ನಮ್ಮಲ್ಲಿ ಹೆಚ್ಚಿನವರು ಕಡಲೆಕಾಯಿಯನ್ನು ತಿನ್ನಲು ಇಷ್ಟಪಡುತ್ತಾರೆ. ಅದರಲ್ಲೂ ಕಡಲೆಕಾಯಿಯನ್ನು ಬಡವರ ಬಾದಮಿ ಎಂದು ಕೂಡ ಕರೆಯುವುದುಂಟು. ಕಡಲೆಕಾಯಿಯನ್ನು ಹಸಿ, ಹುರಿದು, ಬೇಯಿಸಿ ತಿನ್ನಬಹುದು. ಹೆಚ್ಚು ರುಚಿಕೊಡುವ ಈ ಪಾದಾರ್ಥದಲ್ಲಿ ಆರೋಗ್ಯಕರ ಗುಣಗಳಿವೆ ಎಂದು ನಿಮಗೆ ತಿಳಿದಿದೆಯೇ. ಹೌದು ಕಡಲೆಕಾಯಿಯಲ್ಲಿ ವಿಟಮಿನ್ ಇ, ಸೆಲೆನಿಯಮ್, ಫೈಬರ್ ಮತ್ತು ಸತು ಸಮೃದ್ಧವಾಗಿದೆ. ನಮ್ಮ ದೇಹದ ಸೌಂದರ್ಯವನ್ನು ಹೆಚ್ಚಿಸಲು ಅಗತ್ಯವಿರುವ ಹಾರ್ಮೋನುಗಳನ್ನು ಉತ್ಪಾದಿಸಲು ಸಹ ಉಪಯುಕ್ತವಾಗಿವೆ. ರಕ್ತ ಪರಿಚಲನೆ ಹೆಚ್ಚಿಸಲು ಕಡಲೆಕಾಯಿ ಅನುಕೂಲಕರವಾಗಿದೆ. ಆದಾಗ್ಯೂ, ಕೆಲವರಿಗೆ ಕಡಲೆಕಾಯಿ ತಿನ್ನುವ ಕ್ರಮದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಅದು ಏನು ಎಂದು ಹುಬ್ಬೇರಿಸುವವರಿಗೆ ಉತ್ತರ ಇಲ್ಲಿದೆ.
ಹೆಚ್ಚಿನವರು ಕಡಲೆಕಾಯಿಯ ಮೇಲಿನ ಒಣ ಸಿಪ್ಪೆಯ ಜತೆಗೆ, ಕಂದು ಬಣ್ಣದ ಸಿಪ್ಪೆ ಅಥವಾ ಹೊಟ್ಟನ್ನು ತೆಗೆದು ತಿನ್ನುತ್ತಾರೆ. ಇದು ತಪ್ಪು ಎಂದು ತಜ್ಞರು ಹೇಳುತ್ತಾರೆ. ಕಡಲೆಕಾಯಿಯ ಮೇಲಿನ ಸಿಪ್ಪೆ ನಮ್ಮ ಬಾಯಿಗೆ ಸ್ವಲ್ಪ ಕಹಿಯಾಗಿರುತ್ತದೆ. ಆದ್ದರಿಂದ ನಾವು ಇದನ್ನು ತಿನ್ನುವುದನ್ನು ತಡೆಯುತ್ತೇವೆ. ಆದರೆ ಕಡಲೆಕಾಯಿ ಸಿಪ್ಪೆ ಬಿಸಾಡುವ ಬದಲು ಹಾಗೆ ತಿನ್ನುವುದರಿಂದ ಸಾಕಷ್ಟು ಉಪಯೋಗಗಳಿವೆ.
ಚರ್ಮದ ರಕ್ಷಣೆ
ಕಡಲೆಕಾಯಿಯ ಸಿಪ್ಪೆಯಲ್ಲಿರುವ ಬಯೋಆಕ್ಟಿವ್ಸ್ ಮತ್ತು ಫೈಬರ್ ರೋಗದಿಂದ ರಕ್ಷಿಸುತ್ತದೆ ಮತ್ತು ಚರ್ಮದಲ್ಲಿನ ಕಾಯಿಲೆಯನ್ನು ದೂರ ಮಾಡಿ ಚರ್ಮವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಚರ್ಮವು ಒಣಗದಂತೆ ನೋಡಿಕೊಳ್ಳುವುದರ ಜತೆಗೆ ಹೆಚ್ಚು ಕಾಂತಿಯನ್ನು ನೀಡುತ್ತದೆ.
ಹೃದಯಕ್ಕೆ ಒಳ್ಳೆಯದು
ಕಡಲೆಕಾಯಿ ಹೃದ್ರೋಗ, ಕ್ಯಾನ್ಸರ್ ಮತ್ತು ಹೃದಯಾಘಾತವನ್ನು ತಡೆಗಟ್ಟುವ ಗುಣಗಳನ್ನು ಹೊಂದಿದೆ. ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ನೀವು ಬಳಲುತ್ತಿದ್ದರೆ, ಹುರಿದ ಕಡಲೆಕಾಯಿಯ ಕಂದು ಬಣ್ಣದ ಸಿಪ್ಪೆಯೊಂದಿಗೆ ತಿನ್ನಿ. ನೆನಪಿಡಿ ಒಣಗಿದ ಸಿಪ್ಪೆಯನ್ನು ಮೊದಲೇ ತೆಗೆಯಿರಿ.
ಹುಣ್ಣು ನಿವಾರಕ
ಹುರಿದ ಕಡಲೆಕಾಯಿ ಹೊಟ್ಟುಗಳು ಹಣ್ಣುಗಳಷ್ಟೇ ಪೌಷ್ಟಿಕಾಂಶ ನೀಡುತ್ತದೆ. ಹುರಿದ ಹೊಟ್ಟು ಹೆಚ್ಚು ಉಪಯುಕ್ತವಾಗಿದೆ. ಬಾಯಿ ಹುಣ್ಣಿನಿಂದ ಬಳಲುತ್ತಿರುವವರು ಇದನ್ನು ಸೇವಿಸುವುದು ಸೂಕ್ತ. ಹುರಿದ ಕಡಲೆಕಾಯಿಯಲ್ಲಿ ವಿಟಮಿನ್ ಸಿ ಮತ್ತು ಗ್ರೀನ್ ಟೀಗಿಂತ ಹೆಚ್ಚಿನ ಉತ್ಕರ್ಷಣ ನಿರೋಧಕ ಅಂಶವಿದೆ.
ತೂಕ ಇಳಿಕೆಗೆ ಸಹಾಯಕ
ಕಡಲೆಕಾಯಿ ಹೆಚ್ಚುವರಿ ತೂಕವನ್ನು ಕಡಿಮೆ ಮಾಡಲು ತುಂಬಾ ಉಪಯುಕ್ತವಾಗಿದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಸಿಪ್ಪೆಯೊಂದಿಗೆ ಕಡಲೆಕಾಯಿ ತಿನ್ನಲು ವೈದ್ಯರು ಸೂಚಿಸುತ್ತಾರೆ.
ಇನ್ನಿತರ ಪ್ರಯೋಜನಗಳು
ಕಡಲೆಕಾಯಿ ತಾಳ್ಮೆ ಹೆಚ್ಚಿಸಲು ಸಹಾಯ ಮಾಡುತ್ತದೆ. ದೇಹದಲ್ಲಿನ ಉರಿಯೂತ ಮತ್ತು ತುರಿಕೆ ಕಡಿಮೆ ಮಾಡಲು ಇದು ಉಪಯುಕ್ತವಾಗಿದೆ. ಸಿಪ್ಪೆ ಸೇರಿದಂತೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಕಡಲೆಕಾಯಿಗಳನ್ನು ತಿನ್ನುವುದು ನಮ್ಮ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ಉಂಟುಮಾಡುತ್ತದೆ.
ಇದನ್ನೂ ಓದಿ:
Health Tips: ನುಗ್ಗೆಕಾಯಿ ಮಾತ್ರವಲ್ಲ, ಸೊಪ್ಪಿನಲ್ಲೂ ಸಾಕಷ್ಟು ಔಷಧೀಯ ಗುಣಗಳು ಅಡಗಿವೆ
Health Benefits: ಸಾಸಿವೆ ಒಗ್ಗರಣೆಗೆ ಮಾತ್ರವಲ್ಲ; ಆರೋಗ್ಯದಲ್ಲಿ ಉಂಟಾಗುವ ಏರುಪೇರುಗಳಿಗೆ ಸಾಸಿವೆಯೇ ರಾಮಬಾಣ