Weight Loss: ತೂಕ ಇಳಿಸುವವರು ರಾಗಿ ಮುದ್ದೆ ತಿನ್ನಬಹುದಾ?

|

Updated on: Mar 04, 2024 | 4:53 PM

Finger Millet: ತೂಕ ಇಳಿಸುವ ವಿಚಾರಕ್ಕೆ ಬಂದಾಗ ಒಬ್ಬೊಬ್ಬರ ದೇಹ ಒಂದೊಂದು ರೀತಿಯ ಆಹಾರಗಳಿಗೆ ಬೇರೆ ಬೇರೆ ರೀತಿ ಪ್ರತಿಕ್ರಿಯಿಸುತ್ತದೆ. ಹೀಗಾಗಿ, ಯಾವ ಆಹಾರದಿಂದ ನಮ್ಮ ದೇಹದ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂದು ಗಮನಿಸುವುದು ಬಹಳ ಮುಖ್ಯ. ರಾಗಿ ಆರೋಗ್ಯಕರವಾದ ಆಹಾರವೆಂಬುದರಲ್ಲಿ ಅನುಮಾನವಿಲ್ಲ. ಆದರೆ, ತೂಕ ಇಳಿಸಲು ಪ್ರಯತ್ನಿಸುತ್ತಿರುವವರು ರಾಗಿ ಮುದ್ದೆ, ರಾಗಿ ರೊಟ್ಟಿ, ರಾಗಿ ದೋಸೆ ಮಾಡಿಕೊಂಡು ತಿನ್ನಬಹುದಾ?

Weight Loss: ತೂಕ ಇಳಿಸುವವರು ರಾಗಿ ಮುದ್ದೆ ತಿನ್ನಬಹುದಾ?
ರಾಗಿ
Image Credit source: iStock
Follow us on

ಪ್ರತಿಯೊಬ್ಬರ ತೂಕ ಇಳಿಸುವ ಪ್ರಯಾಣವು ವಿಶಿಷ್ಟವಾಗಿರುತ್ತದೆ. ತೂಕ ಇಳಿಸುವುದು ಸುಲಭವಾದ ಕೆಲಸವಲ್ಲ. ತೂಕ ಇಳಿಸುವ ವಿಚಾರಕ್ಕೆ ಬಂದಾಗ ನಮ್ಮ ಆಹಾರಕ್ರಮವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇತ್ತೀಚೆಗೆ, ನಮ್ಮ ಆಹಾರದಲ್ಲಿ ರಾಗಿಯನ್ನು ಸೇರಿಸುವುದು ಹೇಗೆ? ಇದು ತೂಕವನ್ನು ಕಳೆದುಕೊಳ್ಳಲು ಹೇಗೆ ಸಹಾಯ ಮಾಡುತ್ತದೆ? ಎಂಬುದರ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅನೇಕ ಭಾರತೀಯ ಮನೆಗಳಲ್ಲಿ ರಾಗಿಯನ್ನು ಮುಖ್ಯ ಆಹಾರವಾಗಿ ಸೇವಿಸಲಾಗುತ್ತದೆ. ಅದರಲ್ಲೂ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ರಾಗಿ ಮುದ್ದೆ ಇಲ್ಲದೆ ಊಟವೇ ಇಲ್ಲ. ಸಿರಿಧಾನ್ಯಗಳಲ್ಲಿ ಒಂದಾಗಿರುವ ರಾಗಿ ತೂಕ ಇಳಿಸಿಕೊಳ್ಳುವವರಿಗೆ ಯಾವ ರೀತಿ ಪ್ರಯೋಜನಕಾರಿ?

ರಾಗಿಯನ್ನು ಫಿಂಗರ್ ಮಿಲೆಟ್ ಎಂದೂ ಕರೆಯುತ್ತಾರೆ. ಇದು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯ ಮತ್ತು ತೂಕ ನಿರ್ವಹಣೆಯ ಪ್ರಯೋಜನಗಳಿಗೆ ಹೆಸರುವಾಸಿಯಾದ ಧಾನ್ಯವಾಗಿದೆ. ನೀವು ರಾಗಿ ಹಿಟ್ಟನ್ನು ಸರಿಯಾಗಿ ಶೇಖರಿಸಿಟ್ಟರೆ 10 ವರ್ಷಗಳಿಗಿಂತ ಹೆಚ್ಚು ಕಾಲ ಉಳಿಯುತ್ತದೆ ಎಂದು ನಿಮಗೆ ತಿಳಿದಿದೆಯೇ? ಇದರ ಪರಿಣಾಮವಾಗಿ, ವರ್ಷಪೂರ್ತಿ ಬೆಳೆಯುವ ರಾಗಿಯು ಭಾರತದ ವಿವಿಧ ಭಾಗಗಳಲ್ಲಿ ಪ್ರಮುಖ ಆಹಾರವಾಗಿದೆ. ಈ ಏಕದಳವನ್ನು ಅದರ ಶುದ್ಧ ರೂಪದಲ್ಲಿ ಸೇವಿಸಬಹುದು. ಅದಕ್ಕೆ ಯಾವುದೇ ಸಂಸ್ಕರಣೆಯ ಅಗತ್ಯವಿರುವುದಿಲ್ಲ. ಆ ಕಾರಣದಿಂದಲೇ ಆರೋಗ್ಯಕ್ಕೆ ರಾಗಿ ಬಹಳ ಪ್ರಯೋಜನಕಾರಿಯಾಗಿದೆ. ರಾಗಿಯ ಸುಲಭವಾದ ಕೃಷಿ ಮತ್ತು ಹೆಚ್ಚಿನ ಪೌಷ್ಟಿಕಾಂಶವು ಅದರ ಬೆಳೆಯುತ್ತಿರುವ ಜಾಗತಿಕ ಜನಪ್ರಿಯತೆಗೆ ಕಾರಣವಾಗಿದೆ.

ಇದನ್ನೂ ಓದಿ: Weight Loss: ಋತುಬಂಧದ ಬಳಿಕ ಮಹಿಳೆಯರ ತೂಕ ಇಳಿಸುವುದು ಹೇಗೆ?

ತೂಕ ಇಳಿಸಲು ರಾಗಿಯ ಸೇವನೆ ಹೇಗೆ ಸಹಾಯ ಮಾಡುತ್ತದೆ? ಎಂಬುದರ ಕುರಿತು ವಿವರವಾದ ಮಾಹಿತಿ ಇಲ್ಲಿವೆ.

ಫೈಬರ್​ ಭರಿತ ಆಹಾರ:

ರಾಗಿಯಲ್ಲಿರುವ ಫೈಬರ್ ತೂಕ ಇಳಿಸಲು ಸಹಾಯ ಮಾಡುತ್ತದೆ. ರಾಗಿಯಲ್ಲಿ ಹೆಚ್ಚಿನ ಫೈಬರ್ ಅಂಶವು ತೂಕ ಇಳಿಕೆಗೆ ಸಹಾಯ ಮಾಡುವ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಕಾರ್ಬೋಹೈಡ್ರೇಟ್‌ಗಳಿಗೆ ಹೋಲಿಸಿದರೆ ಫೈಬರ್ ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದು ಪೂರ್ಣತೆಯ ಭಾವನೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಇದು ನಿಮ್ಮ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಇತರ ಧಾನ್ಯಗಳಿಗೆ ಹೋಲಿಸಿದರೆ, ರಾಗಿ ಕಡಿಮೆ ಕೊಬ್ಬಿನಂಶ ಮತ್ತು ಅಮೈನೋ ಆಮ್ಲಗಳ ಉತ್ತಮ ಮೂಲವಾಗಿದೆ.

ಪಾಲಿಫಿನಾಲ್ ಸಮೃದ್ಧವಾಗಿದೆ:

ರಾಗಿಯಲ್ಲಿ ಪಾಲಿಫಿನಾಲ್ ಅಂಶವೂ ಅಧಿಕವಾಗಿದೆ. ಇವುಗಳು ಸಸ್ಯಗಳಲ್ಲಿ ಇರುವ ವಸ್ತುಗಳು ಮತ್ತು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ನೈಸರ್ಗಿಕ ಪಾಲಿಫಿನಾಲ್​ಗಳು ಬೊಜ್ಜು ತಡೆಯಲು ಸಹಾಯ ಮಾಡುತ್ತದೆ. ರಾಗಿಯನ್ನು ಪ್ರತಿದಿನ ತಿನ್ನುವುದರಿಂದ ಜಠರಗರುಳಿನ ಸಮಸ್ಯೆಗಳು ಮತ್ತು ಮಧುಮೇಹ ನಿಯಂತ್ರಿಸಬಹುದು. ಇದು ತೂಕ ಹೆಚ್ಚಾಗಲು ಕಾರಣವಾಗುವ 2 ಪ್ರಮುಖ ಅಂಶಗಳ ಸಂಭವವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಸಂಪೂರ್ಣ ರಾಗಿ ಆಧಾರಿತ ಆಹಾರಗಳು ಕಡಿಮೆ ಗ್ಲೈಸೆಮಿಕ್ ಪ್ರತಿಕ್ರಿಯೆಯನ್ನು ಹೊಂದಿರುತ್ತವೆ. ಇದು ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಅಂಟು ಮುಕ್ತ ಆಹಾರ:

ರಾಗಿ ಗ್ಲುಟನ್ ಮುಕ್ತವಾಗಿದೆ. ಇದರ ಪರಿಣಾಮವಾಗಿ ಅಂಟಿಗೆ ಅಲರ್ಜಿ ಇರುವ ಜನರಿಗೆ ಇದು ಉತ್ತಮ ಪರ್ಯಾಯವಾಗಿದೆ. ಅಂಟು ಮುಕ್ತ ಆಹಾರವನ್ನು ಸೇವಿಸುವುದರಿಂದ ತೂಕ ಇಳಿಕೆಗೆ ಸಹಾಯ ಮಾಡಬಹುದು.

ಕೊಲೆಸ್ಟ್ರಾಲ್ ಅನ್ನು ನಿರ್ವಹಿಸುತ್ತದೆ:

ಫ್ರಾಂಟಿಯರ್ಸ್ ಇನ್ ನ್ಯೂಟ್ರಿಷನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ನಿರ್ವಹಿಸಲು ರಾಗಿಯನ್ನು ಹೇಗೆ ಬಳಸಬಹುದು ಎಂಬುದನ್ನು ತೋರಿಸುತ್ತದೆ. ನಿಯಮಿತವಾಗಿ ರಾಗಿಯನ್ನು ತಿನ್ನುವುದು ನಮ್ಮ ಪಾರ್ಶ್ವವಾಯು ಮತ್ತು ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ರಾಗಿಯ ಲೆಸಿಥಿನ್ ಮತ್ತು ಮೆಥಿಯೋನಿನ್ ಹೆಚ್ಚುವರಿ ಯಕೃತ್ತಿನ ಕೊಬ್ಬನ್ನು ನಿವಾರಿಸುತ್ತದೆ, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿಯುವುದರಿಂದ ತೂಕ ಕಡಿಮೆಯಾಗುತ್ತಾ?

ರಾಗಿಯು ಉತ್ತಮ ಜೀರ್ಣಕ್ರಿಯೆ, ಶಕ್ತಿ ಉತ್ಪಾದನೆ ಮತ್ತು ತೂಕ ಇಳಿಕೆಯನ್ನು ಉತ್ತೇಜಿಸುತ್ತದೆ. ಇದರ ಪರಿಣಾಮವಾಗಿ, ಪಾರ್ಶ್ವವಾಯು, ಹೃದ್ರೋಗ ಮತ್ತು ಅಧಿಕ ರಕ್ತದೊತ್ತಡದ ಅಪಾಯವು ಗಣನೀಯವಾಗಿ ಕಡಿಮೆಯಾಗುತ್ತದೆ.

ತೂಕ ಇಳಿಸಲು ರಾಗಿ ಏಕೆ ಒಳ್ಳೆಯದು?:

ನೀವು ಗೋಧಿ ಹಿಟ್ಟಿನ ಚಪಾತಿಗೆ ಪರ್ಯಾಯವನ್ನು ಹುಡುಕುತ್ತಿದ್ದರೆ, ನಿಮಗೆ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವ ರಾಗಿ ರೊಟ್ಟಿಯನ್ನು ಬಳಸಬಹುದು. ರಾಗಿ ರೊಟ್ಟಿ ತೂಕ ಇಳಿಕೆಗೆ ಒಳ್ಳೆಯದು. ಏಕೆಂದರೆ ರಾಗಿಯಲ್ಲಿ ಫೈಬರ್ ಮತ್ತು ಪ್ರೋಟೀನ್‌ ಹೆಚ್ಚಾಗಿರುತ್ತದೆ. ಇದರಲ್ಲಿರುವ ಪ್ರೋಟೀನ್ ಸ್ನಾಯುಗಳನ್ನು ನಿರ್ಮಿಸಲು ಮತ್ತು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದು ಹೆಚ್ಚಿನ ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ರಾಗಿಯು ಕ್ಯಾಲ್ಸಿಯಂ, ಕಬ್ಬಿಣ ಮತ್ತು ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ.

ರಾಗಿ ರೊಟ್ಟಿಯನ್ನು ಪ್ರತಿದಿನ ಸೇವಿಸಬಹುದೇ?:

ತೂಕ ಇಳಿಸುವ ಆಹಾರದ ಭಾಗವಾಗಿ ಪ್ರತಿದಿನ ರಾಗಿ ರೊಟ್ಟಿಯನ್ನು ಸೇವಿಸುವುದು ಉತ್ತಮ. ದಿನಕ್ಕೆ 2ರಿಂದ 3 ರಾಗಿ ರೊಟ್ಟಿಗಳನ್ನು ಸೇವಿಸುವುದರಿಂದ ದೇಹದ ಅಗತ್ಯಗಳಿಗೆ ಪೋಷಣೆಯನ್ನು ತುಂಬುವ ಜೊತೆಗೆ ಹೆಚ್ಚಿನ ಕ್ಯಾಲೊರಿಗಳ ಸೇವನೆಯನ್ನು ತಪ್ಪಿಸುತ್ತದೆ. ವಿವಿಧ ಪೋಷಕಾಂಶಗಳು ಮತ್ತು ಖನಿಜಗಳು ನಿಯಮಿತವಾಗಿ ತಿನ್ನಲು ರಾಗಿಯನ್ನು ಸುರಕ್ಷಿತವಾಗಿಸುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ