ದೈಹಿಕವಾಗಿ ಆರೋಗ್ಯವಾಗಿರಲು ಮತ್ತು ಶಾಂತಿಯುತವಾಗಿರಲು ವ್ಯಾಯಾಮ ಅತ್ಯಗತ್ಯ. ಓಡಾಡುವುದು(Walking) ಉತ್ತಮ ವ್ಯಾಯಾಮವಾಗಿದೆ. ವಾಕಿಂಗ್ ದೇಹವನ್ನು ಆರೋಗ್ಯವಾಗಿರಿಸುತ್ತದೆ. ಆದರೆ ಈ ನಡಿಗೆ ಸಾಧ್ಯವಾದಷ್ಟು ಸಕ್ರಿಯವಾಗಿರಬೇಕು. ವೇಗವಾಗಿ ನಡೆಯುವುದರಿಂದ ಉಸಿರಾಟದ ವೇಗ ಹೆಚ್ಚಾಗುತ್ತದೆ. ಇದು ಶ್ವಾಸಕೋಶ ಮತ್ತು ಹೃದಯದ ಕಾರ್ಯವನ್ನು ಸುಧಾರಿಸುತ್ತದೆ. ಆದರೆ ಈಗ ಹಲವರು ಓಡಾಡುವಾಗ ಅಥವಾ ವಾಕಿಂಗ್ ಮಾಡುವಾಗ ಚಪ್ಪಲಿ ಧರಿಸುತ್ತಾರೆ. ಆದರೆ ನೆನಪಿಡಿ ಬರಿಗಾಲಿನಲ್ಲಿ ನಡೆಯುವುದು ಉತ್ತಮ ಅಭ್ಯಾಸ ಮತ್ತು ಇದು ದೇಹವನ್ನು ಸದಾ ಆರೋಗ್ಯವಾಗಿಡುತ್ತದೆ. ಬರಿಗಾಲಿನಲ್ಲಿ ನಡೆಯುವುದರಿಂದ ಅನೇಕ ಪ್ರಯೋಜನಗಳಿವೆ. ಅವುಗಳು ಯಾವುವು ಎಂದು ಹುಬ್ಬೇರಿಸುವವರಿಗೆ ಇಲ್ಲಿದೆ ಉತ್ತರ.
ಬರಿಗಾಲಿನಲ್ಲಿ ನಡೆದರೆ ನಡಿಗೆ ಸ್ಥಿರವಾಗಿರುತ್ತದೆ. ದೇಹವನ್ನು ಸಮತೋಲನಗೊಳಿಸಲು ಇದು ಸರಿಯಾದ ಮಾರ್ಗವಾಗಿದೆ. ಆದ್ದರಿಂದ ವ್ಯಾಯಾಮದ ಸಮಯದಲ್ಲಿ ಮಾತ್ರವಲ್ಲ, ಮನೆಯಲ್ಲಿ ಮತ್ತು ಕಚೇರಿಯಲ್ಲಿ ಬರಿಗಾಲಿನಲ್ಲಿ ನಡೆಯಿರಿ ಎಂದು ನ್ಯೂಯಾರ್ಕ್‌ನ ಇಥಾಕಾ ಸ್ಕೂಲ್ ಆಫ್ ಹೆಲ್ತ್ ಸೈನ್ಸ್ ಮತ್ತು ಹ್ಯೂಮನ್ ಪರ್ಫಾರ್ಮೆನ್ಸ್‌ನ ಪ್ರಾಧ್ಯಾಪಕರಾದ ಪ್ಯಾಟ್ರಿಕ್ ಮೆಕೆನ್ನಾ ಹೇಳಿದ್ದಾರೆ.
ಬರಿಗಾಲಿನಲ್ಲಿ ನಡೆಯುವುದು ನಮ್ಮ ಚಲನವಲನಗಳ ಮೇಲೆ ಪರಿಣಾಮ ಬೀರುತ್ತದೆ. ಪಾದಗಳಲ್ಲಿನ ಸ್ನಾಯುಗಳನ್ನು ಸ್ಥಿರವಾಗಿಡಲು ಇದು ಪ್ರಮುಖ ಪಾತ್ರ ವಹಿಸುತ್ತದೆ. ಅಷ್ಟೇ ಅಲ್ಲ ಈ ಮಾದರಿಯ ನಡಿಗೆ ಹೊಟ್ಟೆಯ ಕೆಳಭಾಗದ ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ.
ಕಾಲುಗಳಲ್ಲಿನ ಸಣ್ಣ ಮತ್ತು ದೊಡ್ಡ ಸ್ನಾಯುಗಳ ನಡುವೆ ಪರಸ್ಪರ ಸಂಬಂಧವಿದೆ. ಇವುಗಳ ಬಗೆಗಿನ ಮಾಹಿತಿಯು ನರ ಸಂಪರ್ಕದ ಮೂಲಕ ಮೆದುಳಿಗೆ ತಲುಪುತ್ತದೆ. ಈ ಸಂಪರ್ಕಕ್ಕೆ ಹಾನಿಯಾದಾಗ ಗಾಯಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಬೂಟುಗಳು ಮತ್ತು ಚಪ್ಪಲಿಗಳಿಂದ ಈ ಅಪಾಯ ಇದೆ. ಕೆಲವೊಮ್ಮೆ ಕಾಲುಗಳ ನಡುವಿನ ನೈಸರ್ಗಿಕ ಸಂಪರ್ಕಕ್ಕೂ ಹಾನಿಯಾಗುತ್ತದೆ ಎಂದು ಪ್ರೊಫೆಸರ್ ಪ್ಯಾಟ್ರಿಕ್ ಹೇಳಿದ್ದಾರೆ.
ಸ್ನಾಯುಗಳು ಈ ರೀತಿ ಕೆಲಸ ಮಾಡದಿದ್ದರೆ, ಇದು ಅಸ್ಥಿರಜ್ಜುಗಳು, ಮೂಳೆಗಳು ಮತ್ತು ಸ್ನಾಯುರಜ್ಜುಗಳ ಮೇಲೆ ಪರಿಣಾಮ ಬೀರುತ್ತದೆ. ನಂತರ ಸ್ನಾಯುಗಳಿಗೆ ಅಪಾಯ ಹೆಚ್ಚು. ಅದಕ್ಕಾಗಿಯೇ ಸ್ನಾಯುಗಳು ದೃಢವಾಗಿ ಕೆಲಸ ಮಾಡಬೇಕಾದರೆ ಬರಿಗಾಲಿನಲ್ಲಿ ನಡೆಯುವುದು ಸೂಕ್ತ. ಇದರಿಂದ ಕಾಲುಗಳಲ್ಲಿನ ಸ್ನಾಯುಗಳು ಬಲಗೊಳ್ಳುತ್ತವೆ.
ಚಳಿಗಾಲದಲ್ಲಿ ಶೂ ಬಳಸಬಹುದು. ಆದರೆ ಸದಾ ಶೂ ಅಥವಾ ಇನ್ನಿತರ ಚಪ್ಪಲಿ ಬಳಸುವುದು ಒಳಿತಲ್ಲ. ಉದಾಹರಣೆಗೆ ಮಳೆಯ ಅಂಗಳದಲ್ಲಿ ನಡೆಯುವಾಗ ಬರಿಗಾಲಲ್ಲಿ ನಡೆಯಿರಿ. ಮಣ್ಣು ಕಾಲಿಗೆ ತಾಗುವುದರಿಂದ ಸ್ನಾಯುಗಳು ಬಲಗೊಳ್ಳುತ್ತದೆ.
ಇದನ್ನೂ ಓದಿ:
Health Benefits: ಕಿಡ್ನಿ ಸಮಸ್ಯೆ ಉಂಟಾದ ಮೇಲೆ ಪರಿಹಾರ ಹುಡುಕುವ ಬದಲು, ಪ್ರತಿದಿನ ಡಿಟಾಕ್ಸ್ ಮಾಡಿ ಕುಡಿಯಿರಿ