
ಕ್ಯಾರೆಟ್ (Carrots) ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ತಿಳಿದ ವಿಚಾರ. ಆದರೆ ಆರೋಗ್ಯ (Health) ತಜ್ಞರು ವಾರಕ್ಕೆ ಎರಡು ಬಾರಿ ಕ್ಯಾರೆಟ್ ತಿನ್ನುವುದರಿಂದಲೂ ಗಂಭೀರ ಕಾಯಿಲೆಗಳಿಂದ ದೂರವಿರಲು ಸಹಾಯವಾಗುತ್ತದೆ ಎಂದು ಹೇಳುತ್ತಾರೆ. ಹೌದು, ಈ ತರಕಾರಿಯಲ್ಲಿ ಅಷ್ಟು ಶಕ್ತಿ ಇದೆ ಎಂದರೆ ನೀವು ನಂಬಲೇ ಬೇಕು. ಕ್ಯಾರೆಟ್ ಅನ್ನು ಸಲಾಡ್‌ಗಳಿಂದ ಹಿಡಿದು ಜ್ಯೂಸ್‌ಗಳವರೆಗೆ ಹಲವು ವಿಧಗಳಲ್ಲಿ ಸೇವನೆ ಮಾಡಬಹುದು. ಅದರಲ್ಲಿಯೂ ಈ ಚಳಿಗಾಲದಲ್ಲಿ ತಾಜಾ ತರಕಾರಿ, ಹಣ್ಣುಗಳ ಜೊತೆಗೆ ಕ್ಯಾರೆಟ್ ಕೂಡ ಮಾರುಕಟ್ಟೆಗೆ ಬರುವುದರಿಂದ ಯಾವುದೇ ರೀತಿಯ ತೊಂದರೆ ಇಲ್ಲದೆ ತಾಜಾ ಕ್ಯಾರೆಟ್ ಸೇವನೆ ಮಾಡಬಹುದಾಗಿದೆ. ಇದು ತಿನ್ನುವುದಕ್ಕೆ ರುಚಿಕರವಾಗಿರುವುದರ ಜೊತೆಗೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ.
ತಾಜಾ ಕ್ಯಾರೆಟ್‌ಗಳನ್ನು ಕೆಲವರು ಹಸಿಯಾಗಿ ತಿಂದರೆ ಇನ್ನು ಕೆಲವರು ಇದರಿಂದ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಸೇವನೆ ಮಾಡುತ್ತಾರೆ. ವಿಶೇಷವೆಂದರೆ ನೀವು ಈ ಕ್ಯಾರೆಟ್‌ಗಳನ್ನು ಹೇಗೆ ಸೇವಿಸಿದರೂ ಅವು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇತ್ತೀಚಿನ ಒಂದು ಅಧ್ಯಯನದ ಪ್ರಕಾರ, ವಾರಕ್ಕೆ 2 ರಿಂದ 4 ಹಸಿ ಕ್ಯಾರೆಟ್ ತಿನ್ನುವುದರಿಂದ ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯವನ್ನು ಸುಮಾರು 17 ಪ್ರತಿಶತದಷ್ಟು ಕಡಿಮೆ ಮಾಡಬಹುದಾಗಿದೆ. ಕೊಲೊರೆಕ್ಟಲ್ ಕ್ಯಾನ್ಸರ್ ಎಂದರೆ ದೊಡ್ಡ ಕರುಳು (ಕೊಲೊನ್) ಅಥವಾ ಗುದನಾಳದಲ್ಲಿ ಪ್ರಾರಂಭವಾಗುವ ಕ್ಯಾನ್ಸರ್ ಆಗಿದ್ದು, ಇದು ಸಾಮಾನ್ಯವಾಗಿ ಪಾಲಿಪ್ಸ್ ಎಂಬ ಬೆಳವಣಿಗೆಗಳಿಂದ ಉಂಟಾಗುತ್ತದೆ.
ಇದನ್ನೂ ಓದಿ: ಈ ತರಕಾರಿಗಳನ್ನು ಬೇಯಿಸುವುದು ಬೇಕಾಗಿಲ್ಲ ಹಸಿಯಾಗಿ ತಿನ್ನುವುದೇ ಪ್ರಯೋಜನಕಾರಿ
ಕ್ಯಾರೆಟ್‌ಗಳು ಕ್ಯಾರೊಟಿನಾಯ್ಡ್‌ಗಳು ಮತ್ತು ಲುಟೀನ್‌ನಂತಹ ಸಂಯುಕ್ತಗಳನ್ನು ಹೊಂದಿದ್ದು ವಾರಕ್ಕೆ ಕನಿಷ್ಠ ಎರಡು ಬಾರಿ ಅವುಗಳನ್ನು ಸೇವಿಸುವುದು ಒಳ್ಳೆಯದು. ಜೊತೆಗೆ ಕ್ಯಾರೆಟ್ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆಂಟಿ- ಇಂಫ್ಲಮೇಟರಿ ಗುಣಲಕ್ಷಣಗಳಿಂದ ರಕ್ತನಾಳಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ವಿಟಮಿನ್ ಕೆ, ವಿಟಮಿನ್ ಬಿ6 ಮತ್ತು ಇತರ ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಇದರಲ್ಲಿರುವ ಬೀಟಾ-ಕ್ಯಾರೋಟೀನ್ ರಾತ್ರಿ ಕುರುಡುತನ ಮತ್ತು ಕಣ್ಣಿನ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಆದರೆ ಕ್ಯಾರೆಟ್‌ನಿಂದ ತಯಾರಿಸಿದ ಸಿಹಿ ತಿಂಡಿಗಳು ಅಥವಾ ಇತರ ಆಹಾರಗಳನ್ನು ಸೇವಿಸುವುದಕ್ಕಿಂತ ಹಸಿ ಕ್ಯಾರೆಟ್ ತಿನ್ನುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಆದರೆ ಅತಿಯಾಗಿ ತಿಂದರೆ ಫೈಬರ್ ಅಂಶದಿಂದಾಗಿ ಹೆಚ್ಚಿನ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಸೇವನೆ ಮಾಡುವಾಗ ಎಚ್ಚರಿಕೆ ವಹಿಸಿ, ಆರೋಗ್ಯ ಕಾಪಾಡಿಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ