆಗೆ, ಹೈಪರ್ಸೆನ್ಸಿಟಿವಿಟಿ ನ್ಯುಮೋನೈಟಿಸ್ ಎಂಬ ಮತ್ತೊಂದು ಕಾಯಿಲೆ ಕೂಡ ಬರುವ ಸಾಧ್ಯತೆ ಇರುತ್ತದೆ. ಇದು ಶ್ವಾಸಕೋಶದಲ್ಲಿ ಸಂಭವಿಸುವ ಅಲರ್ಜಿಯಾಗಿದೆ. ಇದು ಪಾರಿವಾಳದ ಗರಿಗಳು ಮತ್ತು ಹಿಕ್ಕೆಗಳ ಮೂಲಕ ಹರಡುತ್ತದೆ.

ಇದನ್ನೂ ಓದಿ
ಪ್ರತಿದಿನ ಕಾಫಿ ಕುಡಿಯುವುದರಿಂದ ಏನೆಲ್ಲಾ ಆಗುತ್ತೆ ಗೊತ್ತಾ?
ಹೃದಯಾಘಾತಕ್ಕೂ ಮುನ್ನ ಚರ್ಮದಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತಂತೆ
ಈ ಆಯುರ್ವೇದ ಅಭ್ಯಾಸಗಳನ್ನು ಅನುಸರಿಸಿದರೆ ಲಿವರ್ ಆರೋಗ್ಯವಾಗಿರುತ್ತೆ!
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ರೀತಿ ಅಂಜೂರ ಸೇವನೆ ಮಾಡಿ

ಇದನ್ನೂ ಓದಿ: ಬೆಂಗಳೂರಿನಲ್ಲಿ ಪಾರಿವಾಳಗಳಿಗೆ ಆಹಾರ ಹಾಕಿದ್ರೆ 200 ರೂ. ದಂಡ

ನಗರಗಳಲ್ಲಿ ತೀವ್ರ ಕೆಮ್ಮು ಮತ್ತು ಉಸಿರಾಟದ ಸೋಂಕಿನಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು ಪಾರಿವಾಳಗಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದ ಈ ಸಮಸ್ಯೆಗಳು ಉಂಟಾಗುತ್ತವೆ. ಪಾರಿವಾಳಗಳಿಗೆ ಅತಿಯಾಗಿ ಆಹಾರ ನೀಡುವುದರಿಂದ ಅವುಗಳ ಜನಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದ್ದು, ಸಾರ್ವಜನಿಕ ಸ್ಥಳಗಳು ಅವುಗಳ ತ್ಯಾಜ್ಯದಿಂದ ತುಂಬಿ ಹೋಗಿವೆ. ಇದಲ್ಲದೆ, ಬ್ರೆಡ್ ಮತ್ತು ಬಿಸ್ಕತ್ತುಗಳಂತಹ ಹೆಚ್ಚಿನ ಪ್ರೋಟೀನ್ ಆಹಾರಗಳು ಕೂಡ ಪಾರಿವಾಳಗಳ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಮನೆಯ ಎಸಿ ಬಾಕ್ಸ್‌ಗಳಲ್ಲಿ ಮತ್ತು ನಿರ್ಮಾಣ ಚರಂಡಿಗಳಲ್ಲಿ ಪಾರಿವಾಳಗಳ ಹಿಕ್ಕೆಗಳು ಶಿಲೀಂಧ್ರ ರಚನೆಗೆ ಕಾರಣವಾಗಬಹುದು, ಇದು ಮಕ್ಕಳಿಗೆ ಗಂಭೀರ ಆರೋಗ್ಯ ಅಪಾಯವನ್ನು ಉಂಟು ಮಾಡಬಹುದು ಮತ್ತು ವೃದ್ಧರಿಗೂ ಹಾನಿಕಾರಕವಾಗಿದೆ. ಆದ್ದರಿಂದ, ಜನರು ಸಾಧ್ಯವಾದಷ್ಟು ಪಾರಿವಾಳಗಳಿಗೆ ಆಹಾರವನ್ನು ನೀಡುವುದನ್ನು ತಡೆಯಬೇಕೆಂದು ವೈದ್ಯರು ಶಿಫಾರಸು ಮಾಡುತ್ತಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ