ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಅಕ್ಟೋಬರ್ 6ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಎಲ್ಲರನ್ನೂ ಒಪ್ಪಿಸಿಯೇ ನಿರ್ಧಾರ ಕೈಗೊಳ್ಳುತ್ತೀನಿ ಎಂಬ ನಿಮ್ಮ ಪ್ರಯತ್ನ ಪೂರ್ಣ ಪ್ರಮಾಣದಲ್ಲಿ ಕೈಗೂಡುವುದಿಲ್ಲ. ನೀವು ಒಪ್ಪಿಕೊಂಡ ಕೆಲಸದಲ್ಲೋ ಅಥವಾ ಮಾಡುತ್ತಿರುವ ಕಾರ್ಯದಲ್ಲೋ ಲಾಭದ ಪ್ರಮಾಣ ನಿಮಗೆ ಹೆಚ್ಚಿಗೆ ಸಿಗಲಿದೆ ಎಂಬ ಆರೋಪ ಅಥವಾ ಗುಮಾನಿಗಳು ಕೇಳಿಸಿಕೊಳ್ಳಬೇಕಾಗುತ್ತದೆ. ನಿಮ್ಮಲ್ಲಿ ಕೆಲವರಿಗೆ ಆರೋಗ್ಯದ ಬಗ್ಗೆ ಕಾಳಜಿ ಜಾಸ್ತಿ ಆಗಿ, ಜಿಮ್, ಯೋಗ ಅಥವಾ ಪ್ರಾಣಾಯಾಮಕ್ಕೆ ಸೇರಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ತಾತ್ಕಾಲಿಕವಾಗಿ ಇಷ್ಟವಿಲ್ಲದ ತಂಡದಲ್ಲೋ ವಿಭಾಗದಲ್ಲೋ ಕೆಲಸ ಮಾಡುವಂತಹ ಅನಿವಾರ್ಯ ಸೃಷ್ಟಿಯಾಗಲಿದೆ.
ನಿಮ್ಮ ಸಮಯ, ಶ್ರದ್ಧೆ ಹಾಗೂ ಏಕಾಗ್ರತೆಯನ್ನು ತೊಡಗಿಸಿ ಬಹಳ ಸಮಯದಿಂದ ಮಾಡುತ್ತಿದ್ದ ಕೆಲಸ ಒಂದನ್ನು ಏಕಾಏಕಿ ನಿಲ್ಲಿಸಿ ಬಿಡುವಂತೆ ಮೇಲಧಿಕಾರಿಗಳು ಸೂಚಿಸುವ ಸಾಧ್ಯತೆಗಳು ಈ ದಿನ ಹೆಚ್ಚಿವೆ. ಯಾರೊಂದಿಗೂ ವಾದ ಮಾಡುತ್ತಾ ನಿಲ್ಲದಿರುವುದು ಉತ್ತಮ. ಈ ಹಿಂದೆ ಯಾವಾಗಲೂ ನೀವು ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳುವ ಸಲುವಾಗಿ ನೀವಾಗಿಯೇ ಕೆಲವು ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತೀರಿ. ಯಾರೋ ಒಬ್ಬರನ್ನು ಉಳಿಸುವುದಕ್ಕೆ ನೀವು ಮಾಡುವ ಪ್ರಯತ್ನಗಳಿಂದಾಗಿ ನಿಮ್ಮ ವರ್ಚಸ್ಸಿಗೆ ಹಾನಿ ಮಾಡಿಕೊಳ್ಳುವ ಸಾಧ್ಯತೆಗಳು ಈ ದಿನ ಹೆಚ್ಚಿವೆ. ಗಡುವಿನೊಳಗಾಗಿ ಕೆಲಸವನ್ನು ಮಾಡಬೇಕಾದಂತಹವರು ಕೊನೆ ಕ್ಷಣದ ತನಕ ಅದನ್ನು ಉಳಿಸಿಕೊಳ್ಳಲು ಹೋಗಬೇಡಿ.
ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸಗಳಿದ್ದಲ್ಲಿ ಈ ದಿನ ಮಹತ್ವದ ಬೆಳವಣಿಗೆ ಆಗಲಿದೆ. ಕ್ರೀಡಾಪಟುಗಳು ಪ್ರಾಯೋಜಕತ್ವಕ್ಕಾಗಿ ಪ್ರಯತ್ನ ಪಡುತ್ತಿದ್ದಲ್ಲಿ ಶುಭ ಸುದ್ದಿ ಕೇಳುವ ಯೋಗ ನಿಮ್ಮ ಪಾಲಿಗಿದೆ. ದೀರ್ಘಾವಧಿಗಾಗಿ ಭೂಮಿ ಮೇಲೆ ಹೂಡಿಕೆ ಮಾಡಿದಂತಹವರಿಗೆ ಈಗ ತುಂಬಾ ಒಳ್ಳೆಯ ಬೆಲೆ ಸಿಗುವ ಸಾಧ್ಯತೆಗಳು ಹೆಚ್ಚಿವೆ. ಒಂದು ವೇಳೆ ಮಾರಾಟ ಮಾಡಬೇಕು ಎಂದುಕೊಂಡಲ್ಲಿ ಉತ್ತಮ ಬೆಲೆ ದೊರೆಯಲಿದೆ. ಕಮಿಷನ್ ಆಧಾರದಲ್ಲಿ ಮಾಡುವಂತಹ ಕೆಲಸಗಳಲ್ಲಿ ಇರುವವರಿಗೆ ನಿರೀಕ್ಷೆಗೂ ಮೀರಿದಂತಹ ಆದಾಯ ಬರಲಿದೆ. ಸ್ವಂತ ವ್ಯಾಪಾರ, ವ್ಯವಹಾರ ಅಥವಾ ಉದ್ಯಮವನ್ನು ನಡೆಸುತ್ತಿರುವವರು ಅದನ್ನು ವಿಸ್ತರಣೆ ಮಾಡುವ ಸಲುವಾಗಿ ಯೋಜನೆಗಳನ್ನು ರೂಪಿಸಲಿದ್ದೀರಿ.
ಈ ದಿನ ನಿಮಗೆ ಹೊಟ್ಟೆಗೆ ಸಂಬಂಧಪಟ್ಟಂತಹ ಅನಾರೋಗ್ಯ ಸಮಸ್ಯೆಗಳು ಕಾಡಬಹುದು ಅಥವಾ ಫುಡ್ ಪಾಯಿಸನ್ ಆಗಬಹುದು. ಆದ್ದರಿಂದ ಊಟ ತಿಂಡಿ ವಿಚಾರದಲ್ಲಿ ಬಹಳ ಎಚ್ಚರಿಕೆಯನ್ನು ವಹಿಸಿ. ಮುಖ್ಯವಾಗಿ ಸ್ವಚ್ಛತೆ ಕಡೆಗೆ ಜಾಸ್ತಿ ಗಮನವನ್ನು ಕೊಡಿ. ನೀರಿಗೆ ಸಂಬಂಧಪಟ್ಟಂತಹ ವ್ಯವಹಾರಗಳನ್ನು ಮಾಡುವಂಥವರಿಗೆ ಸರ್ಕಾರದ ಕಡೆಯಿಂದ ನೋಟಿಸ್ ನೀಡಬಹುದು ಅಥವಾ ಯಾವುದಾದರೂ ಮಾಹಿತಿ ಅಥವಾ ದಾಖಲಾತಿಗಳನ್ನು ಕೇಳಿಕೊಂಡು ಅಧಿಕಾರಿಗಳು ಬರಬಹುದು. ಆದ್ದರಿಂದ ಇಂಥ ವ್ಯವಹಾರ ಮಾಡುತ್ತಿರುವವರು ಯಾವ್ಯಾವ ಮುಖ್ಯ ದಾಖಲೆಗಳಿವೆಯೋ ಅವುಗಳನ್ನು ಕೈಗೆ ಸಿಗುವಂತೆ ಎತ್ತಿಟ್ಟುಕೊಳ್ಳುವುದು ಉತ್ತಮ.
ಯಾರಿಗೆ ಈಗಾಗಲೇ ನಿವೇಶನ ಇದೆಯೋ ಅಂತಹವರು ಮನೆ ಕಟ್ಟುವ ಬಗ್ಗೆ ಚರ್ಚೆ ಮಾಡಲಿದ್ದೀರಿ ಅಥವಾ ಸಾಲಕ್ಕಾಗಿ ಪ್ರಯತ್ನ ಪಟ್ಟು, ಬ್ಯಾಂಕ್ ಗಳಲ್ಲಿ ಈ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಿದ್ದೀರಿ. ನಿಮ್ಮಲ್ಲಿ ಕೆಲವರು ಈಗಿರುವ ನಿವೇಶನವನ್ನು ಮಾರಿ ಅಪಾರ್ ಮೆಂಟ್ ಅಥವಾ ಕಟ್ಟಿರುವಂತಹ ಮನೆಯನ್ನು ಖರೀದಿ ಮಾಡುವ ಬಗ್ಗೆ ಆಲೋಚನೆ ಮಾಡುವ ಸಾಧ್ಯತೆ ಸಹ ಇದೆ. ಒಂದು ವೇಳೆ ವಿದೇಶಗಳಲ್ಲಿ ಉದ್ಯೋಗಕ್ಕಾಗಿ ಪ್ರಯತ್ನ ಪಡುತ್ತಿದ್ದೀರಿ ಎಂದಾದಲ್ಲಿ ಏನಾದರೂ ಅಡೆತಡೆಗಳು ಕಾಡುತ್ತಿದ್ದರೆ ಅಂಥವು ನಿವಾರಣೆ ಮಾಡಿಕೊಳ್ಳುವುದಕ್ಕೆ ಬೇಕಾದ ಮಾರ್ಗೋಪಾಯಗಳು ಗೋಚರ ಆಗಲಿವೆ. ಸ್ನೇಹಿತರಿಂದ ಕೆಲವು ನೆರವು ದೊರೆಯಲಿದೆ.
ಸೋಷಿಯಲ್ ಮೀಡಿಯಾಗಳಲ್ಲಿಯಾಗಲಿ ಅಥವಾ ಮತ್ತೊಬ್ಬ ವ್ಯಕ್ತಿಯ ಜೊತೆಗೆ ಫೋನ್ ನಲ್ಲಿ ಮಾತನಾಡುವಾಗ ಆಗಲಿ ಇತರ ವ್ಯಕ್ತಿಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಬೀಸಾಗಿ ಹೇಳಬೇಡಿ. ಯಾರೋ ಹೇಳಿದ್ದು, ನೀವು ಎಲ್ಲೋ ಕೇಳಿಸಿಕೊಂಡಿದ್ದು ಇಂಥ ಮಾಹಿತಿಗಳ ಆಧಾರದ ಮೇಲೆ ಒಬ್ಬರ ನಡತೆ ಅಥವಾ ವ್ಯಕ್ತಿತ್ವದ ಬಗ್ಗೆ ಯಾವುದೇ ಅಭಿಪ್ರಾಯವನ್ನು ನೀಡದಿರುವುದು ಕ್ಷೇಮ. ಕಡಿಮೆ ಬೆಲೆಗೆ ಸಿಗುತ್ತಿದೆ ಅಥವಾ ಸ್ನೇಹಿತರೊಬ್ಬರು ತುಂಬಾ ಕಡಿಮೆ ಬೆಲೆಗೆ ಕೊಡುತ್ತಿದ್ದಾರೆ ಎಂಬ ಕಾರಣಕ್ಕಾಗಿ ನಿಮಗೆ ಬೇಡದ ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಈ ದಿನ ಮುಂದಾಗಬೇಡಿ. ಇನ್ನು ಪ್ರೀತಿ, ಪ್ರೇಮದಲ್ಲಿ ಇರುವಂತಹವರಿಗೆ ಅಭಿಪ್ರಾಯ ಭೇದಗಳು ಉದ್ಭವಿಸಬಹುದು.
ಆಲಸ್ಯದ ಕಾರಣಕ್ಕೋ ಅಥವಾ ಉಡಾಫೆ ಪ್ರವೃತ್ತಿಯಿಂದಲೋ ವರ್ಚಸ್ಸನ್ನು ಹಾಳು ಮಾಡಿಕೊಳ್ಳಲಿದ್ದೀರಿ. ಇತರರು ತಾವಾಗಿಯೇ ಬಂದು ಸಲಹೆ ಕೇಳದ ಹೊರತು ನೀವಾಗಿಯೇ ಮೇಲೆ ಬಿದ್ದು ಏನನ್ನೂ ಹೇಳುವುದಕ್ಕೆ ಹೋಗಬೇಡಿ. ನಿಮಗಿಂತ ಚಿಕ್ಕ ವಯಸ್ಸಿನವರ ಜೊತೆ ಮಾತನಾಡುವಾಗ ಬಳಸುವ ಪದಗಳ ಬಗ್ಗೆ ಎಚ್ಚರಿಕೆ ಇರಲಿ. ಕೆಲವು ಅಭಿಪ್ರಾಯ ಅಥವಾ ಸಲಹೆಗಳನ್ನು ಹೇಳಿದ ಕಾರಣಕ್ಕೆ ಉದ್ಯೋಗ ಸ್ಥಳದಲ್ಲಿ ನಿಮ್ಮನ್ನು ಔಟ್‌ಡೇಟೆಡ್ ಎಂದು ಭಾವಿಸುವ ಸಾಧ್ಯತೆಗಳು ಹೆಚ್ಚಿವೆ. ವೃತ್ತಿ ಅಥವಾ ಉದ್ಯೋಗಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ಹೊಸ ಕೋರ್ಸ್ ಸೇರಬೇಕು ಎಂದಾದಲ್ಲಿ ಅನುಭವಿಗಳ ಮಾರ್ಗದರ್ಶನವನ್ನು ಪಡೆದುಕೊಳ್ಳಿ.
ನಿಮ್ಮ ಬುದ್ಧಿವಂತಿಕೆ ಹಾಗೂ ಸಮಯಪ್ರಜ್ಞೆ ಈ ದಿನ ಕೈ ಹಿಡಿಯಲಿದೆ. ಸ್ವಲ್ಪ ಯಾಮಾರಿದ್ದರೂ ದೊಡ್ಡ ನಷ್ಟವಾಗುತ್ತಿತ್ತು ಎಂದುಕೊಳ್ಳುತ್ತಿದ್ದ ವ್ಯವಹಾರ ಒಂದರಲ್ಲಿ ನಿಮ್ಮ ಸಮಯೋಚಿತ ನಿರ್ಧಾರದಿಂದ ಹಾಗೂ ಎಚ್ಚರಿಕೆಯಿಂದ ನಷ್ಟವನ್ನು ತಪ್ಪಿಸುತ್ತೀರಿ. ಕುಟುಂಬದವರ ಜತೆಗೆ ದೂರ ಪ್ರಯಾಣಕ್ಕೆ ತೆರಳುವ ಬಗ್ಗೆ ಚರ್ಚೆ ನಡೆಸಲಿದ್ದೀರಿ. ನಿಮ್ಮಲ್ಲಿ ಯಾರು ಕ್ರೆಡಿಟ್ ಕಾರ್ಡ್ ಬಳಸುತ್ತಿರೋ ಅಂತಹವರು ಮಾತ್ರ ಬಹಳ ಎಚ್ಚರಿಕೆಯಿಂದ ಇರಬೇಕು. ಒಂದು, ತಾತ್ಕಾಲಿಕವಾಗಿಯಾದರೂ ಇತರರಿಗೆ ವಸ್ತುಗಳನ್ನು ಖರೀದಿಸುವುದಕ್ಕೆ ನೀಡಲು ಹೋಗಬೇಡಿ. ಇಲ್ಲ, ನೀವೇ ವಿಪರೀತ ಖರ್ಚು ಮಾಡಲು ಹೋಗಬೇಡಿ.
ಈ ದಿನ ಓಡಾಟ ತುಂಬಾ ಜಾಸ್ತಿ ಇರುತ್ತದೆ. ಕುಟುಂಬ ಸದಸ್ಯರ ಬೆಂಬಲ ದೊರೆಯುವುದರಿಂದ ಹೆಚ್ಚಿನ ದಣಿವು ನಿಮಗೆ ಆಗುವುದಿಲ್ಲ. ತುರ್ತಾಗಿ ಕಾಣಿಸಿಕೊಳ್ಳುವ ಹಣದ ಅಗತ್ಯವನ್ನು ಸಹ ಸ್ನೇಹಿತರು ನೆರವಿಗೆ ಬರುವ ಮೂಲಕ ನಿಮಗೆ ಹೆಚ್ಚಿನ ಆತಂಕವೇನೂ ಕಾಡುವುದಿಲ್ಲ. ಯಾರು ಈಗ ಮನೆಯನ್ನು ಕಟ್ಟುತ್ತಿದ್ದೀರಾ ಅಂತಹವರು ಇಂಟೀರಿಯರ್ ಡೆಕೋರೇಷನ್ ಗಾಗಿ ಹೆಚ್ಚಿನ ಖರ್ಚನ್ನು ಮಾಡಲಿದ್ದೀರಿ. ಹಣಕಾಸಿನ ಹರಿವಿನಲ್ಲಿ ಈ ಹಿಂದೆ ಏನಾದರೂ ಅಡಚಣೆಗಳು ಕಾಡಿದ್ದಲ್ಲಿ ಅಂಥವು ನಿವಾರಣೆಯಾಗಲಿವೆ. ವಿದೇಶಗಳಲ್ಲಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದಲ್ಲಿ ಶುಭ ಸುದ್ದಿ ಕೇಳುವ ಯೋಗ ಇದೆ.
ಲೇಖನ- ಎನ್.ಕೆ.ಸ್ವಾತಿ