ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 15ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಪ್ರಯಾಣಕ್ಕೆ ತೆರಳಬೇಕಾಗುತ್ತದೆ. ಈ ಹಿಂದೆ ನೀವು ಮಾಡಿದ್ದ ಸಹಾಯವನ್ನು ನೆನೆದು, ಮನಸಾರೆ ಮೆಚ್ಚುಗೆ- ಕೃತಜ್ಞತೆಯನ್ನು ಸಲ್ಲಿಸಲಿದ್ದಾರೆ. ವಾರ್ತಾ ಇಲಾಖೆಯಲ್ಲಿ, ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವಂಥವರಿಗೆ ಮೇಲಧಿಕಾರಿಗಳ ಜತೆಗೆ ಮನಸ್ತಾಪ ಏರ್ಪಡುವ ಸಾಧ್ಯತೆ ಇದೆ. ನಿಮ್ಮದಲ್ಲದ ಕೆಲಸದಲ್ಲಿ ಅತಿ ಆಸಕ್ತಿ ಅಥವಾ ಉತ್ಸಾಹವನ್ನು ತೋರಿಸಬೇಡಿ. ನಿಮಗಿಂತ ಚಿಕ್ಕ ವಯಸ್ಸಿನವರ ಜತೆಗೆ ವಾಗ್ವಾದಗಳು ಬೇಡ, ನೆನಪಿನಲ್ಲಿ ಇಟ್ಟುಕೊಳ್ಳಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ದೀರ್ಘಾವಧಿಯ ಪ್ರಾಜೆಕ್ಟ್ ಅವಕಾಶ ನಿಮ್ಮನ್ನು ಹುಡುಕಿಕೊಂಡು ಬರುವ ಸಾಧ್ಯತೆ ಇದೆ. ಸಾಲವಾಗಿ ಹಣ ನೀಡಿ, ಅದು ಬಹು ಕಾಲದಿಂದ ಬಂದಿಲ್ಲ ಎಂದಾದಲ್ಲಿ ಈ ದಿನ ಪ್ರಯತ್ನಿಸಿ. ಆ ಪೈಕಿ ಸ್ವಲ್ಪ ಮೊತ್ತವಾದರೂ ಬರುವ ಸಾಧ್ಯತೆ ಇದೆ. ನಿದ್ದೆ ಬಾರದೆ ಸಮಸ್ಯೆ ಆಗುತ್ತಿರುವವರು ಕಡ್ಡಾಯವಾಗಿ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಔಷಧೋಪಚಾರಗಳನ್ನು ಮಾಡಿಕೊಳ್ಳುವುದು ಒಳ್ಳೆಯದು.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ನಿರೀಕ್ಷೆ ಮಾಡಿದಂತೆಯೇ ಕೆಲವು ಉತ್ತಮ ಬೆಳವಣಿಗೆಗಳು ಆಗಲಿವೆ. ಬಹಳ ಕಾಲದಿಂದ ಬಾಕಿ ಉಳಿದಿದ್ದ ಮೊತ್ತ ನಿಮ್ಮ ಕೈ ಸೇರಬಹುದು. ಸಂಗಾತಿ ಜತೆಗಿನ ನಿಮ್ಮ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ. ಈ ಹಿಂದೆ ನೀವು ಯಾವ ವ್ಯಕ್ತಿಗೆ ನೆರವು ಮಾಡಿದ್ದಿರೋ ಅವರಿಂದ ನಿಮಗೆ ಈ ದಿನ ಸಹಾಯ ಆಗುವಂಥ ಸಾಧ್ಯತೆ ಇದೆ. ಈ ದಿನ ಹೊರಗಿನ, ಅಂದರೆ ಹೋಟೆಲ್ ಊಟ- ತಿಂಡಿಗಳನ್ನು ಮಾಡದಿರುವುದು ಉತ್ತಮ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಕಟ್ಟಡ ನಿರ್ಮಾಣ ವೃತ್ತಿಯಲ್ಲಿ ಇರುವವರಿಗೆ ಹಣಕಾಸಿನ ಹರಿವಿನಲ್ಲಿ ಸ್ವಲ್ಪ ಮಟ್ಟಿಗಾದರೂ ಅಡೆತಡೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಬ್ಯಾಂಕ್ ವ್ಯವಹಾರ ಮಾಡುತ್ತಿರುವವರು ಸಹಿಯನ್ನು ಸರಿಯಾಗಿ ಮಾಡಿದ್ದೀರಾ ಎಂಬುದನ್ನು ನೋಡಿಕೊಳ್ಳಿ. ಸಣ್ಣ- ಪುಟ್ಟ ಸಂಗತಿಗಳಿಗೂ ವಿಪರೀತ ಪ್ರಾಮುಖ್ಯ ಕಂಡುಬರಲಿದೆ. ಸರ್ಕಾರದ ಕಾಂಟ್ಯಾಕ್ಟ್ ಗಳು ಒಪ್ಪಿಕೊಳ್ಳುವವರಿಗೆ ಹಿರಿಯ ಅಧಿಕಾರಿಗಳಿಂದ ಕಿರಿಕಿರಿ ಎದುರಾಗಲಿದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಎಲ್ಲ ಕೆಲಸವನ್ನೂ ನಾನೇ ಮಾಡುತ್ತೇನೆ ಎಂದು ಹೊರಡಬೇಡಿ. ಹೀಗೆ ಮಾಡಿದಲ್ಲಿ ಗಡುವಿನೊಳಗೆ ಕೆಲಸ ಮುಗಿಸುವುದು ಕಷ್ಟ ಆಗಬಹುದು. ಇನ್ನು ಸೈಟು- ಮನೆ ಖರೀದಿಗಾಗಿ ಪ್ರಯತ್ನಿಸುತ್ತಿರುವವರಿಗೆ ಬೇಕು- ಬೇಡ ಎಂಬ ಗೊಂದಲ ಸೃಷ್ಟಿ ಆಗಲಿದೆ. ಸೋದರ- ಸೋದರಿಯಿಂದ ಸಹಾಯಕ್ಕಾಗಿ ಮನವಿ ಬರುವ ಸಾಧ್ಯತೆಗಳಿವೆ. ನಿಮಗೆ ಸಂಪೂರ್ಣ ಖಾತ್ರಿ ಆಗದ ಹೊರತು ಯಾವ ವಿಚಾರದಲ್ಲೂ ಅಂತಿಮ ತೀರ್ಮಾನವನ್ನು ಕೈಗೊಳ್ಳಬೇಡಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಮನೆಯ ವಿಚಾರಗಳು ಈ ದಿನ ಪ್ರಾಶಸ್ತ್ಯ ಪಡೆಯುತ್ತವೆ. ಕುಟುಂಬ ಸದಸ್ಯರು ನಿಮ್ಮ ನೆರವನ್ನು ಕೇಳಿಕೊಳ್ಳಬಹುದು. ಮನೆ ದೇವರ ಆರಾಧನೆ ಮಾಡುವುದರಿಂದ ನೆಮ್ಮದಿ ದೊರೆಯಲಿದೆ. ರಾಜಕಾರಣದಲ್ಲಿ ಇರುವವರಿಗೆ ಈಗಿನ ಸ್ಥಾನಕ್ಕೆ ಕುತ್ತು ಒದಗುವ ಸಾಧ್ಯತೆ ಇದೆ. ಹೋಟೆಲ್ ಉದ್ಯಮ ನಡೆಸುತ್ತಿರುವವರಿಗೆ ವಿಸ್ತರಣೆಗೆ ಅವಕಾಶಗಳಿವೆ. ಬ್ಯಾಂಕ್ ನಲ್ಲಿ ಎಫ್.ಡಿ. ಇಟ್ಟಿರುವವರು ಅದನ್ನು ಮುರಿಸಬೇಕಾದಂಥ ಸಂದರ್ಭ ಎದುರಾಗಲಿದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಸ್ನೇಹಿತರ ಜತೆಗೆ ಬಾಂಧವ್ಯ ಗಟ್ಟಿಯಾಗಲಿದ್ದು, ದೀರ್ಘ ಕಾಲದ ಪ್ರಾಜೆಕ್ಟ್ ಗಳು ಸರಾಗವಾಗಿ ನಡೆದುಕೊಂಡು ಹೋಗಲಿದೆ. ಈ ದಿನ ನಿಮ್ಮಿಂದ ಸಾಧ್ಯವಾದಲ್ಲಿ ಧರ್ಮ ಗ್ರಂಥವನ್ನು ದಾನ ಮಾಡಿ. ವಿದ್ಯಾಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಕೆಲಸದ ಒತ್ತಡ ಸೃಷ್ಟಿ ಆಗಲಿದೆ. ಕೃಷಿ ಭೂಮಿ ಖರೀದಿಗಾಗಿ ಪ್ರಯತ್ನಿಸುತ್ತಿರುವವರಿಗೆ ಒಂದೇ ಸಲಕ್ಕೆ ಎರಡ್ಮೂರು ಆಯ್ಕೆಗಳು ದೊರೆಯಲಿದ್ದು, ಯಾವುದು ಕೊಳ್ಳಬೇಕು ಎಂಬ ಬಗ್ಗೆ ಗೊಂದಲ ಸೃಷ್ಟಿಯಾಗಲಿದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ದೇವಸ್ಥಾನಗಳ ಪಾರುಪತ್ತೆದಾರರು ಅಥವಾ ನಿರ್ವಹಣೆ ಮಾಡುತ್ತಿರುವವರಿಗೆ ಹೊಸ ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಮಕ್ಕಳ ಶಿಕ್ಷಣದ ಬಗ್ಗೆ ಕುಟುಂಬದಲ್ಲಿ ಗಂಭೀರವಾದ ಚರ್ಚೆ ಆಗಲಿದೆ. ಇತರರು ತಮ್ಮಿಂದ ಸಾಧ್ಯವಿಲ್ಲ ಎಂದು ಕೈ ಬಿಟ್ಟ ಕೆಲವು ಕೆಲಸಗಳನ್ನು ನೀವು ಪೂರ್ಣಗೊಳಿಸಲಿದ್ದೀರಿ. ಬೆಲೆಬಾಳುವ ವಸ್ತುಗಳ ಖರೀದಿಗಾಗಿ ಖರ್ಚು ಮಾಡುವ ಯೋಗ ಇದೆ. ಈ ದಿನ ವಿಷ್ಣುವಿನ ದೇವಾಲಯದಲ್ಲಿ ದರ್ಶನ ಪಡೆಯಿರಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಮೆದುಳಿಗೆ ಸಂಬಂಧಿಸಿದ ಕೆಲವು ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ಕೆಲವರಿಗೆ ಮರೆವು, ಮೈಗ್ರೇನ್, ವಿಪರೀತ ತಲೆ ಸಿಡಿತ ಇಂಥ ಸಮಸ್ಯೆಗಳು ಕಾಡಲಿವೆ. ಯಾವುದಾದರೂ ಕಾರ್ಯಕ್ರಮದಲ್ಲಿ ಓಡಾಟ ವಿಪರೀತವಾಗಿ, ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಮಾಡುವುದಕ್ಕೆ ಸಾಧ್ಯವಾಗದ ಸನ್ನಿವೇಶ ಎದುರಾಗಲಿದೆ. ಹಣಕಾಸಿನ ವಿಚಾರಕ್ಕೆ ಮುಖ್ಯವಾದ ಮಾತುಕತೆ ನಡೆಸಬೇಕು ಎಂದಿದ್ದಲ್ಲಿ ಈ ದಿನದ ಮಟ್ಟಿಗೆ ಸಾಧ್ಯವಾದರೆ ಮುಂದಕ್ಕೆ ಹಾಕಿ.
ಲೇಖನ- ಎನ್.ಕೆ.ಸ್ವಾತಿ