Daily Devotional: ಕಂಕಣ ಧರಿಸುವುದರ ಫಲ ಇದರ ಮಹತ್ವವೇನು ಗೊತ್ತಾ?

Updated on: Nov 22, 2025 | 6:57 AM

ಕಂಕಣ ಧಾರಣೆಯು ಹಿಂದೂ ಸಂಸ್ಕೃತಿಯಲ್ಲಿ ಶುಭಕಾರ್ಯಗಳು, ವ್ರತಗಳು ಮತ್ತು ಸಂಕಲ್ಪ ಪೂಜೆಗಳಲ್ಲಿ ಮಹತ್ವದ ಆಚರಣೆಯಾಗಿದೆ. ಇದು ಕಾರ್ಯದ ಕಡೆಗೆ ಏಕಾಗ್ರತೆ, ಮನಸ್ಸಿನ ಶಾಂತಿ ಮತ್ತು ದುಷ್ಟ ಶಕ್ತಿಗಳಿಂದ ರಕ್ಷಣೆ ನೀಡುತ್ತದೆ ಎಂದು ನಂಬಲಾಗಿದೆ. ಕಂಕಣವು ದೇಹ ಮತ್ತು ಮನಸ್ಸಿನ ಶುದ್ಧತೆಯನ್ನು ಸೂಚಿಸುತ್ತದೆ.

ಬೆಂಗಳೂರು, ನವೆಂಬರ್ 22: ಹಿಂದೂ ಸನಾತನ ಪರಂಪರೆಯಲ್ಲಿ ಕಂಕಣ ಧಾರಣೆಗೆ ವಿಶೇಷ ಮಹತ್ವವಿದೆ. ಯಾವುದೇ ಶುಭ ಕಾರ್ಯಗಳು, ವ್ರತಗಳು, ಯಜ್ಞ ಯಾಗಾದಿಗಳು ಅಥವಾ ಸಂಕಲ್ಪ ಪೂಜೆಗಳನ್ನು ಕೈಗೊಳ್ಳುವಾಗ ಬಲಗೈಗೆ ಕಂಕಣವನ್ನು ಕಟ್ಟಿಕೊಳ್ಳುವ ಸಂಪ್ರದಾಯವಿದೆ. ಇದು ಕಾರ್ಯದ ಬಗೆಗಿನ ಕಂಕಣಬದ್ಧತೆಯನ್ನು ಸೂಚಿಸುತ್ತದೆ. ಕಂಕಣವನ್ನು ಧರಿಸುವುದರಿಂದ ಮನಸ್ಸು ಶಾಂತವಾಗಿ, ಬೇರೆ ಕಡೆ ಗಮನ ಹರಿಯದೆ, ಆಯಾ ಕಾರ್ಯದ ಮೇಲೆ ಪೂರ್ಣ ಏಕಾಗ್ರತೆಯನ್ನು ಸಾಧಿಸಲು ನೆರವಾಗುತ್ತದೆ ಎಂದು ಹೇಳಲಾಗುತ್ತದೆ.

ಕಂಕಣ ಧಾರಣೆಯು ದುಷ್ಟ ಶಕ್ತಿಗಳ ಪ್ರವೇಶವನ್ನು ತಡೆಯುತ್ತದೆ ಮತ್ತು ದುಷ್ಟ ಆಲೋಚನೆಗಳಿಂದ ದೂರವಿಡುತ್ತದೆ ಎಂದು ನಂಬಲಾಗಿದೆ. ಇದನ್ನು ಅರಿಶಿನದ ದಾರ ಅಥವಾ ಅರಿಶಿನ ಕೊಂಬಿನಿಂದ ತಯಾರಿಸಲಾಗುತ್ತದೆ. ಕಂಕಣ ಕಟ್ಟಿಕೊಂಡ ನಂತರ, ಕಾರ್ಯದ ಸಮಾಪ್ತಿಯಾಗುವವರೆಗೆ ಅದನ್ನು ಬಿಚ್ಚಬಾರದು ಎಂಬ ನಿಯಮವಿದೆ. ಇದು ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಿ, ಸಂಪೂರ್ಣ ಭಕ್ತಿಯಿಂದ ಕಾರ್ಯವನ್ನು ಪೂರೈಸಲು ಸಹಾಯ ಮಾಡುತ್ತದೆ. ಕಂಕಣ ಧಾರಣೆಯು ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿರುವ ನಂಬಿಕೆಯಾಗಿದೆ.