ರೇಬಿಸ್ ಬಗ್ಗೆ ತಿಳಿಯದವರಿಲ್ಲ. ಎಷ್ಟು ಅಪಾಯಕಾರಿಯೋ ಅಷ್ಟೇ ಭಯಾನಕ ರೋಗ. ಹಾಗಾಗಿಯೇ ವಿಶ್ವದಾದ್ಯಂತ ಈ ಬಗ್ಗೆ ಜಾಗೃತಿ ಮೂಡಿಸಲು ಸೆಪ್ಟೆಂಬರ್ 28 ರಂದು ವಿಶ್ವ ರೇಬಿಸ್ ದಿನವನ್ನು ಆಚರಿಸಲಾಗುತ್ತದೆ. ರೇಬಿಸ್ ಕಾಯಿಲೆಯ ಹರಡುವಿಕೆ, ಅದರ ತಡೆಗಟ್ಟುವಿಕೆ ಮತ್ತು ಪ್ರಾಣಿ ಹಾಗೂ ಮನುಷ್ಯರಿಗೆ ಲಭ್ಯವಿರುವ ರೇಬೀಸ್ ಲಸಿಕೆಯ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಈ ಆಚರಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ. ಅದಲ್ಲದೆ ಶ್ವಾನಗಳಿಂದ ಮನುಷ್ಯನಿಗೆ ರೇಬಿಸ್ ಹರಡುವುದನ್ನು 2030ರ ಒಳಗೆ ತಡೆಯುವ ಗುರಿಯನ್ನು ಇರಿಸಿಕೊಳ್ಳಲಾಗಿದೆ. ರೇಬಿಸ್ ಸಸ್ತನಿಗಳಲ್ಲಿ ವೈರಾಣುವಿನಿಂದ ಹರಡುವ ಕಾಯಿಲೆ. ರೇಬೀಸ್ ಕಾಯಿಲೆ ಹರಡಲು ಲಿಸ್ಸಾವೈರಸ್ ಮುಖ್ಯ ಕಾರಣವಾಗಿದೆ. ನಾಯಿ, ಬೆಕ್ಕುಗಳ ಕಡಿತ ಅಥವಾ ಲಾಲಾರಸದ ಸಂಪರ್ಕದಿಂದ ಹಾಗೂ ಸಸ್ತನಿಗಳು ಮತ್ತು ವಿಶೇಷವಾಗಿ ಕಾಡುಪ್ರಾಣಿಗಳ ಮೂಲಕ ಈ ಸೋಂಕು ಹರಡುತ್ತದೆ. ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಇದನ್ನು ಗುಣಪಡಿಸಬಹುದಾಗಿದ್ದು ಇಲ್ಲವಾದಲ್ಲಿ ನೇರವಾಗಿ ನರಮಂಡಲದ ಮೇಲೆ ಪರಿಣಾಮ ಬೀರಿ ಮೆದುಳಿಗೆ ಘಾಸಿಯಾಗಿ ಸಾವು ಸಂಭವಿಸಬಹುದು.
ರೇಬಿಸ್‌ಗೆ ಮೊದಲು ಲಸಿಕೆ ಕಂಡುಹಿಡಿದ ಲೂಯಿ ಪಾಶ್ಚರ್ ಮರಣ ಹೊಂದಿದ ದಿನವನ್ನು 2007ರಿಂದ ವಿಶ್ವ ರೇಬಿಸ್ ದಿನವೆಂದು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ, ಅಮೇರಿಕಾದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ ಸಂಸ್ಥೆ ಮತ್ತು ಅಲೈಯನ್ಸ್ ಫಾರ್ ರೇಬೀಸ್ ಕಂಟ್ರೋಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ವಿಶ್ವ ರೇಬೀಸ್ ದಿನವನ್ನು ಮೊದಲು ಆಚರಿಸಲಾಗಿತ್ತು. ಅಲ್ಲದೆ ರೇಬಿಸ್ ಕುರಿತು ಅರಿವು ಮೂಡಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ‘ರಾಷ್ಟ್ರೀಯ ರೇಬಿಸ್ ನಿಯಂತ್ರಣ ಯೋಜನೆ’ ರೂಪಿಸಿದೆ. ರೇಬಿಸ್‌ನಿಂದ ಸಾವಿಗೀಡಾಗುವ ಮಕ್ಕಳಲ್ಲಿ ಹೆಚ್ಚಿನವರು 5ರಿಂದ 13 ವರ್ಷದೊಳಗಿನ ಮಕ್ಕಳು. ಹಾಗಾಗಿ ಶ್ವಾನಗಳ ವರ್ತನೆ ಬಗ್ಗೆ ಅರಿವು ಮೂಡಿಸುವುದು ಬಹಳ ಮುಖ್ಯವಾಗಿದೆ.
ಇದನ್ನೂ ಓದಿ: ಲೈಂಗಿಕ ಶಕ್ತಿ ಹೆಚ್ಚಿಸುವ ಮಾತ್ರೆಗಳ ಮಿತಿಮೀರಿದ ಸೇವನೆ ಸಾವಿಗೆ ಕಾರಣವಾಗಬಹುದು
ರೇಬೀಸ್ ಒಂದು ವೈರಲ್ ಕಾಯಿಲೆಯಾಗಿದ್ದು, ಈ ರೋಗವನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ಅಲ್ಲದೆ ಈ ವಿಶೇಷ ದಿನವು ಪ್ರಾಣಿಗಳ ಆರೈಕೆ ಮತ್ತು ರೇಬೀಸ್ನಂತಹ ಪ್ರತಿಕೂಲ ಪರಿಸ್ಥಿತಿಗಳೊಂದಿಗೆ ಹೇಗೆ ವ್ಯವಹರಿಸುವುದು ಎಂಬ ಕುರಿತು ಮಾಹಿತಿಯನ್ನು ನೀಡುತ್ತದೆ. ರೇಬಿಸ್ ರೋಗ ತಡೆಗಟ್ಟಲು ಎಚ್ಚರಿಕೆಯೊಂದೇ ಮದ್ದು. ಅಪರಿಚಿತ ಪ್ರಾಣಿಗಳ ಜತೆ ಮಕ್ಕಳನ್ನು ಆಟವಾಡಲು ಬಿಡಬೇಡಿ. ಸಣ್ಣ ಮಕ್ಕಳನ್ನು ನಾಯಿಗಳಿಂದ ದೂರವಿರಿಸಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:08 am, Sat, 28 September 24