
ಬೆಂಗಳೂರು, ಆಗಸ್ಟ್ 31: ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ 31ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಮೇಲಿನ ಆರೋಪ ಅಥವಾ ನಿಂದೆಯಿಂದ ಕಳಚಿಕೊಂಡು ಹೊರಬರುವಂಥ ಯೋಗ ಈ ದಿನ ನಿಮಗೆ ಇದೆ. ಒಂದೋ ನಿಜವಾದ ತಪ್ಪಿತಸ್ಥರು ಯಾರು ಎಂಬುದು ಬಯಲಾಗಬಹುದು ಅಥವಾ ಮಾತನಾಡುವ ವೇಳೆ ಅಚಾನಕ್ ಆಗಿ ಈ ವಿಚಾರ ಹೊರಬಹುದು. ಹಣಕಾಸಿಗೆ ನೀವು ಶ್ರಮ ಪಡುತ್ತಾ ಇದ್ದಲ್ಲಿ ಸ್ನೇಹಿತರು ಅಥವಾ ಸಂಬಂಧಿಕರ ಪೈಕಿ ಕೆಲವರು ಮುಂದೆ ಬಂದು, ತಾವು ನೆರವು ನೀಡುವುದಾಗಿ ಹೇಳಬಹುದು. ನಿಮ್ಮಲ್ಲಿ ಯಾರು ದೂರದ ಪ್ರದೇಶಗಳಲ್ಲಿ ಜಮೀನು ಖರೀದಿ ಮಾಡಬೇಕು ಎಂದೇನಾದರೂ ಪ್ರಯತ್ನವನ್ನು ಪಡುತ್ತಾ ಇದ್ದೀರಿ ಅಂಥವರಿಗೆ ಮನಸ್ಸಿಗೆ ಒಪ್ಪುವಂಥ ಸ್ಥಳ ಇರುವ ಬಗ್ಗೆ ಮಾಹಿತಿ ದೊರೆಯಲಿದೆ ಅಥವಾ ನೀವು ಈಗಾಗಲೇ ಹೇಳಿಟ್ಟಿರುವ ವ್ಯಕ್ತಿಗಳು ಈ ಬಗ್ಗೆ ನಿಮಗೆ ಹೇಳುವ ಸಾಧ್ಯತೆ ಇದೆ. ಹಾಲು, ಮೊಸರು, ಬೆಣ್ಣೆ, ತುಪ್ಪ ಇವುಗಳ ಮಾರಾಟ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಹೆಚ್ಚಳವಾಗಲಿದೆ.
ಕೈ ತೋಳು ನೋವು ನಿಮಗೆ ವಿಪರೀತವಾಗಿ ಕಾಡಬಹುದು. ಭಾರವಾದ ವಸ್ತುಗಳನ್ನು ಎತ್ತುತ್ತಾ ಇದ್ದೀರಿ ಅಥವಾ ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಿಸುತ್ತಾ ಇದ್ದೀರಿ ಅಂತಾದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಎಚ್ಚರಿಕೆಯನ್ನು ವಹಿಸಬೇಕು. ಕುಟುಂಬದವರ ಜೊತೆಗೆ ಹತ್ತಿರದ ಸ್ಥಳಕ್ಕಾದರೂ ಕಿರು ಪ್ರವಾಸಕ್ಕೆ ತೆರಳುವಂಥ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ನಿಮ್ಮಲ್ಲಿ ಯಾರು ಕಾರು ಖರೀದಿ ಮಾಡಬೇಕು ಎಂದುಕೊಳ್ಳುತ್ತಿದ್ದೀರಿ, ಅಂಥವರು ಕಾರು ಬುಕ್ ಮಾಡಬೇಕು ಎಂದು ತೀರ್ಮಾನ ಗಟ್ಟಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಮನೆಯಲ್ಲಿ ಮಾತುಕತೆ ನಡೆಯುತ್ತಿದೆ ಆದರೆ ಅಂತಿಮ ರೂಪ ಪಡೆದುಕೊಳ್ಳುತ್ತಿಲ್ಲ ಎಂಬ ಚಿಂತೆ ಕಾಡುತ್ತಾ ಇದ್ದಲ್ಲಿ ಈ ವಿಷಯ ಬಗೆಹರಿಸಿಕೊಳ್ಳುವುದಕ್ಕೆ ವೇದಿಕೆ ದೊರೆಯಲಿದೆ. ಕೌಟುಂಬಿಕ ವ್ಯವಹಾರ ಮುಂದುವರಿಸಿಕೊಂಡು ಬಂದಿರುವವರು ಬದಲಾವಣೆ ಮಾಡಿಕೊಳ್ಳುವ ಚಿಂತನೆ ಮಾಡಲಿದ್ದೀರಿ.
ನಿಮ್ಮಲ್ಲಿ ಕೆಲವರು, ಯಾಕೋ ಜೀವನ ಸಪ್ಪೆ ಸಪ್ಪೆ ಎನಿಸುತ್ತಿದೆ ಎಂದೆನಿಸಿ ಕೆಲವು ಸಾಹಸಕ್ಕೆ ಮುಂದಾಗಲಿದ್ದೀರಿ. ನಿಮ್ಮ ವೈಯಕ್ತಿಕ ವಿಚಾರ, ಅದು ಇತರರಿಗೆ ಗೊತ್ತಾಗುವುದು ಬೇಡ ಅಥವಾ ಹೆಚ್ಚು ಪ್ರಚಾರ ಆಗುವುದು ಬೇಡ ಅಂದುಕೊಂಡಿದ್ದೀರೋ ಅದು ಪ್ರಚಾರಕ್ಕೆ ಬರಲಿದೆ. ಸಣ್ಣ ಅಳತೆಯ ಸೈಟು ಅಥವಾ ಮನೆ ಖರೀದಿ ಮಾಡಬೇಕು ಎಂದು ಪ್ರಯತ್ನ ಮಾಡುತ್ತಿರುವವರಿಗೆ ಅಂಥದ್ದು ದೊರೆಯುವ ಯೋಗ ಈ ದಿನ ಇದೆ. ಅದಕ್ಕೆ ಅಡ್ವಾನ್ಸ್ ಸಹ ನೀಡುವ ಸಾಧ್ಯತೆಗಳು ಇವೆ. ಮೊದಲಿಗೆ ತಮ್ಮ ಜವಾಬ್ದಾರಿ ಎಂದು ಕೆಲವರು ನಿಮ್ಮ ಬಳಿ ಹೇಳಿದ್ದವರು ಏಕಾಏಕಿ ಅದನ್ನು ಮಾಡಿಕೊಡುವುದಕ್ಕೆ ಆಗುವುದಿಲ್ಲ ಅಂತಲೋ ಅಥವಾ ಆ ರೀತಿಯಾಗಿ ತಾವು ಹೇಳಿಯೇ ಇಲ್ಲ ಎಂದು ವಾದಿಸುವುದಕ್ಕೆ ಶುರು ಮಾಡಬಹುದು. ಲೆಕ್ಕಪತ್ರದ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರಿಗೆ ಒತ್ತಡದ ಸನ್ನಿವೇಶ ಇರುತ್ತದೆ.
ನಿಮಗೆ ಇಷ್ಟ ಇಲ್ಲದಿದ್ದರೂ ಕೆಲವು ಸ್ಥಳಗಳಿಗೆ ತೆರಳಬೇಕಾಗುತ್ತದೆ ಅಥವಾ ಕೆಲವು ವ್ಯಕ್ತಿಗಳ ಪರವಾಗಿ ಮಾತನಾಡಬೇಕಾಗುತ್ತದೆ. ತೀರಾ ಅಗತ್ಯ ಇತ್ತು ಎಂಬ ಕಾರಣಕ್ಕೆ ಈ ಹಿಂದೆ ನೀವು ಯಾರ ಬಳಿ ಹಣವನ್ನು ಕೇಳಿದ್ದಿರೋ ಅದೇ ವಿಚಾರವನ್ನು ಮುಂದೆ ಮಾಡಿಕೊಂಡು ಈಗ ನಿಮ್ಮ ಬಗ್ಗೆ ಹಗುರವಾಗಿ ಮಾತುಗಳನ್ನು ಆಡಲಿದ್ದಾರೆ. ಯಾವುದಾದರೂ ಕಾರ್ಯಕ್ರಮ- ಸಮಾರಂಭ ಅಂತಲೋ ಅಥವಾ ಹಾಗೇ ಲೋಕಾರೂಢಿಗೆ ಅಂತ ಸಂಬಂಧಿಕರ ಮನೆಗೆ ತೆರಳಬೇಕು ಎಂದುಕೊಂಡಿರುವವರು ಸಾಧ್ಯವಾದಷ್ಟೂ ಇಂಥ ಸನ್ನಿವೇಶ ಎದುರಾಗದಂತೆ ನೋಡಿಕೊಳ್ಳಿ. ಸರ್ಕಾರಿ ದಾಖಲೆ- ಪತ್ರಗಳಿಗೆ ಸಂಬಂಧಿಸಿದಂತೆ ಆಗಬೇಕಾದ ಕೆಲಸಗಳು ಬಹಳ ದಿನದಿಂದ ತಡೆಯಾಗಿ ನಿಂತುಬಿಟ್ಟಿವೆ ಎಂದಾದಲ್ಲಿ ವ್ಯಕ್ತಿಯೊಬ್ಬರು ನಿಮಗೆ ಪರಿಚಯವಾಗಿ, ಅದನ್ನು ಮಾಡಿಕೊಡುವುದಾಗಿ ಭರವಸೆ ನೀಡಲಿದ್ದಾರೆ.
ಮನಸ್ಸು ಬಹಳ ಉಲ್ಲಾಸದಿಂದ ಇರುತ್ತದೆ. ಯಾವುದರಿಂದ ಅಂತರ ಕಾಯ್ದುಕೊಳ್ಳಬೇಕು, ಯಾವ ವ್ಯಕ್ತಿಗಳ ಸಹವಾಸವೇ ಬೇಡ, ಅಂಥವರನ್ನು ದೂರ ಇಡಬೇಕು ಎಂದುಕೊಳ್ಳುತ್ತಾ ಬಂದಿರುತ್ತೀರೋ ಅದು ಸಾಧ್ಯವಾಗಲಿದೆ. ನಿಮ್ಮಲ್ಲಿ ಯಾರು ಕಲೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಂಥ ಕಲಾವಿದರು ಇದ್ದೀರೋ ಅಂಥವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಇದರಿಂದ ನಿಮ್ಮ ಆದಾಯ ಸಹ ವೃದ್ಧಿ ಆಗುವ ಅವಕಾಶಗಳು ಇವೆ. ನೀರಿಗೆ ಸಂಬಂಧಿಸಿದ ವ್ಯವಹಾರವನ್ನು ಮಾಡುತ್ತಿರುವವರಿಗೆ ವಿಸ್ತರಣೆಗೆ ಅವಕಾಶಗಳು ತೆರೆದುಕೊಳ್ಳಲಿವೆ. ಕೆಲವರು ತಾವು ಬಂಡವಾಳವನ್ನು ಹೂಡುವುದಾಗಿಯೂ ಈಗಿನ ವ್ಯವಹಾರವನ್ನು ಇನ್ನಷ್ಟು ಹೆಚ್ಚು ಮಾಡುವುದಕ್ಕೆ ಮುಂದಾಗುವಂತೆಯೂ ಪ್ರೋತ್ಸಾಹ ನೀಡಬಹುದು. ಹಳೇ ಗೆಳೆಯರು- ಗೆಳತಿಯರ ಭೇಟಿಯಿಂದಾಗಿ ಸಂತಸದ ಕ್ಷಣಗಳನ್ನು ಕಳೆಯಲಿದ್ದೀರಿ.
ಲೇವಾದೇವಿ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಮುಜುಗರದ- ಇಕ್ಕಟ್ಟಿನ ಸನ್ನಿವೇಶ ಎದುರಾಗಲಿದೆ. ಈ ಹಿಂದೆ ನೀವು ಯಾರಿಗೆ ಯಾವುದೇ ಸಮಯದಲ್ಲಾದರೂ ಸಾಲ ನೀಡುವುದಾಗಿ ಮಾತು ನೀಡಿರುತ್ತೀರೋ ಅಂಥ ವ್ಯಕ್ತಿಯು ಈಗ ನಿಮ್ಮ ಬಳಿಗೆ ಬರಲಿದ್ದಾರೆ. ಅವರ ಸದ್ಯದ ಪರಿಸ್ಥಿತಿ ಹಾಗೂ ಅವರ ಬಗ್ಗೆ ಇತರರು ಹೇಳುವಂಥ ವಿಚಾರಗಳು ನಿಮ್ಮನ್ನು ಚಿಂತೆಗೆ ಗುರಿ ಮಾಡಲಿವೆ. ಕುಟುಂಬದವರು ಸಿನಿಮಾ, ಹೋಟೆಲ್ ಅಥವಾ ರೆಸ್ಟೋರೆಂಟ್ ಗೆ ತೆರಳುವ ಪ್ಲಾನ್ ಮಾಡಲಿದ್ದು, ಇದು ನಿಮಗೆ ನಿರೀಕ್ಷೆಗಿಂತ ಹೆಚ್ಚಿನ ಖರ್ಚನ್ನು ಮಾಡಿಸಬಹುದು. ನಿಮ್ಮ ಬಜೆಟ್ ಏನಿದೆಯೋ ಅಷ್ಟರಲ್ಲಿಯೇ ಪ್ಲಾನ್ ಮಾಡುವುದು ಉತ್ತಮ. ಕೈ ಮೀರಿದ ಖರ್ಚಿಗೆ ಸಿಕ್ಕಿಹಾಕಿಕೊಳ್ಳಬೇಡಿ. ಇನ್ನು ಯಾರು ಬಾಡಿಗೆ ಮನೆಯಲ್ಲಿ ವಾಸವಿದ್ದೀರಿ, ಅಂಥವರು ಅಲ್ಲಿಂದ ಖಾಲಿ ಮಾಡಿ, ಹೊಸ ಮನೆಗೆ ಹೋಗಿಬಿಡಬೇಕು ಎಂದು ಬಲವಾಗಿ ಅನಿಸುವುದಕ್ಕೆ ಶುರುವಾಗಲಿದೆ.
ಹಣಕಾಸಿನ ಆದಾಯ ನಿಮ್ಮ ನಿರೀಕ್ಷೆಗೆ ತಕ್ಕಂತೆ ಆಗುತ್ತಿಲ್ಲ ಅಥವಾ ನಿಮಗೆ ಬರುತ್ತಿರುವ ಹಣವನ್ನು ಅಂದುಕೊಂಡ ರೀತಿಯಲ್ಲಿ ಉಳಿಸಿಕೊಳ್ಳಲಿಕ್ಕೆ ಆಗುತ್ತಿಲ್ಲ ಎಂಬುದು ನಿಮ್ಮಲ್ಲಿ ಕೆಲವರಿಗೆ ಆಲೋಚನೆಗೆ ಕಾರಣ ಆಗಲಿದೆ. ನಿಮ್ಮಲ್ಲಿ ಯಾರು ಉದ್ಯೋಗ ಬದಲಾವಣೆ ಮಾಡಬೇಕು ಎಂದುಕೊಂಡು ಪ್ರಯತ್ನವನ್ನು ಆರಂಭಿಸಿದ್ದೀರೋ ಅಂಥವರಿಗೆ ಅನುಕೂಲ ಮಾಡಿಕೊಡುವಂಥ ವ್ಯಕ್ತಿಗಳನ್ನು ಭೇಟಿ ಮಾಡುವ ಅವಕಾಶಗಳು ಈ ದಿನ ಇವೆ. ಪುಸ್ತಕ ಮುದ್ರಣದ ವ್ಯವಹಾರ ಮಾಡುವವರಿಗೆ ದೊಡ್ಡ ಮಟ್ಟದ ಆರ್ಡರ್ ದೊರೆಯುವ ಅವಕಾಶಗಳು ಇವೆ. ಮಕ್ಕಳ ಶಿಕ್ಷಣದ ಸಲುವಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ದ್ವಿಚಕ್ರ ವಾಹನದ ಅಗತ್ಯ ಇದೆಯೆಂದು ನಿರ್ಧರಿಸಿ, ಅದಕ್ಕೆ ಈ ದಿನ ಅಡ್ವಾನ್ಸ್ ನೀಡುವಂಥ ಅಥವಾ ಖರೀದಿ ಮಾಡಿಯೇ ಬಿಡುವ ಸಾಧ್ಯತೆಗಳು ಈ ದಿನ ಇವೆ.
ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ಆಲೋಚನೆ ಮಾಡಿಟ್ಟುಕೊಳ್ಳುತ್ತೀರಿ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂಥದ್ದಕ್ಕೆ ಏನು ಮಾತನಾಡಬೇಕು ಅಂತಲೂ ಅಥವಾ ನಿಮ್ಮ ಗುಣ- ಸ್ವಭಾವದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಅಂತಾದಲ್ಲಿ ಅದರ ಬಗ್ಗೆಯೂ ಆಲೋಚನೆಯನ್ನು ಮಾಡಲಿದ್ದೀರಿ. ವಿವಾಹಿತರು ಇದ್ದಲ್ಲಿ ಪತ್ನಿಯ ಆರೋಗ್ಯವು ನಿಮಗೆ ಚಿಂತೆಯನ್ನು ತರಬಹುದು. ಈಗಾಗಲೇ ಸೈಟು ಇರುವಂಥವರು ಆ ಜಾಗದಲ್ಲಿ ಮನೆ ನಿರ್ಮಾಣ ಮಾಡುವುದಕ್ಕೋ ಅಥವಾ ಆ ಸ್ಥಳದಲ್ಲಿ ವ್ಯವಹಾರ ಏನಾದರೂ ಆರಂಭ ಮಾಡುವ ಬಗ್ಗೆ ತೀರ್ಮಾನ ಮಾಡುವ ಸಾಧ್ಯತೆಗಳಿವೆ. ಸಂಬಂಧಿಕರ ಪೈಕಿ ಕೆಲವರು ಸಹಾಯ ಕೇಳಿಕೊಂಡು ಬರಬಹುದು. ಈ ವಿಚಾರದಲ್ಲಿ ಆಲೋಚಿಸಿ, ತೀರ್ಮಾನಿಸುವುದು ಮುಖ್ಯವಾಗುತ್ತದೆ. ಸ್ವಂತ ವ್ಯವಹಾರ ಮಾಡುತ್ತಿರುವವರು ಅದರ ವಿಸ್ತರಣೆಗೆ ಬ್ಯಾಂಕ್- ಬ್ಯಾಂಕೇತರ ಸಂಸ್ಥೆಗಳಲ್ಲಿ ಸಾಲಕ್ಕಾಗಿ ಪ್ರಯತ್ನಿಸಲು ಚಿಂತನೆ ನಡೆಸುತ್ತೀರಿ.
ನಿಮ್ಮ ಶ್ರಮ, ಸಾಧನೆಗಳನ್ನು ಗುರುತಿಸುವ ಕೆಲಸ ಈ ದಿನ ಆಗುತ್ತದೆ. ಕುಟುಂಬ ಸದಸ್ಯರ ಸಲುವಾಗಿ ನಿಮ್ಮಲ್ಲಿ ಕೆಲವರು ಹಣವನ್ನು ಧಾರಾಳವಾಗಿ ಖರ್ಚು ಮಾಡಲಿದ್ದೀರಿ. ಇದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಸಂತೋಷ ದೊರೆಯಲಿದೆ. ಕಣ್ಣಿನ ಆರೋಗ್ಯದ ಬಗ್ಗೆ ಮಾತ್ರ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಮುಖ್ಯವಾಗುತ್ತದೆ. ಬೆಲೆಬಾಳುವ ವಸ್ತುಗಳನ್ನು ನೀವು ಜೋಪಾನವಾಗಿ ಇಡುವಂಥ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಲ್ಲಿ ಅದನ್ನು ಸರಿಯಾಗಿ ನಿರ್ವಹಿಸುವುದು ಮುಖ್ಯವಾಗುತ್ತದೆ. ವಿವಾಹ ವಯಸ್ಕರಾಗಿದ್ದು ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸೂಕ್ತ ಸಂಬಂಧ ದೊರೆಯುವ ಅವಕಾಶಗಳು ದೊರೆಯಲಿವೆ. ವಿದೇಶಕ್ಕೆ ತೆರಳಬೇಕು ಎಂದು ಪ್ರಯತ್ನ ಮಾಡುತ್ತಾ ಇದ್ದಲ್ಲಿ ಅಂಥವರಿಗೆ ಇಲ್ಲಿಯ ತನಕ ಅಡೆತಡೆಗಳು ಇದ್ದಲ್ಲಿ ಅದು ನಿವಾರಣೆ ಆಗುವ ಸಾಧ್ಯತೆಗಳು ಹೆಚ್ಚಿವೆ.
ಲೇಖನ- ಎನ್.ಕೆ.ಸ್ವಾತಿ