Mushroom Coffee
‘ಮಶ್ರೂಮ್ ಕಾಫಿ’ (Mushroom Coffee) ಬಗ್ಗೆ ಕೇಳಿದಾಗ ನಿಮಗೆ ಆಶ್ಚರ್ಯವಾಗಬಹುದು. ಇದರಿಂದಲೂ ಕಾಫಿ (Coffee) ಮಾಡುತ್ತಾರಾ ಎಂಬ ಕುತೂಹಲ ಕಾಡಬಹುದು! ಆದರೆ ನಿಮಗೆ ಗೊತ್ತಾ? ಈ ಕಾಫಿಯಲ್ಲಿ ಹಲವಾರು ರೀತಿಯ ಆರೋಗ್ಯ (Health) ಪ್ರಯೋಜನಗಳಿವೆ ಎಂದು ತಜ್ಞರು ಹೇಳುತ್ತಾರೆ. ಔಷಧೀಯ ಗುಣಗಳಿರುವ ಅಣಬೆಗಳಿಂದ ತಯಾರಿಸಲಾಗುವ ಕಾಫಿ ಬಹಳ ರೀತಿಯ ಆರೋಗ್ಯ ಸಮಸ್ಯೆಗೆ ರಾಮಬಾಣವಾಗಬಲ್ಲದು. ಒತ್ತಡ, ಆತಂಕ ಹೆಚ್ಚುತ್ತಿರುವ ಈ ದಿನಗಳಲ್ಲಿ ಈ ಕಾಫಿ ನಮ್ಮ ಯುವ ಜನರಿಗೆ ಅವಶ್ಯಕವಾಗಬಲ್ಲದು. ಮಾತ್ರವಲ್ಲ ಮಶ್ರೂಮ್ ಕಾಫಿಯಲ್ಲಿ ಕಾರ್ಡಿಸೆಪ್ಸ್ ಇದ್ದು, ಇದು ದೇಹದಲ್ಲಿ ಆಮ್ಲಜನಕದ ಬಳಕೆಯನ್ನು ಹೆಚ್ಚಿಸುತ್ತದೆ. ಆಯಾಸ ಮತ್ತು ದೌರ್ಬಲ್ಯದಂತಹ ಸಮಸ್ಯೆಗಳು ಕಡಿಮೆ ಮಾಡಲು ಸಹಕಾರಿಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಇದರಿಂದ ಸಿಗುವ ಮತ್ತಷ್ಟು ಪ್ರಯೋಜನಗಳ ಬಗ್ಗೆ ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
- ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಅಣಬೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿವೆ. ದೀರ್ಘಕಾಲದ ಉರಿಯೂತ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಬರುವಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
- ಅಣಬೆಗಳಲ್ಲಿ ಫೈಬರ್ ಅಂಶ ಹೇರಳವಾಗಿದ್ದು ಇದರಿಂದ ತಯಾರಿಸಿದ ಕಾಫಿ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆಯಾಗುತ್ತದೆ. ಮಾತ್ರವಲ್ಲ ಇವು ದೇಹದಲ್ಲಿನ ಬಿಳಿ ರಕ್ತ ಕಣಗಳನ್ನು ಸಕ್ರಿಯಗೊಳಿಸುತ್ತವೆ. ಸೋಂಕುಗಳ ವಿರುದ್ಧ ಹೋರಾಡುವ ಮೂಲಕ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತವೆ.
- ಮಶ್ರೂಮ್ ಕಾಫಿಯಲ್ಲಿ ವಿಟಮಿನ್ ಬಿ ಸಮೃದ್ಧವಾಗಿದೆ, ಇದು ನಮ್ಮ ದೇಹದಲ್ಲಿ ಶಕ್ತಿಯ ಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಜೊತೆಗೆ ಆಯಾಸವನ್ನು ಕಡಿಮೆ ಮಾಡುತ್ತದೆ, ಮಾತ್ರವಲ್ಲ ಇದು ಮೆದುಳಿನ ಕಾರ್ಯವನ್ನು ಹೆಚ್ಚಿಸುತ್ತದೆ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ.
- ಅಣಬೆಗಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುವ ಸಂಯುಕ್ತಗಳನ್ನು ಹೊಂದಿರುತ್ತವೆ. ಅವು ರಕ್ತನಾಳಗಳನ್ನು ರಕ್ಷಿಸಲು ಮತ್ತು ಹೃದಯ ಸಂಬಂಧಿ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
- ಅಣಬೆ ಕಾಫಿಯಲ್ಲಿ ಸಾಮಾನ್ಯ ಕಾಫಿಗಿಂತ ಕಡಿಮೆ ಕೆಫೀನ್ ಇರುತ್ತದೆ. ವಿಶೇಷವಾಗಿ ಸಂಜೆ ಸಮಯದಲ್ಲಿ ಇಂತಹ ಕಾಫಿ ಕುಡಿಯುವುದರಿಂದ ನಿದ್ರೆಗೆ ಯಾವುದೇ ರೀತಿಯಲ್ಲೂ ಭಂಗವಾಗುವುದಿಲ್ಲ. ಏಕೆಂದರೆ ಇದರಲ್ಲಿ ಕೆಫೀನ್ ಕಡಿಮೆ ಪ್ರಮಾಣದಲ್ಲಿರುವುದರಿಂದ ರಾತ್ರಿ ಸಮಯದಲ್ಲಿ ಒಳ್ಳೆ ನಿದ್ರೆ ಬರುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ