ಜನನ ಕಾಲದಲ್ಲಿ ಗ್ರಹಗಳ ಸ್ಥಿತಿಯನ್ನು ಅನುಸರಿಸಿ ಯೋಗ (yoga) ಗಳು ಉಂಟಾಗುತ್ತವೆ. ಅವು ಒಳ್ಳೆಯ ಯೋಗವೂ ಆಗಬಹುದು, ಕೆಟ್ಟವೂ ಆಗಬಹುದು. ಜನ್ಮ ಕಾಲದ ಲಗ್ನದ ಆಧಾರದ ಮೇಲೆ ಒಳಿತು ಕೆಡುಕುಗಳು ನಿರ್ಧಾರವಾಗುತ್ತವೆ. ಅಂತಹ ಯೋಗಗಳಲ್ಲಿ ಗದಾ, ಶಕಟ ಮತ್ತು ವಿಹಗಯೋಗಳು ಇರಲಿವೆ.
ಗದಾ ಯೋಗ: ಎರಡು ಕೇಂದ್ರ ಸ್ಥಾನಗಳಲ್ಲಿ ಎಲ್ಲ ಗ್ರಹರೂ ಇದ್ದರೆ, ಅದು ಗದಾಯೋಗ. ಕೇಂದ್ರ ಸ್ಥಾನವು ಲಗ್ನದಿಂದ 1, 4, 7 ಹಾಗೂ 10 ನೇ ಸ್ಥಾನಗಳಾಗಿರುತ್ತವೆ. ಇವುಗಳಲ್ಲಿ 1 – 4 ಅಥವಾ 4 – 7 ಅಥವಾ 7 – 10, ಇಲ್ಲವೇ 10 – 1 ಈ ಎರಡು ಸ್ಥಾನಗಳಲ್ಲಿ ಎಲ್ಲ ಗ್ರಹರೂ ಇದ್ದರೆ ಈ ಯೋಗವಾಗುವುದು.
ಯೋಗ ಫಲ: ಈ ಯೋಗದಲ್ಲಿ ಜನಿಸಿದವನು ಯಜ್ಞವೇ ಮೊದಲಾದ ದೇವಕಾರ್ಯದಲ್ಲಿ ಆಸಕ್ತಿ ಉಳ್ಳವನಾಗನು. ಸದಾ ಸಂಪತ್ತು ಉಳ್ಳವನಾಗಿರುವನು. ಈ ಯೋಗದ ವಿಶೇಷತೆ ಎಂದರೆ ಉದ್ಯೋಗವು ಇಲ್ಲ ಎಂದಾಗುವುದೇ ಇಲ್ಲ. ಒಂದಲ್ಲ ಒಂದು ಉದ್ಯೋಗವು ಪ್ರಾಪ್ತವಾಗುತ್ತಲೇ ಇರುವುದು.
ಈ ಯೋಗವು ಪುರುಷತ್ವದ ಲಕ್ಷಣಗಳನ್ನು ಹೇಳುವ ಕಾರಣ ಉದ್ಯೋಗವು ಪುರುಷನ ಮೂಲಭೂತ ಲಕ್ಷಣ. ಹಾಗಾಗಿ ಈ ಯೋಗದಿಂದ ಕೂಡಿರುವ ಪುರುಷ ಎಂದಿಗೂ ನಿರುದ್ಯೋಗಿ ಆಗಲಾರ.
ಶಕಟ ಯೋಗ: ಕೇಂದ್ರಸ್ಥಾನಗಳೇ ಹೆಚ್ಚು ಯೋಗವನ್ನು ಉಂಟುಮಾಡುವವಾಗಿವೆ. ಇಲ್ಲಿಯೂ ಹಾಗೆಯೇ. ಲಗ್ನ ಅಂದರೆ ಒಂದನೇ ಸ್ಥಾನ ಹಾಗೂ ಏಳನೇ ಸ್ಥಾನದಲ್ಲಿ ಎಲ್ಲ ಗ್ರಹರಿದ್ದರೆ ಶಕಟ ಯೋಗ ಎನಿಸಿಕೊಳ್ಳುವುದು.
ಯೋಗ ಫಲ: ಈ ಯೋಗದಲ್ಲಿ ಜನಿಸಿದವನು ವಾಹನವೃತ್ತಿಯನ್ನು ಮಾಡುತ್ತಾ ಜೀವನವನ್ನು ಕಳೆಯುವನು. ಯಾವಾಗಲೂ ಒಂದಿಲ್ಲೊಂದು ರೋಗದಿಂದ ಪೀಡಿತನೂ, ದುಷ್ಟ ಪತ್ನಿ ಅಥವಾ ಪತಿಯನ್ನು ಹೊಂದಿದವರು ಆಗುವರು.
ಶಕಟ ಎಂದರೆ ಬಂಡಿ ಎಂದರ್ಥ. ಈ ಯೋಗದಲ್ಲಿ ಜನಿಸಿದರೆ ಅದು ಆಮರಣಪರ್ಯಂತ ಇರುವ ಕಾರಣ ವಾಹನಕ್ಕೆ ಸಂಬಂಧಿಸಿದ ವೃತ್ತಿಯನ್ನೇ ಅವರು ಹೆಚ್ಚು ಆಶ್ರಯಿಸುವರು.
ವಿಹಗ ಯೋಗ: ಲಗ್ನದಿಂದ ನಾಲ್ಕು ಮತ್ತು ಹತ್ತರಲ್ಲಿ ಎಲ್ಲ ಗ್ರಹರಿದ್ದರೆ ಅದನ್ನು ಶಕಟ ಯೋಗ ಎಂದು ಕರೆಯುತ್ತಾರೆ.
ಯೋಗ ಫಲ: ದೂತ ಕಾರ್ಯದಲ್ಲಿ ನಿರತನಾಗಿರುನು. ಸದಾ ಸಂಚಾರದಲ್ಲಿ ಆಸಕ್ತಿ ಉಳ್ಳವನಾಗಿರುವನು. ಕಲಹವನ್ನು ಮಾಡಲು ಇವರಿಗೆ ಬಹಳ ಇಷ್ಟವಾಗುವುದು.
ವಿಹಗ ಎಂದರೆ ಪಕ್ಷಿ. ಈ ಯೋಗವು ಮನುಷ್ಯರಿಗೆ ಬಂದಾಗ ಅವರೂ ಮನುಷ್ಯ ಹಾಗೂ ಪಕ್ಷಿಯ ಅಂಶಗಳನ್ನು ರೂಢಿಸಿಕೊಳ್ಳುತ್ತಾರೆ.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.