ಬಿರಿಯಾನಿ ಎಂದರೆ ಬಾಯಲ್ಲಿ ನೀರು ಬರದೇ ಇರುವುದಿಲ್ಲ. ಅದರಲ್ಲಿಯೂ ಇದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಬಡವರು, ಶ್ರೀಮಂತರು ಎನ್ನದೆ ಎಲ್ಲರೂ ಇದನ್ನು ಇಷ್ಟಪಟ್ಟು ಸವಿಯುತ್ತಾರೆ. ಬಿರಿಯಾನಿ ಎನ್ನುವ ಹೆಸರು ಪರ್ಷಿಯನ್ ಆದರೂ ಕೂಡ ಇದರ ಪಾಕವಿಧಾನ ಪಲಾವ್ ರೆಸಿಪಿಯ ಪ್ರೇರಣೆಯಿಂದ ಹುಟ್ಟಿಕೊಂಡಿತು ಎನ್ನಲಾಗುತ್ತದೆ. ತದನಂತರ ಇಲ್ಲಿ ಲಭ್ಯವಿರುವ ಪದಾರ್ಥಗಳಿಗೆ ಅನುಗುಣವಾಗಿ ಬಿರಿಯಾನಿಯಾಗಿ ರೂಪಾಂತರಗೊಂಡಿತು. ಕರ್ನಾಟಕದಲ್ಲಿ ವೆಜ್ ಬಿರಿಯಾನಿಗಿಂತ ನಾನ್ವೆಜ್ ಬಿರಿಯಾನಿ ಹೆಚ್ಚು ಪ್ರಸಿದ್ದ. ಅದರಲ್ಲಿಯೂ ರಾಷ್ಟ್ರವನ್ನು ಒಂದುಗೂಡಿಸುವ ಒಂದು ಖಾದ್ಯವಿದ್ದರೆ, ಅದು ಬಿರಿಯಾನಿ. ವಿವಿಧ ರೀತಿಯ ಬಿರಿಯಾನಿಗಳ ಜನಪ್ರಿಯತೆಯ ನಡುವೆ ಬೆಂಗಳೂರಿನ ದಖನಿ ದಮ್ ಗೋಷ್ಟ್ ಬಿರಿಯಾನಿ ಅಥವಾ ಮಟನ್ ಬಿರಿಯಾನಿ ತನ್ನದೇ ಆದ ಗ್ರಾಹಕರನ್ನು ಒಳಗೊಂಡಿದೆ. ಹಾಗಾ್ದಾರೆ ಇದನ್ನು ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ.
ಬೆಂಗಳೂರಿನ ಬಿರಿಯಾನಿಗಳಲ್ಲಿ ಮಟನ್ ದಮ್ ಬಿರಿಯಾನಿಗೆ ಅತ್ಯಧಿಕ ಬೇಡಿಕೆ ಇದ್ದು ಮಾಡುವ ವಿಧಾನ ಇಲ್ಲಿದೆ. ಇಲ್ಲಿ ಬಳಸಿರುವ ಸಾಮಗ್ರಿಗಳಿಗೆ ಅನುಗುಣವಾಗಿ ಇದನ್ನು ಮೂರು ಅಥವಾ ನಾಲ್ಕು ಜನ ತಿನ್ನಬಹುದಾಗಿದೆ.
800 ಗ್ರಾಂ ಜೀರಾ ಸಾಂಬಾ ರೈಸ್ (ಇದನ್ನು ಕನಿಷ್ಠ ಮೂರು ಬಾರಿ ತೊಳೆಯಿರಿ. 45-60 ನಿಮಿಷಗಳ ಕಾಲ ನೆನೆಸಿಡಿ)
1 ಕೆಜಿ ಕುರಿ ಮಾಂಸ (ಕತ್ತರಿಸಿದ್ದು)
250 ಗ್ರಾಂ ಅಡುಗೆ ಎಣ್ಣೆ
4 ಏಲಕ್ಕಿ
2 ದಾಲ್ಚಿನ್ನಿ
6 ಲವಂಗ
300 ಗ್ರಾಂ ಕತ್ತರಿಸಿದ ಈರುಳ್ಳಿ ಜೊತೆಗೆ ಪೇಸ್ಟ್ ತಯಾರಿಸಲು 1 ಈರುಳ್ಳಿ ಅಂದರೆ ಸುಮಾರು 4 ಈರುಳ್ಳಿ
1/4 ಕಟ್ಟು ಕತ್ತರಿಸಿದ ಕೊತ್ತಂಬರಿ ಸೊಪ್ಪು
1/4 ಬಟ್ಟಲು ಕತ್ತರಿಸಿದ ಪುದೀನಾ
5 ಟೀ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
2 ಟೀ ಸ್ಪೂನ್ ಕೆಂಪು ಮೆಣಸಿನ ಪುಡಿ
2 ಟೀ ಸ್ಪೂನ್ ಕೊತ್ತಂಬರಿ ಪುಡಿ
ಪೇಸ್ಟ್ ತಯಾರಿಸಲು: 1 ಈರುಳ್ಳಿ,
1 ಹಿಡಿ ಕೊತ್ತಂಬರಿ ಸೊಪ್ಪು,
5 ಹಸಿ ಮೆಣಸಿನಕಾಯಿ
200 ಮಿಲಿ ಮೊಸರು
200 ಗ್ರಾಂ ಅಥವಾ 1 ಕಪ್ ಕತ್ತರಿಸಿದ ಟೊಮೆಟೊ
2 ಟೀ ಸ್ಪೂನ್ ತುಪ್ಪ.
ತಯಾರಿಸುವ ವಿಧಾನ: ಅಖ್ನಿ(ದಖನಿ) ಅಥವಾ ಮಸಾಲೆ ಮಾಡುವಾಗ ದಪ್ಪ ತಳದ ಪಾತ್ರೆಯಲ್ಲಿ, 250 ಗ್ರಾಂ ಅಡುಗೆ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಗರಂ ಮಸಾಲಾ (ದಾಲ್ಚಿನ್ನಿ, ಏಲಕ್ಕಿ, ಲವಂಗ) ಸೇರಿಸಿ. ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ ಚೆನ್ನಾಗಿ ಹುರಿಯಿರಿ. ಬಳಿಕ ಕತ್ತರಿಸಿದ ಪುದೀನಾ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಮಾಂಸವನ್ನು ಸೇರಿಸಿ, ಚೆನ್ನಾಗಿ ಕಲಸಿ ಬೇಯಿಸಿಕೊಂಡು ಒರಟಾದ ಪೇಸ್ಟ್ ಮಾಡಿಕೊಳ್ಳಿ , ಕೊತ್ತಂಬರಿ ಮತ್ತು ಹಸಿ ಮೆಣಸಿನಕಾಯಿಗಳನ್ನು ಒರಟಾಗಿ ಪೇಸ್ಟ್ ಮಾಡಿ ಅದಕ್ಕೆ ಹಾಕಿ ಬಳಿಕ ಹೆಚ್ಚಿನ ಉರಿಯಲ್ಲಿ 10-15 ನಿಮಿಷಗಳ ಕಾಲ ಬೇಯಿಸಿ. ಈ ಮಿಶ್ರಣ ತಳಕ್ಕೆ ಅಂಟಿಕೊಳ್ಳಲು ಪ್ರಾರಂಭಿಸಿದರೆ, ಸ್ವಲ್ಪ ನೀರನ್ನು ಸೇರಿಸಿ. ಬಳಿಕ ಮೊಸರು ಸೇರಿಸಿ ಬೇಯಿಸಿ. ಮಾಂಸ ಅರ್ಧ ಬೆಂದ ಬಳಿಕ ಕತ್ತರಿಸಿದ ಟೊಮೆಟೊವನ್ನು ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ 20-30 ನಿಮಿಷಗಳ ಕಾಲ ಬೇಯಲು ಬಿಡಿ. ಇನ್ನೊಂದು ಬದಿಯಲ್ಲಿ ದೊಡ್ಡ ಪಾತ್ರೆಗೆ ನೆನೆಸಿದ ಅಕ್ಕಿಯನ್ನು ನೀರು ಕುದಿಯುವಾಗ ಸೇರಿಸಿ. ಇದಕ್ಕೆ ಸ್ವಲ್ಪ ಉಪ್ಪು ಕೆಲವು ಪುದೀನಾ ಎಲೆಗಳನ್ನು ಸೇರಿಸಿ ಬೇಯಿಸಿ.
ಮಸಾಲೆ ಮತ್ತು ಅನ್ನ ಸುಮಾರು 70% ಬೆಂದ ನಂತರ, ಮಸಾಲೆಯಿಂದ ಎಣ್ಣೆಯನ್ನು ಸೋಸಿ ಪಕ್ಕಕ್ಕೆ ಇರಿಸಿ. ಇದನ್ನು ನಂತರ ಬಳಸಬಹುದು. ಬಳಿಕ ಈ ಮಸಾಲೆಯ ಮೇಲೆ ಸ್ವಲ್ಪ ಗರಂ ಮಸಾಲಾವನ್ನು ಸಿಂಪಡಿಸಿ. ಅಕ್ಕಿ ಬೆಂದ ನಂತರ ಅದನ್ನು ಸೋಸಿ ಮಸಾಲೆಗೆ ಸೇರಿಸಿ. ಮೊದಲು ಎತ್ತಿಟ್ಟ ಎಣ್ಣೆಯನ್ನು ಅನ್ನದ ಮೇಲೆ ಹಾಕಿ. ಪಾತ್ರೆಯನ್ನು ಬಿಗಿಯಾದ ಮುಚ್ಚಳದಿಂದ ಮುಚ್ಚಿ ಮತ್ತು ಹಬೆ ಬಿಡುಗಡೆಯಾಗುವವರೆಗೆ ಕಡಿಮೆ ಶಾಖದಲ್ಲಿ ಬೇಯಿಸಿದರೆ ಸೊಗಸಾದ ಬಿರಿಯಾನಿ ಸವಿಯಲು ಸಿದ್ದವಾಗುತ್ತದೆ.
ಇದನ್ನೂ ಓದಿ: ಆಹಾ! ಘಮ್ ಎನ್ನುವ ಹೈದರಾಬಾದ್ ದಮ್ ಬಿರಿಯಾನಿ, ಮನೆಯಲ್ಲೇ ಮಾಡಿ
ಬಿರಿಯಾನಿ ಅನ್ನ, ಮಾಂಸ ಮತ್ತು ಎಣ್ಣೆ ಹಾಗೂ ಮಸಾಲೆಯ ಮಿಶ್ರಣವನ್ನು ಒಳಗೊಂಡಿರುತ್ತದೆ. ಬಿರಿಯಾನಿ ತಿನ್ನುವುದರಿಂದ ನಮ್ಮ ದೇಹವು ಸಾಕಷ್ಟು ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು ಮತ್ತು ಕೊಬ್ಬುಗಳನ್ನು ಪಡೆಯುತ್ತದೆ. ಇದು ದೇಹಕ್ಕೆ ವಿಶೇಷವಾಗಿ ಉಪಯುಕ್ತವಾಗಿದೆ. ಬಿರಿಯಾನಿಯಲ್ಲಿರುವ ಮಸಾಲೆಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆದರೆ ಮಸಾಲೆಯುಕ್ತ ಬಿರಿಯಾನಿಯನ್ನು ಅತಿಯಾಗಿ ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:35 am, Tue, 2 July 24