ಕಾಶ್ಮೀರ, ಹಿಮಾಚಲ ಅಲ್ಲ, ಮರಳುಗಾಡಿನಲ್ಲಿ ಸೇಬು ಬೆಳೆದು ಸೈ ಎನಿಸಿದ ರಾಜಸ್ಥಾನದ ರೈತರು
Apples grown in Rajasthan's desert regions: ಕಾಶ್ಮೀರ, ಹಿಮಾಚಲ, ಊಟಿ ಇತ್ಯಾದಿ ಶೀತ ಪ್ರದೇಶಗಳಲ್ಲಿ ಬೆಳೆಯುವಂತಹ ಸೇಬು ಹಣ್ಣನ್ನು ರಾಜಸ್ಥಾನದ ರೈತರು ಅಪ್ಪಿದ್ದಾರೆ. ಸಿಕರ್, ಝುನಝುನು ಜಿಲ್ಲೆಯಲ್ಲಿ ಈಗ ಹಲವು ರೈತರು ಸೇಬು ಬೆಳೆಯುತ್ತಿದ್ದಾರೆ. ಉಷ್ಣ ಪ್ರದೇಶಗಳಿಗೆ ಹೊಂದಿಕೆಯಾಗಬಲ್ಲಂತಹ ಎಚ್ಆರ್ಎಂಎನ್-99 ತಳಿಯ ಸೇಬನ್ನು ಇಲ್ಲಿ ಬೆಳೆಯಲಾಗುತ್ತಿದೆ. ಒಂದು ಎಕರೆ ಪ್ರದೇಶದಲ್ಲಿ ರೈತರಿಗೆ ಐದಾರು ಲಕ್ಷ ರೂನಷ್ಟಾದರೂ ಲಾಭ ಸಿಗುತ್ತದೆ.

ಜೈಪುರ್, ಮಾರ್ಚ್ 21: ಸೇಬು ಎಂದರೆ ಕಾಶ್ಮೀರದ ಸೇಬು ನೆನಪಿಗೆ ಬರಬಹುದು. ತಂಪು ವಾತಾವರಣ ಇರುವ ಹಿಮಾಲಯದಂತಹ ಪ್ರದೇಶಗಳಲ್ಲಿ ಸೇಬು ಸಹಜವಾಗಿ ಬೆಳೆಯುತ್ತದೆ. ಅಂತೆಯೇ, ಊಟಿ, ಕೊಡಗು ಇತ್ಯಾದಿ ಕಡೆಯೂ ಸೇಬನ್ನು (Apple cultivation) ಬೆಳೆಯಲಾಗುತ್ತದೆ. ರಾಜಸ್ಥಾನದಲ್ಲೂ ಈಗ ಕೆಲ ರೈತರು ಸೇಬು ಬೆಳೆದು ಸೈ ಎನಿಸಿದ್ದಾರೆ. ಮರುಗಾಡುಗಳನ್ನು ಒಳಗೊಂಡಿರುವ ರಾಜಸ್ಥಾನದ ಸಿಕರ್ ಮತ್ತು ಝನಝುನು ಜಿಲ್ಲೆಗಳಲ್ಲಿ ರೈತರು ಸೇಬು ಬೆಳೆಯುವ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ. ಶೀತದ ವಾತಾವರಣ ಬೇಡುವ ಸೇಬಿನ ಮರಗಳು, 45ರಿಂದ 50 ಡಿಗ್ರಿ ಬಿಸಿಲಿರುವ ಈ ಪ್ರದೇಶಗಳಲ್ಲಿ ಹೇಗೆ ಬೆಳೆದು ಫಲ ನೀಡುತ್ತಿವೆ ಎನ್ನುವುದೇ ಅಚ್ಚರಿ.
ಎಕರೆಗೆ ಆರು ಲಕ್ಷ ರೂ ಆದಾಯ?
ಸಿಕರ್ ಜಿಲ್ಲೆಯ ಸಂತೋಷ್ ಖೇದಾರ್ ಎನ್ನುವ ರೈತ ಮಹಿಳೆಯ ಸೇಬು ಬೆಳೆಯ ಯಶೋಗಾಥೆ ನಿಜಕ್ಕೂ ಗಮನ ಸೆಳೆಯುತ್ತದೆ. 2015ರಲ್ಲಿ ಈಕೆ ಗುಜರಾತ್ನ ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ನಲ್ಲಿ ಸುಮ್ಮನೆ ಪ್ರಯೋಗಕ್ಕೆಂದು ಸೇಬಿನ ಒಂದು ಗಿಡವನ್ನು ಕೊಂಡೊಯ್ದು ತಮ್ಮ ಜಮೀನಿನಲ್ಲಿ ನೆಟ್ಟಿದ್ದರು. ಇವತ್ತು ಅವರ ಒಂದೂಕಾಲು ಎಕರೆ ಭೂಮಿಯಲ್ಲಿ ಹಲವು ಸೇಬಿನ ಮರಗಳಿದ್ದು, ಪ್ರತೀ ಸೀಸನ್ನಲ್ಲಿ 6,000 ಕಿಲೋಗೂ ಹೆಚ್ಚು ಸೇಬು ಫಲ ಸಿಗುತ್ತಿದೆ.
ಇದನ್ನೂ ಓದಿ: ಯುಪಿಐ, ರುಪೇ ಕಾರ್ಡ್ ಪಾವತಿಗೆ ಸರ್ಕಾರದ ಸಬ್ಸಿಡಿಯಲ್ಲಿ ಖೋತಾ; ಪೇಮೆಂಟ್ ಉದ್ಯಮ ಕಂಗಾಲು
ಇವರದ್ದು ಸಾವಯವ ಕೃಷಿಯಾದ್ದರಿಂದ ಇವರ ಸೇಬಿಗೆ ಬೇಡಿಕೆ ಇದೆ. ಕಿಲೋಗೆ 150 ರೂಗೆ ಇವರು ಮಾರುತ್ತಿದ್ದಾರೆ. ಒಂದು ಸೀಸನ್ನಲ್ಲಿ ಸೇಬಿನಿಂದ ಇವರು 6-10 ಲಕ್ಷ ರೂ ಆದಾಯ ಗಳಿಸುತ್ತಿದ್ದಾರೆ.
2015ರಲ್ಲಿ ಇವರು ತಮ್ಮ ಜಮೀನಿನಲ್ಲಿ ಸೇಬು ತಂದು ನೆಟ್ಟಾಗ ಸುತ್ತಲಿನ ಗ್ರಾಮಸ್ಥರು ಅಪಹಾಸ್ಯ ಮಾಡಿದ್ದರು. ಸಂತೋಷ್ ಖೇದಾರ್ ಹಾಗೂ ಆಕೆಯ ಕುಟುಂಬದವರಿಗೂ ಸೇಬು ಬೆಳೆಯುವ ವಿಶ್ವಾಸ ಕಡಿಮೆಯೇ ಇತ್ತು. ಆದರೆ, ಸಾವಯವ ಗೊಬ್ಬರ, ನೀರನ್ನು ಆ ಗಿಡಕ್ಕೆ ಉಣಿಸುತ್ತಾ ಹೋದರು. ವರ್ಷದ ಬಳಿಕ ಮರದಲ್ಲಿ ಸೇಬು ಫಲ ಕೊಡಲು ಆರಂಭಿಸಿತು. ಎರಡನೇ ವರ್ಷದಲ್ಲಿ ಒಂದು ಮರದಲ್ಲಿ 40 ಕಿಲೊನಷ್ಟು ಸೇಬು ಹಣ್ಣು ಸಿಕ್ಕಿತಂತೆ.
ಎಚ್ಆರ್ಎಂಎನ್-99 ತಳಿಯ ಸೇಬು
ಗುಜರಾತ್ ಇನ್ನೋವೇಶನ್ ಫೌಂಡೇಶನ್ ಸಂಸ್ಥೆ ಎಚ್ಆರ್ಎಂಎನ್-99 ಎನ್ನುವ ವಿಶೇಷ ಸೇಬು ತಳಿ ಅಭಿವೃದ್ಧಿಪಡಿಸಿದೆ. ಇದು ಅತೀ ಉಷ್ಣ ವಾತಾವರಣದಲ್ಲೂ ಬೆಳೆಯುವ ಕ್ಷಮತೆ ಹೊಂದಿರುತ್ತದೆ. ಈ ಸೇಬು ಮರಗಳು ಒಂದು ಹಂತಕ್ಕೆ ಬೆಳೆದ ಬಳಿಕ ಹೆಚ್ಚು ನೀರು ಬೇಡುವುದಿಲ್ಲ. ಎರಡು ವಾರಕ್ಕೊಮ್ಮೆ ಮಾತ್ರವೇ ನೀರು ಹಾಯಿಸಿದರೆ ಸಾಕು.
ಸಂತೋಷ್ ಖೇದಾರ್ ಅವರ ಕುಟುಂಬ ತಮ್ಮ ಒಂದು ಸೇಬು ಮರ ಹುಲುಸಾಗಿ ಬೆಳೆದದ್ದು ಕಂಡು ಮತ್ತಷ್ಟು ಗಿಡಗಳನ್ನು ತಂದು ನೆಟ್ಟಿದ್ದಾರೆ. ಇವತ್ತು ಅವರು ಸುಮಾರು 100 ಸೇಬು ಮರಗಳನ್ನು ಹೊಂದಿದ್ದಾರೆ. ಮೊದಲಿಗೆ ಇವರನ್ನು ನೋಡಿ ನಕ್ಕಿದ್ದ ಗ್ರಾಮಸ್ಥರು, ಬಳಿಕ ತಾವೂ ಕೂಡ ಸೇಬು ಕೃಷಿಗೆ ತೊಡಗಿಕೊಂಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:44 pm, Fri, 21 March 25