Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 22ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 22ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮಗೆ ಶುಭವಾಗಲಿದೆಯೇ ಅಥವಾ ಸವಾಲುಗಳಿವೆಯೇ ಎಂದು ತಿಳಿದುಕೊಳ್ಳಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ಸುಮ್ಮನೆ ಯಾವುದೂ ಬರುವುದಿಲ್ಲ, ಅದಕ್ಕೆ ಬೆಲೆ ತೆರಬೇಕಾಗುತ್ತದೆ. ಪದೇಪದೇ ನಿಮಗೆ ಈ ದಿನ ನೆನಪಾಗುವ ಮಾತು ಇದಾಗಿರುತ್ತದೆ. ಪ್ರಭಾವ ಬಳಸಿ ಇಲ್ಲಿಯ ತನಕ ಇತರರು ನಿಮಗಿಂತ ಮುಂದೆ ಸಾಗುತ್ತಿದ್ದಾರೆ ಎಂದೆನಿಸಿ, ಈಗ ನೀವು ಅನುಸರಿಸುತ್ತಿರುವ ಸ್ಟ್ರಾಟೆಜಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ನಿರ್ಧರಿಸುತ್ತೀರಿ. ನಿಮ್ಮಲ್ಲಿ ಕೆಲವರು ಮನೆಯಲ್ಲಿ ಗಾರ್ಡನಿಂಗ್ ಗಾಗಿ ಸ್ಥಳವನ್ನು ನಿಗದಿ ಮಾಡಿ, ವೃತ್ತಿಪರರಿಂದ ಅಲ್ಲಿ ಕೆಲಸಗಳನ್ನು ಮಾಡಿಸುವುದಕ್ಕೆ ನಿರ್ಧಾರ ತೆಗೆದುಕೊಳ್ಳುವಂತೆ ಆಗಲಿದೆ. ಕಮಾಡಿಟಿ ಮಾರ್ಕೆಟ್ ನಲ್ಲಿ ಟ್ರೇಡಿಂಗ್ ಮಾಡುತ್ತಾ ಇರುವವರು ಈಗ ಹಾಕಿರುವ ಹೂಡಿಕೆಯನ್ನು ಹಿಂದಕ್ಕೆ ತೆಗೆದುಕೊಳ್ಳಲು ಆಲೋಚನೆ ಮಾಡಲಿದ್ದೀರಿ. ವೋಟರ್ ಐಡಿ, ಆಧಾರ್ ಕಾರ್ಡ್, ಪಾನ್ ಕಾರ್ಡ್ ಇಂಥ ದಾಖಲೆಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವುದಕ್ಕೆ ಪ್ರಯತ್ನಿಸಿ. ಏಕೆಂದರೆ ಇಂಥ ದಾಖಲೆಗಳ ಪೈಕಿ ಕೆಲವನ್ನು ಕಳೆದುಕೊಂಡು ಆ ನಂತರ ಪಡಿಪಾಟಲು ಪಡುವಂತೆ ಆಗಲಿದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ಅಡುಗೆ ಮನೆಯಲ್ಲಿ ಬಳಕೆ ಮಾಡುವ ಪಾತ್ರೆ-ಪದಾರ್ಥಗಳನ್ನು, ಸ್ಮಾರ್ಟ್ ಡಿವೈಸ್ ಗಳನ್ನು ಖರೀದಿ ಮಾಡುವುದಕ್ಕೆ ಈ ದಿನದ ಹೆಚ್ಚಿನ ಸಮಯವನ್ನು ಇಡಲಿದ್ದೀರಿ. ಸಂಗಾತಿಯ ಬಹಳ ದಿನದ ಬೇಡಿಕೆಯಾದ ವಸ್ತುಗಳನ್ನು ಕೊಂಡುಕೊಳ್ಳಲು ಬ್ರ್ಯಾಂಡೆಡ್ ಮಳಿಗೆಗಳಿಗೆ ತೆರಳಲಿದ್ದೀರಿ. ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತೀರಿ ಅಂತಾದಲ್ಲಿ ಖರ್ಚಿನ ಮೇಲೆ ಹಿಡಿತ ಇರಲಿ. ಹೋಟೆಲ್- ರೆಸ್ಟೋರೆಂಟ್ ನಡೆಸುತ್ತಾ ಇರುವವರು ಈಗಿನ ಆಹಾರ ಪದಾರ್ಥಗಳ ಜತೆಗೆ ಹೊಸದಾಗಿ ಮತ್ತೆ ಕೆಲವನ್ನು ಸೇರ್ಪಡೆ ಮಾಡಲಿದ್ದೀರಿ. ಇದರಿಂದ ನಿಮ್ಮ ಆದಾಯ ಕೂಡ ಹೆಚ್ಚಾಗುವುದಕ್ಕೆ ದಾರಿ ತೆರೆದುಕೊಳ್ಳಲಿದೆ. ನಿಮ್ಮ ಮೊಬೈಲ್ ಫೋನ್ ರೀಚಬಲ್ ಸ್ಥಿತಿಯಲ್ಲಿ ಇಟ್ಟುಕೊಳ್ಳುವ ಕಡೆಗೆ ಗಮನವನ್ನು ನೀಡಿ. ಏಕೆಂದರೆ ಉದ್ಯೋಗ- ವೃತ್ತಿಯ ನೆಲೆಗಟ್ಟಿನಲ್ಲಿ ನಿಮಗೆ ಬಹಳ ಮುಖ್ಯವಾದ, ಅದರಲ್ಲೂ ಅನುಕೂಲ ಆಗುವ ಮಾಹಿತಿಯನ್ನು ಫೋನ್ ಮೂಲಕವೇ ಪಡೆಯಲಿದ್ದೀರಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ಎಲ್ಲ ಸಂಗತಿಗಳಿಗೂ ಗಂಭೀರ ಧ್ವನಿಯಲ್ಲಿ ಎಚ್ಚರಿಕೆ ನೀಡುವುದರಿಂದಲೋ ಅಥವಾ ಹೆದರಿಕೆ ಹುಟ್ಟಿಸುವುದರಿಂದಲೋ ಪರಿಹಾರ ಸಿಗುವುದಿಲ್ಲ ಎಂಬುದು ನಿಮ್ಮಲ್ಲಿ ಕೆಲವರಿಗೆ ಬಲವಾಗಿ ಅನಿಸುವುದಕ್ಕೆ ಶುರುವಾಗಲಿದೆ. ಇನ್ನು ಐಟಿ- ಬಿಪಿಒ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್- ಮಶೀನ್ ಲರ್ನಿಂಗ್ ಇಂಥ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ತಮ್ಮ ಮೇಲಿರುವ ಒತ್ತಡವನ್ನು ಹೇಗಾದರೂ ಕಡಿಮೆ ಮಾಡಿಕೊಳ್ಳಬೇಕು ಎಂಬ ಉದ್ದೇಶ ಇರುತ್ತದೆ. ಆದರೆ ಆ ಕಾರಣಕ್ಕೆ ಇತರರ ಮೇಲೆ ಸಿಟ್ಟನ್ನು ಹಾಕಬೇಡಿ. ಇನ್ನು ನಿಮ್ಮಲ್ಲಿ ಯಾರು ಚಿನ್ನದ ಆಭರಣಗಳ ಮಾರಾಟ ವ್ಯವಹಾರದಲ್ಲಿ ಇದ್ದೀರಿ, ಅಂಥವರಿಗೆ ಗಡುವಿನೊಳಗೆ ಒಪ್ಪಿಕೊಂಡ ಕೆಲಸಗಳನ್ನು ಪೂರ್ಣಗೊಳಿಸುವುದು ಮುಖ್ಯ ಅನ್ನುವುದೇನೋ ನಿಜ. ಆದರೆ ವಾಸ್ತವವನ್ನು ನಿಮ್ಮ ಗ್ರಾಹಕರಿಗೆ ತಿಳಿಸಿ. ತಕ್ಷಣಕ್ಕೆ ತಪ್ಪಿಸಿಕೊಂಡರೆ ಸಾಕು ಎಂಬ ಆಲೋಚನೆಯಲ್ಲಿ ಸುಳ್ಳು ಹೇಳಬೇಡಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):
ಯಾರ ಜತೆಗೆ ಎಷ್ಟು ಸಲುಗೆ ಎಂಬ ಲಕ್ಷ್ಮಣ ರೇಖೆ ಎಳೆದುಕೊಳ್ಳುವುದು ಈ ದಿನ ತುಂಬ ಮುಖ್ಯ. ಅದರಲ್ಲೂ ನಿಮಗೆ ಬಹಳ ಸಮಯದ ಮೇಲೆ ಭೇಟಿಗೆ- ಮಾತುಕತೆಗೆ ಸಿಗುತ್ತಿರುವ ಗೆಳೆಯ/ ಗೆಳತಿಯರ ಜತೆ ಮಾತನಾಡುವಾಗ ಏನೇನು ಬದಲಾವಣೆ ಆಗಿದೆ, ಯಾವ ಧ್ವನಿ- ಪದ ಬಳಕೆ ಸರಿ ಎಂಬುದನ್ನು ಆಲೋಚಿಸಿಕೊಳ್ಳಿ. ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ತೆರಳಬೇಕು ಎಂದಿರುವವರು ಕೆಲವು ಕೋರ್ಸ್ ಸೇರ್ಪಡೆ ಆಗುವುದಕ್ಕೆ ನಿರ್ಧಾರ ಮಾಡುತ್ತೀರಿ. ಇನ್ನು ಈಗಾಲೇ ಎಲ್ಲ ಹಂತವನ್ನು ಪೂರ್ಣಗೊಳಿಸಿದ್ದಲ್ಲಿ ಹೊರಡಲು ಬೇಕಾದ ತಯಾರಿಗೆ ಹೆಚ್ಚು ಸಮಯ ನೀಡುತ್ತೀರಿ. ಲೇವಾದೇವಿ ವ್ಯವಹಾರ ಮಾಡುವವರಿಗೆ ಈಗಾಗಲೇ ಸಾಲ ನೀಡಿರುವಂಥ ಕೆಲವು ವ್ಯಕ್ತಿಗಳಿಂದ ಕೂಡಲೇ ವಸೂಲಿ ಮಾಡಿಬಿಡಬೇಕು ಎಂದು ಬಲವಾಗಿ ಅನಿಸಲಿದೆ. ಕುಟುಂಬದ ಜತೆಗೂಡಿ ನಿಮ್ಮಲ್ಲಿ ಕೆಲವರು ಫುಡ್ ಸ್ಟ್ರೀಟ್, ಮಾಲ್ ಗಳಿಗೆ ತೆರಳಲಿದ್ದೀರಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):
ನವ ವಿವಾಹಿತರಿಗೆ ಬಹಳ ಒಳ್ಳೆಯ ದಿನ ಇದಾಗಿರುತ್ತದೆ. ನಿಮ್ಮಲ್ಲಿ ಕೆಲವರು ಹೊಸ ಕಾರು ಖರೀದಿಗೆ ನಿರ್ಧಾರ ಮಾಡುವ ಅಥವಾ ಅಡ್ವಾನ್ಸ್ ಎಂದು ನೀಡಿ, ಕಾರು ಬುಕ್ ಮಾಡುವಂಥ ಯೋಗ ಇದೆ. ನಿಮ್ಮ ಆಪ್ತರಿಗೆ ಉಡುಗೊರೆಗಳನ್ನು ನೀಡಲಿದ್ದೀರಿ. ಶಾಲೆ ಅಥವಾ ಕಾಲೇಜಲ್ಲಿ ಒಟ್ಟಿಗೆ ಓದಿದ ಸ್ನೇಹಿತರನ್ನು ಮತ್ತೆ ಒಟ್ಟು ಸೇರಿಸುವ ಕಾರ್ಯಕ್ರಮದ ಮುಂದಾಳತ್ವ ನೀವು ವಹಿಸುವಂತೆ ಕೇಳಿಕೊಳ್ಳಬಹುದು. ಶೈಕ್ಷಣಿಕೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಬಡ್ತಿ ಅಥವಾ ವೇತನ ಹೆಚ್ಚಳದ ಬಗ್ಗೆ ಸ್ನೇಹಿತರ ಮೂಲಕ ಮಾಹಿತಿ ದೊರೆಯಬಹುದು. ಹೊಸ ತಂತ್ರಜ್ಞಾನಗಳನ್ನು ಕಲಿಯುವ ಕಡೆಗೆ ನಿಮ್ಮಲ್ಲಿ ಕೆಲವರ ಆಸಕ್ತಿ ಕುದುರಲಿದೆ. ನಿಮ್ಮ ಜತೆಗೆ ಕೆಲವರು ಈ ಹಿಂದೆ ಅವಮಾನ ಆಗುವ ರೀತಿಯಲ್ಲಿ ನಡೆದುಕೊಂಡಿದ್ದರು ಎಂಬ ಕಾರಣಕ್ಕೆ ಪ್ರತೀಕಾರ ಹೇಳಬೇಕು ಎಂಬ ಆಲೋಚನೆ ಈ ದಿನ ನಿಮ್ಮನ್ನು ಬಹುವಾಗಿ ಕಾಡಲಿದೆ. ಇದರಿಂದಾಗಿ ಕೆಲವು ಕೆಲಸಗಳನ್ನು ಏಕಾಗ್ರತೆಯಿಂದ ಮಾಡುವುದು ಸಹ ಕಷ್ಟವಾಗಲಿದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):
ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಮಸಾಲೆ ಆಹಾರ ಪದಾರ್ಥಗಳಿಂದ ಈ ದಿನ ದೂರವಿದ್ದಷ್ಟೂ ಒಳ್ಳೆಯದು. ನಿಮ್ಮಲ್ಲಿ ಕೆಲವರಿಗೆ ವಿಪರೀತ ಎದೆಯುರಿ, ಹೊಟ್ಟೆಯುಬ್ಬರ, ಹುಳಿತೇಗು ಈ ರೀತಿ ಸಮಸ್ಯೆಗಳು ತೀವ್ರವಾಗಿ ಕಾಡಲಿದೆ. ಮನೆಯ ಆಹಾರ ಪದಾರ್ಥಗಳ ಸೇವನೆಯಷ್ಟೇ ಮಾಡುವುದಕ್ಕೆ ಆದ್ಯತೆ ನೀಡಿ. ಇನ್ನು ಹೊಸದಾಗಿ ಕ್ರೆಡಿಟ್ ಕಾರ್ಡ್ ಗಾಗಿ ಅಪ್ಲೈ ಮಾಡಬೇಕು ಎಂದುಕೊಂಡಿರುವವರು ನಿರ್ಧಾರವನ್ನು ಕೆಲ ದಿನಗಳ ಕಾಲ ಮುಂದಕ್ಕೆ ಹಾಕುವುದು ಒಳ್ಳೆಯದು. ಆರ್.ಡಿ., ಪಿಪಿಎಫ್, ಸುಕನ್ಯಾ ಸಮೃದ್ಧಿ ಇಂಥ ಉಳಿತಾಯ ಯೋಜನೆಗಳಿಗೆ ಹಣ ಹಾಕುವುದಕ್ಕೆ ನಿರ್ಧಾರ ಮಾಡುವ ಯೋಗ ಇದ್ದು, ಕುಟುಂಬದಲ್ಲಿನ ಕೆಲವು ಗೊಂದಲಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಸಾಧ್ಯವಿದೆ. ಹೊಸ ಬಟ್ಟೆ, ಶೂ, ವಾಚ್ ಇಂಥವುಗಳನ್ನು ಖರೀದಿ ಮಾಡುವುದಕ್ಕಾಗಿ ನಿಮ್ಮಲ್ಲಿ ಕೆಲವರು ಹಣವನ್ನು ಖರ್ಚು ಮಾಡಲಿದ್ದೀರಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):
ನಿಮ್ಮ ಹಠಮಾರಿ ಧೋರಣೆಯಿಂದಾಗಿ ತಿಕ್ಕಾಟ ಮಾಡಿಕೊಳ್ಳುವಂತೆ ಆಗಲಿದೆ. ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರು ಅನ್ನೋ ಮಾತಿದೆಯಲ್ಲ, ಆ ರೀತಿಯಲ್ಲಿ ಸಣ್ಣ- ಪುಟ್ಟ ವಿಷಯಗಳಿಗೂ ದೂರು ನೀಡುವುದು, ಜಗಳ ಆಡುವುದು ಇಂಥದ್ದನ್ನು ಮಾಡಿಕೊಳ್ಳಲಿದ್ದೀರಿ. ಈ ದಿನ ನಿಮಗೆ ಕೆಲವು ಸಮಾರಂಭ- ಕಾರ್ಯಕ್ರಮಗಳಿಗೆ ಆಹ್ವಾನ ದೊರೆಯಲಿದ್ದು, ಅಲ್ಲಿನ ಊಟ- ತಿಂಡಿ ಬಹಳ ಸಂತೋಷವನ್ನು ನೀಡಲಿದೆ. ಅಬ್ಬರ- ಅದ್ಧೂರಿಯಿಂದ ಮಾಡಬೇಕು ಅಂದುಕೊಂಡಿದ್ದ ನಿಮ್ಮ ಮನೆಯ ಸಮಾರಂಭವೊಂದನ್ನು ಸರಳವಾಗಿ ಮಾಡಿ ಮುಗಿಸುವುದಕ್ಕೆ ಕುಟುಂಬ ಸದಸ್ಯರೆಲ್ಲ ಸೇರಿ ನಿರ್ಧಾರ ಮಾಡುವಂತಾಗಲಿದೆ. ಉದ್ಯೋಗ ಅಥವಾ ವೃತ್ತಿ ಮಾಡುವ ಸ್ಥಳದಲ್ಲಿ ನಿಮಗೆ ಪೂರಕವಾದ ವಾತಾವರಣ ಇರುವುದಿಲ್ಲ. ಆದ್ದರಿಂದ ನಿಮ್ಮ ಅಭಿಪ್ರಾಯವನ್ನು ಕೇಳುವ ತನಕ ನೀವಾಗಿಯೇ ಏನನ್ನೂ ಹೇಳುವುದಕ್ಕೆ ಹೋಗಬೇಡಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):
ಅದೃಷ್ಟ ಈ ದಿನ ನಿಮ್ಮ ಪಾಲಿಗೆ ಇರುತ್ತದೆ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸ- ಕಾರ್ಯಗಳು ಪೂರ್ಣಗೊಳ್ಳಲಿವೆ. ಅದರಲ್ಲೂ ಮನೆಯಲ್ಲಿ ಆಗಬೇಕಿದ್ದ ಸಣ್ಣ- ಪುಟ್ಟ ಸಿವಿಲ್ ಕೆಲಸಗಳು ಮುಗಿಸುವುದಕ್ಕೆ ನೀವು ಹುಡುಕುತ್ತಿದ್ದಂಥ ಕೆಲಸಗಾರರು ದೊರೆಯಲಿದ್ದಾರೆ. ಸುಲಭಕ್ಕೆ ಆಗಲಾರದು ಎಂದು ಭಾವಿಸಿದ್ದ ಭೂಮಿಗೆ ಸಂಬಂಧಿಸಿದ ವ್ಯವಹಾರಗಳು ಸುಲಭವಾಗಿ ಮುಗಿಯುವುದಕ್ಕೆ ಪ್ರಭಾವಿಗಳು ನಿಮ್ಮ ಪರವಾಗಿ ನಿಲ್ಲಲಿದ್ದಾರೆ. ನಿಮ್ಮಲ್ಲಿ ಯಾರು ವಾಸ್ತುಶಿಲ್ಪಿ ಆಗಿದ್ದೀರಿ ಹಾಗೂ ಅದನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದೀರಿ, ಅಂಥವರಿಗೆ ಆದಾಯದಲ್ಲಿ ದೊಡ್ಡ ಮಟ್ಟದ ಏರಿಕೆ ಆಗುವಂತೆ ಕೆಲವು ಬೆಳವಣಿಗೆಗಳು ಆಗಲಿವೆ. ಸಂಗಾತಿಯ ಆರೋಗ್ಯ ಸ್ಥಿತಿಯಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರು ಆಗಬಹುದು. ಆದರೆ ಸಮಯಕ್ಕೆ ಸರಿಯಾಗಿ ಸೂಕ್ತ ವೈದ್ಯೋಪಚಾರ ದೊರೆತು ನಿಮ್ಮ ಆತಂಕ ದೂರವಾಗಲಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):
ಇಡೀ ದಿನ ಒಂದಲ್ಲಾ ಒಂದು ಕೆಲಸದಲ್ಲಿ ತೊಡಗಿಕೊಂಡೇ ಇರುವ ಪರಿಸ್ಥಿತಿ ಇರುತ್ತದೆ. ನಿಮಗೆ ಅನುಕೂಲಕರವಾದ ವಾತಾವರಣ ಇಲ್ಲದ ಕಡೆ ಫಲಿತಾಂಶ ತರಲೇಬೇಕು ಎಂಬ ಒತ್ತಡ ನಿಮ್ಮ ಮೇಲೆ ಇರಲಿದೆ. ಅಶಕ್ತರು, ದುರ್ಬಲರಿಗೆ ನೆರವು ನೀಡುವುದಕ್ಕೆ ಯೋಜನೆಯನ್ನು ರೂಪಿಸಲಿದ್ದೀರಿ. ನಿಮ್ಮಲ್ಲಿ ಕೆಲವರು ಹಣದ ಸಂಗ್ರಹಕ್ಕೆ ಸಹ ಮುಂದಾಗುವ ಸಾಧ್ಯತೆ ಇದೆ. ನಿಮ್ಮಲ್ಲಿ ಕೆಲವರು ಟೂ ವ್ಹೀಲರ್ ನಲ್ಲಿ ಲಾಂಗ್ ಡ್ರೈವ್ ಗೆ ತೆರಳುವ ಯೋಗ ಇದೆ. ಸಹೋದ್ಯೋಗಿಗಳು ಕೆಲವು ಕೆಲಸಗಳನ್ನು ಪೂರ್ಣಗೊಳಿಸುವುದಕ್ಕೆ ನಿಮ್ಮ ಸಹಾಯ ಕೇಳಿಕೊಂಡು ಬರಲಿದ್ದಾರೆ. ಹಣಕಾಸು ವಿಚಾರಕ್ಕೆ ನಿಮ್ಮಲ್ಲಿ ಕೆಲವರಿಗೆ ಆಪ್ತರ ಜೊತೆಗೆ ಅಭಿಪ್ರಾಯ ಭೇದಗಳು ಸೃಷ್ಟಿ ಆಗಲಿವೆ. ನಿಮ್ಮ ವಿಚಾರವನ್ನು ಮಂಡಿಸುವುದಕ್ಕೆ ಮೊದಲಿಗೆ ಎದುರಿಗೆ ಇರುವವರು ಏನು ಹೇಳುತ್ತಿದ್ದಾರೆ ಎಂಬುದನ್ನು ಸಂಪೂರ್ಣವಾಗಿ ಕೇಳಿಸಿಕೊಂಡ ನಂತರ ಮಾತನಾಡುವುದು ಒಳ್ಳೆಯದು.
ಲೇಖನ- ಎನ್.ಕೆ.ಸ್ವಾತಿ




