Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಆಗಸ್ಟ್ 11ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ 11ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ 11ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಕೆಲವು ಕೆಲಸಗಳನ್ನು ನೀವಾಗಿಯೇ ಮುಂದಕ್ಕೆ ಹಾಕಬೇಕಾಗುತ್ತದೆ. ಕುಟುಂಬದ ಎಲ್ಲ ಸದಸ್ಯರು ಮೆಚ್ಚಿಕೊಂಡು ಮಾಡಬೇಕು ಎಂದುಕೊಂಡಂಥ ಕೆಲಸದಲ್ಲಿ ತೊಡಗಿಕೊಳ್ಳಬೇಕಾಗುತ್ತದೆ. ಇನ್ನು ನಿಮಗೆ ಈಗಾಗಲೇ ಇರುವಂಥ ಆಹ್ವಾನಕ್ಕೆ ಸಮಾರಂಭ- ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗುತ್ತದೆ. ಸಣ್ಣ- ಪುಟ್ಟದ್ದಾದರೂ ಅನಾರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಮುಖ್ಯವಾಗಿ ಕಫ, ಶೀತ, ಕೆಮ್ಮು ಈ ರೀತಿಯ ಅನಾರೋಗ್ಯ ಸಮಸ್ಯೆಯಿಂದಾಗಿ ಯಾವ ಕೆಲಸದಲ್ಲೂ ಶ್ರದ್ಧೆಯಿಂದ ತೊಡಗಿಕೊಳ್ಳುವುದು ಕಷ್ಟವಾಗಲಿದೆ. ಊಟ- ತಿಂಡಿ ಕೂಡ ರುಚಿಸದಂತೆ ಆಗುತ್ತದೆ. ಇಂಥ ಸನ್ನಿವೇಶದಲ್ಲಿ ನಿಮಗೆ ಸಿಟ್ಟು ಹೆಚ್ಚಾಗಲಿದ್ದು, ಯಾರು ನಿಮ್ಮನ್ನು ಬಹಳ ಇಷ್ಟ ಪಡುತ್ತಾರೋ ಅವರ ಮೇಲೇ ಕೂಗಾಟ- ಕಿರುಚಾಟ ಮಾಡುತ್ತೀರಿ. ಈ ದಿನ ನಿಮಗೆ ನೆನಪಿನಲ್ಲಿ ಇರಬೇಕಾದ ವಿಚಾರ ಏನೆಂದರೆ, ಯಾವುದೇ ವಿಚಾರಕ್ಕೆ ಪರಿಹಾರ ಎಂಬುದು ಸಿಗಬೇಕಾದರೆ ತಾಳ್ಮೆ- ಸಮಾಧಾನದಿಂದ ಇರಬೇಕಾಗುತ್ತದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಖಾತ್ರಿಯಾಗಿ ಗೊತ್ತಿರುವಂಥ ಸಂಗತಿಗಳಲ್ಲಿ ಯಾವುದೇ ರಾಜೀ- ಸಂಧಾನ ಮಾಡಿಕೊಳ್ಳದೆ ಮುಂದುವರಿಯಲಿದ್ದೀರಿ. ಇನ್ನು ಸುತ್ತ ಮುತ್ತ ಇರುವಂಥ ಜನರು ನಿಮ್ಮ ಆಲೋಚನೆ, ಯೋಚನೆ, ಲೆಕ್ಕಾಚಾರಗಳ ಬಗ್ಗೆ ತಿಳಿದು, ಬಹಳ ಮೆಚ್ಚುಗೆ ಕೇಳಿಬರಲಿದೆ. ಈ ಹಿಂದೆ ನೀವು ಯಾವ ವ್ಯಕ್ತಿಯ ಬಗ್ಗೆ, ಸನ್ನಿವೇಶಗಳ ಬಗ್ಗೆ ಏನು ಹೇಳಿದ್ದಿರೋ ಅದು ಹಾಗ್ಹಾಗೇ ನಿಜವಾಗಲಿದೆ. ಇನ್ನು ನಿಮ್ಮ ಆಪ್ತರು, ಸ್ನೇಹಿತರು, ಕುಟುಂಬ ಸದಸ್ಯರ ಪರವಾಗಿ ಯಾವ ತೀರ್ಮಾನಗಳನ್ನು ತೆಗೆದುಕೊಂಡಿದ್ದಿರೋ ಅವೆಲ್ಲ ಅನುಕೂಲಗಳಾಗಿ ಮಾರ್ಪಟ್ಟು, ನಿಮ್ಮ ಬಗ್ಗೆ ಇತರರಲ್ಲಿ ಬೆರಗು ಮೂಡಲಿದೆ. ನಿಮ್ಮಲ್ಲಿ ಕೆಲವರು ಮೊಬೈಲ್ ಫೋನ್, ಗ್ಯಾಜೆಟ್ ಖರೀದಿಸುವ ಯೋಗ ಇದೆ. ಪಿತ್ರಾರ್ಜಿತ ಆಸ್ತಿ ವ್ಯವಹಾರಗಳು ಇಷ್ಟು ಸಮಯ ವ್ಯಾಜ್ಯದಲ್ಲಿ ಇದ್ದರೆ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ಮಾರ್ಗೋಪಾಯಗಳು ಗೋಚರ ಆಗಲಿವೆ. ಈಗಿರುವ ಊರಿನಿಂದ ಬೇರೆ ಕಡೆ ಹೋಗಬೇಕಾ ಅಥವಾ ಬೇಡವಾ ಎಂದು ಗೊಂದಲಗಳು ಏನಾದರೂ ಇದ್ದಲ್ಲಿ ನಿವಾರಣೆ ಆಗಲಿದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಸಮಾಧಾನವಾಗಿ ಇರುವುದಕ್ಕೆ ಪ್ರಾಮುಖ್ಯವನ್ನು ನೀಡಿ. ಅಂದುಕೊಂಡಂತೆಯೇ ನಡೆದ ಬೆಳವಣಿಗೆಗಳಲ್ಲಿ ಅನಿರೀಕ್ಷಿತವಾಗಿ ಬದಲಾವಣೆ ಕಾಣಬೇಕಾಗುತ್ತದೆ. ಇನ್ನು ಇದೇ ಸಮಯದಲ್ಲಿ ಹಳೇ ಘಟನೆಗಳು ನೆನಪಾಗಿ, ನಿಮ್ಮ ಬಳಿ ತುಂಬ ಆತ್ಮೀಯರಾಗಿ ಇರುವ ವ್ಯಕ್ತಿಯೊಬ್ಬರ ಉದ್ದೇಶಗಳ ಬಗ್ಗೆ ನಾನಾ ರೀತಿ ಸಂದೇಹಗಳು ಮೂಡಲಿವೆ. ಮೇಲುನೋಟಕ್ಕೆ ಕಾಣುವಂಥ ಸದುದ್ದೇಶವಾಗಲೀ ಮಾತಲ್ಲಿ ಒಳಿತನ್ನೇ ಬಯಸುವಂಥ ಗುಣವಾಗಲೀ ಈ ವ್ಯಕ್ತಿಗೆ ಇಲ್ಲವೇನೋ ಎಂಬ ಗುಮಾನಿ ಮೂಡಲಿದೆ. ಈ ಹಿಂದೆ ಯಾವಾಗಲೂ ಆ ಸನ್ನಿವೇಶಕ್ಕೆ ಎಂಬಂತೆ ಸಂಗಾತಿಗೆ ಹೇಳಿದ ಸುಳ್ಳೊಂದು ಈ ದಿನ ನಿಮ್ಮ ಪಾಲಿಗೆ ದೊಡ್ಡ ಸಮಸ್ಯೆಯಾಗಿ ಕಾಡಲಿದೆ. ನಿಮಗೇ ಪೂರ್ಣಪ್ರಮಾಣದಲ್ಲಿ ಖಾತ್ರಿ ಇಲ್ಲದ ಸಂಗತಿಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡುವುದಕ್ಕೋ ಅಥವಾ ಇತರರಿಗೆ ಸಹಾಯ ಮಾಡುವುದಕ್ಕೋ ಹೋಗಬೇಡಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಸಾಲ ಮಾಡಿಯಾದರೂ ನಿಮಗೆ ಅನಿಸಿದ್ದನ್ನು ಮಾಡಲಿದ್ದೀರಿ. ಚಿನ್ನ- ಬೆಳ್ಳಿ ವಸ್ತುಗಳನ್ನು ಖರೀದಿಸಿ ತರುವಂಥ ಯೋಗ ನಿಮ್ಮ ಪಾಲಿಗೆ ಇದೆ. ಇನ್ನು ಬಹಳ ಸಮಯದಿಂದ ನೀವು ಕಾಯುತ್ತಿರುವಂಥ ಹಾಗೂ ನಿಮಗೆ ಸಿಗಬಹುದಾದ ಅವಕಾಶವೊಂದರ ಬಗ್ಗೆ ನಿರೀಕ್ಷೆಗಳು ಜಾಸ್ತಿ ಆಗಲಿವೆ. ಇತರರು ಆ ಬಗ್ಗೆ ಪೂರ್ತಿಯಾಗಿ ಹೇಳದಿದ್ದರೂ ಸಕಾರಾತ್ಮಕವಾಗಿ ಆಗುವ ಅನುಕೂಲವೊಂದರ ಬಗ್ಗೆ ಸುಳಿವು ಬಿಟ್ಟುಕೊಡಲಿದ್ದಾರೆ. ಸಂತೋಷದಿಂದ ದಿನ ಕಳೆಯುವುದಕ್ಕೆ ಬೇಕಾದ ವಾತಾವರಣ ಇರುತ್ತದೆ. ನಿಮ್ಮಲ್ಲಿ ಯಾರು ಸ್ವಂತ ಉದ್ಯೋಗ, ವ್ಯಾಪಾರ- ವ್ಯವಹಾರ ಮಾಡುತ್ತಿದ್ದೀರೋ ಅಂಥವರಿಗೆ ಹೊಸ ಆದಾಯ ಮೂಲಗಳು ಗೋಚರಿಸ ತೊಡಗುತ್ತದೆ. ಇಷ್ಟು ಕಾಲ ನೀವು ಯಾವುದನ್ನು ನಿರ್ಲಕ್ಷಿಸುತ್ತಲೋ ಅಥವಾ ತಿರಸ್ಕರಿಸುತ್ತಲೋ ಬಂದಿರುತ್ತಿರೋ ಅಂಥದ್ದೊಂದು ಆ ವಿಷಯಗಳ ಬಗ್ಗೆ ಈ ದಿನ ಗಮನ ಹೋಗುತ್ತದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಅತಿ ಉತ್ಸಾಹ ಯಾವ ಕಾರಣಕ್ಕೂ ಬೇಡ. ಅವರಾಗಿಯೇ ಕೇಳದ ಹೊರತಾಗಿ ನೀವು ಮೇಲೆ ಬಿದ್ದು ಯಾರಿಗೂ ಸಲಹೆ- ಸೂಚನೆಗಳನ್ನು ನೀಡುವುದಕ್ಕೆ ಹೋಗಬೇಡಿ. ಇನ್ನು ಈ ದಿನ ನೀವು ಬಹಳ ಗೌರವಿಸುವಂಥ ವ್ಯಕ್ತಿಗಳೇ ನಿಮ್ಮ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸುವುದರಿಂದ ಒಂದು ಬಗೆಯ ಬೇಸರ ಕಾಡಲಿದೆ. ಇದರ ಜತೆಗೆ ನೀವು ಪ್ರಯತ್ನಿಸಿದ ಅತಿ ದೊಡ್ಡ ಪ್ರಾಜೆಕ್ಟ್ ವೊಂದು ಇಲ್ಲಿಯ ತನಕ ಆಗುತ್ತದೆ ಎಂಬಂಥ ಸನ್ನಿವೇಶ ಇದ್ದದ್ದು ಈಗ ಅದು ಆಗುವ ಸಾಧ್ಯತೆ ಕಡಿಮೆ ಎಂದೆನಿಸುವುದಕ್ಕೆ ಶುರುವಾಗುತ್ತದೆ. ಏಕಾಏಕಿ ಹಣಕಾಸಿನ ಒತ್ತಡಕ್ಕೆ ಸಿಲುಕಿಕೊಳ್ಳುತ್ತೀರಿ. ನಿಮ್ಮಲ್ಲಿ ವಿವಾಹ ವಯಸ್ಕರಾಗಿ, ಯಾರು ಮದುವೆಗಾಗಿ ಸೂಕ್ತ ಸಂಬಂಧಗಳ ಹುಡುಕಾಟದಲ್ಲಿ ತೊಡಗಿರುತ್ತೀರಿ ಅಂಥವರು ತಾತ್ಕಾಲಿಕವಾಗಿ ಈ ಪ್ರಯತ್ನವನ್ನು ಮುಂದಕ್ಕೆ ಹಾಕೋಣ ಎಂದುಕೊಳ್ಳಲಿದ್ದೀರಿ. ನಿಮಗೆ ಬಹಳ ಆತ್ಮೀಯರಾದ ಸ್ನೇಹಿತರು ತಮಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ ಎಂದೇನಾದರೂ ಹೇಳಿದಲ್ಲಿ ಅವರ ಬಗ್ಗೆ ಹೆಚ್ಚಿನ ಲಕ್ಷ್ಯವನ್ನು ನೀಡಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನಿಮ್ಮ ಮನಸ್ಸಿಗೆ ಸಂತೋಷವಾಗುವಂಥ ಬೆಳವಣಿಗೆಗಳು ಆಗಲಿವೆ. ಒಂದು ವೇಳೆ ಅನಾರೋಗ್ಯ ಸಮಸ್ಯೆಗಳೇನಾದರೂ ಈಗಾಗಲೇ ಕಾಡುತ್ತಿದೆ ಅಂತಾದಲ್ಲಿ ಅಂಥವರಿಗೆ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತದೆ. ಇನ್ನು ಸೂಕ್ತವಾದ ವೈದ್ಯೋಪಚಾರಗಳು ದೊರೆಯಲಿದೆ. ಯಾರು ಪ್ರಮುಖ ಹುದ್ದೆಗಳಲ್ಲಿ ಇದ್ದೀರಿ, ಅದು ಉದ್ಯೋಗವೇ ಆಗಿರಬಹುದು ಅಥವಾ ರಾಜಕೀಯ ಕ್ಷೇತ್ರವೇ ಇರಬಹುದು, ನಿಮ್ಮ ಬಳಿ ಕೆಲಸ ಆಗಬೇಕು ಎಂದು ನಿಮ್ಮ ಆಪ್ತರು ಅಥವಾ ಸಂಬಂಧಿಕರು ಸಹಾಯ ಕೇಳಿಕೊಂಡು ಬರಬಹುದು. ನೀವು ಇಂಥ ಸನ್ನಿವೇಶದಲ್ಲಿ ಅವರ ಜತೆ ಹೇಗೆ ನಡೆದುಕೊಳ್ಳುತ್ತೀರಿ ಎಂಬುದು ಮುಖ್ಯವಾಗುತ್ತದೆ. ನಿಮ್ಮ ಧ್ವನಿ, ಬಾಡಿ ಲಾಂಗ್ವೇಜ್ ನಿಂದ ಅವರಿಗೆ ಬೇಸರ ಆಗದಂತೆ ನೋಡಿಕೊಳ್ಳಿ. ತುಂಬ ಖುಷಿಯ ಭಾವದಿಂದ ಇರುತ್ತಾ ಮನೆಗೆ ಬೆಲೆಬಾಳುವ ವಸ್ತುಗಳನ್ನು ಖರೀದಿಸುವ ತರುವ ಯೋಗ ಇದ್ದು, ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದಲ್ಲಿ ಖರ್ಚಿನ ಮೇಲೆ ನಿಗಾ ಇರಲಿ. ಅಗತ್ಯ ಇರುವ ವಸ್ತುಗಳನ್ನು ಮಾತ್ರ ಕೊಂಡುಕೊಳ್ಳಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ನಿಮ್ಮ ಉತ್ಸಾಹ, ಹುಮ್ಮಸ್ಸು ಇರುವುದು ತಪ್ಪಲ್ಲ. ಅದರ ಬಗ್ಗೆ ಇತರರ ಜತೆಗೆ ಚರ್ಚಿಸುವುದು, ಹೇಳಿಕೊಳ್ಳುವುದು ಸಹ ತಪ್ಪಲ್ಲ. ಆದರೆ ನಿಮಗೆ ಗೊತ್ತಿರಬೇಕಾದದ್ದು ಏನೆಂದರೆ ಏನೋ ದೊಡ್ಡದ್ದನ್ನು ಆಲೋಚಿಸುವುದರ ಮೊದಲು ಅದಕ್ಕೆ ಬೇಕಾದ ಸಂಪನ್ಮೂಲ, ಹಣಕಾಸಿನ ವ್ಯವಸ್ಥೆ ಹೇಗೆ ಮಾಡಿಕೊಳ್ಳುತ್ತೀರಿ ಎಂಬುದನ್ನು ಸರಿಯಾಗಿ ಲೆಕ್ಕಾಚಾರ ಹಾಕಿಕೊಳ್ಳಿ. ಇರುವ ಉದ್ಯೋಗದಲ್ಲಿ ನೀವು ನಿರೀಕ್ಷೆ ಮಾಡಿದಷ್ಟು ಅಥವಾ ನಿಮ್ಮ ಅಗತ್ಯಕ್ಕೆ ತಕ್ಕಂತೆ ಆದಾಯ ಬಾರದಿರಬಹುದು. ಆ ಕಾರಣಕ್ಕೆ ದೊಡ್ಡ ಲಾಭ ಬರಬಹುದು ಎಂಬ ಲೆಕ್ಕಾಚಾರದಲ್ಲಿ ವಿಪರೀತ ಹೂಡಿಕೆ ಮಾಡುವುದು ಸಹ ಸರಿಯಾದ ಆಲೋಚನೆಯಲ್ಲ. ನಿಮಗೆ ತೋಚಿದಂತೆ ಈ ದಿನ ಮಾತನಾಡುವುದಕ್ಕೆ ಹೋಗಬೇಡಿ, ನಗೆಪಾಟಲಿಗೆ ಗುರಿ ಆಗುತ್ತೀರಿ. ಯಾವ ಪದವನ್ನು ಬಳಸುತ್ತಿದ್ದೀರಿ ಹಾಗೂ ಅದರ ಪರಿಣಾಮ ನಿಮ್ಮ ಎದುರಿಗೆ ಇರುವಂಥ ವ್ಯಕ್ತಿಯ ಮೇಲೆ ಹೇಗಾಗುತ್ತದೆ ಎಂಬುದನ್ನು ಸರಿಯಾಗಿ ಯೋಚಿಸಿ, ಮಾತನಾಡಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಮುಖ್ಯ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸೋದರ- ಸೋದರಿಯರಿಗೆ ಬೇಕಾದ ಅನುಕೂಲಗಳು, ಹಣಕಾಸಿನ ಅಗತ್ಯಗಳು ನಿಮ್ಮಿಂದಲೇ ಆಗಬೇಕು ಎಂದು ಕುಟುಂಬದ ಸದಸ್ಯರು ಹೇಳಬಹುದು. ಇನ್ನು ಈ ದಿನ ಮನೆಯಲ್ಲಿ ಸಂಭ್ರಮದ ವಾತಾವರಣ ಇರುತ್ತದೆ. ರುಚಿಕಟ್ಟಾದ ಊಟ- ತಿಂಡಿ ಸವಿಯುವಂಥ ಯೋಗ ಇದೆ. ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಅವರು ಮಾಡಿದ ಸಾಧನೆಯಿಂದಾಗಿ ನಿಮ್ಮ ಮನಸ್ಸಿಗೆ ಬಹಳ ಸಂತೋಷವಾಗುತ್ತದೆ. ದೇವತಾ ಕಾರ್ಯಗಳಿಗಾಗಿ ಒಂದಿಷ್ಟು ಹಣವನ್ನು ಖರ್ಚು ಮಾಡಲಿದ್ದೀರಿ. ನೀವಾಗಿಯೇ ಹಾಕಿಕೊಂಡ ಕೆಲವು ಗುರಿಗಳನ್ನು ಮುಟ್ಟುವುದಕ್ಕೆ ಸಾಧ್ಯವಾಗಲಿಲ್ಲ ಎಂಬ ವಿಚಾರ ಬೇಸರಕ್ಕೆ ಕಾರಣ ಆಗಬಹುದು. ನಿಮಗೇ ಗೊಂದಲವಿದೆ ಎಂಬಂಥ ಸಂಗತಿಗಳ ಬಗ್ಗೆ ಹೆಚ್ಚು ಚರ್ಚೆ ಮಾಡುವುದಕ್ಕೆ ಹೋಗಬೇಡಿ. ಇನ್ನು ನಿಮಗೆ ನೀವೇ ಏನೇನೋ ಊಹಿಸಿಕೊಂಡು ಸ್ನೇಹಿತರ ವಿಶ್ವಾಸಾರ್ಹತೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಹೋಗಬೇಡಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಕಿರು ಪ್ರವಾಸವಾದರೂ ಕೈಗೊಳ್ಳಬೇಕಾಗಲಿದೆ. ಸಿನಿಮಾ ರಂಗದಲ್ಲಿ ಇರುವಂಥವರಿಗೆ ಮುಂದೆ ಏನು ಎಂದು ಆತಂಕಕ್ಕೆ ಗುರಿ ಆಗುವಂಥ ಕೆಲವು ಬೆಳವಣಿಗೆಗಳು ಆಗಲಿವೆ. ಕೈಲಿರುವ ಹಣ ಎಷ್ಟು, ಬ್ಯಾಂಕ್ ನಲ್ಲಿ ಎಷ್ಟು ಹಣ ಇದೆ ಹೀಗೆ ನಿಮ್ಮ ಬಳಿ ಇರುವಂಥ ಹಣ ಎಷ್ಟು ಎಂಬುದನ್ನು ಲೆಕ್ಕ ಹಾಕಿಕೊಳ್ಳಲಿದ್ದೀರಿ. ಇನ್ನು ನಿಮಗೆ ಯಾವ ವಸ್ತು ಬೇಕು ಅಂದುಕೊಳ್ಳುತ್ತೀರೋ ನಿಮ್ಮ ಕುಟುಂಬದ ಸದಸ್ಯರೋ ಅಥವಾ ಸ್ನೇಹಿತರು ಸಹ ಅದೇ ಬೇಕು ಎಂದು ಪಟ್ಟು ಹಿಡಿಯುತ್ತಾರೆ. ಇದರಿಂದ ಭಾವನಾತ್ಮಕವಾಗಿ ನಿಮಗೆ ಬೇಸರ ಆಗುತ್ತದೆ ಹಾಗೂ ಜತೆಗೆ ಒಂದು ರೀತಿಯ ವೈರಾಗ್ಯ ಸಹ ಕಾಡಲಿದೆ. ಮೂರನೇ ವ್ಯಕ್ತಿಗಳ ಮಾತನ್ನು ಯಥಾವತ್ ಆಗಿ ತಲೆಗೆ ತೆಗೆದುಕೊಳ್ಳುವುದಕ್ಕೆ ಹೋಗಬೇಡಿ. ಇದರಿಂದ ನಿಮ್ಮ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ತಂದೆ- ತಾಯಿಯ ಬಳಿ ಹಣಕ್ಕಾಗಿ ಕೇಳಿದ್ದಲ್ಲಿ ಮೊದಲಿಗೆ ಕೊಡುತ್ತೇನೆ ಎಂದವರು, ಆ ನಂತರ ಹಣದ ಹೊಂದಾಣಿಕೆ ಆಗಲಿಲ್ಲ ಅಥವಾ ಹೇಳಿದಷ್ಟು ಮೊತ್ತವನ್ನು ನೀಡಲು ಆಗುವುದಿಲ್ಲ ಎಂದು ಹೇಳುವ ಸಾಧ್ಯತೆಗಳಿವೆ. ಇದರಿಂದ ನಿಮಗೆ ಬೇಸರ ಆಗಬಹುದು.
ಲೇಖನ- ಎನ್.ಕೆ.ಸ್ವಾತಿ