
ಪ್ರೀತಿ- ಪ್ರೇಮದ ವಿಚಾರಗಳಿಗೆ ಸಿಕ್ಕಾಪಟ್ಟೆ ಪ್ರಾಮುಖ್ಯ ಬಂದು ಬಿಡುತ್ತದೆ. ನೀವು ನಿರೀಕ್ಷೆ ಮಾಡಿದ್ದ ಕೆಲಸವೊಂದು ಆಗದೆ, ಅಥವಾ ಅಂದುಕೊಂಡಂತೆ ಆದಾಯ ಬಾರದ ಕಾರಣಕ್ಕೆ ನಿಮ್ಮ ತೀರ್ಮಾನದಲ್ಲಿ ಬದಲಾವಣೆ ಮಾಡಿಕೊಳ್ಳಲು ಮುಂದಾಗುತ್ತೀರಿ. ನಿಮ್ಮಲ್ಲಿ ಕೆಲವರಿಗೆ ಓದಿನಲ್ಲಿ ಆಸಕ್ತಿ ಕಡಿಮೆ ಆಗಿಬಿಡುತ್ತದೆ. ಒಂದು ವೇಳೆ ಮುಖ್ಯವಾದ ಪ್ರವೇಶ ಪರೀಕ್ಷೆಗಳನ್ನು ಬರೆಯುತ್ತಾ ಇದ್ದೀರಿ ಅಂತಾದಲ್ಲಿ “ನಾಳೆ ಓದಿದರಾಯಿತು, ಇವತ್ತಿಗೆ ಇಷ್ಟು ಸಾಕು” ಎಂಬ ಮನೋಭಾವದಿಂದ ಕಡ್ಡಾಯವಾಗಿ ಹೊರಗೆ ಬರಲೇಬೇಕು. ಪ್ರವಾಸ- ಮನರಂಜನೆ ಇಂಥವುಗಳಿಗೆ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಇನ್ನು ದೀರ್ಘ ಕಾಲದಿಂದ ಇರುವಂಥ ಕಾಯಿಲೆಗಳು ಉಲ್ಬಣ ಆಗುವ ಸಾಧ್ಯತೆ ಇದೆ. ಅದರಲ್ಲೂ ಹೆಪಟೈಟಿಸ್ ಬಿ, ಅನಿಯಂತ್ರಿತ ಮಧುಮೇಹ, ರಕ್ತದೊತ್ತಡ, ಪೈಲ್ಸ್ ಈ ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾ ಇದ್ದಲ್ಲಿ ಅದು ಇನ್ನೂ ತೀವ್ರ ಸ್ವರೂಪಕ್ಕೆ ತಲುಪಬಹುದು. ಅಥವಾ ಇದೇ ಮೊದಲ ಬಾರಿಗೆ ನಿಮ್ಮ ಗಮನಕ್ಕೆ ಬರುತ್ತಿದೆ ಅಂತಾದಲ್ಲಿ ಗಂಭೀರ ಹಂತ ಮುಟ್ಟಿರುವ ಅವಕಾಶ ಹೆಚ್ಚಾಗಿದೆ. ವಿದೇಶಗಳಿಗೆ ಉದ್ಯೋಗಕ್ಕಾಗಿ ಗುತ್ತಿಗೆ ಆಧಾರದಲ್ಲಿ ತೆರಳಿದಂಥವರು ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಾಧ್ಯವಿಲ್ಲದೆ ವಾಪಸ್ ನಿಮ್ಮ ಊರಿಗೆ ಬಂದುಬಿಡಬೇಕು ಎಂಬ ನಿರ್ಧಾರ ಮಾಡುವ ಸಾಧ್ಯತೆ ಇದೆ. ಈ ಪ್ರಕ್ರಿಯೆಯಲ್ಲಿ ಕೈಯಿಂದ ಸ್ವಲ್ಪ ಹಣವನ್ನು ಕಟ್ಟಿಕೊಡುವಂತೆ ಆಗಲಿದೆ. ಈಗಾಗಲೇ ಸೈಟು ಇದೆ, ಅಲ್ಲಿ ಸ್ವಂತಕ್ಕಾಗಿ ಮನೆ ಕಟ್ಟಬೇಕು ಎಂದುಕೊಳ್ಳುತ್ತಾ ಇರುವವರಿಗೆ ಆ ಸ್ಥಳಕ್ಕೆ ಸಂಬಂಧಿಸಿದಂತೆ ಕೆಲವು ಕಾನೂನು ತೊಡಕುಗಳಿವೆ ಎಂಬ ಅಂಶ ತಿಳಿದುಬರಲಿದೆ. ಬ್ಯಾಂಕ್ ನಲ್ಲಿ ಸಾಲ ಕೇಳಬೇಕು ಎಂಬ ಹಂತದಲ್ಲಿಯೋ ಅಥವಾ ಮನೆ ನಿರ್ಮಾಣಕ್ಕೆ ಕಟ್ಟಡ ಪರವಾನಗಿ ಪಡೆಯುವುದಕ್ಕೆ ಪ್ರಯತ್ನಿಸಿದಾಗಲೋ ಈ ಅಂಶ ತಿಳಿದು ಬರಲಿದೆ. ತೋಟಗಾರಿಕೆ ಬೆಳೆಯನ್ನು ಬೆಳೆದು, ಅದನ್ನೇ ಆದಾಯ ಮೂಲವಾಗಿ ಮಾಡಿಕೊಂಡವರಿಗೆ ಹಣಕಾಸಿನ ಹರಿವಿನಲ್ಲಿ ಗಣನೀಯ ಪ್ರಮಾಣದ ಇಳಿಕೆ ಆಗಲಿದೆ. ಮೊದಲಿಗೆ ಎಷ್ಟು ಮೊತ್ತ ಎಂದು ಮಾತನಾಡದೆ, ಕೆಲಸ ಮುಗಿಸಿಕೊಟ್ಟ ನಂತರ ಹೇಳಿದರಾಯಿತು ಎಂದುಕೊಂಡವರಿಗೆ ಬಹಳ ಕೆಟ್ಟ ಅನುಭವ ಆಗಲಿದೆ. ಪ್ಲಂಬಿಂಗ್, ಪೇಂಟಿಂಗ್, ಎಲೆಕ್ಟ್ರಿಕಲ್ ಕೆಲಸ, ಕಬ್ಬಿಣದ ಕೆಲಸ ಇಂಥವುಗಳನ್ನು ಮಾಡುವಂಥವರಿಗೆ ಮನೆ ಕಾಂಟ್ರಾಕ್ಟರ್ ಜೊತೆಗೆ ಅಭಿಪ್ರಾಯ ಭೇದ, ಮನಸ್ತಾಪಗಳು ಆಗಿ, ನಷ್ಟವನ್ನು ಅನುಭವಿಸುವಂತೆ ಆಗಬಹುದು. ಸಾಧ್ಯವಾದ ಮಟ್ಟಿಗೆ ಆಯಾ ವಾರದ ಕೆಲಸದ ಹಣವನ್ನು ಆಯಾ ವಾರದಲ್ಲೇ ಪಡೆದುಕೊಳ್ಳುವುದು ಕ್ಷೇಮ ಹಾಗೂ ಉತ್ತಮ. ಎಚ್ ಆರ್ ಏಜೆನ್ಸಿಗಳನ್ನು ನಡೆಸುತ್ತಿರುವವರು, ಅಂಥ ಕಡೆಗಳಲ್ಲಿ ಕೆಲಸ ಮಾಡುತ್ತಿರುವವರು ಇತರರಿಂದ ತೀರಾ ಕೆಳ ಮಟ್ಟದ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ನಿಮ್ಮಲ್ಲಿ ಕೆಲವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುವ ಸಾಧ್ಯತೆಗಳು ಸಹ ಇವೆ.
ದುಬಾರಿ ಬೈಕ್ ಗಳನ್ನೋ ಎಲೆಕ್ಟ್ರಿಕ್ ಕಾರುಗಳನ್ನೋ ಖರೀದಿ ಮಾಡುವಂಥ ಯೋಗ ನಿಮ್ಮಲ್ಲಿ ಕೆಲವರಿಗೆ ಇದೆ. ಅದರಲ್ಲೂ ಭಾರೀ ಮೊತ್ತದ ರಿಯಾಯಿತಿ ದೊರೆಯುತ್ತದೆ ಅಂತಲೋ ಅಥವಾ ಆಫರ್ ಸಿಗುತ್ತಿದೆ ಎಂಬ ಕಾರಣಕ್ಕೋ ಕೊಳ್ಳುವುದಕ್ಕೆ ಮುಂದಾಗಲಿದ್ದೀರಿ. ಈಗಾಗಲೇ ನೀವು ಮುನ್ನಡೆಸುತ್ತಿರುವ ಪ್ರಾಜೆಕ್ಟ್ ವೊಂದರ ಗಡುವಿಗೂ ಮುಂಚೆಯೇ ಪೂರ್ಣ ಮಾಡುವಂತೆ ನಿಮ್ಮ ಮೇಲೆ ಒತ್ತಡ ಹಾಕುವ ಸಾಧ್ಯತೆಗಳು ಹೆಚ್ಚಿವೆ. ಈಗಾಗಲೇ ಚರ್ಮದ ಅಲರ್ಜಿ ಇರುವಂಥವರು ಮುಂಜಾಗ್ರತೆಯಾಗಿ ಅಗತ್ಯ ಚಿಕಿತ್ಸೆ ತೆಗೆದುಕೊಳ್ಳುವುದು ಕ್ಷೇಮ. ಫಾಲೋಅಪ್ ಪರೀಕ್ಷೆಗಳು ಇದ್ದಲ್ಲಿ ಅವುಗಳನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಿ. ನಿಮಗೆ ಗೊತ್ತಿದೆ ಅಂದುಕೊಂಡು ಬೇರೆಯವರು, ಅವರಿಗೆ ಗೊತ್ತಿದೆ ಅಂದುಕೊಂಡು ನೀವು ಸರಿಯಾಗಿ ಮಾತನಾಡಿಕೊಳ್ಳದೆ ಕಮ್ಯುನಿಕೇಷನ್ ಗ್ಯಾಪ್ ಆಗಿ, ಒತ್ತಡ ತಲೆ ಮೇಲೆ ಕೂತು ನಾಟ್ಯ ಮಾಡುವಂತೆ ಮಾಡಿಕೊಳ್ಳುವಿರಿ. ಯಾವುದೇ ವಿಚಾರವನ್ನು ಕೇಳಿ, ಖಾತ್ರಿ ಮಾಡಿಕೊಳ್ಳಿ. ಹಣಕಾಸಿನ ಉಳಿತಾಯ, ಹೂಡಿಕೆಗೆ ಹೆಚ್ಚಿನ ಆದ್ಯತೆಯನ್ನು ನೀಡುವಿರಿ. ಇನ್ನು ನಿಮ್ಮಲ್ಲಿ ಕೆಲವರು ಈಗ ನಿಮ್ಮ ಬಳಿ ಇರುವಂಥ ಆಸ್ತಿಯೊಂದರ ಮಾರಾಟ ಮಾಡಿ, ಹೊಸ ಕಡೆ ಹೂಡಿಕೆ ಮಾಡುವ ಕಡೆಗೆ ಗಮನವನ್ನು ನೀಡುವಿರಿ. ನಿಮ್ಮ ಬಳಿ ಬಹಳ ವರ್ಷಗಳಿಂದ ಉಳಿಸಿಕೊಂಡು ಬಂದಿದ್ದ ಚಿನ್ನ ಹಾಗೂ ಬೆಳ್ಳಿಯನ್ನು ಸಹ ಮಾರಾಟ ಮಾಡುವ ಆಲೋಚನೆಯನ್ನು ಮಾಡಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ಆಗುವಂಥ ಕೆಲವು ಬೆಳವಣಿಗೆಗಳು ಒಂದು ಬಗೆಯ ಅನಿಶ್ಚಿತತೆಗೆ ನಿಮ್ಮನ್ನು ದೂಡಲಿದೆ. ಈ ತಿಂಗಳಲ್ಲಿ ನಿಮ್ಮ ನೇರವಂತಿಕೆ ಹಾಗೂ ಭಾವುಕತೆ ಕೆಲಸಕ್ಕೆ ಬರುವುದಿಲ್ಲ. ಒಂದು ವೇಳೆ ನೀವೇನಾದರೂ ವ್ಯವಹಾರ- ವ್ಯಾಪಾರ ಮಾಡುವಂಥವರಾದಲ್ಲಿ ಅದರ ರಹಸ್ಯಗಳನ್ನು ಯಾರ ಜೊತೆಗೂ ಹಂಚಿಕೊಳ್ಳಬೇಡಿ. ಮೇಲುನೋಟಕ್ಕೆ ನೀವು ಭಾವಿಸಿದಷ್ಟು ಸರಳವಾಗಿ ಕೆಲವು ಸಂಗತಿಗಳು ಇರುವುದಿಲ್ಲ. ನಿಮಗೆ ಹೊಸದಾಗಿ ಪರಿಚಯ ಆಗುವಂಥ ವ್ಯಕ್ತಿಗಳ ಜೊತೆಗೆ ವಿಪರೀತ ಸ್ನೇಹ- ಸಲುಗೆಯಿಂದ ನಡೆದುಕೊಳ್ಳಬೇಡಿ. ಇನ್ನು ನಿಮ್ಮಿಂದ ಮಾಡಲು ಸಾಧ್ಯವಿಲ್ಲ ಎಂದೆನಿಸಿದ ಕಾರ್ಯಗಳನ್ನು ದಾಕ್ಷಿಣಕ್ಕೆ ಬಿದ್ದು, ಮಾಡಿಕೊಡುವುದಾಗಿ ಹೇಳಿದಿರೋ ಕೈಯಿಂದ ಹಣವೇ ಕಳೆದುಕೊಳ್ಳುವಂತೆ ಆಗಲಿದೆ. ಆಹಾರ ತಜ್ಞರಿಗೆ ತುಂಬ ಒಳ್ಳೆ ಸಮಯ ಇದಾಗಿರಲಿದೆ. ನಿಮ್ಮಲ್ಲಿ ಕೆಲವರು ಪ್ರತಿಷ್ಠಿತ ಆಸ್ಪತ್ರೆಗಳಿಗೆ ಅಥವಾ ಸಮಾಜದಲ್ಲಿ ಗುರುತಿಸಿಕೊಂಡಂಥ- ದೊಡ್ಡ ಹೆಸರು ಮಾಡಿದ ವ್ಯಕ್ತಿಗಳಿಗೆ ಸಲಹೆಗಾರರಾಗಿ ನೇಮಕ ಆಗುವ ಸಾಧ್ಯತೆ ಇದೆ. ಇದು ಆ ಕಡೆಯಿಂದಲೇ ಬರುವಂಥ ಪ್ರಸ್ತಾವ ಆಗಲಿದೆ. ಕುರಿ- ಕೋಳಿ ಸಾಕಣೆ, ಡೇರಿ ನಡೆಸುತ್ತಿರುವವರು, ನೀರಿಗೆ ಸಂಬಂಧಿಸಿದ ವ್ಯವಹಾರಗಳನ್ನು ಮಾಡುತ್ತಾ ಇರುವವರು ಅದರ ವಿಸ್ತರಣೆಗೆ ಕೈ ಹಾಕಲಿದ್ದೀರಿ. ಒಂದು ವೇಳೆ ಹಣಕಾಸಿನ ಅಗತ್ಯ ಹೆಚ್ಚಿಗೆ ಬಿದ್ದಲ್ಲಿ ಸಬ್ಸಿಡಿ ಸಹಿತವಾಗಿ ಸಾಲದ ವ್ಯವಸ್ಥೆ ಆಗುವಂಥ ಯೋಗ ನಿಮ್ಮ ಪಾಲಿಗೆ ಒದಗಿ ಬರಲಿದೆ.
ನಿಮ್ಮ ಕಲ್ಪನಾಶಕ್ತಿ, ಪರಿಣಾಮಕಾರಿಯಾದ ಕಮ್ಯುನಿಕೇಷನ್ ಹಾಗೂ ಸಾಮಾಜಿಕವಾಗಿ ಹೆಚ್ಚು ಬೆರೆಯುವಂಥ ಗುಣದಿಂದ ಕೆಲವು ಹೊಸ ಅನುಭವಗಳನ್ನು ಪಡೆದುಕೊಳ್ಳಲಿದ್ದೀರಿ. ಈ ಅವಧಿಯಲ್ಲಿ ನಿಮ್ಮ ಕ್ರಿಯೇಟಿವ್ ಆದ ಚಿಂತನೆಗಳಿಗೆ ಹೊಸ ದಾರಿಗಳು ತೆರೆದುಕೊಂಡು, ಕೈಗೊಂಡ ಕೆಲಸಗಳಲ್ಲಿ ಹೆಚ್ಚಿನ ಸ್ಪಷ್ಟತೆ ಕಾಣಿಸಿಕೊಳ್ಳಲಿದೆ. ಬೇರೆಯವರೊಂದಿಗೆ ಕೆಲಸ ಮಾಡುವಾಗ ನಿಮ್ಮ ಅಭಿಪ್ರಾಯಕ್ಕೆ ಹೆಚ್ಚು ಮನ್ನಣೆ ಸಿಗುವುದು ಮತ್ತು ತಂಡದ ಯಶಸ್ಸಿಗೆ ನೀವು ಕಾರಣರಾಗುತ್ತೀರಿ. ಹೊಸ ವ್ಯವಹಾರ ಆರಂಭಿಸಲು ಯೋಚಿಸುತ್ತಿರುವವರಿಗೆ ನಿಮಗಿರುವ ಗ್ರಾಹಕ ಸಂಪರ್ಕ ಮತ್ತು ಮಾರಾಟ ಕೌಶಲಗಳು ಬಲವಾದ ಬೆಂಬಲ ನೀಡಲಿವೆ. ಹಣಕಾಸಿನ ವಿಚಾರದಲ್ಲಿ ಸಣ್ಣ- ಪುಟ್ಟ ಏರಿಳಿತಗಳು ಕಂಡುಬಂದರೂ ಮುಂಜಾಗ್ರತೆಯಾಗಿ ಖರ್ಚಿನ ಮೇಲೆ ಸಾಧಿಸುವ ನಿಯಂತ್ರಣ ಮತ್ತು ಸೂಕ್ತ ಹೂಡಿಕೆ ನಿರ್ಧಾರಗಳು ಒಳ್ಳೆಯದನ್ನು ಮಾಡಲಿದೆ. ಈ ತಿಂಗಳಲ್ಲಿ ಯಾರ ಮೇಲೂ ಅತಿಯಾದ ವಿಶ್ವಾಸ ಬೇಡ. ಅದರಲ್ಲೂ ಅಂಥದ್ದೊಂದು ಧೋರಣೆಯಿಂದ ಸಾಲ ಕೊಡುವುದು ಅಥವಾ ಉದ್ದೇಶವೇ ಸ್ಪಷ್ಟವಿಲ್ಲದ ಯೋಜನೆಗಳಿಗೆ ಹಣ ಹಾಕುವುದರಿಂದ ದೂರವಿರಿ. ಆರೋಗ್ಯದ ದೃಷ್ಟಿಯಿಂದ ಜೀರ್ಣಾಂಗಕ್ಕೆ ಸಂಬಂಧಿಸಿದ ಸಣ್ಣ- ಪುಟ್ಟ ತೊಂದರೆಗಳಾದರೂ ಕಾಣಿಸಿಕೊಳ್ಳಬಹುದು ಆದ್ದರಿಂದ ಆಹಾರದಲ್ಲಿ ಸಮತೋಲನ ಕಾಪಾಡಿಕೊಳ್ಳುವ ಕಡೆಗೆ ನಿಮ್ಮ ಗಮನ ಇರಲಿ. ವ್ಯಾಯಾಮ, ಯೋಗ ಮತ್ತು ಸರಿಯಾದ ಪ್ರಮಾಣದಲ್ಲಿ ನೀರಿನ ಸೇವನೆ ಮಾಡುವುದು ಹಾಗೂ ದೈಹಿಕವಾಗಿ ಚಟುವಟಿಕೆಯಿಂದ ಇರುವುದರಿಂದ ಮಾನಸಿಕವಾಗಿ ಶಾಂತಿಯೂ ಲಭಿಸುತ್ತದೆ. ತಾಳ್ಮೆ- ಸಂಯಮದಿಂದ ಮಾತನಾಡುವುದರಿಂದ ವೈಯಕ್ತಿಕ ಸಂಬಂಧಗಳಲ್ಲಿ ಆಗಿರುವಂಥ ಕೆಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ. ಕೌಟುಂಬಿಕವಾಗಿ ಬಹಳ ಸಮಯದಿಂದ ಉಳಿದುಹೋಗಿರುವ ಸಮಸ್ಯೆಯೊಂದನ್ನು ಚರ್ಚೆ ಹಾಗೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಅನುಕೂಲ ಆಗಲಿದೆ. ಹಿರಿಯರ ಮಾರ್ಗದರ್ಶನದ ಅಗತ್ಯ ಬಂದಲ್ಲಿ ಅದನ್ನು ಪಡೆದುಕೊಳ್ಳುವುದು ಒಳ್ಳೆಯದು. ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ಕೆಲವು ಕೋರ್ಸ್ ಅಥವಾ ತರಬೇತಿಯನ್ನು ಪೂರ್ಣ ಮಾಡಲಿದ್ದೀರಿ. ಈ ತಿಂಗಳಲ್ಲಿ ನಿಮಗೆ ಆಗುವ ಹೊಸ ಪರಿಚಯಗಳು ಹಾಗೂ ಸ್ನೇಹದ ಸಹಾಯದಿಂದ ನಿಮ್ಮ ಉದ್ಯೋಗ- ವೃತ್ತಿ ಬದುಕಿಗೆ ಭವಿಷ್ಯದಲ್ಲಿ ದೊಡ್ಡ ಮಟ್ಟದ ಸಹಾಯ ಆಗಲಿದೆ. ಸಿನಿಮಾ, ಕಲೆ, ರಂಗಭೂಮಿ ಇಂಥ ಕ್ಷೇತ್ರಗಳಲ್ಲಿ ಇರುವಂಥವರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಒಂದೊಳ್ಳೆ ವೇದಿಕೆ ದೊರೆಯಲಿದೆ. ಅದರ ಮೂಲಕ ದೊಡ್ಡ ಅವಕಾಶಗಳು ಸಹ ಹುಡಕಿಕೊಂಡು ಬರಲಿವೆ. ಇಷ್ಟು ಕಾಲ ನೀವು ಇರಿಸಿಕೊಂಡಿದ್ದ ಗುರಿಗಳಲ್ಲಿ ಬದಲಾವಣೆ ಮಾಡಿಕೊಳ್ಳಲು ನಿರ್ಧರಿಸುತ್ತೀರಿ. ಇಷ್ಟು ಸಮಯದ ವೇಗವನ್ನು ಸ್ವಲ್ಪ ಕಡಿಮೆ ಮಾಡಲು ಚಿಂತಿಸುತ್ತೀರಿ. ನೀವು ಈ ಹಿಂದೆ ಎದುರಿಸಿದ ಸನ್ನಿವೇಶಗಳ ಅನುಭವ ನಿಮ್ಮ ಸಹಾಯಕ್ಕೆ ಬರುತ್ತದೆ. ನಿಮ್ಮ ಬೆಳವಣಿಗೆಗೆ ಸಹಾಯ ಆಗುವಂಥ ಹಲವು ಘಟನೆಗಳನ್ನು ಎದುರುಗೊಳ್ಳಲಿದ್ದು, ಆತ್ಮವಿಶ್ವಾಸ ಹೆಚ್ಚಾಗಲಿದೆ.
ಸಾವಯವ ಕೃಷಿ ಮಾಡುತ್ತಿರುವ ರೈತರಿಗೆ ಆದಾಯದ ಹೆಚ್ಚಳ ಆಗುವಂಥ ಸಾಧ್ಯತೆ ಹೆಚ್ಚಿದೆ. ಈಗ ಬರುತ್ತಿರುವ ಅಥವಾ ಬಳಸುತ್ತಿರುವ ಆದಾಯದ ಮೂಲಕ್ಕೆ ಇನ್ನಷ್ಟು ಸೇರ್ಪಡೆ ಆಗುವಂತೆ ಹೊಸ ವಿಧಾನ ಕೆಲವು ಅಳವಡಿಕೆ ಮಾಡಿಕೊಳ್ಳಲಿದ್ದೀರಿ. ಹೊಸ ವ್ಯವಹಾರ- ವ್ಯಾಪಾರ ಆರಂಭಿಸಿದವರು ಪ್ರಚಾರದ ಸಲುವಾಗಿ ಹೆಚ್ಚಿನ ಸಮಯ ಮೀಸಲಿಡಲಿದ್ದೀರಿ. ಪ್ರಮೋಷನಲ್ ಚಟುವಟಿಕೆಗಳಿಗೆ ನೀವು ಮೀಸಲಿಡುವ ಹಣದಿಂದ ಒಳ್ಳೆ ರಿಟರ್ನ್ಸ್ ಕೂಡ ದೊರೆಯಲಿದೆ. ಉದ್ಯೋಗ ಸ್ಥಳದಲ್ಲಿ ನಿಮಗೆ ಸಂಬಂಧಿಸಿದ ವಿಷಯಗಳಲ್ಲಿ ತಲೆ ಹಾಕುವುದಕ್ಕೆ ಹೋಗಬೇಡಿ. ಅದರಲ್ಲೂ ಬೇರೆಯವರಿಗೆ ಸಹಾಯ ಮಾಡಬೇಕು ಎಂಬ ನಿಮ್ಮ ಪ್ರಯತ್ನದಲ್ಲಿ ಬಲಶಾಲಿಗಳ ವೈರತ್ವ ಕಟ್ಟಿಕೊಳ್ಳುವಂತೆ ಆಗಲಿದೆ. ನೀವು ಹಣ ನೀಡಿ ಬಹಳ ವರ್ಷವೇ ಆಗಿಹೋಗಿರುವಂಥ ಹೌಸಿಂಗ್ ಪ್ರಾಜೆಕ್ಟ್ ಅಥವಾ ಸೈಟು- ವಿಲ್ಲಾಗಳ ಅಡ್ವಾನ್ಸ್ ಬಗ್ಗೆ ಅಚಾನಕ್ ಆಗಿ ನಿಮಗೆ ಮಾಹಿತಿ ದೊರೆಯಬಹುದು. ಅದರ ನೋಂದಣಿ ನೀವು ಮಾಡಿಸಿಕೊಳ್ಳಬಹುದು ಎಂಬ ಸಂದೇಶ ಬರುವ ಸಾಧ್ಯತೆ ಇದೆ. ನಿಮ್ಮಲ್ಲಿ ಯಾರು ಮಾಂಸಾಹಾರ ಸೇವನೆ ಮಾಡುತ್ತೀರೋ ಅಂಥವರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ವಿಪರೀತ ಮಸಾಲೆಭರಿತ ಖಾದ್ಯಗಳು, ಎಣ್ಣೆಯಿಂದ ಕರಿದ ಪದಾರ್ಥಗಳ ಸೇವನೆಯಿಂದ ದೂರ ಇರುವುದು ಒಳ್ಳೆಯದು. ಅನಿಯಂತ್ರಿತ ಮಧುಮೇಹದಿಂದ ಬಳಲುತ್ತಾ ಇರುವವರು ನೈಸರ್ಗಿಕ ವಿಧಾನದ ಚಿಕಿತ್ಸೆ ಪಡೆದುಕೊಳ್ಳುವುದಕ್ಕೆ ನಿರ್ಧಾರ ಮಾಡುತ್ತೀರಿ. ಇದರಿಂದ ನಿಮಗೆ ದೊಡ್ಡ ಮಟ್ಟದ ಸಹಾಯ ಕೂಡ ಆಗಲಿದೆ. ಉನ್ನತ ಶಿಕ್ಷಣ ವ್ಯಾಸಂಗಕ್ಕಾಗಿ ವಿದೇಶಗಳಿಗೆ ತೆರಳಬೇಕು ಎಂದುಕೊಳ್ಳುತ್ತಿರುವವರು ಅಲ್ಲಿ ಬದಲಾದ ನಿಯಮಗಳ ಕಾರಣಕ್ಕೆ ಚಿಂತೆಗೆ ಬೀಳುವಂತೆ ಆಗಲಿದೆ. ಇನ್ನು ಈಗಾಗಲೇ ವಿದೇಶದಲ್ಲಿ ಓದುತ್ತಾ ಇದ್ದೀರಿ ಅಂತಾದಲ್ಲಿ ಖರ್ಚಿನ ಪ್ರಮಾಣ ಹೆಚ್ಚಾಗುವುದರಿಂದ ಸಣ್ಣ ಮಟ್ಟದ್ದಾದರೂ ಆದಾಯ ಬರುವಂಥ ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಬರಲಿದ್ದೀರಿ. ಹಾಸ್ಟೆಲ್ ಗಳಲ್ಲಿ, ಪಿ.ಜಿ.ಗಳಲ್ಲಿ ಇದ್ದುಕೊಂಡು ಓದುತ್ತಾ ಇರುವವರಿಗೆ ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದ್ದು, ವೈದ್ಯಕೀಯ ಚಿಕಿತ್ಸೆಗಳಿಗೆ ಖರ್ಚು ವಿಪರೀತ ಆಗಲಿದೆ. ನಿಮಗಿರುವ ಕಾಂಟ್ಯಾಕ್ಟ್ ಗಳ ಸಹಾಯದಿಂದ ಕೆಲವು ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿದ್ದೀರಿ. ಮುಖ್ಯವಾಗಿ ಆಸ್ತಿ ವ್ಯಾಜ್ಯಗಳು ಇದ್ದಲ್ಲಿ ಸಂಧಾನ- ಮಾತುಕತೆಯ ಮೂಲಕ ನಿವಾರಿಸಿಕೊಳ್ಳುವ ವೇದಿಕೆ ಸಿದ್ಧವಾಗಲಿದೆ. ಆಟೋ- ಕಾರು ಚಾಲಕರಿಗೆ ಅದರ ರಿಪೇರಿ ಪದೇಪದೇ ಬಂದು, ಸಾಲ ಮಾಡಿಯಾದರೂ ಅವುಗಳನ್ನು ಸರಿ ಮಾಡಿಸಲೇಬೇಕು ಎಂಬ ಸ್ಥಿತಿ ಎದುರಾಗಲಿದೆ. ನಿಮ್ಮ ಆತ್ಮಸ್ಥೈರ್ಯ ಕುಗ್ಗುವಂಥ ಕೆಲವು ಬೆಳವಣಿಗೆಗಳು ಇದೇ ಸಮಯದಲ್ಲಿ ಆಗಲಿದ್ದು, ಎಲ್ಲಿಯಾದರೂ ಉದ್ಯೋಗಕ್ಕೆ ಸೇರಿಕೊಂಡು ಬಿಡುವುದು ಒಳ್ಳೆಯದೇನೋ ಎಂಬ ಆಲೋಚನೆ ನಿಮ್ಮ ಮನಸ್ಸಿನಲ್ಲಿ ಸುಳಿದು ಹೋಗಲಿದೆ. ಯಾವುದೇ ಕಾರಣಕ್ಕೂ ನಿಮ್ಮನ್ನು ಇತರರ ಜೊತೆಗೆ ಹೋಲಿಕೆ ಮಾಡಿಕೊಳ್ಳಲು ಹೋಗಬೇಡಿ. ಇದರಿಂದ ಅನಗತ್ಯವಾದ ಒತ್ತಡಕ್ಕೆ ಬೀಳುತ್ತೀರಿ.
ನಿಮ್ಮ ಬುದ್ಧಿವಂತಿಕೆಯು ಕುಟುಂಬದಲ್ಲಿ, ಉದ್ಯೋಗ ಸ್ಥಳದಲ್ಲಿ ಮೆಚ್ಚುಗೆ ಪಡೆದುಕೊಳ್ಳಲಿದೆ. ಎಷ್ಟೇ ಒತ್ತಡ ಬಂದರೂ ನಿಮ್ಮ ಆಪ್ತರು- ಕುಟುಂಬಸ್ಥರು ಭಾವನಾತ್ಮಕವಾಗಿ ಮಾತನಾಡಿದರೂ ನೀವು ಮಾಡಲು ಒಪ್ಪದ ಹೂಡಿಕೆ ಅಥವಾ ನೀಡಲು ಒಪ್ಪದ ಸಾಲದ ಬಗೆಗಿನ ನಿರ್ಧಾರದ ಕಾರಣಕ್ಕೆ ನಿಮ್ಮ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಲಿದ್ದಾರೆ. ದೈಹಿಕವಾಗಿ ಶ್ರಮದಾಯಕ ಆಗುವ ಕೆಲಸ ಮಾಡುವಂಥವರಿಗೆ ಈ ತಿಂಗಳಲ್ಲಿ ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚಿನ ವಿರಾಮ ದೊರೆಯಲಿದೆ. ಫೈನಾನ್ಸ್ ವ್ಯವಹಾರದಲ್ಲಿ ತೊಡಗಿರುವವರು ಈಗ ನೀಡಿರುವಂಥ ಹಣದಲ್ಲಿ ಅರ್ಧದಷ್ಟು ಮೊತ್ತವನ್ನು ಹಿಂತೆಗೆದುಕೊಂಡು, ಹೊಸ ವ್ಯವಹಾರ ಒಂದನ್ನು ಆರಂಭ ಮಾಡುವ ಚಿಂತನೆ ನಡೆಸಲಿದ್ದೀರಿ. ಬೇರೆ ದೇಶದ ನಾಗರಿಕತ್ವ ಪಡೆಯುವುದಕ್ಕೆ ಪ್ರಯತ್ನ ಮಾಡುತ್ತಾ ಇರುವವರಿಗೆ ಮುಖ್ಯವಾದ ಬೆಳವಣಿಗೆ ಆಗಲಿದೆ. ಒಂದು ವೇಳೆ ಅಡೆತಡೆಗಳು ಅಂತೇನಾದರೂ ಕಾಡುತ್ತಾ ಇದ್ದಲ್ಲಿ ಅದು ನಿವಾರಣೆ ಆಗಲಿದೆ. ವಿವಾಹಕ್ಕೆ ಪ್ರಯತ್ನ ಮಾಡುತ್ತಾ ಇರುವವರಿಗೆ ಕೆಲವು ಸಂಬಂಧಗಳು ಅಪ್ರಯತ್ನ ಪೂರ್ವಕವಾಗಿ ಹುಡುಕಿಕೊಂಡು ಬರಲಿದೆ. ಅದು ಕೂಡ ಈ ಹಿಂದೆ ಪ್ರಸ್ತಾವ ಬಂದು, ಆ ನಂತರ ಮಾತು ಮುಂದುವರಿಯದ ಕಾರಣಕ್ಕೆ ಸುಮ್ಮನೆ ಉಳಿದುಬಿಟ್ಟಿದ್ದ ಸಂಬಂಧವೇ ಮತ್ತೆ ಹುಡುಕಿ ಬರುವ ಸಾಧ್ಯತೆ ಇದೆ. ನಿಮ್ಮಲ್ಲಿ ಕೆಲವರು ಮನೆಗೆ ಬೇಕಾದ ಗೃಹಾಲಂಕಾರ ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದೀರಿ. ಕನ್ಸ್ಯೂಮರ್ ಡ್ಯುರಬಲ್ ಲೋನ್ ಪಡೆದುಕೊಂಡೋ ಅಥವಾ ನಿಮ್ಮ ಕ್ರೆಡಿಟ್ ಕಾರ್ಡ್ ನಲ್ಲಿ ಕಡಿಮೆ ಬಡ್ಡಿಗೆ ಸಾಲ ನೀಡುತ್ತಾರೆ ಎಂಬ ಕಾರಣಕ್ಕೋ ಕೊಳ್ಳಬೇಕು ಎಂಬ ನಿರ್ಧಾರ ಇನ್ನೂ ಗಟ್ಟಿ ಆಗಲಿದೆ. ಸಂಗೀತಗಾರರು, ನೃತ್ಯ ಮಾಡುವ ಮೂಲಕ ಅದರಿಂದ ಆದಾಯ ಬರುತ್ತಾ ಇರುವವರಿಗೆ ಹಾಗೂ ನೃತ್ಯದ ತರಬೇತಿ ನೀಡುತ್ತಿರುವವರಿಗೆ ಆದಾಯದಲ್ಲಿ ಗಣನೀಯ ಪ್ರಮಾಣದ ಏರಿಕೆ ಆಗಲಿದೆ. ನಿಮ್ಮಲ್ಲಿ ಕೆಲವರು ಈಗಿರುವ ಸಣ್ಣ- ಪುಟ್ಟ ಸಾಲಗಳನ್ನು ತೀರಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡಲಿದ್ದೀರಿ. ನೀವು ಹಳೆಯದಾಯಿತೆಂದು ಬಳಸದೆ ಹಾಗೇ ಎತ್ತಿಟ್ಟಿರುವ ಕೆಲವು ಚಿನ್ನದ ಒಡವೆಗಳನ್ನು ಮಾರಾಟ ಮಾಡಿ, ಅದರಿಂದ ಬಂದ ಹಣದಲ್ಲಿ ನಿಮಗೆ ಒತ್ತಡ ಆಗುತ್ತಿರುವ ಹಣಕಾಸಿನ ವ್ಯವಹಾರಗಳನ್ನು ಮುಗಿಸಿಕೊಳ್ಳುವಿರಿ. ನಿಮ್ಮ ಆತ್ಮಗೌರವಕ್ಕೆ ಪೆಟ್ಟು ನೀಡುವಂಥ ಮಾತನಾಡಿದರು ಎಂಬ ಕಾರಣಕ್ಕೆ ಕೆಲವು ಒಪ್ಪಂದಗಳನ್ನು ನಿಲ್ಲಿಸಿ, ಅದರಿಂದ ಹೊರಬರುವುದಕ್ಕೆ ನಿರ್ಧಾರ ಮಾಡುವ ಸಾಧ್ಯತೆ ಇದೆ. ಇಷ್ಟು ಸಮಯ ಆಲೋಚನೆ ಸಹ ಮಾಡದೇ ಇದ್ದ ರೀತಿಯಲ್ಲಿ ನಿಮ್ಮಲ್ಲಿ ಕೆಲವರು ಸ್ವಂತ ಕಚೇರಿಗಳನ್ನು ಆರಂಭ ಮಾಡಲಿದ್ದೀರಿ. ನಾಲ್ಕಾರು ಜನರಿಗೆ ಉದ್ಯೋಗದ ಅವಕಾಶ ನೀಡುವ ಯೋಗ ನಿಮಗಿದೆ. ತಂದೆ- ತಾಯಿಯ ಬಹು ಕಾಲದ ಅಪೇಕ್ಷೆಯನ್ನು ಈಡೇರಿಸಲಿದ್ದೀರಿ. ಇದರಿಂದ ಧನ್ಯತಾ ಭಾವವೊಂದು ನಿಮಗೆ ಸಿಗಲಿದೆ.
ಇದನ್ನೂ ಓದಿ: ನವೆಂಬರ್ ತಿಂಗಳ ಕೊನೆಯ ವಾರ ಯಾವ ರಾಶಿಗೆ ಶುಭ? ಯಾರಿಗೆ ಅಶುಭ?
ಹಣಕಾಸು ಉಳಿತಾಯ- ಹುದ್ದೆ- ಸ್ಥಾನಮಾನ ಹೀಗೆ ನೀವು ಸಾಧಿಸಿದ್ದೇನು ಎಂಬ ಪ್ರಶ್ನೆ ತುಂಬ ಸಲ ಕಾಡುತ್ತದೆ. ನಿಮ್ಮಲ್ಲಿ ಕೆಲವರಿಗೆ ಉದ್ಯೋಗದಲ್ಲಿ ಮುಂಚಿನ ಆಸಕ್ತಿಯಿಂದ ತೊಡಗಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಯಾವುದರ ಜವಾಬ್ದಾರಿ ನಿಮಗೆ ವಹಿಸಬಹುದು ಎಂದುಕೊಂಡಿರುತ್ತೀರೋ ಅದು ಬೇರೆಯವರ ಪಾಲಾಗುತ್ತದೆ. ಇನ್ನು ಮುಂದೆ ಯಾವ ವಿಚಾರಕ್ಕೂ ಸಲಹೆ ಕೇಳಿಕೊಂಡು ಬರಬೇಡಿ ಎಂಬ ಮಾತನ್ನು ನಿರ್ದಾಕ್ಷಿಣ್ಯವಾಗಿ ಹೇಳಿಬಿಡಬೇಕು ಅಂದುಕೊಳ್ಳುತ್ತೀರಿ. ನಿಮ್ಮಲ್ಲಿ ಕೆಲವರು ಅದನ್ನು ಹೇಳಿಯೂ ಬಿಡುವ ಸಾಧ್ಯತೆ ಇದೆ. ಸರ್ಕಾರಿ ಕೆಲಸದಲ್ಲಿ ಇರುವವರಿಗೆ ನಿಯೋಜನೆ ಮೇರೆಗೆ ಹೆಚ್ಚುವರಿ ಜವಾಬ್ದಾರಿಗಳನ್ನು ವಹಿಸಬಹುದು. ಸೋಷಿಯಲ್ ಮೀಡಿಯಾವನ್ನು ಹೆಚ್ಚೆಚ್ಚು ಬಳಸುವಂಥವರು ನೀವು ಹಾಕುವ ಪೋಸ್ಟ್ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ನಿಮ್ಮಲ್ಲಿ ಕೆಲವರ ಮೇಲೆ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಾಗುವಂಥ ಸಾಧ್ಯತೆ ಇದೆ. ಆದ್ದರಿಂದ ಪರಿಣಾಮಗಳನ್ನು ಆಲೋಚಿಸಿ, ಆ ನಂತರ ಪೋಸ್ಟ್ ಮಾಡಿ. ವಿಲಾಸಿ ಕಾರು ಅಥವಾ ದುಬಾರಿ ಬೈಕ್ ಖರೀದಿ ಮಾಡುವ ಯೋಗ ನಿಮ್ಮಲ್ಲಿ ಕೆಲವರಿಗೆ ಇದೆ. ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುವವರು ಈಗಾಗಲೇ ಅರ್ಧದಷ್ಟು ಮುಗಿದಿರುವಂಥ ಪ್ರಾಜೆಕ್ಟ್ ನಿಂದ ಆಚೆ ಬರುವಂತೆ ಆಗಲಿದೆ. ಇದರಿಂದ ನಿಮ್ಮ ಹೆಸರಿಗೂ ಕಳಂಕ ಅಂಟಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ನಿಮ್ಮ ನಿರ್ಧಾರದ ಹಿಂದಿನ ಕಾರಣ ಏನು ಎಂಬುದನ್ನು ಸ್ಪಷ್ಟವಾಗಿ ತಿಳಿಸುವುದು ಹಾಗೂ ಈ ಬಗ್ಗೆ ಗಾಸಿಪ್ ಹರಡದಂತೆ ನೋಡಿಕೊಳ್ಳುವುದು ಮುಖ್ಯ ಆಗಲಿದೆ. ನಿಮ್ಮ ಸ್ನೇಹಿತರೋ ಅಥವಾ ಸಂಬಂಧಿಗಳೋ ಕೆಲವು ಸಮಯ ತಮ್ಮ ಹಣವನ್ನು ನಿಮ್ಮ ಬಳಿ ಇಟ್ಟುಕೊಂಡಿರುವಂತೆ ಕೇಳಿಕೊಳ್ಳಬಹುದು. ಅದರಲ್ಲೂ ನೀವೇನಾದರೂ ವ್ಯಾಪಾರ- ವ್ಯವಹಾರ ಮಾಡುವಂಥವರಾಗಿದ್ದಲ್ಲಿ ಈ ಸಾಧ್ಯತೆ ಮತ್ತೂ ಹೆಚ್ಚಾಗಿರುತ್ತದೆ. ಇನ್ನು ರಹಸ್ಯವನ್ನು ಕಾಪಾಡಿಕೊಳ್ಳುವ ಕಡೆಗೆ ನಿಮ್ಮ ಗಮನವನ್ನು ನೀಡಿ. ಇತರರು ನಿಮ್ಮ ಬಳಿ ಹೇಳಿಕೊಂಡಂಥ ಅಂತರಂಗದ ವಿಚಾರಗಳನ್ನು ಅಪ್ಪಿತಪ್ಪಿಯೂ ಎಲ್ಲಿ ಬಾಯಿ ಬಿಡುವುದಕ್ಕೆ ಹೋಗಬೇಡಿ. ನೀವೇನಾದರೂ ವಿವಾಹ ವಯಸ್ಜರಾಗಿದ್ದಲ್ಲಿ ಮದುವೆಗೆ ಸಂಬಂಧಿಸಿದಂತೆ ನಿಮ್ಮ ಅಭಿಪ್ರಾಯವನ್ನು ನಿಂತ ನಿಲವಿನಲ್ಲಿಯೇ ತಿಳಿಸಬೇಕು ಎಂದು ಒತ್ತಡ ಸೃಷ್ಟಿ ಆಗಲಿದೆ. ನೀವು ಬಹಳ ಗೌರವಿಸುವ ವ್ಯಕ್ತಿಗಳಿಂದಲೇ ಇಂಥದ್ದೊಂದು ಸನ್ನಿವೇಶ ಸೃಷ್ಟಿ ಆಗಲಿದೆ. ಆದರೆ ಯಾವುದೇ ಕಾರಣಕ್ಕೂ ಆ ತಪ್ಪು ಮಾಡಬೇಡಿ. ಸಮಯ ತೆಗೆದುಕೊಂಡು, ಆಲೋಚಿಸಿದ ನಂತರವೇ ನಿಮ್ಮ ತೀರ್ಮಾನವನ್ನು ಹೇಳಿ. ನಿಮ್ಮಲ್ಲಿ ಕೆಲವರು ಮನೆಗೆ ಸೋಲಾರ್ ಉಪಕರಣಗಳನ್ನು ಅಳವಡಿಸುವ ಬಗ್ಗೆ ಆಲೋಚನೆ ಮಾಡುತ್ತೀರಿ. ಇದರ ಬಗ್ಗೆ ನಿಮ್ಮ ಸ್ನೇಹಿತರ ಮೂಲಕವಾಗಿ ದೊರೆಯುವಂಥ ರೆಫರೆನ್ಸ್ ಗಳಿಂದ ಅನುಕೂಲ ಆಗಲಿದೆ. ವಿದ್ಯಾರ್ಥಿಗಳಿಗೆ ಸ್ನೇಹಿತರ ಜೊತೆಗೂಡಿ ಪ್ರವಾಸ ತೆರಳುವ ಯೋಗ ಇದ್ದು, ಉತ್ತಮವಾದ ಕ್ಷಣಗಳನ್ನು ಜೊತೆಯಾಗಿ ಕಳೆಯಲಿದ್ದೀರಿ.
ನಿಮ್ಮ ಶಿಸ್ತು, ಪರಿಶ್ರಮ, ಜವಾಬ್ದಾರಿ ಮತ್ತು ಸ್ಥಿರತೆಯಿಂದಾಗಿ ಕೆಲಸ- ಕಾರ್ಯಗಳಲ್ಲಿ ಆತ್ಮವಿಶ್ವಾಸ ಎದ್ದುಕಾಣುತ್ತದೆ. ಕೆಲವು ಕೆಲಸ- ಕಾರ್ಯಗಳು ನಿಧಾನ ಎಂದೆನಿಸಿದರೂ ಗಟ್ಟಿಯಾದ ಬೆಳವಣಿಗೆ ಆಗಲಿದೆ. ಯೋಜನೆ ಹಾಕಿಕೊಳ್ಳುವ ಸಲುವಾಗಿಯೇ ಸಮಯ ಮೀಸಲಿಟ್ಟು, ಬಹುಕಾಲದಿಂದ ಪಟ್ಟ ಶ್ರಮದ ಫಲಿತವಾಗಿ ಕೆಲವು ಪ್ರಮುಖ ಗುರಿಗಳನ್ನು ಅನಾಯಾಸವಾಗಿ ತಲುಪಲಿದ್ದೀರಿ. ಉದ್ಯೋಗದ ಬಗ್ಗೆ ನಿಮಗಿರುವ ನಿಷ್ಠೆ, ಅನುಸರಿಸುವ ಪದ್ಧತಿ ಹಾಗೂ ಕೆಲಸ ಮಾಡುವ ಮುನ್ನ ಚಿಂತನೆ ಮಾಡುವ ಕ್ರಮ ಇವೆಲ್ಲವುಗಳು ನಿಮ್ಮ ಮೇಲಧಿಕಾರಿಗಳ ಗಮನಕ್ಕೆ ಬರಲಿದ್ದು, ಬಡ್ತಿ- ವೇತನ ಹೆಚ್ಚಳದ ನಿರೀಕ್ಷೆಯಲ್ಲಿ ಇರುವವರಿಗೆ ಉತ್ತಮ ಸುದ್ದಿ ಕೇಳಿಬರಲಿದೆ. ಇಲ್ಲಿಯವರೆಗಿನ ನಿಮ್ಮ ಖರ್ಚು- ವೆಚ್ಚಗಳ ಬಗ್ಗೆ ವಿಶ್ಲೇಷಣೆಗೆ ಅಂತ ಸಮಯವನ್ನು ಎತ್ತಿಡಲಿದ್ದೀರಿ. ನಿಮ್ಮ ಆದಾಯ ಹಾಗೂ ಅದನ್ನು ವೆಚ್ಚ ಮಾಡುತ್ತಿರುವ ರೀತಿಯಲ್ಲಿ ಬದಲಾವಣೆ ಅಗತ್ಯ ಇದೆಯಾ ಎಂಬ ಬಗ್ಗೆ ಸಂಗಾತಿ ಅಥವಾ ಕುಟುಂಬ ಸದಸ್ಯರ ಜೊತೆಗೆ ಚರ್ಚೆ ಮಾಡುವಂಥ ಸಾಧ್ಯತೆ ಇದೆ. ವ್ಯಾಪಾರ- ವ್ಯವಹಾರ ಮಾಡುವವರಿಗೆ ಟೈಮ್ ಮ್ಯಾನೇಜ್ ಮೆಂಟ್ ಉತ್ತಮ ಫಲಿತಾಂಶವನ್ನು ನೀಡಲಿದೆ. ಲಾಭದ ಪ್ರಮಾಣದಲ್ಲಿ ಹೆಚ್ಚಳ ಮಾಡಿಕೊಳ್ಳಲು ಬೇಕಾದ ತಂತ್ರಗಳು ಹಾಗೂ ಅದನ್ನು ಸಮಯಕ್ಕೆ ಸರಿಯಾಗಿ ಅಳವಡಿಸಿಕೊಳ್ಳುವುದರಿಂದ ಹೊಸ ಅವಕಾಶಗಳ ಬಾಗಿಲು ತೆಗೆದುಕೊಳ್ಳುತ್ತದೆ. ಮಕ್ಕಳ ಶಿಕ್ಷಣ, ಮದುವೆ, ನಿಮ್ಮ ಆರೋಗ್ಯ ಹಾಗೂ ನಿವೃತ್ತಿ ನಂತರದ ಬದುಕಿಗೆ ಬೇಕಾದಂಥ ನಿರಂತರ ಆದಾಯಕ್ಕೆ ಹೂಡಿಕೆ- ಉಳಿತಾಯ ಯೋಜನೆಗಳ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಇನ್ನು ಆರೋಗ್ಯದ ದೃಷ್ಟಿಯಿಂದ ನೋಡಬೇಕೆಂದರೆ, ದೇಹದಲ್ಲಿ ಎಣ್ಣೆಯ ಪಸೆ ಕೊರತೆ ಆಗದಂತೆ ನೋಡಿಕೊಳ್ಳಿ. ಅದೇ ರೀತಿ ಸ್ನಾಯು ನೋವು, ಬೆನ್ನು ಅಥವಾ ಕುತ್ತಿಗೆ ನೋವು ಇತ್ಯಾದಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ತುಂಬಾ ಹೊತ್ತು ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ಉಂಟಾಗುವ ತೊಂದರೆಗಳನ್ನು ತಪ್ಪಿಸಲು ಸರಿಯಾದ ವಿರಾಮ, ಹಗುರ ವ್ಯಾಯಾಮ ಹಾಗೂ ನಿಯಮಿತವಾಗಿ ಸ್ಟ್ರೆಚ್ ಮಾಡುವುದು ಅತ್ಯಂತ ಅಗತ್ಯ. ಆಹಾರದಲ್ಲಿ ಹೆಚ್ಚು ಎಣ್ಣೆ, ಕಾರ್ಬೋಹೈಡ್ರೇಟ್ ಒಳಗೊಳ್ಳದಂತೆ ಜಾಗ್ರತೆ ವಹಿಸಿ ಹಾಗೂ ಜಂಕ್ ಫುಡ್‌ಗಳಿಗೆ ಕಡಿವಾಣ ಹಾಕುವುದು ಉತ್ತಮ. ಪ್ರೀತಿ- ಪ್ರೇಮದಲ್ಲಿ ಇರುವವರು, ದಂಪತಿ ಮಧ್ಯೆ ವಿರಸ ಕಾಣಿಸಿಕೊಳ್ಳಬಹುದು. ಮುಖ್ಯವಾಗಿ ನೀವು ಎಲ್ಲ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೀರಿ, ವಿಪರೀತ ಪೊಸೆಸಿವ್, ಎಲ್ಲರೂ ನಿಮ್ಮ ರೀತಿಯಲ್ಲಿ ಇರಬೇಕು ಎಂಬ ನಿರೀಕ್ಷೆ ಮಾಡುತ್ತೀರಿ ಎಂಬ ದೂರನ್ನು ಕೇಳಿಸಿಕೊಳ್ಳುವಂತೆ ಆಗಲಿದೆ. ಸ್ನೇಹಿತರ ಜೊತೆಗೆ ತಲೆದೋರಿದಂಥ ಕೆಲವು ಅಸಮಾಧಾನ ಅಥವಾ ಬೇಸರವನ್ನು ದೂರ ಮಾಡಿಕೊಳ್ಳುವುದಕ್ಕೆ ನಿಮಗೆ ಅವಕಾಶ ಸಿಗಲಿದೆ. ಪಿತ್ರಾರ್ಜಿತ ಆಸ್ತಿ ವ್ಯವಹಾರಗಳು, ಬ್ಯಾಂಕ್ ಗೆ ಸಂಬಂಧಿಸಿದ ವ್ಯವಹಾರಗಳು ಇಂಥವು ಬಹಳ ಸಮಯದಿಂದ ಯಾವುದೇ ಪ್ರಗತಿ ಕಾಣುತ್ತಿಲ್ಲ ಎಂದಾದಲ್ಲಿ ಈಗ ಅವು ವೇಗ ಪಡೆದುಕೊಳ್ಳುತ್ತವೆ. ಭವಿಷ್ಯದಲ್ಲಿ ನಿಮಗೆ ಅನುಕೂಲ ಆಗುವ ಹಲವು ಕೆಲಸಗಳನ್ನು ಈಗ ಮಾಡಿ ಮುಗಿಸುವುದಕ್ಕೆ ಸಾಧ್ಯವಾಗಲಿದೆ.
ಬಾಕಿ ಉಳಿದಂಥ ಕೆಲಸ- ಕಾರ್ಯಗಳು ಯಾವ್ಯಾವು ಎಂಬುದನ್ನು ಪಟ್ಟಿ ಮಾಡಿಕೊಂಡು, ಬಹಳ ವೇಗವಾಗಿ ಅವುಗಳನ್ನು ಮಾಡಿ ಮುಗಿಸಲಿದ್ದೀರಿ. ಕುಟುಂಬ, ಉದ್ಯೋಗ, ವೃತ್ತಿಬದುಕು ಹೀಗೆ ಎಲ್ಲದರ ಬಗ್ಗೆ ಗಮನ ನೀಡಲೇಬೇಕಾದ ಪರಿಸ್ಥಿತಿ ಇರಲಿದೆ. ಗಣಿಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೆಚ್ಚು ಜವಾಬ್ದಾರಿ ಅಥವಾ ಪ್ರಮುಖ ಹುದ್ದೆಗೆ ಬಡ್ತಿ ದೊರೆಯುವ ಯೋಗ ಇದೆ. ಇತರರ ಕಾರ್ಯಗಳನ್ನು ಪೂರ್ಣ ಮಾಡುವುದಕ್ಕೆ ಸಹಾಯ ಮಾಡುವ ಭರವಸೆ ನೀಡುವುದಕ್ಕೆ ಮುಂಚೆ ನಿಮ್ಮಿಂದ ಏನು ಸಾಧ್ಯ ಹಾಗೂ ನಿಮ್ಮ ಶಕ್ತಿ- ಮಿತಿ ಏನು ಎಂಬುದನ್ನು ಅರಿತುಕೊಂಡು ಮಾತನ್ನು ನೀಡಿ. ನಿಮ್ಮಲ್ಲಿ ಯಾರಿಗೆ ವೈದ್ಯರಿಂದ ಕಟ್ಟುನಿಟ್ಟಾದ ಸೂಚನೆ ಇರುತ್ತದೋ ಅಂಥವರು ಸಿಹಿ ಪದಾರ್ಥಗಳ ಸೇವನೆಯಿಂದ ದೂರ ಇರುವುದು ಒಳ್ಳೆಯದು. ಸ್ವಲ್ಪ ಪ್ರಮಾಣ ತಾನೇ, ಒಂದು ದಿವಸ ಮಾತ್ರ ಎಂದೇನಾದರೂ ಪಥ್ಯವನ್ನು ಮುರಿದಲ್ಲಿ ಆ ನಂತರ ಪರಿತಪಿಸುವಂತೆ ಆಗಲಿದೆ. ಭೂಮಿಗೆ ಸಂಬಂಧಿಸಿದ ವ್ಯವಹಾರ ಮಾಡುತ್ತಾ ಇರುವವರು ಅಥವಾ ಹೊಸದಾಗಿ ನಿಮಗೆ ಖರೀದಿಗೆ ಪ್ರಸ್ತಾವ ಬಂದಲ್ಲಿ ಅದಕ್ಕೆ ಸರಿಯಾಗಿ ಸ್ಪಂದಿಸುವ ಕಡೆಗೆ ಗಮನವನ್ನು ನೀಡಿ. ಇನ್ನು ಈ ವಿಚಾರದಲ್ಲಿ ಕೆಲವು ವಿಷಯಗಳು ಸ್ಪಷ್ಟವಾಗಬೇಕು ಎಂಬ ಕಾರಣಕ್ಕೆ ಅದರ ಜವಾಬ್ದಾರಿಯನ್ನು ಇತರರಿಗೆ ವಹಿಸಿಕೊಟ್ಟರೂ ಅದರ ಫಲಿತಾಂಶದಿಂದ ನೊಂದುಕೊಳ್ಳುವಂತೆ ಆಗಲಿದೆ. ಕಾಂಡಿಮೆಂಟ್ಸ್ ನಡೆಸುತ್ತಾ ಇರುವವರು ತಮ್ಮ ವ್ಯವಹಾರ ವಿಸ್ತರಣೆ ಮಾಡುವುದಕ್ಕೆ ಹೆಜ್ಜೆಗಳನ್ನು ಇಡುತ್ತೀರಿ. ಇನ್ನು ನಿಮ್ಮಲ್ಲಿ ಕೆಲವರು ನೀವು ವ್ಯಾಪಾರ ಮಾಡುವ ಸ್ಥಳದಲ್ಲಿ ಕೆಲವು ರಿನೋವೇಷನ್ ಮಾಡಿಸುವುದಕ್ಕೆ ಮುಂದಾಗಲಿದ್ದೀರಿ. ನಿಮಗೆ ಬಹಳ ಆಪ್ತರಾದವರು ಕೆಲವು ವಿಚಾರಗಳನ್ನು ಮುಚ್ಚಿಡುತ್ತಿದ್ದಾರೆ ಎಂಬುದು ಗಮನಕ್ಕೆ ಬರಲಿದೆ. ಈ ಮುಂಚಿನಷ್ಟು ವಿಶ್ವಾಸದಿಂದ ಅವರು ನಿಮ್ಮ ಜೊತೆಗೆ ವ್ಯವಹರಿಸುತ್ತಿಲ್ಲ ಎಂಬ ಭಾವನೆ ಸಹ ಮೂಡಲಿದೆ. ವಾಸ್ತು, ಜ್ಯೋತಿಷ್ಯ, ಅಧ್ಯಾತ್ಮ ಚಿಂತನೆ, ಉಪನ್ಯಾಸ, ಪ್ರವಚನಗಳಿಂದ ಆದಾಯ ಬರುತ್ತಿರುವವರಿಗೆ ಅದರಲ್ಲಿ ಇಳಿಕೆ ಆದಂಥ ಅನುಭವ ಆಗಲಿದೆ. ನಿಮ್ಮದೇ ಕ್ಷೇತ್ರದಲ್ಲಿ ಇರುವ ಕೆಲವರು ಮಾಡುತ್ತಿರುವ ಅಪಪ್ರಚಾರದಿಂದ ಹೀಗೊಂದು ಪರಿಸ್ಥಿತಿ ಉದ್ಭವಿಸುತ್ತಿದೆ ಎಂಬುದು ಸಹ ನಿಮ್ಮ ಗಮನಕ್ಕೆ ಬರಲಿದೆ. ಯಾರದೋ ಮೇಲಿನ ಸಿಟ್ಟು ಇನ್ಯಾರ ಮೇಲೋ ತೀರಿಸಿಕೊಂಡರು ಎಂಬಂತೆ ನಿಮ್ಮ ಒತ್ತಡದವನ್ನು ಕುಟುಂಬ ಸದಸ್ಯರ ಮೇಲೆ ಹಾಕುವುದಕ್ಕೆ ಹೋಗಬೇಡಿ. ವಾಹನ ಚಾಲನೆಯನ್ನೇ ವೃತ್ತಿಯಾಗಿ ಮಾಡಿಕೊಂಡವರು ಬಹಳ ಎಚ್ಚರಿಕೆಯನ್ನು ವಹಿಸಬೇಕು. ಏಕೆಂದರೆ ನಿಮ್ಮಲ್ಲಿ ಕೆಲವರಿಗೆ ಸಣ್ಣ- ಪುಟ್ಟದಾದರೂ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ನಿಮಗೆ ಏಕಾಗ್ರತೆ ಸಾಧ್ಯವಾಗುತ್ತಿಲ್ಲ, ನಾನಾ ಆಲೋಚನೆಗಳು ಮುತ್ತಿಕೊಳ್ಳುತ್ತಾ ಇವೆ ಅಂತಾದಲ್ಲಿ, ಆ ದಿನ ಸಾಧ್ಯವೂ ಆದಲ್ಲಿ ಬಿಡುವು ತೆಗೆದುಕೊಳ್ಳುವುದು ಕ್ಷೇಮ. ಕೆಲಸ ಅನಿವಾರ್ಯ ಅಂತಾದಲ್ಲಿ ಐದು ನಿಮಿಷಗಳ ಕಾಲ ಧ್ಯಾನವನ್ನು ಮಾಡುವುದಕ್ಕೆ ಪ್ರಯತ್ನಿಸಿ.
ನಿಷ್ಕಾರಣವಾಗಿ ಕೆಲವರನ್ನು ನೀವಾಗಿಯೇ ದೂರ ಮಾಡಿಕೊಳ್ಳುವಂತೆ ಆಗಲಿದೆ. ನಿಮಗೆ ಕೊರೆಯುವಂಥ ಅನುಮಾನದ ಹುಳವನ್ನು ತೊಲಿಗಿಸಿಕೊಳ್ಳುವುದು ಹೇಗೆ ಎಂದು ಆಲೋಚಿಸಿಕೊಳ್ಳಿ. ಅದರ ಬದಲಿಗೆ ನಿಮಗೆ ಯಾರ ಮೇಲೆಲ್ಲ ಅನುಮಾನ ಬರುತ್ತದೋ ಅವರನ್ನೇ ದೂರ ಇಡುವುದಕ್ಕೆ ಹೋಗಬೇಡಿ. ಮನೆಗೆ ಬಳಸುವ ಪ್ಲೈವುಡ್ ಮತ್ತಿತರ ಮರದ ವಸ್ತುಗಳ ಮಾರಾಟ ಮಾಡುವವರಿಗೆ ಆದಾಯದಲ್ಲಿ ಏರಿಕೆ ಆಗಲಿದೆ. ಇನ್ನಷ್ಟು ಹೊಸ ಉತ್ಪನ್ನಗಳನ್ನು ನಿಮ್ಮ ಮಾರಾಟದ ವಸ್ತುಗಳ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಲಿದ್ದೀರಿ. ನಿಮ್ಮ ತಂದೆ- ತಾಯಿಯ ಆರೋಗ್ಯ ವಿಚಾರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಾಗುತ್ತದೆ. ಇನ್ನು ನಿಮ್ಮಲ್ಲಿ ಕೆಲವರು ಈಗ ಯಾವ ವೈದ್ಯರ ಬಳಿ ತೆರಳುತ್ತಾ ಇರುತ್ತೀರೋ ಅವರನ್ನು ಬಿಟ್ಟು ಹೊಸ ವೈದರನ್ನು ಆಯ್ಕೆ ಮಾಡಿಕೊಳ್ಳುವ, ಔಷಧ ಪದ್ಧತಿಯನ್ನೇ ಬದಲಾಯಿಸುವ ತೀರ್ಮಾನ ಮಾಡುವ ಸಾಧ್ಯತೆ ಇದೆ. ಇಂಥದ್ದೊಂದು ತೀರ್ಮಾನ ಮಾಡುವ ಮುಂಚೆ ಒಂದಕ್ಕೆ ನಾಲ್ಕು ಬಾರಿ ಆಲೋಚಿಸುವುದು ಕ್ಷೇಮ. ಸರ್ಕಾರದ ಕೆಲಸಗಳ ಕಾಂಟ್ರಾಕ್ಟ್ ತೆಗೆದುಕೊಳ್ಳುವವರಿಗೆ ನಿಮ್ಮ ಪ್ರಭಾವ- ಶಿಫಾರಸಿನ ಸಹಾಯದಿಂದ ದೊಡ್ಡ ಮೊತ್ತದ ಗುತ್ತಿಗೆ ದೊರೆಯುವ ಯೋಗ ಇದೆ. ನಿಮಗೆ ಇದರ ಬಗ್ಗೆ ಮಾಹಿತಿಯೇ ಇಲ್ಲದಿದ್ದರೂ ಕೊನೆ ಕ್ಷಣದಲ್ಲಿ ಆಗುವಂಥ ಬೆಳವಣಿಗೆಗಳಿಂದ ನಿಮಗೆ ದೊರೆಯುವ ಯೋಗ ಇದೆ. ಪುಸ್ತಕ ಮುದ್ರಣ, ವಿತರಣೆ ಇಂಥವುಗಳಲ್ಲಿ ತೊಡಗಿಕೊಂಡವರು ಕೆಲವು ಸಮಯದ ಮಟ್ಟಿಗೆ ವ್ಯವಹಾರ ಇತರರಿಗೆ ವಹಿಸಿಕೊಡುವ ಆಲೋಚನೆ ಮಾಡುವಂತೆ ಆಗಲಿದೆ. ನೀವು ಗೊಂದಲ ಇಟ್ಟುಕೊಂಡು ಯಾವ ಕಾರ್ಯವನ್ನು ಮಾಡುವುದಕ್ಕೆ ಹೋಗಬೇಡಿ. ಸ್ನೇಹಿತರು- ಸಂಬಂಧಿಗಳು ನೀವು ಕೇಳಿದರೂ ಕೇಳದಿದ್ದರೂ ಸಲಹೆ ನೀಡಲಿದ್ದೀರಿ. ಮತ್ತೆ ಕೆಲವರು ಎಚ್ಚರಿಕೆ ಮಾತುಗಳನ್ನು ಸಹ ಹೇಳಬಹುದು. ಇಂಥ ಎಲ್ಲವನ್ನು ಕೇಳಿಸಿಕೊಳ್ಳಿ, ಆದರೆ ತೀರ್ಮಾನವನ್ನು ನಿಮ್ಮದೇ ವಿವೇಚನೆ ಬಳಸಿ ಮಾಡಿ. ನಿಮ್ಮಲ್ಲಿ ವಿವಾಹ ವಯಸ್ಕರಿದ್ದು, ಮದುವೆಗಾಗಿ ಪ್ರಯತ್ನ ಮಾಡುತ್ತಿದ್ದೀರಿ ಅಂತಾದಲ್ಲಿ ನಿಮಗೆ ಹತ್ತಿರದ ಸಂಬಂಧಿಕರ ಕಡೆಯ ಹುಡುಗ/ಹುಡುಗಿಯ ರೆಫರೆನ್ಸ್ ದೊರೆಯುವ ಯೋಗ ಇದ್ದು, ಸಂಬಂಧ ಗಟ್ಟಿ ಮಾಡಿಕೊಳ್ಳುವ ಸಾಧ್ಯತೆ ಸಹ ಹೆಚ್ಚಿಗೆ ಇದೆ. ದಾನ- ಧರ್ಮ ಕಾರ್ಯಗಳಿಗೆ ಹಣವನ್ನು ವಿನಿಯೋಗ ಮಾಡುವಂಥ ಯೋಗ ಸಹ ನಿಮ್ಮಲ್ಲಿ ಕೆಲವರಿಗೆ ಇದೆ. ಕುಟುಂಬದವರು ತಲೆಮಾರುಗಳಿಂದ ನೋಡಿಕೊಂಡು ಬರುತ್ತಿರುವ ದೇವಸ್ಥಾನದ ಅಭಿವೃದ್ಧಿ ಕಾರ್ಯದ ಸಲುವಾಗಿ ಬೇಕಾದ ಪದಾರ್ಥ- ಹಣಕಾಸಿನ ವ್ಯವಸ್ಥೆಯನ್ನು ಮಾಡಿಕೊಡಲಿದ್ದೀರಿ. ಚಿನ್ನ- ಬೆಳ್ಳಿ ಒಡವೆಗಳನ್ನು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದೀರಿ ಅಂತಾದಲ್ಲಿ ಅವುಗಳನ್ನು ತೆಗೆದುಕೊಂಡು ಬರುವಾಗ ಹಾಗೂ ವಾಪಸ್ ಇಡುವಾಗ ಸಾಮಾನ್ಯವಾಗಿ ವಹಿಸುವುದಕ್ಕಿಂತ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಉತ್ತಮ. ಬೇಳೆಕಾಳುಗಳು, ಮಸಾಲೆ ಪದಾರ್ಥಗಳ ಡಿಸ್ಟ್ರಿಬ್ಯೂಷನ್ ತೆಗೆದುಕೊಂಡಿರುವವರು ವ್ಯವಹಾರದ ಸಲುವಾಗಿ ವಾಹನ ಖರೀದಿ ಮಾಡುವ ಬಗ್ಗೆ ಆಲೋಚನೆ ಮಾಡುತ್ತೀರಿ. ಇದಕ್ಕಾಗಿ ಬ್ಯಾಂಕ್ ಗಳಲ್ಲಿ ಸಾಲ ಮಾಡುವ ಸಾಧ್ಯತೆ ಇದೆ.
ಲೇಖನ- ಎನ್.ಕೆ.ಸ್ವಾತಿ
Published On - 11:06 am, Fri, 28 November 25