Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 4ರ ದಿನಭವಿಷ್ಯ

| Updated By: Ganapathi Sharma

Updated on: Nov 04, 2023 | 1:00 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 4ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 4ರ ದಿನಭವಿಷ್ಯ
ಸಾಂದರ್ಭಿಕ ಚಿತ್ರ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 4ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಹಣಕಾಸಿನ ವಿಚಾರಕ್ಕೆ ಬಹಳ ಒತ್ತಡದಲ್ಲಿ ಇರುವಂಥವರಿಗೆ ಅದರಿಂದ ಹೊರಬರುವಂತಹ ಮಾರ್ಗ, ಉಪಾಯಗಳು ಗೋಚರ ಆಗಲಿವೆ. ಸ್ವಂತ ವ್ಯಾಪಾರ, ಉದ್ಯಮ ಮಾಡಿಕೊಂಡು ಇರುವವರಿಗೆ ವಿಸ್ತರಣೆಯ ಅವಕಾಶಗಳು ದೊರೆಯಲಿವೆ. ಇದಕ್ಕಾಗಿ ನಿಮ್ಮಲ್ಲಿ ಕೆಲವರು ಬ್ಯಾಂಕ್ ಗಳಲ್ಲಿ ಸಾಲಕ್ಕೆ ಪ್ರಯತ್ನ ಪಡಲಿದ್ದೀರಿ. ಇನ್ನು ನಿಮ್ಮ ಸಂಬಂಧಿಕರು ಅಥವಾ ಸ್ನೇಹಿತರು ಹಣಕಾಸಿನ ನೆರವನ್ನು ನೀಡುವ ಸಾಧ್ಯತೆಗಳು ಸಹ ಇವೆ. ನೀವು ಮರೆತೇ ಹೋದಂತಹ ಅವಕಾಶವೊಂದು ಹುಡುಕಿಕೊಂಡು ಬರುವ ಸಾಧ್ಯತೆಗಳಿವೆ. ಅದನ್ನು ಒಪ್ಪಿಕೊಳ್ಳಬೇಕೋ ಅಥವಾ ಬೇಡವೋ ಎಂಬ ಗೊಂದಲಗಳು ಏನಾದರೂ ಇದ್ದಲ್ಲಿ ಹಿರಿಯರು ಅಥವಾ ಅನುಭವಗಳ ಸಲಹೆಯನ್ನು ಪಡೆದುಕೊಳ್ಳಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಯಾರೋ ಮಾಡಿದ ತಪ್ಪಿಗೆ ನೀವು ತಲೆ ಕೊಡಬೇಕಾದಂಥ ಸನ್ನಿವೇಶ ಎದುರಾಗಲಿದೆ. ಈ ದಿನ ನೀವು ಯಾರ ಜೊತೆಗೆ ಗುರುತಿಸಿಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ನೆಮ್ಮದಿ ನಿರ್ಧಾರವಾಗಲಿದೆ. ಮೇಲುನೋಟಕ್ಕೆ ಒಬ್ಬ ವ್ಯಕ್ತಿ ಹೇಗೆ ಕಾಣುತ್ತಾರೆ ಎಂಬುದನ್ನೇ ಆಧಾರವಾಗಿಟ್ಟುಕೊಂಡು ನಂಬಿದರೆ ಆ ನಂತರ ಪರಿತಪಿಸುವಂತಾಗುತ್ತದೆ. ನಿಮ್ಮಲ್ಲಿ ಕೆಲವರಿಗೆ ಈ ದಿನ ರಕ್ತದೊತ್ತಡದಲ್ಲಿ ಏರುಪೇರು ಆಗಬಹುದು. ಇದರಿಂದಾಗಿ ಕಣ್ಣು ಕತ್ತಲೆ ಬರುವುದು ತಲೆಸುತ್ತಿದಂತಾಗುವುದು ಇಂಥ ಅನುಭವಗಳು ಆಗಲಿವೆ. ಎತ್ತರದ ಸ್ಥಳಗಳಲ್ಲಿ ನಿಂತು ಕೆಲಸ ಮಾಡುವಂಥವರು ಬಹಳ ಜಾಗ್ರತೆಯಿಂದ ಇರಬೇಕು. ದಿಢೀರ್ ಪ್ರಯಾಣಗಳು ಬಂದಲ್ಲಿ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಬೇಡಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಈ ದಿನ ನಿಮಗೆ ದೊರೆಯುವಂತಹ ಅವಕಾಶವೋ ಜವಾಬ್ದಾರಿಯೋ ಒಳ್ಳೆಯದಕ್ಕೋ ಅಥವಾ ಕೆಟ್ಟದ್ದಕ್ಕೋ ಎಂಬುದನ್ನು ನಿರ್ಧರಿಸುವುದಕ್ಕೆ ಬಹಳ ಸಮಯ ಬೇಕಾಗುತ್ತದೆ. ಇತರರು ಹೇಳಿದ್ದಾರೆ, ಹಣ ನೀಡುತ್ತಾರೆ ಅಂತಲೋ ಅಥವಾ ಯಾವುದೋ ನಿರ್ದಿಷ್ಟ ಕೆಲಸದಲ್ಲಿ ಸಹಾಯ ಮಾಡಿಯೇ ಮಾಡುತ್ತಾರೆ ಅಂತ ನೆಚ್ಚಿಕೊಂಡು ಗಂಭೀರವಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಹೋಗಬೇಡಿ. ಸಹೋದ್ಯೋಗಿಗಳು ಅಥವಾ ಮೇಲಧಿಕಾರಿಗಳು ಉದ್ಯೋಗ ಸ್ಥಳದಲ್ಲಿ ಯಾವ ಕೆಲಸವನ್ನು ಒಪ್ಪಿಸುತ್ತಾರೆ ಅದನ್ನು ಶ್ರದ್ಧಾ- ಭಕ್ತಿಯಿಂದ ಮಾಡಿದಲ್ಲಿ ಒಳ್ಳೆಯ ಫಲಿತವನ್ನು ಈ ದಿನ ಕಾಣಲಿದ್ದೀರಿ. ಹೂಡಿಕೆಗೆ ಸಂಬಂಧಪಟ್ಟಂತಹ ನಿರ್ಧಾರಗಳು ಇದ್ದಲ್ಲಿ ಈ ದಿನ ಆ ಮುಂದಕ್ಕೆ ಹಾಕುವುದು ಉತ್ತಮ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನೀವು ಅಂದುಕೊಂಡ ಮೊತ್ತಕ್ಕೆ, ನಿರೀಕ್ಷೆ ಮಾಡಿದ್ದ ರೀತಿಯಲ್ಲಿ ಸಮಯಕ್ಕೆ ವ್ಯವಹಾರ ಇತ್ಯರ್ಥ ಮಾಡುವುದಕ್ಕೆ ಸಾಧ್ಯವಾಗದೇ ಹೋಗಬಹುದು. ಹೊಸದಾಗಿ ಪರಿಚಯ ಆದವರ ಮೇಲೆ ವಿಪರೀತವಾದ ಅವಲಂಬನೆ ಬೇಡ. ನಿಮಗೆ ಗೊತ್ತಿಲ್ಲದ ವಿಚಾರಗಳು ಏನಾದರೂ ಇದ್ದಲ್ಲಿ ಅನುಭವಿಗಳು, ಹಿರಿಯರ ಮಾರ್ಗದರ್ಶನವನ್ನು ಪಡೆದುಕೊಳ್ಳುವುದು ಉತ್ತಮ. ಕ್ರೀಡಾಪಟುಗಳಿಗೆ ಪ್ರಾಯೋಜಕತ್ವದ ಬಗ್ಗೆ ಮಾತು ನೀಡಿದ್ದವರು ಕೊನೆ ಕ್ಷಣದಲ್ಲಿ ತಮ್ಮಿಂದ ಸಾಧ್ಯವಿಲ್ಲ ಎಂದುಬಿಡಬಹುದು. ಭಾರವಾದ ವಸ್ತುಗಳನ್ನು ಎತ್ತುವಾಗ ಸ್ವಲ್ಪ ಎಚ್ಚರಿಕೆಯನ್ನು ವಹಿಸಿ. ನಿರ್ಲಕ್ಷ್ಯ ಮಾಡಿದಲ್ಲಿ ಕಾಲು, ಬೆನ್ನಿನ ಹುರಿಗೆ ತೊಂದರೆ ಆಗಬಹುದು.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಬೆಳ್ಳಿ ವಸ್ತುಗಳು ಅಥವಾ ಒಡವೆಗಳನ್ನು ಖರೀದಿಸುವಂಥ ಯೋಗ ನಿಮ್ಮ ಪಾಲಿಗಿದೆ. ಇನ್ನು ನಿಮ್ಮಲ್ಲಿ ಕೆಲವರು ದಾನ- ಧರ್ಮ ಕಾರ್ಯಗಳನ್ನು ಮಾಡಲಿದ್ದೀರಿ. ತೆರಿಗೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಈಗಾಗಲೇ ಎದುರಿಸುತ್ತಿದ್ದಲ್ಲಿ ಅದಕ್ಕೆ ಪರಿಹಾರ ದೊರೆಯಲಿದೆ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ಕೇಳುವಂತಹ ಅನುಗ್ರಹ ಆಗಲಿದೆ. ಹಿರಿಯರ ಆಶೀರ್ವಾದ ಬಲ ನಿಮ್ಮ ಮೇಲೆ ಇರಲಿದ್ದು, ಸಂಘ- ಸಂಸ್ಥೆಗಳಲ್ಲಿ ಪ್ರಮುಖವಾದ ಹುದ್ದೆಯೊಂದು ದೊರೆಯಬಹುದು. ಕನಿಷ್ಠ ಪಕ್ಷ ಪ್ರಭಾರಿಯಾಗಿಯಾದರೂ ಹುದ್ದೆಯನ್ನು ವಹಿಸಿಕೊಳ್ಳ ಬೇಕಾಗಬಹುದು. ಸ್ವಂತ ಉದ್ಯಮ ನಡೆಸುತ್ತಿರುವವರು ಹೊಸ ವ್ಯವಹಾರವನ್ನು ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ನಿರ್ಧಾರ ಅಂತಿಮಗೊಳಿಸಲಿದ್ದೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ನಿಟ್ಟಿನಲ್ಲಿ ನಾನಾ ರೀತಿಯಲ್ಲಿ ಯೋಜನೆ, ಆಲೋಚನೆ ಶುರು ಆಗಲಿದೆ. ಆಸ್ತಿ ಮಾರಾಟಕ್ಕೆ ಇಟ್ಟಿದ್ದಲ್ಲಿ ಅದಕ್ಕೆ ಬೇಡಿಕೆ ಹೆಚ್ಚಾಗುವಂಥ ಸಾಧ್ಯತೆಗಳಿವೆ. ಇನ್ನು ನಿಮ್ಮಲ್ಲಿ ಕೆಲವರು ಬಾಡಿಗೆ ಆದಾಯವನ್ನು ಹೆಚ್ಚು ಮಾಡಿಕೊಳ್ಳುವುದಕ್ಕಾಗಿ ಮನೆಯನ್ನೋ ಮಳಿಗೆಯನ್ನೋ ನಿರ್ಮಿಸುವ ಬಗ್ಗೆ ಚಿಂತನೆ ನಡೆಸಲಿದ್ದೀರಿ. ದುರ್ಗಾದೇವಿ ಆರಾಧನೆ ಮಾಡುವುದರಿಂದ ಹಾಗೂ ವಿಷ್ಣು ಸಹಸ್ರನಾಮ ಶ್ರವಣ ಅಥವಾ ಪಠಣ ಮಾಡುವುದರಿಂದ ಆಲೋಚನೆಯಲ್ಲಿ ಸ್ಪಷ್ಟತೆ ಇರಲಿದೆ. ಅದೇ ವೇಳೆ ಆತ್ಮವಿಶ್ವಾಸ ಕೂಡ ಹೆಚ್ಚಾಗಲಿದೆ. ಫೋಟೋಗ್ರಫಿಯನ್ನೇ ವೃತ್ತಿ ಮಾಡಿಕೊಂಡಿರುವವರಿಗೆ ಹೊಸ ಹೊಸ ಅವಕಾಶಗಳು ದೊರೆಯುವ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಸೈಟು ಖರೀದಿಗೋ ಮನೆ ಕಟ್ಟುವುದಕ್ಕೋ ಸಾಲಕ್ಕಾಗಿ ಪ್ರಯತ್ನ ಪಡುತ್ತಿದ್ದೀರಿ ಎಂದಾದಲ್ಲಿ ಈ ದಿನ ಬಹಳ ಒಳ್ಳೆಯ ಬೆಳವಣಿಗೆಗಳು ಆಗಲಿವೆ. ಮುಖ್ಯವಾಗಿ ಹಣಕಾಸಿನ ಅಡ್ಡಿ, ಆತಂಕಗಳು ದೂರ ಆಗಲಿವೆ. ಇಷ್ಟು ಸಮಯ ನಿಮ್ಮಲ್ಲಿ ಇದ್ದ ಆತ್ಮವಿಶ್ವಾಸದ ಕೊರತೆ ದೂರ ಆಗಲಿದೆ. ಸ್ವಂತ ವ್ಯಾಪಾರ, ವ್ಯವಹಾರ ಆರಂಭ ಮಾಡಬೇಕು ಅಂದುಕೊಳ್ಳುತ್ತಾ ಇರುವವರಿಗೆ ಸ್ನೇಹಿತರಿಂದ, ಸಂಬಂಧಿಗಳಿಂದ ದೊಡ್ಡ ಮಟ್ಟದಲ್ಲಿ ನೆರವು ಒದಗಿ ಬರಲಿದೆ. ನಿಮ್ಮನ್ನು ಹೇಗಾದರೂ ಮಾಡಿ ದಿಕ್ಕು ತಪ್ಪಿಸಬೇಕು ಎಂದು ಪ್ರಯತ್ನ ಮಾಡುತ್ತಿರುವವರು ತಾವೇ ಸಂಕಷ್ಟದಲ್ಲಿ ಸಿಲುಕಿಕೊಳ್ಳಲಿದ್ದಾರೆ. ನಿಮ್ಮ ಸ್ನೇಹಿತರ ವಲಯದಲ್ಲಿ ಯಾರಿಗೆ ಬಹಳ ಎಚ್ಚರಿಕೆಯಿಂದ ಇರಿ ಎಂದು ನೀವು ಹೇಳಿರುತ್ತೀರೋ ಅವರಿಗೆ ನಿಮ್ಮ ಮಾತಿನಂತೆ ಬೆಳವಣಿಗೆಗಳಾಗಿ, ನಿಮ್ಮ ಕಡೆಗೆ ಬೆರಗಿನಿಂದ ನೋಡಲಿದ್ದಾರೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಮ್ಮ ಒಳಿತನ್ನು ಬಯಸುವವರು ಯಾರು ಅಥವಾ ಕೆಡುಕನ್ನು ಬಯಸುವವರು ಯಾರು ಎಂದು ತಿಳಿಯಲಾರದಂತಹ ಗೊಂದಲದ ಸನ್ನಿವೇಶದಲ್ಲಿ ಈ ದಿನ ನೀವು ಇರಲಿದ್ದೀರಿ. ಸುಖಾ ಸುಮ್ಮನೆ ಯಾರೊಂದಿಗೂ ವಾದ- ವಾಗ್ವಾದಕ್ಕೆ ಇಳಿಯಬೇಡಿ. ನಮ್ಮಿಬ್ಬರಲ್ಲಿ ಯಾರದು ಸರಿ ಎಂಬುದನ್ನು ಸಾಬೀತು ಮಾಡಲೇಬೇಕು ಎಂಬ ರೀತಿಯ ಹಟ ಯಾವುದೇ ಕಾರಣಕ್ಕೂ ಬೇಡ. ಮುಖ್ಯ ವಿಷಯಗಳನ್ನು ಸಾಧ್ಯವಾದಷ್ಟೂ ಮೌಖಿಕವಾಗಿ ಹೇಳುವುದಕ್ಕಿಂತ ಲಿಖಿತವಾಗಿ ಹೇಳುವುದು ಉತ್ತಮ. ಮೇಲಧಿಕಾರಿಗಳು ಅಥವಾ ಸರ್ಕಾರದ ಆಯಕಟ್ಟಿನ ಹುದ್ದೆಯಲ್ಲಿ ಇರುವವರ ಜೊತೆಗೆ ವ್ಯವಹರಿಸುತ್ತಿದ್ದೀರಿ ಎಂದಾದಲ್ಲಿ ದಾಖಲೆಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ದೊಡ್ಡ ಸಮಸ್ಯೆ ಆಗಬಹುದು ಎಂದುಕೊಂಡಿದ್ದ ವಿಚಾರ ಅಥವಾ ವಿಷಯ ಒಂದು ನಿಮಗೆ ಸಾಧಕವಾಗಿ ಪರಿಣಮಿಸಬಹುದಾದ ಸನ್ನಿವೇಶ ಸೃಷ್ಟಿಯಾಗಲಿದೆ. ನೀವು ಮಾಡುತ್ತಿರುವುದು ಸರಿ ಎಂದು ಖಾತ್ರಿಯಾದ ಮೇಲೆ ಯಾವುದಕ್ಕೂ ಹೆದರಬೇಡಿ. ಆದರೆ ನೀವು ಇದನ್ನು ಹೀಗೆ ಮಾಡಬೇಕು ಎಂದುಕೊಂಡಿದ್ದು ಯಾಕೆ ಎಂಬುದನ್ನು ಸ್ಪಷ್ಟ ಧ್ವನಿಯಲ್ಲಿ ಹೇಳುವುದು ತುಂಬಾ ಮುಖ್ಯವಾಗುತ್ತದೆ. ನಿಮಗಿಂತ ವಯಸ್ಸಿನಲ್ಲಿ ಹಿರಿಯರು, ಅನುಭವಸ್ಥರು ಆಗಿರುವವರಿಗೆ ಕೂಡ ಹೊಳೆಯದಂತಹ ಅನೇಕ ವಿಚಾರಗಳು ಈ ದಿನ ನಿಮಗೆ ಸ್ಫುಟವಾಗಿ ಗೋಚರಿಸಲಿದೆ. ಮುಖ್ಯ ಕೆಲಸಗಳಿಗಾಗಿ ತೆರಳುವ ಮುನ್ನ ಈ ದಿನ ಭೂವರಾಹ ಸ್ವಾಮಿ ದೇವರನ್ನು ಮನಸ್ಸಿನಲ್ಲಿ ಸ್ಮರಣೆ ಮಾಡಿ ಅಥವಾ ಪೂಜಿಸಿ ಆ ನಂತರ ಹೊರಟರೆ ಉತ್ತಮ ಫಲಗಳನ್ನು ಕಾಣುತ್ತೀರಿ.