ಬುಧ ಗ್ರಹ ಆಗಸ್ಟ್ 23ರಿಂದ ಸೆಪ್ಟೆಂಬರ್ 14ರ ತನಕ ಸಿಂಹದಲ್ಲಿ ವಕ್ರ ಸಂಚಾರ; ಆದರೂ ಆಗಲಿದ್ದಾನೆ ನಿರ್ಬಲ, ಯಾರಿಗೆ ಏನು ಫಲ?

| Updated By: Rakesh Nayak Manchi

Updated on: Aug 08, 2023 | 3:57 PM

ಬುಧ ಗ್ರಹದ ಅಸ್ತದ ಬಗ್ಗೆ ಆಚಾರ್ಯ ಮಂತ್ರೇಶ್ವರ ಅವರು ರಚಿಸಿದ ಫಲದೀಪಿಕಾದಲ್ಲಿ ಇರುವಂತೆ ಬುಧ ಗ್ರಹದ ಬಗ್ಗೆ ವಿವರಣೆ ಮತ್ತು ಅಸ್ತದ ಮಾಹಿತಿಯನ್ನು ಶ್ಲೋಕ ಸಹಿತವಾಗಿ ಇಲ್ಲಿ ನೀಡಲಾಗುತ್ತಿದೆ.

ಬುಧ ಗ್ರಹ ಆಗಸ್ಟ್ 23ರಿಂದ ಸೆಪ್ಟೆಂಬರ್ 14ರ ತನಕ ಸಿಂಹದಲ್ಲಿ ವಕ್ರ ಸಂಚಾರ; ಆದರೂ ಆಗಲಿದ್ದಾನೆ ನಿರ್ಬಲ, ಯಾರಿಗೆ ಏನು ಫಲ?
ಬುಧ ಗ್ರಹ ಆಗಸ್ಟ್ 23ರಿಂದ ಸೆಪ್ಟೆಂಬರ್ 14ರ ತನಕ ಸಿಂಹದಲ್ಲಿ ವಕ್ರ ಸಂಚಾರ
Image Credit source: iStock Photo
Follow us on

ಇದೇ ಆಗಸ್ಟ್ ಇಪ್ಪತ್ನಾಲ್ಕನೇ ತಾರೀಕಿನಂದು ಬುಧ ಗ್ರಹದ (Mercury) ವಕ್ರೀ ಚಲನೆ ಸಿಂಹ ರಾಶಿಯಲ್ಲಿ ಆರಂಭವಾಗುತ್ತದೆ. ಹೀಗೆ ಸೆಪ್ಟೆಂಬರ್ ಹದಿನಾಲ್ಕನೇ ತಾರೀಕಿನ ತನಕ ಇರುತ್ತದೆ. ಯಾವುದೇ ಗ್ರಹ ವಕ್ರೀ ಚಲಿಸುವಾಗ ಹೆಚ್ಚು ಬಲಿಷ್ಠವಾಗಿರುತ್ತದೆ. ಹೀಗೆ ಬಲಯುಕ್ತವಾಗುವ ಗ್ರಹ ಪ್ರಬಲವಾದ ಫಲವನ್ನೇ ನೀಡಬೇಕಲ್ಲವಾ? ಆದರೆ ಈ ಬಾರಿ ಹಾಗೆ ಆಗಲಿಕ್ಕಿಲ್ಲ. ಏಕೆಂದರೆ ಸಿಂಹ ರಾಶಿಯಲ್ಲಿ ಬುಧ ವಕ್ರೀ ಸ್ಥಿತಿಯಲ್ಲಿ ಇರುವಾಗ ರವಿ ಸಹ ಅಲ್ಲೇ ಇದ್ದು, ಆಗಸ್ಟ್ ಇಪ್ಪತ್ತೊಂಬತ್ತನೇ ತಾರೀಕಿನಂದು ಬುಧ ಅಸ್ತನಾಗಿ ಬಿಡುತ್ತಾನೆ. ನಂತರ ಮತ್ತೆ ಉದಯ ಆಗುವುದು ಸೆಪ್ಟೆಂಬರ್ ಹನ್ನೆರಡನೇ ತಾರೀಕಿನಂದು. ಬುಧ ಅಸ್ತನಾಗುವುದರಿಂದ ಬಲಹೀನ ಆಗುತ್ತಾನೆ.

ಫಲದೀಪಿಕಾದಲ್ಲಿ ಇರುವಂತೆ ಬುಧ ಗ್ರಹದ ಬಗ್ಗೆ ವಿವರಣೆ

ಪಾಂಡಿತ್ಯಂ ಸುವಚಃ ಕಲಾನಿಪುಣತಾ ವಿದ್ವತ್ ಸ್ತುತಿಂ ಮಾತುಲಂ

ವಾಕ್ಚಾತುರ್ಯಮುಪಾಸನಾದಿಪಟುತಾಂ ವಿದ್ಯಾಸು ಯುಕ್ತಿಂ ಮತಿಮ್|

ಯಜ್ಞಂ ವೈಷ್ಣವಕರ್ಮ ಸತ್ಯವಚನಂ ಶುಕ್ತಿಂ ವಿಹಾರಸ್ಥಲಂ ಶಿಲಂ

ಬಾಂಧವಯೌವರಾಜ್ಯಸುಹೃದಸ್ತದ್ಭಾಗಿನೇಯಂ ಬುಧಾತ್||

ಇದರ ಅರ್ಥ ಏನೆಂದರೆ, ಪಾಂಡಿತ್ಯ, ವಾಕ್ಚಾತುರ್ಯ, ಕಲಾ ಕೌಶಲ, ನೈಪುಣ್ಯ, ವಿದ್ವಾಂಸರಿಂದ ಪ್ರಶಂಸೆ, ಸೋದರಮಾವ, ಉಪಾಸನೆ, ವಿದ್ಯೆಗಳಲ್ಲಿ ಪಟುತ್ವ, ಯಜ್ಞ, ವೈಷ್ಣವ ಸಂಪ್ರದಾಯದ ಕರ್ಮಗಳು, ಸತ್ಯವಚನ, ಶಂಖ, ವಿಹಾರ ಸ್ಥಳಗಳು, ಶಿಲ್ಪ ಕಲೆ, ಬಂಧು- ಬಾಂಧವರು, ಯುವರಾಜ (ಪದವಿ), ಮಿತ್ರರು, ತಂಗಿಯ ಮಕ್ಕಳು ಮುಂತಾದವುಗಳನ್ನು ಬುಧ ಗ್ರಹವು ಸೂಚಿಸುತ್ತದೆ.

ಅದೇ ರೀತಿ ಬುಧ ಗ್ರಹದ ಬಲದ ಬಗ್ಗೆಯೂ ‘ಫಲದೀಪಿಕಾ’ದಲ್ಲಿ ತಿಳಿಸಲಾಗಿದೆ.

ವಕ್ರಂ ಗತೊ ರುಚಿರರಶ್ಮಿ ಸಮೂಹಪೂರ್ಣೊ

ನೀಚಾರಿಭಾಂಶಸಹಿತೋಪಿ ಭವೇತ್ಸ ಖೇಟಃ|

ವೀರ್ಯಾನ್ವಿತಸ್ತುಹಿನ ರಶ್ಮಿರಿವೋಚ್ಚಮಿತ್ರ

ಸ್ವಕ್ಷೇತ್ರಗೋಪಿ ವಿಬಲೊ ಹತದೀಧಿತಿಶ್ಚೇತ್

ತನ್ನ ನೀಚ ಅಥವಾ ಶತ್ರು ರಾಶಿ ಅಥವಾ ನವಾಂಶದಲ್ಲಿ ಸ್ಥಿತರಾದಾಗ ಗ್ರಹವು ವಕ್ರಿಯಾದರೆ ಅಥವಾ ತನ್ನ ಪೂರ್ಣ ರಶ್ಮಿಗಳಿಂದ ಯುಕ್ತನಾಗಿದ್ದರೆ ಅದು ಬಲವಾನನಾಗುತ್ತದೆ (ಶಕ್ತಿಯುತ). ಮತ್ತು ತನ್ನ ಉಚ್ಚ ರಾಶಿ, ಮಿತ್ರರಾಶಿ ಅಥವಾ ಅವುಗಳ ನವಾಂಶದಲ್ಲಿ ಸ್ಥಿತ ಆಗಿದ್ದಾಗ್ಯೂ ಅದು ಅಸ್ತವಾಗಿದ್ದರೆ ಚಂದ್ರನಂತೆ ನಿರ್ಬಲ ಆಗುತ್ತದೆ.

ಅಂದರೆ ಯಾವ ಗ್ರಹ ವಕ್ರಿ ಇದ್ದಾಗ ಹೆಚ್ಚು ಬಲವಾದ ಫಲ ನೀಡುತ್ತದೋ ಅಂಥದ್ದು ಒಂದು ವೇಳೆ ಅಸ್ತವಾಗಿದ್ದ ಪಕ್ಷದಲ್ಲಿ ತನ್ನ ಬಲವನ್ನೇ ಕಳೆದುಕೊಳ್ಳುತ್ತದೆ ಎಂದು ತಿಳಿಸುತ್ತದೆ ಫಲದೀಪಿಕಾ. ಈಗ, ಅಂದರೆ ಆಗಸ್ಟ್ ಇಪ್ಪತ್ತೊಂಬತ್ತನೇ ತಾರೀಕಿನಂದು ಬುಧ ಗ್ರಹ ಅಸ್ತವಾಗಿ ಬಿಡುತ್ತದೆ. ಮತ್ತೆ ಉದಯ ಸೆಪ್ಟೆಂಬರ್ ಹನ್ನೆರಡನೇ ತಾರೀಕಿಗೇ. ಆದ್ದರಿಂದ ವಕ್ರಿಯಾಗಿ ಸಿಂಹ ರಾಶಿಯಲ್ಲಿ ಬುಧ ಸಂಚರಿಸುವಂಥ ಫಲ ದೊರೆಯುವುದಿಲ್ಲ.

ಆದರೆ, ಗೋಚಾರ ರೀತಿಯಲ್ಲಿ ಬುಧನ ಫಲ ಏನು ಎಂಬುದನ್ನು ಆಯಾ ರಾಶಿಗೆ ಒಂದು ವಾಕ್ಯದಲ್ಲಿಯೇ ಇಲ್ಲಿ ತಿಳಿಸಲಾಗುವುದು.

ಮೇಷ: ನಿಮ್ಮ ನಿರ್ಧಾರಗಳು, ತೀರ್ಮಾನಗಳು, ನಡವಳಿಕೆಗಳಿಂದ ಅಪಕೀರ್ತಿ ಪಡೆಯುತ್ತೀರಿ.

ವೃಷಭ: ಹೊಸ ವಿದ್ಯೆ, ಸಂಗತಿಗಳು, ವಿಷಯಗಳನ್ನು ಕಲಿತುಕೊಳ್ಳಲಿದ್ದೀರಿ.

ಮಿಥುನ: ಯಾವ ಸನ್ನಿವೇಶಕ್ಕೆ ಏನು ಮಾಡಬೇಕು ಎಂದು ನಿರ್ಧಾರ ಕೈಗೊಳ್ಳದೆ ಸಂದಿಗ್ಧಕ್ಕೆ ಗುರಿ ಆಗುತ್ತೀರಿ.

ಕರ್ಕಾಟಕ: ಶುಭ ಕಾರ್ಯಗಳಲ್ಲಿ ಭಾಗವಹಿಸುವಂಥ ಯೋಗ ಇರುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿವೆ.

ಸಿಂಹ: ವಿವಿಧ ಕಾರಣಗಳಿಗಾಗಿ ಪ್ರಯಾಣ ಮಾಡಬೇಕಾಗುತ್ತದೆ. ಹಣಕಾಸಿನ ಆದಾಯ ಬರಬಹುದು, ವ್ಯಾಪಾರಕ್ಕೆ ಸಂಬಂಧಿಸಿದ ಪ್ರಯಾಣ ಆಗಿರುಬಹುದು.

ಕನ್ಯಾ: ಆರೋಗ್ಯ ವಿಚಾರಗಳಿಗೆ, ನಿಮ್ಮದೇ ಸಿಟ್ಟು- ಕೋಪದ ಕಾರಣಗಳಿಂದಾಗಿ ನಷ್ಟ ಅನುಭವಿಸಲಿದ್ದೀರಿ.

ತುಲಾ: ಮಿತ್ರರು, ಸಂಬಂಧಿಗಳು, ತಾಯಿಯ ಕಡೆಯ ಸಂಬಂಧಿಕರ ಜತೆಗೆ ಸಂತೋಷದಿಂದ ಸಮಯ ಕಳೆಯುವಂತಹ ಯೋಗ.

ವೃಶ್ಚಿಕ: ಉದ್ಯೋಗಕ್ಕೆ ಅಥವಾ ವೃತ್ತಿಗೆ ಸಂಬಂಧಿಸಿದಂತೆ ಹಣಕಾಸಿನ ಹರಿವು ಸರಾಗವಾಗಿ ಆಗಲಿದೆ.

ಧನುಸ್ಸು: ಪಿತ್ರಾರ್ಜಿತ ಆಸ್ತಿ ವಿಚಾರವಾಗಿ, ಸೋದರ ಸಂಬಂಧಿಗಳ ಮಕ್ಕಳ ಆರೋಗ್ಯದ ವಿಚಾರಕ್ಕೆ, ತಂದೆ ಅಥವಾ ತಂದೆ ಸಮಾನರಾದವರ ಆರೋಗ್ಯ ವಿಚಾರವಾಗಿ ಹಣ ಖರ್ಚಾಗಲಿದೆ.

ಮಕರ: ಆರೋಗ್ಯದಲ್ಲಿ ಸುಧಾರಣೆ, ಮಾಧ್ಯಮ, ಮಾತು ಪ್ರಧಾನವಾದ ವೃತ್ತಿಯಲ್ಲಿ ಕಾರ್ಯ ನಿರ್ವಹಿಸುವಂಥವರಿಗೆ ನಾನಾ ವಿಧದಲ್ಲಿ ಅನುಕೂಲ ಆಗುವ ಯೋಗ ಇದೆ.

ಕುಂಭ: ಸಂಸಾರದಲ್ಲಿ ಕಲಹಗಳು ಏರ್ಪಡಬಹುದು, ಒಬ್ಬರ ಮೇಲೆ ಒಬ್ಬರಿಗೆ ಅನುಮಾನ, ಜಗಳ ಆಗಿ, ಇದರಿಂದ ಮನಸ್ಸಿಗೆ ಬೇಸರ ಹಾಗೂ ಶೋಕ ಇದೆ.

ಮೀನ: ಶತ್ರುಗಳ ವಿರುದ್ಧ ನಿಮ್ಮ ಕೈ ಮೇಲಾಗುತ್ತದೆ. ನಿಮಗೆ ನ್ಯಾಯಯುತವಾಗಿ ಸಲ್ಲಬೇಕಾದ ಹಣವು ದೊರೆಯಲಿದೆ. ನಿಮ್ಮ ಮಾತಿಗೆ- ಸಲಹೆ ಗೌರವ ಹೆಚ್ಚಲಿದೆ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ