Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಏಪ್ರಿಲ್ 22ರ ದಿನಭವಿಷ್ಯ

|

Updated on: Apr 22, 2023 | 5:24 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 22ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಏಪ್ರಿಲ್ 22ರ ದಿನಭವಿಷ್ಯ
ಸಾಂದರ್ಭಿಕ ಚಿತ್ರ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 22ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಗುರಿಯಿಟ್ಟು ಹೊಡೆದರೆ ಬೀಳದೆ ಇರುವುದು ಯಾವುದೂ ಇಲ್ಲ. ನಿಮ್ಮ ಏಕಾಗ್ರತೆ ಬಹಳ ಹೆಚ್ಚಿನ ಮಟ್ಟದಲ್ಲಿ ಇರುತ್ತದೆ. ಭವಿಷ್ಯದಲ್ಲಿ ನಡೆಯಲಿರುವ ಅತಿದೊಡ್ಡ ಘಟನೆಯೊಂದರ ಸುಳಿವು ನಿಮಗೆ ಸಿಗಲಿದೆ. ಯಾರೂ ಊಹಿಸದ ರೀತಿಯಲ್ಲಿ ನಿಮ್ಮ ಕೆಲವು ನಡೆಗಳು ಈ ದಿನ ಇರಲಿವೆ. ದಿನದ ದ್ವಿತೀಯಾರ್ಧದಲ್ಲಿ ಮನರಂಜನೆ, ಹೋಟೆಲ್- ರೆಸ್ಟೋರೆಂಟ್ ಇಂಥವುಗಳಿಗೆ ಸ್ನೇಹಿತರು ಜತೆಗೆ ತೆರಳುವಂಥ ಯೋಗ ಇದೆ. ಹೊಸ ಮೊಬೈಲ್ ಫೋನ್, ಗ್ಯಾಜೆಟ್ ಖರೀದಿಸುವುದಕ್ಕೆ ಖರ್ಚು ಮಾಡಲಿದ್ದೀರಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಇನ್ನೇನು ಎಲ್ಲ ಕೆಲಸ ಆಗಿಹೋಗಿದೆ, ಹಣ ಬರುವುದಷ್ಟೇ ಬಾಕಿ ಎಂದುಕೊಂಡಿದ್ದ ಕೆಲಸದಲ್ಲಿ ಸವಾಲು ಎದುರಾಗಲಿದೆ. ಭರವಸೆ ಇಟ್ಟುಕೊಂಡು ಶುರು ಮಾಡಿದ್ದ ಕೆಲಸ ಅರ್ಧಕ್ಕೆ ನಿಲ್ಲುವ ಸಾಧ್ಯತೆಗಳಿವೆ. ಇದರಿಂದಾಗಿ ನಿಮ್ಮ ವರ್ಚಸ್ಸು, ಹಣಕ್ಕೆ ಹಾನಿ ಆಗಬಹುದು. ಹೊಸಬರ ಪರಿಚಯ ಆಗುತ್ತದೆ. ಸ್ವಂತ ಉದ್ಯಮಿಗಳಿಗೆ ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಕಣ್ಣಿನ ಅಲರ್ಜಿ ಕಾಡಬಹುದು. ಹೊಸ ವಾಹನ ಖರೀದಿಸಬೇಕು ಎಂದಿರುವವರು ಸ್ವಲ್ಪ ಸಮಯ ನಿರ್ಧಾರವನ್ನು ಮುಂದೂಡಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನೇರವಂತಿಕೆ ಈ ದಿನ ನಿಮ್ಮನ್ನು ಕಾಪಾಡಲಿದೆ. ಒಂದು ನಿರುಪದ್ರವಿ ಸುಳ್ಳಿನಿಂದ ಏನೂ ಸಮಸ್ಯೆ ಆಗಲಿಕ್ಕಿಲ್ಲ ಎಂದೆಲ್ಲ ಯೋಚಿಸಿ ತಪ್ಪು ಹೆಜ್ಜೆ ಇಡಬೇಡಿ. ಜ್ಯೋತಿಷಿಗಳು, ಪುರೋಹಿತರು, ಮ್ಯಾಜಿಷಿಯನ್‌ಗಳಿಗೆ ಉತ್ತಮವಾದ ದಿನ ಇದು. ದೂರದ ಸ್ಥಳಗಳಿಂದ ನಿಮಗೆ ಆಹ್ವಾನ ಬರಲಿದೆ. ಸನ್ಮಾನ ಆಗುವ ಸಾಧ್ಯತೆ ಇದೆ. ನೀವಾಗಿಯೇ ಕೆಲವು ಜವಾಬ್ದಾರಿಗಳನ್ನು ಅತ್ಯುತ್ಸಾಹದಲ್ಲಿ ಮೈಮೇಲೆ ಎಳೆದುಕೊಳ್ಳಲಿದ್ದೀರಿ. ನಿಮ್ಮ ಸಾಮರ್ಥ್ಯವನ್ನು ನೋಡಿ, ನಿರ್ಧರಿಸಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಇತರರ ಪಾಲಿಗೆ ನೀವು ಬೆರಗು ಮೂಡಿಸುವಂಥ ವ್ಯಕ್ತಿ ಆಗುತ್ತೀರಿ. ನೀವು ಹೇಳಿದಂತೆಯೇ ಆಯಿತು, ನಾವು ನಿಮ್ಮ ಮಾತು ಕೇಳಬೇಕಿತ್ತು ಎಂದು ನಿಮ್ಮಿಂದ ದೂರವಾದ ಸ್ನೇಹಿತರು ಅಥವಾ ನಿಮ್ಮ ಜತೆ ಕೆಲಸ ಮಾಡುತ್ತಿದ್ದವರು ಮತ್ತೆ ಬರಬಹುದು. ಈ ಸಲ ತುಂಬ ಕಠಿಣವಾಗಿ ವರ್ತಿಸಬೇಡಿ, ಹಂಗಿಸಬೇಡಿ. ಅಂದಹಾಗೆ ಇದರಲ್ಲಿ ನಿಮ್ಮ ಸಂಬಂಧಿಕರು, ಕುಟುಂಬದವರು ಸಹ ಇರಬಹುದು. ಇನ್ನು ಈ ದಿನ ರುಚಿಕಟ್ಟಾದ ಭೋಜನ ಸವಿಯುವ ಯೋಗ ನಿಮ್ಮ ಪಾಲಿಗಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಮುಂಚಿನ ರೀತಿಯಲ್ಲಿ ಹೇಳಿದ ತಕ್ಷಣ ಕೆಲಸಗಳು ಆಗುವುದಿಲ್ಲ. ಇದೇ ಕಾರಣಕ್ಕೆ ನಿಮ್ಮ ಪ್ರಾಶಸ್ತ್ಯ ಕಡಿಮೆ ಆಗುತ್ತಿದೆಯೇನೋ ಎಂಬಂತೆ ಅನಿಸುತ್ತದೆ. ಅದು ಮನೆ ಇರಲಿ ಅಥವಾ ಹೊರಗಿರಲಿ. ಹೀಗೆ ಅನಿಸಿದ ತಕ್ಷಣ ಎಲ್ಲರ ಗಮನ ಸೆಳೆಯುವ ಸಲುವಾಗಿ ವಿಪರೀತದ ಕೆಲಸಗಳೇನೋ ಮಾಡುವುದಕ್ಕೆ ತೊಡಗಬೇಡಿ. ಈ ಸಮಯ ಕಳೆಯಲು ಬಿಡಿ. ನೀವು ಅನುಸರಿಸುವ ಧರ್ಮದ ಅಥವಾ ಮನಸಿಗೆ ನೆಮ್ಮದಿ- ಚೈತನ್ಯ ನೀಡುವಂಥ ಆಡಿಯೋಗಳನ್ನು ಕೇಳಿಸಿಕೊಳ್ಳಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಈ ದಿನ ಆಲಸ್ಯ ನಿಮ್ಮನ್ನು ಬೆನ್ನಟ್ಟಲಿದೆ. ಬೆಳಗ್ಗೆ ಹಾಸಿಗೆ ಬಿಟ್ಟು ಏಳಬೇಕಾ ಎಂಬಲ್ಲಿಂದ ಸಮಸ್ಯೆಗಳು ಶುರುವಾಗುತ್ತವೆ. ಇಷ್ಟು ದಿನದ ನಿಮ್ಮ ಶ್ರಮ ಹಾಗೂ ಪ್ರತಿಭೆಯನ್ನು ಇದೊಂದು ಕಾರಣಕ್ಕೆ ಬೇರೆಯವರು ಹೀಗಳೆಯದಂತೆ ನೋಡಿಕೊಳ್ಳಿ. ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಇರುವವರು ಸರಿಯಾದ ವೈದ್ಯರಲ್ಲಿ ಕೂಡಲೇ ಪರೀಕ್ಷಿಸಿಕೊಳ್ಳಿ. ಐಟಿ- ಬಿಪಿಒಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಒತ್ತಡದ ದಿನ ಇದಾಗಿರಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಇತರರು ಆಡಿದ ಮಾತೋ ಅಥವಾ ನಡೆದುಕೊಂಡ ರೀತಿಯಿಂದಾಗಿಯೋ ದಿಢೀರನೆ ಮಂಕು ಬಡಿದವರಂತೆ ಆಗುತ್ತೀರಿ. ಒಂದು ವೇಳೆ ನಾನಾ ಘಟನೆಗಳಿಂದ ಬೇಸರವಾಗಿ ಮನಸ್ಥಿತಿ ಕೆಲಸಕ್ಕೆ ಸಹಕರಿಸುತ್ತಿಲ್ಲ ಎಂದಾದಲ್ಲಿ ಮುಖ್ಯವಾದ ಜವಾಬ್ದಾರಿಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಅಥವಾ ಮುಖ್ಯವಾದ ಕೆಲಸಗಳು ಇದ್ದಲ್ಲಿ ಮುಂದೂಡಿ. ಶನೈಶ್ಚರನ ಗುಡಿಗೆ ಈ ದಿನ ಭೇಟಿ ನೀಡಿ. ಇದರ ಜತೆಗೆ ಗೋವಿಗೆ ಬಾಳೆಹಣ್ಣು ನೀಡಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಚತುರೋಪಾಯಗಳಾದ ಸಾಮ, ದಾನ, ಭೇದ, ದಂಡ ಹೀಗೆ ಯಾರಿಗೆ ಯಾವುದನ್ನು ಬಳಸಿ ಕೆಲಸ ಮಾಡಿಸಿಕೊಳ್ಳಬೇಕೋ ಅದನ್ನು ಬಳಸಿ, ಕೆಲಸ ಪೂರ್ಣಗೊಳಿಸುವ ಬಗ್ಗೆ ಆಲೋಚಿಸಿ. ವಿವಾಹಿತರಿಗೆ ಅದರ ಆಚೆಗಿನ ಸಂಬಂಧದ ಕಡೆಗೆ ಸೆಳೆತ ಮೂಡುವ ಸಾಧ್ಯತೆ ಇದೆ. ಇದರಿಂದ ಉಪದ್ರವ, ಅವಮಾನ ಎರಡೂ ಅನುಭವಿಸಬೇಕಾದೀತು, ಎಚ್ಚರ. ಕ್ರಿಯೇಟಿವ್ ಕ್ಷೇತ್ರದಲ್ಲಿ ಇರುವವರಿಗೆ ಜವಾಬ್ದಾರಿ ಹೆಚ್ಚಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಕಮಿಷನ್ ವ್ಯವಹಾರಗಳನ್ನು ಮಾಡತ್ತಿರುವವರಿಗೆ ಈ ದಿನ ಉತ್ತಮವಾದ ಆದಾಯ ಇದೆ. ಅತಿಯಾದ ಆಲೋಚನೆಯಿಂದ ನಿಮಗೆ ಬರಬೇಕಾದ ಲಾಭದ ಪ್ರಮಾಣದಲ್ಲಿ ಕಡಿಮೆ ಆಗಬಹುದು. ಈ ದಿನದ ಒಂದಿಷ್ಟು ಸಮಯ ಇತರರ ಸಲುವಾಗಿ ಮೀಸಲಿಡುವಂಥ ಸ್ಥಿತಿ ನಿರ್ಮಾಣ ಆಗುತ್ತದೆ. ಹಳೇ ಪರಿಚಯ ಎಂದು ಹೇಳಿಕೊಂಡು ಕೆಲ ವ್ಯಕ್ತಿಗಳು ನಿಮ್ಮ ಬಳಿ ಅಲ್ಪಾವಧಿಗೆ ಸಾಲ ಕೇಳಿಕೊಂಡು ಬರಬಹುದು. ಈ ಸನ್ನಿವೇಶ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡುತ್ತದೆ.

ಲೇಖನ- ಎನ್‌.ಕೆ.ಸ್ವಾತಿ