ಸೇವಿಸುವ ಆಹಾರದಲ್ಲಿ ಉಪ್ಪು ಹೆಚ್ಚಾದರೆ ಒಂದು ಅಗಳು ಆಹಾರವನ್ನು ತಿನ್ನಲು ಸಾಧ್ಯವೇ ಇಲ್ಲ. ಒಂದು ವೇಳೆ ಕಡಿಮೆಯಾದರೆ ಅಡುಗೆಯೂ ರುಚಿಸುವುದೇ ಇಲ್ಲ. ರುಚಿಗೆ ಮಾತ್ರವಲ್ಲದೇ, ದೇಹಕ್ಕೂ ಈ ಅಯೋಡಿನ್ ಅಂಶವು ಬೇಕೇ ಬೇಕು. ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯವಾದ ಸೂಕ್ಷ್ಮ ಪೋಷಕಾಂಶವು ಇದಾಗಿದ್ದು, ದೇಹದಲ್ಲಿ ಥೈರಾಯ್ಡ್ ಗ್ರಂಥಿಯ ಸಾಮಾನ್ಯ ಕಾರ್ಯನಿರ್ವಹಣೆಗೆ, ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಯೋಡಿನ್ ಅಗತ್ಯವಾಗಿದೆ. ಹೀಗಾಗಿ ಅಕ್ಟೋಬರ್ 21 ರಂದು ಅಯೋಡಿನ್ ಕೊರತೆಯಿಂದ ಉಂಟಾಗುವ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಅಯೋಡಿನ್ ಕೊರತೆ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರಸ್ತುತ ವಿಶ್ವದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಅಯೋಡಿನ್ ಕೊರತೆಯಿಂದ ಉಂಟಾಗುವ ರೋಗಗಳ ಅಪಾಯದಲ್ಲಿದ್ದಾರೆ. ಆರೋಗ್ಯಕ್ಕೆ ಅಯೋಡಿನ್‌ನ ಪ್ರಯೋಜನಗಳು ಮತ್ತು ಅದರ ಕೊರತೆಯಿಂದ ಉಂಟಾಗುವ ಕಾಯಿಲೆಗಳ ಬಗ್ಗೆ ಪ್ರಪಂಚದಾದ್ಯಂತ ಹಲವಾರು ರೀತಿಯ ಜಾಗೃತಿ ಅಭಿಯಾನಗಳನ್ನು ವರ್ಷಗಳಿಂದ ನಡೆಸಲಾತ್ತಿದೆಯಾದರೂ ಕೂಡ, ಅಯೋಡಿನ್ ಕೊರತೆಯು ಪ್ರಪಂಚದ ಸುಮಾರು 54 ದೇಶಗಳಲ್ಲಿ ಇನ್ನೂ ಅಸ್ತಿತ್ವದಲ್ಲಿದೆ. ಅಯೋಡಿನ್ ಕೊರತೆಯಿಂದ ಉಂಟಾಗುವ ರೋಗಗಳ ಬಗ್ಗೆ ಪ್ರಪಂಚದಾದ್ಯಂತ ಜನರಿಗೆ ಅರಿವು ಮೂಡಿಸುವ ಮತ್ತು ಪ್ರತಿ ಮನೆಯಲ್ಲೂ ಅಯೋಡಿನ್ ಭರಿತ ಉಪ್ಪಿನ ಲಭ್ಯತೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ಪ್ರತಿ ವರ್ಷ ಅಕ್ಟೋಬರ್ 21 ರಂದು ವಿಶ್ವ ಅಯೋಡಿನ್ ಕೊರತೆ ತಡೆಗಟ್ಟುವ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳುತ್ತವೆ.
ನಿಮ್ಮ ದೇಹದಲ್ಲಿ ಅಯೋಡಿನ್ ಕೊರತೆಯಿದ್ದರೆ, ನಿಮ್ಮ ತೂಕ ಹೆಚ್ಚಾಗಬಹುದು. ಅತಿಯಾದ ಶೀತ, ಒಣ ಚರ್ಮ, ಅತಿಯಾದ ಕೂದಲು ಉದುರುವಿಕೆ, ಹೃದಯ ಬಡಿತ ನಿಧಾನವಾಗುವುದು, ಮರೆವು, ಗಂಟಲು ನೋವು, ಊತ, ಅತಿಯಾದ ನಿದ್ರೆ, ಚಡಪಡಿಕೆ ಮುಂತಾದ ಲಕ್ಷಣಗಳು ಕಂಡುಬರುತ್ತವೆ. ನಿಮ್ಮ ಆಹಾರದಲ್ಲಿ ಕೆಲವು ಅಯೋಡಿನ್ ಭರಿತ ಆಹಾರಗಳನ್ನು ಸೇರಿಸುವ ಮೂಲಕ ದೇಹದಲ್ಲಿ ಅಯೋಡಿನ್ ಕೊರತೆಯನ್ನು ತಡೆಯಬಹುದು.
ದೇಹದಲ್ಲಿ ಅಯೋಡಿನ್ ಕೊರತೆಯು ಅನೇಕ ರೋಗಗಳಿಗೆ ಕಾರಣವಾಗಬಹುದು. ಇವುಗಳಲ್ಲಿ ಅಯೋಡಿನ್ ಕೊರತೆಯ ಸಿಂಡ್ರೋಮ್ ಕೂಡ ಸೇರಿದೆ. ಗರ್ಭಿಣಿ ಮಹಿಳೆಯಲ್ಲಿ ಅಯೋಡಿನ್ ಕೊರತೆಯಿದ್ದರೆ, ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಈ ಗರ್ಭಿಣಿಯರಲ್ಲಿ ಅಯೋಡಿನ್ ಕೊರತೆ ಕಂಡು ಬಂದರೆ ಗರ್ಭಪಾತ, ಅಂಗವಿಕಲ ಶಿಶು, ನವಜಾತ ಶಿಶುವಿನಲ್ಲಿ ಗಳಗಂಡ ಹಾಗೂ ಮಕ್ಕಳಲ್ಲಿ ಕುಬ್ಜತೆ, ಶತ ದಡ್ಡತನ, ಮೆಳ್ಳೆಗಣ್ಣು, ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ನಿಧಾನವಾಗುತ್ತದೆ. ಕಿವುಡುತನ, ಲೈಂಗಿಕ ಬೆಳವಣಿಗೆ ಆಗದಿರುವುದು, ತೊದಲುವಿಕೆ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದಲ್ಲದೇ, ದೊಡ್ಡವರಲ್ಲಿ ಗಳಗಂಡ, ಗೊಗ್ಗರು ಧ್ವನಿ, ದೇಹದಲ್ಲಿ ಬಾವು, ಕೊಲೆಸ್ಟ್ರಾಲ್ ಹೆಚ್ಚಳ, ಚುರುಕುತನ ನಾಶವಾಗಿ ಮಂದತೆ ಆವರಿಸುವುದು, ಸ್ಥೂಲಕಾಯ, ಲೈಂಗಿಕ ನಿರಾಸಕ್ತಿಯಂತಹ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಈ ರೀತಿಯ ಆರೋಗ್ಯ ಸಮಸ್ಯೆಗಳನ್ನು ತಡೆಯುವ ಉತ್ತಮ ಮಾರ್ಗವೆಂದರೆ ಪ್ರತಿದಿನ ಸೀಮಿತ ಪ್ರಮಾಣದಲ್ಲಿ ಅಯೋಡಿನ್ ಉಪ್ಪನ್ನು ಸೇವಿಸುವುದು.
ದೇಹಕ್ಕೆ ಬೇಕಾಗಿರುವ ಅಯೋಡಿನ್ ಪ್ರಮಾಣ ಅತ್ಯಲ್ಪ. ಪ್ರತಿದಿನ 150 ಮೈಕ್ರೊಗ್ರಾಂ ನಷ್ಟು ಮಾತ್ರ. ಮಕ್ಕಳಿಗೆ ಕೇವಲ 50 ಮೈಕ್ರೊಗ್ರಾಂ, ಗರ್ಭಿಣಿಯರಿಗೆ 200 ಮೈಕ್ರೊಗ್ರಾಂ ಅಯೋಡಿನ್ ಪ್ರಮಾಣವು ಆಹಾರದಲ್ಲಿ ದೊರೆತರೆ ಸಾಕು. ಒಟ್ಟಾರೆ ಒಬ್ಬ ವ್ಯಕ್ತಿಗೆ ಜೀವಮಾನವಿಡೀ ಬೇಕಾಗಿರುವುದು ಕೇವಲ ಅರ್ಧ ಚಮಚ ಅಯೋಡಿನ್ ಮಾತ್ರ. ನಮ್ಮ ದೇಹದಲ್ಲಿಯೇ 25 ಮಿಲಿಗ್ರಾಂ ಅಯೋಡಿನ್ ಇರುತ್ತದೆ. ಹೀಗಾಗಿ ದೇಹಕ್ಕೆ ಅಗತ್ಯವಿರುವಷ್ಟು ಮಾತ್ರ ಅಯೋಡಿನ್ ಭರಿತ ಆಹಾರವನ್ನು ಸೇವಿಸಿದರೆ ಸಾಕು, ಅತಿಯಾದರೆ ಇನ್ನಿತ್ತರ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.
ಆಲೂಗಡ್ಡೆಯನ್ನು ಸಿಪ್ಪೆಯೊಂದಿಗೆ ತಿನ್ನುವುದರಿಂದ ದೇಹಕ್ಕೆ ಬೇಕಾಗುವ ಅಯೋಡಿನ್ ದೊರೆಯುತ್ತದೆ. ಈ ಸಿಪ್ಪೆಯು ಹೆಚ್ಚು ಅಯೋಡಿನ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಗಳಿಂದ ಸಮೃದ್ಧವಾಗಿದೆ. ಹಾಲು, ಒಣದ್ರಾಕ್ಷಿ, ಮೊಸರು, ಕಂದು ಅಕ್ಕಿ, ಸಮುದ್ರದ ಮೀನು, ಉಪ್ಪು, ಕಾಡ್‌ಲಿವರ್ ಆಯಿಲ್, ಮಾಂಸ, ಮೊಟ್ಟೆ, ಧಾನ್ಯ-ಬೇಳೆಕಾಳು, ಸೊಪ್ಪು-ಪಾಲಾಕ್, ರಾಗಿ, ಸಾಸಿವೆ, ಜೋಳ, ಶೇಂಗ ಹಾಗೂ ಉದ್ದು ಈ ಆಹಾರಗಳನ್ನು ಸೇವಿಸುವ ಮೂಲಕ ದೇಹದಲ್ಲಿನ ಅಯೋಡಿನ್ ಕೊರತೆಯನ್ನು ನೀಗಿಸಿಕೊಳ್ಳಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ