ಮಾಂಸಾಹಾರಕ್ಕಿಂತಲೂ ಹೆಚ್ಚು ಪ್ರೋಟೀನ್ ಹೊಂದಿರುವ ಈ ಬೀಜಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು!
ಕಲ್ಲಂಗಡಿ ಹಣ್ಣಿನ ಬೀಜಗಳನ್ನು ಸಾಮಾನ್ಯವಾಗಿ ಎಸೆಯುತ್ತೀರಾ? ಆದರೆ ಅವುಗಳ ಒಳಭಾಗದಲ್ಲಿ ಪ್ರೋಟೀನ್ ಮತ್ತು ಶಕ್ತಿಯನ್ನು ನೀಡುವ ಪೋಷಕಾಂಶಗಳಿವೆ. 100 ಗ್ರಾಂ ಕಲ್ಲಂಗಡಿ ಬೀಜದ ಒಳಭಾಗದಲ್ಲಿ ಸುಮಾರು 34 ಗ್ರಾಂ ಪ್ರೋಟೀನ್ ಇರಬಹುದು. ಜಿಮ್ ಮಾಡುವವರು, ಕ್ರೀಡಾಪಟುಗಳು ಮತ್ತು ಸಸ್ಯಾಹಾರದಿಂದ ಪ್ರೋಟೀನ್ ಪಡೆಯಲು ಬಯಸುವವರಿಗೆ ಇದು ಉತ್ತಮ ಆಹಾರ ಆಯ್ಕೆಯಾಗಬಹುದು.

ದೇಹಕ್ಕೆ ಅಗತ್ಯವಾದ ಪ್ರೋಟೀನ್ ಪಡೆಯಲು ಹೆಚ್ಚಿನವರು ಮೊಟ್ಟೆ, ಹಾಲು, ಮಾಂಸ ಮತ್ತು ಬೇಳೆಕಾಳುಗಳನ್ನು ಸೇವಿಸುತ್ತಾರೆ. ಆದರೆ ಕಡಿಮೆ ಬೆಲೆಗೆ ಉತ್ತಮ ಪ್ರಮಾಣದ ಪ್ರೋಟೀನ್ ಮತ್ತು ಶಕ್ತಿಯನ್ನು ನೀಡುವ ಮತ್ತೊಂದು ಆಹಾರವಿದೆ. ಅದುವೇ ಕಲ್ಲಂಗಡಿ ಬೀಜದ ಒಳಭಾಗ. ಹೌದು, ಇದು ಕೆಲವರಿಗೆ ಆಶ್ಚರ್ಯ ಹುಟ್ಟಿಸಬಹುದು. ಅದರಲ್ಲಿಯೂ ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣು ತಿಂದ ನಂತರ ಅದರ ಬೀಜಗಳನ್ನು ಎಸೆಯುತ್ತೇವೆ. ಆದರೆ ಈ ಬೀಜಗಳಲ್ಲಿರುವ ಕಪ್ಪು ಹೊರಪದರವನ್ನು ತೆಗೆದು ಒಳಗಿನ ಬಿಳಿ ಭಾಗವನ್ನು ಆಹಾರವಾಗಿ ಬಳಸಬಹುದು. ಇದರಲ್ಲಿ ಪ್ರೋಟೀನ್, ಕೊಬ್ಬು ಮತ್ತು ಶಕ್ತಿಯನ್ನು ನೀಡುವ ಪೋಷಕಾಂಶಗಳು ಹೇರಳವಾಗಿವೆ. ಹಾಗಾದರೆ ಇದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಕಲ್ಲಂಗಡಿ ಬೀಜದಲ್ಲಿ ಎಷ್ಟು ಪ್ರೋಟೀನ್ ಇದೆ?
ಲಭ್ಯವಿರುವ ಪೌಷ್ಟಿಕಾಂಶದ ಮಾಹಿತಿಯ ಪ್ರಕಾರ, 100 ಗ್ರಾಂ ಕಲ್ಲಂಗಡಿ ಬೀಜದ ಒಳಭಾಗದಲ್ಲಿ ಸುಮಾರು 34 ಗ್ರಾಂ ಪ್ರೋಟೀನ್ ಇರಬಹುದು. ಇದು ಸಸ್ಯಾಹಾರದಿಂದ ಪ್ರೋಟೀನ್ ಪಡೆಯಲು ಬಯಸುವವರಿಗೆ ಉತ್ತಮ ಆಯ್ಕೆಯಾಗಿದೆ. ಮಾಂಸಾಹಾರ ಸೇವಿಸದವರಿಗೂ ಮತ್ತು ಸೇವಿಸುವವರಿಗೂ ಇದು ಉಪಯುಕ್ತವಾಗಬಹುದು. ಇದರಲ್ಲಿರುವ ಪ್ರೋಟೀನ್ ಸ್ನಾಯುಗಳ ಬೆಳವಣಿಗೆ ಸಹಾಯ ಮಾಡುತ್ತದೆ. ಅಲ್ಲದೆ, 100 ಗ್ರಾಂ ಬೀಜದ ಒಳಭಾಗದಲ್ಲಿ ಸುಮಾರು 628 ಕ್ಯಾಲೊರಿಗಳಷ್ಟು ಶಕ್ತಿ ದೊರೆಯಬಹುದು. ಹೀಗಾಗಿ ಇದು ಪ್ರೋಟೀನ್ ಜೊತೆಗೆ ಹೆಚ್ಚಿನ ಶಕ್ತಿಯನ್ನು ಒದಗಿಸುವ ಆಹಾರವಾಗಿದೆ.
ಕಲ್ಲಂಗಡಿ ಬೀಜವನ್ನು ಹೇಗೆ ಸೇವಿಸಬೇಕು?
ಕಲ್ಲಂಗಡಿ ಬೀಜದ ಒಳಭಾಗವನ್ನು ನೇರವಾಗಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಬದಲು, ಸೂಕ್ತ ರೀತಿಯಲ್ಲಿ ತಯಾರಿಸಿ ತಿನ್ನಬಹುದು. ನೆನೆಸಿದ ಬೀಜಗಳು: 6ರಿಂದ 7 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ, ಮೊಳಕೆಕಾಳು ಅಥವಾ ಹಣ್ಣುಗಳ ಜೊತೆಗೆ ಸೇವಿಸಬಹುದು. ಹುರಿದ ಬೀಜಗಳು: ಬೀಜಗಳನ್ನು ಲಘುವಾಗಿ ಹುರಿದು ತಿಂಡಿಯಂತೆ ತಿನ್ನಬಹುದು. ಸಿಹಿ ಉಂಡೆಗಳು: ಹುರಿದ ಬೀಜಗಳಿಗೆ ಖರ್ಜೂರ ಅಥವಾ ಸ್ವಲ್ಪ ಜೇನುತುಪ್ಪ ಸೇರಿಸಿ ಉಂಡೆ ಮಾಡಿಕೊಳ್ಳಬಹುದು.
ಇದನ್ನೂ ಓದಿ: ಸಬ್ಬಸಿಗೆ ಬೀಜಗಳ ಆರೋಗ್ಯ ಪ್ರಯೋಜನಗಳು: ಸೇವಿಸುವ ಮೊದಲು ತಿಳಿಯಬೇಕಾದ ಸಂಗತಿಗಳು
ಯಾರಿಗೆ ಹೆಚ್ಚು ಪ್ರಯೋಜನಕಾರಿ?
ಜಿಮ್ ಮಾಡುವವರು, ಕ್ರೀಡಾಪಟುಗಳು, ದೇಹದ ಸ್ನಾಯುಗಳನ್ನು ಬೆಳೆಸಿಕೊಳ್ಳಲು ಬಯಸುವವರು ಮತ್ತು ಪ್ರೋಟೀನ್ಯುಕ್ತ ಆಹಾರ ಹುಡುಕುತ್ತಿರುವವರಿಗೆ ಕಲ್ಲಂಗಡಿ ಬೀಜದ ಒಳಭಾಗ ಉತ್ತಮ ಆಹಾರ ಆಯ್ಕೆಯಾಗಬಹುದು. ಕಡಿಮೆ ವೆಚ್ಚದಲ್ಲಿ ಪೌಷ್ಟಿಕಾಂಶ ಪಡೆಯಲು ಬಯಸುವವರಿಗೂ ಇದು ಸಹಕಾರಿ.
ಗಮನಿಸಿ: ಹೆಚ್ಚಿನ ಕ್ಯಾಲೊರಿ ಇರುವುದರಿಂದ ಪ್ರಮಾಣದ ಬಗ್ಗೆ ಎಚ್ಚರವಿರಲಿ. ಸಮತೋಲಿತ ಆಹಾರದ ಭಾಗವಾಗಿ ಸೇವಿಸುವುದು ಉತ್ತಮ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
