ಕೆಲವರಿಗೆ ಏಕಾಗ್ರತೆ ಸಾಧಿಸುವುದು ಬಹಳ ಕಷ್ಟ. ಒಂದು ಕೆಲಸವನ್ನು ಮನಸ್ಸಿಟ್ಟು ಮಾಡುವುದು ಅಂದರೆ ಪ್ರಾಣಕ್ಕೇ ಬಂದಂತೆ ಆಡುತ್ತಾರೆ. ಏನು ಸಮಸ್ಯೆ ಅಂದರೆ, ಏಕಾಗ್ರತೆ ಮಾಡೋದಿಕ್ಕೆ ಆಗುತ್ತಿಲ್ಲ ಎನ್ನುತ್ತಾರೆ. ಒಂದು ಕೆಲಸ ಮಾಡುವಾಗ ಮತ್ತೊಂದರ ಕಡೆಗೆ ಚಿಂತೆ, ಆ ಕಡೆಗೆ ಲಕ್ಷ್ಯ ನೀಡಿದರೆ ಮತ್ತೊಂದರ ಚಿಂತೆ… ಹೀಗೆ ಚಂಚಲ ಮನಸ್ಸಿನ ಮಧ್ಯೆ ಇವರು ಹಣ್ಣುಗಾಯಿ- ನೀರುಗಾಯಿ ಆಗಿಬಿಡುತ್ತಾರೆ. ನೋಡುವವರಿಗೆ ಮಾತ್ರ, ಇದೇನು ಕ್ಷಣಕ್ಕೊಂದು ಮಾತುಗಳನ್ನಾಡುತ್ತಾರೆ ಇವರು ಎಂದೆನಿಸಬಹುದು. ಆದರೆ ಇದರಲ್ಲಿ ಅವರ ಕಡೆಗೆ ತಪ್ಪು ಎಂದು ಬೊಟ್ಟು ಮಾಡಲು ಸಾಧ್ಯವಿಲ್ಲ. ಜ್ಯೋತಿಷ್ಯದ ಪ್ರಭಾವದಿಂದ ಹೀಗಾಗುತ್ತದೆ. ಅದರಲ್ಲೂ ಲಗ್ನ ಯಾವುದು, ಚಂದ್ರ ಎಲ್ಲಿದೆ ಹಾಗೂ ಲಗ್ನದ ಮೇಲಿನ ದೃಷ್ಟಿ ಯಾವ ಗ್ರಹದ್ದಿದೆ ಎಂಬುದನ್ನು ಸರಿಯಾಗಿ ಗಮನಿಸಿಕೊಳ್ಳಬೇಕು. ಈ ಸಮಸ್ಯೆಯನ್ನು ಆರಂಭದಲ್ಲೇ ಸರಿಪಡಿಸಿಕೊಳ್ಳುವುದು ಉತ್ತಮ. ಇಲ್ಲದಿದ್ದಲ್ಲಿ ಆತ್ಮವಿಶ್ವಾಸವೇ ಸತ್ತುಹೋಗುತ್ತದೆ.
ಜಾತಕದಲ್ಲಿ ಚಂದ್ರ ದುರ್ಬಲವಾಗಿದ್ದಲ್ಲಿ ಅಥವಾ ನೀಚ ಸ್ಥಿತಿಯಲ್ಲಿ ಇದ್ದಲ್ಲಿ ಮಾನಸಿಕವಾಗಿ ದುರ್ಬಲ ಆಗುವಂತೆ ಸ್ಥಿತಿ ಉದ್ಭವವಾಗುತ್ತದೆ. ಚಂದ್ರ ಅಂದರೆ ಮನಃಕಾರಕ. ಅಂದರೆ ಮನಸ್ಸಿಗೆ ಸಂಬಂಧಪಟ್ಟದ್ದನ್ನು ನಿಯಂತ್ರಿಸುವುದು ಚಂದ್ರ. ಆದ್ದರಿಂದ ಮಕ್ಕಳಲ್ಲಿ ಈ ಸ್ವಭಾವ ವಿಪರೀತವಾಗಿ ಕಂಡುಬಂದಲ್ಲಿ, ಅದರದೇ ವಯಸ್ಸಿನ ಉಳಿದ ಮಕ್ಕಳಿಗಿಂತ ಹೆಚ್ಚು ಚಂಚಲ ಸ್ವಭಾವ ಆಗಿದ್ದಲ್ಲಿ ಶಾಲೆಗಳಲ್ಲೇ ಮಾನಸಿಕ ತಜ್ಞರನ್ನು ಭೇಟಿ ಮಾಡುವಂತೆ ಸಲಹೆ ನೀಡಲಾಗುತ್ತದೆ. ಅದು ತಪ್ಪಲ್ಲ. ಆದರೆ ಜ್ಯೋತಿಷ್ಯದ ಪ್ರಭಾವವನ್ನೂ ತೆಗೆದು ಹಾಕಲು ಸಾಧ್ಯವಿಲ್ಲ.
ವೃಷಭ ರಾಶಿಯಲ್ಲಿ ಚಂದ್ರ ಉಚ್ಚನಾಗಿದ್ದರೆ, ವೃಶ್ಚಿಕದಲ್ಲಿ ನೀಚ ಸ್ಥಿತಿ ತಲುಪುತ್ತದೆ. ಇನ್ನು ಕೃಷ್ಣ ಪಕ್ಷದ ಪಂಚಮಿ ನಂತರ ಶುಕ್ಲ ಪಕ್ಷ್ದದ ಪಂಚಮಿ ತನಕ ಚಂದ್ರ ದುರ್ಬಲವಾಗಿಯೇ ಇರುತ್ತದೆ. ಆದರೆ ಇದು ಯಾವ ಪ್ರಮಾಣದಲ್ಲಿ ಎಂಬುದನ್ನು ಸಹ ನೋಡಬೇಕಾಗುತ್ತದೆ. ಅದೇ ರೀತಿ ಜನ್ಮ ಜಾತಕದಲ್ಲಿ ಚಂದ್ರ ನೀಚವಾಗಿದ್ದಲ್ಲಿ ತಾಯಿಯೊಂದಿಗೆ ಬಾಂಧವ್ಯ ಉತ್ತಮವಾಗಿರುವುದಿಲ್ಲ. ತಾಯಿಯ ಪ್ರೀತಿ ದೊರೆಯದೇ ಹೋಗುವ ಸಾಧ್ಯತೆ ಇರುತ್ತದೆ. ಆದರೆ ಇದಕ್ಕೆ ಕೂಡ ಜಾತಕದ ಕೆಲವು ಗ್ರಹಗಳ ಸ್ಥಿತಿ-ಗತಿ ಮತ್ತು ಯೋಗಗಳಿಂದ ಬದಲಾವಣೆ ತರುವ ಸಾಧ್ಯತೆ ಇರುತ್ತದೆ. ನಿಮ್ಮದೇ ಅಥವಾ ನಿಮಗೆ ಬೇಕಾದವರ ಬದುಕಲ್ಲಿ ಹೀಗಾಗುತ್ತಿದ್ದರೆ ಒಮ್ಮೆ ಜ್ಯೋತಿಷಿಗಳಲ್ಲಿ ಜಾತಕವನ್ನು ತೋರಿಸಿಕೊಳ್ಳಿ. ಕೆಲವರಿಗೆ ತೋರು ಬೆರಳಿಗೆ ಮುತ್ತು ಧರಿಸುವಂತೆ ಹೇಳಬಹುದು. ಇದರಿಂದ ಚಂದ್ರ ದುರ್ಬಲವಾಗಿದ್ದರೂ ಆ ವ್ಯಕ್ತಿಯಲ್ಲಿ ಬದಲಾವಣೆ ಆಗುತ್ತದೆ.
ಈಗ ಇನ್ನೊಮ್ಮೆ ಹೇಳಬೇಕಿದೆ; ಜಾತಕದಲ್ಲಿ ಚಂದ್ರ ದುರ್ಬಲವಾಗಿದ್ದರೆ ಅದರ ಪರಿಣಾಮವನ್ನು ಮನಸ್ಸಿನ ಮೇಲೆ ಎದುರಿಸಬೇಕಾಗುತ್ತದೆ. ಹಾಗೂ ತಾಯಿಯ ಪ್ರೀತಿ ದಕ್ಕದೇ ಹೋಗುತ್ತದೆ. ಆದ್ದರಿಂದ ಚಿಕ್ಕ ವಯಸ್ಸಿನಲ್ಲೇ ಅಥವಾ ಕಾಲ ಮೀರುವ ಮುಂಚೆಯೇ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಿ.
ಇದನ್ನೂ ಓದಿ: Astrology: ಅನಫಾ ಸುನಫಾ ಯೋಗಗಳ ಬಗ್ಗೆ ನಿಮಗೆಷ್ಟು ಗೊತ್ತು? ನಿಮ್ಮ ಜಾತಕದಲ್ಲಿ ಈ ಯೋಗಗಳಿವೆಯಾ?
(Astrology Why Some People Cannot Concentrate On Anything And They Do Not Have Good Relationship With Mother)