ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 20ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಇಬ್ಬರ ಕೆಲಸವನ್ನು ಒಬ್ಬರೇ ಮಾಡುವ ಸ್ಥಿತಿ ನಿರ್ಮಾಣ ಆಗಲಿದೆ. ನಾವು ಬರುತ್ತೇವೆ, ನಾವು ಬರುತ್ತೇವೆ ಎಂದು ನಿಮ್ಮ ಬಳಿ ಹೇಳಿದ್ದ ವ್ಯಕ್ತಿಗಳು ಏಕಾಏಕಿ ಕೈ ಕೊಡಲಿದ್ದಾರೆ. ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದೇ ಹೋದದ್ದು ನಿಮ್ಮ ತಪ್ಪು ಎಂಬಂಥ ಮಾತುಗಳನ್ನು ಸಹ ಕೇಳಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ಹಲವರು ಸೇರಿ ಮಾಡಬೇಕಾದ ಕೆಲಸಗಳ ವಿಚಾರದಲ್ಲಿ ಅತ್ಯುತ್ಸಾಹ ತೋರಿಸುವುದಕ್ಕೆ ಹೋಗಬೇಡಿ. ಮೇಲ್ವಿಚಾರಣೆ ನೋಡಿಕೊಳ್ಳುವಂತಹ ಹುದ್ದೆಯಲ್ಲಿ ಇರುವಂಥವರು, ಸಂಘಟನೆಯಲ್ಲಿ ತೊಡಗಿಕೊಂಡಂಥವರಿಗೆ ಸಣ್ಣ-ಪುಟ್ಟ ಅಪಘಾತ ಆಗುವಂಥ ಸಾಧ್ಯತೆಗಳಿವೆ. ಆದ್ದರಿಂದ ವಾಹನ ಚಾಲನೆ ಇರಲಿ ಅಥವಾ ನೀವೇ ನಡೆದು ಹೋಗುವಾಗ ಇರಲಿ ಬಹಳ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಮುಖ್ಯ ವ್ಯಕ್ತಿಗಳ ಭೇಟಿಗೆ ತೆರಳುತ್ತಿದ್ದೀರಿ ಅಂತಾದಲ್ಲಿ ಸ್ವಲ್ಪ ಮುಂಚಿತವಾಗಿಯೇ ಅಲ್ಲಿರುವಂತೆ ಯೋಜನೆ ಮಾಡಿಕೊಳ್ಳಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನೀವು ಮಾಡದ ಕೆಲಸಕ್ಕೆ ಯಾರೋ ಹೊಗಳುತ್ತಿದ್ದಾರೆ ಅಂತಾದ ತಕ್ಷಣ ಅದರ ಲಾಭವನ್ನು ತೆಗೆದುಕೊಳ್ಳೋಣ ಅಂತ ಈ ದಿನ ಅಂದುಕೊಳ್ಳಬೇಡಿ. ಈ ದಿನದ ಮಟ್ಟಿಗೆ ನೀವು ಸಂತೋಷವಾಗಿರಬಹುದು. ಆದರೆ ಆ ನಂತರ ಪರಿತಪಿಸುವಂತಾಗುತ್ತದೆ. ನೀವು ಸುಳ್ಳು ಹೇಳುವವರು, ಇತರರ ಶ್ರಮದ ಶ್ರೇಯವನ್ನು ತಮ್ಮದಾಗಿಸುವುದಕ್ಕೆ ಪ್ರಯತ್ನಿಸುವವರು ಅಂತ ಹಣೆಪಟ್ಟಿ ಕಟ್ಟುವ ಸಾಧ್ಯತೆಗಳಿರುತ್ತವೆ. ನಿಮ್ಮ ಸ್ನೇಹಿತರ ಮೂಲಕವಾಗಿ ಯಾವುದಾದರೂ ವಸ್ತು, ಜಾಗ ಅಥವಾ ವಾಹನ ಕಡಿಮೆ ಬೆಲೆಗೆ ದೊರೆಯುತ್ತಿದೆ ಎಂಬ ಮಾಹಿತಿ ಸಿಕ್ಕರೆ ಸಾಲವನ್ನಾದರೂ ಮಾಡಿ, ಖರೀದಿ ಮಾಡಿಬಿಡೋಣ ಎಂದು ಹೊರಡಬೇಡಿ. ಹೀಗೊಂದು ವೇಳೆ ಮಾಡಿದರೆ ನಿಮಗೆ ಹಣ ಕಳೆದುಕೊಳ್ಳುವಂಥ ಯೋಗ ಇದೆ. ನಿಮ್ಮ ಸಂಪಾದನೆ ಎಷ್ಟಿದೆ ಎಂಬಷ್ಟಕ್ಕೆ ತಕ್ಕಂತೆ ಖರ್ಚನ್ನು ಲೆಕ್ಕಾಚಾರ ಹಾಕಿಟ್ಟುಕೊಳ್ಳಿ. ಕೈ ಮೀರಿದ ವೆಚ್ಚ ಬೇಡ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ನಿಮ್ಮಲ್ಲಿ ಈ ದಿನ ಪಶ್ಚಾತಾಪ ಬಹುವಾಗಿ ಕಾಡಲಿದೆ. ಬೇರೆಯವರಿಗೆ ಒಳ್ಳೆಯದಾಗಲಿ ಎಂದುಕೊಂಡೇ ಆಡಿದ ಮಾತುಗಳು ಸಮಸ್ಯೆಯಾಗಿ ಮಾರ್ಪಡಲಿದೆ. ಅಥವಾ ಇತರರು ಅದನ್ನು ತಪ್ಪಾದ ವಿಧಾನದಲ್ಲಿ ಮಾಡಿ, ಅದರ ವೈಫಲ್ಯವನ್ನು ನಿಮ್ಮ ತಲೆಗೆ ಕಟ್ಟುವಂಥ ಸಾಧ್ಯತೆ ಇದೆ. ನಾನು ಈ ಸ್ಥಿತಿಯಲ್ಲಿ ಹೀಗಿದ್ದಿದ್ದರೆ ಹೀಗೆ ಮಾಡುತ್ತಿದ್ದೆ ಎಂದು ಹೇಳುವ ಮುನ್ನ ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ. ಸಾಧ್ಯವಾದಷ್ಟೂ ಮೌನವಾಗಿರುವುದಕ್ಕೆ ಪ್ರಯತ್ನಿಸಿ. ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳಿ, ಕನಿಷ್ಠ ಹತ್ತು ನಿಮಿಷವಾದರೂ ಧ್ಯಾನ ಮಾಡುವುದಕ್ಕೆ ಪ್ರಯತ್ನಿಸಿ. ಹೊಸ ಬಟ್ಟೆ ಸೇರಿದಂತೆ ಒಡವೆ- ವಸ್ತುಗಳನ್ನು ಖರೀದಿ ಮಾಡಬೇಕು ಎಂದು ಇದ್ದಲ್ಲಿ ಈ ದಿನದ ಮಟ್ಟಿಗೆ ನಿರ್ಧಾರವನ್ನು ಮುಂದಕ್ಕೆ ಹಾಕಿ. ಒಂದು ವೇಳೆ ಬ್ಯಾಂಕ್ ನಲ್ಲಿ ಹಣ ಎಫ್ ಡಿ ಮಾಡಬೇಕು ಅಥವಾ ಆರ್ ಡಿ ಕಟ್ಟುವುದಕ್ಕೆ ಆರಂಭಿಸಬೇಕು ಎಂದುಕೊಂಡರೂ ದಿನದ ಮಟ್ಟಿಗೆ ಮುಂದಕ್ಕೆ ಹಾಕಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಯಾರನ್ನೂ ಹಚ್ಚಿಕೊಳ್ಳಬಾರದು, ಯಾರಿಂದಲೂ ಏನನ್ನೂ ನಿರೀಕ್ಷೆ ಮಾಡಬಾರದು ಎಂಬುದು ನಿಮಗೆ ಈ ದಿನ ಬಹಳ ಸಲ ಅನ್ನಿಸಲಿದೆ. ಮೊದಮೊದಲಿಗೆ ವಿಪರೀತ ಹಚ್ಚಿಕೊಂಡಂತೆ ಮಾತನಾಡುತ್ತಿದ್ದ ವ್ಯಕ್ತಿಗಳು ಈಗ ಫೋನ್ ಗೂ ಸಿಗುತ್ತಿಲ್ಲ ಎಂಬ ಸನ್ನಿವೇಶ ನಿರ್ಮಾಣ ಆಗಲಿದೆ. ಬೇಕೆಂತಲೆ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದೆನಿಸುವುದಕ್ಕೆ ಶುರುವಾಗಿ, ನಿಮಗೆ ಹೇಳಿಕೊಳ್ಳಲು ಆಗದಂಥ ಬೇಸರ ಕಾಡುತ್ತದೆ. ಮುಖ್ಯ ವಿಚಾರಗಳನ್ನು, ವಸ್ತುಗಳನ್ನು ಮರೆಯುವಂತಾಗಿ ಎಲ್ಲರಿಂದಲೂ ಬೈಯಿಸಿಕೊಳ್ಳುವ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ನಿಮ್ಮ ಹಣಕಾಸಿನ ಸ್ಥಿತಿಯನ್ನು ಮುಂದು ಮಾಡಿಕೊಂಡು ಕೆಲವರು ಮೂದಲಿಸಲಿದ್ದಾರೆ. ಸಂಬಂಧ ಇರದಿದ್ದರೂ ನಿಮ್ಮನ್ನು ಮೂಲೆಗುಂಪು ಮಾಡುವುದಕ್ಕೆ ಕೆಲವು ವ್ಯಕ್ತಿಗಳು ಒಟ್ಟಾಗಿ ಕೆಲಸ ಮಾಡಲಿದ್ದಾರೆ. ನಿಮ್ಮ ಪ್ರಾಮಾಣಿಕತೆ, ನಿಷ್ಠೆಯನ್ನು ಮಾತ್ರ ಬಿಡುವುದಕ್ಕೆ ಹೋಗಬೇಡಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಕೆಲವು ವ್ಯಕ್ತಿಗಳಿಗೆ ಸ್ನೇಹ ಅಂತಲೋ ಅಥವಾ ಪರಿಚಿತರು ಅಂತಲೋ ಸಲಹೆ ನೀಡಿ, ಆ ನಂತರ ಯಾಕಾದರೂ ಹೇಳಿದೆನೋ ಎಂಬಂತಾಗುತ್ತದೆ ನಿಮ್ಮ ಪರಿಸ್ಥಿತಿ. ಅವರು ನಿಮ್ಮ ಮೇಲೇ ಎಲ್ಲ ಜವಾಬ್ದಾರಿ ಹಾಗೂ ಕೆಲಸವನ್ನು ಹಾಕಿ, ತಾವು ಆರಾಮಾಗಿ ಇದ್ದು ಬಿಡುತ್ತಾರೆ. ನಿಮ್ಮದೇ ವೈಯಕ್ತಿಕ ಕೆಲಸಗಳು ಹಾಗೂ ಅಭಿಪ್ರಾಯಗಳು ಏನೇ ಇದ್ದರೂ ಆ ಬಗ್ಗೆ ಏನನ್ನೂ ಕೇಳುವುದಿಲ್ಲ. ಇನ್ನು ನೀವು ಅದನ್ನು ಹೇಳಿಕೊಳ್ಳುವುದಕ್ಕೆ ಆಗದಂಥ ಸನ್ನಿವೇಶ ಎದುರಾಗುತ್ತದೆ. ಶುಭ ಕಾರ್ಯಗಳಿಗೆ ಸಿದ್ಧತೆ ನಡೆಸುತ್ತಿರುವವರಿಗೆ ಒತ್ತಡದ ಸನ್ನಿವೇಶಗಳು ಎದುರಾಗುತ್ತವೆ. ನೀವು ನಿರೀಕ್ಷೆ ಕೂಡ ಮಾಡದಂತಹ ಕೆಲವು ಖರ್ಚುಗಳು ಮೈ ಮೇಲೆ ಬೀಳಲಿವೆ. ಮೊದಲಿನ ಹುರುಪಿನಲ್ಲಿ ಯಾವುದೇ ಮಾತುಕತೆಯಲ್ಲಿ ತೊಡಗಿಕೊಳ್ಳುವುದಕ್ಕೆ ಸಾಧ್ಯವಾಗದಂತೆ ಉತ್ಸಾಹವನ್ನು ಕಳೆದುಕೊಳ್ಳಲಿದ್ದೀರಿ. ಇದು ನಿಮ್ಮ ಬೇಜವಾಬ್ದಾರಿ ಎಂದು ಕೆಲವರು ಅಪಪ್ರಚಾರ ಮಾಡಲಿದ್ದಾರೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನಿಮ್ಮ ಕೀರ್ತಿ, ಪ್ರತಿಷ್ಠೆ, ಗೌರವ, ಜನಪ್ರಿಯತೆ ಬಹಳ ಹೆಚ್ಚಾಗುವ ದಿನ ಇದಾಗಿರುತ್ತದೆ. ನಿಮಗಿಂತ ವಯಸ್ಸಿನಲ್ಲಿ ಬಹಳ ಹಿರಿಯರಾದವರು, ನೀವು ಯಾರನ್ನು ತುಂಬ ಗೌರವದಿಂದ ಕಾಣುತ್ತೀರೋ ಅವರೇ ನಿಮ್ಮನ್ನು ಮೆಚ್ಚಿ, ಹೊಗಳಲಿದ್ದಾರೆ. ಬಹುಕಾಲದಿಂದ ನೀವು ಕಂಡಂಥ ಕನಸುಗಳನ್ನು ಈಡೇರಿಸಿಕೊಳ್ಳಲಿದ್ದೀರಿ. ನಿಮಗೆ ಬರಬೇಕಾದ ಹಣ ಇದ್ದಲ್ಲಿ ಈ ದಿನ ಗಟ್ಟಿಯಾದ ಪ್ರಯತ್ನವನ್ನು ಹಾಕಿದಲ್ಲಿ ಅದನ್ನು ವಸೂಲು ಮಾಡುವಂಥ ಸಾಧ್ಯತೆಗಳಿವೆ. ಪುಷ್ಜಳವಾದ, ರುಚಿಕಟ್ಟಾದ ಊಟ- ತಿಂಡಿಯನ್ನು ಸವಿಯುವಂಥ ಯೋಗ ನಿಮ್ಮ ಪಾಲಿಗೆ ಇದೆ. ನೀವು ಈ ಹಿಂದೆ ಕೊಟ್ಟಿದ್ದ ಮಾತಿನಂತೆಯೇ ಕೆಲವರಿಗೆ ಸಹಾಯ ಮಾಡಲಿದ್ದೀರಿ. ನಿಮ್ಮ ಶಿಫಾರಸು, ಸಲಹೆ- ಸೂಚನೆಗಳಿಂದ ದೊಡ್ಡ ಮಟ್ಟದ ಅನುಕೂಲವಾಗಲಿದೆ. ನಿಮ್ಮಲ್ಲಿ ಕೆಲವರು ವಿಲಾಸಿ ಕಾರುಗಳನ್ನು ಖರೀದಿ ಮಾಡುವಂಥ ಯೋಗ ಇದೆ. ಇದರಿಂದ ನಿಮ್ಮ ಮನಸ್ಸಿಗೆ ಸಮಾಧಾನ ಆಗಲಿದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ನಿಮ್ಮ ಬಗ್ಗೆ ಕಡಿಮೆ ಅಂದಾಜು ಮಾಡಿದ್ದವರಿಗೆ ಅಚ್ಚರಿ ಆಗುವ ಮಟ್ಟಕ್ಕೆ ಅದ್ಭುತವಾದ ಸಾಧನೆಗಳನ್ನು ಮಾಡವಂಥ ಯೋಗ ನಿಮ್ಮ ಪಾಲಿಗೆ ಇದೆ. ಆಸ್ತಿ ಮಾರಾಟ ಮಾಡಬೇಕು, ವಾಹ ಮಾರಬೇಕು ಅಥವಾ ಇನ್ನೇನೇ ಇದ್ದರೂ ನಿಮ್ಮ ನಿರೀಕ್ಷೆಗೆ ತಕ್ಕಂತೆ ಹಣದ ಆದಾಯ ಬರಲಿದೆ. ಒಂದೇ ಸಲಕ್ಕೆ ಹಲವು ಕೆಲಸಗಳನ್ನು ವೇಗವಾಗಿಯೂ ಹಾಗೂ ತುಂಬ ಚೆನ್ನಾಗಿಯೂ ಮಾಡಿ ಮುಗಿಸಲಿದ್ದೀರಿ. ನಿಮ್ಮಿಂದ ಮಾಡಲಿಕ್ಕೆ ಸಾಧ್ಯವಿಲ್ಲ ಎಂದುಕೊಂಡು, ವೃತ್ತಿ ವೈಷಮ್ಯದಿಂದಲೋ ಅಥವಾ ಉದ್ಯೋಗ ಸ್ಥಳದಲ್ಲಿ ಹೊಟ್ಟೆಕಿಚ್ಚಿನಿಂದಲೋ ವಹಿಸಿದ ಕಷ್ಟಸಾಧ್ಯವಾದ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿ, ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಈಗಿರುವ ಸಂಬಳಕ್ಕಿಂತ ಹೆಚ್ಚಿನ ವೇತನ ದೊರೆಯಬಹುದಾದ ಹುದ್ದೆಗೆ ನಿಮಗೆ ಆಫರ್ ದೊರೆಯಲಿದೆ. ವಿಚಿತ್ರ ಏನೆಂದರೆ, ಒಂದಕ್ಕಿಂತ ಹೆಚ್ಚು ಕಡೆಯಿಂದ ಇಂಥ ಆಫರ್ ನಿಮಗೆ ಬರಬಹುದು.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಲಿದ್ದೀರಿ. ನಿಮ್ಮ ಬಗ್ಗೆ ಇತರರಿಗೆ ಇರುವಂಥ ಗೌರವ, ಮರ್ಯಾದೆಗಳು ವಿಪರೀತ ಹೆಚ್ಚಾಗಲಿದೆ. ನಿಮಗೆ ವಹಿಸಿದಂತಹ ಜವಾಬ್ದಾರಿಗಳನ್ನು ಬಹಳ ಯಶಸ್ವಿಯಾಗಿ ಮಾಡಿ ಮುಗಿಸಲಿದ್ದೀರಿ. ನಿಮಗಿಂತ ಸಣ್ಣ ವಯಸ್ಸಿನವರು ಹಾಗೂ ದೊಡ್ಡ ಗುಂಪೊಂದು ಈ ದಿನ ನೀವು ಏನು ಕೆಲಸ ಹೇಳುತ್ತೀರೋ ಅದನ್ನು ಮಾಡುವುದಕ್ಕೆ ಸಿದ್ಧವಾಗಿರುತ್ತವೆ. ಅವರ ಸಹಾಯದಿಂದ ನಿಮ್ಮ ಜವಾಬ್ದಾರಿಗಳು ಸುಲಭವಾಗಿ ಮುಗಿಯುತ್ತವೆ. ಹೋಟೆಲ್ ಉದ್ಯಮದಲ್ಲಿ ಇರುವಂಥವರಿಗೆ ದೊಡ್ಡ ಆರ್ಡರ್ ಗಳು ಬರುವಂಥ ಯೋಗ ಇದೆ. ಇನ್ನು ಜ್ಯುವೆಲ್ಲರಿ ನಡೆಸುತ್ತಿರುವವರಿಗೆ ನಿಮ್ಮ ಮಳಿಗೆಯಲ್ಲಿ ದೊರೆಯುವಂತಹ ಡಿಸೈನ್ ಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಲಿದೆ. ಈ ಹಿಂದೆ ಲೆಕ್ಕಾಚಾರ ಹಾಕಿಕೊಂಡು ಮಾಡಿದ ಕೆಲಸ ಈಗ ಫಲ ನೀಡುವುದಕ್ಕೆ ಆರಂಭಿಸಿದೆ ಎಂಬುದು ನಿಮ್ಮ ಗಮನಕ್ಕೆ ಬರುತ್ತದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ನಿಮ್ಮ ಕೈಯಲ್ಲಿ ಇರುವಂಥ ಮೊತ್ತ ಅಥವಾ ಅಂದುಕೊಂಡಂಥ ಬಜೆಟ್ ಒಳಗಾಗಿ ಬೇರೆಯವರು ಅಚ್ಚರಿ ಪಡುವ ಮಟ್ಟಕ್ಕೆ ಕೆಲಸಗಳನ್ನು ಮಾಡಲಿದ್ದೀರಿ ಅಥವಾ ಮಾಡಿಸಲಿದ್ದೀರಿ. ಕಾರ್ಪೆಂಟರ್, ಎಲೆಕ್ಟ್ರಿಷಿಯನ್, ಕಬ್ಬಿಣದ ಕೆಲಸಗಳನ್ನು ಆರ್ಡರ್ ತೆಗೆದುಕೊಂಡು ಮಾಡಿಸುವಂಥವರಿಗೆ ನೀವು ಅಂದುಕೊಳ್ಳದೇ ಇರುವಷ್ಟು ದೊಡ್ಡ ಮಟ್ಟದ ಆರ್ಡರ್ ಹುಡುಕಿಕೊಂಡು ಬರಬಹುದು. ಬಡ್ಡಿ ವ್ಯವಹಾರ ಮಾಡುವಂಥವರಿಗೆ ಯಾವುದಾದರೂ ಹಣ ಸಂಪೂರ್ಣವಾಗಿ ಕೈ ಬಿಟ್ಟು ಹೋಗಬಹುದು ಎಂದು ಆತಂಕ ಕಾಡುತ್ತಿದ್ದಲ್ಲಿ ಅದು ಈ ದಿನ ನಿವಾರಣೆ ಆಗಲಿದೆ. ಪ್ರಬಲ ವ್ಯಕ್ತಿಯೊಬ್ಬರು ನಿಮ್ಮ ಪರವಾಗಿ ಮಾತನಾಡಿ ಅಥವಾ ತಮ್ಮ ಪ್ರಭಾವವನ್ನು ಬಳಸಿ, ಆ ಹಣವನ್ನು ನಿಮಗೆ ಕೊಡಿಸಬಹುದು. ನಿಮಗೆ ಬೇಕಾದ ಸಹಾಯ ಏನು ಹಾಗೂ ಯಾರಿಂದ ಅದನ್ನು ಮಾಡುವುದಕ್ಕೆ ಸಾಧ್ಯ ಎಂಬ ಬಗ್ಗೆ ಸ್ಪಷ್ಟತೆ ಇದ್ದಲ್ಲಿ ನೇರವಾಗಿ ಕೇಳಿ.
ಲೇಖನ- ಎನ್.ಕೆ.ಸ್ವಾತಿ