Daily Devotional: ವಿದೇಶದಲ್ಲಿರುವ ಬಂಧುಗಳಿಗೆ ತೊಂದರೆ ಆದ್ರೆ ಏನು ಮಾಡಬೇಕು?
ವಿದೇಶದಲ್ಲಿ ಉದ್ಯೋಗ, ಆರೋಗ್ಯ ಅಥವಾ ಸ್ಥಿರತೆ ಸಮಸ್ಯೆಗಳನ್ನು ಎದುರಿಸುತ್ತಿರುವ ನಿಮ್ಮ ಬಂಧುಗಳಿಗಾಗಿ ಚಿಂತಿಸುತ್ತಿದ್ದೀರಾ? ಈ ಸಮಸ್ಯೆಗಳಿಗೆ ಪರಿಹಾರವಾಗಿ ಧರ್ಮಶಾಸ್ತ್ರಗಳಲ್ಲಿ ತಿಳಿಸಿರುವ ದಕ್ಷಿಣಾಮೂರ್ತಿ ಪೂಜೆಯನ್ನು ಆಚರಿಸುವ ವಿಧಾನವನ್ನು ಈ ಲೇಖನ ವಿವರಿಸುತ್ತದೆ. ಶನಿ, ರಾಹು, ಬುಧ ಗ್ರಹಗಳ ದೋಷ ನಿವಾರಣೆಗೂ ಈ ಪೂಜೆ ಸಹಕಾರಿ.
ಬೆಂಗಳೂರು, ಡಿಸೆಂಬರ್ 06: ವಿದೇಶಗಳಲ್ಲಿ ಉದ್ಯೋಗ ಅರಸಿ ಹೋಗುವ ಅಥವಾ ಜೀವನ ಸಾಗಿಸುತ್ತಿರುವ ನಮ್ಮ ಬಂಧುಗಳು ಅನೇಕ ಸವಾಲುಗಳನ್ನು ಎದುರಿಸುವುದು ಸಾಮಾನ್ಯ. ಉದ್ಯೋಗದಲ್ಲಿ ಸ್ಥಿರತೆ, ಬಡ್ತಿ, ಆರೋಗ್ಯ, ಅಲ್ಲಿನ ಸಮಾಜದೊಂದಿಗೆ ಬೆರೆಯುವಿಕೆ ಅಥವಾ ಗ್ರೀನ್ ಕಾರ್ಡ್‌ನಂತಹ ಮಹತ್ವದ ವಿಷಯಗಳಲ್ಲಿ ತೊಂದರೆಗಳನ್ನು ಅನುಭವಿಸಬಹುದು. ಇಂತಹ ಸಂದರ್ಭಗಳಲ್ಲಿ, ಭಾರತದಲ್ಲಿರುವ ಕುಟುಂಬ ಸದಸ್ಯರು ತಮ್ಮ ಮಕ್ಕಳು, ಅಣ್ಣ, ಅಕ್ಕ, ತಮ್ಮ ಅಥವಾ ತಂಗಿಯರ ಯೋಗಕ್ಷೇಮಕ್ಕಾಗಿ ಚಿಂತಿಸುವುದು ಸಹಜ. ಧರ್ಮಶಾಸ್ತ್ರಗಳ ಪ್ರಕಾರ, ಈ ಸಮಸ್ಯೆಗಳಿಗೆ ಪರಿಹಾರವಾಗಿ ದಕ್ಷಿಣಾಮೂರ್ತಿ ಪೂಜೆಯನ್ನು ಆಚರಿಸುವುದು ಶ್ರೇಷ್ಠವೆಂದು ಹೇಳಲಾಗುತ್ತದೆ.
ದಕ್ಷಿಣಾಮೂರ್ತಿಯನ್ನು ಜ್ಞಾನ, ಸ್ಥಿರತೆ ಮತ್ತು ನಿರ್ಧಾರಗಳ ಅಧಿದೇವತೆಯಾಗಿ ಆರಾಧಿಸಲಾಗುತ್ತದೆ. ಅಲ್ಲದೆ, ನವಗ್ರಹಗಳಲ್ಲಿ ಶನಿ, ರಾಹು ಮತ್ತು ಬುಧ ಗ್ರಹಗಳ ದುಷ್ಪರಿಣಾಮಗಳನ್ನು ಕಡಿಮೆ ಮಾಡುವ ಶಕ್ತಿಯೂ ದಕ್ಷಿಣಾಮೂರ್ತಿ ಪೂಜೆಗಿದೆ. ಈ ಪೂಜೆಯನ್ನು ಸತತ 12 ದಿನಗಳವರೆಗೆ, ವಾರಕ್ಕೆ ಮೂರು ದಿನಗಳಂತೆ (ಮಂಗಳವಾರ, ಬುಧವಾರ, ಗುರುವಾರ) ಬೆಳಗಿನ ಜಾವ ಆಚರಿಸಬೇಕು. ಬಿಳಿಯ ವಸ್ತ್ರವನ್ನು ಧರಿಸಿ, ತುಪ್ಪ ಮತ್ತು ಎಳ್ಳೆಣ್ಣೆಯನ್ನು ಬೆರೆಸಿ ದೀಪ ಹಚ್ಚಿ “ಓಂ ದಕ್ಷಿಣಾಮೂರ್ತಯೇ ನಮಃ” ಮಂತ್ರವನ್ನು ಜಪಿಸಬೇಕು. ಬೆಲ್ಲದ ಪಾಯಸವನ್ನು ನೈವೇದ್ಯವಾಗಿ ಅರ್ಪಿಸಿ, ವಿದೇಶದಲ್ಲಿರುವವರ ಹೆಸರನ್ನು ಹೇಳಿ ಪ್ರಾರ್ಥಿಸಿದರೆ ಶುಭವಾಗುತ್ತದೆ. ಇದು ಸಂದರ್ಶನಗಳಲ್ಲಿ ಯಶಸ್ಸು, ಉದ್ಯೋಗದಲ್ಲಿ ಸ್ಥಿರತೆ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಬಸವರಾಜ್ ಗುರೂಜಿ ಹೇಳಿದ್ದಾರೆ.

