ಪ್ರತಿದಿನ ವೀಟ್‌ಗ್ರಾಸ್ ಜ್ಯೂಸ್ ಕುಡಿಯುವುದು ಸುರಕ್ಷಿತವೇ? ಸೇವಿಸುವ ಮುನ್ನ ಈ ವಿಷಯ ತಿಳಿಯಿರಿ
ವೀಟ್‌ಗ್ರಾಸ್ ಜ್ಯೂಸ್ ಇತ್ತೀಚೆಗೆ ಆರೋಗ್ಯ ಪಾನೀಯವಾಗಿ ಹೆಚ್ಚು ಜನಪ್ರಿಯವಾಗುತ್ತಿದೆ. ಇದರಲ್ಲಿ ಕ್ಲೋರೊಫಿಲ್, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕ ಅಂಶಗಳಿವೆ. ಆದರೆ ಇದು ರಕ್ತದಲ್ಲಿನ ಸಕ್ಕರೆ, ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಅಥವಾ ದೇಹವನ್ನು ಡಿಟಾಕ್ಸ್ ಮಾಡುತ್ತದೆ ಎಂಬುದರ ಬಗ್ಗೆ ಅನುಮಾನವಿದೆ. ಹಾಗಾಗಿ ಇದರ ಪ್ರಯೋಜನಗಳು, ಅಡ್ಡಪರಿಣಾಮಗಳು ಮತ್ತು ಯಾರು ಸೇವಿಸುವಾಗ ಎಚ್ಚರಿಕೆ ವಹಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರಲ್ಲಿ ವೀಟ್‌ಗ್ರಾಸ್ ಜ್ಯೂಸ್ ಜನಪ್ರಿಯವಾಗುತ್ತಿದೆ. ಗೋಧಿ ಸಸ್ಯದ ಆರಂಭದಲ್ಲಿ ಬರುವ ಎಲೆಗಳಿಂದ ತಯಾರಿಸುವ ಈ ರಸದಲ್ಲಿ ವಿವಿಧ ಜೀವಸತ್ವಗಳು, ಖನಿಜಾಂಶಗಳು ಮತ್ತು ಉತ್ಕರ್ಷಣ ನಿರೋಧಕ ಅಂಶಗಳು ಇರುತ್ತವೆ. ಇದನ್ನು ನೈಸರ್ಗಿಕ ಡಿಟಾಕ್ಸ್ ಪಾನೀಯವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ, ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಎಂಬ ನಂಬಿಕೆಯೂ ಇದೆ. ಆದರೆ ಈ ಹೇಳಿಕೆಗಳಿಗೆ ಸಾಕಷ್ಟು ವೈಜ್ಞಾನಿಕ ಆಧಾರವಿದೆಯೇ, ಈ ಬಗ್ಗೆ ವೈದ್ಯರ ಅಭಿಪ್ರಾಯವೇನು ತಿಳಿದುಕೊಳ್ಳಿ.
ವೀಟ್‌ಗ್ರಾಸ್ ಜ್ಯೂಸ್‌ನಲ್ಲಿ ಉತ್ಕರ್ಷಣ ನಿರೋಧಕ ಅಂಶಗಳು
ಸಾಮಾನ್ಯವಾಗಿ ವೀಟ್‌ಗ್ರಾಸ್‌ನಲ್ಲಿ ಕ್ಲೋರೊಫಿಲ್, ಫ್ಲೇವನಾಯ್ಡ್‌ಗಳು, ಫಿನಾಲಿಕ್ ಸಂಯುಕ್ತಗಳು ಹಾಗೂ ವಿಟಮಿನ್ ಸಿ ಮತ್ತು ಇ ಅಂಶಗಳಿವೆ. ಇವು ದೇಹದ ಜೀವಕೋಶಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಸಹಾಯ ಮಾಡಬಹುದು. ಪ್ರಯೋಗಾಲಯದ ಅಧ್ಯಯನಗಳಲ್ಲಿ ಇದರ ಉತ್ಕರ್ಷಣ ನಿರೋಧಕ ಗುಣಗಳು ಕಂಡುಬಂದಿವೆ. ಆದರೆ ಈ ಜ್ಯೂಸ್ ಸೇವನೆಯಿಂದ ಮನುಷ್ಯರಲ್ಲಿ ಕಾಯಿಲೆಗಳನ್ನು ತಡೆಯಬಹುದು ಎಂಬುದಕ್ಕೆ ಇನ್ನೂ ಸಾಕಷ್ಟು ವೈದ್ಯಕೀಯ ಪುರಾವೆಗಳಿಲ್ಲ.
ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆಯೇ?
ವೀಟ್‌ಗ್ರಾಸ್‌ನಲ್ಲಿ ಕೆಲವು ನೈಸರ್ಗಿಕ ಕಿಣ್ವಗಳು ಮತ್ತು ಸಸ್ಯಜನ್ಯ ಸಂಯುಕ್ತಗಳಿವೆ. ಸಣ್ಣ ಪ್ರಮಾಣದ ಅಧ್ಯಯನವೊಂದರಲ್ಲಿ ಅಲ್ಸರೇಟಿವ್ ಕೊಲೈಟಿಸ್ ಸಮಸ್ಯೆಯಿರುವವರಲ್ಲಿ ಕೆಲವು ಲಕ್ಷಣಗಳು ಕಡಿಮೆಯಾಗಿರುವುದು ಕಂಡುಬಂದಿದೆ. ಆದರೆ ಇದನ್ನು ಎಲ್ಲರಿಗೂ ಅನ್ವಯಿಸಲು ಸಾಧ್ಯವಿಲ್ಲ. ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ವೈದ್ಯಕೀಯ ಚಿಕಿತ್ಸೆಯ ಬದಲಿಯಾಗಿ ಇದನ್ನು ಬಳಸಬಾರದು.
ಇದನ್ನೂ ಓದಿ: ಫೈಬರ್ ಅಂಶದ ಕೊರತೆ ಮಲಬದ್ಧತೆ ಮತ್ತು ಜೀರ್ಣಕ್ರಿಯೆ ಸಮಸ್ಯೆಗೆ ಕಾರಣವೇ? ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಿ
ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮೇಲೆ ಪರಿಣಾಮ ಬೀರುತ್ತದೆಯೇ?
ಕೆಲವು ಪ್ರಾಣಿಗಳ ಮೇಲಿನ ಸಂಶೋಧನೆಗಳಲ್ಲಿ ವೀಟ್‌ಗ್ರಾಸ್‌ನಲ್ಲಿರುವ ಅಂಶಗಳು ಗ್ಲೂಕೋಸ್ ಮತ್ತು ಕೊಬ್ಬಿನ ಚಯಾಪಚಯದ ಮೇಲೆ ಪರಿಣಾಮ ಬೀರಬಹುದು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಮನುಷ್ಯರಲ್ಲಿ ರಕ್ತದಲ್ಲಿನ ಸಕ್ಕರೆ ಅಥವಾ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಎಂಬುದನ್ನು ದೃಢಪಡಿಸುವಷ್ಟು ಸಂಶೋಧನೆ ನಡೆದಿಲ್ಲ. ಮಧುಮೇಹ ಮತ್ತು ಅಧಿಕ ಕೊಲೆಸ್ಟ್ರಾಲ್ ಇರುವವರು ವೈದ್ಯರು ಸೂಚಿಸಿದ ಔಷಧಿಗಳನ್ನು ಮುಂದುವರಿಸಬೇಕು.
ನಿಜಕ್ಕೂ ನೈಸರ್ಗಿಕ ಡಿಟಾಕ್ಸ್ ಪಾನೀಯವೇ?
ದೇಹದಲ್ಲಿನ ತ್ಯಾಜ್ಯ ಮತ್ತು ಹಾನಿಕಾರಕ ವಸ್ತುಗಳನ್ನು ಹೊರಹಾಕುವ ಕೆಲಸವನ್ನು ಯಕೃತ್ತು ಮತ್ತು ಮೂತ್ರಪಿಂಡಗಳು ನೈಸರ್ಗಿಕವಾಗಿ ನಿರ್ವಹಿಸುತ್ತವೆ. ವೀಟ್‌ಗ್ರಾಸ್ ಜ್ಯೂಸ್ ಕುಡಿಯುವುದರಿಂದ ರಕ್ತ ಶುದ್ಧವಾಗುತ್ತದೆ ಅಥವಾ ಯಕೃತ್ತು ಮತ್ತು ಮೂತ್ರಪಿಂಡಗಳು ವಿಶೇಷವಾಗಿ ಶುದ್ಧೀಕರಣಗೊಳ್ಳುತ್ತವೆ ಎಂಬುದಕ್ಕೆ ಪುರಾವೆಗಳಿಲ್ಲ. ಆದರೆ ವೈಧ್ಯರ ಸಲಹೆ ಪಡೆದು ಇದರ ಸೇವನೆ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು.
ಯಾರು ಎಚ್ಚರಿಕೆ ವಹಿಸಬೇಕು?
ಸ್ವಚ್ಛವಾಗಿ ತಯಾರಿಸಿದ ವೀಟ್‌ಗ್ರಾಸ್ ಜ್ಯೂಸ್ ಅನ್ನು ಆರೋಗ್ಯವಂತ ವಯಸ್ಕರು ಮಿತವಾಗಿ ಸೇವಿಸಬಹುದು. ಆದರೆ ಕಚ್ಚಾ ಅಥವಾ ಪಾಶ್ಚರೀಕರಣ ಮಾಡದ ಜ್ಯೂಸ್‌ನಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಇರಬಹುದು. ಇದರಿಂದ ವಾಕರಿಕೆ, ಹೊಟ್ಟೆಯ ತೊಂದರೆ ಮತ್ತು ಅಲರ್ಜಿ ಉಂಟಾಗುವ ಸಾಧ್ಯತೆಯಿದೆ. ಗರ್ಭಿಣಿಯರು, ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಮತ್ತು ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿರುವವರು ವೈದ್ಯರ ಸಲಹೆ ಇಲ್ಲದೆ ಸೇವಿಸಬಾರದು.
ಒಟ್ಟಿನಲ್ಲಿ, ವೀಟ್‌ಗ್ರಾಸ್ ಜ್ಯೂಸ್ ಕೆಲವು ಪೋಷಕಾಂಶಗಳನ್ನು ಒದಗಿಸಬಹುದು. ಆದರೆ ಇದು ಮಧುಮೇಹ, ಕೊಲೆಸ್ಟ್ರಾಲ್ ಅಥವಾ ಇತರ ಕಾಯಿಲೆಗಳಿಗೆ ಪರಿಹಾರವಲ್ಲ. ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಮತ್ತು ಸರಿಯಾದ ವೈದ್ಯಕೀಯ ಆರೈಕೆಯೇ ಉತ್ತಮ ಆರೋಗ್ಯಕ್ಕೆ ಮುಖ್ಯ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




