Venus transit in Leo 2023: ಸಿಂಹ ರಾಶಿಗೆ ಶುಕ್ರ ಗ್ರಹದ ಪ್ರವೇಶ; ದ್ವಾದಶ ರಾಶಿಗೆ ಶುಭ, ಅಶುಭ ಫಲ, ಎಚ್ಚರಿಕೆಗಳು
ಇಂದಿನಿಂದ (ಜುಲೈ 7) ಸಿಂಹ ರಾಶಿಗೆ ಶುಕ್ರ ಗ್ರಹದ ಪ್ರವೇಶ ಆಗಿದ್ದು, ಇದು ನವೆಂಬರ್ ವರೆಗೆ ಮುಂದುವರಿಯಲಿದೆ. ಶುಕ್ರ ಗ್ರಹದ ಪ್ರಭಾವದಿಂದಾಗಿ ಯಾವ್ಯಾವ ರಾಶಿಯವರಿಗೆ ಉತ್ತಮ ಫಲ ಇದೆ. ಹಾಗೂ ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು
ಇಂದು ಸಿಂಹ ರಾಶಿಗೆ ಶುಕ್ರ ಗ್ರಹದ ಪ್ರವೇಶ ಆಗಿದೆ. ನವೆಂಬರ್ ತಿಂಗಳ ಮೂರನೇ ತಾರೀಕಿನ ತನಕ ಇದೇ ರಾಶಿಯಲ್ಲಿ ಇರುತ್ತದೆ. ಶುಕ್ರ ಗ್ರಹದ ಪ್ರಭಾವದಿಂದಾಗಿ ಯಾವ್ಯಾವ ರಾಶಿಯವರಿಗೆ ಉತ್ತಮ ಫಲ ಇದೆ. ಹಾಗೂ ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ಸಹ ತಿಳಿಸಲಾಗುವುದು. ಮೊದಲಿಗೆ ಶುಭ ಫಲ ಯಾರಿಗಿದೆ ಎಂಬುದನ್ನು ತಿಳಿದುಕೊಳ್ಳಿ.
ಸಿಂಹ
ನಿಮ್ಮದೇ ರಾಶಿಯಲ್ಲಿ ಶುಕ್ರ ಸಂಚರಿಸುವ ಶುಕ್ರನಿಂದಾಗಿ ಸಕಲ ಸುಖ, ವೈಭೋಗಗಳನ್ನು ಅನುಭವಿಸಲಿದ್ದೀರಿ. ನಿಮ್ಮ ಹತ್ತಿರ ವಿಲಾಸಿ ವಾಹನಗಳಿದೆಯೋ ಇಲ್ಲವೋ ಅದು ಲೆಕ್ಕಕ್ಕೆ ಬರುವುದಿಲ್ಲ. ಆದರೆ ಅಂಥ ವಾಹನಗಳಲ್ಲಿ ಸಂಚರಿಸುವ ಯೋಗ ನಿಮ್ಮ ಪಾಲಿಗೆ ಬರಲಿದೆ. ಪುಷ್ಕಳವಾದ ಭೋಜನ, ಬೆಲೆ ಬಾಳುವ ವಸ್ತುಗಳನ್ನು ಗಿಫ್ಟ್ ಆಗಿ ಪಡೆಯಬಹುದು, ಜತೆಗೆ ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ಒಳ್ಳೆ ಸಮಯ ಇದಾಗಿರಲಿದೆ.
ಕರ್ಕಾಟಕ
ವಿವಾಹಿತರಿಗೆ ಸಂಗಾತಿ ಮೂಲಕವಾಗಿ ಧನ ಪ್ರಾಪ್ತಿ ಆಗುವಂಥ ಯೋಗ ಇದೆ. ಇನ್ನು ಮಾತು ಪ್ರಧಾನವಾದಂಥ ವೃತ್ತಿಯಲ್ಲಿ ಇರುವವರಿಗೆ ಹಣದ ಹರಿವು ಹೆಚ್ಚಾಗಲಿದೆ. ನಿಮಗೆ ಬರಬೇಕಾದ ಹಣ ಇದ್ದಲ್ಲಿ ಅದು ನಿಮ್ಮ ಕೈ ಸೇರಬಹುದು. ನಿಮ್ಮ ಮಾತಿನ ಪ್ರಭಾವ ಬಳಸಿ, ಇತರರಿಗೆ ನೆರವಾಗುವುದರಿಂದ ಪ್ರತಿಯಾಗಿ ಅವರು ನಿಮಗೆ ಉಡುಗೊರೆಗಳನ್ನು ನೀಡುವಂಥ ಯೋಗ ಇದೆ. ವಾಹನಗಳ ಖರೀದಿ ಮಾಡಬೇಕು ಎಂದಿರುವವರಿಗೆ ಹಣಕಾಸು ಹೊಂದಿಸುವುದು ಸಲೀಸಾಗುತ್ತದೆ.
ಮಿಥುನ
ಸೋದರ- ಸೋದರಿಯರ ಜತೆಗೆ ಪ್ರವಾಸಗಳನ್ನು ತೆರಳುವಂಥ ಯೋಗ ಇದೆ. ಇನ್ನು ಪಾರ್ಟಿಗಳಲ್ಲಿ ಹೆಚ್ಚು ಭಾಗವಹಿಸಲಿದ್ದೀರಿ. ಒಂದು ವೇಳೆ ಬಹಳ ಸಮಯದಿಂದ ಮನೆಯಲ್ಲಿ ವಾಹನಗಳನ್ನು ಓಡಿಸದೇ ನಿಲ್ಲಿಸಿದ್ದಲ್ಲಿ ಅದನ್ನು ಹೆಚ್ಚೆಚ್ಚು ಬಳಕೆ ಮಾಡಲಿದ್ದೀರಿ. ಅಥವಾ ಗೆಳೆಯ/ಗೆಳತಿಯು ತಮ್ಮ ವಾಹನವನ್ನು ನಿಮಗೆ ನೀಡಿ, ಅದನ್ನು ಬಳಕೆ ಮಾಡುವಂತೆ ಹೇಳಬಹುದು. ಒಟ್ಟಾರೆಯಾಗಿ ಸುಖ ಪಡುವಂಥ ಯೋಗ ವೃದ್ಧಿ ಆಗಲಿದೆ.
ವೃಷಭ
ನಿಮ್ಮ ಸೋಷಿಯಲ್ ಕಾಂಟ್ಯಾಕ್ಟ್ ಗಳು ಹೆಚ್ಚಾಗುವಂಥ ಅವಧಿ ಇದಾಗಿರುತ್ತದೆ. ನಿಮ್ಮ ಪ್ರಭಾ ವಲಯ ವಿಸ್ತರಣೆ ಆಗಿ, ಅದರಿಂದ ನಾನಾ ಕೆಲಸಗಳನ್ನು ಸಲೀಸಾಗಿ ಮಾಡುವುದಕ್ಕೆ ನೆರವಾಗುತ್ತದೆ. ವಾಹನವನ್ನು ಖರೀದಿ ಮಾಡಲಿದ್ದೀರಿ. ಈಗಾಗಲೇ ವಾಹನ ಇದ್ದರೂ ವಿಲಾಸಿ ಆದಂಥ, ದುಬಾರಿ ಆದಂಥ ವಾಹನ ಖರೀದಿಸುವುದಕ್ಕೆ ಯೋಗ ಇದೆ. ನಿಮ್ಮ ತಾಯಿಯನ್ನು ಅಥವಾ ತಾಯಿ ಸಮಾನರಾದವರನ್ನು ತುಂಬ ಚೆನ್ನಾಗಿ ನೋಡಿಕೊಳ್ಳಲಿದ್ದೀರಿ, ಅವರ ಆಶೀರ್ವಾದ ನಿಮಗೆ ದೊರೆಯಲಿದೆ.
ಸಿಂಹ ರಾಶಿಯಲ್ಲಿ ಶುಕ್ರ ಸಂಚಾರ; 9 ರಾಶಿಯವರಿಗೆ ಬಂಪರ್, 3 ರಾಶಿಯವರಿಗೆ ಡೇಂಜರ್
ಮೇಷ
ಸಂತಾನ ಅಪೇಕ್ಷಿತರಾಗಿದ್ದಲ್ಲಿ, ಅದಕ್ಕಾಗಿ ಪ್ರಯತ್ನಿಸುತ್ತಿದ್ದಲ್ಲಿ ಈ ಅವಧಿಯಲ್ಲಿ ಶುಭ ವಾರ್ತೆ ಕೇಳಿಬರಲಿದೆ. ವೈದ್ಯಕೀಯವಾಗಿ ಪ್ರಯತ್ನ ಮಾಡಬೇಕು ಎಂದು ಇರುವವರು ಸಹ ಈ ಸಮಯದಲ್ಲಿ ಪ್ರಯತ್ನ ಮಾಡಬಹುದು. ಇನ್ನು ಈ ಹಿಂದೆ ಯಾರಿಗೆ ಕೆಲಸ ಮಾಡಿಕೊಟ್ಟಿದ್ದೀರಿ ಅವರು ಮತ್ತೆ ನಿಮ್ಮನ್ನು ಹುಡುಕಿಕೊಂಡು ಬಂದು ಕೆಲಸ- ಕಾರ್ಯಗಳನ್ನು ವಹಿಸಲಿದ್ದಾರೆ. ಆದಾಯದಲ್ಲಿ ಹೆಚ್ಚಳ ಕೂಡ ಆಗುವಂಥ ಯೋಗ ಇದೆ.
ಮಕರ
ಏನೂ ಮಾಡಿದರೂ ಹಣ ಉಳಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಆತಂಕ ಪಡುತ್ತಿರುವವರಿಗೆ ಈ ಅವಧಿಯಲ್ಲಿ ಹಣ ಉಳಿಸುವುದು ಸಾಧ್ಯವಾಗುತ್ತದೆ. ಷೇರು, ಮ್ಯೂಚುವಲ್ ಫಂಡ್ಸ್, ಚಿನ್ನದ ಇಟಿಎಫ್ ಇತ್ಯಾದಿಗಳಲ್ಲಿ ಹಣ ಹೂಡಿಕೆ ಮಾಡುವಂಥ ಯೋಗ ಇದೆ. ಇನ್ನು ಮನೆ, ಸೈಟ್ ಇತ್ಯಾದಿಗಳನ್ನು ಮಾರಾಟಕ್ಕೆ ಇಟ್ಟಿದ್ದಲ್ಲಿ ಅದು ಖರೀದಿಸುವುದಕ್ಕೆ ಖರೀದಿದಾರರು ಬರಲಿದ್ದಾರೆ. ಒಟ್ಟಾರೆಯಾಗಿ ಪ್ರಿಯವಾದ ವಾರ್ತೆಯನ್ನು ಕೇಳಿಸಿಕೊಳ್ಳುವ ಯೋಗ ಇದೆ.
ಧನುಸ್ಸು
ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಉತ್ತಮವಾದ ಸಂಬಂಧಗಳು ಕೂಡಿಬರಲಿದೆ. ಮನೆ ಅಥವಾ ಅಪಾರ್ಟ್ ಮೆಂಟ್ ಖರೀದಿ ಮಾಡಬೇಕು ಎಂದಿರುವವರಿಗೆ ಮನಸ್ಸಿನಲ್ಲಿ ಬಯಸಿದಂಥದ್ದೇ ಖರೀದಿಸುವುದಕ್ಕೆ ಯೋಗಗಳು ಕೂಡಿಬರಲಿವೆ. ಪಿತ್ರಾರ್ಜಿತವಾದ ಆಸ್ತಿಗಳು ಬರಬೇಕಾಗಿದ್ದಲ್ಲಿ ಅದು ಸಹ ಇತ್ಯರ್ಥ ಆಗುವಂಥ ಸಾಧ್ಯತೆಗಳು ಇರುತ್ತವೆ. ಬಹು ಸಮಯದಿಂದ ನಿರೀಕ್ಷೆ ಮಾಡುತ್ತಿದ್ದ ಬಡ್ತಿ, ವರ್ಗಾವಣೆ, ವಿದೇಶ ಪ್ರವಾಸ ಕೂಡಿಬರಲಿವೆ.
ಕನ್ಯಾ
ಇನ್ನೇನು ಕೈ ಬಿಟ್ಟು ಹೋಯಿತು ಅಂದುಕೊಂಡಿದ್ದ ಆಸ್ತಿ, ವಸ್ತ- ವಾಹನಗಳು ಮತ್ತೆ ಕೈ ಸೇರುವಂಥ ಯೋಗ ಇದೆ. ಆದಾಯದಲ್ಲಿ ಇಳಿಕೆ ಆಯಿತು ಎಂದು ಆತಂಕಗೊಂಡಿದ್ದವರಿಗೆ ಮತ್ತೆ ಆದಾಯ ಕುದುರಿಕೊಳ್ಳಲಿದೆ. ಈಗಾಗಲೇ ಕೆಲಸ ಮಾಡಿಕೊಟ್ಟಾಗಿದೆ. ಇವತ್ತು, ನಾಳೆ ಎಂದು ಹಣ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಇದ್ದಲ್ಲಿ ಈ ಅವಧಿಯಲ್ಲಿ ಆ ಹಣ ಕೈ ಸೇರುವಂಥ ಯೋಗ ಇದೆ. ಆದರೆ ತಾಳ್ಮೆ ಬಹಳ ಮುಖ್ಯವಾಗುತ್ತದೆ.
ತುಲಾ
ಕೋರ್ಟ್- ಕಚೇರಿ ಅಥವಾ ಪೊಲೀಸರಿಗೆ ಸಂಬಂಧಪಟ್ಟಂಥ ಪ್ರಕರಣಗಳಲ್ಲಿ ಏನೋ ದೊಡ್ಡ ಸಮಸ್ಯೆ ಆಗುತ್ತದೆ ಎಂದಿರುವವರಿಗೆ ಈಗ ಕಾನೂನು ರಕ್ಷಣೆ ಪಡೆಯುವಂಥ ಮಾರ್ಗ ಗೋಚರ ಆಗುತ್ತದೆ. ಒಂದು ವೇಳೆ ಸ್ತ್ರೀಯರಿಂದ ಸಮಸ್ಯೆ ಆಗುವಂಥ ಸುಳಿವು ಇದ್ದಲ್ಲಿ ಆ ಸಮಸ್ಯೆಯಿಂದ ಪಾರಾಗುವಂಥ ಮಾರ್ಗ ಗೋಚರ ಆಗುತ್ತದೆ. ದುರ್ಗಾ ಆರಾಧನೆ ಮಾಡುವುದರಿಂದ ಮನಸ್ಸಿಗೆ ಮತ್ತಷ್ಟು ನೆಮ್ಮದಿ ದೊರೆಯುತ್ತದೆ.
ಇದನ್ನೂ ಓದಿ:Daily Horoscope: ದಾಂಪತ್ಯ ಜೀವನದಲ್ಲಿ ಹೊಂದಾಣಿಕೆಯ ಕೊರತೆ ಕಾಣಿಸಬಹುದು
ಎಚ್ಚರಿಕೆ ವಹಿಸಬೇಕಾದ ರಾಶಿಗಳು
ಮೀನ
ವಾಹನಗಳಲ್ಲಿ ಸಂಚರಿಸುವಾಗ ಅಥವಾ ನೀವೇ ಡ್ರೈವ್ ಮಾಡುತ್ತಿದ್ದೀರಿ ಎಂದಾದಲ್ಲಿ ಸಾಧ್ಯವಾದಷ್ಟೂ ನಿಧಾನವಾಗಿ ಓಡಿಸಿ. ತೀರಾ ಅನಿವಾರ್ಯ ಅಲ್ಲ ಎಂದಾದಲ್ಲಿ ರಾತ್ರಿ ಪ್ರಯಾಣ ಮಾಡದಿರುವುದು ಕ್ಷೇಮ. ಇನ್ನು ಸೌಂದರ್ಯವರ್ಧಕಗಳನ್ನು ಬಳಸುವಂಥವರಿಗೆ ಅಲರ್ಜಿ ಕಾಡಬಹುದು. ಆದ್ದರಿಂದ ಬಹಳ ಎಚ್ಚರಿಕೆ ವಹಿಸಬೇಕು. ಚರ್ಮ ಸಂಬಂಧಿ ಸಮಸ್ಯೆಗಳು ಕಾಡಬಹುದು. ಈಗಾಗಲೇ ಇದ್ದಲ್ಲಿ ಉಲ್ಬಣ ಆಗಬಹುದು.
ಕುಂಭ
ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಗುಪ್ತಾಂಗ ಸಮಸ್ಯೆಗಳು ಕಾಡಬಹುದು. ವೃಥಾ ನಿಂದೆ, ಆರೋಪಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟೂ ಪಾರದರ್ಶಕವಾಗಿ ನಡೆದುಕೊಳ್ಳುವುದು ಮುಖ್ಯ. ಇನ್ನು ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಅಭಿಪ್ರಾಯ ಭೇದಗಳು, ಮನಸ್ತಾಪಗಳು, ದ್ವಂದ್ವ, ಗೊಂದಲಗಳು ಕಾಡಲಿವೆ.
ವೃಶ್ಚಿಕ
ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳ ಜತೆಗೆ ಕಲಹ, ಭಿನ್ನಾಭಿಪ್ರಾಯ, ವಾಗ್ವಾದಗಳು ಆಗಬಹುದು. ಮೇಲಧಿಕಾರಿ ಮಹಿಳೆ ಆಗಿದ್ದಲ್ಲಿ ಮಾಮೂಲಿಗಿಂತ ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ. ಬಳಸುವ ಮಾತಿನ ಮೇಲೆ ನಿಗಾ ಇರಲಿ. ನಿಮ್ಮ ಉದ್ದೇಶ ಒಳ್ಳೆಯದೇ ಇದ್ದರೂ ಅದು ಎದುರಿನವರಿಗೆ ಕೆಟ್ಟದಂತೆ ಅನಿಸಬಹುದು. ಇನ್ನು ಇದೇ ಅವಧಿಯಲ್ಲಿ ಎಲ್ಲವನ್ನೂ ನಾನೇಕೆ ವಿವರಿಸಬೇಕು ಎಂಬ ಧೋರಣೆ ಸಹ ನಿಮ್ಮನ್ನು ಕಾಡಬಹದು.