
2026ನೇ ಇಸವಿಯಲ್ಲಿ ಇಡೀ ವರ್ಷದ ಶನಿ ಗ್ರಹ 10ನೇ ಮನೆಯಲ್ಲಿ ಸಂಚಾರ ಮಾಡುತ್ತದೆ. ಇನ್ನು ಗುರು ಗ್ರಹವು ಜನವರಿಯಿಂದ ಜೂನ್ ಒಂದನೇ ತಾರೀಕಿನ ತನಕ ನಿಮ್ಮದೇ ಜನ್ಮ ರಾಶಿಯಲ್ಲಿ, ಅಂದರೆ 1ನೇ ಸ್ಥಾನದಲ್ಲಿ ಇರುತ್ತದೆ. ಆ ನಂತರ ಅಕ್ಟೋಬರ್ 31ನೇ ತಾರೀಕಿನವರೆಗೆ ಕರ್ಕಾಟಕ ರಾಶಿಯಲ್ಲಿ, ಅಂದರೆ ನಿಮಗೆ 2ನೇ ಮನೆಯಲ್ಲಿ ಸಂಚರಿಸುತ್ತದೆ. ನವೆಂಬರ್ ಹಾಗೂ ಡಿಸೆಂಬರ್ ಈ ಎರಡೂ ತಿಂಗಳು ಸಿಂಹ ರಾಶಿಯಲ್ಲಿ, ಅಂದರೆ 3ನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಆಗುತ್ತದೆ. ಇನ್ನು ಬಹುತೇಕ ಇಡೀ ವರ್ಷ ರಾಹು ಗ್ರಹವು ನಿಮ್ಮ ರಾಶಿಗೆ 9ನೇ ಮನೆ ಆಗುವಂಥ ಕುಂಭದಲ್ಲಿಯೂ ಹಾಗೂ ಕೇತು 3ನೇ ಸ್ಥಾನ ಆದಂಥ ಸಿಂಹ ರಾಶಿಯಲ್ಲಿಯೂ ಸಂಚರಿಸುತ್ತದೆ. 2026ನೇ ಇಸವಿಯ ಡಿಸೆಂಬರ್ 5ನೇ ತಾರೀಕಿಗೆ ರಾಹು ಗ್ರಹವು ಎಂಟನೇ ಮನೆಯಾದ ಮಕರ ರಾಶಿಗೂ ಹಾಗೂ ಕೇತು ಗ್ರಹ ಎರಡನೇ ಸ್ಥಾನವಾದ ಕರ್ಕಾಟಕ ರಾಶಿಗೂ ಪ್ರವೇಶಿಸುತ್ತದೆ.
ಮೃಗಶಿರಾ ನಕ್ಷತ್ರದ ಮೂರು, ನಾಲ್ಕನೇ ಪಾದ, ಆರಿದ್ರಾ ನಕ್ಷತ್ರದ ನಾಲ್ಕೂ ಪಾದ, ಪುನರ್ವಸು ನಕ್ಷತ್ರದ ಒಂದು ಎರಡು ಹಾಗೂ ಮೂರನೇ ಪಾದ ಸೇರಿ ಮಿಥುನ ರಾಶಿ ಆಗುತ್ತದೆ. ಈ ರಾಶಿಯ ಅಧಿಪತಿ ಬುಧಗ್ರಹ.
ಉದ್ಯೋಗ- ವೃತ್ತಿ ಜೀವನದಲ್ಲಿ ಬಹಳ ಎಚ್ಚರಿಕೆಯನ್ನು ವಹಿಸಬೇಕು. ಏಕೆಂದರೆ ನಿಮ್ಮ ರಾಶಿಗೆ ಕರ್ಮ ಸ್ಥಾನದಲ್ಲಿ ಶನೈಶ್ಚರನ ಸಂಚಾರ ಆಗುತ್ತಿದೆ. ನಿಮಗೆ ಆಯುಷ್ಯ ಹಾಗೂ ಅದೃಷ್ಟ- ಪಿತೃ ಸ್ಥಾನ ಈ ಎರಡರ ಅಧಿಪತಿ ಆದಂಥ ಶನಿ ಗ್ರಹದ ಈ ಕರ್ಮ ಸ್ಥಾನದ ಸಂಚಾರವು ಮಾನಸಿಕವಾಗಿ ಬಹಳ ಕಿರಿಕಿರಿ ಮಾಡುತ್ತದೆ. ನಿಮ್ಮಲ್ಲಿ ಯಾರಿಗೆ ದಶಾ- ಭುಕ್ತಿಯೂ ಸರಿಯಾಗಿ ಇಲ್ಲವೋ ಅಥವಾ ಜನ್ಮ ಜಾತಕದಲ್ಲಿ ಶನಿ ಗ್ರಹ ದುರ್ಬಲವಾಗಿಯೋ- ನೀಚ ಸ್ಥಿತಿಯಲ್ಲಿಯೋ ಇದ್ದರೆ ಅಂಥವರಿಗೆ ಇನ್ನೂ ಹೆಚ್ಚಿನ ಸವಾಲುಗಳು ಎದುರುಗೊಳ್ಳುತ್ತವೆ. ನೀವು ಯಾವ ವೃತ್ತಿ ಅಥವಾ ಉದ್ಯೋಗ ಮಾಡುತ್ತೀರೋ ಅದರಿಂದ ನಿಮಗೆ ದೈಹಿಕವಾದ- ಮಾನಸಿಕವಾದ ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದನ್ನು ಮೌಲ್ಯಮಾಪನ ಮಾಡಿಕೊಳ್ಳಿ. ನೀವಾಗಿಯೇ ಕೆಲಸ ಬಿಡುವುದಕ್ಕೆ ಹೋಗಬೇಡಿ. ಉದ್ಯೋಗ ಬದಲಾವಣೆಗೆ ಕೂಡ ಇದು ಒಳ್ಳೆ ಸಮಯವಲ್ಲ. ಭಾವನಾತ್ಮಕವಾಗಿ ನೀವು ಯಾರಿಗೆ ಬಹಳ ಹತ್ತಿರವಾಗಿ ಇರುತ್ತೀರೋ ಅಂಥವರಿಂದ ದೂರ ಆಗುವ ಪರಿಸ್ಥಿತಿ ಬರಲಿದೆ. ಅದು ಎಷ್ಟು ಸಣ್ಣ ತಪ್ಪಾದರೂ ಕಾನೂನಿನ ವ್ಯಾಪ್ತಿ ಹೊರಗೆ ಇರುವಂಥ ಕೆಲಸಗಳನ್ನು ಮಾಡಲಿಕ್ಕೆ ಹೋಗಬೇಡಿ.
ಇದನ್ನೂ ಓದಿ: 2026 ವೃಷಭ ರಾಶಿಯವರಿಗೆ ಹೇಗಿರಲಿದೆ? ಶುಭ -ಅಶುಭ ಫಲಗಳ ಮಾಹಿತಿ ಇಲ್ಲಿದೆ
ಜೂನ್ ತಿಂಗಳ ತನಕ ಕೌಟುಂಬಿಕ ಜೀವನ, ಆರೋಗ್ಯ ಹಾಗೂ ಮಕ್ಕಳ ಶಿಕ್ಷಣ, ಆರೋಗ್ಯ ಇವೆಲ್ಲವೂ ಚಿಂತೆಗೆ ಕಾರಣ ಆಗುವಂಥ ವಿಚಾರ ಆಗಲಿದೆ. ಜನ್ಮ ರಾಶಿಯಲ್ಲಿ ಗುರು ಸಂಚಾರ ಮಾಡುವಾಗ ನಾನಾ ರೀತಿಯಲ್ಲಿ ದುಃಖವನ್ನು ಅನುಭವಿಸುವಂತೆ ಆಗಲಿದೆ. ಋಣ- ರೋಗ- ದಾರಿದ್ರ್ಯ ಒಂದಲ್ಲ ಒಂದು ಬಗೆಯಲ್ಲಿ ಬೆನ್ನಟ್ಟಿ ಬಂದು ಕಾಡಲಿವೆ. ಯಾವುದೇ ವಿಷಯದಲ್ಲಿ ಆಯ್ಕೆ ಚೆನ್ನಾಗಿ ಮಾಡಿಕೊಳ್ಳುವುದು ಮುಖ್ಯವಾದ ವಿಚಾರ. ಅದರಲ್ಲಿ ನಿಮ್ಮ ವಿವೇಚನೆ- ವಿವೇಕ ಕೈ ಕೊಡುತ್ತದೆ. ತಂದೆ ಜೊತೆಗಿನ ಬಾಂಧವ್ಯದಲ್ಲಿ ಬಿರುಕು ಬರುವುದು, ಮನಸ್ತಾಪ ಮೊದಲಾದ ಅಶುಭ ಫಲಗಳು ಅನುಭವಕ್ಕೆ ಬರಲಿದೆ. ಇದು ಮಕ್ಕಳಿರುವವರಿಗೂ ಮಕ್ಕಳಿಲ್ಲದವರಿಗೂ ಅನ್ವಯ ಆಗುವಂತೆ ಸಂತಾನದ ವಿಷಯ ಕೊರಗು ಎಂಬಂತೆ ವಿಪರೀತು ಕಾಡಲಿದೆ. ಪಾರ್ಟನರ್ ಷಿಪ್ ವ್ಯವಹಾರಗಳನ್ನು ಸರಿಯಾಗಿ ನಿಭಾಯಿಸಿಕೊಳ್ಳಿ. ಬುದ್ಧಿಪೂರ್ವಕವಾಗಿ ತಪ್ಪುಗಳನ್ನು ಮಾಡಲು ಹೋಗಬೇಡಿ. ಈ ಹಿಂದೆ ಏನಾದರೂ ಮಾಡಿದ್ದಲ್ಲಿ ಅದರ ನಕರಾತ್ಮಕ ಫಲಿತವನ್ನು ಕಾಣುತ್ತೀರಿ. ಜೂನ್ ನಿಂದ ಅಕ್ಟೋಬರ್ ತನಕ ಉತ್ತಮ ಸಮಯವಾಗಿರುತ್ತದೆ. ನಾನಾ ರೀತಿಯ ಶುಭ ಫಲಗಳನ್ನು ಪಡೆಯುತ್ತೀರಿ. ವಿವಾಹ ವಯಸ್ಕರಿಗೆ ಮದುವೆ ನಿಶ್ವಯ ಆಗುತ್ತದೆ. ಸಾಂಸಾರಿಕವಾಗಿ ನೆಮ್ಮದಿ ನೆಲೆ ಆಗುತ್ತದೆ. ಸಂತಾನಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೂ ಶುಭವಿದೆ. ಹಣಕಾಸಿನ ಹರಿವು ಸರಾಗವಾಗಿ ಆಗುತ್ತದೆ. ಉದ್ಯೋಗ- ವೃತ್ತಿ, ವ್ಯಾಪಾರ- ವ್ಯವಹಾರ ಎಲ್ಲದರಲ್ಲಿಯೂ ಉತ್ತಮ ಫಲವೇ ಪಡೆಯುತ್ತೀರಿ. ನವೆಂಬರ್ ಡಿಸೆಂಬರ್ ತಿಂಗಳಲ್ಲಿ ಆರೋಗ್ಯದ ವಿಚಾರದಲ್ಲಿ ಮತ್ತೆ ಜಾಗ್ರತೆ ವಹಿಸಬೇಕು. ನಿಮ್ಮ ವರ್ಚಸ್ಸು- ಹೆಸರು ಉಳಿಸಿಕೊಳ್ಳಲು ಪಡಿಪಾಟಲು ಪಡುವಂತೆ ಆಗಲಿದೆ.
ನಿಮ್ಮ ರಾಶಿಯಿಂದ ಒಂಬತ್ತನೇ ಮನೆಯಲ್ಲಿ ರಾಹು ಹಾಗೂ ಮೂರನೇ ಮನೆಯಲ್ಲಿ ಕೇತು ಗ್ರಹ ಸಂಚಾರ ಇರುತ್ತದೆ. ವಿನಾ ಕಾರಣದ ಅಲೆದಾಟ ಇರುತ್ತದೆ. ಷೇರು ಮಾರ್ಕೆಟ್ ನಲ್ಲಿ ಹಣ ಹೂಡಿಕೆ ಮಾಡಿರುವಂಥವರು ಅಥವಾ ಅದರಲ್ಲಿ ನಿತ್ಯವೂ ಟ್ರೇಡಿಂಗ್ ಮಾಡುವಂಥವರು ಶಿಸ್ತನ್ನು ಅಳವಡಿಸಿಕೊಳ್ಳಬೇಕು, ದೊಡ್ಡ ರಿಸ್ಕ್ ತೆಗೆದುಕೊಂಡು ಡೇ ಟ್ರೇಡಿಂಗ್- ಫ್ಯೂಚರ್- ಆಪ್ಷನ್ಸ್ ಇಂಥ ವ್ಯವಹಾರಗಳನ್ನು ಮಾಡಲಿಕ್ಕೆ ಹೋಗಬಾರದು. ಅಲ್ಪಾವಧಿಯಲ್ಲಿ ದೊಡ್ಡ ಲಾಭ ಮಾಡಿಕೊಂಡು ಬಿಡಬಹುದು ಅಂತ ಹೇಳಿ, ಯಾರಾದರೂ ನಿಮಗೆ ಆಸೆ ತೋರಿಸುತ್ತಾ ಬಳಿ ಬಂದರೆ ಅಂಥ ವ್ಯವಹಾರಗಳಿಂದ ದೂರ ಇರುವುದು ಮುಖ್ಯ. ತಂದೆ- ತಂದೆ ಸಮಾನರಿಗೆ ಮರೆವಿನ ಸಮಸ್ಯೆ ಹೆಚ್ಚಾಗಬಹುದು, ಅದೇ ರೀತಿ ಕಿಡ್ನಿಗೆ ಏನಾದರೂ ತೊಂದರೆ ಆಗಬಹುದು. ನಿಯಮಿತವಾದ ವೈದ್ಯಕೀಯ ಪರೀಕ್ಷೆ- ಈಗಾಗಲೇ ಆ ಸಮಸ್ಯೆ ಇದ್ದಲ್ಲಿ ಫಾಲೋಅಪ್ ಸರಿಯಾಗಿ ಮಾಡಿಸಿಕೊಳ್ಳಿ. ಇನ್ನು ನಿಮ್ಮ ಸೋದರ- ಸೋದರಿಯರ ಜತೆಗೆ ಇರುವಂಥ ವಿರಸಗಳನ್ನು ಹಿರಿಯರ ಮಧ್ಯಸ್ಥಿಕೆಯಲ್ಲಿ ಬಗೆಹರಿಸಿಕೊಳ್ಳಲು ಸಾಧ್ಯವಿದೆ. ದೇವತಾ ಅನುಗ್ರಹದಿಂದ ನಿಮ್ಮ ಕೆಲವು ಸಮಸ್ಯೆಗಳಿಗೆ ಪರಿಹಾರವು ಸುಲಭವಾಗಿ ದೊರೆಯುತ್ತವೆ. ಹಿರಿಯರ- ಅನುಭವಿಗಳ ಮಾರ್ಗದರ್ಶನ- ಸಲಹೆ ಇವುಗಳನ್ನು ಗಂಭೀರವಾಗಿ ಪರಿಗಣಿಸಿದಲ್ಲಿ ಅನುಕೂಲ ಆಗುತ್ತದೆ.
ಪರಿಹಾರ:
ಶನೈಶ್ಚರ ಆರಾಧನೆ, ರಾಘವೇಂದ್ರ ಸ್ವಾಮಿ ಮಠ ಅಥವಾ ಸಾಯಿಬಾಬ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆಯುವುದು, ದುರ್ಗಾ ದೇವಿ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆಯುವುದರಿಂದ ನಕಾರಾತ್ಮಕ ಪ್ರಭಾವಗಳು ಕಡಿಮೆ ಆಗುತ್ತವೆ.
ಲೇಖನ- ಸ್ವಾತಿ ಎನ್.ಕೆ.
Published On - 2:41 pm, Sun, 7 December 25