ಸೇಬು ಒಳ್ಳೆಯದು ಆದ್ರೆ ಅದರಲ್ಲಿರುವ ಬೀಜಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ! ಯಾಕೆ ಗೊತ್ತಾ?
ಸೇಬು ಹಣ್ಣಿನ ಸೇವನೆ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದಕ್ಕಾಗಿಯೇ ಈ ಹಣ್ಣಿಗೆ ಎಂದಿಗೂ ಬೇಡಿಕೆ ಕಡಿಮೆಯಾಗುವುದೇ ಇಲ್ಲ. ಆದರೆ ಸೇಬು ಹಣ್ಣು ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ, ಅವುಗಳಲ್ಲಿರುವ ಬೀಜಗಳು ಅಷ್ಟೇ ಹಾನಿಕಾರಕ. ಹೌದು. ಈ ವಿಷಯ ನಿಮಗೆ ಆಶ್ಚರ್ಯ ಹುಟ್ಟಿಸಬಹುದು ಆದರೆ ಇದು ನಿಜ. ಅಷ್ಟು ಚಿಕ್ಕ ಬೀಜಗಳಲ್ಲಿಯೂ ವಿಷಕಾರಿ ಅಂಶಗಳಿರುತ್ತವೆ ಹಾಗಾಗಿ ಸೇಬು ಹಣ್ಣಿನ ಬೀಜಗಳನ್ನು ಎಂದಿಗೂ ಸೇವನೆ ಮಾಡಬಾರದು. ಸೇಬು ಬೀಜಗಳ ಕುರಿತು ನಡೆದಂತಹ ವೈಜ್ಞಾನಿಕ ಸಂಶೋಧನೆಯಲ್ಲಿ ಈ ಆಘಾತಕಾರಿ ವಿಷಯ ಬಯಲಾಗಿದೆ. ಹಾಗಾದರೆ, ಯಾಕೆ ಸೇಬು ಹಣ್ಣಿನ ಬೀಜಗಳನ್ನು ಸೇವನೆ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

ಪ್ರತಿದಿನ ಒಂದು ಸೇಬು (Apple) ತಿನ್ನುವುದರಿಂದ ವಿವಿಧ ಕಾಯಿಲೆಗಳನ್ನು ದೂರವಿಡಬಹುದು ಜೊತೆಗೆ ವೈದ್ಯರಿಂದ ದೂರವಿರಬಹುದು ಎಂಬ ಮಾತಿದೆ. ಈ ಹಣ್ಣಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳಿದ್ದು, ಇದರಲ್ಲಿ ಕಂಡು ಬರುವ ಜೀವಸತ್ವಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ನಮ್ಮ ದೇಹವನ್ನು ಅನೇಕ ಕಾಯಿಲೆಗಳಿಂದ ದೂರವಿಡುತ್ತವೆ. ಹಾಗಾಗಿಯೇ ಸೇಬು ಹಣ್ಣನ್ನು ಹೆಚ್ಚು ಹೆಚ್ಚು ತಿನ್ನಿ ಎಂದು ವೈದ್ಯರು ಹೇಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸೇಬು ಹಣ್ಣಿಗೆ ಕೃತಕ ಬಣ್ಣ ಹಾಗೂ ಸಿಪ್ಪೆಗಳ ಸುತ್ತ ವ್ಯಾಕ್ಸ್ ಹಾಕುವುದರಿಂದ ಈ ಹಣ್ಣುಗಳ ಸೇವನೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಇದರ ಹೊರತಾಗಿಯೂ ಜನ ಸೇಬು ಹಣ್ಣುಗಳನ್ನು ಸಿಪ್ಪೆ, ಅದೊರಳಗಿನ ಬೀಜಗಳನ್ನು ತೆಗೆದು ತಿನ್ನುತ್ತಾರೆ. ಆದರೆ ಕೆಲವರು ಆ ಬೀಜಗಳನ್ನು ಸಹ ತಿನ್ನುತ್ತಾರೆ. ಈ ರೀತಿ ತಿನ್ನುವುದು ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಹೌದು. ಸೇಬು ಬೀಜಗಳ (Apple Seeds) ಕುರಿತು ನಡೆದಂತಹ ವೈಜ್ಞಾನಿಕ ಸಂಶೋಧನೆಯಲ್ಲಿ ಆಘಾತಕಾರಿ ಸತ್ಯ ಬಯಲಾಗಿದೆ. ಹಾಗಾದರೆ ಏನದು? ಯಾಕೆ ಸೇಬು ಹಣ್ಣಿನ ಬೀಜಗಳನ್ನು ಸೇವನೆ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.
ಯಾಕೆ ದೇಹಕ್ಕೆ ಹಾನಿಕಾರಕ?
ಸಾಮಾನ್ಯವಾಗಿ ಸೇಬಿನ ಬೀಜಗಳಲ್ಲಿ ಅಮಿಗ್ಡಾಲಿನ್ ಎಂಬ ವಿಷಕಾರಿ ಸಂಯುಕ್ತವಿರುತ್ತದೆ. ಸೇಬು ಹಣ್ಣಿನ ಬೀಜಗಳನ್ನು ಸೇವಿಸಿದಾಗ ಅಮಿಗ್ಡಾಲಿನ್ ದೇಹದಲ್ಲಿ ಹೈಡ್ರೋಜನ್ ಸೈನೈಡ್ ಆಗಿ ಪರಿವರ್ತನೆಗೊಳ್ಳುತ್ತದೆ. ಇದು ದೇಹಕ್ಕೆ ತುಂಬಾ ಹಾನಿಕಾರಕವಾಗಿದೆ. ಅದಕ್ಕಾಗಿಯೇ ಸಂಶೋಧಕರು ಹೆಚ್ಚಿನ ಪ್ರಮಾಣದಲ್ಲಿ ಸೇಬಿನ ಬೀಜಗಳನ್ನು ಸೇವಿಸಬೇಡಿ ಎಂದು ಸಲಹೆ ನೀಡುತ್ತಾರೆ. ಅಮಿಗ್ಡಾಲಿನ್ ಹೆಚ್ಚಾಗಿ ಸೇಬು, ಬಾದಾಮಿ, ಏಪ್ರಿಕಾಟ್, ಪೀಚ್, ಚೆರ್ರಿ ಮುಂತಾದ ಹಣ್ಣುಗಳಲ್ಲಿ ಕಂಡುಬರುತ್ತದೆ. ಇದನ್ನು ವಿಷಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ದೇಹದ ಜೀವಕೋಶಗಳಿಗೆ ಆಮ್ಲಜನಕ ತಲುಪುವುದನ್ನು ತಡೆಯುತ್ತದೆ. ಮಾತ್ರವಲ್ಲ, ಸಣ್ಣ ಪ್ರಮಾಣದ ಸೈನೈಡ್ ದೇಹಕ್ಕೆ ಅಲ್ಪಾವಧಿಯ ಹಾನಿಯನ್ನುಂಟುಮಾಡುತ್ತದೆ. ಇದು ತಲೆನೋವು, ಗೊಂದಲ, ಆಯಾಸ ಮತ್ತು ಆಲಸ್ಯದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ದೇಹದಲ್ಲಿ ಹೆಚ್ಚಿನ ಪ್ರಮಾಣದ ಸೈನೈಡ್ ಇದ್ದರೆ, ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಮತ್ತು ಮೂರ್ಛೆ ಹೋಗುವಂತಹ ಗಂಭೀರ ಸಮಸ್ಯೆಗಳು ಉಂಟಾಗಬಹುದು. ಕೆಲವೊಮ್ಮೆ ಇದು ಕೋಮಾ ಮತ್ತು ಸಾವಿಗೂ ಕೂಡ ಕಾರಣವಾಗಬಹುದು. ಅಮಿಗ್ಡಾಲಿನ್ ಮಾರಕವಲ್ಲದಿದ್ದರೂ, ಅದು ದೇಹಕ್ಕೆ ಹಾನಿಕಾರಕವಾಗಿದೆ. ಅದಕ್ಕಾಗಿಯೇ ಚಿಕ್ಕ ಮಕ್ಕಳಿಗೆ ತಿನಿಸುವಾಗ ಬೀಜಗಳನ್ನು ತೆಗೆದು ಕೊಡಬೇಕಾಗುತ್ತದೆ.
ಇದನ್ನೂ ಓದಿ: ಕಾಶ್ಮೀರ, ಹಿಮಾಚಲ ಅಲ್ಲ, ಮರಳುಗಾಡಿನಲ್ಲಿ ಸೇಬು ಬೆಳೆದು ಸೈ ಎನಿಸಿದ ರಾಜಸ್ಥಾನದ ರೈತರು
ಸಂಶೋಧನೆಯ ಪ್ರಕಾರ, ಅಮಿಗ್ಡಾಲಿನ್ ಪ್ರಮಾಣ ಸೇಬಿನ ವಿಧವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಇದು ನಾಲ್ಕು ಮಿಲಿಗ್ರಾಂಗಳ ವರೆಗೆ ಇರುತ್ತದೆ. ಬೀಜಗಳಿಂದ ಬಿಡುಗಡೆಯಾಗುವ ಸೈನೈಡ್ ಪ್ರಮಾಣ ಕೂಡ ತುಂಬಾ ಕಡಿಮೆ ಇರುತ್ತದೆ. 50- 300 ಮಿಗ್ರಾಂ ಹೈಡ್ರೋಜನ್ ಸೈನೈಡ್ ಮಾರಕವಾಗಬಹುದು. ಒಂದು ಗ್ರಾಂ ಸೇಬಿನ ಬೀಜವು 0.6 ಮಿಗ್ರಾಂ ಹೈಡ್ರೋಜನ್ ಸೈನೈಡ್ ಅನ್ನು ಹೊಂದಿರುತ್ತದೆ. ಇದರರ್ಥ 80 ರಿಂದ 500 ಬೀಜಗಳನ್ನು ಸೇವಿಸುವುದು ವ್ಯಕ್ತಿಯ ಜೀವಕ್ಕೆ ಅಪಾಯಕಾರಿ. ಅಧ್ಯಯನದಲ್ಲಿ, ಹೇಳಿರುವ ಪ್ರಕಾರ, ಸೇಬು ಹಣ್ಣು ಅಥವಾ ಅದರ ಜ್ಯೂಸ್ ಕುಡಿಯುವ ಮೊದಲು ಅದರಲ್ಲಿರುವ ಬೀಜಗಳನ್ನು ತೆಗೆದುಹಾಕಬೇಕು. ಅದರಲ್ಲಿಯೂ ಮಕ್ಕಳಿಗೆ ಸೇಬು ಹಣ್ಣಿನಿಂದ ಮಾಡಿದ ಆಹಾರ ನೀಡುವಾಗ ಬಹಳ ಜಾಗೃತವಾಗಿರಬೇಕು ಎಂದು ಹೇಳಲಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ