ಈ ರೀತಿಯಲ್ಲಿ ಆಹಾರ ಸೇವಿಸಿದರೆ ತೂಕ ಇಳಿಸಿಕೊಳ್ಳುವುದು ಸುಲಭ

|

Updated on: Sep 25, 2023 | 11:15 AM

Weight Loss Tips: ಊಟ ಅಥವಾ ತಿಂಡಿ ತಿನ್ನುವಾಗ ಹಲವರು ಮೊಬೈಲ್​ನಲ್ಲಿ ಇನ್​ಸ್ಟಾಗ್ರಾಂ, ಫೇಸ್​ಬುಕ್, ವಾಟ್ಸಾಪ್ ನೋಡುತ್ತಾ ಇರುತ್ತಾರೆ. ಆಗ ನೀವು ಎಷ್ಟು ತಿಂದಿರಿ, ಏನು ತಿಂದಿರಿ ಎಂಬುದು ನಿಮಗೆ ಗೊತ್ತಾಗುವುದಿಲ್ಲ. ನಾವು ತಿನ್ನುವ ಆಹಾರ ಎಷ್ಟು ಮುಖ್ಯವೋ ಅದನ್ನು ಹೇಗೆ ತಿನ್ನುತ್ತೇವೆ ಎಂಬುದು ಕೂಡ ಮುಖ್ಯ. ಆ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ.

ಈ ರೀತಿಯಲ್ಲಿ ಆಹಾರ ಸೇವಿಸಿದರೆ ತೂಕ ಇಳಿಸಿಕೊಳ್ಳುವುದು ಸುಲಭ
ಸಾಂದರ್ಭಿಕ ಚಿತ್ರ
Image Credit source: iStock
Follow us on

ಸ್ಥೂಲಕಾಯತೆ ಇಂದಿನ ಜನರೇಷನ್​ ಅನ್ನು ತೀವ್ರವಾಗಿ ಕಾಡುತ್ತಿರುವ ಆರೋಗ್ಯ ಸಮಸ್ಯೆ. ತೂಕ ಇಳಿಸಿಕೊಂಡು ಸುಂದರವಾಗಿ ಕಾಣಬೇಕು ಎಂದು ಎಲ್ಲರಿಗೂ ಆಸೆ ಇರುತ್ತದೆ. ಇದು ಸೌಂದರ್ಯಕ್ಕೆ ಮಾತ್ರವಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಬಹಳ ಮುಖ್ಯವಾಗಿದೆ. ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಮತ್ತು ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸಿದರೆ ತೂಕವನ್ನು ಕಡಿಮೆ ಮಾಡಬಹುದು. ನಾವು ತಿನ್ನುವ ಆಹಾರ ಎಷ್ಟು ಮುಖ್ಯವೋ ಅದನ್ನು ಹೇಗೆ ತಿನ್ನುತ್ತೇವೆ ಎಂಬುದು ಕೂಡ ಮುಖ್ಯ. ಆ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ.

ಊಟದ ಮೇಲೆ ಮಾತ್ರ ಗಮನವಿರಲಿ:

ಊಟ ಅಥವಾ ತಿಂಡಿ ತಿನ್ನುವಾಗ ಹಲವರು ಮೊಬೈಲ್​ನಲ್ಲಿ ಇನ್​ಸ್ಟಾಗ್ರಾಂ, ಫೇಸ್​ಬುಕ್, ವಾಟ್ಸಾಪ್ ನೋಡುತ್ತಾ ಇರುತ್ತಾರೆ. ಆಗ ನೀವು ಎಷ್ಟು ತಿಂದಿರಿ, ಏನು ತಿಂದಿರಿ ಎಂಬುದು ನಿಮಗೆ ಗೊತ್ತಾಗುವುದಿಲ್ಲ. ಹೀಗಾಗಿ, ಜರ್ನಲ್ ಆಫ್ ಎಕ್ಸ್‌ಪರಿಮೆಂಟಲ್ ಸೋಶಿಯಲ್ ಸೈಕಾಲಜಿಯಲ್ಲಿನ ಅಧ್ಯಯನವು ತಿನ್ನುವಾಗ ತಮ್ಮ ಫೋನ್‌ಗಳನ್ನು ಬಳಸುವ ಜನರು ಸುಮಾರು ಶೇ. 11ರಷ್ಟು ಹೆಚ್ಚು ತಿನ್ನುತ್ತಾರೆ ಎಂದು ಕಂಡುಹಿಡಿದಿದೆ. ನಿಮ್ಮ ಮನಸ್ಸು ನಿಮ್ಮ ಆಹಾರವನ್ನು ಹೊರತುಪಡಿಸಿ ಬೇರೆ ಯಾವ ಕಡೆಯೂ ವಿಚಲಿತವಾಗದಂತೆ ನೋಡಿಕೊಳ್ಳಿ. ತಿನ್ನುವಾಗ ನಿಮ್ಮ ಗಮನ ಪೂರ್ತಿಯಾಗಿ ಆಹಾರದತ್ತಲೇ ಇರಲಿ.

ಇದನ್ನೂ ಓದಿ: ಮಹಿಳೆಯರ ಆರೋಗ್ಯ ಸಮಸ್ಯೆಗಳಿಗೆ ದಾಳಿಂಬೆ ಹಣ್ಣಿನಲ್ಲಿದೆ ಪರಿಹಾರ

ಸೆರಾಮಿಕ್ ಅಥವಾ ಸ್ಟೀಲ್ ಪ್ಲೇಟ್‌ಗಳನ್ನು ಬಳಸಿ:

ಊಟ, ತಿಂಡಿಗೆ ಸೆರಾಮಿಕ್, ಸ್ಟೀಲ್ ಇತ್ಯಾದಿಗಳ ಪ್ಲೇಟ್‌ಗಳನ್ನು ಯಾವಾಗಲೂ ಮನೆಯಲ್ಲಿ ಬಳಸಬೇಕು. ಹೀಗೆ ಮಾಡುವುದರಿಂದ ನೀವು ಎಷ್ಟು ತಿನ್ನುತ್ತಿದ್ದೀರಿ ಎಂಬುದು ನಿಮಗೆ ತಿಳಿಯುತ್ತದೆ. ಪೇಪರ್ ಪ್ಲೇಟ್, ಬೌಲ್​ಗಳಲ್ಲಿ ಊಟ, ತಿಂಡಿಗಳನ್ನು ಹಾಕಿಕೊಂಡು ತಿನ್ನುವುದರ ಬದಲಿಗೆ ಸೆರಾಮಿಕ್ ಪ್ಲೇಟ್‌ನಿಂದ ತಿನ್ನುವಾಗ ಅವರು ಕಡಿಮೆ ತಿನ್ನುತ್ತಾರೆ ಎಂದು ಒಂದು ಅಧ್ಯಯನವು ಕಂಡುಹಿಡಿದಿದೆ.

ನೆಲದ ಮೇಲೆ ಕುಳಿತುಕೊಂಡು ತಿನ್ನಿರಿ:

ಕೆಲವರು ಬೌಲನ್ನು ಕೈಯಲ್ಲಿ ಹಿಡಿದು ಮನೆತುಂಬ ಓಡಾಡುತ್ತಾ ತಿನ್ನುತ್ತಾರೆ. ಇನ್ನು ಕೆಲವರು ಸೋಫಾದಲ್ಲಿ ಕುಳಿತು ತಿನ್ನುತ್ತಾರೆ. ಆದರೆ, ಊಟ ಮಾಡುವ ಜಾಗದಲ್ಲಿ ಅದರಲ್ಲೂ ನೆಲದ ಮೇಲೆ ಕುಳಿತುಕೊಂಡು ತಿನ್ನುವುದರಿಂದ ನಿಮ್ಮ ಊಟದ ಮೇಲೆ ಗಮನ ಕೇಂದ್ರೀಕರಿಸಲು ಸಹಾಯವಾಗುತ್ತದೆ. ಆದ್ದರಿಂದ ಮೇಜಿನ ಬದಲಿಗೆ ನೆಲದ ಮೇಲೆ ಕುಳಿತು ತಿನ್ನುವುದು ಉತ್ತಮ.

ಇದನ್ನೂ ಓದಿ: Heart Attack: ಯುವಜನರಲ್ಲಿ ಹೃದಯಾಘಾತಕ್ಕೆ ಕಾರಣವೇನು?; ನೀವೂ ಈ ತಪ್ಪು ಮಾಡಬೇಡಿ

ಚೆನ್ನಾಗಿ ಅಗಿದು ತಿನ್ನಿ:

ಕೆಲವರು ಗಬಗಬನೆ ಆಹಾರವನ್ನು ಬಾಯಿಗೆ ಹಾಕಿಕೊಂಡು ನುಂಗಿಬಿಡುತ್ತಾರೆ. ಆದರೆ, ನಿಧಾನವಾಗಿ ಆಹಾರವನ್ನು ಜಗಿದು ಜಗಿದು ತಿನ್ನುವುದರಿಂದ ಬಹಳಷ್ಟು ಸಮಯ ನೀವು ಆಹಾರ ಸೇವಿಸಿದ್ದೀರಿ ಎಂಬ ಭಾವನೆ ನಿಮಗೆ ಬರುತ್ತದೆ. ಅಲ್ಲದೆ, ಅಗಿದು ತಿನ್ನುವುದರಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಇದರಿಂದ ತೂಕ ಇಳಿಸಲು ಸಹಾಯಕವಾಗುತ್ತದೆ.

ತಿನ್ನುವಾಗ ಚಮಚದ ಬದಲು ಕೈ ಬಳಸಿ:

ಇದು ನಿಮಗೆ ವಿಚಿತ್ರವೆನಿಸಬಹುದು. ಆದರೆ ಚಮಚದ ಬದಲು ಕೈಗಳಿಂದ ಊಟ ಮಾಡುವಾಗ ನೀವು ಕಡಿಮೆ ಕ್ಯಾಲೊರಿಗಳನ್ನು ತಿನ್ನುತ್ತೀರಿ. ಜನರು ಕೈಯಿಂದ ತಿನ್ನುವಾಗ ಶೇಕಡಾ 30ರಷ್ಟು ಕಡಿಮೆ ಆಹಾರವನ್ನು ಸೇವಿಸುತ್ತಾರೆ ಎಂದು ಸಂಶೋಧನೆ ತಿಳಿಸಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:47 pm, Sat, 23 September 23