
ನ್ಯೂಮೋನಿಯಾ (Pneumonia) ಶ್ವಾಸಕೋಶವನ್ನು ಬಾಧಿಸುವಂತಹ ಸೋಂಕಾಗಿದೆ. ಸಕಾಲದಲ್ಲಿ ಈ ಕಾಯಿಲೆಯನ್ನು ಪತ್ತೆ ಹಚ್ಚಿ ಕೆಲವು ಮುನ್ನೆಚ್ಚರಿಕೆಗಳು ಮತ್ತು ಔಷಧಿಗಳನ್ನು ತೆಗೆದುಕೊಳ್ಳುವ ಮೂಲಕ ಇದನ್ನು ತಡೆಗಟ್ಟಬಹುದು. ಆದರೆ ಚಿಕಿತ್ಸೆಯಲ್ಲಿನ ಸಣ್ಣ ನಿರ್ಲಕ್ಷ್ಯವೂ ಸಹ ರೋಗಿಯ ಸಾವಿಗೆ ಕಾರಣವಾಗಬಹುದು. ಆದ್ದರಿಂದ ಈ ಕಾಯಿಲೆಯ ಗಂಭೀರತೆಯನ್ನು ಪರಿಗಣಿಸಿ, ಇದರ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಪ್ರತಿವರ್ಷ ನವೆಂಬರ್ 12 ರಂದು ವಿಶ್ವ ನ್ಯೂಮೋನಿಯಾ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಸಂದರ್ಭದಲ್ಲಿ ಯಾರು ಈ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚು, ಇದರ ರೋಗ ಲಕ್ಷಣಗಳೇನು, ಈ ಕಾಯಿಲೆಯನ್ನು ತಡೆಗಟ್ಟುವ ಮಾರ್ಗಗಳೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ವಿಶ್ವ ನ್ಯುಮೋನಿಯಾ ದಿನವನ್ನು ಆಚರಿಸುವ ಉದ್ದೇಶವೆಂದರೆ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಪ್ರಪಂಚದಾದ್ಯಂತ ಮಕ್ಕಳ ಮೇಲೆ ಅದು ಪರಿಣಾಮ ಬೀರದಂತೆ ತಡೆಯುವುದಾಗಿದೆ. ಈ ದಿನವನ್ನು 2009 ರಲ್ಲಿ “ಸ್ಟಾಪ್ ನ್ಯೂಮೋನಿಯಾ” ಅಭಿಯಾನದ ಭಾಗವಾಗಿ ಮಕ್ಕಳ ನ್ಯುಮೋನಿಯಾ ವಿರುದ್ಧದ ಜಾಗತಿಕ ಒಕ್ಕೂಟವು ಪ್ರಾರಂಭಿಸಿತು. ಅಂದಿನಿಂದ, ಈ ದಿನವನ್ನು ವಾರ್ಷಿಕವಾಗಿ ಹೊಸ ಥೀಮ್‌ನೊಂದಿಗೆ ಆಚರಿಸಲಾಗುತ್ತಿದೆ.
ನ್ಯುಮೋನಿಯಾ ಒಂದು ಕಾಯಿಲೆಯಾಗಿದ್ದು, ಕೆಲವು ಮುನ್ನೆಚ್ಚರಿಕೆಗಳು ಮತ್ತು ಔಷಧಿಗಳನ್ನು ತೆಗೆದುಕೊಳ್ಳುವ ಮೂಲಕ ಇದನ್ನು ತಡೆಗಟ್ಟಬಹುದು. ಆದಾಗ್ಯೂ, ಅದರ ಚಿಕಿತ್ಸೆಯಲ್ಲಿನ ಸಣ್ಣ ನಿರ್ಲಕ್ಷ್ಯವೂ ಸಹ ರೋಗಿಯ ಸಾವಿಗೆ ಕಾರಣವಾಗಬಹುದು. ವಿಶ್ವ ನ್ಯುಮೋನಿಯಾ ದಿನವನ್ನು ಆಚರಿಸುವ ಪ್ರಾಥಮಿಕ ಉದ್ದೇಶವೆಂದರೆ, ಈ ರೋಗದ ಬಗ್ಗೆ ಜಾಗೃತಿ ಮೂಡಿಸುವುದು, ಅದರ ಕಾರಣಗಳು ಮತ್ತು ಚಿಕಿತ್ಸೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು, ಇದರಿಂದ ಜನರು ಅದರ ಲಕ್ಷಣಗಳನ್ನು ಗುರುತಿಸಿ ಮತ್ತು ಸಕಾಲಿಕ ಚಿಕಿತ್ಸೆ ಪಡೆಯಬಹುದು.
ನ್ಯೂಮೋನಿಯಾ ಶ್ವಾಸಕೋಶಕ್ಕೆ ತಗಲುವ ಒಂದು ಸೋಂಕು. ಇದು ಆಮ್ಲಜನಕ ಸೇಮಿಸುವ ಪ್ರಮಾಣಕ್ಕೆ ತಡೆಯೊಡ್ಡುತ್ತದೆ ಹಾಗೂ ಉಸಿರಾಟವನ್ನು ಕಷ್ಟಕರ ಮತ್ತು ನೋವುದಾಯಕವನ್ನಾಗಿಸುತ್ತದೆ. ಇದು ಗಂಭೀರ ಉಸಿರಾಟದ ಸಮಸ್ಯೆಯಾಗಿದ್ದು, ಈ ಕಾಯಿಲೆ ಶ್ವಾಸಕೋಶಗಳನ್ನು ಉಬ್ಬುವಂತೆ ಮಾಡುತ್ತದೆ. ಈ ಸೋಂಕು ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಶಿಲೀಂಧ್ರಗಳಿಂದ ಉಂಟಾಗುತ್ತದೆ. ಮಕ್ಕಳಲ್ಲಿ ನ್ಯೂಮೋನಿಯಾವನ್ನು ಉಂಟು ಮಾಡುವ ಅತ್ಯಂತ ಸಾಮಾನ್ಯ ಬ್ಯಾಕ್ಟೀರಿಯಾ ಎಂದರೆ ಸ್ಟ್ರೆಪ್ಟೊಕಾಕಸ್. ಈ ಮಾರಕ ರೋಗವು ಪ್ರತಿ ವರ್ಷ ಲಕ್ಷಾಂತರ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ.
ಜಾಗತಿಕವಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹಾಗೂ 65 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರು ನ್ಯುಮೋನಿಯಾಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಏಕೆಂದರೆ ಅವರ ರೋಗನಿರೋಧಕ ವ್ಯವಸ್ಥೆಗಳು ಬಲವಾಗಿರುವುದಿಲ್ಲ. ಅಲ್ಲದೆ ಸಿಒಪಿಡಿ ಆಸ್ತಮಾದಂತಹ ದೀರ್ಘಕಾಲೀನ ಶ್ವಾಸಕೋಶದ ಕಾಯಿಲೆಗಳಿಂದ ಬಳಲುತ್ತಿರುವವರು, ಧೂಮಪಾನಿಗಳು, ಮಧುಮೇಹಿಗಳು, ಮೂತ್ರಪಿಂಡ ಮತ್ತು ಯಕೃತ್ತಿನ ತೊಂದರೆ ಇರುವವರು ಸಹ ಈ ಕಾಯಿಲೆಗೆ ತುತ್ತಾಗುವ ಅಪಾಯ ಹೆಚ್ಚಿರುತ್ತದೆ.
ಇದನ್ನೂ ಓದಿ: ಮಲಗಿರುವಾಗ ಬಾಯಿಯ ಮೂಲಕ ಉಸಿರಾಡುವ ಅಭ್ಯಾಸ ನಿಮಗಿದ್ಯಾ, ಹಾಗಿದ್ರೆ ಈ ಸ್ಟೋರಿ ತಪ್ಪದೆ ಓದಿ
ನ್ಯುಮೋನಿಯಾ ಸಾಮಾನ್ಯವಾಗಿ ಶೀತದಿಂದ ಪ್ರಾರಂಭವಾಗುತ್ತದೆ. ಶ್ವಾಸಕೋಶದಲ್ಲಿ ಸೋಂಕು ವೇಗವಾಗಿ ಮುಂದುವರೆದಾಗ, ಅದು ಹೆಚ್ಚಿನ ಜ್ವರ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ. ಆಯಾಸ, ಹಸಿವಿನ ಕೊರತೆ, ಎದೆ ನೋವು ಕೂಡ ಉಂಟಾಗಬಹುದು. ಐದು ವರ್ಷದೊಳಗಿನ ಮಕ್ಕಳಿಗೆ ಜ್ವರವಿಲ್ಲದಿರಬಹುದು ಆದರೆ ಕೆಮ್ಮು ಮತ್ತು ಉಸಿರಾಟದ ತೊಂದರೆ ಉಂಟಾಗಬಹುದು.
ಈ ರೋಗ ಬಾರದಂತೆ ನೋಡಿಕೊಳ್ಳಲು ನೈರ್ಮಲ್ಯದ ಬಗ್ಗೆ ವಿಶೇಷ ಗಮನ ಕೊಡಿ. ನಿಮ್ಮ ಕೈಗಳನ್ನು ನಿಯಮಿತವಾಗಿ ತೊಳೆಯಿರಿ. ನೀವು ಹೊರಗೆ ಹೋಗಬೇಕಾದರೆ, N95 ಅಥವಾ N99 ಮಾಸ್ಕ್ ಧರಿಸುವುದು ಕಡ್ಡಾಯ. ವಿಟಮಿನ್ ಸಿ ಮತ್ತು ಸತುವು ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ಜೊತೆಗೆ ಮುಖ್ಯವಾಗಿ, ಲಸಿಕೆ ಅತ್ಯಗತ್ಯ. ಇದನ್ನು ವೈದ್ಯರು ನಿರ್ದೇಶನದ ಮೇರೆಗೆ ಮಕ್ಕಳು, ವಯಸ್ಕರು ಮತ್ತು ವೃದ್ಧರಿಗೆ ನೀಡಲಾಗುತ್ತದೆ. ಇದಲ್ಲದೆ, ಯಾವುದೇ ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ ಮತ್ತು ತಕ್ಷಣದ ವೈದ್ಯಕೀಯ ಚಿಕಿತ್ಸೆ ಮತ್ತು ವೈದ್ಯಕೀಯ ಸಲಹೆಯನ್ನು ಪಡೆಯಿರಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ