
ನಿದ್ರೆ ಮಾಡುವಾಗ ನಮಗೆ ಲೋಕದ ಪರಿವಿರುವುದಿಲ್ಲ. ಆದರೆ ಕೆಲವೊಮ್ಮೆ ನಿದ್ರೆ (Sleep) ಮಾಡುವಾಗ ಇದ್ದಕ್ಕಿದ್ದಂತೆ ಯಾರೋ ನಮ್ಮನ್ನು ಕೆಳಗೆ ಎಳೆದಂತಾಗುವುದು ಅಥವಾ ಎತ್ತರದಿಂದ ಬೀಳುವಂತಾಗುವುದು ಹೀಗೆ ನಾನಾ ರೀತಿಯ ಅನುಭವಗಳಾಗಿರುತ್ತವೆ. ಮಾತ್ರವಲ್ಲ ಕೆಲವೊಮ್ಮೆ ದೇಹ ಒಮ್ಮೆ ನಡುಗಿದಂತಾಗಿ ಎಚ್ಚರವಾಗುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ, ಇದನ್ನು ಹಿಪ್ನಿಕ್ ಜರ್ಕ್ (Hypnic Jerks) ಅಥವಾ ಸ್ಲೀಪ್ ಸ್ಟಾರ್ಟ್ ಎಂದು ಕರೆಯಲಾಗುತ್ತದೆ. ಇದು ದೇಹ ನಿದ್ರೆಗೆ ಪ್ರವೇಶಿಸುವ ಪ್ರಕ್ರಿಯೆ ಭಾಗ ಅಥವಾ ಸಾಮಾನ್ಯ ನರವೈಜ್ಞಾನಿಕ ಪ್ರತಿಕ್ರಿಯೆ. ಸಂಶೋಧನೆಯ ಪ್ರಕಾರ, ಸುಮಾರು 60- 70% ಜನರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆ ಅಥವಾ ಹೆಚ್ಚು ಬಾರಿ ಇದನ್ನು ಅನುಭವಿಸಿರುತ್ತಾರೆ. ಆದರೆ ಈ ರೀತಿ ದೇಹ ಒಮ್ಮೆಲೇ ನಡುಗುವುದಕ್ಕೆ ಕಾರಣವೇನು? ಯಾಕೆ ನಮಗೆ ಆ ಸಮಯದಲ್ಲಿ ಎಚ್ಚರವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಡಾ. ದಲ್ಜೀತ್ ಸಿಂಗ್ ಹೇಳುವ ಪ್ರಕಾರ, ನಮ್ಮ ದೇಹ ಆಳವಾದ ನಿದ್ರೆಗೆ ಜಾರುವಾಗ, ದೇಹದ ಸ್ನಾಯುಗಳು ಕ್ರಮೇಣ ವಿಶ್ರಾಂತಿ ಪಡೆಯುತ್ತವೆ. ಕೆಲವೊಮ್ಮೆ, ಮೆದುಳು ಈ ವಿಶ್ರಾಂತಿಯನ್ನು ಗಂಭೀರ ಅಪಾಯದ ಸಂಕೇತ ಎಂದುಕೊಂಡು, ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತದೆ ಹಾಗಾಗಿ ಅದಕ್ಕೆ ತಕ್ಷಣ ಪ್ರತಿಕ್ರಿಯಿಸುತ್ತದೆ. ಆಗ ದೇಹ ಒಮ್ಮೆ ನಡುಗಿದಂತಾಗುತ್ತದೆ, ಇದರಿಂದ ನಾವು ಬೆಚ್ಚಿಬಿದ್ದು ಎಚ್ಚರಗೊಳ್ಳುತ್ತೇವೆ. ಇದನ್ನು ಹಿಪ್ನಿಕ್ ಜರ್ಕ್ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯು ದೇಹಕ್ಕೆ ಹಾನಿಕಾರಕವಲ್ಲ, ಆದರೆ ಕೆಲವು ಸಂದರ್ಭಗಳಲ್ಲಿ, ಇದು ಪದೇ ಪದೇ ಸಂಭವಿಸಬಹುದು, ನಿದ್ರೆಗೆ ಅಡ್ಡಿಪಡಿಸಿ ಮರುದಿನದ ಆಯಾಸಕ್ಕೆ ಕಾರಣವಾಗಬಹುದು.
ಹೆಚ್ಚಿನ ಸಂದರ್ಭಗಳಲ್ಲಿ, ನಿದ್ರೆಯ ಸಮಯದಲ್ಲಿ ಜರ್ಕಿಂಗ್ ಸಾಮಾನ್ಯ, ಆದರೆ ಈ ರೀತಿ ಪ್ರತಿ ರಾತ್ರಿ ಆಗುತ್ತಿದ್ದರೆ, ನಿದ್ರೆಯ ಗುಣಮಟ್ಟದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಅಥವಾ ಉಸಿರಾಟದ ತೊಂದರೆ, ತ್ವರಿತ ಹೃದಯ ಬಡಿತ, ಆತಂಕ ಅಥವಾ ಬೆವರುವಿಕೆಯಂತಹ ಲಕ್ಷಣಗಳೊಂದಿಗೆ ಕಂಡುಬರುವುದು ಗಂಭೀರ ಸಂಕೇತವಾಗಿರಬಹುದು. ಅಂತಹ ಲಕ್ಷಣಗಳು ರೆಸ್ಟ್ಲೆಸ್ ಲೆಗ್ ಸಿಂಡ್ರೋಮ್, ಸ್ಲೀಪ್ ಅಪ್ನಿಯಾ ಅಥವಾ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳ ಭಾಗವಾಗಿರಬಹುದು. ಆದ್ದರಿಂದ, ಜರ್ಕಿಂಗ್ ಪದೇ ಪದೇ ಸಂಭವಿಸಿ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇದನ್ನೂ ಓದಿ: ರಾತ್ರಿ ಮಲಗುವ ಮೊದಲು ಈ ಕೆಲಸಗಳನ್ನು ಮಾಡಬಾರದು ಎನ್ನುತ್ತಾರೆ ಡಾ. ಸೌರಭ್ ಸೇಥಿ
ನಿದ್ರೆಯ ಸಮಯದಲ್ಲಿ ಸಡನ್ನಾಗಿ ಉಂಟಾಗುವ ಜರ್ಕಿಂಗ್ ಅನ್ನು ತಪ್ಪಿಸಲು, ನಿದ್ರೆಯಲ್ಲಿ ಕ್ರಮಬದ್ಧತೆಯನ್ನು ಕಾಪಾಡಿಕೊಳ್ಳುವುದು. ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದು ಮತ್ತು ಎಚ್ಚರಗೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಮಲಗುವ ಎರಡು ಗಂಟೆಗಳ ಮೊದಲು ಕೆಫೀನ್, ಆಲ್ಕೋಹಾಲ್ ಮತ್ತು ಹೊಟ್ಟೆ ಬಿರಿಯುವಷ್ಟು ಊಟ ಮಾಡುವುದನ್ನು ತಪ್ಪಿಸಬೇಕು. ಜೊತೆಗೆ ತಡರಾತ್ರಿ ವರೆಗೆ ಫೋನ್, ಲ್ಯಾಪ್ಟಾಪ್ ಅಥವಾ ಪರದೆಗಳನ್ನು ನೋಡುವ ಅಭ್ಯಾಸವನ್ನು ಕಡಿಮೆ ಮಾಡಿ ಇದರ ಬದಲಾಗಿ ಪುಸ್ತಕವನ್ನು ಓದಿ ಅಥವಾ ಒಳ್ಳೆಯ ಸಂಗೀತವನ್ನು ಕೇಳಿ. ಮನಸ್ಸನ್ನು ಶಾಂತಗೊಳಿಸಲು ಮಲಗುವ ಮೊದಲು ಆಳವಾದ ಉಸಿರಾಟ ಅಥವಾ ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಎಲ್ಲಕ್ಕಿಂತ ಮುಖ್ಯವಾಗಿ, ದೇಹ ಮತ್ತು ಮನಸ್ಸು ಎರಡೂ ಸರಿಯಾಗಿ ವಿಶ್ರಾಂತಿ ಪಡೆಯಲು ಪ್ರತಿದಿನ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ