Number 5 Yearly Numerology 2025: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆ 5ಕ್ಕೆ 2025ರ ವರ್ಷಭವಿಷ್ಯ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 30, 2024 | 2:39 PM

ಜನ್ಮ ಸಂಖ್ಯೆ 5ರ ವರ್ಷ ಭವಿಷ್ಯ 2025:ನಿಮ್ಮ ಜನ್ಮಸಂಖ್ಯೆ 5 ಆಗಿದ್ದರೆ, ನಿಮ್ಮ 2025ರ ಭವಿಷ್ಯ ಹೇಗಿರಲಿದೆ. ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆ 5ಕ್ಕೆ 2025ರ ವರ್ಷಭವಿಷ್ಯ ಬಗ್ಗೆ ಇಲ್ಲಿದೆ ಹೇಳಲಾಗಿದೆ. ಜ್ಮನಸಂಖ್ಯೆ ಆಧಾರ ಮೇಲೆ ಭವಿಷ್ಯವನ್ನು ಇಲ್ಲಿದೆ ಹೇಳಲಾಗಿದೆ. ಗುಣ- ಸ್ವಭಾವ, ಸಾಮಾನ್ಯ ಸಂಗತಿಗಳು, ಆರೋಗ್ಯ,ಆಸ್ತಿ, ಹಣ, ಹೂಡಿಕೆ, ಪ್ರೇಮ-ಮದುವೆ, ಉದ್ಯೋಗದಲ್ಲಿ 2025ರಲ್ಲಿ ನಿಮ್ಮ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

Number 5 Yearly Numerology 2025: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆ 5ಕ್ಕೆ 2025ರ ವರ್ಷಭವಿಷ್ಯ
ಸಾಂದರ್ಭಿಕ ಚಿತ್ರ
Follow us on

ಜನ್ಮಸಂಖ್ಯೆ 5 ಯಾರದು ಅಂದರೆ, ವರ್ಷದ ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿರುತ್ತಾರೋ ಅಂಥವರ ಜನ್ಮಸಂಖ್ಯೆ 5 ಎಂದಾಗುತ್ತದೆ. ಅವರಿಗೆ 2025ರ ವರ್ಷ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗುವುದು.

ಗುಣ- ಸ್ವಭಾವ

ಯಾರ ಜನ್ಮ ಸಂಖ್ಯೆ 5 ಆಗಿರುತ್ತದೋ ಅವರ ಅಧಿಪತಿ ಗ್ರಹ ಬುಧ. ಏನು ಮಾತನಾಡಿದರೆ ಹಾಗೂ ಯಾವ ಪದ ಬಳಸಿದರೆ ಎದುರಿಗಿರುವ ವ್ಯಕ್ತಿಯಿಂದ ಕೆಲಸ ಆಗುತ್ತದೆ ಎಂಬುದನ್ನು ತೀರ್ಮಾನಿಸುವುದರಲ್ಲಿ ಇವರು ಬಹಳ ಬುದ್ಧಿವಂತರು. ಆಲೋಚನೆ ಹಾಗೂ ಅನುಷ್ಠಾನ ಎರಡನ್ನೂ ಸರಿಯಾದ ಸಮಯಕ್ಕೆ ಮಾಡಬಲ್ಲವರು. ವಯಸ್ಸು ಎಷ್ಟೇ ಆಗಿದ್ದರೂ ಚಿಕ್ಕ ವಯಸ್ಸಿನ ಹುಡುಗ/ಹುಡುಗಿಯರಂತೆ ಮನಸ್ಸಿನಲ್ಲಿ ಒಂದು ಉತ್ಸಾಹ ಇದ್ದೇ ಇರುತ್ತದೆ. ಯಾವ ವಯಸ್ಸಿನ ಗುಂಪಿನವರು ಇರುತ್ತಾರೋ ಅವರೊಂದಿಗೆ ಬೆರೆತು ಹೋಗುತ್ತಾರೆ. ಇವರ ಬಗ್ಗೆ ಇತರರಿಗೆ ಏನು ಆಕ್ಷೇಪ ಇರುತ್ತದೆ ಅಂದರೆ, ಈ ವ್ಯಕ್ತಿ ತನ್ನ ಅನುಕೂಲಕ್ಕೆ ತಕ್ಕಂತೆ ಮಾತು ಬದಲಿಸಿದರಲ್ಲ ಅಂತಲೋ ಅಥವಾ ಆ ಗುಂಪಿನ ಪ್ರಭಾವಿ ವ್ಯಕ್ತಿಯನ್ನು ತನ್ನಂತೆ ನಡೆಸಿಕೊಳ್ಳಲು ಬೇಕಾದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂಬ ಆರೋಪವು ಇವರ ಮೇಲೆ ಪದೇಪದೇ ಬರುತ್ತದೆ. ಹೊಗಳಿಕೆಗೆ ಕರಗಿ ಹೋಗುವುದರಲ್ಲಿ ಈ ಐದರ ಸಂಖ್ಯೆಯ ಜನ ಮೊದಲ ಸಾಲಿನವರು. ಈ ವ್ಯಕ್ತಿಗಳು ಎಷ್ಟೇ ಬುದ್ಧಿವಂತರಾದರೂ ಅದೇ ಬುದ್ಧಿವಂತಿಕೆ ಕಾರಣಕ್ಕೆ ಟೋಪಿ ಬೀಳುತ್ತಾ ಇರುತ್ತದೆ. ಅದಕ್ಕೆ ಯಥಾಪ್ರಕಾರ ಹೊಗಳಿಕೆ ಕಾರಣ ಆಗಿರುತ್ತದೆ. ವಿಪರೀತ ಒತ್ತಡದ ಕೆಲಸಗಳನ್ನು ಮಾಡಿದಲ್ಲಿ ಅಥವಾ ಮಾಡುತ್ತಿದ್ದಲ್ಲಿ ನರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಾರೆ.

ಸಾಮಾನ್ಯ ಸಂಗತಿಗಳು

ವಾಹನ ಖರೀದಿ, ಐಷಾರಾಮಿ ವಸ್ತುಗಳನ್ನು ಕೊಳ್ಳುವುದು, ವಿದೇಶಗಳಲ್ಲಿ ಭೂಮಿ- ಮನೆ ಕೊಂಡುಕೊಳ್ಳುವಂಥ ಯೋಗ ನಿಮ್ಮಲ್ಲಿ ಕೆಲವರಿಗೆ ಇದೆ. ಸಾಮಾನ್ಯವಾಗಿ ನಿಮ್ಮದಲ್ಲದ ಸ್ವಭಾವವಾದ ಆಕ್ರಮಣಕಾರಿ ಧೋರಣೆಯನ್ನು ಈ ವರ್ಷ ನಿಮ್ಮ ಮಾತುಕತೆಯಲ್ಲಿ ಕಾಣುವಂತಾಗುತ್ತದೆ. ವಿದ್ಯಾರ್ಥಿಗಳಿಗೆ ಅದು ನಿಮಗೆ ಒಳ್ಳೆಯದನ್ನು ಮಾಡುವಂಥದ್ದೇ ಇರಬಹುದು, ಅಥವಾ ಸವಾಲಿನ ಸಮಯವೇ ಇರಬಹುದು. ಒಟ್ಟಿನಲ್ಲಿ ದೀರ್ಘಾವಧಿಗೆ ರಜಾ ತೆಗೆದುಕೊಳ್ಳಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸಂಬಂಧಿಕರ ಜತೆಗೆ ಜಗಳ- ಕಲಹಗಳು ಆಗಲಿವೆ. ಅದರಲ್ಲೂ ಹೆಣ್ಣುಮಕ್ಕಳು ತಮ್ಮ ತಂದೆ- ತಾಯಿ ಸಲುವಾಗಿ ಅಣ್ಣ ಹಾಗೂ ಆತನ ಹೆಂಡತಿ ಅಥವಾ ತಮ್ಮ ಹಾಗೂ ಆತನ ಹೆಂಡತಿ ಜೊತೆಗೆ ವಾಗ್ವಾದಗಳನ್ನು ಮಾಡಿಕೊಳ್ಳುತ್ತೀರಿ. ಈ ಹಿಂದೆ ದೇವರಿಗೆ ಹೊತ್ತುಕೊಂಡ ಹರಕೆಗಳನ್ನು ತೀರಿಸುವುದಕ್ಕೆ ಪ್ರಾಮುಖ್ಯವನ್ನು ನೀಡಲಿದ್ದೀರಿ. ಸ್ನೇಹಿತರ ಜೊತೆಗೂಡಿ ಭೂಮಿ ವ್ಯವಹಾರಗಳನ್ನು ಮಾಡುವಂತಿದ್ದರೆ ಕಾಗದ- ದಾಖಲೆ ಪತ್ರಗಳ ವಿಚಾರಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಎಚ್ಚರಿಕೆ ತೆಗೆದುಕೊಳ್ಳಿ.

ಆರೋಗ್ಯ

ಯೋಗ- ಪ್ರಾಣಾಯಾಮ ಇಂಥವುಗಳನ್ನು ಮಾಡುತ್ತಾ ಬರುತ್ತಿರುವವರು ದೈಹಿಕ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ಸನ್ನು ಕಾಣಲಿದ್ದೀರಿ. ಇನ್ನು ನಿಮ್ಮಲ್ಲಿ ಕೆಲವರು ಆರೋಗ್ಯದ ಕಾರಣಕ್ಕೆ ಅಥವಾ ಮಕ್ಕಳ ಆರೈಕೆ ಅಥವಾ ಆಪ್ತರು- ಸಂಬಂಧಿಕರನ್ನು ಕಾಳಜಿ ಮಾಡುವುದಕ್ಕಾಗಿ ವಿದೇಶಕ್ಕೆ ಪ್ರಯಾಣ ಮಾಡಬೇಕಾದ ಸನ್ನಿವೇಶ ಎದುರಾಗಲಿದೆ. ಇದರಿಂದಾಗಿ ಆಗುವಂಥ ವಾತಾವರಣದಲ್ಲಿನ ಬದಲಾವಣೆಯು ನಿಮಗೆ ಕೆಲವು ಅನಾರೋಗ್ಯ ಸಮಸ್ಯೆಗಳನ್ನು ತರಬಹುದಾಗಿದೆ. ಒಟ್ಟಿನಲ್ಲಿ ಈ ವರ್ಷ ಶಿಸ್ತುಪಾಲನೆಗೆ ಹೆಚ್ಚಿನ ಆದ್ಯತೆಯನ್ನು ನೀಡಿ. ಇತರರ ಸಲುವಾಗಿ ನಿಮ್ಮ ಆರೋಗ್ಯಕರವಾದ ಅಭ್ಯಾಸಗಳನ್ನು ಬದಲಿಸುವುದಕ್ಕೆ ಹೋಗದಿರಿ. ಯಾರಿಗೆ ಈಗಾಗಲೇ ರಕ್ತದೊತ್ತಡದ ಸಮಸ್ಯೆ ಇದೆಯೋ ಅಂಥವರು ಸರಿಯಾದ ರೀತಿಯಲ್ಲಿ ವೈದ್ಯರ ಸಲಹೆ- ಸೂಚನೆ ಮೇರೆಗೆ ಔಷಧೋಪಚಾರಗಳನ್ನು ಮಾಡಿಕೊಳ್ಳಿ. ಪಾದಗಳ ಆರೋಗ್ಯದ ಬಗ್ಗೆ ಕೂಡ ಗಮನವನ್ನು ನೀಡುವುದು ಮುಖ್ಯವಾಗುತ್ತದೆ. ಪಾದರಕ್ಷೆಯು ಹೇಗಿರಬೇಕು ಎಂಬುದರ ಕಡೆಗೂ ಸರಿಯಾದ ಗಮನವನ್ನು ನೀಡಿದಲ್ಲಿ ಉತ್ತಮ.

ಆಸ್ತಿ-ಹಣ- ಹೂಡಿಕೆ

ಈಗಾಗಲೇ ಸೈಟು ಅಥವಾ ಜಮೀನು ಇದೆ ಎಂದಾದಲ್ಲಿ ಅದನ್ನು ಮಾರಾಟ ಮಾಡಿ, ನಿರಂತರವಾಗಿ ಆದಾಯ ತರುವಂಥ ಕಡೆಗೆ ಹೂಡಿಕೆ ಮಾಡುವುದಕ್ಕೆ ತೀರ್ಮಾನ ಮಾಡಲಿದ್ದೀರಿ. ಇಲ್ಲದಿದ್ದರೆ ಈಗ ಇರುವ ಸೈಟು- ಜಮೀನಿನ ಮೂಲಕವೇ ಆದಾಯ ಹೆಚ್ಚು ಬರುವಂಥ ಅಥವಾ ಈಗ ಬರುತ್ತಿಲ್ಲ ಎಂದಾದಲ್ಲಿ ಬರುವಂತೆ ಮಾಡಿಕೊಳ್ಳುವುದಕ್ಕೆ ಏನು ಬೇಕೋ ಅದೆಲ್ಲವನ್ನೂ ಮಾಡಲಿದ್ದೀರಿ. ಹೆಣ್ಣುಮಕ್ಕಳಿಗೆ ತವರು ಮನೆಯಿಂದ ಬರಬೇಕಾದ ಆಸ್ತಿ- ಹಣ ಇತ್ಯಾದಿಗಳು ದೊರೆಯುವ ಸಾಧ್ಯತೆ ಹೆಚ್ಚಿದೆ. ನಿಮ್ಮಲ್ಲಿ ಕೆಲವರು ಸ್ವಂತವಾದ ವ್ಯಾಪಾರ- ವ್ಯವಹಾರ, ಉದ್ಯಮಗಳನ್ನು ಶುರು ಮಾಡುವುದಕ್ಕೆ ಸ್ನೇಹಿತರ ಸಹಾಯವನ್ನು ಪಡೆಯುವ ಯೋಗ ಇದೆ. ಬ್ಯಾಂಕ್ ಗಳಲ್ಲಿ ಇದಕ್ಕಾಗಿಯೇ ಸಾಲ ಪಡೆಯುವುದಕ್ಕೆ ನೆರವು ತೆಗೆದುಕೊಳ್ಳಲಿದ್ದೀರಿ.

ಪ್ರೇಮ-ಮದುವೆ ಇತ್ಯಾದಿ

ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳ ಮೂಲಕವಾಗಿ ಸ್ನೇಹವಾಗಿ, ಅದು ಪ್ರೇಮಕ್ಕೆ ತಿರುಗಿದ್ದಲ್ಲಿ ಆ ಸಂಬಂಧದಲ್ಲಿ ಅಭಿಪ್ರಾಯ ಭೇದಗಳು ಸೃಷ್ಟುಯಾಗುವ ಅವಕಾಶಗಳು ಹೆಚ್ಚಾಗಿದೆ. ಇನ್ನು ಬಂಧು- ಬಾಂಧವರು ಅಥವಾ ಸ್ನೇಹಿತರ ಕಾರ್ಯಕ್ರಮಗಳು, ಸಮಾರಂಭಗಳಲ್ಲಿ ಭಾಗವಹಿಸಿದ್ದ ವೇಳೆ ನಿಮ್ಮ ಮನಸ್ಸಿಗೆ ಒಪ್ಪುವಂಥ ಸಂಗಾತಿ ಪರಿಚಯವಾಗಿ, ಅದು ಪ್ರೇಮಕ್ಕೆ ತಿರುಗಿ, ಮದುವೆ ತನಕ ಸಾಗಲಿದೆ. ದಂಪತಿ ಮಧ್ಯೆ ಮನೆ ಕಟ್ಟುವ ಅಥವಾ ಫ್ಲ್ಯಾಟ್ ಖರೀದಿಸುವ ವಿಚಾರವಾಗಿ ಅಭಿಪ್ರಾಯ ಭೇದ ಅಥವಾ ಮನಸ್ತಾಪಗಳು ಉಂಟಾಗಿ ಕೆಲವು ದಿನ ಮಾತು ಬಿಡುವ ತನಕ ಆ ಪ್ರಕರಣ ಹೋಗಬಹುದು.

ಉದ್ಯೋಗ- ವೃತ್ತಿ

ನಿಮ್ಮಲ್ಲಿ ಯಾರು ಅರೆಕಾಲಿಕ ಉದ್ಯೋಗದಲ್ಲಿ ಇದ್ದೀರಿ ಅಂಥವರಿಗೆ ಒಂದೋ ಕಾಯಂ ಆಗಲಿದೆ ಅಥವಾ ನೀವು ಗಟ್ಟಿಯಾದ ತೀರ್ಮಾನವನ್ನು ಕೈಗೊಂಡ ಸ್ವಂತ ವ್ಯಾಪಾರ- ವ್ಯವಹಾರ ಅಥವಾ ಉದ್ಯಮ ಆರಂಭಿಸುವ ಸಾಧ್ಯತೆ ಬಹಳ ಹೆಚ್ಚಾಗಿದೆ. ನಿಮ್ಮಲ್ಲಿ ಯಾರು ಕನ್ಸಲ್ಟೆಂಟ್ ಗಳಾಗಿ, ಅಡ್ವೈಸರ್ ಗಳಾಗಿ ಅಥವಾ ವಕೀಲರಾಗಿ ವೃತ್ತಿ ಮಾಡುತ್ತಿರುವಿರೋ ಅಂಥವರಿಗೆ ಹೊಸ ಕ್ಲೈಂಟ್ ಗಳು ದೊರೆಯಲಿದ್ದಾರೆ. ಅದರಲ್ಲೂ ಸಂಸ್ಥೆಗಳಿಗೆ ನೀವು ವಕೀಲರಾಗಿ- ಕಾನೂನು ಸಲಹೆಗಾರರಾಗಿ ನೇಮಕರಾಗುವ ಅವಕಾಶಗಳಿವೆ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿರುವವರಿಗೆ ಗೊಂದಲ ಹೆಚ್ಚಾಗಿ, ತೀರ್ಮಾನಗಳಲ್ಲಿ ವಿಶ್ವಾಸ ಮೂಡುವುದಿಲ್ಲ. ವಿಷ್ಣು ಸಹಸ್ರನಾಮದ ಶ್ರವಣ ಅಥವಾ ಪಾರಾಯಣವನ್ನು ಮಾಡಿದರೆ ಉತ್ತಮ.

-ಸ್ವಾತಿ ಎನ್.ಕೆ.