Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 18ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 18ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಹಣಕಾಸು, ಆರೋಗ್ಯ, ಉದ್ಯೋಗ, ವ್ಯಾಪಾರ ಮತ್ತು ಸಂಬಂಧಗಳ ಕುರಿತು ಪ್ರತಿದಿನದ ಭವಿಷ್ಯವಾಣಿಗಳನ್ನು ಸಂಖ್ಯಾಶಾಸ್ತ್ರದ ಪ್ರಕಾರ ತಿಳಿಯಿರಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 18ರ ದಿನಭವಿಷ್ಯ
ದಿನ ಭವಿಷ್ಯ
Edited By:

Updated on: Dec 18, 2025 | 12:20 AM

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಯಾವ ಕಾರ್ಯಗಳನ್ನು ಪೂರ್ಣಗೊಳ್ಳುವುದು ಬಹಳ ಕಷ್ಟ ಆಗಬಹುದು ಎಂದು ನೀವು ಅಂದುಕೊಳ್ಳುತ್ತಾ ಇರುತ್ತೀರೋ ಅಂಥವು ಬಹಳ ಆಶ್ಚರ್ಯಕರ ರೀತಿಯಲ್ಲಿ ಮಾಡಿ ಮುಗಿಸಲಿದ್ದೀರಿ. ಇಷ್ಟು ಸಮಯ ನಿಮ್ಮನ್ನು ಬೇಕಂತಲೆ ರೇಗಿಸುತ್ತಿದ್ದವರು, ತಮಾಷೆ ಮಾಡುತ್ತಿದ್ದವರು ಗಾಬರಿ ಆಗುವ ಮಟ್ಟಕ್ಕೆ ನೀವು ಈ ದಿನ ಅವರಿಗೆ ಕಾಡಲಿದ್ದೀರಿ. ತಂದೆ- ತಾಯಿಯ ಪ್ರವಾಸಕ್ಕಾಗಿ ಹಣ ಖರ್ಚು ಮಾಡಲಿದ್ದೀರಿ. ಇದರಿಂದ ಮನಸ್ಸಿಗೆ ತೃಪ್ತಿ ಸಿಗಲಿದೆ. ಯಾರ ಜತೆಗೆ ಹೆಚ್ಚಿನ ಸಮಯ ಕಳೆಯಬೇಕು ಎಂದು ಇಷ್ಟು ಸಮಯ ಬಯಸುತ್ತಾ ಇರುತ್ತೀರಿ ಅಂಥವರೊಂದಿಗೆ ದೀರ್ಘವಾದ ಒಡನಾಟ ಸಾಧ್ಯವಾಗಲಿದೆ. ಕಟ್ಟಡ ನಿರ್ಮಾಣ ಸಂಸ್ಥೆಗಳಲ್ಲಿ ಉದ್ಯೋಗಿಗಳಾಗಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಮೆಚ್ಚುಗೆ ಮಾತುಗಳು ಕೇಳಿಬರಲಿವೆ. ಇದರ ಜತೆಗೆ ಪ್ರಮುಖವಾದ ಪ್ರಾಜೆಕ್ಟ್ ಒಂದನ್ನು ನಿಮಗೆ ವಹಿಸುವ ಸಾಧ್ಯತೆಯೂ ಇದೆ. ನಿಮಗೆ ಸವಾಲು ಎನಿಸಿದರೂ ಒಪ್ಪಿಕೊಳ್ಳುವುದರಿಂದ ಭವಿಷ್ಯದಲ್ಲಿ ಅನುಕೂಲ ಇದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಏಕಾಂಗಿತನ ಈ ದಿನ ನಿಮ್ಮನ್ನು ಕಾಡಲಿದೆ. ಕುಟುಂಬ ಸದಸ್ಯರು, ಸ್ನೇಹಿತರು, ಕೊನೆಗೆ ಸಹೋದ್ಯೋಗಿಗಳ ಸಹ ತಂತಮ್ಮ ಕೆಲಸದಲ್ಲಿ ಮುಳುಗಿ ಹೋಗುವುದರಿಂದ ಇಂಥದ್ದೊಂದು ಭಾವನೆ ನಿಮ್ಮಲ್ಲಿ ಹುಟ್ಟಿಕೊಳ್ಳಲಿದೆ. ಉದ್ಯೋಗ, ವೃತ್ತಿ- ವ್ಯಾಪಾರ ಹೀಗೆ ಯಾವುದೇ ವಿಚಾರದಲ್ಲಿಯೇ ಆಗಿರಲಿ, ಭೇಟಿ ಆಗಬೇಕು ಎಂದು ಸಮಯ ಕೇಳಿ, ಅದರ ಅಗತ್ಯವನ್ನು ಒತ್ತಿ ಹೇಳಿದ ನಂತರವೂ ಕೊನೆ ಕ್ಷಣದಲ್ಲಿ ನಿಮ್ಮನ್ನು ಇವತ್ತು ಕಾಣಲಿಕ್ಕೆ ಆಗಲ್ಲ ಎಂದು ವ್ಯಕ್ತಿಯೊಬ್ಬರು ಹೇಳಲಿದ್ದಾರೆ. ಇದರಿಂದ ಮಾನಸಿಕವಾಗಿ ಸ್ವಲ್ಪ ಮಟ್ಟಿಗೆ ಕುಗ್ಗುವಂತೆ ಆಗಲಿದೆ. ಹೊಸ ವ್ಯಾಪಾರವನ್ನು ಆರಂಭ ಮಾಡಲು ಬಂಡವಾಳ ಹೊಂದಿಸುವುದಕ್ಕೆ ಶ್ರಮ ಪಡುತ್ತಿದ್ದೀರಿ ಅಂತಾದಲ್ಲಿ ಶುಭ ಸುದ್ದಿ ಕೇಳಿಬರಲಿದೆ. ನಿಮಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಪ್ರಭಾವಿಯೊಬ್ಬರು ಶಿಫಾರಸು ಮಾಡುವುದಕ್ಕೆ ಮುಂದೆ ಬರಲಿದ್ದು, ಅವರಿಂದ ಹೇಗೆ ಪ್ರಯೋಜನ ಪಡೆದುಕೊಳ್ಳಬೇಕು ಎಂಬ ಆಲೋಚನೆಯೇ ಹೊಳೆಯದಂತೆ ಆಗಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಆಗಲಿ, ಮಾಡಿಕೊಡುತ್ತೇನೆ ಎಂದು ನೀವಾಗಿಯೇ ಭರವಸೆ ನೀಡಿದ್ದ ಕೆಲವು ಕಾರ್ಯಗಳನ್ನು ಅಂದುಕೊಂಡ ಸಮಯದ ಒಳಗಾಗಿ ಪೂರ್ಣ ಮಾಡುವುದು ಅಸಾಧ್ಯ ಎಂಬುದು ಖಚಿತ ಆಗಲಿದೆ. ಆದರೆ ಈ ವಿಚಾರವನ್ನು ಹೇಗೆ ಹೇಳುವುದು ಎಂಬುದು ಇಕ್ಕಟ್ಟಿಗೆ ಸಿಲುಕಿಸಲಿದೆ. ಆರ್ಥಿಕ ವಿಚಾರಗಳಿಗೆ ಅಭದ್ರತೆ ಭಾವವೊಂದು ನಿಮ್ಮನ್ನು ಮುತ್ತಿಕೊಳ್ಳಲಿದೆ. ಈಗ ನಿಮ್ಮ ಬಳಿ ಇರುವ ಎಲ್ಲ ಮೊತ್ತವನ್ನು ಒಂದೇ ಕಡೆಗೆ ಹೂಡಿಕೆ ಮಾಡುವ ಮುಂಚೆ ಒಂದಕ್ಕೆ ನಾಲ್ಕು ಬಾರಿಗೆ ಆಲೋಚನೆ ಮಾಡಿಕೊಳ್ಳುವುದು ಒಳ್ಳೆಯದು. ನಿಮ್ಮ ಬಳಿ ಇರುವ ವಾಹನದ ಮಾಡಿಫಿಕೇಷನ್ ಮಾಡಿಸಬೇಕು ಎಂದಿದ್ದಲ್ಲಿ ಸ್ವಲ್ಪ ಸಮಯಕ್ಕೆ ತೀರ್ಮಾನವನ್ನು ಮುಂದಕ್ಕೆ ಹಾಕಿ. ಇನ್ನು ಈಗಾಗಲೇ ಸಾಕಷ್ಟು ಮುಂದುವರಿದಿದ್ದೇವೆ, ಇನ್ನೇನಿದ್ದರೂ ಕೆಲಸ ಮಾಡಿಸುವುದಷ್ಟೇ ಬಾಕಿ ಅಂತೇನಾದರೂ ಇದ್ದಲ್ಲಿ ಟ್ರೆಂಡ್ ಒಮ್ಮೆ ನೋಡಿಕೊಳ್ಳಿ. ನಿಮ್ಮ ಉದ್ದೇಶ ಬದಲಿಸಿಕೊಳ್ಳುವುದಕ್ಕೆ ಸಾಧ್ಯವಿದ್ದಲ್ಲಿ ಆ ದಿಕ್ಕಿನ ಕಡೆಗೆ ಮುನ್ನಡೆಯಿರಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ನಿಮ್ಮಿಂದ ಎಷ್ಟು ದಕ್ಕಿಸಿಕೊಳ್ಳುವುದಕ್ಕೆ ಸಾಧ್ಯ ಎಂಬ ಸ್ಪಷ್ಟ ಚಿತ್ರಣವೊಂದು ಇರಿಸಿಕೊಂಡ ನಂತರವೇ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳಿಗೆ ಕೈ ಹಾಕುವುದು ಒಳ್ಳೆಯದು. ಏಕೆಂದರೆ ಈ ದಿನ ನಿಮಗೆ ಬರುವಂಥ ಕೆಲವು ಕೆಲಸಗಳು ಮೇಲ್ನೋಟಕ್ಕೆ ಬಹಳ ದೊಡ್ಡ ಲಾಭ ತಂದುಕೊಡುವಂತೆ ಅನಿಸಲಿದೆ. ಆದರೆ ಸರ್ಕಾರದ ಮಟ್ಟದಲ್ಲಿ ಆಗಿರುವ ಅಥವಾ ಮುಂದೆ ಆಗುವ ಬದಲಾವಣೆಗಳ ಕಾರಣಕ್ಕೆ ನೀವು ನಿರೀಕ್ಷೆ ಮಾಡಿರುವ ಮಟ್ಟಕ್ಕೆ ಲಾಭ ತಂದುಕೊಡುವುದಿಲ್ಲ. ಹಣ್ಣು- ತರಕಾರಿ ಬೆಳೆಗಾರರಿಗೆ ಹೊಸ ವ್ಯಕ್ತಿಗಳ ಪರಿಚಯದಿಂದ ಲಾಭದ ಪ್ರಮಾಣ ಹೆಚ್ಚಿಸಿಕೊಳ್ಳಲು ಮಾರ್ಗೋಪಾಯ ಗೋಚರ ಆಗಲಿವೆ. ಇಷ್ಟು ದಿನ ಯಾವ ಅಡೆತಡೆಗಳು ನಿಮಗೆ ಸವಾಲಾಗಿ ಪರಿಣಮಿಸಿದ್ದವೋ ಅವುಗಳನ್ನು ದಾಟುವುದಕ್ಕೆ ಸಾಧ್ಯವಾಗಲಿದೆ. ಚಿತ್ರಮಂದಿರಗಳ ಮಾಲೀಕರು ವ್ಯವಹಾರದಲ್ಲಿ ಬದಲಾವಣೆ ಮಾಡಿಕೊಳ್ಳಲು ತೀರ್ಮಾನ ಮಾಡುತ್ತೀರಿ. ಇದಕ್ಕೆ ಕುಟುಂಬ ಸದಸ್ಯರ ಬೆಂಬಲ ಸಹ ದೊರೆಯಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಯಾಕೆ ಅವರು ಹಾಗೆ ಮಾತನಾಡಿದರು ಎಂದು ಒಬ್ಬರೇ ವ್ಯಕ್ತಿಯು ಆಡಿದ ಮಾತು, ಬಳಸಿದ ಪದಗಳು ದಿನವಿಡೀ ನಿಮ್ಮನ್ನು ಕಾಡಲಿವೆ. ಈ ಹಿಂದೆ ಇದ್ದಂಥ ಉತ್ಸಾಹದಲ್ಲಿ ನಿಮ್ಮ ವೃತ್ತಿ- ವ್ಯಾಪಾರ- ವ್ಯವಹಾರದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು, ಮುಂದಕ್ಕೆ ಹೋಗಬೇಕಾದ ಜವಾಬ್ದಾರಿಗಳಿಂದ ಕಳಚಿಕೊಳ್ಳಬೇಕು ಎಂಬ ಭಾವ ಬಲವಾಗಿ ಆವರಿಸಿಕೊಳ್ಳುತ್ತದೆ. ನಿಮ್ಮ ಜತೆ ಈ ಹಿಂದೆ ಉದ್ಯೋಗ ಮಾಡಿದ್ದವರು ಏನಾದರೂ ವ್ಯಾಪಾರ- ವ್ಯವಹಾರದ ಆಫರ್ ತಂದಲ್ಲಿ ಗಂಭೀರವಾಗಿ ಪರಿಗಣಿಸಿ. ಒಂದು ವೇಳೆ ಈ ದಿನ ಆ ಬಗ್ಗೆ ಚರ್ಚೆ ಮಾಡುವುದಕ್ಕೆ ಮನಸ್ಸಿಲ್ಲ ಅಂತಾದರೂ ಒಂದೆರಡು ದಿನ ಸಮಯ ತೆಗೆದುಕೊಳ್ಳವುದು ಒಳ್ಳೆ ತೀರ್ಮಾನ ಎನಿಸಿಕೊಳ್ಳಲಿದೆ. ಸಂಗಾತಿಯ ಉದ್ಯೋಗ ವಿಚಾರದಲ್ಲಿ ಅನಿಶ್ಚಿತತೆ ಕಾಡಲಿದೆ. ಇದರಿಂದ ಉಂಟಾಗುವ ಆತಂಕದಿಂದ ಹೊರಬರುವುದಕ್ಕೆ ನಾನಾ ಪ್ರಯತ್ನವನ್ನು ಮಾಡಲಿದ್ದೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಸಾವಯವ ಉತ್ಪನ್ನಗಳ ಮಾರಾಟ ಮಾಡುತ್ತಾ ಇರುವವರು ವ್ಯಾಪಾರದ ವಿಸ್ತರಣೆಗೆ ಹಲವು ರೀತಿ ಪ್ರಯತ್ನಗಳನ್ನು ಮಾಡಲಿದ್ದೀರಿ. ನಿಮ್ಮ ಉಳಿತಾಯ ಹಾಗೂ ಹೂಡಿಕೆ ಮಾಡಿದ್ದ ಹಣವನ್ನು ತೆಗೆದು, ಅದನ್ನು ಈ ಉದ್ದೇಶಕ್ಕೆ ಬಳಸುವುದಕ್ಕೆ ಮುಂದಾಗಲಿದ್ದೀರಿ. ಹೊಸ ಮಾರುಕಟ್ಟೆಯಲ್ಲಿ ಈಗಷ್ಟೇ ಕೆಲಸ ಆರಂಭಿಸಿದವರು ತಾಳ್ಮೆ- ಸಂಯಮ ವಹಿಸುವುದು ಮುಖ್ಯವಾಗುತ್ತದೆ. ಸೇಲ್ಸ್- ಮಾರ್ಕೆಟಿಂಗ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ದೀರಿ ಅಂತಾದಲ್ಲಿ ಮೇಲಧಿಕಾರಿ ನೀಡುವ ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ. ದೂರ ಪ್ರಯಾಣ ಅನಿವಾರ್ಯ ಅಂತಾದಲ್ಲಿ ಯಾವುದೇ ಹಿಂಜರಿಕೆ ಮಾಡದೆ ಹೊರಟುಬಿಡಿ. ಇದರಿಂದ ನಿಮಗೆ ಹಲವು ರೀತಿಯಲ್ಲಿ ಅನುಕೂಲಗಳು ಒದಗಿಬರಲಿವೆ. ದೇವತಾ ಕಾರ್ಯಗಳಲ್ಲಿ ಭಾಗೀ ಆಗುವುದಕ್ಕೆ ಆಹ್ವಾನ ಬಂದಲ್ಲಿ ಇಲ್ಲ ಎನ್ನದೆ ಕಡ್ಡಾಯವಾಗಿ ಭಾಗಿ ಆಗುವುದಕ್ಕೆ ಪ್ರಯತ್ನಿಸಿ. ಬ್ಯಾಂಕ್ ಉದ್ಯೋಗಿಗಳಿಗೆ ಸ್ವಲ್ಪ ಮಟ್ಟಿಗೆ ಒತ್ತಡದ ದಿನ ಇದಾಗಿರುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನೀವು ಎಲ್ಲ ರೀತಿಯಿಂದ ಶ್ರಮ ಪಟ್ಟು, ಇನ್ನು ಆಗಲಾರದು ಎಂದುಕೊಂಡಿದ್ದ ಕೆಲವು ಸರ್ಕಾರಕ್ಕೆ ಸಂಬಂಧಿಸಿದ ಕೆಲಸ- ಕಾರ್ಯಗಳಿಗೆ ಪವಾಡದ ರೀತಿಯಲ್ಲಿ ಮುಗಿಯಲಿದೆ. ನಿಮ್ಮ ಗೆಳೆಯ- ಗೆಳತಿಯರು ನೀಡುವ ಸಲಹೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ. ತಾತ್ಕಾಲಿಕ ಎಂಬಂತೆ ಸ್ವಲ್ಪ ಹಣಕಾಸಿನ ಅಗತ್ಯ ಕಂಡುಬರಲಿದೆ. ಸಂಗಾತಿ ಕಡೆಯಿಂದ ಈ ವಿಚಾರದಲ್ಲಿ ಸಹಾಯ ಒದಗಿ ಬರಲಿದೆ. ಸದ್ದಿಲ್ಲದೆ ಆರಂಭ ಮಾಡಿದ್ದ ವ್ಯಾಪಾರ- ವ್ಯವಹಾರಗಳು ಕೈ ಹಿಡಿಯುತ್ತಿರುವುದಕ್ಕೆ ಸೂಚನೆ ದೊರೆಯಲಿದ್ದು, ಆ ಕಡೆಗೆ ಪೂರ್ಣ ಪ್ರಮಾಣದಲ್ಲಿ ಗಮನ ನೀಡುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ಈಗಾಗಲೇ ನೀವು ಕೆಲಸ ಮಾಡಿದ್ದೀರಿ, ಅದಕ್ಕಾಗಿ ನಿಮಗೆ ಕೊಡಬೇಕಾದ ಹಣವನ್ನು ಇವತ್ತು- ನಾಳೆ ಎನ್ನುತ್ತಾ ಮುಂದಕ್ಕೆ ಹಾಕುತ್ತಾ ಬರುತ್ತಿರುವವರಿಗೆ ಗಟ್ಟಿಯಾದ ಧ್ವನಿಯಲ್ಲಿ ಕೇಳಲಿದ್ದೀರಿ, ಆ ಹಣ ವಸೂಲಿಯೇ ಆಗಿಬಿಡಲಿದೆ ಅಥವಾ ಇಂಥ ದಿನ ಖಚಿತವಾಗಿ ಹಣ ದೊರೆಯುವ ಭರವಸೆ ಸಿಗಲಿದೆ.

ಇದನ್ನೂ ಓದಿ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 14ರಿಂದ 20ರ ವರೆಗಿನ ವಾರಭವಿಷ್ಯ

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಸಂತೆ ಹೊತ್ತಿಗೆ ಮೂರು ಮೊಳ ಎಂಬ ರೀತಿಯಲ್ಲಿ ಯಾವ ಕೆಲಸವನ್ನು ಸಹ ಮಾಡುವುದಕ್ಕೆ ಹೋಗಬೇಡಿ. ತುರ್ತಾಗಿ ಕೆಲಸ ಮುಗಿಸುವ ಭರದಲ್ಲಿ ಗುಣಮಟ್ಟದ ಜೊತೆ ರಾಜೀ ಮಾಡಿಕೊಂಡು, ದೀರ್ಘಾವಧಿಯಲ್ಲಿ ಅದಕ್ಕಾಗಿ ಪಶ್ಚಾತಾಪ ಪಡುವಂತೆ ಆಗುತ್ತದೆ. ಸೋದರ- ಸೋದರಿಯರ ಜತೆಗಿನ ಭಿನ್ನಾಭಿಪ್ರಾಯ ಈಗಾಗಲೇ ಇದ್ದಲ್ಲಿ ಅದು ವಿಪರೀತಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ತಂದೆ- ತಾಯಿಗೆ ಬೇಸರ ಆಗುವಂತೆ ನಡೆದುಕೊಳ್ಳಬೇಡಿ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರ ಮೇಲೆ ದೂರುಗಳು ಮೇಲಧಿಕಾರಿಗೆ ಹೋಗಬಹುದು. ನೀವು ಸಹ ಯಾವುದೇ ವಿಚಾರದಲ್ಲಿ ಪಾರದರ್ಶಕವಾಗಿ ನಡೆದುಕೊಳ್ಳುವುದು ಮುಖ್ಯವಾಗುತ್ತದೆ. ಯಾರನ್ನೋ ರಕ್ಷಿಸುವ ಪ್ರಯತ್ನದಲ್ಲಿ ಸಮಸ್ಯೆಯನ್ನು ತಲೆ ಮೇಲೆ ಎಳೆದುಕೊಳ್ಳುವುದಕ್ಕೆ ಹೋಗಬೇಡಿ. ಕುಟುಂಬದ ವ್ಯಾಪಾರ ಮಾಡುತ್ತಾ ಬಂದವರಿಗೆ ಕೆಲವನ್ನು ನಿಲ್ಲಿಸಿ, ಹೊಸತನ್ನು ಶುರು ಮಾಡಬೇಕು ಎಂದೆನಿಸಲಿದೆ. ಈ ಬಗ್ಗೆ ಹಿರಿಯರ ಜೊತೆಗೆ ಮಾತನಾಡಲಿದ್ದೀರಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಒಂದು ಬಗೆಯ ತೃಪ್ತಿ- ಸಮಾಧಾನ ಮನದಲ್ಲಿ ಮೂಡಲಿದೆ. ಉದ್ಯೋಗ, ವೃತ್ತಿ- ವ್ಯವಹಾರದಲ್ಲಿ ಮುಂದೆ ಏನಾಗಿಬಿಡುತ್ತೋ ಎಂದು ಆತಂಕ ಆಗಿದ್ದಲ್ಲಿ ಅದರಿಂದ ಹೊರಬರಲಿದ್ದೀರಿ. ನೀವು ಕೆಲಸ ಮಾಡುವ ಸಂಸ್ಥೆಗೆ ದೊಡ್ಡ ಮೊತ್ತದ ಆರ್ಡರ್ ಬರಬಹುದು, ಅಥವಾ ಇನ್ನೊಂದು ದೊಡ್ಡ ಸಂಸ್ಥೆಯೊಂದಿಗೆ ಜತೆಗೂಡಿ ವ್ಯವಹಾರ ಮುಂದುವರಿಸಲು ನಿರ್ಧರಿಸಬಹುದು. ಒಟ್ಟಿನಲ್ಲಿ ಈ ಬೆಳವಣಿಗೆಯಿಂದ ನಿಮಗೆ ಅನುಕೂಲ ಆಗಲಿದೆ. ನಿಮ್ಮ ಮಾನಸಿಕ ಸ್ಥೈರ್ಯ ಕುಗ್ಗಿಸುವುದಕ್ಕೆ ಪ್ರಯತ್ನಿಸುವವರಿಗೆ ಕಠಿಣವಾದ ಮಾತುಗಳಿಂದ ಎಚ್ಚರಿಕೆ ನೀಡಲಿದ್ದೀರಿ. ಮದುವೆಗೆ ಪ್ರಯತ್ನ ಮಾಡುತ್ತಾ ಇರುವವರಿಗೆ ರೆಫರೆನ್ಸ್ ಮೂಲಕ ಒಳ್ಳೆ ಸಂಬಂಧದ ಮಾಹಿತಿ ದೊರೆಯಲಿದೆ. ಸಬ್ ಸ್ಕ್ರಿಪ್ಷನ್, ಸದಸ್ಯತ್ವ ಇಂಥವುಗಳನ್ನು ಪಡೆದುಕೊಳ್ಳಲು ಹಣ ಖರ್ಚು ಮಾಡುವಂಥ ಯೋಗ ನಿಮಗೆ ಇದೆ. ಇದರಿಂದ ದೀರ್ಘಕಾಲದಲ್ಲಿ ಬಹಳ ಅನುಕೂಲ ಆಗಲಿದೆ.

ಲೇಖನ- ಎನ್‌.ಕೆ.ಸ್ವಾತಿ