Mercury Transit In Sagittarius: ಧನುಸ್ಸು ರಾಶಿಯಲ್ಲಿ ಬುಧ ಸಂಚಾರ; ಯಾರ್ಯಾರಿಗೆ ಆಗಲಿದೆ ದುಡ್ಡಿನ ಸುರಿಮಳೆ?

| Updated By: ಅಕ್ಷತಾ ವರ್ಕಾಡಿ

Updated on: Jan 07, 2024 | 5:12 PM

ಜನವರಿ ಏಳನೇ ತಾರೀಕು ಬುಧ ಗ್ರಹ ಧನುಸ್ಸು ರಾಶಿಗೆ ಪ್ರವೇಶ ಮಾಡುತ್ತಿದೆ. ಈ ಗ್ರಹವು ಧನುಸ್ಸು ರಾಶಿಯಲ್ಲಿ ಇರುವಷ್ಟು ಸಮಯ ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳ ಮೇಲೆ ಏನು ಪರಿಣಾಮ ಬೀರಲಿದೆ ಎಂಬುದನ್ನು ತಿಳಿದುಕೊಳ್ಳಿ.

Mercury Transit In Sagittarius: ಧನುಸ್ಸು ರಾಶಿಯಲ್ಲಿ ಬುಧ ಸಂಚಾರ; ಯಾರ್ಯಾರಿಗೆ ಆಗಲಿದೆ ದುಡ್ಡಿನ ಸುರಿಮಳೆ?
ಸಾಂದರ್ಭಿಕ ಚಿತ್ರ
Image Credit source: Pinterest
Follow us on

ಜನವರಿ ಏಳನೇ ತಾರೀಕು ಬುಧ ಗ್ರಹ ಧನುಸ್ಸು ರಾಶಿಗೆ ಪ್ರವೇಶ ಮಾಡುತ್ತಿದೆ. ಇದೇ ರಾಶಿಯಲ್ಲಿ ಜನವರಿ ಮೂವತ್ತೊಂದನೇ ತಾರೀಕಿನ ತನಕ ಇರುತ್ತದೆ. ಫೆಬ್ರವರಿ ಒಂದನೇ ತಾರೀಕು ಮಕರ ರಾಶಿಗೆ ಪ್ರವೇಶ ಮಾಡಲಿದೆ. ಅಂದ ಹಾಗೆ, ಮಿಥುನ ಹಾಗೂ ಕನ್ಯಾ ರಾಶಿಗೆ ಅಧಿಪತಿ ಬುಧ. ಇನ್ನು ಮೀನ ರಾಶಿಯಲ್ಲಿ ಬುಧ ಇದ್ದರೆ ಅದು ನೀಚ ಸ್ಥಿತಿ. ಇಂಥ ಗ್ರಹವು ಧನುಸ್ಸು ರಾಶಿಯಲ್ಲಿ ಇರುವಷ್ಟು ಸಮಯ ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳ ಮೇಲೆ ಏನು ಪರಿಣಾಮ ಬೀರಲಿದೆ ಎಂಬುದನ್ನು ತಿಳಿದುಕೊಳ್ಳಿ.

ಮೇಷ ರಾಶಿ:

ಈ ಅವಧಿಯಲ್ಲಿ ಸೋದರ- ಸೋದರಿಯರಿಂದ ನಷ್ಟ ಉಂಟಾಗುತ್ತದೆ. ಮುಖ್ಯವಾಗಿ ಅವರು ತೆಗೆದುಕೊಳ್ಳುವ ನಿರ್ಧಾರ, ಆಡುವ ಮಾತು, ನಡೆ-ನುಡಿ ಹೀಗೆ ಯಾವುದಾದರೂ ಒಂದು ಬಗೆಯಲ್ಲಿ ನಿಮ್ಮ ಕೈಯಿಂದ ಹಣ ನಷ್ಟವಾಗುತ್ತದೆ. ಇದರ ಜತೆಗೆ ನೀವು ಆಡುವ ಮಾತುಗಳು, ಅದರಲ್ಲೂ ಪರಾಕ್ರಮ, ಶೌರ್ಯದ ಮಾತುಗಳು, ಯಾರು- ಏನು ಮಾಡಿಕೊಳ್ತಾರೋ ನೋಡ್ತೀನಿ ಎಂಬಂಥ ಮಾತುಗಳಿಂದ ಸಮಸ್ಯೆ ಮಾಡಿಕೊಳ್ಳುತ್ತೀರಿ. ನಿಮಗೆ ಬರಬೇಕಾದ ಆರ್ಡರ್ ಗಳು ಬಾರದೆ ಇರಬಹುದು, ಅಥವಾ ನಿಮಗೆ ಕೊಡಬೇಕು ಅಂದುಕೊಂಡಿದ್ದ ಪ್ರಮಾಣಕ್ಕಿಂತ ಕಡಿಮೆ ನಿಮಗೆ ಕೊಡುವಂತಾಗಬಹುದು. ಒಟ್ಟಿನಲ್ಲಿ ಆರ್ಥಿಕವಾಗಿ ನಷ್ಟ ಎದುರಿಸುವಂತಾಗುತ್ತದೆ. ಇದಕ್ಕೆ ಉಪ್ಪು-ಖಾರ ಹಾಕಿದಂತೆ ಶತ್ರುಗಳು, ನಿಮ್ಮ ವಿರೋಧಿಗಳು ಪ್ರಬಲರಾಗುತ್ತಾರೆ. ನಿಮ್ಮ ವಿರುದ್ಧ ಪಿತೂರಿ, ಷಡ್ಯಂತ್ರವನ್ನು ಮಾಡುತ್ತಾರೆ. ಇವುಗಳಿಗೆ ಅಗತ್ಯಕ್ಕಿಂತ ಹೆಚ್ಚು ಪ್ರಚಾರ ಸಿಕ್ಕು, ನಿಮಗೆ ದೊರೆಯಬೇಕಾದ ಸಾಲ, ನೆರವುಗಳು ಸಿಗದಂತೆ ಆಗುತ್ತದೆ. ನರ, ಮೆದುಳಿಗೆ ಸಂಬಂಧಿಸಿದ ಅನಾರೋಗ್ಯ, ತಲೆ ನೋವು ಇಂಥ ಆರೋಗ್ಯ ಬಾಧೆಗಳಿಗೆ ವೆಚ್ಚವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ವೈದ್ಯರು ನೀಡಿದ ಔಷಧಿಯಿಂದಲೇ ರೋಗ ಉಲ್ಬಣ ಸಹ ಆಗಬಹುದು. ಆದ್ದರಿಂದ ಸೂಕ್ತ ವೈದ್ಯರ ಬಳಿ ಹೋಗಿ.

ವೃಷಭ ರಾಶಿ:

ನೀವು ಈ ಹಿಂದೆ ಯಾವಾಗಲೋ ಮಾಡಿದ ಸಹಾಯವನ್ನು ನೆನಪಿಸಿಕೊಂಡು, ಈಗ ನಿಮ್ಮ ಸಹಾಯಕ್ಕೆ ಹಲವರು ಬರಲಿದ್ದಾರೆ. ನಿಮ್ಮ ಮಾತಿನ ಮೂಲಕವೇ ಹಲವು ಕೆಲಸಗಳನ್ನು ಸರಾಗವಾಗಿ ಮಾಡಿಕೊಳ್ಳಲಿದ್ದೀರಿ. ಕುಟುಂಬದಲ್ಲಿ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಲಿದ್ದಾರೆ. ಒಂದು ವೇಳೆ ನಿಮಗೆ ಹಣಕಾಸಿಗೆ ಆ ತನಕ ತೊಂದರೆ ಅಂತ ಇದ್ದರೂ ಕಾರ್ಯಕ್ರಮ ಅಂತ ನಿಗದಿ ಆದ ಕೂಡಲೇ ಒಂದಲ್ಲಾ ಒಂದು ಮೂಲದಿಂದ ಹಣದ ಅನುಕೂಲ ಒದಗಿ ಬರಲಿದೆ. ಈಗಾಗಲೇ ಯಾರಿಗೋ ಹಣ ಕೊಟ್ಟಿದ್ದೀನಿ ಆ ವ್ಯಕ್ತಿಗಳು ಕೆಲಸವೂ ಮಾಡಿಕೊಡುತ್ತಿಲ್ಲ, ಹಣ ಸಹ ವಾಪಸ್ ನೀಡುತ್ತಿಲ್ಲ ಎಂಬ ಸ್ಥಿತಿ ಇದ್ದಲ್ಲಿ ಈ ಅವಧಿಯಲ್ಲಿ ಪ್ರಯತ್ನ ಪಟ್ಟರೆ ಅದನ್ನು ವಸೂಲಿ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಅದಕ್ಕಾಗಿ ಒಂದಿಷ್ಟು ಗಟ್ಟಿ ಪ್ರಯತ್ನ ಹಾಕುವುದು ಮುಖ್ಯವಾಗುತ್ತದೆ. ಸಂತಾನ ಅಪೇಕ್ಷಿತ ನವದಂಪತಿಗೆ ಏನಾದರೂ ದೈಹಿಕ ಸಮಸ್ಯೆಗಳು ಎದುರಾಗಿ, ಅಡೆತಡೆಗಳು ಆಗುತ್ತಿದ್ದಲ್ಲಿ ಅದು ನಿವಾರಣೆ ಆಗಲಿದೆ. ಜತೆಗೆ ನಿರೀಕ್ಷಿತವಾದ ಫಲಿತಾಂಶ ಸಹ ದೊರೆಯುತ್ತದೆ. ಸೂಕ್ತ ವೈದ್ಯರನ್ನು ಭೇಟಿ ಮಾಡಿ, ವೈದ್ಯಕೀಯ ಮಾರ್ಗದರ್ಶನದ ಮೂಲಕ ಪ್ರಯತ್ನ ಮಾಡುತ್ತಿರುವವರಿಗೆ ಸಹ ಈ ಅವಧಿಯಲ್ಲಿ ಉತ್ತಮವಾದ ಫಲಿತಾಂಶ ದೊರೆಯುವ ಸಾಧ್ಯತೆ ಹೆಚ್ಚಿದೆ.

ಮಿಥುನ ರಾಶಿ:

ಪ್ರೀತಿ- ಪ್ರೇಮದಲ್ಲಿ ಇರುವಂಥವರ ಮಧ್ಯೆ ಮೂರನೇ ವ್ಯಕ್ತಿಗಳ ಮಧ್ಯಪ್ರವೇಶದಿಂದ ಬೇಸರ, ಮನಸ್ತಾಪ, ಘರ್ಷಣೆಗಳು ಏರ್ಪಡಲಿವೆ. ದಂಪತಿ ಮಧ್ಯೆ ಸಣ್ಣ- ಪುಟ್ಟ ವಿಚಾರಗಳು ಸಹ ವಿಕೋಪಕ್ಕೆ ಹೋಗಿ ಜಗಳ, ಕದನಗಳು ಆಗಬಹುದು. ಇನ್ನೇನು ಈ ತನಕದ ಆರೋಗ್ಯ ಬಾಧೆಗಳು ನಿವಾರಣೆ ಆಗಿ, ಔಷಧಗಳನ್ನು ನಿಲ್ಲಿಸಬಹುದು ಎಂದುಕೊಂಡಿದ್ದವರಿಗೆ ಆ ಔಷಧಗಳನ್ನು ಮತ್ತೂ ಕೆಲವು ಕಾಲ ಮುಂದುವರಿಸುವ ಸಾಧ್ಯತೆಗಳಿವೆ ಅಥವಾ ಈಗ ನೀಡುತ್ತಿರುವ ಔಷಧಗಳ ಜತೆಗೆ ಇನ್ನಷ್ಟು ಔಷಧವನ್ನು ಸೇರಿಸಿ, ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸುವಂಥ ಸನ್ನಿವೇಶಗಳು ಎದುರಾಗಬಹುದು. ನಿಮ್ಮದೇ ಕೋಪದ ಕಾರಣಕ್ಕೆ ಕೂಗಾಟ- ಕಿರುಚಾಟ ಮಾಡಿ, ಆಪ್ತರು ಹಾಗೂ ನಿಮ್ಮ ಹಿತೈಷಿಗಳಿಂದ ದೂರವಾಗಬಹುದು. ಆದ್ದರಿಂದ ನೀವು ಬಳಸುವ ಪದಗಳ ಬಗ್ಗೆ ಎಚ್ಚರಿಯಿಂದ ಇರುವುದು ಮುಖ್ಯ. ಇನ್ನು ನಿಮ್ಮ ತಾಯಿ ಅಥವಾ ತಾಯಿ ಸಮಾನರಾದವರ ಆರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯವನ್ನು ನೀಡಿ. ಅವರ ಅನಾರೋಗ್ಯ ಸಮಸ್ಯೆಗಳು ನಿಮಗೆ ಆತಂಕವನ್ನು ಉಂಟುಮಾಡಬಹುದು. ವಾಹನ ಚಾಲನೆ ವೇಳೆ ಸಣ್ಣ- ಪುಟ್ಟ ಅಪಘಾತಗಳು ಸಹ ಆಗುವ ಸಾಧ್ಯತೆಗಳು ಹೆಚ್ಚಿವೆ. ವೇಗದ ಚಾಲನೆ ಮಾಡದಿರುವುದು ಕ್ಷೇಮ. ರಾತ್ರಿ ಸಂಚಾರ ಸಾಧ್ಯವಾದಷ್ಟೂ ಬೇಡ.

ಕರ್ಕಾಟಕ ರಾಶಿ:

ನೀವು ಇನ್ನು ಬರಲಾರದು ಎಂದುಕೊಂಡಿದ್ದ ಹಣ ನಿಮ್ಮ ಕೈ ಸೇರುವ ಸಾಧ್ಯತೆಗಳಿವೆ. ಒಂದು ವೇಳೆ ಈ ಹಿಂದೆ ನಿಮ್ಮದು ಯಾವುದಾದರೂ ಬೆಲೆ ಬಾಳುವ ವಸ್ತುಗಳು ಕಳೆದುಹೋಗಿದ್ದಲ್ಲಿ ಈ ಅವಧಿಯಲ್ಲಿ ಅದು ಸಿಕ್ಕಿಬಿಡುವ ಅವಕಾಶಗಳು ಅಥವಾ ಯೋಗ ನಿಮ್ಮ ಪಾಲಿಗಿದೆ. ಸ್ವಂತ ಉದ್ಯಮ, ವ್ಯಾಪಾರ- ವ್ಯವಹಾರವನ್ನು ಮಾಡುತ್ತಿರುವವರಿಗೆ ಹೊಸದಾಗಿ ಆರ್ಡರ್ ಗಳು ಹುಡುಕಿಕೊಂಡು ಬರಬಹುದು. ಬಳಕೆಯಾಗಲು ಯೋಗ್ಯವಲ್ಲ ಎಂದುಕೊಂಡಿದ್ದ ಯಂತ್ರೋಪಕರಣಗಳನ್ನು ದುರಸ್ತಿ ಮಾಡುವುದಕ್ಕೆ ಸಾಧ್ಯ ಎಂಬುದು ನಿಮ್ಮ ಗಮನಕ್ಕೆ ಬರಲಿದೆ. ಅಥವಾ ಎಲ್ಲಿ ರಿಪೇರಿ ಆಗಬಹುದು ಎಂಬುದನ್ನು ನಿಮ್ಮ ಆಪ್ತರು ಅಥವಾ ಸ್ನೇಹಿತರು ಸೂಚಿಸಲಿದ್ದಾರೆ. ಒಟ್ಟಾರೆಯಾಗಿ ಹೇಳಬೇಕು ಅಂದಲ್ಲಿ ಯಾವುದು ನಷ್ಟ, ಇನ್ನು ಹಣ ಕೈ ಸೇರಲ್ಲ ಎಂದುಕೊಂಡಿರುತ್ತೀರೋ ಅಂಥದ್ದು ನಿಮಗೆ ಲಾಭವಾಗಲಿದೆ. ಅದೇ ರೀತಿ ಸೋದರ ಸಂಬಂಧಿಗಳು ನಿಮಗೆ ನೆರವು ನೀಡಲಿದ್ದಾರೆ. ತಮ್ಮಿಂದ ಸಾಧ್ಯವಿಲ್ಲ ಎಂದು ಸಹೋದ್ಯೋಗಿಗಳು ಅಥವಾ ಇತರರು ಕೈ ಬಿಟ್ಟ ಕೆಲಸವನ್ನು ಸಾಧಿಸುವಲ್ಲಿ ಸಫಲರಾಗುತ್ತೀರಿ. ಇದರಿಂದ ನಿಮ್ಮ ಮಾನಸಿಕ ಸ್ಥೈರ್ಯ ಜಾಸ್ತಿ ಆಗಲಿದೆ. ಮೇಲಧಿಕಾರಿಗಳು ಮೆಚ್ಚುಗೆ ಸಹ ವ್ಯಕ್ತಪಡಿಸುತ್ತಾರೆ. ನಿಮ್ಮ ಧೈರ್ಯದ ಸ್ವಭಾವದಿಂದ ಹಲವು ಅನುಕೂಲಗಳು ಆಗಲಿವೆ.

ಸಿಂಹ ರಾಶಿ:

ನಿಮ್ಮ ವಿರುದ್ಧ ವ್ಯವಸ್ಥಿತವಾದ ಅಪಪ್ರಚಾರ ನಡೆಯಲಿದೆ. ಅವರು ಹಾಗಂದರಂತೆ, ಹೀಗಂದರಂತೆ, ಹಿಂದೆ ಒಂದು ಸಲ ಕೆಟ್ಟ ಮಾತುಗಳಿಂದ ಎಲ್ಲರೆದುರು ಜಗಳ ಆಡಿದ್ದರಂತೆ ಹೀಗೆ ನಿಮ್ಮ ಬಗ್ಗೆ ಮಾತು ಸುತ್ತಾಡಲಿವೆ. ಇಲ್ಲಿ ಸಮಸ್ಯೆ ಏನೆಂದರೆ, ನಿಮ್ಮ ರಾಶಿಯವರ ಸ್ವಭಾವಕ್ಕೆ ಆ ರೀತಿಯ ಅಪಪ್ರಚಾರಗಳ ಬಗ್ಗೆ ಯಾವುದೇ ಸಮಜಾಯಿಷಿಗಳನ್ನು ನೀಡುವುದಿಲ್ಲ. ಇಲ್ಲ, ಈ ರೀತಿ ನಾನು ಮಾತನಾಡಿಲ್ಲ ಎಂದೆಲ್ಲ ಹೇಳುವುದಿಲ್ಲ. ಇದು ನಿಮಗೆ ಅಹಂಕಾರ ಜಾಸ್ತಿ ಆಗಿದೆ ಎಂದು ಸಹ ಮಾತು ಆಡುವುದಕ್ಕೆ ಎಡೆ ಮಾಡಿಕೊಡುತ್ತದೆ. ಆದ್ದರಿಂದ ನಿಮ್ಮ ಕಿವಿಗೇ ಬೀಳುವಂತೆ ಆಕ್ಷೇಪಗಳು, ಅಪವಾದಗಳು ಹರಿದಾಡುವಾಗ ಸ್ಪಷ್ಟನೆ ನೀಡುವುದಕ್ಕೆ ಪ್ರಯತ್ನಿಸುವುದು ಉತ್ತಮ. ಒಂದು ವೇಳೆ ನಿಮ್ಮಿಂದ ನಿಜವಾಗಿಯೂ ತಪ್ಪಾಗಿದೆ ಎಂದಾದಲ್ಲಿ ಯಾವುದೇ ಹಿಂಜರಿಕೆ ಇಲ್ಲದೆ ಕ್ಷಮೆ ಕೇಳಿಕೊಂಡು ಬಿಡಿ. ನಿಮ್ಮಲ್ಲಿ ಯಾರು ಅಕೌಂಟಿಂಗ್, ಫೈನಾನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತೀರಿ ಅಂಥವರು ಹಣಕಾಸಿನ ಲೆಕ್ಕಪತ್ರಗಳನ್ನು ಸರಿಯಾಗಿ ಇಟ್ಟುಕೊಳ್ಳುವ ಕಡೆಗೆ ಸರಿಯಾದ ಗಮನವನ್ನು ನೀಡಿ. ಇತರರ ವೈಯಕ್ತಿಕ ಬದುಕಿನ ಬಗ್ಗೆ ಹಗುರವಾದ ಮಾತುಗಳನ್ನಾಡಬೇಡಿ. ಸಂಗಾತಿಗಾಗಲೀ ಅಥವಾ ಅವರ ಕಡೆಯ ಸಂಬಂಧಿಕರಿಗಾಗಲೀ ಸರಿಯಾದ ಗೌರವವನ್ನು ನೀಡಿ.

ಕನ್ಯಾ ರಾಶಿ:

ಇಷ್ಟು ಸಮಯ ನೀವು ಮಾಡುವ ಕೆಲಸದಲ್ಲೋ ವೃತ್ತಿಯಲ್ಲೋ ಏನೋ ತಪ್ಪಾಗುತ್ತಿತ್ತು, ಇದರಿಂದಾಗಿ ನಿಮ್ಮ ಇಮೇಜಿಗೆ ಪೆಟ್ಟು ಬಿದ್ದಿತ್ತು ಎಂದಾದಲ್ಲಿ ಎಲ್ಲಿ ತಪ್ಪಾಗುತ್ತಿತ್ತು ಎಂಬುದು ನಿಮಗೆ ಸ್ಪಷ್ಟವಾಗಲಿದೆ. ಅಷ್ಟೇ ಅಲ್ಲ, ಅವುಗಳನ್ನು ತಿದ್ದುಕೊಳ್ಳುವ ಹಾಗೂ ಭವಿಷ್ಯದಲ್ಲಿ ಹೀಗಾಗದಂತೆ ಮುನ್ನೆಚ್ಚರಿಕೆ ಕೈಗೊಳ್ಳುವ ಮಾರ್ಗಗಳು ನಿಮಗೆ ಗೋಚರ ಆಗುತ್ತವೆ. ಇನ್ನು ಉದ್ಯೋಗ ಸ್ಥಳದಲ್ಲಿ ನಿಮ್ಮ ವಿರುದ್ಧ ಯಾರಾದರೂ ಚಾಡಿ ಹೇಳುತ್ತಿದ್ದರೆ ಹಾಗೂ ನಿಮಗೆ ಸಿಗಬೇಕಾದ ಬಡ್ತಿ, ವೇತನ ಹೆಚ್ಚಳ ದೊರೆಯದಂತೆ ನೋಡಿಕೊಳ್ಳುತ್ತಿದ್ದರೆ ಅಂಥವರು ಯಾರು ಎಂಬ ಬಗ್ಗೆ ಕೂಡ ನಿಮಗೆ ಸುಳಿವು ದೊರೆಯಲಿದೆ. ನಿಮ್ಮ ಎಲ್ಲ ವಿಚಾರವನ್ನು ಹಂಚಿಕೊಳ್ಳುತ್ತಾ ಬಂದಿದ್ದಲ್ಲಿ ಇನ್ನು ಮುಂದೆ ಹೀಗೆ ಎಲ್ಲರೆದುರು ಹೇಳಿಕೊಳ್ಳಬಾರದು ಎಂಬ ಸಂಗತಿ ಗೊತ್ತಾಗುತ್ತದೆ. ಯಾರು ಅನಾರೋಗ್ಯದಿಂದ ಬಳಲುತ್ತಿರುತ್ತೀರಿ, ಮತ್ತು ಯಾವುದೇ ಔಷಧಗಳಿಂದಲೂ ಚೇತರಿಕೆ ಕಾಣುತ್ತಿಲ್ಲ ಎಂಬುದು ನಿಮ್ಮ ಗಮನಕ್ಕೆ ಬರುತ್ತದೆ ಅಂಥವರಿಗೆ ಸೂಕ್ತ ವೈದ್ಯರು ಹಾಗೂ ಔಷಧೋಪಚಾರ ದೊರೆಯುವಂಥ ಯೋಗ ಇದೆ. ನಿಮ್ಮ ವರ್ಚಸ್ಸನ್ನು ವೃದ್ಧಿ ಮಾಡಿಕೊಳ್ಳುವುದಕ್ಕೆ, ಆರೋಗ್ಯಕರವಾದ ಅಭ್ಯಾಸಗಳನ್ನು ಮಾಡುವುದಕ್ಕೆ ಈ ಸಮಯ ನಿಮಗೆ ಪೂರಕವಾದದ್ದು. ಅದಕ್ಕೆ ಬೇಕಾದ ವಾತಾವರಣ ಸಹ ಸೃಷ್ಟಿ ಆಗುತ್ತದೆ.

ಇದನ್ನೂ ಓದಿ: ಈ ರಾಶಿಯವರಿಗೆ ಹೊಸ ವರ್ಷದಲ್ಲಿ ಅವರ ಆಯ್ಕೆಯ ಸಂಗಾತಿ ಪಡೆಯುವ ಅದೃಷ್ಟ ಒಲಿಯಲಿದೆ

ತುಲಾ ರಾಶಿ:

ಏನು ಯೋಚನೆ ಮಾಡಿದರೂ ಎಂಥ ಯೋಜನೆ ಹಾಕಿಕೊಂಡರೂ ಕೆಲವು ಕೆಲಸಗಳು ಮುಗಿಯುತ್ತಲೇ ಇಲ್ಲ ಎಂಬುದು ನಿಮ್ಮ ಗಮನಕ್ಕೆ ಬರುತ್ತದೆ. ನಿಮ್ಮ ನಂತರದಲ್ಲಿ ಕೆಲಸ ಆರಂಭಿಸಿದವರದು ಹಾಗೂ ನಿಮಗಿಂತ ಕಡಿಮೆ ಆಸಕ್ತಿ ತೋರಿಸಿ, ಕೆಲಸ ಮಾಡಿದಂಥವರದ್ದೆಲ್ಲ ಸಲೀಸಾಗಿ ನಿಮ್ಮ ಕಣ್ಣೆದುರು ಯಶಸ್ಸು ದೊರೆಯುವುದು ಮಾನಸಿಕವಾಗಿ ಕುಗ್ಗುವಂತೆ ಆಗುತ್ತದೆ. ಇದರ ಜತೆಗೆ ಏಕಾಗ್ರತೆ ಕೊರತೆಯಿಂದಾಗಿ ಸಣ್ಣ- ಪುಟ್ಟ ಅಪಘಾತಗಳು ಆಗಬಹುದು. ಇನ್ನು ತಲೆ ಸುತ್ತು, ಸುಸ್ತು, ವಿಪರೀತ ನಿದ್ದೆ, ಯಾವ ಕೆಲಸದಲ್ಲೂ ಆಸಕ್ತಿ ಇಲ್ಲದಂತೆ ಆಗುವುದು ಈ ರೀತಿಯಾದ ಸನ್ನಿವೇಶಗಳನ್ನು ನೀವು ಎದುರಿಸಲಿದ್ದೀರಿ. ನೀವು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ತಪ್ಪುಗಳು ಕಾಣಿಸಿಕೊಳ್ಳುತ್ತವೆ. ನಿಮ್ಮ ಮೇಲಧಿಕಾರಿಗಳಿಂದ ಚುಚ್ಚು ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಹೀಗೆ ಆಗುವುದರಿಂದ ನಿಮ್ಮಲ್ಲಿ ಕೆಲವರು ಕೆಲಸವೇ ಬೇಡ, ಇದನ್ನು ಬಿಟ್ಟು ಸ್ವಂತದ್ದೇನಾದರೂ ಮಾಡುತ್ತೇನೆ ಎಂದು ಅಂದುಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಖರ್ಚುಗಳು ಸಹ ವಿಪರೀತ ಹೆಚ್ಚಾಗಲಿವೆ. ಒಂದೇ ವಸ್ತುವನ್ನು ಎರಡೆರಡು ಬಾರಿ ತರುವುದು, ಎಲ್ಲಿಯಾದರೂ ಕಳೆದುಕೊಳ್ಳುವುದು ಹೀಗೆಲ್ಲ ಆಗಿ, ಆರ್ಥಿಕವಾಗಿಯೂ ನಷ್ಟವನ್ನು ಅನುಭವಿಸುತ್ತೀರಿ. ಮಾನಸಿಕ ಖಿನ್ನತೆಗೆ ಗುರಿ ಕೂಡ ಆಗುತ್ತೀರಿ.

ವೃಶ್ಚಿಕ ರಾಶಿ:

ಯಾರು ಅನಾರೋಗ್ಯದಿಂದ ಬಳಲುತ್ತಿದ್ದೀರಿ ಅಂಥವರಿಗೆ ಸಮಸ್ಯೆಗಳಿಂದ ಹೊರ ಬರುವುದಕ್ಕೆ ಮಾರ್ಗೋಪಾಯಗಳು ಗೋಚರ ಆಗಲಿವೆ. ಇನ್ನು ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಸಾಧ್ಯವಿಲ್ಲ, ನೀವು ಈ ಸಮಸ್ಯೆಯನ್ನು ಅನುಭವಿಸಲೇಬೇಕು ಎಂದು ವೈದ್ಯರು ಹೇಳಿದಂಥ ದೈಹಿಕ ಬಾಧೆಗಳಿಗೆ ಪರಿಹಾರಗಳು ದೊರೆಯುವ ಯೋಗ ಇದೆ. ನೀವು ಖರೀದಿ ಮಾಡುವುದಕ್ಕೆ ಸಾಧ್ಯವಿಲ್ಲ ಎಂದುಕೊಂಡಿದ್ದ ವಾಹನಗಳು, ಎಲೆಕ್ಟ್ರಿಕ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಬೇಕಾದ ಹಣಕಾಸಿನ ವ್ಯವಸ್ಥೆಗಳು ನಿಮಗೆ ಸರಾಗವಾಗಿ ಒದಗಿ ಬರಲಿವೆ. ಒಂದು ವೇಳೆ ನಿಮ್ಮ ಉದ್ಯೋಗ ಸ್ಥಳದಲ್ಲಿ ಯಾರಾದರೂ ತೊಂದರೆ ಮಾಡಬೇಕು ಎಂಬ ಉದ್ದೇಶದಿಂದಲೇ ದೂರು ಹೇಳಿದಲ್ಲಿ ಅಥವಾ ಬೇಕೆಂತಲೇ ಕಿರಿಕಿರಿ ಮಾಡುತ್ತಿದ್ದಲ್ಲಿ ಅಂಥವರೇ ಸಮಸ್ಯೆಗೆ ಸಿಲುಕಿಕೊಳ್ಳಲಿದ್ದಾರೆ. ನಿಮ್ಮಲ್ಲಿ ಯಾರು ಸ್ವಂತ ಉದ್ಯಮ, ವ್ಯವಹಾರ, ವ್ಯಾಪಾರಗಳನ್ನು ಮಾಡುತ್ತಿದ್ದೀರಿ ಅಂಥವರಿಗೆ ಆದಾಯದಲ್ಲಿ ದೊಡ್ಡ ಪ್ರಮಾಣದ ಏರಿಕೆಯನ್ನು ನಿರೀಕ್ಷೆ ಮಾಡಬಹುದು. ಅಷ್ಟೇ ಅಲ್ಲ, ಲಾಭದ ಪ್ರಮಾಣ ಸಹ ಜಾಸ್ತಿ ಆಗಲಿದೆ. ಮನೆಯಲ್ಲಿ ಪಾರ್ಟಿ, ಗೆಟ್ ಟು ಗೆದರ್, ದೊಡ್ಡ ಮಟ್ಟದ ಪೂಜೆ- ಪುನಸ್ಕಾರಗಳನ್ನು ಆಯೋಜನೆ ಮಾಡುವ ಯೋಗ ಇದ್ದು, ಇದರಿಂದ ಸಂತೋಷವನ್ನು ಕಾಣುವಿರಿ.

ಧನುಸ್ಸು ರಾಶಿ:

ನಿಮ್ಮಲ್ಲಿ ಯಾರು ವಿವಾಹಕ್ಕಾಗಿ ಪ್ರಯತ್ನ ಮಾಡುತ್ತಿದ್ದೀರಿ ಅಂಥವರಿಗೆ ಈ ಅವಧಿಯಲ್ಲಿ ಅನುಕೂಲ ಒದಗಿ ಬರಲಿದೆ. ಅದರಲ್ಲೂ ಪ್ರಯಾಣದಲ್ಲಿ ಆದ ಪರಿಚಯದ ಮೂಲಕ ಮದುವೆಗೆ ಅನುಕೂಲ ಒದಗಿ ಬರಲಿದೆ. ಇನ್ನು ಪಾರ್ಟನರ್ ಷಿಪ್ ವ್ಯವಹಾರಗಳು ಕೈ ಹಿಡಿಯಲಿವೆ. ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಮಟ್ಟದ ಸಹಾಯವನ್ನು ನಿಮ್ಮ ಪಾರ್ಟನರ್ ಗಳು ಮಾಡಿಕೊಳ್ಳಲಿದ್ದೀರಿ. ಇನ್ನು ನಿಮ್ಮಲ್ಲಿ ಕೆಲವರು ವಿದೇಶಕ್ಕೆ ತೆರಳುವಂಥ ಯೋಗ ಸಹ ಇದೆ. ಇದು ಅಲ್ಪಾವಧಿಯದ್ದಾಗಿರುವ ಸಾಧ್ಯತೆ ಇದೆ. ನಿಮಗಿಂತ ಚಿಕ್ಕ ವಯಸ್ಸಿನವರ ಜತೆಗಿನ ಮಾತುಕತೆಗಳಿಂದ ಹೆಚ್ಚಿನ ಲಾಭ ದೊರೆಯುವ ಯೋಗ ಇದೆ. ನಿಮ್ಮಲ್ಲಿ ಯಾರು ವ್ಯಾಪಾರ, ವ್ಯವಹಾರ ವಿಸ್ತರಣೆಗಾಗಿ ಹೊಸ ವಿತರಕರು, ಮಾರಾಟಗಾರರು, ಏಜೆನ್ಸಿಗಳು ಈ ಥರದ್ದನ್ನು ಹುಡುಕುತ್ತಾ ಪ್ರವಾಸವನ್ನು ಮಾಡುತ್ತಿದ್ದೀರಿ ಅಂಥವರಿಗೆ ವ್ಯಾಪಾರ ವೃದ್ಧಿಯಾಗಲು ಬೇಕಾದ ವೇದಿಕೆ, ಸಹಕಾರ ಸಿದ್ಧವಾಗಲಿದೆ. ಇದೇ ಮೊದಲ ಬಾರಿಗೆ ಎಂದು ನೀವು ಮಾಡಿದ ಕೆಲಸಗಳಲ್ಲಿ ಯಶಸ್ಸನ್ನು ಕಾಣಲಿದ್ದೀರಿ. ಮಕ್ಕಳ ಶೈಕ್ಷಣಿಕ ಯಶಸ್ಸು ನಿಮಗೆ ಸಮಾಧಾನ ತರಲಿದೆ. ದೂರದ ಊರುಗಳಿಂದ, ವಿದೇಶಗಳಿಂದ ವ್ಯಾಪಾರ- ವ್ಯವಹಾರಕ್ಕೆ ಸಂಬಂಧಿಸಿದ ಶುಭ ಸುದ್ದಿ ಕೇಳಿಬರಲಿದೆ.

ಮಕರ ರಾಶಿ:

ನಿಮ್ಮ ಅತಿಯಾದ ಬುದ್ಧಿವಂತಿಕೆಯಿಂದ ಭಾರೀ ನಷ್ಟವನ್ನು ಕಾಣುವಂತಾಗುತ್ತದೆ. ಆದ್ದರಿಂದ ನೀವು ಮಾಡುವ ಕೆಲಸ ಅದೆಷ್ಟೇ ಸಣ್ಣದಿದ್ದರೂ ಸರಿಯಾದ ಮಾರ್ಗದರ್ಶನವನ್ನು ಪಡೆದುಕೊಂಡು ಮುಂದುವರಿಯಿರಿ. ಹಿತಶತ್ರುಗಳು ನಿಮ್ಮ ದಾರಿಯನ್ನು ತಪ್ಪಿಸಲಿದ್ದಾರೆ. ತೀರ್ಮಾನಗಳನ್ನು ಹೇಳುವುದಕ್ಕೆ ಸಮಯ ಇನ್ನೂ ಇರುವಾಗ ಆತುರ ಪಡುವುದಕ್ಕೆ ಹೋಗಬೇಡಿ. ಕಾದಿದ್ದು, ಸರಿಯಾದ ನಿರ್ಧಾರವನ್ನು ಹೇಳಿ. ಬಾಯಿ ಹುಣ್ಣು, ಗಂಟಲು ನೋವು, ತಲೆ ಹೊಟ್ಟು, ಸೋರಿಯಾಸಿಸ್ ನಂಥ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಅದು ಉಲ್ಬಣ ಆಗಲಿದೆ. ನಿಮ್ಮಲ್ಲಿ ಕೆಲವರಿಗೆ ಔಷಧಗಳ ಅಲರ್ಜಿ ಸಹ ಆಗಬಹುದು. ಆದ್ದರಿಂದ ಈ ರೀತಿಯ ಸಮಸ್ಯೆ ತೀವ್ರವಾಗುತ್ತಿದ್ದರೆ ಅಥವಾ ಕಾಣಿಸಿಕೊಂಡರೆ ಕೂಡಲೇ ಸೂಕ್ತ ವೈದ್ಯೋಪಚಾರವನ್ನು ಪಡೆದುಕೊಳ್ಳಿ. ಯಾವುದೇ ಕಾರಣಕ್ಕೂ ಸ್ವಯಂ ವೈದ್ಯ ಮಾಡಿಕೊಳ್ಳಬೇಡಿ. ಇನ್ನು ಇತರರ ವಾಹನಗಳನ್ನಾಗಲೀ ಅಥವಾ ಗ್ಯಾಜೆಟ್ ಗಳನ್ನಾಗಲೀ ಬಳಸುವುದಕ್ಕೆ ಹೋಗಬೇಡಿ. ಒಂದು ವೇಳೆ ಹಾಗೆ ಬಳಸಿದಲ್ಲಿ ಅವುಗಳಲ್ಲಿ ಏನಾದರೊಂದು ಸಮಸ್ಯೆಗಳು ಕಾಣಿಸಿಕೊಂಡು ಕೈಯಿಂದ ಹಣ ಕಟ್ಟಿಕೊಡಬೇಕಾದಂಥ ಸನ್ನಿವೇಶ ಸೃಷ್ಟಿ ಆಗಬಹುದು. ವಿದ್ಯುತ್ ವೋಲ್ಟೇಜ್ ಏರಿಳಿತದಿಂದ ಮನೆಯ ಎಲೆಕ್ಟ್ರಾನಿಕ್, ಎಲೆಕ್ಟ್ರಿಕಲ್ ವಸ್ತುಗಳು ಹಾಳಾಗುವ ಯೋಗ ಸಹ ಇದೆ.

ಕುಂಭ ರಾಶಿ:

ಕೋರ್ಟ್- ಕಚೇರಿಗಳಲ್ಲಿ ಏನಾದರೂ ವ್ಯಾಜ್ಯಗಳಿದ್ದಲ್ಲಿ ಅದನ್ನು ರಾಜೀ- ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಮಾರ್ಗೋಪಾಯಗಳು ಗೋಚರ ಆಗುತ್ತವೆ. ವಿದೇಶಗಳಲ್ಲಿ ಉದ್ಯೋಗಾವಕಾಶಗಳು ಹುಡುಕಿಕೊಂಡು ಬರುವಂಥ ಯೋಗ ಇದೆ. ಈ ಹಿಂದೆ ಕೆಲಸ ಮಾಡಿ, ಬಿಟ್ಟಂಥ ಕಡೆಯಿಂದ ಹೆಚ್ಚಿನ ಸಂಬಳದ ಹಾಗೂ ಒಳ್ಳೆ ಹುದ್ದೆಯ ಆಫರ್ ನೊಂದಿಗೆ ನಿಮ್ಮನ್ನು ಕೇಳುವಂಥ ಯೋಗ ಇದೆ. ಈ ಅವಧಿಯಲ್ಲಿ ನಿಮಗೆ ಇರುವಂಥ ಪರೀಕ್ಷೆಗಳಲ್ಲಿ ನಿಮ್ಮ ಸಾಧನೆ ಉತ್ತಮವಾಗಿರುತ್ತದೆ. ಒಂದು ವೇಳೆ ನೀವೇನಾದರೂ ವಿದ್ಯಾರ್ಥಿ ವೇತನಕ್ಕಾಗಿ ಪ್ರಯತ್ನ ಪಡುತ್ತಿದ್ದೀರಿ ಎಂದಾದಲ್ಲಿ ಅದರಲ್ಲಿ ಸಹ ನಿಮಗೆ ಯಶಸ್ಸು ದೊರೆಯುತ್ತದೆ. ಒಂದು ವೇಳೆ ನೀವೇನಾದರೂ ಸ್ವಂತ ಉದ್ಯಮ, ವ್ಯಾಪಾರ, ವ್ಯವಹಾರ ಏನಾದರೂ ಮಾಡುತ್ತಿದ್ದೀರಿ ಅಂತಾದಲ್ಲಿ ಉತ್ತಮ, ಪ್ರತಿಷ್ಠಿತ ಸಂಸ್ಥೆಗಳಿಂದ ಹೂಡಿಕೆ ಪ್ರಸ್ತಾವ ಬರುವಂಥ ಸಾಧ್ಯತೆ ಇದೆ. ಉದ್ಯೋಗ ಸ್ಥಳದಲ್ಲಿ ವ್ಯವಹಾರ ವಿಸ್ತರಣೆಗಾಗಿಯೋ ಅಥವಾ ಹೊಸ ವ್ಯಾಪಾರವನ್ನು ತರುವುದರ ಸಲುವಾಗಿಯೋ ನಿಮಗೆ ಪ್ರಯಾಣ ಮಾಡಬೇಕು ಎಂದು ಸೂಚಿಸಬಹುದು. ನಿಮಗಾಗಿಯೇ ಒಂದು ಪ್ರಾಜೆಕ್ಟ್ ಮುನ್ನಡೆಸುವಂಥ ಅವಕಾಶ ನೀಡಿ, ದೊಡ್ಡ ತಂಡವೊಂದರ ನಾಯಕತ್ವವನ್ನು ನೀಡಿ, ಬಡ್ತಿ ನೀಡುವ ಭರವಸೆ ಸಹ ನೀಡಬಹುದು.

ಮೀನ ರಾಶಿ:

ನಿಮ್ಮ ಹಳೇ ವಾಹನವನ್ನು, ಸೈಟು, ಮನೆ, ಜಮೀನನ್ನು ಮಾರಾಟಕ್ಕೆ ಇಟ್ಟಿದ್ದಲ್ಲಿ ಈ ಅವಧಿಯಲ್ಲಿ ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಆಗುವಂಥ ಸಾಧ್ಯತೆಗಳಿವೆ. ಒಂದು ವೇಳೆ ಈಗಾಗಲೇ ಜಾಗ ಖರೀದಿಗೆ ಹಣ ನೀಡಿದ್ದೇವೆ, ಈಗ ಬನ್ನಿ- ಆಗ ಬನ್ನಿ ಎಂದು ಸತಾಯಿಸುತ್ತಿದ್ದಾರೆ ಎಂದಾದಲ್ಲಿ ಈ ಅವಧಿಯಲ್ಲಿ ಗಟ್ಟಿ ಪ್ರಯತ್ನವನ್ನು ಹಾಕಿದರೆ ಆ ಸ್ಥಳದ ನೋಂದಣಿಯನ್ನೇ ನೀವು ಮಾಡಿಸಿಕೊಳ್ಳುವುದಕ್ಕೆ ಸಾಧ್ಯತೆಗಳು ಕಂಡುಬರುತ್ತಿವೆ. ಈಗಾಗಲೇ ಕಾರು ಇದೆ ಎಂದಿರುವವರು ಸಹ ಐಷಾರಾಮಿ ವಾಹನವನ್ನು ಖರೀದಿ ಮಾಡುವುದಕ್ಕೆ ಯೋಗ ಕೂಡಿ ಬರಲಿದೆ. ಒಂದು ವೇಳೆ ನಿಮ್ಮ ಸ್ನೇಹಿತರೋ ಅಥವಾ ಆಪ್ತರೇ ತಮ್ಮ ವಾಹನವನ್ನು ನಿಮಗೆ ಕೊಟ್ಟು, ತಾವು ವಾಪಸ್ ಕೇಳುವ ತನಕ ಅದನ್ನು ಬಳಸಿಕೊಳ್ಳುವಂತೆ ತಿಳಿಸುವ ಯೋಗ ಸಹ ಇದೆ. ಒಟ್ಟಿನಲ್ಲಿ ಹೇಳಬೇಕು ಅಂದರೆ ವಾಹನದ ಸುಖ ಪಡುವ ಯೋಗ ನಿಮ್ಮ ಪಾಲಿಗೆ ಇದೆ. ಈಗಾಗಲೇ ವಿವಾಹ ನಿಶ್ಚಯ ಆಗಿದೆ ಎಂದಿರುವವರು ಮಾತ್ರ ಸ್ವಲ್ಪ ಎಚ್ಚರಿಕೆಯನ್ನು ವಹಿಸಿ. ಮೂರನೇ ವ್ಯಕ್ತಿಗಳ ಚಾಡಿ ಮಾತಿನಿಂದ ನಿಶ್ಚಿತಾರ್ಥ ಮುರಿದು ಬೀಳುವ ಅಪಾಯ ಇದೆ. ಹಾಗೆ ಆಗದಂತೆ ಎಚ್ಚರಿಕೆಯನ್ನು ವಹಿಸಿ. ಎಲ್ಲರ ಜತೆಗೂ ಪಾರದರ್ಶಕವಾಗಿ ಇರುವುದಕ್ಕೆ ಪ್ರಯತ್ನಿಸಿ. ನಿಮ್ಮ ಕೀರ್ತಿ, ಪ್ರತಿಷ್ಠೆ ಹೆಚ್ಚಾಗುತ್ತದೆ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ