Weekly Horoscope: ವಾರ ಭವಿಷ್ಯ: ಏಪ್ರಿಲ್ ತಿಂಗಳ 2ನೇ ವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

| Updated By: ರಮೇಶ್ ಬಿ. ಜವಳಗೇರಾ

Updated on: Apr 09, 2024 | 2:02 AM

ಏಪ್ರಿಲ್ ತಿಂಗಳ ಎರಡನೇ ವಾರ ಖಗೋಳದಲ್ಲಿ ಕೆಲವು ಗ್ರಹಗಳ ಪರಿವರ್ತನೆ ಆಗಲಿದೆ. ವಿಶೇಷವಾಗಿ ಬುಧನು ವಕ್ರನಾಗಿ ನೀಚಸ್ಥಾನಕ್ಕೆ ಬರುವ ಕಾರಣ ಎಲ್ಲ ರಾಶಿಯವರಿಗೂ ಅಹಿತವು ಉಂಟಾಗುವುದು. ಆದ್ದರಿಂದ ಎಲ್ಲರೂ ದೈವೋಪಾನೆಯಿಂದ ಅಪಾಯವನ್ನು ದಾಟುವುದು ಸೂಕ್ತ. ಈ ವಾರ ಎಲ್ಲ ಗ್ರಹರೂ ಏಕಾದಶ ಸ್ಥಾನದ ಫಲವನ್ನು ಕೊಡಲಿ.

Weekly Horoscope: ವಾರ ಭವಿಷ್ಯ: ಏಪ್ರಿಲ್ ತಿಂಗಳ 2ನೇ ವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
ಭವಿಷ್ಯ
Image Credit source: freepik
Follow us on

ಏಪ್ರಿಲ್ ತಿಂಗಳ ಎರಡನೇ ವಾರ ಖಗೋಳದಲ್ಲಿ ಕೆಲವು ಗ್ರಹಗಳ ಪರಿವರ್ತನೆ ಆಗಲಿದೆ. ವಿಶೇಷವಾಗಿ ಬುಧನು ವಕ್ರನಾಗಿ ನೀಚಸ್ಥಾನಕ್ಕೆ ಬರುವ ಕಾರಣ ಎಲ್ಲ ರಾಶಿಯವರಿಗೂ ಅಹಿತವು ಉಂಟಾಗುವುದು. ಆದ್ದರಿಂದ ಎಲ್ಲರೂ ದೈವೋಪಾನೆಯಿಂದ ಅಪಾಯವನ್ನು ದಾಟುವುದು ಸೂಕ್ತ. ಈ ವಾರ ಎಲ್ಲ ಗ್ರಹರೂ ಏಕಾದಶ ಸ್ಥಾನದ ಫಲವನ್ನು ಕೊಡಲಿ.

ಮೇಷ ರಾಶಿ :ಈ ರಾಶಿಯವರಿಗೆ ಏಪ್ರಿಲ್ ತಿಂಗಳ ಎರಡನೇ ವಾರವು ಶುಭಾಶುಭ ಮಿಶ್ರಫಲವು ಇರಲಿದೆ. ಮೊದಲನೆಯದಾಗಿ ಗುರುವು ನಿಮ್ಮ ರಾಶಿಯಿಂದ ದ್ವಿತೀಯ ರಾಶಿಯತ್ತ ಚಲನೆಯನ್ನು ಆರಂಭಿಸಿದ್ದಾನೆ. ಹಾಗಾಗಿ ಸ್ವಲ್ಪ ಸಮಾಧಾನವು ನಿಮಗಿರಲಿದೆ. ಅದಿದ್ದರೂ ವಕ್ರಬುಧನು ನೀಚನಾಗಿ ಇರುವುದರಿಂದ ಬಂಧುಗಳ ನಡುವೆ ವಿವಾದಗಳು ಬರಬಹುದು. ಆರೋಗ್ಯವನ್ನು ಕಾಪಾಡಿಕೊಳ್ಳಲು ಕಷ್ಟವಾದೀತು. ಏನನ್ನಾದರೂ ಮಾತನಾಡಿ ಸಿಕ್ಕಿಬೀಳಬಹುದು. ಶುಕ್ರನು ಉಚ್ಚನಾಗಿ ದ್ವಾದಶದಲ್ಲಿ ಇರುವ ಕಾರಣ ಅವಿವಾಹಿತರಿಗೆ ವಿವಾಹ ಭಾಗ್ಯವು ಒದಗಿ ಮತ್ತೆ ಭಂಗವಾಗುವ ಸಾಧ್ಯತೆ ಇದೆ. ವಲ್ಲೀಸಹಿತನಾದ ಸುಬ್ರಹ್ಮಣ್ಯನ ಉಪಾಸನೆಯು ತೊಂದರೆಗಳನ್ನು ಎದುರಿಸುವ ಶಕ್ತಿ ನೀಡುವುದು.

ವೃಷಭ ರಾಶಿ :ಇದು ಏಪ್ರಿಲ್‌ ತಿಂಗಳ ಎರಡನೇ ವಾರವಾಗಿದ್ದು ಗ್ರಹಗಳ ಬದಲಾವಣೆಯಿಂದ ಕೆಲವು ಹಿತಾಹಿತಕರ ಘಟನೆಗಳು ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು. ಗುರುವು ದ್ವಾದಶದಲ್ಲಿ ಇದ್ದು ಇನ್ನು ಮುಂದೆ ಈ ರಾಶಿಯನ್ನು ಪ್ರವೇಶಿಸಲಿದ್ದಾನೆ. ಸ್ವಲ್ಪ ಮಟ್ಟಿನ ದುಗುಡಗಳು ಕಡಿಮೆಯಾಗುವುದು. ದಶಮದಲ್ಲಿ ವಕ್ರಬುಧನು ನೀಚನಾಗಿ ಇರುವುದರಿಂದ ಉದ್ಯೋಗಕ್ಕೆ ಸಂಬಂಧಿಸಿದ ಗೊಂದಲವಿರಬಹುದು. ಅಥವಾ ಮಾಡುತ್ತಿರುವ ಉದ್ಯೋಗದಲ್ಲಿ ಕಿರಿಕಿರಿ ಹೆಚ್ಚಿಬಹುದು. ಶುಕ್ರನಿರುವುದರಿಂದ ಅಪಾಯವು ಇರದಿದ್ದರೂ ಅಸಮಾಧಾನವು ಹೆಚ್ಚಿರುವುದು. ಮಹಾವಿಷ್ಣುವಿನ ಆರಾಧನೆಯನ್ನು ಮಾಡಿ.

ಮಿಥುನ ರಾಶಿ :ನಿಮಗೆ ಏಪ್ರಿಲ್ ತಿಂಗಳ ಎರಡನೇ ವಾರವು ಸ್ವಲ್ಪ ಮಟ್ಟಿನ ಹಿನ್ನಡೆ ಆಗುವುದು. ಇಷ್ಟು ದಿನ ಏಕಾದಶದಲ್ಲಿ ಇದ್ದು ಎಲ್ಲವನ್ನೂ ಕೊಡುತ್ತಿದ್ದ ಗುರುವು ಇನ್ನು ಮೇಲೆ ಅದು ಕಡಿಮೆ ಆಗುವುದು. ದ್ವಾದಶ ಸ್ಥಾನದ ಕಡೆಗೆ ಗುರುವಿನ ಚಲನೆ ಆರಂಭವಾಗಿದೆ. ಇನ್ನು ದಶಮಸ್ಥಾನದಲ್ಲಿ ಬುಧನು ವಕ್ರನಾಗಿದ್ದು ಉದ್ಯೋಗದಲ್ಲಿ ಮಂದಗತಿಯಾಗುವಂತೆ ಮಾಡುವನು. ಹಾಗಿದ್ದರು ಶುಕ್ರ ಸೂರ್ಯ ಸಂಯೋಗದಿಂದ ಉದ್ಯೋಗದಲ್ಲಿ ಲಾಭಕ್ಕೆ ಯಾವ ತೊಂದರೆಯೂ ಆಗದು. ಗೌರವವನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಸುಬ್ರಹ್ಮಣ್ಯನ ಉಪಾಸನೆ ಮಾಡಿ.

ಕಟಕ ರಾಶಿ :ಈ ತಿಂಗಳ ಎರಡನೇ ವಾರವು ಗ್ರಹಗಳು ಬದಲಾವಣೆ ಹೊಂದಲಿದ್ದು ನಿಮ್ಮ ಮೇಲೆ ಪರಿಣಾತ್ಮಕ ವಿಚಾರಗಳು ಅರಿವಿಗೆ ಬರಲಿವೆ. ವಕ್ರ ಬುಧನು ನೀಚನಾಗಿ ನವಮದಲ್ಲಿ ಇರುವುದರಿಂದ ಬಂಧುಗಳಿಂದ ಅಗೌರವ, ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚಿದೆ. ಅಪಮಾನವನ್ನೂ ಸಹಿಸಬೇಕಾದ ಸ್ಥಿತಿ ಈ ವಾರ ನಿಮಗೆ ಬರುವುದು. ಶುಕ್ರನು ರವಿ ಹಾಗು ರಾಹುವಿನ ಜೊತೆ ಸೇರಿ ಉಚ್ಚಸ್ಥಾನದಲ್ಲಿ ಇದ್ದರೂ ಪೂರ್ಣ ಫಲಕಾರಿಯಲ್ಲ. ಸಂಗಾತಿಯ ಕಡೆಯಿಂದ ಆರ್ಥಿಕ ಲಾಭವು ಅಲ್ಪಮಟ್ಟಿಗೆ ಆಗಬಹುದು. ಚಂದ್ರ ಮತ್ತು ಗುರುವಿನ ಸಂಯೋಗವಾದಾಗ ಹಳಿ ತಪ್ಪಿದ ಉದ್ಯೋಗವು ಸರಿಯಾಗುವುದು. ಲಕ್ಷ್ಮೀನಾರಾಯಣ ದೇವಾಲಯಕ್ಕೆ ಹೋಗಿ ವಿಶೇಷ ಅರ್ಚನೆ ಮಾಡಿಸಿ.

ಸಿಂಹ ರಾಶಿ :ಈ ರಾಶಿಯವರಿಗೆ ಏಪ್ರಿಲ್ ತಿಂಗಳ ಎರಡನೇ ವಾರವು ಪೂರ್ಣ ಸಮಾಧಾನವನ್ನು ಕೊಡದು. ವಕ್ರ ಬುಧನು ನೀಚನಾಗಿದ್ದು ಅಷ್ಟಮದಲ್ಲಿ ಇರುವನು. ಜೊತೆಗೆ ಶುಕ್ರ, ಸೂರ್ಯ, ರಾಹುಗಳೂ ಇರುವರು. ಆರೋಗ್ಯದ ಬಗ್ಗೆ ಅಗತ್ಯವಿದೆ. ಅನಗತ್ಯವಾದ ಆಹಾರವನ್ನು ತಿಂದು ಆರೋಗ್ಯವನ್ನು ಕೆಡಿಸಿಕೊಳ್ಳಬಹುದು. ಅಥವಾ ಐಷಾರಾಮಿಯಾಗಿ ಬದುಕಲು ಹೋಗಿ ತೊಂದರೆಗಳಲ್ಲಿ ಸಿಕ್ಕಿಬೀಳುವಿರಿ. ಗುರು ಚಂದ್ರರ ಯೋಗದಿಂದ ನಿಮಗೆ ಗೌರವ ಅಥವಾ ಪೂರ್ವಾರ್ಜಿತ ಸಂಪತ್ತು ಲಭಿಸಬಹುದು. ಮುಂದೆ ಗುರುವು ಸ್ಥಾನವನ್ನು ಬದಲಿಸುವ ಕಾರಣ ನಿಮ್ಮ ಬದುಕಿನ ಹೆಜ್ಜೆಯನ್ನು ಇಡುವಾಗ ಎಚ್ಚರ ಅಗತ್ಯವಿರುವ. ಶಿವನ ಆರಾಧನೆಯಿಂದ ಮನೋಬಲವು ಗಟ್ಟಿಯಾಗುವುದು.

ಕನ್ಯಾ ರಾಶಿ :ಏಪ್ರಿಲ್ ತಿಂಗಳ ಎರಡನೇ ವಾರವು ನಿಮ್ಮ ಯೋಚನೆಗೆ ತಕ್ಕಂತೆ ಇರಲಿದೆ. ಆತುರದಿಂದ ಏನನ್ನಾದರೂ ಮಾಡಲು ಹೋಗುವಿರಿ. ಒಂದಕ್ಕೆ ಎರಡು ಆಗುವುದು. ನಿಶ್ಚತವಾದ ವಿವಾಹವು ಗೊಂದಲವನ್ನು ಸೃಷ್ಟಿಸಬಹುದು. ಬಂಧುಗಳ ಕಡೆಯಿಂದ ಸರಿಯಾದ ಪ್ರತಿಕ್ರಿಯೆ ಬಾರದಿರುವುದು ನಿಮಗೆ ಬೇಸರವಾಗುವುದು. ಉನ್ನತ ವಿದ್ಯಾಭ್ಯಾಸದ ಕಡೆ ಗಮನವಿದ್ದರೂ ಸಲ್ಲದ ನೆಪಗಳನ್ನು ತೋರಿಸಿ ಮುಂದೂಡುವಿರಿ. ದೈಹಿಕ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ನಿಮ್ಮ ಬಗ್ಗೆ ನಿಮಗೇ ಹಿಂಜರಿಕೆ ಇರುವುದು. ಲಕ್ಷ್ಮೀನಾರಾಯಣರ ಅನುಗ್ರಹದ ಅವಶ್ಯಕತೆ ಇರಲಿದೆ.

ತುಲಾ ರಾಶಿ :ಈ ತಿಂಗಳ ಎರಡನೇ ವಾರದಲ್ಲಿ ಈ ರಾಶಿಯವರಿಗೆ ಮಿಶ್ರಫಲಗಳು ಇರಲಿದೆ. ಷಷ್ಠದಲ್ಲಿ ವಕ್ರ ಬುಧನು ಇದ್ದುದರಿಂದ ಶತ್ರುಗಳ ಕಾಟವು ಹೆಚ್ಚಾಗುವುದು. ಗುರುವು ಬದಲಾವಣೆ ಆಗುವ ಸಂದರ್ಭವು ಇರುವುದರಿಂದ ನಿಮ್ಮ ಭವಿಷ್ಯ ಗಮನ ಅತ್ಯಗತ್ಯ. ಈಗಿನಿಂದಲೇ ಆ ಬಗ್ಗೆ ಚಿಂತನೆ ಮಾಡುವುದು ಉತ್ತಮ. ಮಕ್ಕಳ ಕಡೆಯಿಂದ ನಿಮಗೆ ಯಾವುದೇ ಸಹಾಯವು ದೊರೆಯದೇ ಇರಬಹುದು. ಸಂಗಾತಿಯ ಮಾತುಗಳಿಂದ ನಿಮಗೆ ಗೊಂದಲಗಳು ಸೃಷ್ಟಿಯಾಗಬಹುದು. ನಂಬಿಕೆಯನ್ನು ಇಡುವಾಗ ಎಚ್ಚರಿಕೆ ಇರಲಿ. ಪೂರ್ವಾಪರ ಯೋಚನೆಗಳು ಇರುವುದು ಮುಖ್ಯ. ಅತಿಯಾದ ಬುದ್ಧಿವಂತಿಕೆ ಬೇಡ. ಗುರುದರ್ಶನದ ಅಗತ್ಯವಿದೆ.

ವೃಶ್ಚಿಕ ರಾಶಿ :ಈ ರಾಶಿಯವರಿಗೆ ಈ ವಾರ ಅನುಕೂಲದ ವಾರವೇ ಆಗಿದೆ. ಗುರುವು ತನ್ನ ಸ್ಥಾನವನ್ನು ಬದಲಾವಣೆ ಮಾಡುವ ತಯಾರಿಯಲ್ಲಿ ಇದ್ದಾನೆ. ಹಾಗಾಗಿ ಕೆಲವು ಅಹಿತಕರ ವಾತಾವರಣಗಳು ನಿಮ್ಮ ಸುತ್ತ ನಡೆಯಬಹುದು. ನಿಮ್ಮ ಮೇಲೇ ಆರೋಪಗಳು ಬರಬಹುದು. ಇದೆಲ್ಲವನ್ನೂ ಮನಸ್ಸಿಗೆ ತೆಗೆದುಕೊಳ್ಳದೇ ಮುನ್ನಡೆಯುವ ಅವಶ್ಯಕತೆ ಇದೆ. ಬುಧನು ವಕ್ರನಾಗಿ ನೀಚಸ್ಥಾನದಲ್ಲಿ ಇರುವ ಕಾರಣ ಮಕ್ಕಳ ಬಗ್ಗೆ ಚಿಂತೆ ಹೆಚ್ಚಾಗುವುದು. ಮಕ್ಕಳಿಲ್ಲದವರಿಗೆ ಒಂದು ತರದ ಚಿಂತೆ, ಮಕ್ಕಳಿದ್ದವರಿಗೆ ವಿದ್ಯಾಭ್ಯಾಸದ ಚಿಂತೆ ಕಾಡುವುದು. ಅವಿವಾಹಿತರಿಗೆ ಬಂಧುಗಳ ಕಡೆಯಿಂದ ವಿವಾಹಕ್ಕೆ ಬೇಕಾದ ಸಿದ್ಧತೆ ಇರುವುದು. ಮಾತುಕತೆಗೆ ಕಾಲದ ನಿರೀಕ್ಷಿಯಲ್ಲಿರುವರು. ಗುರುವಿನ ಆಶೀರ್ವಾದವನ್ನು ಪಡೆದುಕೊಳ್ಳಿ.

ಧನು ರಾಶಿ :ನಿಮ್ಮ ರಾಶಿಯಿಯವರಿಗೆ ಗ್ರಹಗಳ ಬದಲಾವಣೆಯಿಂದ ಕೆಲವು ತೊಡಕುಗಳು ಉಂಟಾಗುವುದು. ಬುಧನು ವಕ್ರನಾಗಿ ನೀಚಸ್ಥಾನಕ್ಕೆ ಬಂದಿದ್ದು ನಿಮ್ಮ ಕುಟುಂಬದ ವಿಚಾರದಲ್ಲಿ ಹೊಂದಾಣೆಲಿಕೆ ಕಾಣಿಸದೇ ಹೋಗಬಹುದು. ಗುರುವೂ ಸ್ಥಾನವನ್ನು ಬದಲಿಸುವ ಹಂತದಲ್ಲಿ ಇರುವುದುರಿಂದ‌ ಮಾನಸಿಕವಾಗಿ ಒತ್ತಡಗಳು ಇರುವುದು. ಮಕ್ಕಳ ವಿಚಾರದಲ್ಲಿ ನೀವು ಸರಿಯಾದ ನಿರ್ಧಾರಕ್ಕೆ ಬರಲಾಗದು. ತಂದೆಯಿಂದ ನಿಮಗೆ ಸದ್ಯ ಯಾವುದೇ ಸಹಾಯ ಸಿಗದು. ಚತುರ್ಥದಲ್ಲಿ ಶುಕ್ರನು ಉಚ್ಚಸ್ಥನಾಗಿದ್ದು ತಾಯಿ ಅಥವಾ ಸಂಗಾತಿಯ ಕಡೆಯಿಂದ ಆರ್ಥಿಕಸಹಾಯ ಅಥವಾ ಬೆಂಬಲವಾಗಿ ನಿಲ್ಲಬಹುದು. ಗುರುದರ್ಶನದ ಅಗತ್ಯವಿದೆ. ಗುರುಚರಿತ್ರೆಯನ್ನು ಪಠಿಸಿ.

ಮಕರ ರಾಶಿ :ಈ ವಾರವು ಸಾಮಾಜಿಕವಾಗಿ ಆರ್ಥಿಕವಾಗಿ ಚೆನ್ನಾಗಿದ್ದರೂ ಕೌಟುಂಬಿಕವಾಗಿ ಹಿನ್ನಡೆಯಿರುವುದು. ಬುಧನು ವಕ್ರನೂ ನೀಚನೂ ಆಗಿ ತೃತೀಯದಲ್ಲಿ ಇರುವುದು ಸಾಮರ್ಥ್ಯವಿದ್ದರು ಅದನ್ನು ತೋರಿಸಲಾಗದು. ಅವಕಾಶಗಳು ಸಿಕ್ಕರೂ ಅದನ್ನು ಸರಿಯಾಗಿ ಬಳಕೆಯಾಗದೇ ಹೋಗಬಹುದು. ದ್ವಿತೀಯದಲ್ಲಿ ಕುಜ ಹಾಗೂ ಶನಿ ಇರುವುದರಿಂದ ನಿಮಗೆ ಬರಬೇಕಾದ ಹಣವನ್ನು ಬಹಳ ಶ್ರಮದಿಂದ ಪಡೆಯಬೇಕಾಗುವುದು. ಗುರು ಚಂದ್ರರ ಯೋಗವು ನಿಮ್ಮ ಮನಸ್ಸಿಗೆ ಚೈತನ್ಯವನ್ನು ತಂದುಕೊಡುವುದು. ಮಹಾವಿಷ್ಣುವಿನ ಸ್ತೋತ್ರವನ್ನು ಹೆಚ್ಚು ಮಾಡಿ.

ಕುಂಭ ರಾಶಿ :ಈ ತಿಂಗಳ ಎರಡನೇ ವಾರವು ಆಗುತ್ತಿದೆ. ನಿಮ್ಮ ರಾಶಿಯಲ್ಲಿ ಕುಜ ಹಾಗೂ ಶನಿ ಇರುವರು. ಆಲಸ್ಯವು ಹೆಚ್ಚಿದ್ದರೂ ಕಾಲಕ್ಕೆ ಆಗಬೇಕಾದುದನ್ನು ಮಾಡಿಸುವನು. ತಾಯಿಯಿಂದ ಸಿಗಬೇಕಾದ ಸಂಪತ್ತನ್ನು ತಂದೆಯು ತಡೆಯಬಹುದು. ಸದ್ಯ ಗುರುಬಲವು ಬರುವ ಕಾರಣ ಮನಶ್ಶಾಂತಿಯು ತಾನಾಗಿಯೇ ಬರುವುದು. ಬಂಧುಗಳಿಂದ ಕೆಲವು ನಷ್ಟಗಳು ಆಗಬಹುದು. ವಕ್ರ ಬುಧನು ದ್ವಿತೀಯದಲ್ಲಿ ಇದ್ದುದು ಮಾತಿನ ಬಗ್ಗೆ ಜಾಗರೂಕತೆ ಇರಲಿ. ಶುಕ್ರನು ಉಚ್ಚನಾಗಿರುವ ಕಾರಣ ಖರ್ಚಿದ್ದರೂ ಅದು ಸರಿದೂಗಿಸಬಹುದು. ಹನುಮಾನ್ ಚಾಲಿಸ್ ಪಠನವನ್ನು ಹೆಚ್ಚು ಮಾಡಿ.

ಮೀನ ರಾಶಿ :ಇದು ಏಪ್ರಿಲ್ ತಿಂಗಳ ಎರಡನೇ ವಾರವು ಇದಾಗಿದೆ. ರಾಶಿ ಚಕ್ರದಲ್ಲಿ ತುಂಬ ಬದಲಾವಣೆ ಇಲ್ಲದಿದ್ದರೂ ಕೆಲವು ಪರಿವರ್ತನೆಗಳು ಆಗುವುದು. ದ್ವಿತೀಯದಲ್ಲಿ ಇರುವ ಬುಧನು ವಕ್ರನಾಗಿ ನಿಮ್ಮ ರಾಶಿಗೆ ಬರುತ್ತಾನೆ. ಅದು ಅವನ ನೀಚಸ್ಥಾನವಾದ ಕಾರಣ ಬಂಧುಗಳಿಂದ ಕಿರಿಕಿರಿ, ದೇಹಾರೋಗ್ಯವು ತಪ್ಪುವುದು ಆಗುತ್ತದೆ. ವಿದ್ಯೆಗೆ ಸಂಬಂಧಿಸಿದಂತೆ ಹಿನ್ನಡೆಯಾಗಬಹುದು. ಮತಿಮಂತರಾದರೂ ಸಮಯಕ್ಕೆ ಸರಿಯಾಗಿ ಬುದ್ಧಿ ಸೂಚಿಸದು. ಚಂದ್ರನೂ ನಿಮ್ಮ ರಾಶಿಗೆ ಬರುವ ಕಾರಣ ಮಾನಸಿಕವಾಗಿ ಕುಗ್ಗುವ ಸಂದರ್ಭವೇ ಹೆಚ್ಚು. ಸಮಾಧಾನದ ಮಾತುಗಳೂ ಸ್ವಲ್ಪ ಹೊತ್ತು ಕೆಲಸ ಮಾಡಬಹುದು. ಮಹಾವಿಷ್ಣುವಿನ ಆರಾಧನೆಯನ್ನು ಮಾಡಿ.

-ಲೋಹಿತ ಹೆಬ್ಬಾರ್ – 8762924271 (what’s app only)