Monthly Horoscope December 2023: ಡಿಸೆಂಬರ್ ಮಾಸದಲ್ಲಿ ದ್ವಾದಶ ರಾಶಿಗಳ ಗ್ರಹಚಾರ ಫಲ, ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?
ಡಿಸೆಂಬರ್ ತಿಂಗಳ ದ್ವಾದಶ ರಾಶಿ ಭವಿಷ್ಯ: 2023ರ ಡಿಸೆಂಬರ್ ತಿಂಗಳಲ್ಲಿ ಯಾವ ರಾಶಿಗಳ ಮೇಲೆ ಪ್ರಭಾವವನ್ನು ಬೀರಲಿದೆ..? ಡಿಸೆಂಬರ್ ನಲ್ಲಿ ಯಾವ ರಾಶಿಗೆ ಶುಭಫಲ, ಯಾರು ಎಚ್ಚರಿಕೆಯಿಂದ ಇರಬೇಕು? ಡಿಸೆಂಬರ್ ತಿಂಗಳ ಗ್ರಹಗತಿಗಳ ಪ್ರಕಾರ, ಯಾವ ರಾಶಿಗೆ ಏನು ಫಲ? ಎನ್ನುವುದನ್ನು ಮಾಸ ಭವಿಷ್ಯದಲ್ಲಿ ತಿಳಿಯಿರಿ.
ಜ್ಯೋತಿಷ್ಯ (Astrology) ಶಾಸ್ತ್ರದ ಪ್ರಕಾರ, ಪ್ರತಿ ಗ್ರಹವೂ ಕೂಡ ನಿರ್ದಿಷ್ಟ ಸಮಯದಲ್ಲಿ ರಾಶಿಚಕ್ರವನ್ನು ಬದಲಾಯಿಸುತ್ತವೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಅದರಂತೆ ಡಿಸೆಂಬರ್ ತಿಂಗಳ ಗ್ರಹಗತಿಗಳ ಪ್ರಕಾರ, ಯಾವ ರಾಶಿಗೆ ಏನು ಫಲ? ಎನ್ನುವುದನ್ನು ಮಾಸ ಭವಿಷ್ಯದಲ್ಲಿ ನೀಡಲಾಗಿದೆ. ಹಾಗಾದರೆ, ಡಿಸೆಂಬರ್ ತಿಂಗಳ ನಿಮ್ಮ ರಾಶಿ ಭವಿಷ್ಯದಲ್ಲಿ ಏನು ಇದೆ ಎನ್ನುವುದನ್ನು ತಿಳಿದುಕೊಳ್ಳಿ.
ಮೇಷ ರಾಶಿ: 2023ರ ಕೊನೆಯ ತಿಂಗಳು ಡಿಸೆಂಬರ್. ಈ ತಿಂಗಳಲ್ಲಿ ಗ್ರಹಗತಿಗಳ ಬದಲಾವಣೆಯು ನಿಮ್ಮ ಜೀವನದಲ್ಲಿಯೂ ಅನೇಕ ಬದಲಾವಣೆಯನ್ನು ಮಾಡುವರು. ದ್ವಾದಶದಲ್ಲಿ ರಾಹುವು ಇದ್ದರೂ ನಿಮ್ಮ ರಾಶಿಯಲ್ಲಿಯೇ ಗುರುವು ಇರುವುದರಿಂದ ಯಾವ ಅನಿಷ್ಟವೂ ಫಲಿಸದು. ಏಕಾದಶದಲ್ಲಿ ಶನಿಯು ನಿಮ್ಮ ಸಕಲ ಅಭೀಷ್ಟಗಳನ್ನು ಪೂರೈಸುವನು. ಸಪ್ತಮದಲ್ಲಿ ಶುಕ್ರನು ಸಂಗಾತಿಯಿಂದ ಲಾಭವನ್ನು ಕೊಡಿಸುವನು. ಸೂರ್ಯ ಹಾಗೂ ಕುಜರು ನವಮದಲ್ಲಿ ಇರುವುದು ಜನ್ಮಾಂತರ ಶುಭಫಲವು ಈಗ ಪ್ರಾಪ್ತವಾಗುವುದು. ಕೇತುವು ಷಷ್ಠದಲ್ಲಿದ್ದು ಶತ್ರುಬಾಧೆಯಿಂದ ಮುಕ್ತರಾಗಿ ನಿಶ್ಚಿಂತೆಯಿಂದ ಇರುವಿರಿ. ಶುಕ್ರ ಹಾಗೂ ಬುಧರು ಅಷ್ಟಮದಲ್ಲಿ ಇರುವುದು ಶುಭವಲ್ಲ. ಸ್ತ್ರೀಯರಿಂದ ಅಪಮಾನವಾಗಬಹುದು. ಬಂಧುಗಳು ನಿಮ್ಮ ಬಗ್ಗೆ ನಕಾರಾತ್ಮಕ ಭಾವವನ್ನು ಇಟ್ಟುಕೊಳ್ಳುವರು. ಸುಬ್ರಹ್ಮಣ್ಯನು ಉಪಾಸನೆ ಮಾಡಿದವರ ಕೈ ಬಿಡದೇ ದಡವನ್ನು ಸೇರಿಸುವನು.
ವೃಷಭ ರಾಶಿ : ಡಿಸೆಂಬರ್ ತಿಂಗಳು ಕೊನೆಯ ತಿಂಗಳಾಗಿದ್ದು, ಗ್ರಹಗಳು ಕೊಂಚ ಬದಲಾವಣೆ ಆಗಲಿದ್ದು ಮಿಶ್ರಫಲವನ್ನು ಕೊಡುವರು. ಗುರುವು ದ್ವಾದಶದಲ್ಲಿ ಇದ್ದು ಬಲಹೀನನಾಗಿ ಎಲ್ಲ ಕಾರ್ಯಗಳಿಗೂ ಅಡೆತಡೆಯು ಉಂಟಾಗುವುದು. ಧನನಷ್ಟವೂ ಹೆಚ್ಚಾಗುವುದು. ಏಕಾದಶದಲ್ಲಿ ರಾಹುವಿದ್ದು ನಿಮಗೆ ಕೆಲವು ಲಾಭವನ್ನು ಮಾಡುವನು. ಹಣದ ಆಗಮನವೂ ಚೆನ್ನಾಗಿ ಇರಲಿದೆ. ಅಷ್ಟಮದಲ್ಲಿ ಸೂರ್ಯ ಹಾಗೂ ಕುಜರಿದ್ದು ಆರೋಗ್ಯವು ಹದಗೆಡಬಹುದು. ಚಿಕಿತ್ಸೆಗೂ ಹೋಗಬಹುದು. ಎಚ್ಚರಿಕೆ ಇರಲಿ. ಶುಕ್ರ ಹಾಗೂ ಬುಧರು ಸಪ್ತಮದಲ್ಲಿ ಇದ್ದು ಬಂಧುಜನರಲ್ಲಿ ಪ್ರೇಮವು ಉಂಟಾಗುವುದು. ಪಂಚಮದಲ್ಲಿ ಕೇತುವುದು ವಿದ್ಯಾಭ್ಯಾಸದಲ್ಲಿ ನಿರೀಕ್ಷಿತ ಫಲವು ಸಿಗದು. ದಶಮದ ಶನಿಯು ವೃತ್ತಿಯಲ್ಲಿ ಆಲಸ್ಯವನ್ನು ಕೊಡಿಸುವನು. ಮಹಾಲಕ್ಷ್ಮಿಯ ಉಪಾಸನೆಯು ಅಗತ್ಯ.
ಮಿಥುನ ರಾಶಿ : 2023ರ ಕೊನೆಯ ತಿಂಗಳ ಒಂದಿಷ್ಟು ಶುಭಫಲವು ನಿಮಗೆ ಇರಲಿದೆ. ದಶಮದಲ್ಲಿ ರಾಹುವಿದ್ದು, ವೃತ್ತಿಯಲ್ಲಿ ಕಿರಿಕಿರಿ, ಒತ್ತಡಗಳು ಹೆಚ್ಚು ಕಾಣಿಸಿಕೊಳ್ಳುವುದು. ಏನೂ ಬೇಡ ಎಂದೂ ಆಗಾಗ ಅನ್ನಿಸಬಹುದು. ಗುರುವು ಬಲದಿಂದ ಇರುವ ಕಾರಣ ಅದು ಕ್ಷಣ ಕಾಲ ಅನ್ನಿಸಿ, ಅನಂತರ ಸರಿಯಾಗುವುದು. ನವಮದಲ್ಲಿ ಶನಿಯು ನಿಮಗೆ ಎಲ್ಲ ಕೆಲಸದಲ್ಲಿಯೂ ಸಾವಧಾನತೆಯನ್ನು ಕೊಡುವನು. ಅವಿವಾಹಿತರು ವಿವಾಹಕ್ಕಾಗಿ ಮುಂದುವರಿಯಬಹುದು. ಚತುರ್ಥದಲ್ಲಿ ಕೇತುವಿದ್ದು ಮನೆಯಲ್ಲಿ ಸಾಮರಸ್ಯವು ಕಾಣಿಸಿಕೊಳ್ಳಬಹುದು. ಸಪ್ತಮದಲ್ಲಿ ಸೂರ್ಯನು ಇದ್ದು ಕುಜನೂ ಇರುವ ಕಾರಣ, ಉದ್ಯೋಗದಲ್ಲಿ ಇರುವವರು ವಿದೇಶಕ್ಕೆ ಹೋಗುವ ಅವಕಾಶವು ಸಿಗಲಿದೆ. ಬಂಧುಗಳು ಶತ್ರುಗಳಾಗಬಹುದು. ನಿಮ್ಮ ಮಾತು ಕೆಲವರಿಗೆ ನೋವನ್ನು ಕೊಡಬಹುದು. ಲಕ್ಷ್ಮೀನಾರಾಯಣನ ಉಪಾಸನೆಯು ನಿಮಗೆ ಉಪಯುಕ್ತವಾದೀತು.
ಕಟಕ ರಾಶಿ : ವರ್ಷ ಕೊನೆಯ ತಿಂಗಳು ನಿಮಗೆ ಗ್ರಹಗಳು ಮಧ್ಯಮಫಲವನ್ನು ಕೊಡುವರು. ತೃತೀಯದಲ್ಲಿ ಕೇತುವು ಸಹೋದರರ ನಡುವೆ ವೈಮನಸ್ಸು ಉಂಟಾಗುವಂತೆ ಮಾಡುವನು. ದಶಮದಲ್ಲಿ ಗುರುವಿದ್ದು ನಿಮಗೆ ಪೂರ್ಣಬಲವನ್ನು ಕೊಡಲು ಅಸಮರ್ಥನಾಗುವನು. ನಿಮ್ಮ ತಾಳ್ಮೆಯು ಕಡಿಮೆಯಾಗಿ ಎಲ್ಲ ವಿಚಾರಕ್ಕೂ ಸಿಟ್ಟಾಗುವಿರಿ. ಶನಿಯು ನಿಮ್ಮ ಅಷ್ಟಮಸ್ಥಾನದಲ್ಲಿದ್ದು ಸಂಕಷ್ಟದ ಜೊತೆ ಕಳೆಯಬೇಕಾಗುವುದು. ಷಷ್ಠಸ್ಥಾನದಲ್ಲಿ ಸೂರ್ಯ ಹಾಗೂ ಕುಜರಿರುವುದರಿಂದ ಶತ್ರುಗಳ ವಿಚಾರವನ್ನು ಅನಾದರ ಮಾಡುವಂತಿಲ್ಲ. ಪಂಚಮದಲ್ಲಿ ಶುಕ್ರ ಹಾಗೂ ಬುಧರಿದ್ದು ಮಕ್ಕಳು ಕೇಳಿದ ವ್ಯವಸ್ಥೆಯನ್ನು ಮಾಡಿಕೊಳ್ಳುವಿರಿ. ಯಾರನ್ನೂ ಎದುರು ಹಾಕಿಕೊಳ್ಳದೇ ಜಾಣ್ಮೆಯಿಂದ ಹೆಜ್ಜೆ ಇಡುವುದು ನಿಮ್ಮ ಯಶಸ್ಸಿಗೆ ಕಾರಣವಾಗಲಿದೆ. ನವಮದಲ್ಲಿ ರಾಹುವಿದ್ದು ಅಕಾರ್ಯಕ್ಕೆ ಫಲವನ್ನು ಕೊಡುವನು. ಕಾರ್ಯದಲ್ಲಿ ಊಹಿಸಿದಷ್ಟು ಯಶಸ್ಸು ಸಿಗದೇ ಹೋಗಬಹುದು ಅಥವಾ ವಿಪರೀತವಾಗಿ ಬರಬಹುದು. ಕುಲದೇವರ ಆರಾಧನೆಯು ಮುಖ್ಯವಾಗಿರಲಿ.
ಸಿಂಹ ರಾಶಿ : ಈ ತಿಂಗಳು ವರ್ಷದ ಕೊನೆಯಾಗಿದ್ದು ಗ್ರಹಗಳು ನಿಮಗೆ ಮಿಶ್ರಫಲವನ್ನು ನೀಡುವರು. ದ್ವಿತೀಯದಲ್ಲಿ ಕೇತುವಿದ್ದು ಬರುವ ಸಂಪತ್ತಿಗಾಗಿ ಹೆಚ್ಚು ಓಡಾಡಬೇಕಾಗುವುದು. ಆದರೂ ಸಿಗುತ್ತದೆ ಎಂಬ ನಂಬಿಕೆ ಬೇಡ. ಪಂಚಮದಲ್ಲಿ ಸೂರ್ಯ ಹಾಗೂ ಕುಜರು ಇರಲಿದ್ದು ಮಕ್ಕಳಿಂದ ಶುಭ ವಾರ್ತೆಯನ್ನು ಕೇಳುವಿರಿ. ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆಯು ಇರಲಿದೆ. ನವಮದಲ್ಲಿ ಗುರುವಿದ್ದು ನಿಮಗೆ ಬಲವಂತನಾಗಿ ನಿಮ್ಮ ಸಕಲ ಕಂಟಕಗಳನ್ನೂ ದೂರ ಮಾಡುವನು. ಚತುರ್ಥದಲ್ಲಿ ಇರುವ ಶುಕ್ರನು ಕುಟುಂಬದಲ್ಲಿ ಇರಬೇಕಾದ ಸುಖ, ಶಾಂತಿಯನ್ನು ನೀಡುವನು. ಶನಿಯು ಸಪ್ತಮಸ್ಥಾನದಲ್ಲಿ ಸಂಗಾತಿಯ ವಿಚಾರದಲ್ಲಿ ಐಕಮತ್ಯವನ್ನು ಹಾಳುಮಾಡುವನು. ಚತುರ್ಥದಲ್ಲಿ ಬುಧನಿದ್ದು ನಿಮಗೆ ಬಂಧುಗಳ ಸಹವಾಸವು ಅಧಿಕವಾಗಿ ಇರಲಿದೆ. ಅವರಿಂದ ಸಹಕಾರವನ್ನೂ ನೀವು ನಿರೀಕ್ಷಿಸಬಹುದು. ಶಿವನ ಉಪಾಸನೆಯು ನಿಮಗೆ ನಿನ್ನಷ್ಟು ಬಲವನ್ನು ಕೊಡುವುದು.
ಕನ್ಯಾ ರಾಶಿ : ಡಿಸೆಂಬರ್ ತಿಂಗಳು ಇದು ವರ್ಷದ ಕೊನೆಯ ತಿಂಗಳು. ಇನ್ನೂ ಸ್ವಲ್ಪ ದಿನ ಸಂಕಷ್ಟದಲ್ಲಿಯೇ ಇರಬೇಕಾದ ಸ್ಥಿತಿ ಇರಲಿದೆ. ಗ್ರಹಗತಿಗಳು ನಿಮಗೆ ಶುಭವನ್ನು ಕೊಡುವ ಕಾಲವು ಕೆಲವೇ ದಿನದಲ್ಲಿ ಸಮೀಪಿಸುವುದು. ನಿಮ್ಮ ನಿರುತ್ಸಾಹವು ಉತ್ಸಾಹವಾಗಿ ಬದಲಾಗಿ ಕಾರ್ಯದಲ್ಲಿ ವೇಗವು ಹೆಚ್ಚುವುದು. ಗುರುವು ಅಷ್ಟಮದಲ್ಲಿ ಬಲಹೀನನಾಗಿ ನಿಮ್ಮ ಎಲ್ಲ ಕೆಲಸಕ್ಕೂ ಪೂರ್ಣತೆಯನ್ನು ಕೊಡನು. ಷಷ್ಠದಲ್ಲಿ ಶನಿಯು ಇದ್ದು ಆರೋಗ್ಯದಲ್ಲಿ ಬಲ, ಶತ್ರುಗಳ ನಾಶವಾಗಿದ್ದರೂ ನಾನಾ ಚಿಂತೆಗಳು ಒಂದಾದಮೇಲೆ ಒಂದರಂತೆ ಕಾಣಿಸಿಕೊಳ್ಳುವುದು. ಕೇತು ನಿಮ್ಮ ರಾಶಿಯಲ್ಲಿಯೇ ಇರುವುದರಿಂದ ದೇಹಾರೋಗ್ಯವೂ ಹಾಳಾಗುವುದು, ಚರ್ಮರೋಗವು ಕಾಣಸಿಕೊಳ್ಳುವುದು. ಎಲ್ಲ ವಿಚಾರಗಳಿಗೂ ಸಿಟ್ಟು ಮಾಡಿಕೊಳ್ಳುವಿರಿ. ಯಾರೂ ನಿಮ್ಮ ಬಳಿ ಬರುವುದಿಲ್ಲ. ಸೂರ್ಯನು ತೃತೀಯದಲ್ಲಿ ಇರುವ ಕಾರಣ ಪ್ರಭಾವೀ ವ್ಯಕ್ತಿಗಳ ಸಂಪರ್ಕದಿಂದ ನೀವು ಸರ್ಕಾರದ ಕೆಲಸಗಳನ್ನು ಮಾಡಿಸಿಕೊಳ್ಳುವಿರಿ. ಮಹಾವಿಷ್ಣುವಿನ ಉಪಾಸನೆ ಅವಶ್ಯವಾಗಿ ಮಾಡುವುದು ಸೂಕ್ತ.
ತುಲಾ ರಾಶಿ : ಡಿಸೆಂಬರ್ ತಿಂಗಳಲ್ಲಿ ಕೆಲವು ಗ್ರಹಗತಿಗಳ ಬದಲಾವಣೆಯು ನಿಮಗೆ ಶುಭಫಲವನ್ನು ನೀಡುವುದು. ಗುರುಬಲವು ಇದ್ದು ನಿಮ್ಮ ಎಲ್ಲ ಕಾರ್ಯಗಳಿಗೂ ಇದೇ ಬಲವು ಕಾಡುವುದು. ರಾಹುವು ಷಷ್ಠದಲ್ಲಿ ಇರುವ ಕಾರಣ ಶತ್ರುಗಳ ನಾಶ ಅಥವಾ ಶತ್ರುಗಳು ನಿಮ್ಮ ತಂಟೆಗೆ ಬರದಂತಾಗುವುದು. ಈ ತಿಂಗಳು ಹೊಸ ಅವಕಾಶಗಳು ನಿಮ್ಮತ್ತ ಬರಬಹುದು. ನೂತನ ಉದ್ಯೋಗವನ್ನೂ ನೀವು ಅನ್ವೇಷಿಸಿ, ಸೇರಿಕೊಳ್ಳುವಿರಿ. ಅವಿವಾಹಿತರಿಗೆ ಶುಭ ಸುದ್ಧಿಯು ಬರಲಿ. ಎಷ್ಟೋ ದಿನದ ಆತಂಕವು ದೂರವಾಗಿ, ನೆಮ್ಮದಿಯು ಬರುವುದು. ರಾಶ್ಯಧಿಪತಿಯು ದ್ವಿತೀಯದಲ್ಲಿ ಇರುವ ಕಾರಣ ನೀವಂದುಕೊಂಡಿದ್ದನ್ನು ಸಾಧಿಸಬಹುದು. ನವಮಾಧಿಪತಿಯು ದ್ವಿತೀಯದಲ್ಲಿ ಇರವ ಕಾರಣ ಗೌರವ ದೊರೆತು ಮನಸ್ಸಿಗೆ ಸಂತಸವಾಗುವುದು. ಕಲಾವಿದರು ಹೆಚ್ಚಿನ ಅವಕಾಶಗಳಿಂದ ಉನ್ನತ ಸ್ಥಾನಕ್ಕೆ ಹೋಗುವರು. ಶನಿಯು ಪಂಚಮದಲ್ಲಿ ಇರುವುದರಿಂದ ನಿಮ್ಮ ವಿದ್ಯಾಭ್ಯಾಸವು ವೃತ್ತಿಗೆ ಪೂರಕವಾಗಿ ಇರಲಿದೆ. ಮಹಾಲಕ್ಷ್ಮಿಯ ಉಪಾಸನೆಯು ನಿಮ್ಮ ಶುಭಕ್ಕೆ ಇನ್ನಷ್ಟು ಪುಷ್ಟಿಯನ್ನು ನೀಡುವುದು.
ವೃಶ್ಚಿಕ ರಾಶಿ: 2023 ರ ಕೊನೆಯ ತಿಂಗಳು ನಿಮಗೆ ಮಿಶ್ರಫಲವು ಸಿಗಲಿದೆ. ಗುರುಬಲವು ಸದ್ಯಕ್ಕೆ ಇಲ್ಲದೇ ಇರುವುದರಿಂದ ಎಲ್ಲ ಹೆಜ್ಜೆಗಳನ್ನೂ ನೀವು ಬಹಳ ಜಾಗರೂಕತೆಯಿಂದಲೇ ಇಡಬೇಕು. ಸಪ್ತಮಾಧಿಪತಿಯು ನಿಮ್ಮ ರಾಶಿಯಲ್ಲಿಯೇ ಇರುವ ಕಾರಣ ದಾಂಪತ್ಯದಲ್ಲಿ ಸಾಮರಸ್ಯವು ಉಂಟಾಗುವುದು. ಏಕಾದಶದಲ್ಲಿ ಕೇತುವಿದ್ದು ಹಣವು ಅನ್ಯಾನ್ಯ ಮಾರ್ಗದಿಂದ ಬರಲಿದೆ. ಪಂಚಮದಲ್ಲಿ ರಾಹುವಿದ್ದು ನಿಮ್ಮ ವಿದ್ಯಾಭ್ಯಾಸಕ್ಕೆ ನಾನಾ ವಿಘ್ನಗಳನ್ನು ಕೊಡಿಸುವನು. ನೀವೂ ಛಲ ಬಿಡದೇ ಮುನ್ನಡೆದರೆ ಉತ್ತಮವಾದುದನ್ನು ಸಾಧಿಸುವಿರಿ. ಸೂರ್ಯ ಹಾಗೂ ಕುಜರು ದ್ವಿತೀಯದಲ್ಲಿ ಇರುವ ಕಾರಣ ನಿಮ್ಮ ಮಾತು ಕಠೋರವಾಗಿದ್ದರೂ ಅದನ್ನು ಅನುಸರಿಸುವರು. ಅವಿವಾಹಿತರಿಗೆ ವಿವಾಹ ಯೋಗವು ಉಂಟಾಗುವುದು. ವೃತ್ತಿಯಲ್ಲಿ ಒತ್ತಡಗಳು ಬಂದರೂ ಅದನ್ನು ಜಾಣ್ಮೆಯಿಂದ ತೆಗೆದುಕೊಂಡು ಮುಂದುವರಿಯುವಿರಿ. ಸುಬ್ರಹ್ಮಣ್ಯ ಆರಾಧನೆ ನಿಮ್ಮ ಶ್ರೇಯಸ್ಸಿಗೆ ಕಾರಣವಾಗುವುದು.
ಧನು ರಾಶಿ : ಈ ವರ್ಷದ ಕೊನೆಯ ತಿಂಗಳು ಇದಾಗಿದ್ದು ಮಿಶ್ರಫಲವನ್ನು ನೀವು ಪಡೆಯುವಿರಿ. ನಿಮ್ಮ ರಾಶಿಗೆ ಕುಜ ಹಾಗೂ ಸೂರ್ಯರ ಆಗಮನವಾಗಲಿದ್ದು ಸತ್ಕಾರ್ಯವನ್ನು ಮಾಡಲು ಬಹಳ ಗೊಂದಲದಿಂದ ಇರುವಿರಿ. ಗುರುವಿನ ಬಲವು ನಿಮ್ಮ ಎಲ್ಲ ವಿಘ್ನಗಳನ್ನು ದೂರ ಮಾಡುವನು. ಹೊಸ ಕೆಲಸಗಳ ಕಡೆಗೆ ಗಮನ ಸದ್ಯಕ್ಕೆ ಬೇಡ. ತೃತೀಯದಲ್ಲಿ ಶನಿಯಿದ್ದು ನಿಮಗೆ ಧೈರ್ಯವನ್ನು ಹಾಗೂ ಬರಬೇಕಾದ ಸಂಪತ್ತನ್ನು ಒದಗಿಸಿಕೊಡುವನು. ವೃತ್ತಿ ಸಂಬಂಧದಿಂದ ಅಲೆದಾಟವು ಹೆಚ್ಚಾಗಿರುವುದು. ಆಸ್ತಿಯನ್ನು ಖರೀದಿಸುವಾಗ ಸರಿಯಾದ ಮಾಹಿತಿಯ ಜೊತೆ ಖರೀದಿಸಿ. ಚತುರ್ಥದ ರಾಹುವು ನಿಮ್ಮ ಯೋಜನೆಗಳನ್ನು ಅಸ್ತವ್ಯಸ್ತ ಮಾಡಬಹುದು. ತಾಯಿಯ ಆರೋಗ್ಯದ ಕಡೆಗೂ ಗಮನ ಬೇಕು. ಕುಜನು ನಿಮ್ಮ ರಾಶಿಗೆ ಬರುವುದರಿಂದ ಕೋಪವು ಹೆಚ್ಚಾಗುವುದು. ಸಿಟ್ಟಿನಿಂದ ಮೂಗನ್ನು ಕತ್ತರಿಸಿಕೊಂಡು ಅನಂತರ ಪಶ್ಚಾತ್ತಾಪಪಡುವುದು ಬೇಡ. ವಿದೇಶಪ್ರವಾಸವವನ್ನು ಮಾಡಲು ಸಮಯಕ್ಕಾಗಿ ಕಾಯಬೇಕು.
ಮಕರ ರಾಶಿ : ಈ ತಿಂಗಳು ಮಕರರಾಶಿಯವರಿಗೆ ಮಿಶ್ರಫಲವು ಇರಲಿದೆ. ತೃತೀಯದಲ್ಲಿ ರಾಹುವು ವಿವೇಚನಾರಹಿತ ಸಮಮರ್ಥವನ್ನು ಕೊಡುವನು. ಯಾವುದನ್ನೂ ಪೂರ್ವಾಪರವಾಗಿ ವಿಚಾರ ಮಾಡುವ ಮಾನಸಿಕ ಸ್ಥಿತಿಯು ನಿಮ್ಮದಾಗಿರದು. ಗುರುವಿನ ಬಲವು ಇಲ್ಲದೇ ನಿಮ್ಮ ಕೆಲಸಗಳು ಕೈಗೂಡದು. ಒಂದೊಮ್ಮೆ ಪೂರ್ಣವಾದರೂ ತೃಪ್ತಿ ಇರದೇ ಒದ್ದಾಡಬಹುದು. ಸಾಡೇಸಾಥ್ ನ ಕೊನೆಯ ಭಾಗದಲ್ಲಿ ನೀವಿರುವ ಕಾರಣ ಅಷ್ಟಾಗಿ ತೊಂದರೆಗಳು ನಿಮಗೆ ಇಲ್ಲದೇ ಹೋದರೂ ಮಾನಸಿಕವಾದ ಒತ್ತಡ, ಉದ್ವೇಗವು ಇರುವುದು. ನವಮದಲ್ಲಿ ಕೇತುವಿರಲಿದ್ದು ಉತ್ತಮ ಕಾರ್ಯಗಳನ್ನು ಮಾಡಲು ಹಿಂದೇಟು ಹಾಕುವಿರಿ. ಏಕಾದಶದಲ್ಲಿ ಬುಧ ಹಾಗೂ ಶುಕ್ರರ ಸಮಾಗಮವಾಗಲಿದ್ದು ವಿವಿಧ ವಸ್ತುಗಳ ಭೋಗವನ್ನು ಅನುಭವಿಸುವಿರಿ. ದ್ವಾದಶದಲ್ಲಿ ಸೂರ್ಯ ಹಾಗೂ ಕುಜರು ನಿಮ್ಮ ಆರೋಗ್ಯ ಹಾಗೂ ಸಂಪತ್ತನ್ನು ಹಾಳುಮಾಡುವರು. ಸುಬ್ರಹ್ಮಣ್ಯ ಆರಾಧನೆಯು ನಿಮ್ಮ ನಾನಾವಿಧವಾದ ತೊಂದರೆಯನ್ನು ದೂರಮಾಡುವುದು.
ಕುಂಭ ರಾಶಿ : ಈ ತಿಂಗಳ ವರ್ಷದ ಕೊನೆಯ ತಿಂಗಳಾಗಿದ್ದು ಗ್ರಹಗತಿಗಳ ಚಲಿಸುವಿಕೆಯಿಂದ ಮಿಶ್ರಫಲವು ಇರಲಿದೆ. ನೀವು ಸಾಡೇಸಾಥ್ ಶನಿಯ ಪ್ರಭಾವಲಯದಲ್ಲಿ ನೀವು ಇರುವಿರಿ. ಸಾಡೇಸಾಥ್ ಮಧ್ಯಭಾಗದಲ್ಲಿ ಇರುವ ಕಾರಣ ಅದೂ ಶನಿಯ ಸ್ವಕ್ಷೇತ್ರವಾಗಿದೆ. ಶನಿಯು ನಿಮಗೆ ನಾನಾ ಪ್ರಕಾರದ ತೊಂದರೆಗಳನ್ನು ಕೊಟ್ಟರೂ ಅದರಿಂದ ನಿಮಗೆ ಉಪಯೋಗವೇ ಆಗಲಿದೆ. ಹಾಗಾಗಿ ಧೈರ್ಯವನ್ನು ಬಿಡದೇ ಬಂದಿದ್ದನ್ನು ಎದುರಿಸುವ ಮಾನಸಿಕತೆಯನ್ನು ಬೆಳೆಸಿಕೊಳ್ಳಿ. ಗುರು ತೃತೀಯದಲ್ಲಿ ಇರುವ ಕಾರಣ ಬಲವೂ ಇರದು. ದ್ವಿತೀಯಕ್ಕೆ ರಾಹುವಿನ ಆಗಮನವಾಗಿದೆ. ಬರಬೇಕಾದ ಸಂಪತ್ತೂ ಬಾರದೇ ಹೋಗುವುದು. ಲಾಭವು ಕಣ್ಣಿಗೆ ಕಾಣಿಸಿದರೂ ಪಡೆಯಲಾಗದೇ ತೊಳಲಾಡುವಿರಿ. ಏಕಾದಶಕ್ಕೆ ಸೂರ್ಯ ಹಾಗು ಕುಜರ ಆಗಮನವಾಗಲಿದ್ದು ತಂದೆಯ ಕಡೆಯಿಂದ ಆರ್ಥಿಕಲಾಭವನ್ನು ನಿರೀಕ್ಷಿಸಬಹುದು. ಬುಧ ಹಾಗೂ ಶುಕ್ರರು ದಶಮದಲ್ಲಿ ಇರಲಿದ್ದು ವೃತ್ತಿಯಲ್ಲಿ ಇರುವ ತೊಂದರೆಗಳು ನಿವಾರಣೆಯಾಗುವುದು. ಅಷ್ಟಮದಲ್ಲಿ ಕೇತುವಿರುವ ಕಾರಣ ಯಾವುದನ್ನೂ ಮಾಡಲು ಅಧೈರ್ಯ ತೋರಿಸಲಾರಿರಿ. ಗುರು ಹಾಗು ಪರಮೇಶ್ವರನ ಉಪಾಸನೆಯನ್ನು ಹೆಚ್ಚು ಮಾಡಿ.
ಮೀನ ರಾಶಿ : 2023 ರ ಕೊನೆಯ ತಿಂಗಳು ಇದಾಗಿದೆ. ಈ ರಾಶಿಯವರಿಗೆ ದ್ವಿತೀಯದಲ್ಲಿ ಗುರುವಿದ್ದು ಗುರುಬಲವು ಇರಲಿದೆ. ಬರುವ ಸಂಕಷ್ಟವು ನಿಮ್ಮನ್ನು ಅತಿಯಾಗಿ ಪೀಡಿಸದು. ಕಷ್ಟಗಳ ಪರಿಹಾರಕ್ಕೆ ಸೂಕ್ತವಾದ ಮಾರ್ಗವೂ ಸಿಗಲಿದೆ. ಸಾಡೆಸಾತಿ ಶನಿಯು ಆರಂಭವಾಗಿ ಮಧ್ಯಾವಧಿಯಲ್ಲಿ ಇರಲಿದೆ. ದ್ವಾದಶದಲ್ಲಿ ಇರುವುದರಿಂದ ಸಂಪತ್ತಿನ ವ್ಯಯ, ಆಗಾಗ ಅಸಮಾಧಾನ ಮುಂತಾದವು ಕಾಣಿಸಿಕೊಂಡೀತು. ರಾಹುವು ಕೆಲವು ದಿನಗಳ ಹಿಂದಷ್ಟೇ ಈ ರಾಶಿಯನ್ನು ಪ್ರವೇಶಿಸಿದ್ದಾನೆ. ದೇಹ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಗಮನವು ಹೆಚ್ಚು ಇರಬೇಕು. ಸಪ್ತಮಭಾವದಲ್ಲಿ ಕೇತುವಿರುವ ಕಾರಣ ದಾಂಪತ್ಯದಲ್ಲಿ ಸಣ್ಣ ಸಣ್ಣ ಮಾತುಗಳು, ಪರಸ್ಪರ ವಿರುದ್ಧದ ಮಾತುಗಳನ್ನು ಕೇಳಿಸಿಕೊಳ್ಳಬೇಕಾದೀತು. ಶುಕ್ರನು ಮುಕ್ಕಾಲು ತಿಂಗಳು ಅಷ್ಟಮದಲ್ಲಿಯೇ ಇರುವ ಕಾರಣ ಅಪಮಾನ, ಭೋಗವಸ್ತುಗಳಿಂದ ನಷ್ಟವಾಗುವುದು. ನೋವನ್ನು ಹೆಚ್ಚು ಪಡೆಯಬೇಕಾದೀತು. ಪ್ರವಾಸದಲ್ಲಿಯೂ ಅಡೆತಡೆಗಳು ಕಾಣಿಸಿಕೊಂಡೀತು. ಬುಧ ಹಾಗೂ ಶುಕ್ರರ ಸಂಯೋಗವಾಗಲಿದ್ದು ವೃತ್ತಿಯಲ್ಲಿ ಅಭಿವೃದ್ಧಿಯಾಗಿ ಸಂತೋಷವಾಗಲಿದೆ. ಮಹಾಲಕ್ಷ್ಮಿಯ ಉಪಾಸನೆ ಅತಿ ಮುಖ್ಯವಾದುದಾಗಿದೆ.