Venus transit in Sagittarius: ಧನುಸ್ಸು ರಾಶಿಯಲ್ಲಿ ಶುಕ್ರ ಸಂಚಾರ; ಯಾವ ರಾಶಿಯವರಿಗೆ ತರಲಿದೆ ರಾಜಯೋಗ?

|

Updated on: Jan 14, 2024 | 10:18 AM

ಇದೇ ಜನವರಿಯ 18ನೇ ತಾರೀಕು ಧನುಸ್ಸು ರಾಶಿಗೆ ಶುಕ್ರ ಗ್ರಹ ಪ್ರವೇಶ ಆಗುತ್ತದೆ. ಮುಂದಿನ ಫೆಬ್ರವರಿ 11ನೇ ತಾರೀಕಿನ ತನಕ ಅಲ್ಲೇ ಇರುತ್ತದೆ.ಆದ್ದರಿಂದ ಧನುಸ್ಸು ರಾಶಿಯಲ್ಲಿ ಶುಕ್ರ ಇರುವ ತನಕ ಮೇಷ ರಾಶಿಯಿಂದ ಮೀನ ರಾಶಿಯ ತನಕ ಏನು ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸುವ ಲೇಖನ ಇಲ್ಲಿದೆ.

Venus transit in Sagittarius: ಧನುಸ್ಸು ರಾಶಿಯಲ್ಲಿ ಶುಕ್ರ ಸಂಚಾರ; ಯಾವ ರಾಶಿಯವರಿಗೆ ತರಲಿದೆ ರಾಜಯೋಗ?
Venus transit in Sagittarius
Follow us on

ಇದೇ ಜನವರಿಯ 18ನೇ ತಾರೀಕು ಧನುಸ್ಸು ರಾಶಿಗೆ ಶುಕ್ರ ಗ್ರಹ ಪ್ರವೇಶ ಆಗುತ್ತದೆ. ಮುಂದಿನ ಫೆಬ್ರವರಿ 11ನೇ ತಾರೀಕಿನ ತನಕ ಅಲ್ಲೇ ಇರುತ್ತದೆ. ವೃಷಭ ಹಾಗೂ ತುಲಾ ರಾಶಿಗೆ ಶುಕ್ರ ಅಧಿಪತಿ. ಮೀನ ರಾಶಿಯಲ್ಲಿ ಇದ್ದರೆ ಉಚ್ಚ ಸ್ಥಿತಿ ಮತ್ತು ಕನ್ಯಾ ರಾಶಿಯಲ್ಲಿ ನೀಚ ಸ್ಥಿತಿ ಆಗುತ್ತದೆ. ಶುಕ್ರ ಅಂದರೆ ಹಣಕಾಸು ವಿಚಾರಗಳು, ದಾಂಪತ್ಯ, ಅಲಂಕಾರ, ವಿಲಾಸಿ ಮನೆಗಳು, ಸ್ತ್ರೀ ಸಂಬಂಧಿ ಸಂಗತಿಗಳು, ವಿಲಾಸಿ ಕಾರುಗಳು, ಮದುವೆ, ಲೈಂಗಿಕ ವಿಚಾರಗಳು ಇತ್ಯಾದಿಗಳನ್ನು ಶುಕ್ರ ಗ್ರಹದಿಂದ ಚಿಂತನೆ ಮಾಡಬಹುದು. ಆದ್ದರಿಂದ ಧನುಸ್ಸು ರಾಶಿಯಲ್ಲಿ ಶುಕ್ರ ಇರುವ ತನಕ ಮೇಷ ರಾಶಿಯಿಂದ ಮೀನ ರಾಶಿಯ ತನಕ ಏನು ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸುವ ಲೇಖನ ಇಲ್ಲಿದೆ.

ಮೇಷ:

ಮಹಿಳೆಯರು ತಮ್ಮ ತವರು ಮನೆಯಿಂದ ಆಸ್ತಿ ಬರಬೇಕು ಎಂದು ನಿರೀಕ್ಷೆ ಮಾಡುತ್ತಿದ್ದಲ್ಲಿ ಈ ಅವಧಿಯಲ್ಲಿ ಬರುವಂಥ ಸಾಧ್ಯತೆಗಳಿವೆ. ಅದಕ್ಕಾಗಿ ಪ್ರಯತ್ನ ಮಾಡುತ್ತಿದ್ದೀರಿ ಎಂದಾದಲ್ಲಿ ಇನ್ನೊಂದಿಷ್ಟು ಬಲವಾಗಿ ಪ್ರಯತ್ನವನ್ನು ಹಾಕಿ. ಇನ್ನು ಪುರುಷರಾಗಿದ್ದಲ್ಲಿ ತಮ್ಮ ಸಂಗಾತಿ ಕಡೆಯಿಂದ ಹಣಕಾಸು ಅನುಕೂಲ ಒದಗಿ ಬರಲಿದೆ. ಯಾರು ಮನೆ, ಸೈಟು ಮಾರಾಟಕ್ಕೆ ಇಟ್ಟಿದ್ದೀರಿ ಅಂಥವರಿಗೆ ಈಗ ಮಾರಾಟವಾಗಿ ಈ ಹಿಂದೆ ನೀವು ಏನು ಅಂದುಕೊಂಡಿದ್ದೀರಿ ಅದಕ್ಕಿಂತ ಹೆಚ್ಚಿನ ಪ್ರಮಾಣದ ಲಾಭ ಬರಲಿದೆ. ವಾಹನ ಖರೀದಿ ಮಾಡಬೇಕು ಎಂದುಕೊಳ್ಳುತ್ತಿರುವವರಿಗೆ ಹಣಕಾಸಿನ ಅನುಕೂಲ ಒದಗಿಬರಲಿದೆ. ಇನ್ನು ಈಗಾಗಲೇ ಸಾಲವನ್ನು ನೀಡಿದ್ದೀರಿ, ಈಗ- ಆಗ ಎಂದು ವಾಯಿದೆ ಹೇಳುತ್ತಾ ಇದ್ದಾರೆ ಅಂತಾದಲ್ಲಿ ಈ ಅವಧಿಯಲ್ಲಿ ಆ ಹಣ ವಸೂಲಿಗೆ ಪ್ರಯತ್ನ ಮಾಡಿದಲ್ಲಿ ನಿಮ್ಮ ಕೈ ಸೇರಲಿದೆ. ಯಾವುದಾದರೂ ಕೆಲಸಕ್ಕೆ ವಿಪರೀತ ಖರ್ಚಾಗಲಿದೆ ಎಂದುಕೊಂಡು ಹಣ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಶ್ರಮ ಹಾಕುತ್ತಿರುತ್ತೀರೋ ಅದು ಕಡಿಮೆ ಖರ್ಚಿನಲ್ಲಿ ಅಥವಾ ಖರ್ಚು ಆಗದಂತೆ ಮುಗಿದುಹೋಗುತ್ತದೆ. ಪ್ರಭಾವಿಗಳು ನಿಮ್ಮ ನೆರವಿಗೆ ಬರಲಿದ್ದಾರೆ. ಸಂಸಾರದ ವೆಚ್ಚಗಳಿಗೆ, ಮದುವೆ ಸಿದ್ಧತೆ ಮಾಡಿಕೊಳ್ಳುತ್ತಿರುವವರಿಗೆ ಹಣಕಾಸಿನ ಅನುಕೂಲ ಆಗಲಿದೆ. ನಿಮ್ಮ ಶಿಫಾರಸಿನಿಂದ ಅನುಕೂಲ ಆದವರು ಉಪಕಾರ ಸ್ಮರಣೆ ಎಂಬಂತೆ ಉಡುಗೊರೆಗಳನ್ನು ನೀಡಲಿದ್ದಾರೆ.

ವೃಷಭ:

ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಸೂಕ್ತ ವೈದ್ಯೋಪಚಾರಗಳು ದೊರೆಯಲಿವೆ. ಅದರಲ್ಲೂ ಮಧುಮೇಹ, ಲೈಂಗಿಕ ಸಮಸ್ಯೆಗಳು ಇಂಥದ್ದಕ್ಕಾಗಿ ಯಾರು ಚಿಕಿತ್ಸೆ ಪಡೆಯುತ್ತಿದ್ದೀರಿ ಅಂಥವರ ಆರೋಗ್ಯದಲ್ಲಿ ಚೇತರಿಕೆ, ಸುಧಾರಣೆಗಳು ಕಂಡುಬರಲಿವೆ. ನಿಮ್ಮಲ್ಲಿ ಒಂದು ರೀತಿಯ ಆಕರ್ಷಣೆ ಇರಲಿದೆ. ನಿಮ್ಮಲ್ಲಿ ಯಾರು ಪ್ರೇಮ ನಿವೇದನೆ ಮಾಡಿಕೊಳ್ಳಬೇಕು ಎಂದಿರುತ್ತೀರೋ ಅಂಥವರು ಈ ಅವಧಿಯಲ್ಲಿ ಪ್ರಯತ್ನ ಮಾಡಬಹುದು. ಇನ್ನು ಈಗಾಗಲೇ ಹೇಳಿಕೊಂಡಾಗಿದೆ ಒಪ್ಪುತ್ತಾರೋ ಇಲ್ಲವೋ ಎಂದು ಇರುವವರಿಗೆ ನೀವು ಕೇಳಬೇಕು ಎಂದು ಬಯಸುವಂಥ ಪ್ರಿಯವಾದ ವಾರ್ತೆ ಕಿವಿಗೆ ಬೀಳಲಿದೆ. ವಿದೇಶಗಳಲ್ಲಿ ಯಾರು ಉದ್ಯೋಗಕ್ಕಾಗಿ ಪ್ರಯತ್ನವನ್ನು ಮಾಡುತ್ತಿದ್ದೀರಿ, ವೀಸಾಗೆ ಸಂಬಂಧಿಸಿದ ಅಡೆತಡೆಗಳನ್ನು ಏನಾದರೂ ಎದುರಿಸುತ್ತಿದ್ದಲ್ಲಿ ಅದು ನಿವಾರಣೆ ಆಗಲಿದೆ. ಈಗಾಗಲೇ ವಿದೇಶಗಳಲ್ಲಿ ಇರುವವರಿಗೆ ವಿಲಾಸಿ ಮನೆ ಅಥವಾ ಕಾರು ಖರೀದಿ ಮಾಡುವಂಥ ಯೋಗ ಬರಲಿದೆ. ಈ ಹಿಂದೆ ಯಾವಾಗಲೋ ನೋಡಿಕೊಂಡು ಬಂದಿದ್ದಂಥ ಆಸ್ತಿಯ ಖರೀದಿಗೆ ಈಗ ಎಲ್ಲ ಅನುಕೂಲಕರ ವಾತಾವರಣಗಳು ಸೃಷ್ಟಿ ಆಗಲಿವೆ. ನಿಮ್ಮ ವಿರುದ್ಧ ಮಾತನಾಡುತ್ತಿದ್ದಾರೆ, ದೂರು ನೀಡುತ್ತಿದ್ದಾರೆ ಎನ್ನುವವರು ಸಹ ತಮ್ಮ ಸಮಸ್ಯೆ, ಕೆಲಸಗಳಲ್ಲಿ ಮುಳುಗಿ ಹೋಗಿ, ನಿಮಗೆ ನಿರಾಳ ಆಗಲಿದೆ.

ಮಿಥುನ:

ಈ ಅವಧಿಯಲ್ಲಿ ವಿವಾಹಿತರಿಗೆ ದಾಂಪತ್ಯದಲ್ಲಿ ಅಸಮಾಧಾನ, ಮನಸ್ತಾಪ, ಅಭಿಪ್ತಾಯ ಭೇದ, ಅನುಮಾನಗಳು ಕಾಣಿಸಿಕೊಳ್ಳಲಿವೆ. ಖರ್ಚಿನ ಕಾರಣಕ್ಕೆ ಬೇಸರ ಆಗಲಿದೆ. ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮುಖ್ಯವಾಗಿ ಮೂತ್ರ ಸೋಂಕು, ಕಿಡ್ನಿ ಸ್ಟೋನ್, ನರಕ್ಕೆ ಸಂಬಂಧಿಸಿದ ಸಮಸ್ಯೆಗಳು ಇಂಥ ಅನಾರೋಗ್ಯ ಕಾಡಬಹುದು. ಒಂದು ವೇಳೆ ಈಗಾಗಲೇ ಕಾಣಿಸಿಕೊಂಡಿದ್ದಲ್ಲಿ ಅದು ಮತ್ತೂ ಹೆಚ್ಚಾಗಲಿದೆ. ಆದ್ದರಿಂದ ಈ ಅವಧಿಯಲ್ಲಿ ಆರೋಗ್ಯ ವಿಚಾರವಾಗಿ ಹೆಚ್ಚಿನ ಜಾಗ್ರತೆಯನ್ನು ವಹಿಸಿ. ಹೊಸದಾಗಿ ಪರಿಚಯ ಆಗುವಂಥವರ ಜತೆಗೆ ವ್ಯವಹರಿಸುವಾಗ ಬಹಳ ಎಚ್ಚರಿಕೆಯನ್ನು ವಹಿಸಿ. ವಿವಾಹ ವಯಸ್ಕರಾಗಿದ್ದು, ಮದುವೆಗಾಗಿ ಪ್ರಯತ್ನ ಪಡುತ್ತಿದ್ದಲ್ಲಿ ಹಿನ್ನಡೆ ಆಗಬಹುದು. ಒಂದು ವೇಳೆ ಈಗಾಗಲೇ ನಿಶ್ಚಿತಾರ್ಥ ಆಗಿದ್ದಲ್ಲಿ ಮೂರನೇ ವ್ಯಕ್ತಿಗಳ ಚಾಡಿ ಮಾತಿನಿಂದಾಗಿ ಮದುವೆ ಮುರಿದು ಬೀಳುವ ಮಟ್ಟಕ್ಕೆ ಹೋಗುವ ಸಾಧ್ಯತೆಗಳಿವೆ. ಆದ್ದರಿಂದ ದುರ್ಗಾ ದೇವಿಯ ಆರಾಧನೆಯನ್ನು ಮಾಡಿದಲ್ಲಿ ಸಮಸ್ಯೆಗಳು ಪರಿಹಾರ ಆಗುತ್ತವೆ. ಅಥವಾ ದುರ್ಗಾ ದೇವಿಯ ಸೂಕ್ತವನ್ನು ಕೇಳಿಸಿಕೊಳ್ಳಿ. ಪಾರ್ಟನರ್ ಷಿಪ್ ನಲ್ಲಿ ವ್ಯವಹಾರ ಮಾಡುತ್ತಿರುವವರಿಗೆ ಕಾಗದ- ಪತ್ರಗಳ ವಿಚಾರದಲ್ಲಿ ಅನುಮಾನಗಳು ಮೂಡುವ ಸಾಧ್ಯತೆಗಳಿವೆ. ಆದ್ದರಿಂದ ಕೂತು ಮಾತನಾಡುವ ಮೂಲಕವಾಗಿ ಅನುಮಾನಗಳನ್ನು ಬಗೆಹರಿಸಿಕೊಳ್ಳಿ.

ಕರ್ಕಾಟಕ:

ನಿಮ್ಮಲ್ಲಿ ಯಾರು ಪ್ರಭಾರಿಯಾಗಿ ಅಥವಾ ತಾತ್ಕಾಲಿಕವಾದ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಿ ಅಂಥವರು ತಮ್ಮ ಕೆಲಸವನ್ನು ಕಳೆದುಕೊಳ್ಳುವ ಸನ್ನಿವೇಶ ಸೃಷ್ಟಿಯಾಗಲಿದೆ. ಅಥವಾ ಕಾಯಂ ಹುದ್ದೆಯಲ್ಲಿ ಇದ್ದವರಿಗೆ ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡಬಹುದು. ನಿಮಗೆ ಇಷ್ಟ ಇಲ್ಲದಿರುವಂಥ ಕೆಲವು ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕಾಗುತ್ತದೆ. ಅದರಲ್ಲಿ ನಿಮ್ಮ ಹೆಸರು ಕೆಡುವಂಥ ಸಾಧ್ಯತೆಗಳಿವೆ. ಆದ್ದರಿಂದ ನೀವು ಯಾವ ಕೆಲಸವನ್ನು ಶುರು ಮಾಡುವ ಮೊದಲು ಅದರ ಸದ್ಯದ ಸ್ಥಿತಿ ಹಾಗೂ ಅದನ್ನು ಪೂರ್ಣಗೊಳಿಸುವುದಕ್ಕೆ ನಿಮ್ಮಿಂದ ಸಾಧ್ಯವಾ ಎಂಬುದನ್ನು ಒಂದಕ್ಕೆ ನಾಲ್ಕು ಬಾರಿ ಆಲೋಚನೆಯನ್ನು ಮಾಡಿ. ನಿಮ್ಮಲ್ಲಿ ಯಾರು ರಾಜಕೀಯ ಕ್ಷೇತ್ರದಲ್ಲಿ ಇದ್ದೀರಿ ಅಂಥವರ ಮೇಲೆ ಆಪಾದನೆಗಳು ಬರಬಹುದು. ನೀವು ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಸಾರ್ವಜನಿಕವಾಗಿ ಆಡಿದ ಮಾತುಗಳು, ಸೋಷಿಯಲ್ ಮೀಡಿಯಾ ಪೋಸ್ಟ್ ಗಳು ಸಮಸ್ಯೆಗೆ ಸಿಲುಕುವಂತೆ ಮಾಡುತ್ತದೆ. ಒಂದು ವೇಳೆ ನಿಮಗೆ ಪ್ರಮುಖ ಹುದ್ದೆಗಳು ಇದ್ದಲ್ಲಿ ಅದಕ್ಕೆ ರಾಜೀನಾಮೆ ನೀಡಬೇಕಾದ ಅಥವಾ ಆ ಹುದ್ದೆಯಿಂದ ನಿಮ್ಮನ್ನು ತೆಗೆದು ಬೇರೆಯವರನ್ನು ಕೂರಿಸುವ ಸಾಧ್ಯತೆಗಳು ಹೆಚ್ಚಿವೆ. ನಿಮಗೆ ಅಸಮಾಧಾನ ಇದೆ ಅಂತಲೋ ಅಥವಾ ಮನಸ್ಸಿಗೆ ಒಪ್ಪಿಗೆ ಆಗಲಿಲ್ಲ ಎಂಬ ವಿಷಯವನ್ನೋ ಯಾರಿಗೆ ಹೇಳಬೇಕು ಎಂದಿದ್ದೀರೋ ಹೇಳುವಾಗ ಸರಿಯಾದ ಪದಗಳನ್ನು ಬಳಸಿ. ವಾಹನಗಳನ್ನು ಓಡಿಸುವಾಗ ಎಚ್ಚರಿಕೆಯಿಂದ ಇರಬೇಕು, ಅಪಘಾತ ಆಗುವ ಸಾಧ್ಯತೆಗಳಿವೆ.

ಸಿಂಹ:

ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಇಂಟರ್ ವ್ಯೂಗಳು ಹುಡುಕಿಕೊಂಡು ಬರಬಹುದು. ಅಥವಾ ಈಗಾಗಲೇ ಇಂಟರ್ ವ್ಯೂ ನೀಡಿಯಾಗಿದೆ ಅಂತಾದಲ್ಲಿ ಉದ್ಯೋಗ ದೊರೆಯುವ ಹಾಗೂ ನೀವು ನಿರೀಕ್ಷೆ ಮಾಡಿದಷ್ಟು ಅಥವಾ ಅದಕ್ಕಿಂತ ಹೆಚ್ಚಿನ ವೇತನ ದೊರೆಯಬಹುದು. ಮದುವೆ ಮೊದಲಾದ ಶುಭ ಕಾರ್ಯಗಳಿಗಾಗಿ ಹಣ ಹೊಂದಿಸುತ್ತಿರುವವರಿಗೆ ಸಲೀಸಾಗಿ ದೊರೆಯಲಿದ್ದು, ಮನೆ ಕಟ್ಟಿಸಬೇಕು ಎಂದುಕೊಳ್ಳುತ್ತಿರುವವರು, ಮನೆ ಅಥವಾ ಸೈಟು ಖರೀದಿ ಮಾಡಬೇಕು ಎಂದಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯಲಿದೆ. ನೀವು ಕೆಲಸ ಮಾಡುತ್ತಿರುವ ಅಥವಾ ವೃತ್ತಿ, ವ್ಯವಹಾರ- ವ್ಯಾಪಾರ ಮಾಡುತ್ತಿರುವ ಕಡೆಗಳಲ್ಲಿ ನಿಮ್ಮ ಪ್ರಾಮುಖ್ಯ ಹೆಚ್ಚಾಗಲಿದೆ. ಬಾಕಿ ಉಳಿದ ಹಣ ಏನಾದರೂ ಇದ್ದಲ್ಲಿ ಈ ಅವಧಿಯಲ್ಲಿ ಪ್ರಯತ್ನಿಸಿದರೆ ವಸೂಲಿ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಹೊಸದಾಗಿ ಆದಾಯ ಮೂಲಗಳನ್ನು ಮಾಡಿಕೊಳ್ಳಬೇಕು, ಈಗ ಮಾಡುತ್ತಿರುವುದರ ಜತೆಗೆ ಹೊಸ ವ್ಯವಹಾರ- ವ್ಯಾಪಾರ ಆರಂಭಿಸಬೇಕು ಎಂದುಕೊಳ್ಳುತ್ತಿರುವವರಿಗೆ ಅದು ಸಾಧ್ಯವಾಗಲಿದೆ. ನೀವು ಧೈರ್ಯವಾಗಿ ತೆಗೆದುಕೊಂಡಂಥ ತೀರ್ಮಾನಗಳು ಫಲ ನೀಡುವುದಕ್ಕೆ ಆರಂಭಿಸುತ್ತವೆ. ಸಂಗಾತಿ ಕಡೆಯಿಂದ ಉಡುಗೊರೆಗಳು ದೊರೆಯುವ ಅಥವಾ ಹಣಕಾಸಿನ ಅನುಕೂಲ ಸಿಗುವ ಯೋಗ ಸಹ ನಿಮಗೆ ಇದೆ.

ಕನ್ಯಾ:

ನಿಮ್ಮ ಬಳಿ ಇದೆಯೋ ಇಲ್ಲವೋ ಆದರೂ ವಿಲಾಸಿ ವಾಹನಗಳಲ್ಲಿ ಸಂಚರಿಸುವ, ರೆಸಾರ್ಟ್- ಹೋಟೇಲ್ ಗಳಲ್ಲಿ ವಿಶ್ರಾಂತಿ ಪಡೆಯುವ ಹಾಗೂ ಸಂತೋಷದಿಂದ ಸಮಯ ಕಳೆಯುವಂಥ ಯೋಗ ಈ ಅವಧಿಯಲ್ಲಿ ನಿಮ್ಮ ಪಾಲಿಗೆ ಇದೆ. ಪಾರ್ಟಿ- ಗೆಟ್ ಟು ಗೆದರ್ ಗಳಲ್ಲಿ ಭಾಗೀ ಆಗುವಂತೆ ನಿಮಗೆ ಆಹ್ವಾನಗಳು ಬರಲಿದ್ದು, ಇಂಥದ್ದರಲ್ಲಿ ಭಾಗವಹಿಸಿದಾಗ ಪ್ರಭಾವಿಗಳ ಪರಿಚಯ ನಿಮಗೆ ಆಗಲಿದೆ. ನಿಮ್ಮ ವೃತ್ತಿ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ವ್ಯಕ್ತಿಗಳು ಸಂಪರ್ಕಕ್ಕೆ ಬರಲಿದ್ದು, ಇದರಿಂದ ನಾನಾ ಬಗೆಯಲ್ಲಿ ಅನುಕೂಲ ಆಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. ಕುಟುಂಬ ಸದಸ್ಯರಿಗಾಗಿ ದ್ವಿಚಕ್ರ ವಾಹನ, ಕಾರು ಮೊದಲಾದವುಗಳನ್ನು ಖರೀದಿ ಮಾಡುವಂಥ ಯೋಗ ಇದ್ದು, ಹಣಕಾಸಿನ ಅಗತ್ಯ ಕಂಡುಬಂದಲ್ಲಿ ಸ್ನೇಹಿತರು- ಸಂಬಂಧಿಕರೇ ನೆರವಿಗೆ ಬರಲಿದ್ದಾರೆ. ಇನ್ನು ತಂದೆಯೊಂದಿಗೆ ಮನಸ್ತಾಪ ಅಥವಾ ಅಭಿಪ್ರಾಯ ಭೇದಗಳು ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ಸೂಕ್ತ ವೇದಿಕೆ ನಿಮಗೆ ದೊರೆಯಲಿದೆ. ಅದೃಷ್ಟಕ್ಕೆ ಸಂಬಂಧಪಟ್ಟ ವ್ಯವಹಾರಗಳು ಇದ್ದಲ್ಲಿ ಅನುಕೂಲ ಒದಗಿಬರಲಿದೆ. ನಿಮ್ಮ ಮಾತಿನ ಮೇಲೆ ನಿಯಂತ್ರಣವನ್ನು ಇಟ್ಟುಕೊಳ್ಳಿ. ಇತರರ ಬಗ್ಗೆ ಆಕ್ಷೇಪಗಳನ್ನೋ ಅಥವಾ ಅಸಮಾಧಾನವನ್ನೋ ಸಾರ್ವಜನಿಕವಾಗಿ ಹೇಳಿಕೊಳ್ಳುವುದಕ್ಕೆ ಹೋಗಬೇಡಿ.

ತುಲಾ:

ದೈಹಿಕ ಬಾಧೆಗಳು ಕಾಡುತ್ತಿದ್ದಲ್ಲಿ ಅವು ನಿವಾರಣೆ ಆಗುತ್ತವೆ. ಕುಟುಂಬದಲ್ಲಿ ಅಸಮಾಧಾನ, ವ್ಯಾಜ್ಯಗಳು ನಡೆಯುತ್ತಿದ್ದಲ್ಲಿ ಅವುಗಳನ್ನು ಬಗೆಹರಿಸಿಕೊಳ್ಳಲಿದ್ದೀರಿ. ಸಂತಾನ ನಿರೀಕ್ಷೆಯಲ್ಲಿ ಇರುವವರಿಗೆ, ಪ್ರಯತ್ನ ಮಾಡುತ್ತಿರುವವರಿಗೆ ಮನಸ್ಸಿಗೆ ಸಂತೋಷ ಆಗುವಂಥ ಬೆಳವಣಿಗೆಗಳು ನಡೆಯಲಿವೆ. ಮನೆಗೆ ಸೋಫಾ, ಮಂಚ, ಆರೋಗ್ಯಕ್ಕೆ ಅನುಕೂಲ ಆಗುವಂಥ ಜಿಮ್ ಸಲಕರಣೆಗಳನ್ನು ಖರೀದಿ ಮಾಡುವಂಥ ಯೋಗ ಇದೆ. ಮನೆಯಲ್ಲಿ ಶುಭ ಕಾರ್ಯಗಳನ್ನು ಆಯೋಜನೆ ಮಾಡಲಿದ್ದೀರಿ. ಬಂಧುಗಳು, ಸ್ನೇಹಿತರನ್ನು ಆಹ್ವಾನಿಸಿ ಅವರಿಗೆ ಔತಣ ಕೂಟವನ್ನು ನೀಡಲಿದ್ದೀರಿ. ಸ್ತ್ರೀಯರು ತಾವು ಬಹಳ ಸಮಯದಿಂದ ಖರೀದಿ ಮಾಡಬೇಕು ಎಂದುಕೊಳ್ಳುತ್ತಿದ್ದ ವಸ್ತ್ರಾಭರಣಗಳನ್ನು ಖರೀದಿ ಮಾಡಲಿದ್ದೀರಿ. ಅದೇ ರೀತಿ ಗೃಹಾಲಂಕಾರ ವಸ್ತುಗಳನ್ನು ಸಹ ಕೊಳ್ಳಲಿದ್ದೀರಿ. ನಿಮ್ಮಲ್ಲಿ ಕೆಲವರು ಪ್ರವಾಸಕ್ಕಾಗಿ ಯೋಜನೆಯನ್ನು ರೂಪಿಸಲಿದ್ದೀರಿ. ಅದರಲ್ಲೂ ಯಾರು ನವ ವಿವಾಹಿತರಿದ್ದೀರಿ ಅಂಥವರಿಗೆ ಬಹಳ ಉತ್ತಮವಾದ ಸಮಯ ಇದು. ಇನ್ನು ನಿಮ್ಮ ತಾಯಿ ಅಥವಾ ತಾಯಿ ಸಮಾನರಾದವರು ನಿಮಗೆ ಹಣವನ್ನು ನೀಡಿ, ಬೆಳ್ಳಿ ತಟ್ಟೆ, ಲೋಟ, ದೀಪಗಳು ಅಥವಾ ಇನ್ಯಾವುದೇ ಬೆಳ್ಳಿ ವಸ್ತುಗಳನ್ನು ಖರೀದಿ ಮಾಡುವಂತೆ ಹೇಳಬಹುದು ಹಾಗೂ ಅದಕ್ಕೆ ನಿಮ್ಮ ಸಂಗಾತಿ ಸಹ ತಮ್ಮ ಉಳಿತಾಯದ ಹಣವನ್ನು ನೀಡಲಿದ್ದಾರೆ.

ಇದನ್ನೂ ಓದಿ: ಪ್ರಭು ಶ್ರೀರಾಮನ ಜಾತಕ ಹೇಗಿತ್ತು ಗೊತ್ತಾ? ಇಲ್ಲಿದೆ ಗ್ರಹ ಸ್ಥಿತಿಯೊಂದಿಗೆ ವಿಶ್ಲೇಷಣೆ

ವೃಶ್ಚಿಕ:

ಚೀಟಿ ಹಣವನ್ನು ಕಟ್ಟಿ, ಅದನ್ನು ವಾಪಸ್ ಕೊಡದೆ ಸತಾಯಿಸುತ್ತಿದ್ದಲ್ಲಿ ಅಥವಾ ಈಗಾಗಲೇ ಕೆಲಸ ಮಾಡಿಕೊಟ್ಟಾಗಿದೆ ಅದರ ಹಣ ಬರುವುದು ಬಾಕಿ ಇದೆ, ಅದು ಕೊಡುತ್ತಿಲ್ಲ ಎಂದು ಚಿಂತಿಸುತ್ತಿರುವವರಿಗೆ ಆ ಹಣ ಬರುವುದಕ್ಕೆ ಅವಕಾಶಗಳಿವೆ. ಆದರೆ ಈ ಪ್ರಯತ್ನದಲ್ಲಿ ಒಂದಿಷ್ಟು ಕಲಹ, ಮಾತಿಗೆ ಮಾತು ಬೆಳೆದು ವಾಗ್ವಾದ ಆಗುವುದು ಇಂಥದ್ದೆಲ್ಲ ಆಗುವ ಸಾಧ್ಯತೆಗಳಿವೆ. ಅದರಲ್ಲೂ ಸಂಬಂಧಿಕರಿಂದಲೇ ಹಣ ಬರಬೇಕು ಎಂದಾದಲ್ಲಿ ಅದನ್ನು ವಸೂಲಿ ಮಾಡುವುದಿದ್ದರೆ ಈ ಸಮಯದಲ್ಲಿ ಪ್ರಯತ್ನ ಮಾಡಿ. ಬ್ಯಾಂಕ್ ಮ್ಯಾನೇಜರ್ ಗಳಾಗಿ ಕಾರ್ಯ ನಿರ್ವಹಿಸುತ್ತಿರುವವರು, ಹಣಕಾಸು ಸಂಸ್ಥೆಗಳಲ್ಲಿ ಇರುವಂಥವರು ಈ ಹಿಂದೆ ನೀವು ಯಾರಿಗೋ ಸಾಲ ಕೊಡಿಸಿ, ಅವರು ಸರಿಯಾಗಿ ಮರುಪಾವತಿ ಮಾಡುತ್ತಿಲ್ಲ ಎಂದಾಗಿ, ನಿಮಗೆ ಸಮಸ್ಯೆ ಆಗುತ್ತಿದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ಈಗ ಪ್ರಯತ್ನಿಸಿ. ಆಸ್ತಿ ಖರೀದಿ ಅಥವಾ ಮಾರಾಟಕ್ಕೆ ಸಂಬಂಧಿಸಿದಂತೆ ಹಣಕಾಸಿನ ವಿಚಾರದಲ್ಲಿ ವ್ಯಾಜ್ಯವಾಗಿ ಆ ವ್ಯವಹಾರ ನಿಂತುಹೋಗಿದಲ್ಲಿ ಅದನ್ನು ಪೂರ್ತಿ ಮಾಡಬಹುದು. ಪಾರ್ಟನರ್ ಷಿಪ್ ವ್ಯವಹಾರಕ್ಕಾಗಿ ಕೆಲವರು ನಿಮ್ಮ ಬಳಿ ಪ್ರಸ್ತಾವವನ್ನು ಇಡಬಹುದು, ಒಂದು ವೇಳೆ ನೀವು ಉದ್ಯಮ ಅಥವಾ ವ್ಯಾಪಾರ- ವ್ಯವಹಾರ ವಿಸ್ತರಣೆಗೆ ಪ್ರಯತ್ನ ಮಾಡುತ್ತಿದ್ದಲ್ಲಿ, ಅದಕ್ಕೆ ಸಾಲ ಪಡೆಯಬೇಕು ಎಂದೇನಾದರೂ ಇದ್ದರೆ ಹಣ ಹೂಡಿಕೆ ಮಾಡುವುದಕ್ಕೆ ಜನರು ಮುಂದೆ ಬರುತ್ತಾರೆ.

ಧನುಸ್ಸು:

ಷೇರು, ಮ್ಯೂಚುವಲ್ ಫಂಡ್ಸ್, ರಿಯಲ್ ಎಸ್ಟೇಟ್ ಹೀಗೆ ಯಾವುದೇ ವ್ಯವಹಾರದಲ್ಲಿ ಹೂಡಿಕೆ ಮಾಡಿದವರಿಗೆ ಅಥವಾ ಈಗ ಹೂಡಿಕೆ ಮಾಡುವವರಿಗೆ ಆದಾಯದಲ್ಲಿ ಹೆಚ್ಚಳ ಕಾಣಲಿದೆ ಹಾಗೂ ಲಾಭ ಕೂಡ ನಿರೀಕ್ಷೆಗೆ ಮೀರಿ ದೊರೆಯಲಿದೆ. ದೊಡ್ಡ ಮಟ್ಟದ ಹೂಡಿಕೆಯನ್ನು ಮಾಡಬೇಕು ಎಂಬ ಉದ್ದೇಶದಿಂದ ಸಾಲಕ್ಕಾಗಿ ಅಥವಾ ಹೂಡಿಕೆದಾರರಿಗೆ ಹುಡುಕಾಟ ನಡೆಸುತ್ತಿದ್ದಲ್ಲಿ ದೊರೆಯಲಿದೆ. ನಿಮ್ಮಲ್ಲಿ ಯಾರಿಗೆ ಜನ್ಮ ಜಾತಕದಲ್ಲಿ ಶುಕ್ರ ಉತ್ತಮ ಸ್ಥಿತಿಯಲ್ಲಿ ಇದ್ದರೆ ಈ ಸಂದರ್ಭದಲ್ಲಿ ವಾಹನ ಖರೀದಿ ಮಾಡಲಿದ್ದೀರಿ. ಅದರಲ್ಲೂ ವಿಲಾಸಿ ಕಾರು ಖರೀದಿ ಮಾಡುವಂಥ ಯೋಗ ಒದಗಿ ಬರಲಿದೆ. ಪುಷ್ಕಳವಾದ, ರುಚಿಕಟ್ಟಾದ ಭೋಜನವನ್ನು ಸಹ ಸವಿಯಲಿದ್ದೀರಿ. ಎಷ್ಟೋ ವರ್ಷಗಳ ನಂತರ ಸ್ನೇಹಿತರು- ಸ್ನೇಹಿತೆಯರನ್ನು ಭೇಟಿ ಆಗಿ, ಜತೆಯಲ್ಲಿ ಸಮಯವನ್ನು ಕಳೆಯಲಿದ್ದೀರಿ. ಒಂದು ವೇಳೆ ನೀವು ಪ್ರೀತಿಸುತ್ತಿರುವವರು ಸಣ್ಣ- ಪುಟ್ಟ ವೈಮನಸ್ಯದಿಂದ ದೂರ ಆಗಿದ್ದಲ್ಲಿ, ಆ ವೈಮನಸ್ಯವನ್ನು ದೂರ ಮಾಡಿಕೊಂಡು ಮತ್ತೆ ಒಂದಾಗುವುದಕ್ಕೆ ಬೇಕಾದ ವೇದಿಕೆ ಸಿದ್ಧವಾಗಲಿದೆ. ಇನ್ನು ನಿಮ್ಮ ಪ್ರೀತಿ ವಿಷಯವನ್ನು ಮನೆಯಲ್ಲಿ ತಿಳಿಸಬೇಕು ಎಂದಿದ್ದಲ್ಲಿ ಸಹ ನೀವು ಪ್ರಯತ್ನವನ್ನು ಮಾಡಬಹುದು. ನಿಮಗೆ ಹೆಚ್ಚಿನ ಶ್ರಮ ಇಲ್ಲದೆ ಒಪ್ಪಿಗೆ ದೊರೆಯಲಿದೆ. ಪ್ಲಾಟಿನಂ ಆಭರಣಗಳನ್ನು ಉಡುಗೊರೆಯಾಗಿ ಪಡೆಯಬಹುದು ಅಥವಾ ನೀವೇ ಖರೀದಿಸಬಹುದು.

ಮಕರ:

ಅರೆಬರೆಯಾಗಿ ನಿಂತ ವ್ಯವಹಾರಗಳು ಪ್ರಗತಿ ಕಾಣುವುದಕ್ಕೆ ಆರಂಭವಾಗುತ್ತವೆ. ಭೂಮಿಗೆ ಸಂಬಂಧಿಸಿದಂತೆ ದುಡ್ಡು ತೆಗೆದುಕೊಳ್ಳುವ- ಕೊಡುವ ಮಾತುಕತೆಗಳು ಈಗಾಗಲೇ ಆಗಿದೆ, ಆದರೆ ನಾನಾ ಕಾರಣಗಳಿಗಾಗಿ ತಡೆಯಾಗಿದೆ ಎಂದಾದಲ್ಲಿ ಅದು ಸಹ ಸುಸೂತ್ರವಾಗಿ ಆಗಲಿದೆ. ನೀವು ಇಷ್ಟು ಸಮಯ ಯಾವ ವಸ್ತು, ದಾಖಲೆ ಅಥವಾ ವ್ಯಕ್ತಿಗಾಗಿ ಹುಡುಕಾಟವನ್ನು ನಡೆಸುತ್ತಿದ್ದಿರೋ ಆ ಎಲ್ಲವೂ ಸಿಗುವ ಅವಕಾಶಗಳು ಹೆಚ್ಚಿವೆ. ಮುಖ್ಯವಾಗಿ ನಿಮ್ಮ ಮಾತಿನಲ್ಲಿ ಒಂದು ಬದಲಾವಣೆ ಕಾಣಿಸುತ್ತದೆ. ಯಾವುದೇ ವಿಚಾರ ಅಥವಾ ಪರಿಸ್ಥಿತಿಯನ್ನು ಎದುರಿನವರಿಗೆ ಚೆನ್ನಾಗಿ ವಿವರಿಸುವಂಥ ಸಾಮರ್ಥ್ಯ ಹೆಚ್ಚಾಗಲಿದೆ. ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುವವರು, ರಿಯಲ್ ಎಸ್ಟೇಟ್ ವ್ಯವಹಾರ ಮಾಡುವಂಥವರು, ಕಮಿಷನ್ ಆಧಾರದಲ್ಲಿ ಕೆಲಸ ಮಾಡಿಕೊಡುವಂಥವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಇನ್ನು ಪ್ರಭಾವಿಗಳ ಪರಿಚಯ ಆಗುವುದರೊಂದಿಗೆ ನಿಮ್ಮ ಪ್ರಭಾ ವಲಯ ಕೂಡ ವಿಸ್ತರಣೆ ಆಗಲಿದೆ. ಮಕ್ಕಳು ಉದ್ಯೋಗಸ್ಥರಿಗೆ ವಿದೇಶಗಳಲ್ಲಿ ನೆಲೆಸಿದ್ದಲ್ಲಿ ಅಲ್ಲಿ ಅವರು ಮನೆ ಖರೀದಿಸುವ, ಉದ್ಯೋಗದಲ್ಲಿ ಬಡ್ತಿ ದೊರೆಯುವ ಅವಕಾಶಗಳಲಿದ್ದು, ಈ ಬೆಳವಣಿಗೆಯಿಂದ ನಿಮ್ಮ ಮನಸ್ಸಿಗೆ ಹೆಮ್ಮೆ ಎನಿಸಲಿದೆ. ಇನ್ನು ನಿಮ್ಮ ಜಾತಕದಲ್ಲಿ ಶುಕ್ರ ಉತ್ತಮ ಸ್ಥಿತಿಯಲ್ಲಿ ಇದ್ದಲ್ಲಿ ಉದ್ಯೋಗ ಸ್ಥಳದಲ್ಲಿ ನಿಮಗೆ ಉಡುಗೊರೆ, ಬಹುಮಾನ, ಪ್ರಶಸ್ತಿಗಳು ಸಹ ದೊರೆಯಲಿವೆ.

ಕುಂಭ:

ನಿಮ್ಮ ಹೆಸರು, ಕೀರ್ತಿ, ಹಣ, ಸ್ಥಾನ- ಮಾನ ಇವುಗಳಿಗೆ ಯಾರಿಂದಲಾದರೂ ಆತಂಕ ಎದುರಾಗಬಹುದು ಎಂದೇನಾದರೂ ನೀವು ಆಲೋಚನೆ ಮಾಡುತ್ತಿದ್ದಲ್ಲಿ ಅಥವಾ ಚಿಂತೆಗೆ ಗುರಿ ಆಗಿದ್ದಲ್ಲಿ ಅದು ನಿವಾರಣೆ ಆಗಲಿದೆ. ನೀವು ನಿರೀಕ್ಷೆ ಕೂಡ ಮಾಡದಂಥ ವ್ಯಕ್ತಿಗಳು ನಿಮಗೆ ಸಹಾಯ ಮಾಡುವುದಕ್ಕೆ ಮುಂದೆ ಬರಲಿದ್ದಾರೆ. ನಿಮಗೆ ಇರುವ ವಿಶೇಷ ಪರಿಣತಿಗೆ ಬೇಡಿಕೆ ಹೆಚ್ಚಾಗಲಿದೆ. ನಿಮ್ಮ ಬಳಿ ಇರುವಂಥ ವಸ್ತು, ವಾಹನ, ಜಮೀನು, ಅಪಾರ್ಟ್ ಮೆಂಟ್, ಮನೆಗೆ ದಿಢೀರನೆ ಬೇಡಿಕೆ ಹೆಚ್ಚಾಗಲಿದೆ. ನಿಮಗೆ ಇರುವ ಅನುಭವ ಹಾಗೂ ಹೆಸರಿನ ಕಾರಣಕ್ಕೆ ಪಾರ್ಟನರ್ ಷಿಪ್ ಮಾಡಿಕೊಳ್ಳುವ ಪ್ರಸ್ತಾವವನ್ನು ನಿಮ್ಮ ಮುಂದೆ ಇಡಲಿದ್ದಾರೆ. ಈ ಹಿಂದೆ ನೀವು ಕೆಲಸ ಮಾಡಿದ್ದ ಸ್ಥಳದಲ್ಲಿ ಪ್ರಮುಖ ಹುದ್ದೆಗೆ, ಹೆಚ್ಚಿನ ವೇತನಕ್ಕೆ ಆಹ್ವಾನಿಸುವ ಯೋಗ ಸಹ ನಿಮ್ಮ ಪಾಲಿಗೆ ಇದೆ. ಯಾರು ಮಾರ್ಕೆಟಿಂಗ್ ಅಥವಾ ಸೇಲ್ಸ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತೀರಿ ಅಂಥವರಿಗೆ ಸುಲಭವಾಗಿ ಗುರಿ ಮುಟ್ಟುವುದಕ್ಕೆ ಸಾಧ್ಯವಾಗಲಿದೆ. ನೀವು ಕೊಟ್ಟಂಥ ಬಿಜಿನೆಸ್ ಐಡಿಯಾಗಳು ಬಹಳ ಒಳ್ಳೆ ಲಾಭವನ್ನು ಮಾಡಿಕೊಡಲಿವೆ. ಒಂದು ವೇಳೆ ತುರ್ತಾಗಿ ಭೂಮಿ ಮಾರಾಟ ಮಾಡುತ್ತಿರುವ ಬಗ್ಗೆ ಹಾಗೂ ಅದನ್ನು ಕಡಿಮೆ ಬೆಲೆಗೆ ಮಾರಲಾಗುತ್ತಿದೆ ಎಂದು ನಿಮ್ಮ ಆಪ್ತರು ಬಂದು ಹೇಳಿದಲ್ಲಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ.

ಮೀನ:

ನಿಮ್ಮ ಬಳಿ ಗುಟ್ಟು ಎಂದು ಇತರರು ಹೇಳಿದ ವಿಚಾರವನ್ನು ಯಾರ ಬಳಿಯೂ ಮಾತನಾಡುವುದಕ್ಕೆ ಹೋಗಬೇಡಿ. ಅದರಲ್ಲೂ ನಿಮ್ಮ ಸೋದರ ಸಂಬಂಧಿಗಳು ಹೇಳಿದಂಥ ವಿಚಾರಗಳ ಬಗ್ಗೆ ಇನ್ನೂ ಹೆಚ್ಚು ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ನಿಮ್ಮ ಉದ್ಯೋಗ ಸ್ಥಳದಲ್ಲಿ ಯಾವುದೇ ಗಾಸಿಪ್ ಗಳಿಗೆ ಕಿವಿಗೊಡಬೇಡಿ. ಇತರರ ವೈಯಕ್ತಿಕ ವಿಚಾರಗಳಲ್ಲಿ ಅತಿಯಾದ ಉತ್ಸಾಹ ತೋರಿಸುವುದಕ್ಕೆ ಹೋಗದಿರಿ. ಈ ಅವಧಿಯಲ್ಲಿ ನಿಮ್ಮ ಸಹೋದ್ಯೋಗಿಗಳ ಜತೆಗೆ, ಸಂಗಾತಿಯ ಜತೆಗೆ, ನಿಮ್ಮ ತಾಯಿಯ ಕಡೆಯ ಸಂಬಂಧಿಕರ ಜತೆಗೆ ಕಲಹ ಏರ್ಪಡುವಂಥ ಸಾಧ್ಯತೆಗಳು ಹೆಚ್ಚಿವೆ. ನೀವು ಯಾವ ವಿಚಾರವನ್ನು ಸಮಸ್ಯೆ ಆಗಲಾರದು ಎಂದುಕೊಂಡು ನಿರ್ಲಕ್ಷಿಸಿ ಸುಮ್ಮನಾಗಿದ್ದಿರೋ ಅದೇ ವಿಚಾರ ತಲೆನೋವಾಗಿ ಮಾರ್ಪಡಲಿದೆ. ಯಾವುದೇ ಕೆಲಸ ಮಾಡಿದ ಮೇಲೆ ಅಥವಾ ಅರ್ಧ‌ದಷ್ಟು ಮುಗಿದಿರುವ ಕೆಲಸಗಳ ಬಗ್ಗೆ ಹೇಳಿಕೊಳ್ಳುವುದಕ್ಕೆ ಹೋಗಬೇಡಿ. ಈ ಅವಧಿಯಲ್ಲಿ ನೀವು ದೃಷ್ಟಿ ದೋಷವನ್ನು ಅನುಭವಿಸುತ್ತೀರಿ. ಆದ್ದರಿಂದ ಶುಕ್ರವಾರದಂದು ದೃಷ್ಟಿ ದೋಷ ನಿವಾರಣೆಗಾಗಿ ಕಲ್ಲು ಉಪ್ಪು ಹಾಗೂ ಸಾಸಿಸಿವೆಯನ್ನು ನಿವಾಳಿಸಿಕೊಳ್ಳಿ (ಮನೆಯಲ್ಲಿ ಇರುವವರಿಗೆ ಹೇಳಿ, ಸಂಜೆಯ ಹೊತ್ತಿಗೆ ದೃಷ್ಟಿಯನ್ನು ತೆಗೆಸಿಕೊಳ್ಳಿ). ವಿವಾಹಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಹಿನ್ನಡೆ ಆಗಬಹುದು ಅಥವಾ ಈಗಾಗಲೇ ನಿಶ್ಚಿತಾರ್ಥ ಆಗಿರುವವರು ಮಾತಿನ ಮೇಲೆ ನಿಗಾ ಇಟ್ಟುಕೊಳ್ಳಿ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:18 am, Sun, 14 January 24