AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Numerology: ಸಂಖ್ಯಾಶಾಸ್ತ್ರದ ಪ್ರಕಾರ ಜುಲೈ 27ರಿಂದ ಆಗಸ್ಟ್ 2ರವರೆಗಿನ ನಿಮ್ಮ ವಾರಭವಿಷ್ಯ  ಇಲ್ಲಿದೆ

ಸಂಖ್ಯಾಶಾಸ್ತ್ರವು ನಮ್ಮ ಜೀವನ ಮತ್ತು ಸಂಖ್ಯೆಗಳ ನಡುವಿನ ಅತೀಂದ್ರಿಯ ಸಂಬಂಧದ ನಿಖರವಾದ ಅಧ್ಯಯನವಾಗಿದೆ. ಇದು ಹೆಸರುಗಳಲ್ಲಿನ ಅಕ್ಷರಗಳ ಸಂಖ್ಯಾತ್ಮಕ ಲೆಕ್ಕಾಚಾರದ ಮೇಲೆ ನಿರ್ಮಿಸಲ್ಪಟ್ಟಿದೆ. ಪ್ರತಿ ಅಕ್ಷರವು ಸಂಖ್ಯಾಶಾಸ್ತ್ರದಲ್ಲಿ ನಿರ್ದಿಷ್ಟ ಸಂಖ್ಯೆಯನ್ನು ಹೊಂದಿರುತ್ತದೆ. ಈ ಸಂಖ್ಯೆಗಳನ್ನು ನಿಮ್ಮ ವ್ಯಕ್ತಿತ್ವ ಮತ್ತು ಜೀವನವನ್ನು ನಿರ್ಣಯಿಸಲು ಮತ್ತು ನಿಮ್ಮ ಭವಿಷ್ಯವನ್ನು ಮುನ್ಸೂಚಿಸಲು ಸಹ ಬಳಸಬಹುದು. ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಸಂಖ್ಯಾಶಾಸ್ತ್ರದ ಪ್ರಕಾರ ಜುಲೈ 27ರಿಂದ ಆಗಸ್ಟ್ 2ರವರೆಗಿನ ನಿಮ್ಮ ವಾರಭವಿಷ್ಯ  ಇಲ್ಲಿದೆ

Weekly Numerology: ಸಂಖ್ಯಾಶಾಸ್ತ್ರದ ಪ್ರಕಾರ ಜುಲೈ 27ರಿಂದ ಆಗಸ್ಟ್ 2ರವರೆಗಿನ ನಿಮ್ಮ ವಾರಭವಿಷ್ಯ  ಇಲ್ಲಿದೆ
Number
ಸ್ವಾತಿ ಎನ್​ಕೆ
| Updated By: ಸುಷ್ಮಾ ಚಕ್ರೆ|

Updated on: Jul 27, 2025 | 4:34 AM

Share

Numerology Prediction:  ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 27ರಿಂದ ಆಗಸ್ಟ್ 2ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ದೂರದ ಊರುಗಳಲ್ಲಿ ವ್ಯಾಸಂಗಕ್ಕೋ ಅಥವಾ ಉದ್ಯೋಗಕ್ಕೋ ಅಥವಾ ವ್ಯಾಪಾರ- ವ್ಯವಹಾರಗಳ ಉದ್ದೇಶಕ್ಕಾಗಿ ಉಳಿದುಕೊಂಡಿರುವವರಿಗೆ ಮನೆ- ಕುಟುಂಬದ ಕಡೆಗಿನ ಸೆಳೆತ ವಿಪರೀತವಾಗಿ ಕಾಡಲಿದೆ. ಕೆಲ ದಿನಗಳ ಮಟ್ಟಿಗಾದರೂ ಹೋಗಿಬರೋಣ ಎಂದು ಬಲವಾಗಿ ಅನಿಸಲಿದೆ. ಲಾಭ ತರುವಂಥ ಸಣ್ಣ ಅವಕಾಶ ಇದ್ದರೂ ಅದನ್ನು ತುಂಬ ಚೆನ್ನಾಗಿ ಸದುಪಯೋಗ ಮಾಡಿಕೊಳ್ಳಲಿದ್ದೀರಿ. ಹಳೇ ವ್ಯಾಜ್ಯಗಳು ಏನಾದರೂ ಇದ್ದಲ್ಲಿ ರಾಜೀ- ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಪ್ರಭಾವಿಗಳು ನಿಮ್ಮ ನೆರವಿಗೆ ಬರಲಿದ್ದಾರೆ. ಸ್ನೇಹಿತರು- ಸಂಬಂಧಿಗಳ ಮೂಲಕವಾಗಿ ಪರಿಚಯವಾದ ವ್ಯಕ್ತಿಯೊಬ್ಬರು ನೀಡುವಂತೆ ಸಲಹೆ- ಸೂಚನೆ, ಮಾರ್ಗದರ್ಶನದಿಂದ ಉದ್ಯೋಗ, ವೃತ್ತಿ- ವ್ಯವಹಾರಗಳ ವಿಷಯವಾಗಿ ಅನುಕೂಲವಾಗಿ ಮಾರ್ಪಡಲಿದೆ. ಫಾರಿನ್ ಎಕ್ಸ್ ಚೇಂಜ್, ಅಂದರೆ ವಿದೇಶಿ ಕರೆನ್ಸಿ ವಿನಿಮಯದ ವೃತ್ತಿ- ವ್ಯವಹಾರದಲ್ಲಿ ಇರುವವರಿಗೆ ತುಂಬ ಒಳ್ಳೆಯ ವಾರ ಇದಾಗಲಿದೆ. ಕೃಷಿ ವೃತ್ತಿಯಲ್ಲಿ ಇರುವಂಥವರಿಗೆ ಹೊಸದಾಗಿ ಹೂಡಿಕೆ ಮಾಡಲೇಬೇಕಾದ ಅನಿವಾರ್ಯ ಸೃಷ್ಟಿಯಾಗಲಿದೆ. ತುಂಬ ಕಡಿಮೆ ಖರ್ಚಿನಲ್ಲಿ ಮಾಡಿ ಮುಗಿಸಿಕೊಳ್ಳಬೇಕು ಎಂದುಕೊಂಡ ಕೆಲಸಗಳ ವ್ಯಾಪ್ತಿ ಹಿಗ್ಗುತ್ತಾ ಸಾಗಲಿದೆ. ಇದೇ ಸಮಯಕ್ಕೆ ನೀವು ಅಂದುಕೊಳ್ಳದ ರೀತಿಯಲ್ಲಿ ಆಗುವಂಥ ಪಾಸಿಟಿವ್ ಆದ ಬೆಳವಣಿಗೆಗಳ ಕಾರಣಕ್ಕೆ ಸಾಲ ಮಾಡಿಯಾದರೂ ಪರವಾಗಿಲ್ಲ, ಕೃಷಿ ಜಮೀನಿಗೆ ಅಗತ್ಯ ಇರುವ ಎಲ್ಲವನ್ನೂ ಮಾಡಿಸಿಕೊಂಡು ಬಿಡೋಣ ಎಂಬ ನಿರ್ಧಾರಕ್ಕೆ ಬರಲಿದ್ದೀರಿ. ವೃತ್ತಿಪರರಿಗೆ ಈಗಾಗಲೇ ಮಾಡಿ ಮುಗಿಸಿದ ಕೆಲಸಗಳಲ್ಲೇ ಕೆಲವು ತಪ್ಪುಗಳು ಆಗಿರುವುದು ಕಂಡುಬರಲಿದೆ. ಇದೇ ಕಾರಣದಿಂದಾಗಿ ನೀವು ಯಾರಿಗೆ ಸೇವೆ ಒದಗಿಸುತ್ತಿರುವಿರೋ ಅವರಿಂದ ಬರಬೇಕಾದ ಹಣಕ್ಕೆ ತಡೆ ಬೀಳಬಹುದು. ನಿಮ್ಮದೇ ಮೊನಚು ಮಾತಿನಿಂದ, ನಿಮ್ಮ ಕಡೆ ಏನೂ ತಪ್ಪಾಗಿಲ್ಲ ಎಂದು ವಾದ ಮಂಡಿಸುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಆದ್ದರಿಂದ ಅಂಥ ಸನ್ನಿವೇಶವನ್ನು ನಾಜೂಕಾಗಿ ನಿರ್ವಹಿಸುವ ಕಡೆಗೆ ಲಕ್ಷ್ಯವನ್ನು ನೀಡಿ. ವಿದ್ಯಾರ್ಥಿಗಳಿಗೆ ಅನಾರೋಗ್ಯ ಸಮಸ್ಯೆಯ ಕಾರಣಕ್ಕೆ ತರಗತಿಗಳನ್ನು ತಪ್ಪಿಸಿಕೊಳ್ಳುವಂತೆ ಆಗಬಹುದು. ಪರೀಕ್ಷೆಗಳು ಏನಾದರೂ ಇದ್ದು, ತರಗತಿ ತಪ್ಪಿಹೋಗುವುದರಿಂದ ಕಸಿವಿಸಿ ಆಗಲಿದೆ. ಆಹಾರ ಪಥ್ಯದ ಕಡೆಗೆ ಗಮನವನ್ನು ನೀಡಿ, ನಿಮಗೆ ಅಲರ್ಜಿ ಇರುವಂಥ ಆಹಾರ ಪದಾರ್ಥಗಳ ಸೇವನೆಯಿಂದ ದೂರ ಇರುವುದು ತುಂಬ ಮುಖ್ಯವಾಗುತ್ತದೆ. ಮಹಿಳೆಯರಿಗೆ ಒಂದು ವೇಳೆ ನವವಿವಾಹಿತರಾಗಿದ್ದಲ್ಲಿ ತವರು ಮನೆ ಕಡೆಯ ಸೆಳೆತ ವಿಪರೀತವಾಗಿ ಕಾಡಲಿದೆ. ಸಣ್ಣ- ಪುಟ್ಟದಾದರೂ ಆರೋಗ್ಯ ಸಮಸ್ಯೆ ಎದುರಾಗಿ, ಕೆಲ ಸಮಯಕ್ಕಾದರೂ ತವರು ಮನೆಗೆ ಹೋಗಲೇಬೇಕು ಎಂಬಂತಾಗಬಹುದು. ನಿಮ್ಮ ಮಾತು-ಕತೆ ಅಥವಾ ಇಮೇಲ್, ಪತ್ರ ವ್ಯವಹಾರಗಳಲ್ಲಿ ಸ್ಪಷ್ಟತೆಯಿಂದ ಇರುವಂತೆ ನೋಡಿಕೊಳ್ಳಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಮನಸ್ಸಿಟ್ಟು ಯಾವ ಕೆಲಸವನ್ನು ಮಾಡಲಾರದ ಪರಿಸ್ಥಿತಿ ಈ ವಾರ ನಿಮ್ಮದಾಗಿರುತ್ತದೆ. ವಿವಾಹದ ಬಗೆಗಿನ ಚಿಂತೆಯೋ ಮಕ್ಕಳ ಶಿಕ್ಷಣದ ಚಿಂತೆಯೋ ಔದ್ಯೋಗಿಕ ಚಿಂತೆಯೋ ವ್ಯಾಪಾರ- ವ್ಯವಹಾರದಲ್ಲಿನ ಹಿನ್ನಡೆಯೋ ಆರೋಗ್ಯ ಸಮಸ್ಯೆಯೋ ಹೀಗೆ ಏನಾದರೊಂದು ಕಾರಣಕ್ಕಾಗಿ ಗಮನ ಕೇಂದ್ರೀಕರಿಸುವುದಕ್ಕೆ ನಿಮ್ಮಿಂದ ಸಾಧ್ಯವಾಗುವುದಿಲ್ಲ ಎಂಬಂತೆ ಆಗಲಿದೆ. ನೀವು ಈ ಹಿಂದೆ ಯಾವಾಗಲೋ ಆಡಿದ್ದ ಮಾತನ್ನು ಮನಸ್ಸಲ್ಲಿ ಇಟ್ಟುಕೊಂಡು ಕೆಲವರು ಅಥವಾ ಈಗ ನಿಮ್ಮ ಜೊತೆಗೆ ಬಹಳ ಆಪ್ತರಾಗಿ ಗುರುತಿಸಿಕೊಂಡು ಇರುವವರು ದ್ವೇಷ ಸಾಧನೆ ಮಾಡುತ್ತಿದ್ದಾರೆ ಎಂಬ ಸಂಗತಿ ತಿಳಿದು ಬರಬಹುದು. ಹಣಕಾಸಿನ ವಿಚಾರಕ್ಕೆ ಏನಾದರೂ ಮಾತು- ಭರವಸೆ ನೀಡಿದ್ದಲ್ಲಿ ಅದಕ್ಕೆ ತಕ್ಕಂತೆ ನಡೆದುಕೊಳ್ಳುವುದಕ್ಕೆ ಶತಾಯಗತಾಯ ಪ್ರಯತ್ನವನ್ನು ಮಾಡಿ. ನಿಮ್ಮ ವರ್ಚಸ್ಸಿಗೆ ಹಾಗೂ ಇಲ್ಲಿಯ ತನಕ ನೀವು ಉಳಿಸಿಕೊಂಡು ಬಂದಂಥ ವಿಶ್ವಾಸಕ್ಕೆ ಧಕ್ಕೆ ಆಗುವ ರೀತಿಯಲ್ಲಿ ವರ್ತನೆ ಬೇಡ. ಎದುರಿಗೆ ಇರುವ ವ್ಯಕ್ತಿಯ ಅಗತ್ಯ, ಉದ್ದೇಶವನ್ನು ಪೂರ್ತಿಯಾಗಿ ತಿಳಿದುಕೊಳ್ಳದೇ ಯಾವುದೇ ನಿರ್ಣಯಕ್ಕೆ ಬರಬೇಡಿ. ಕೃಷಿಕರಿಗೆ ಸಲೀಸಾಗಿ ಆಗಬೇಕಾದ ಕೆಲಸಗಳಲ್ಲೂ ವಿಳಂಬ ಆಗುತ್ತಾ ಬರುತ್ತದೆ. ಸಣ್ಣ- ಪುಟ್ಟ ವಿಚಾರಗಳು ಅಂತ ಯಾವುದನ್ನು ನೀವು ಬಿಟ್ಟು ಮುಂದೆ ಸಾಗಿರುತ್ತೀರಿ ಅದೇ ವಿಚಾರವು ಪ್ರಾಮುಖ್ಯ ಪಡೆಯುತ್ತದೆ. ಹಣಕಾಸಿನ ವಿಚಾರಕ್ಕೆ ಆಪತ್ಕಾಲಕ್ಕೆ ಎಂದು ಉಳಿಸಿಕೊಂಡು ಬಂದಂಥದ್ದನ್ನು ತೆಗೆಯಬೇಕಾದ ಸನ್ನಿವೇಶ ಎದುರಾಗಬಹುದು. ಇಷ್ಟು ಸಮಯ ಕುಟುಂಬ ಸದಸ್ಯರಿಗೆ ನೀವು ತಿಳಿಸಿದೇ ಇದ್ದ ವಿಷಯಗಳನ್ನು ಹೇಳಲೇಬೇಕಾದ ಪರಿಸ್ಥಿತಿ ಸಹ ಬರಬಹುದು. ಈ ಕಾರಣಕ್ಕೆ ನಿಮ್ಮ ಮನಸ್ಸಿನಲ್ಲಿ ಒಂದು ಬಗೆಯ ಉದ್ವಿಗ್ನತೆ ಕಾಡಲಿದೆ. ವೃತ್ತಿನಿರತರಿಗೆ ದಾಖಲೆ- ಪತ್ರಗಳಿಗಾಗಿ ಅಲೆದಾಟ ಆಗಬಹುದು. ಅಥವಾ ನಿಮಗೆ ಬೇರೆಯವರು ನೀಡಿದ್ದ ಮುಖ್ಯ ಕಾಗದ- ಪತ್ರಗಳನ್ನು ಎಲ್ಲೋ ಇಟ್ಟು, ಅದು ಎಲ್ಲಿದೆ ಎಂಬುದೇ ನೆನಪಾಗದೆ ಒತ್ತಡ- ಆತಂಕಕ್ಕೆ ಕಾರಣ ಆಗಲಿದೆ. ನಿಮಗೆ ಸಿಕ್ಕಂಥ ಅವಕಾಶ- ಪ್ರಾಶಸ್ತ್ಯವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲವೇನೋ ಎಂಬುದು ಸಹ ನಿಮ್ಮ ಚಿಂತೆಗೆ ಕಾರಣ ಆಗಬಹುದು. ತಾಳ್ಮೆ- ಸಂಯಮ ಈ ಸಮಯದಲ್ಲಿ ಮುಖ್ಯ ಆಗುತ್ತದೆ. ನಿಮ್ಮ ಮೇಲೆ ನಿಮಗೇ ಬೇಸರವಾದರೂ ಅದು ಏಕಾಗ್ರತೆಯನ್ನು ಕಳೆಯದಂತೆ ನೋಡಿಕೊಳ್ಳಿ. ವಿದ್ಯಾರ್ಥಿಗಳು ನಿಮ್ಮದಲ್ಲದ ತಪ್ಪಿಗೆ ಬೈಗುಳವನ್ನು ಕೇಳಿಸಿಕೊಳ್ಳುವಂತಾಗುತ್ತದೆ. ಯಾವುದೇ ಕೆಲಸ ಅಥವಾ ಜವಾಬ್ದಾರಿಯ ವಿಚಾರದಲ್ಲಿ ಇತರರಿಗೆ ನೆರವು ನೀಡುವುದರ ಮುನ್ನ ಆಲೋಚನೆ ಮಾಡಿ, ಮುಂದುವರಿಯುವುದು ಉತ್ತಮ. ಮಹಿಳೆಯರಿಗೆ ಮನೆಯಲ್ಲಿ ಅಡುಗೆ ಮಾಡುವ ವಿಚಾರಕ್ಕೆ ಇರಬಹುದು ಅಥವಾ ಒಪ್ಪ ಓರಣವಾಗಿ ಇರಿಸಿಕೊಳ್ಳುವ ಸಂಗತಿಗೆ ಇರಬಹುದು ಮನಸ್ಸಿಗೆ ಬೇಸರವಾಗುವಂಥ ಮಾತುಗಳನ್ನು ಕೇಳಿಸಿಕೊಳ್ಳುವ ಯೋಗ ಇದೆ. ನಿಮಗೆ ಎಷ್ಟೇ ಆಪ್ತರು ಆದರೂ ಅವರ ವೈಯಕ್ತಿಕ ವಿಚಾರಗಳಲ್ಲಿ ಮೂಗು ತೂರಿಸುವುದಕ್ಕೆ ಹೋಗಬೇಡಿ. ನಿಮ್ಮ ಮಿತಿಯನ್ನು ಅರಿತುಕೊಂಡು ಮಾತನಾಡಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಆದಾಯ ತೆರಿಗೆ, ಜಿಎಸ್ ಟಿ ಅಥವಾ ಸರ್ಕಾರಕ್ಕೆ ಕಟ್ಟಬೇಕಾದಂಥ ಯಾವುದೇ ಶುಲ್ಕ, ದಂಡ ಪಾವತಿ ಇತ್ಯಾದಿ ವಿಚಾರಗಳ ಬಗ್ಗೆ ಸರಿಯಾಗಿ ಗಮನವನ್ನು ನೀಡಿ. ಆಮೇಲೆ ಮಾಡಿದರಾಯಿತು ಅಥವಾ ಬೇರೆಯವರಿಗೆ ಜವಾಬ್ದಾರಿ ವಹಿಸಿದ್ದಾಗಿದೆ, ಆ ಬಗ್ಗೆ ಅವರು ನೋಡಿಕೊಳ್ಳುತ್ತಾರೆ ಎಂಬ ನಿರ್ಲಕ್ಷ್ಯ ಯಾವುದೇ ಕಾರಣಕ್ಕೂ ಬೇಡ. ಸಾತ್ವಿಕವಾದ ವ್ಯಕ್ತಿಗಳ ಸ್ನೇಹದಿಂದ ನಿಮಗೆ ಹಲವು ರೀತಿಯಲ್ಲಿ ಅನುಕೂಲಗಳು ಒದಗಿ ಬರುವ ವಾರ ಇದಾಗಿರಲಿದೆ. ತರ್ಕಬದ್ಧವಾದ ನಿಮ್ಮ ಆಲೋಚನೆಯಿಂದ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲಿದ್ದೀರಿ. ದೂರದ ಊರುಗಳಿಗೆ, ಅಥವಾ ವಿದೇಶಕ್ಕೆ ಪ್ರವಾಸಕ್ಕೆ ತೆರಳಬೇಕು ಎಂದು ಪ್ರಯತ್ನವನ್ನು ಮಾಡುತ್ತಾ ಇರುವವರಿಗೆ ಹಣಕಾಸು ಸೇರಿದಂತೆ ಇತರ ಅನುಕೂಲಗಳು ಆಗಲಿವೆ. ಇನ್ನು ಮನೆಗೆ ಗೃಹಾಲಂಕಾರ ವಸ್ತುಗಳನ್ನು ಖರೀದಿ ಮಾಡುವಂಥ ಯೋಗ ಇದೆ. ಯಾರು ಇಂಟಿರೀಯರ್ ಡಿಸೈನಿಂಗ್ ಅನ್ನು ವ್ಯವಹಾರವಾಗಿ ಮಾಡುತ್ತಾ ಬಂದಿರುತ್ತೀರಿ ಅಂಥವರಿಗೆ ಆದಾಯದಲ್ಲಿ ಹೆಚ್ಚಳ ಆಗುವುದಕ್ಕೆ ಮಾರ್ಗೋಪಾಯಗಳು ತೆರೆದುಕೊಳ್ಳಲಿವೆ. ಜಾಬ್ ಕನ್ಸಲ್ಟೆನ್ಸಿ ಮೂಲಕವಾಗಿ ಉದ್ಯೋಗಕ್ಕೆ ಪ್ರಯತ್ನಿಸುತ್ತಾ ಇರುವವರಿಗೆ ಅವಕಾಶಗಳು ದೊರೆಯಲಿವೆ. ಕೃಷಿಕರಿಗೆ ಹಳೇ ಯಂತ್ರಗಳು, ವಾಹನಗಳು ಅಥವಾ ಕೃಷಿ ಸಲಕರಣೆಗಳ ಮಾರಾಟದಿಂದ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಮೊತ್ತವು ಕೈ ಸೇರಲಿದೆ. ಯಾವ ಕೆಲಸ- ಕಾರ್ಯಗಳು ಇನ್ನೂ ನಿಧಾನವಾಗಬಹುದು ಅಂದುಕೊಂಡಿರುತ್ತೀರೋ ಅದು ಶೀಘ್ರವಾಗಿ ಮುಗಿಯುವ ಮುನ್ಸೂಚನೆ ದೊರೆಯಲಿದೆ ಅಥವಾ ನಿಮಗೆ ಪರಿಚಿತರು ನೆರವಿಗೆ ಬಂದು, ತಮ್ಮ ಪ್ರಭಾವವನ್ನು ಬಳಸಿ ಬೇಗ ಕೆಲಸ ಮಾಡಿಕೊಡಲಿದ್ದಾರೆ. ಈ ವಾರ ನಿಮ್ಮ ಅಗತ್ಯಗಳನ್ನು ನಿಖರವಾಗಿ ಗುರುತಿಸುವುದು ಮುಖ್ಯವಾಗಲಿದೆ. ವೃತ್ತಿನಿರತರು ತಮ್ಮ ಸೋಷಿಯಲ್ ಕಾಂಟ್ಯಾಕ್ಟ್ ವಿಸ್ತರಿಸಿಕೊಳ್ಳುವುದಕ್ಕೆ ಬೇಕಾದ ದೊಡ್ಡ ವೇದಿಕೆ ದೊರೆಯಲಿದೆ. ಈ ಹಿಂದೆ ನೀವು ಪಟ್ಟಂಥ ಶ್ರಮ ಹಾಗೂ ಮಾಡಿದಂಥ ಸಹಾಯ/ಕೆಲಸಗಳಿಗೆ ಸನ್ಮಾನ- ಗೌರವಾದರಗಳು ದೊರೆಯಲಿವೆ. ಹಳೇ ವ್ಯಾಜ್ಯಗಳಿಂದ ಕಿರಿಕಿರಿಯನ್ನು ಅನುಭವಿಸುತ್ತಿದ್ದಲ್ಲಿ ಅದರಿಂದ ಹೊರಬರುವುದಕ್ಕೆ ಸಾಧ್ಯವಾಗಲಿದೆ. ವಿದ್ಯಾರ್ಥಿಗಳಿಗೆ ಹೊಸ ಕೋರ್ಸ್ ಗಳಿಗೆ, ಅದರಲ್ಲೂ ಉದ್ಯೋಗಕ್ಕೆ ಸಹಾಯ ಆಗುವಂಥ ಕೋರ್ಸ್ ಗಳಿಗೆ ಸೇರುವಂಥ ಯೋಗ ಇದೆ. ಇನ್ನು ಇಂಟರ್ನ್ ಷಿಪ್ ಗೆ ಪ್ರತಿಷ್ಠಿತ ಸಂಸ್ಥೆಗಳು/ ವ್ಯಕ್ತಿಗಳಿಂದ ಆಹ್ವಾನ- ಅವಕಾಶ ದೊರೆಯುವ ಸಾಧ್ಯತೆ ಇದೆ. ಹತ್ತಿರದ ಸಂಬಂಧಿಗಳಿಂದ ನಿಮ್ಮಲ್ಲಿ ಕೆಲವರಿಗೆ ಉಡುಗೊರೆಗಳು ದೊರೆಯಬಹುದು, ಅದರಲ್ಲೂ ಟ್ಯಾಬ್, ಲ್ಯಾಪ್ ಟಾಪ್ ಇಂಥದ್ದು ಸಿಗುವಂಥ ಯೋಗವಿದೆ. ಮಹಿಳೆಯರಿಗೆ ನಿಮ್ಮ ನೇರವಂತಿಕೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಲಿದೆ. ಈ ಹಿಂದೆ ಯಾರು ನಿಮ್ಮ ಮಾತಿಗೆ, ಮುಲಾಜಿಲ್ಲದೆ ನೀವು ಹೇಳುವ ರೀತಿಗೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದರೋ ಅಂಥವರೇ ಈಗ ನಿಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಲಿದ್ದಾರೆ. ನಿಮ್ಮಲ್ಲಿ ಕೆಲವರು ಹಳೇ ಚಿನ್ನವನ್ನು ಎಕ್ಸ್ ಚೇಂಜ್ ಮಾಡಿಸಿಕೊಳ್ಳುವ ಸಾಧ್ಯತೆಗಳಿವೆ, ಅದೇ ರೀತಿ ಮತ್ತೆ ಕೆಲವರು ಮಕ್ಕಳ ಸಲುವಾಗಿ ಚಿನ್ನದ ಚೀಟಿಯನ್ನೋ ಅಥವಾ ಚಿನ್ನದ ಬಾಂಡ್ ಗಳಲ್ಲೋ ಹಣವನ್ನು ಹೂಡಿಕೆ ಮಾಡುವ ಯೋಗವೂ ಇದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಮನಸ್ಸಿಗೆ ಸಂತೋಷವಾಗುವಂಥ ಬೆಳವಣಿಗೆಗಳು ಆಗಲಿವೆ. ಪ್ರೀತಿಯಲ್ಲಿ ಇರುವವರು ಮನೆಯಲ್ಲಿ ಮದುವೆ ವಿಚಾರವನ್ನು ಪ್ರಸ್ತಾವ ಮಾಡಿ, ಅದಕ್ಕೆ ಒಪ್ಪಿಗೆ ಸಿಗುವಂಥ ಯೋಗ ಇದೆ. ಇನ್ನು ಇದೇ ವೇಳೆ ನಿಮ್ಮಲ್ಲಿ ಕೆಲವರಿಗೆ ಮನಸ್ಸಿನಲ್ಲಿನ ಪ್ರೇಮ ನಿವೇದನೆ ಮಾಡಿ, ಅದಕ್ಕೆ ಒಪ್ಪಿಗೆ ಸಿಗುವಂಥ ಸಾಧ್ಯತೆ ಸಹ ಇದೆ. ನಿಮ್ಮಲ್ಲಿ ಹಲವರು ಸಿಕ್ಕ ಅವಕಾಶಗಳನ್ನು ತುಂಬ ಚೆನ್ನಾಗಿ ಸದುಪಯೋಗ ಮಾಡಿಕೊಳ್ಳುತ್ತೀರಿ. ಅನುಭವದ ಆಧಾರದಲ್ಲಿ ತೆಗೆದುಕೊಂಡ ನಿರ್ಧಾರಗಳು ಫಲ ನೀಡುತ್ತವೆ. ಮನೆಯ ನವೀಕರಣ, ಸುಣ್ಣ- ಬಣ್ಣ ಮಾಡಿಸಬೇಕು ಎಂದು ಬಹಳ ಸಮಯದಿಂದ ಅಂದುಕೊಳ್ಳುತ್ತಿದ್ದು, ಅದು ಸಾಧ್ಯವಾಗದೆ ಹಾಗೇ ಇತ್ತು ಅಂತಾದಲ್ಲಿ ಸಂಬಂಧಪಟ್ಟವರನ್ನು ಕರೆಸಿ, ಈ ವಾರ ಮಾತನಾಡುವ ಯೋಗ ಇದೆ. ಮತ್ತು ಕೆಲವರು ಕೆಲಸವನ್ನೇ ಆರಂಭ ಮಾಡಿಸಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ನೀವು ತೆಗೆದುಕೊಂಡಂಥ ತೀರ್ಮಾನಗಳ ಬಗ್ಗೆ ಹಲವರು ಮೆಚ್ಚುಗೆಯನ್ನು ವ್ಯಕ್ತಪಡಿಸಲಿದ್ದಾರೆ. ನಿಮ್ಮ ದೂರದೃಷ್ಟಿ, ಮುಂಜಾಗ್ರತೆಗೆ ಕುಟುಂಬ ಸದಸ್ಯರು ಬೆರಗು ಪಡಲಿದ್ದಾರೆ. ಕೃಷಿಕರಿಗೆ ಆರೋಗ್ಯ ಸಮಸ್ಯೆಗಳು ಇದ್ದಲ್ಲಿ ಚೇತರಿಕೆ ಕಾಣುವ, ಸೂಕ್ತ ವೈದ್ಯೋಪಚಾರಗಳು ದೊರೆಯುವ ಯೋಗ ಇದೆ. ಸೋದರ ಸಂಬಂಧಿಗಳ ಜೊತೆಗೆ ಜಮೀನು ವ್ಯಾಜ್ಯವೋ ಅಥವಾ ಹಣಕಾಸಿನ ವಿಚಾರಕ್ಕೆ ಮನಸ್ತಾಪವೋ ಇದ್ದಲ್ಲಿ ಮೂರನೇ ವ್ಯಕ್ತಿಗಳ ಮಧ್ಯಸ್ಥಿಕೆಯಿಂದ ಅವು ಬಗೆಹರಿಯಲಿವೆ. ನಿಮ್ಮಲ್ಲಿ ಯಾರು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರವನ್ನು ಬಹಳ ಚಿಂತೆ ಮಾಡುತ್ತಿದ್ದೀರಿ, ಆ ಚಿಂತೆಯು ದೂರವಾಗುವಂಥ ಬೆಳವಣಿಗೆಗಳು ಆಗಲಿವೆ. ಮಕ್ಕಳ ಮದುವೆಗಾಗಿ ಬಹಳ ಸಮಯದಿಂದ ಸೂಕ್ತ ಸಂಬಂಧದ ಹುಡುಕಾಟದಲ್ಲಿ ಇರುವವರಿಗೆ ಮನಸ್ಸಿಗೆ ಮೆಚ್ಚುವಂಥ ಸಂಬಂಧ ದೊರೆಯಲಿದೆ. ವೃತ್ತಿನಿರತರು ಬಹುತೇಕ ಮರೆತೇ ಹೋಗಿದ್ದಂಥ ಲಾಭಕರವಾದ ಕೆಲಸಗಳು ಈ ವಾರ ಹುಡುಕಿಕೊಂಡು ಬರಲಿವೆ. ಇನ್ನು ಒಲ್ಲದ ಮನಸ್ಸಿನಿಂದಲೇ ಅಪ್ಲೈ ಮಾಡಿದ್ದಂಥ ಕಾರ್ಯಗಳಲ್ಲಿ ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಆದಾಯ ಹಾಗೂ ಆ ಮೂಲಕ ಲಾಭ ದೊರೆಯಲಿದೆ. ಕಣ್ಣಿನ ಆರೋಗ್ಯದ ಬಗ್ಗೆ ಮಾತ್ರ ಹೆಚ್ಚಿನ ಗಮನವನ್ನು ನೀಡಿ. ಅದರಲ್ಲೂ ಕಣ್ಣಿನ ಉರಿ, ನೀರು ಸೋರುವುದು ಈ ರೀತಿಯ ಸಮಸ್ಯೆಗಳಿವೆ ಎಂದಾದಲ್ಲಿ ಸೂಕ್ತ ವೈದ್ಯರ ಮಾರ್ಗದರ್ಶನವನ್ನು ಪಡೆದುಕೊಳ್ಳಿ. ವಿದ್ಯಾರ್ಥಿಗಳಿಗೆ ತಲೆ ಹೊಟ್ಟಿನ ಸಮಸ್ಯೆ ತೀವ್ರವಾಗಬಹುದು. ತಲೆಯ ಚರ್ಮದ ಸಮಸ್ಯೆಗಳು ಸಹ ಕಾಡಬಹುದು. ದೇಹದಲ್ಲಿನ ವಿಟಮಿನ್ ಅಥವಾ ಬೇರೆ ಯಾವುದಾದರೂ ಕೊರತೆಯಿಂದ ವಿಪರೀತ ತಲೆಕೂದಲು ಉದುರುವ ಸಮಸ್ಯೆ ಕಾಣಿಸಿಕೊಂಡು ಆತಂಕಕ್ಕೆ ಗುರಿ ಆಗಲಿದ್ದೀರಿ. ಮಹಿಳೆಯರು ನೀವು ತೆಗೆದುಕೊಂಡ ತೀರ್ಮಾನವನ್ನು ಪದೇಪದೇ ಬದಲಾಯಿಸಲಿದ್ದೀರಿ. ಚಿಕ್ಕ ವಯಸ್ಸಿನಿಂದ ನಿಮ್ಮ ಜೊತೆಗೆ ಗೆಳೆಯ ಅಥವಾ ಗೆಳತಿ ಆದವರು ತಮ್ಮ ಆರ್ಥಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ನಿಮ್ಮನ್ನು ಸಮಸ್ಯೆಗೆ ಸಿಲುಕಿಸಲಿದ್ದಾರೆ. ಇನ್ನೊಬ್ಬರಿಗೆ ಸಹಾಯ ಆಗುವುದಾದರೆ ಆಗಲಿ ಎಂಬ ಸದುದ್ದೇಶದಿಂದಲೇ ನೀವು ಮಾಡಿದ ಕೆಲಸದಿಂದ ನಿಮಗೇ ಸಮಸ್ಯೆಯಾಗಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿಮ್ಮದೇ ಪ್ರಪಂಚದಲ್ಲಿ ಕಳೆದು ಹೋಗುವ ಮಟ್ಟಕ್ಕೆ ಬಿಜಿ ಆಗಿಬಿಡುತ್ತೀರಿ. ಸಮಯ ಹೊಂದಿಸಿಕೊಳ್ಳುವುದೇ ಬಲು ಕಷ್ಟ ಎಂಬಂತೆ ಆಗಿಬಿಡುತ್ತದೆ. ನೀವು ಯಾವ ಕ್ಷೇತ್ರದಲ್ಲಿ ಪರಿಣತಿ ಹೊಂದಿರುತ್ತೀರಿ ಅದಕ್ಕೆ ಸಂಬಂಧಿಸಿದಂತೆ ಉಪನ್ಯಾಸ- ಪ್ರವಚನಗಳನ್ನು ನೀಡುವುದಕ್ಕಾಗಿ ಆಹ್ವಾನ ದೊರೆಯಲಿದೆ. ಈ ಹಿಂದೆ ಯಾವ ಅವಕಾಶ ನಿಮಗೆ ಸ್ವಲ್ಪದರಲ್ಲಿ ತಪ್ಪಿತ್ತು ಎಂದಾಗಿರುತ್ತದೋ ಅಂಥದ್ದು ಈ ವಾರದಲ್ಲಿ ದೊರೆಯುವ ಸಾಧ್ಯತೆ ಹೆಚ್ಚಿದೆ. ಅಥವಾ ನೀವಾಗಿಯೇ ಪಟ್ಟು ಹಿಡಿದು ದಕ್ಕಿಸಿಕೊಳ್ಳುತ್ತೀರಿ. ಯಾವುದನ್ನು ನೀವು ಹವ್ಯಾಸ ಎಂದು ಇಷ್ಟು ಸಮಯ ಮಾಡಿಕೊಂಡು ಬಂದಿರುತ್ತೀರೋ ಅದರಿಂದ ನಿರೀಕ್ಷೆ ಕೂಡ ಮಾಡುವುದಕ್ಕೆ ಸಾಧ್ಯವಿಲ್ಲದಂಥ ದೊಡ್ಡ ಆದಾಯ ಬರುವ ಮಾರ್ಗಗಳು ತೆರೆದುಕೊಳ್ಳಲಿವೆ. ಸಮಾನ ಆಸಕ್ತರನ್ನು ಒಗ್ಗೂಡಿಸಿಕೊಂಡು, ಕೈಗೊಳ್ಳುವ ಕೆಲಸ- ಕಾರ್ಯಗಳಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ನಿಮ್ಮದಾಗಿಸಿಕೊಳ್ಳುತ್ತೀರಿ. ಶಾಲೆ- ಕಾಲೇಜುಗಳನ್ನು ನಡೆಸುತ್ತಾ ಇರುವವರಿಗೆ ಬಹು ದಿನಗಳ ಕನಸನ್ನು ಸಾಕಾರ ಮಾಡಿಕೊಳ್ಳುವಂಥ ಸಮಯ ಇದಾಗಿರುತ್ತದೆ. ಕೃಷಿಕರಿಗೆ ಕೋರ್ಟ್- ಕಚೇರಿಯ ವ್ಯವಹಾರಗಳಲ್ಲಿ ಸಮಾಧಾನ ದೊರೆಯುವಂಥ ಬೆಳವಣಿಗೆಗಳು ಆಗಲಿವೆ. ಒಂದು ವೇಳೆ ಹಣಕಾಸಿನ ವಿಚಾರವಾಗಿ ಇಷ್ಟು ಸಮಯ ಒತ್ತಡದಲ್ಲಿ ಇದ್ದೀರಿ ಅಂತಾದಲ್ಲಿ ಅದರಿಂದ ಆಚೆ ಬರುವುದಕ್ಕೆ ಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ. ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿರುವವರಿಗೆ ಆದಾಯ ಹಾಗೂ ಲಾಭ ಎರಡರಲ್ಲೂ ಭಾರೀ ಪ್ರಮಾಣದಲ್ಲಿ ಹೆಚ್ಚಳ ಕಾಣುವ ಸಮಯವಿದು. ಪ್ರತಿಷ್ಠಿತ ಸಂಘ- ಸಂಸ್ಥೆ ಅಥವಾ ಕಂಪನಿಯವರು ಬೆಲೆಯ ವಿಚಾರಕ್ಕೆ ನಿಮ್ಮ ನಿರೀಕ್ಷೆಯಂತೆ ಪ್ರಸ್ತಾವವನ್ನು ಮುಂದಿಡುವ ಯೋಗ ಇದೆ. ಇದನ್ನು ಒಪ್ಪಿಕೊಂಡಲ್ಲಿ ದೀರ್ಘಾವಧಿಗೆ ಅನುಕೂಲ ಆಗಲಿದೆ. ವೃತ್ತಿನಿರತರಿಗೆ ಪ್ರಯಾಣದ ಮೇಲೆ ಪ್ರಯಾಣ ಬರುವ ಸಾಧ್ಯತೆಗಳಿವೆ. ಇದರಿಂದ ದಣಿವು ಆಗಲಿದೆ ಹಾಗೂ ಒಂದಿಷ್ಟಾದರೂ ವಿಶ್ರಾಂತಿ ಸಿಗಬಾರದೆ ಎಂದು ಬಲವಾಗಿ ಅನಿಸಲಿದೆ. ಇದೇ ಮೊದಲ ಬಾರಿಗೆ ಎಂದು ನೀವು ಆರಂಭಿಸಿದಂಥ ವೃತ್ತಿಸೇವೆಗಳ ಬಗ್ಗೆ ಒಳ್ಳೆ ಮಾತುಗಳು ಕೇಳಿಬರಲಿವೆ. ಅದರ ಜೊತೆಗೆ ವಿಸ್ತರಣೆಗೆ ಅವಕಾಶಗಳಿವೆ ಎಂಬುದು ಸಹ ಗಮನಕ್ಕೆ ಬರಲಿದೆ. ಅದಕ್ಕೆ ಪೂರಕವಾಗಿ ಬೇಕಾದಂಥ ಕೆಲಸಗಾರರು ತಾವಾಗಿಯೇ ನಿಮ್ಮನ್ನು ಹುಡುಕಿಕೊಂಡು ಸಹ ಬರಲಿದ್ದಾರೆ. ಈ ಅವಧಿಯಲ್ಲಿ ನೀವು ಅವಕಾಶ ಹೇಗೆ ಸದ್ಬಳಕೆ ಮಾಡಿಕೊಳ್ಳುತ್ತೀರಿ ಎಂಬುದು ಮುಖ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಒಳ್ಳೆ ಹೆಸರು ಹಾಗೂ ಜನಪ್ರಿಯತೆ ದೊರೆಯಲಿದೆ. ಶಾಲೆ- ಕಾಲೇಜುಗಳಲ್ಲಿ ಇರುವಂಥ ಸಂಘ- ಸಂಸ್ಥೆಗಳ ಪದಾಧಿಕಾರಿ ಹುದ್ದೆಯೋ ಅಥವಾ ಬೇರೆ ಯಾವುದಾದರೂ ಮುಖ್ಯ ಜವಾಬ್ದಾರಿಯೋ ನಿಮಗೆ ವಹಿಸಬಹುದು. ನಿಮ್ಮಲ್ಲಿ ಕೆಲವರಿಗೆ ಸ್ಕಾಲರ್ ಷಿಪ್ ದೊರೆಯುವ ಯೋಗ ಸಹ ಇದೆ. ಮಹಿಳೆಯರು ಉದ್ಯೋಗ ಬದಲಾವಣೆಗಾಗಿ ಏನಾದರೂ ಪ್ರಯತ್ನವನ್ನು ಪಡುತ್ತಿದ್ದಲ್ಲಿ ಅದು ಸಾಧ್ಯವಾಗಲಿದೆ. ಇನ್ನು ಯಾರು ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿರುವಿರೋ ಅಂಥವರು ಅದರಿಂದ ಆಚೆ ಬರುವುದಕ್ಕೆ ಬೇಕಾದ ಮಾರ್ಗೋಪಾಯಗಳು ದೊರೆಯಲಿವೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ನಿಮ್ಮ ಒಳಮನಸ್ಸು ಹೇಳಿದ ಮಾತುಗಳನ್ನು ಕೇಳಿಸಿಕೊಳ್ಳಿ. ಹೊಸದಾಗಿ ವ್ಯಾಪಾರ- ವ್ಯವಹಾರ ಮಾಡಬೇಕು ಎಂದು ಹಣಕಾಸನ್ನು ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಬ್ಯಾಂಕ್- ಬ್ಯಾಂಕೇತರ ಸಂಸ್ಥೆಗಳಲ್ಲಿ ಪ್ರಯತ್ನ ಮಾಡುತ್ತಾ ಇದ್ದಲ್ಲಿ ಹೊಂದಿಕೆ ಆಗಲಿದೆ. ಇನ್ನು ನಿಮ್ಮಲ್ಲಿ ಯಾರು ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಿ ಖರ್ಚಿನ ಮೇಲೆ ನಿಗಾ ಇರಿಸಿ. ಏಕೆಂದರೆ ನೀವು ಮನೆಗೆ ಒಂದು ವಸ್ತುವನ್ನು ಖರೀದಿ ಮಾಡಬೇಕು ಎಂದು ತೆರಳಿದ್ದಲ್ಲಿ ಅಂದುಕೊಳ್ಳದ ಕೆಲವು ವಸ್ತುಗಳನ್ನು ಸಹ ಕೊಳ್ಳುವಂತಾಗಲಿದೆ. ಆದ್ದರಿಂದ ಖರ್ಚಿನ ಮೇಲೆ ನಿಗಾ ಇರಿಸಿಕೊಳ್ಳಿ. ಯಾವುದು ಅಗತ್ಯ ಎಂಬುದರ ಬಗ್ಗೆ ಸ್ಪಷ್ಟತೆ ಇರಿಸಿಕೊಳ್ಳಿ. ಬ್ರ್ಯಾಂಡೆಡ್ ವಸ್ತುಗಳ ಬಗ್ಗೆ ವಿಪರೀತ ಮೋಹ ಇರುವಂಥವರು ಅದನ್ನು ಕಡಿಮೆ ಮಾಡಿಕೊಳ್ಳಿ ಅಥವಾ ನಿಯಂತ್ರಣದಲ್ಲಿ ಇರಿಸಿಕೊಳ್ಳಿ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಏನು ಪೋಸ್ಟ್ ಮಾಡುತ್ತೀರಿ ಎಂಬುದರಲ್ಲಿ ಮುಂಜಾಗ್ರತೆಯನ್ನು ವಹಿಸಿ. ಇತರರ ವೈಯಕ್ತಿಕ ವಿಚಾರವನ್ನು ಸಾರ್ವಜನಿಕರವಾಗಿ ಚರ್ಚೆ ಮಾಡುವುದಕ್ಕೆ ಹೋಗಬೇಡಿ. ಕೃಷಿಕರಿಗೆ ಸನ್ಮಾನಗಳು ಆಗುವಂಥ ಯೋಗ ಇದೆ. ನಿಮ್ಮಲ್ಲಿ ಕೆಲವರು ಸರ್ಕಾರದಿಂದ ಆಯೋಜನೆ ಮಾಡುವಂಥ ಅಧ್ಯಯನ ಪ್ರವಾಸ ಇಂಥದ್ದಕ್ಕೆ ಆಯ್ಕೆಯಾಗುವಂಥ ಸಾಧ್ಯತೆಗಳಿವೆ. ಬಹಳ ಸಮಯದಿಂದ ಹುಡುಕಾಟ ನಡೆಸುತ್ತಿದ್ದ ದಾಖಲೆ- ಪತ್ರಗಳು ಈ ವಾರ ದೊರೆಯುವಂಥ ಸಾಧ್ಯತೆಗಳಿವೆ. ಇನ್ನು ನಿಮ್ಮಲ್ಲಿ ಕೆಲವರು ಭೂಮಿಯನ್ನು ಭೋಗ್ಯಕ್ಕೆ ಪಡೆಯುವ ಆಲೋಚನೆ ಮಾಡಲಿದ್ದೀರಿ. ಇದು ತಕ್ಷಣವೇ ಕೈಗೂಡುವ ಸಾಧ್ಯತೆಗಳು ಸಹ ಇವೆ. ಕೃಷಿ ಉತ್ಪನ್ನಗಳ ರಫ್ತು ಮಾಡುತ್ತಾ ಇರುವವರಿಗೆ ವ್ಯವಹಾರದ ವಿಸ್ತರಣೆಗೆ ಅವಕಾಶಗಳು ದೊರೆಯಲಿವೆ. ಇದಕ್ಕಾಗಿ ಹಣವನ್ನು ಹೂಡಿಕೆ ಮಾಡಲಿದ್ದೀರಿ. ವೃತ್ತಿನಿರತರು ಇಷ್ಟು ಸಮಯ ನಿಮ್ಮ ಕಾರ್ಯಗಳಲ್ಲಿ ವಿನಾಕಾರಣ ಮೂಗು ತೂರಿಸಿ, ತೊಂದರೆ ನೀಡುತ್ತಿರುವವರಿಗೆ ಎಚ್ಚರಿಕೆ ಮಾತುಗಳನ್ನು ಹೇಳಲಿದ್ದೀರಿ. ಇನ್ನು ನಿಮ್ಮ ಕೈ ಕೆಳಗೆ ಕೆಲಸ ಮಾಡುತ್ತಿರುವವರ ಪೈಕಿ ಒಬ್ಬರನ್ನೋ ಅಥವಾ ಕೆಲವರನ್ನೋ ಕೆಲಸದಿಂದಲೇ ತೆಗೆಯುವ ತೀರ್ಮಾನ ಮಾಡುವ ಸಾಧ್ಯತೆಗಳು ಸಹ ಇವೆ. ಕುಟುಂಬ ಸದಸ್ಯರ ಸಲುವಾಗಿ ಸೆಕೆಂಡ್ ಹ್ಯಾಂಡ್ ವಾಹವನ ಖರೀದಿ ಮಾಡುವ ಯೋಗ ನಿಮ್ಮಲ್ಲಿ ಕೆಲವರಿಗೆ ಇದೆ. ವಿದ್ಯಾರ್ಥಿಗಳು ನಿಮ್ಮ ಹಳೇ ಸಿಟ್ಟಿಗೆ ಪ್ರತೀಕಾರ ತೀರಿಸಿಕೊಳ್ಳಲಿದ್ದೀರಿ. ಈ ಹಿಂದೆ ನಿಮಗೆ ತೊಂದರೆ ಮಾಡಿದವರಿಗೆ ವಿಪರೀತವಾಗಿ ಕಾಡಲಿದ್ದೀರಿ. ನಾಲ್ಕು ಜನರ ಎದುರು ಅವರ ಸಾಮರ್ಥ್ಯವನ್ನು ಹೀಗಳೆಯುವ, ಮೂದಲಿಸುವ ಕೆಲಸ ಮಾಡಲಿದ್ದೀರಿ. ಅದನ್ನು ಸಾಬೀತು ಮಾಡಿ, ಅವಕಾಶಗಳು ಕೈ ತಪ್ಪುವಂತೆ ಮಾಡಲಿದ್ದೀರ. ಆದರೆ ನೆನಪಿನಲ್ಲಿಡಿ, ಇಂಥದ್ದರಿಂದ ನಿಮಗೆ ತಾತ್ಕಾಲಿಕವಾಗಿ ಸಂತೋಷ ಆಗುತ್ತದೆ ಅಷ್ಟೇ. ಹಳೆಯದನ್ನು ಮರೆಯುವುದಕ್ಕೆ ಪ್ರಯತ್ನಿಸಿ. ಮಹಿಳೆಯರು ತಮ್ಮ ತಾಯಿ ಅಥವಾ ಮಾತೃ ಸಮಾನರಾದವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಮಾಡಬೇಕಾಗುತ್ತದೆ. ಗಾಳಿ ಸುದ್ದಿಗೆ ಕಿವಿಗೊಡುವುದಕ್ಕೆ ಹೋಗಬೇಡಿ. ನಿಮಗೆ ಪೂರ್ಣವಾಗಿ ಮಾಹಿತಿ ಇಲ್ಲದ ವಿಷಯದ ಬಗ್ಗೆ ತುಂಬ ವಿಶ್ವಾಸದಿಂದ ಮಾತನಾಡುವುದಕ್ಕೆ ಹೋಗಬೇಡಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮಗೆ ಈ ಹಿಂದೆ ಯಾರು ಸಹಾಯ ಮಾಡಿದ್ದರೋ ಅಂಥವರ ಬಗ್ಗೆಯೇ ನೀವು ನಕಾರಾತ್ಮಕವಾಗಿ ಮಾತನಾಡಲಿದ್ದೀರಿ. ಈ ವಿಚಾರ ಸಂಬಂಧಪಟ್ಟವರ ಕಿವಿಗೆ ತಲುಪಲಿದೆ. ಆ ನಂತರದಲ್ಲಿ ನಾನು ಹೀಗೆ ಮಾತನಾಡಬಾರದಿತ್ತು ಎಂದು ಹಲವು ಸಲ, ವಿವಿಧ ವಿಚಾರಗಳಿಗೆ ನಿಮಗೆ ಅನಿಸಲಿದೆ. ಆದ್ದರಿಂದ ಇತರರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಇನ್ನು ಸಂಘ- ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಯಲ್ಲಿ ಇರುವಂಥವರಿಗೆ ಒತ್ತಡದ ಸನ್ನಿವೇಶಗಳು ಎದುರಾಗಲಿವೆ. ಲೆಕ್ಕ-ಪತ್ರ, ದಾಖಲೆಗಳಿಗೆ ಸಂಬಂಧಿಸಿದಂತೆ ನಿಮ್ಮಿಂದ ಈ ಹಿಂದೆ ಆದ ನಿರ್ಲಕ್ಷ್ಯಕ್ಕೆ ಈಗ ಬೆಲೆ ತೆರಬೇಕಾಗುತ್ತದೆ. ಮೊದಮೊದಲಿಗೆ ಎಂಬಂತೆ ಆರಂಭಿಸಿದ ಕೆಲಸಗಳಿಗೆ ಹೆಚ್ಚು ಸಮಯ ನೀಡಬೇಕಾದ ಸ್ಥಿತಿ ಏರ್ಪಡುವುದರಿಂದ ಮನೆಯಲ್ಲಿ ನಡೆಯಬೇಕಾದ ಮುಖ್ಯ ಕಾರ್ಯಕ್ರಮಕ್ಕೆ ಹೆಚ್ಚು ಸಮಯ ನೀಡುವುದಕ್ಕೆ ಸಾಧ್ಯವಾಗದೇ ಹೋಗಬಹುದು. ವಿದೇಶಗಳಲ್ಲಿ ಉದ್ಯೋಗ ಅಥವಾ ವ್ಯಾಸಂಗ ಮಾಡುತ್ತಿರುವವರು ಸ್ನೇಹಿತರ ಹಿನ್ನೆಲೆ ಹಾಗೂ ಅವರ ಸ್ವಭಾವವನ್ನು ಸರಿಯಾಗಿ ವಿಶ್ಲೇಷಿಸುವುದು ಬಹಳ ಮುಖ್ಯವಾಗುತ್ತದೆ. ಕೃಷಿಕರಾಗಿದ್ದಲ್ಲಿ ಹಣಕಾಸು ಲೆಕ್ಕಾಚಾರಗಳು ನೀವಂದುಕೊಂಡಿದ್ದಕ್ಕಿಂತ ಕೈ ಮೀರಿ ಹೋಗುವ ಸಾಧ್ಯತೆಗಳು ಹೆಚ್ಚಿವೆ. ಆದ್ದರಿಂದ ಒಂದಕ್ಕೆ ನಾಲ್ಕು ಬಾರಿ ಎಂಬಂತೆ ವಿಚಾರಿಸಿ, ಮುಂದುವರಿಯುವುದು ಉತ್ತಮ. ಜಮೀನಿನಲ್ಲಿ ಮಾಡಿಸುವಂಥ ಕೆಲಸಗಳ ವಿಚಾರದಲ್ಲಿ ಸ್ಪಷ್ಟತೆ ಇರಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಕೃಷಿ ಕಾರ್ಮಿಕರಾಗಿ ಇರುವಂಥವರಾಗಿದ್ದಲ್ಲಿ ಸಣ್ಣ ಪ್ರಮಾಣದಲ್ಲಿಯಾದರೂ ಭೂಮಿಯನ್ನು ಖರೀದಿಸುವ ಅಥವಾ ಗುತ್ತಿಗೆಗೆ ಪಡೆಯುವಂಥ ಯೋಗಗಳಿವೆ. ಈ ಬೆಳವಣಿಗೆಯಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ನಿಮ್ಮ ಹಣಕಾಸಿನ ಅಗತ್ಯಗಳಿಗೆ ಕುಟುಂಬ ಸದಸ್ಯರು ನೆರವು ನೀಡಲಿದ್ದಾರೆ. ವೃತ್ತಿನಿರತರಾಗಿದ್ದು, ಹಣಕಾಸು ವಿಚಾರದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದೀರಿ ಅಂತಾದಲ್ಲಿ ನಿಮ್ಮ ಸಮಯಪ್ರಜ್ಞೆಯಿಂದ ದೊಡ್ಡ ಮೊತ್ತ ನಷ್ಟವಾಗುತ್ತಿದ್ದುದನ್ನು ತಪ್ಪಿಸಲಿದ್ದೀರಿ. ಇನ್ನು ಸ್ವಂತ ಕಚೇರಿಯನ್ನು ನಡೆಸುತ್ತಿರುವವರಿದ್ದಲ್ಲಿ ಹೊಸ ಶಾಖಾ ಕಚೇರಿಯನ್ನು ಆರಂಭಿಸುವಂಥ ಯೋಗ ಇದೆ. ಸಂಘ- ಸಂಸ್ಥೆಗಳಿಗೆ ಸನ್ಮಾನಗಳು ಆಗುವಂಥ ಯೋಗ ಸಹ ನಿಮ್ಮ ಪಾಲಿಗೆ ಇದೆ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡುವಂಥ ಯೋಗಗಳಿವೆ. ಯಾವುದಾದರೂ ಪ್ರಾಜೆಕ್ಟ್ ಅಥವಾ ಶೈಕ್ಷಣಿಕ ವಿಚಾರಕ್ಕೆ ಸಂಬಂಧಿಸಿದಂತೆಯೇ ದೂರ ಪ್ರಯಾಣ ಮಾಡಬೇಕಾಗಲಿದೆ. ಮಹಿಳೆಯರು ಗಾಸಿಪ್ ಮಾತನಾಡಬೇಡಿ. ಇದರಿಂದ ನಿಮ್ಮ ಬಗ್ಗೆಯೇ ಇತರರು ಕೆಟ್ಟದಾಗಿ ಮಾತನಾಡುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಪ್ರೀತಿ- ಪ್ರೇಮದ ವಿಚಾರಗಳು ಯುವತಿಯರಿಗೆ ಪ್ರಾಮುಖ್ಯ ಪಡೆಯಲಿವೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಹೊಸದಾಗಿ ವ್ಯಾಪಾರ- ವ್ಯವಹಾರ ಶುರು ಮಾಡುವುದಕ್ಕೆ ಬೇಕಾದಂಥ ಹಣಕಾಸಿನ ಹೊಂದಾಣಿಕೆ ಆಗಲಿದೆ. ಇನ್ನು ನಿಮ್ಮ ಮೇಲಧಿಕಾರಿಗಳ ಎದುರು ನೀವು ಪಡುತ್ತಿರುವ ಶ್ರಮ, ಈಗಿನ ಕೆಲಸದಲ್ಲಿ ಎಷ್ಟು ತನ್ಮಯರಾಗಿದ್ದೀರಿ ಎಂಬುದನ್ನು ತೋರಿಸುವುದು ಅನಿವಾರ್ಯ ಎಂಬಂತಾಗುತ್ತದೆ. ಇಲ್ಲದಿದ್ದಲ್ಲಿ ನಿಮ್ಮ ಶ್ರಮ ಇನ್ಯಾರದೋ ಪಾಲಾಗುವ ಸಾಧ್ಯತೆಗಳಿವೆ. ಆದ್ದರಿಂದ ನಿಮ್ಮ ಶ್ರಮವನ್ನು ನಿಜಕ್ಕೂ ಯಾರಿಗೆ ತಲುಪಿಸಬೇಕು, ಅಂದರೆ ತಿಳಿಸಬೇಕು ಅಲ್ಲಿಗೆ ತಲುಪುವಂತೆ ನೋಡಿಕೊಳ್ಳಿ. ಸ್ನೇಹಿತರು ಅಥವಾ ಸಂಬಂಧಿಕರು ಒತ್ತಡ ಹಾಕಿ ಹಣ ಸಾಲ ತೆಗೆದುಕೊಳ್ಳುವಂತೆ ಕೇಳುತ್ತಿದ್ದಾರೆ, ಬಡ್ಡಿ ಕಡಿಮೆ ಹಾಗೂ ಹೆಚ್ಚಿನ ಅವಧಿಗೆ ಸಾಲ ದೊರೆಯುತ್ತದೆ ಎಂಬ ಕಾರಣಕ್ಕೆ ತೆಗೆದುಕೊಳ್ಳುವುದು ಸಮಸ್ಯೆ ಆಗಿ ಪರಿಣಮಿಸಲಿದೆ. ನಿಮಗೆ ಹಣದ ಅಗತ್ಯವಿಲ್ಲ ಎಂದಾದಲ್ಲಿ ಸಾಲ ಪಡೆಯಬೇಡಿ. ಇತರರ ವೈಯಕ್ತಿಕವಾದ ವಿಚಾರ ಇದ್ದಾಗ ಅದರಲ್ಲಿ ತಲೆ ಹಾಕಬೇಡಿ. ಸಾರ್ವಜನಿಕ ಸ್ಥಳ, ಸಭೆ- ಸಮಾರಂಭಗಳಲ್ಲಿ ಮಾತನಾಡುತ್ತೀರಿ ಅಂತಾದಲ್ಲಿ ನಿಮ್ಮ ಮಾತಿನ ಮೇಲೆ ನಿಗಾ ಇಟ್ಟುಕೊಳ್ಳಿ. ವೈಯಕ್ತಿಕ ವಿಚಾರವನ್ನು ಎಲ್ಲರೆದುರು ಹೇಳಿಕೊಳ್ಳುವುದು ಮುಳುವಾಗಬಹುದು. ಕೃಷಿಕರಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವಂಥವರಿಗೆ ಆದಾಯ ಕಡಿಮೆ ಆಗುತ್ತದೆ ಎಂದು ಬಲವಾಗಿ ಅನಿಸುತ್ತದೆ ಅಥವಾ ಖರ್ಚಿನ ಪ್ರಮಾಣ ಆದಾಯಕ್ಕಿಂತ ಬಹಳ ಹೆಚ್ಚಾಯಿತು ಅಂತಾದರೂ ಅನಿಸಬಹುದು. ಒಂದು ವೇಳೆ ನೀವು ಈಗಾಗಲೇ ಸಾಲ ಮಾಡಿದ್ದಲ್ಲಿ ಅದನ್ನು ಕೂಡಲೇ ಹಿಂತಿರುಗಿಸುವಂತೆ ಒತ್ತಡವು ಹೆಚ್ಚಾಗಲಿದೆ. ಕುಟುಂಬಸ್ಥರ ಅಗತ್ಯಕ್ಕಾಗಿ ಉಳಿತಾಯವನ್ನು ಮಾಡುವುದಕ್ಕೆ ಆರಂಭಿಸಲಿದ್ದೀರಿ. ವೃತ್ತಿನಿರತರು ಹೊಸ ವಿಷಯಗಳನ್ನು ಕಲಿತುಕೊಳ್ಳಬೇಕಾದ ಅನಿವಾರ್ಯ ಎದುರಾಗಲಿದೆ. ಹೊಸದಾಗಿ ಕೋರ್ಸ್ ಗಳಿಗೆ ಸೇರಲಿದ್ದೀರಿ. ತಾತ್ಕಾಲಿಕವಾಗಿಯಾದರೂ ನಿಮ್ಮಲ್ಲಿ ಕೆಲವರು ವಿದೇಶಕ್ಕೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣ ಆಗಲಿದೆ. ಇದರಿಂದ ನಿಮ್ಮ ವೃತ್ತಿಬದುಕು ವಿಸ್ತರಿಸುವುದಕ್ಕೆ ಬೇಕಾದಂಥ ಅವಕಾಶಗಳು ತೆರೆದುಕೊಳ್ಳಲಿವೆ. ವಿದ್ಯಾರ್ಥಿಗಳಿಗೆ ಮನೆಯಲ್ಲಿ ಬೈಗುಳ, ಅನುಮಾನದ ಸನ್ನಿವೇಶವನ್ನು ಎದುರಿಸಬೇಕಾಗುತ್ತದೆ. ಪಾರದರ್ಶಕವಾಗಿ ನಡೆದುಕೊಳ್ಳಿ, ಏನನ್ನೂ ಮುಚ್ಚಿಡುವುದಕ್ಕೆ ಹೋಗದಿರಿ. ಮನೆಯಿಂದ ಹೊರಗೆ ಹೋಗುವಾಗ ಸುಳ್ಳು ಹೇಳುವುದಕ್ಕೆ ಹೋಗಬೇಡಿ. ಇತರರ ವಾಹನವನ್ನು ಬಳಸುತ್ತೀರಿ ಅಂತಾದಲ್ಲಿ ಸಾಮಾನ್ಯವಾಗಿ ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನ ಲಕ್ಷ್ಯ ವಹಿಸಿ. ಮಹಿಳೆಯರು ಚಿನ್ನಾಭರಣ ಖರೀದಿ ಮಾಡುವ ಯೋಗ ಇದೆ. ಈಗಾಗಲೇ ಉಳಿತಾಯ ಮಾಡಿದಂಥ ಹಣದಿಂದಲಾದರೂ ಬೆಲೆಬಾಳುವ ಲೋಹದ ಆಭರಣಗಳನ್ನು ಕೊಳ್ಳಲಿದ್ದೀರಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ತಂದೆ-ತಾಯಿಯ ಆರೋಗ್ಯದಲ್ಲಿನ ಏರುಪೇರು ಆತಂಕವನ್ನು ಸೃಷ್ಟಿಸಲಿದೆ. ಔಷಧೋಪಚಾರದಲ್ಲಿನ ವ್ಯತ್ಯಾಸದಿಂದ ಅಲರ್ಜಿ ಆಗಬಹುದು. ಇದೇ ವೇಳೆ ವಿವಾಹಿತರಿಗೆ ಈ ವಾರ ಭಾವನಾತ್ಮಕವಾಗಿ ಬಹಳ ಸವಾಲಿನಿಂದ ಕೂಡಿರುತ್ತದೆ. ಯಾರ ಬಳಿಯಾದರೂ ವ್ಯವಹಾರ- ಒಪ್ಪಂದದ ವಿಚಾರಗಳನ್ನು ಮಾತನಾಡುವ ಮುನ್ನ ಹಣಕಾಸಿನ ಸಂಗತಿಯನ್ನು ಮೊದಲಿಗೆ ಮಾತನಾಡುವುದು ಮುಖ್ಯವಾಗುತ್ತದೆ. ಯಾವುದೇ ಕಾರಣಕ್ಕೂ ಕೆಲಸ ಆದ ಮೇಲೆ ಕೊಟ್ಟರಾಯಿತು ಎಂಬ ಧೋರಣೆ ಬೇಡ. ಈ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ. ನೀವು ಬಹಳ ಇಷ್ಟ ಪಡುವಂಥವರು, ನಂಬುವಂಥವರೇ ನಿಮಗೆ ಹೆಚ್ಚು ನೋವನ್ನು ನೀಡುತ್ತಾರೆ. ದಿಢೀರನೆ ಯಾರ ಸಹವಾಸವೂ ಬೇಡ ಎನಿಸುವುದಕ್ಕೆ ಶುರು ಆಗುತ್ತದೆ. ಸಂಗೀತ, ಯೋಗ, ಧ್ಯಾನ, ಟೈಲರಿಂಗ್, ಫ್ಯಾಷನ್ ಡಿಸೈನಿಂಗ್, ಅಡುಗೆ, ಜಿಮ್ ಏನಾದರೂ ಹೊಸದನ್ನು ಮಾಡುವುದಕ್ಕೆ ತೊಡಗಿಕೊಳ್ಳಲಿದ್ದೀರಿ. ಎಲೆಕ್ಟ್ರಿಕಲ್ ವಾಹನಗಳನ್ನು ಖರೀದಿಸುವ ಯೋಗ ಇದೆ. ಒಂದು ವೇಳೆ ಅದಕ್ಕೆ ಅಗತ್ಯ ಇರುವಷ್ಟು ಹಣ ಇಲ್ಲದಿದ್ದಲ್ಲಿ ಕನಿಷ್ಠ ಪಕ್ಷ ಷೋ ರೂಮ್‌ಗೆ ತೆರಳಿ, ನೋಡಿಕೊಂಡಾದರೂ ಬರುತ್ತೀರಿ. ಕೃಷಿ ವಲಯದಲ್ಲಿ ಇರುವವರು ಭೂಮಿ ಮಾರಾಟ ಮಾಡುವುದಕ್ಕೋ ಅಥವಾ ಇರುವ ಜಮೀನನ್ನು ಸೈಟುಗಳಾಗಿ ಪರಿವರ್ತಿಸಿ, ಮಾರಾಟ ಮಾಡುವುದಕ್ಕೋ ಆಲೋಚನೆ ಮಾಡುತ್ತೀರಿ. ಕೆಲವು ಕಂಪನಿಗಳವರೇ ತಾವಾಗಿ ನಿಮ್ಮ ಜತೆ ಕೈ ಜೋಡಿಸುವುದಕ್ಕೆ ಪ್ರಸ್ತಾವವನ್ನು ತರಲಿದ್ದಾರೆ. ಒಂದು ವೇಳೆ ನಿಮಗೆ ಈಗಾಗಲೇ ಕೋರ್ಟ್- ಕಚೇರಿ ವ್ಯಾಜ್ಯಗಳು ಇದೆ ಎಂದಾದಲ್ಲಿ ಅದನ್ನು ರಾಜೀ- ಸಂಧಾನದ ಮೂಲಕ ಸರಿ ಮಾಡಿಕೊಳ್ಳುವ ಅವಕಾಶಗಳಿವೆ. ವೃತ್ತಿನಿರತರು ಅದೇ ವೃತ್ತಿಯಲ್ಲಿ ಇರುವವರ ಜತೆಗೆ ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಇದ್ದು, ಅದು ಮದುವೆ ಹಂತದ ತನಕ ಹೋಗುತ್ತದೆ. ಈ ವಾರ ಇದೇ ವಿಷಯ ನಿಮ್ಮಲ್ಲಿ ಉಲ್ಲಾಸ ತುಂಬುತ್ತದೆ. ನಿಮ್ಮ ಮನಸ್ಸಿನ ಪ್ರೀತಿಯನ್ನು ಹೇಳಿಕೊಳ್ಳದೆ ಇರುವವರು ಇದ್ದಲ್ಲಿ ಅದನ್ನು ಹೇಳಿಕೊಳ್ಳುವುದಕ್ಕೆ ಬೇಕಾದ ವೇದಿಕೆ ಕೂಡ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಸ್ನೇಹಿತರ ಮಧ್ಯೆ ಬಹಳ ಒಳ್ಳೆ ಹೆಸರು ಬರಲಿದೆ. ಇತರರಿಗೆ ಸಹಾಯಹಸ್ತ ನೀಡಲಿದ್ದೀರಿ. ಪ್ರತಿಷ್ಠಿತ ಸಂಸ್ಥೆಗಳಿಂದ, ಆಡಿಟಿಂಗ್ ಸಂಸ್ಥೆಗಳಿಂದ ಸ್ಟೈಪೆಂಡ್ ಬರುವಂಥ ಕೆಲಸ ಹುಡುಕಿಕೊಂಡು ಬರಲಿದೆ. ನಿಮ್ಮ ಓಡಾಟಕ್ಕೆ ಬೇಕಾದಂಥ ದ್ವಿಚಕ್ರ ವಾಹನವೋ ಅಥವಾ ಕಾರು ಇಂಥದ್ದನ್ನೇ ಖರೀದಿಸುವ ಅವಕಾಶಗಳು ಸಹ ಇವೆ. ಒಟ್ಟಾರೆ ಭವಿಷ್ಯದ ವೃತ್ತಿ ಜೀವನದ ಬಗ್ಗೆ ಗಂಭೀರ ಆಲೋಚನೆ ಮಾಡಲಿದ್ದೀರಿ. ಮಹಿಳೆಯರು ರಾಜಕಾರಣದಲ್ಲಿ ಇದ್ದಲ್ಲಿ ಹೊಸ ಜವಾಬ್ದಾರಿಗಳು ಬರಲಿವೆ. ನೀವು ನಿರೀಕ್ಷೆಯೇ ಮಾಡಿರದಂಥ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಜತೆಗೆ ನಿಮ್ಮ ಖ್ಯಾತಿ ಜಾಸ್ತಿ ಆಗುತ್ತದೆ.

ದೇವದತ್ ಪಡಿಕ್ಕಲ್ 4ನೇ ಅರ್ಧಶತಕ: ಹುಬ್ಬಳ್ಳಿ ಟೈಗರ್ಸ್​ಗೆ ಭರ್ಜರಿ ಜಯ
ದೇವದತ್ ಪಡಿಕ್ಕಲ್ 4ನೇ ಅರ್ಧಶತಕ: ಹುಬ್ಬಳ್ಳಿ ಟೈಗರ್ಸ್​ಗೆ ಭರ್ಜರಿ ಜಯ
ಉಫ್... ಅತ್ಯದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಜ್ಯುವೆಲ್
ಉಫ್... ಅತ್ಯದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಜ್ಯುವೆಲ್
Daily Devotional: ಶ್ರಾವಣ ಮಾಸದ ಅಮಾವಾಸ್ಯೆ ಪೂಜಾ ವಿಧಿ-ವಿಧಾನ ತಿಳಿಯಿರಿ
Daily Devotional: ಶ್ರಾವಣ ಮಾಸದ ಅಮಾವಾಸ್ಯೆ ಪೂಜಾ ವಿಧಿ-ವಿಧಾನ ತಿಳಿಯಿರಿ
ಶ್ರಾವಣ ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
ಶ್ರಾವಣ ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
ಇದ್ದಕ್ಕಿದ್ದಂತೆ ಚಲಿಸಿ ಒಬ್ಬ ವ್ಯಕ್ತಿಯ ಜೀವ ಬಲಿ ಪಡೆದ ಟಾಟಾ ಹ್ಯಾರಿಯರ್!
ಇದ್ದಕ್ಕಿದ್ದಂತೆ ಚಲಿಸಿ ಒಬ್ಬ ವ್ಯಕ್ತಿಯ ಜೀವ ಬಲಿ ಪಡೆದ ಟಾಟಾ ಹ್ಯಾರಿಯರ್!
ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ