ಯಾರು- ಏನಾದರೂ ಅಂದುಕೊಳ್ಳಲಿ, ನನಗೆ ಬೇಕಾದಂತೆಯೇ ನಾನಿರುತ್ತೇನೆ ಎಂಬ ಧೋರಣೆಯಲ್ಲಿ ನೀವು ಈ ದಿನ ಇರಲಿದ್ದೀರಿ. ಸ್ವಂತಕ್ಕಾಗಿ ಖರೀದಿ ಮಾಡಿದ್ದ ವಸ್ತುಗಳನ್ನು ಕೇಳಿಕೊಂಡು ಬರುವ ಕೆಲವು ಸ್ನೇಹಿತರಿಗೆ ಅಥವಾ ಸಂಬಂಧಿಕರಿಗೆ ಮುಲಾಜಿಲ್ಲದೆ “ಆಗಲ್ಲ” ಎಂಬ ಉತ್ತರವನ್ನು ನೀಡಲಿದ್ದೀರಿ. ಪ್ರೀತಿಯಲ್ಲಿ ಇರುವವರಿಗೆ ಅಭಿಪ್ರಾಯ ಭೇದಗಳು- ಮನಸ್ತಾಪ ಕಾಣಿಸಿಕೊಳ್ಳಬಹುದು. ಈ ಹಿಂದೆ ನಿಧಾನವಾಗಿ ಆಗಲಿ ಅಂದುಕೊಂಡಿದ್ದ ಕೆಲಸಕ್ಕೆ ಬೇಗ ಆಗಲಿ ಎಂದು ಒತ್ತಡ ಹಾಕುವುದಕ್ಕೆ ಹೋಗಬೇಡಿ. ಒಟ್ಟಾರೆ ಹೇಳಬೇಕು ಅಂದರೆ, ನಿಮ್ಮ ಮಾನಸಿಕ ಸ್ಥಿತಿ ಒಂದು ರೀತಿಯ ಉದ್ವಿಗ್ನತೆಯಿಂದ ಇರಲಿದ್ದು, ಸಾಮಾನ್ಯ ದಿನಗಳಲ್ಲಿ ಇರುವಂಥ ಸ್ಥಿಮಿತತೆ ಇರುವುದಿಲ್ಲ. ಯಾರದೋ ಮೇಲಿನ ಸಿಟ್ಟನ್ನು ಎಲ್ಲರ ಮೇಲೂ ತೋರಿಸುತ್ತಾ ಹೋದಲ್ಲಿ ಸಂಬಂಧ- ಸ್ನೇಹ ಎಲ್ಲವೂ ಹಾಳಾಗುತ್ತದೆ. ಸಾಧ್ಯವಾದಲ್ಲಿ ಈ ದಿನ ಹತ್ತು ನಿಮಿಷಗಳ ಕಾಲ ಧ್ಯಾನವನ್ನು ಮಾಡುವುದಕ್ಕೆ ಪ್ರಯತ್ನಿಸಿ.
ನಿಶ್ಚಿತವಾದ ಆದಾಯ ಮಾಡಿಕೊಳ್ಳುವುದಕ್ಕೆ ದಾರಿ ಕಂಡುಕೊಳ್ಳಲೇಬೇಕು ಎಂಬುದು ಹಠವಾಗಿ ಮಾರ್ಪಡಲಿದೆ. ಅದಕ್ಕಾಗಿ ಇರುವಂಥ ಎಲ್ಲ ಮಾರ್ಗಗಳನ್ನು ಆಳೆದು- ತೂಗಿ ನೋಡುವುದಕ್ಕೆ ಆರಂಭಿಸುತ್ತೀರಿ. ಕೆಲವರ ಜತೆಗೆ ಪಾರ್ಟನರ್ ಷಿಪ್ ಮಾಡುವುದಕ್ಕೆ ನೀವಾಗಿಯೇ ಮಾತುಕತೆ ಶುರು ಮಾಡಲಿದ್ದೀರಿ. ಹಣವನ್ನು ಸಾಲವಾಗಿ ನೀಡಿ, ಅದು ನೀಡುವುದಾಗಿ ಹೇಳಿದ್ದ ಸಮಯವು ಮೀರಿ ಹೋದರೂ ಅದನ್ನು ಹಿಂತಿರುಗಿಸುವ ಬಗ್ಗೆ ಮಾತನಾಡುವುದನ್ನೇ ಬಿಟ್ಟಿದ್ದಾರೆ ಎಂದಾಗಿದ್ದಲ್ಲಿ ಈ ದಿನ ಅದಕ್ಕಾಗಿ ಪ್ರಯತ್ನಿಸಿ. ಸ್ವಲ್ಪ ಗಟ್ಟಿಯಾಗಿ ಯತ್ನ ಮಾಡಿದಲ್ಲಿ ನಿರ್ದಿಷ್ಟ ದಿನವನ್ನೇ ಖಾತ್ರಿಯಾಗಿ ತಿಳಿಸುವ ಸಾಧ್ಯತೆಗಳಿವೆ. ಸಂಗಾತಿ ಕಡೆಯ ಸಂಬಂಧಿಕರು ಮನೆಗೆ ಬರುವುದರಿಂದ ಕೆಲ ಸಮಯ ಗೊಂದಲದ ವಾತಾವರಣ ಸೃಷ್ಟಿಯಾಗಲಿದೆ. ಈ ಮುಂಚೆಯೇ ಅಂದುಕೊಂಡಿದ್ದ ಕೆಲವು ಕಾರ್ಯಕ್ರಮಗಳಿಗೆ ಹೋಗಲಿಕ್ಕೆ ಆಗದಿರಬಹುದು.
ಈ ದಿನ ಯಾರಿಗೂ ಸರ್ ಪ್ರೈಸ್ ಕೊಡುವ ಪ್ರಯತ್ನವನ್ನು ಮಾಡುವುದಕ್ಕೆ ಹೋಗಬೇಡಿ. ಇದರಿಂದ ನಿಮ್ಮ ನೆಮ್ಮದಿ ಹಾಳಾಗಬಹುದು, ಎಚ್ಚರ. ಮುಖ್ಯವಾದ ಕೆಲಸ- ಕಾರ್ಯಗಳಿಗೆ ತೆರಳುವಾಗ ಕೊನೆ ಕ್ಷಣದ ಆತುರದಿಂದಾಗಿ ಅಲ್ಲಿಗೆ ತೆಗೆದುಕೊಂಡು ಹೋಗಲೇಬೇಕಾಗಿದ್ದ ಕೆಲವು ವಸ್ತುಗಳನ್ನು ಮರೆತು ಹೋಗುವ ಸಾಧ್ಯತೆಗಳು ಸಹ ಇವೆ. ಯಾವ ಕೆಲಸ ಆದ ಮೇಲೆ ಯಾವುದು ಎಂಬ ಬಗ್ಗೆ ಒಂದು ವೇಳಾಪಟ್ಟಿ ಮಾಡಿಟ್ಟುಕೊಳ್ಳುವುದು ಉತ್ತಮ. ಸಾವಯುವ ಕೃಷಿ ಮಾಡುವಂಥ ಕೃಷಿಕರಿಗೆ ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳುವ ಅವಕಾಶಗಳು ದೊರೆಯಲಿವೆ. ಈ ಹಿಂದೆ ಅರ್ಧಕ್ಕೆ ನಿಂತಿದ್ದ ಮಾತುಕತೆ- ಒಪ್ಪಂದ ಮತ್ತೆ ಚಾಲನೆ ಪಡೆದುಕೊಳ್ಳುವ ಅವಕಾಶಗಳಿವೆ. ಕುಟುಂಬ ಸದಸ್ಯರ ಪೈಕಿ ಒಬ್ಬರಿಗೆ ಹಣಕಾಸಿನ ತೀವ್ರ ಅಗತ್ಯ ಕಂಡುಬರಲಿದ್ದು, ಅದಕ್ಕೆ ಬೇಕಾದ ಹೊಂದಾಣಿಕೆ ಮಾಡುವುದಕ್ಕೆ ಹೆಚ್ಚಿನ ಓಡಾಟ ಮಾಡಬೇಕಾದ ಪರಿಸ್ಥಿತಿ ಉದ್ಭವಿಸಲಿದೆ.
ನೀವು ಪ್ರಯತ್ನ ಮಾಡುತ್ತಿದ್ದ ಹಣಕಾಸು ಹೊಂದಾಣಿಕೆ ಪ್ರಯತ್ನಗಳು ಫಲ ನೀಡುವ ಸಾಧ್ಯತೆಗಳ ಬಗ್ಗೆ ಸುಳಿವು ದೊರೆಯಲಿವೆ. ವಿದೇಶಗಳಲ್ಲಿ ಉದ್ಯೋಗ- ವ್ಯಾಸಂಗಕ್ಕಾಗಿ ಪ್ರಯತ್ನಿಸುತ್ತಿದ್ದು, ವೀಸಾ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಅಡೆತಡೆಗಳು ಎದುರಾಗಿದ್ದಲ್ಲಿ ಅದನ್ನು ನಿವಾರಿಸಿಕೊಡುವುದಾಗಿ ಕೆಲವರು ನಿಮಗೆ ಭರವಸೆ ನೀಡಲಿದ್ದಾರೆ. ಇನ್ನು ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಒತ್ತಡದ ಸನ್ನಿವೇಶಗಳು ಎದುರಾಗಲಿವೆ. ನಿಮ್ಮ ಮನಸ್ಸಲ್ಲಿ ಇರುವ ಗುರಿಯನ್ನು ತಲುಪುವುದಕ್ಕೆ ಜತೆಯಲ್ಲಿ ಇರುವವರು ಸೂಕ್ತ ಸಹಕಾರ ನೀಡುತ್ತಿಲ್ಲ ಎಂಬುದು ಆಕ್ಷೇಪಕ್ಕೆ ಕಾರಣ ಆಗಲಿದೆ. ಮನೆಯಲ್ಲಿ ಇರುವಂಥ ಕೆಲವು ಪೀಠೋಪಕರಣಗಳನ್ನು ಮಾರಾಟ ಮಾಡುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಸೋದರ ಸಂಬಂಧಿಗಳ ಮನೆಯಲ್ಲಿನ ಕಾರ್ಯಕ್ರಮಕ್ಕೆ ನೀವು ಓಡಾಟ ನಡೆಸುವಂತೆ ಕೇಳಿಕೊಳ್ಳಲಿದ್ದಾರೆ. ಹಣಕಾಸಿನ ನೆರವನ್ನು ಸಹ ನೀಡ ಬೇಕಾಗಬಹುದು ಎಂದು ನಿಮಗೇ ಅನಿಸಲಿದೆ.
ಚಿನ್ನ ಅಥವಾ ಪ್ಲಾಟಿನಂ ಆಭರಣದ ಖರೀದಿಯನ್ನು ಮಾಡುವುದಕ್ಕೆ ಸಣ್ಣ ಮೊತ್ತವಾದರೂ ಅಡ್ವಾನ್ಸ್ ನೀಡುವಂಥ ಯೋಗ ಇದೆ. ತಾಯಿ ಮನೆ ಕಡೆಯ ಸಂಬಂಧಿಕರು ಈ ದಿನ ಸಹಾಯ ಕೇಳಿಕೊಂಡು ಬರಬಹುದು. ಇನ್ನು ನೀವೇನಾದರೂ ಸೈಟ್, ಕಟ್ಟಿರುವಂಥ ಮನೆ ಅಥವಾ ಜಮೀನಿಗಾಗಿ ಯಾರಿಗಾದರೂ ಹೇಳಿಟ್ಟಿದ್ದೀರಿ ಅಂತಾದರೆ, ಅಂಥವರ ಪೈಕಿ ಯಾರಾದರೂ ನಿಮ್ಮ ಮನಸ್ಸಿಗೆ ಒಪ್ಪುವಂತಹ ಪ್ರಸ್ತಾವವನ್ನು ತರುವಂಥ ಯೋಗ ಇದೆ. ಅಡುಗೆ ಕಾಂಟ್ರಾಕ್ಟ್ ತೆಗೆದುಕೊಳ್ಳುವವರು, ಕಾಂಡಿಮೆಂಟ್ಸ್ ನಡೆಸುವಂಥವರಿಗೆ ದೊಡ್ಡ ಆರ್ಡರ್ ಗಳು ಬರಲಿವೆ ಹಾಗೂ ಆದಾಯದ ಪ್ರಮಾಣ ಮತ್ತು ಮೂಲ ಎರಡರಲ್ಲೂ ಏರಿಕೆಯನ್ನು ಕಾಣಲಿದ್ದೀರಿ. ಸಂಬಂಧದಲ್ಲಿಯೇ ವಧು ಅಥವಾ ವರಾನ್ವೇಷಣೆ ನಡೆದಿದ್ದಲ್ಲಿ ಸಕಾರಾತ್ಮಕವಾದ ಸ್ಪಂದನೆ ದೊರೆಯುವ ಸೂಚನೆಗಳು ದೊರೆಯಲಿವೆ. ಬಾಲ್ಯದ ಗೆಳೆಯ/ಗೆಳತಿಯರ ಭೇಟಿಯಿಂದ ಮನಸ್ಸಿಗೆ ಸಂತೋಷ ಹಾಗೂ ಅವರ ಜೊತೆಗಿನ ಮಾತುಕತೆಯಿಂದ ಸಮಾಧಾನ ದೊರೆಯಲಿದೆ.
ನಿಮ್ಮ ಫೋನ್ ಕರೆಯನ್ನು ಸ್ವೀಕರಿಸಲಿಲ್ಲ ಅಂತಲೋ ಅಥವಾ ನೀವು ಕಳಿಸಿದ ಸಂದೇಶಕ್ಕೆ ಪ್ರತಿಕ್ರಿಯಿಸಲಿಲ್ಲ ಎಂಬ ಕಾರಣಕ್ಕೋ ಗೆಳೆಯರು ಅಥವಾ ತುಂಬ ಆಪ್ತರ ಜತೆಗೆ ಜೋರು ಧ್ವನಿಯ ಮಾತುಕತೆ ನಡೆಸುವಂಥ ಸಾಧ್ಯತೆಗಳಿವೆ. ಸಂದರ್ಭ ಏನಿದೆ ಹಾಗೂ ಯಾಕೆ ಹೀಗಾಯಿತು ಎಂದು ಕೂತು ಮಾತನಾಡುವಷ್ಟು ತಾಳ್ಮೆ- ಸಂಯಮವನ್ನು ಉಳಿಸಿಕೊಳ್ಳುವುದು ಉತ್ತಮ. ನಿಮ್ಮ ಮೇಲಧಿಕಾರಿಗಳ ಜತೆಗೆ ಈ ದಿನ ಭೇಟಿ ಇದೆ ಹಾಗೂ ಅದು ಅನಿವಾರ್ಯ ಅಂತಾದಲ್ಲಿ ನಿಮ್ಮ ಅಭಿಪ್ರಾಯ ಹೇಳುವ ಸಂದರ್ಭಗಳಲ್ಲಿ ಒಂದಕ್ಕೆ ಹತ್ತು ಬಾರಿ ಎಂಬಂತೆ ಆಲೋಚಿಸುವುದು ಕ್ಷೇಮ. ದೇವತಾ ಪೂಜೆಗಾಗಿ ಕೆಲವು ಪಾತ್ರೆ- ವಸ್ತುಗಳನ್ನು ಖರೀದಿಸುವುದಕ್ಕೆ ಮುಂದಾಗಲಿದ್ದೀರಿ. ಹೂವಿನ ವ್ಯಾಪಾರ ಮಾಡುವವರಿಗೆ ಆದಾಯದಲ್ಲಿ ಭಾರೀ ಏರಿಕೆ ಕಂಡುಬರಲಿದೆ. ಈ ಹಿಂದೆ ನಾನಾ ಕಾರಣದಿಂದ ಮುರಿದು ಹೋಗಿದ್ದ ಒಪ್ಪಂದಗಳು ಮತ್ತೆ ಚಾಲನೆಗೆ ಬರುವಂಥ ಸಾಧ್ಯತೆಗಳು ಹೆಚ್ಚಿವೆ.
ದಿನವಿಡೀ ಬಿಡುವಿಲ್ಲದಷ್ಟು ಕೆಲಸ- ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಆಗುತ್ತದೆ. ನಿಮ್ಮ ಮನಸ್ಸಿನಲ್ಲಿ ಇರುವಂಥ ವಿಚಾರವನ್ನು ಮೊದಲೇ ಹೇಳಿಬಿಟ್ಟಿರುವಂತೆ ಗೆಳೆಯರು- ಸಂಬಂಧಿಕರು ನಡೆದುಕೊಳ್ಳಲಿದ್ದಾರೆ. ರುಚಿಕಟ್ಟಾದ ಭೋಜನವನ್ನು ಸವಿಯುವಂಥ ಯೋಗವಿದ್ದು, ಸ್ನೇಹಿತರು- ಕುಟುಂಬ ಸದಸ್ಯರ ಜತೆಗೂಡಿ ಉತ್ತಮ ಕ್ಷಣಗಳನ್ನು ಕಳೆಯಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ನಿರೀಕ್ಷೆ ಕೂಡ ಮಾಡಿರದಂಥ ಉಡುಗೊರೆಗಳು ದೊರೆಯುವ ಯೋಗ ಇದೆ. ಈ ಹಿಂದೆ ನೀವು ಮಾಡಿದ್ದ ಸಹಾಯವನ್ನು ಸ್ಮರಿಸಿಕೊಂಡು, ಈ ದಿನ ನಿಮಗೆ ಕೃತಜ್ಞತೆಯನ್ನು ಹೇಳುವುದಕ್ಕೆ ಮುಂದಾಗಲಿದ್ದಾರೆ. ಬಲಗೈಗೆ ಸಣ್ಣ- ಪುಟ್ಟ ಪೆಟ್ಟಾಗುವ ಸಾಧ್ಯತೆಗಳಿದ್ದು, ಆ ಬಗ್ಗೆ ಎಚ್ಚರಿಕೆಯನ್ನು ವಹಿಸಿ. ಭಾರವಾದ ವಸ್ತುಗಳನ್ನು ಎತ್ತುವಾಗ ಅಥವಾ ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಿಸುವಾಗ ಸಾಮಾನ್ಯ ದಿನಗಳಲ್ಲಿ ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನ ಮುಂಜಾಗ್ರತೆಯನ್ನು ವಹಿಸುವುದು ಉತ್ತಮ.
ನಿಮ್ಮ ಉತ್ಸಾಹ- ಹುಮ್ಮಸ್ಸು ತಗ್ಗುವಂಥ ಕೆಲವು ಬೆಳವಣಿಗೆಗಳು ಆಗಬಹುದು. ಎಲ್ಲಿಯೋ ದೂರದಲ್ಲಿ ಆಗುವಂಥ ಬದಲಾವಣೆಯಿಂದ ನಿಮಗೆ ಬಂಡವಾಳ ನೀಡುವುದಾಗಿ ಮಾತು ನೀಡಿದ್ದ ವ್ಯಕ್ತಿಯು ಈಗ ತನ್ನಿಂದ ಆಗಲ್ಲ ಎಂದುಬಿಡಬಹುದು. ನಿಮ್ಮದೇ ಕೆಲವು ಅತಿ ಬುದ್ಧಿವಂತಿಕೆ ನಡೆಯಿಂದ ಒಳ್ಳೆಯ ಪ್ರಾಜೆಕ್ಟ್ ಕೈ ತಪ್ಪಿ ಹೋಗಬಹದು. ಅಥವಾ ನಿಮ್ಮನ್ನು ಮಾತ್ರ ಹೊರಗಿಟ್ಟು ಆ ಯೋಜನೆಯನ್ನು ಮುಂದುವರಿಸಿಕೊಂಡು ಹೋಗಬಹುದು. ನಿಮಗೆ ಅನಿಸಿದ್ದೆಲ್ಲವೂ ನಿಜವಾಗಿರಲೇಬೇಕು ಎಂಬ ಆಲೋಚನೆಯಿಂದ ಈ ದಿನ ಹೊರಬರಬೇಕು. ನೀವಾಡುವ ಮಾತು, ಬಳಸುವ ಪದಗಳು ಎದುರಿಗೆ ಇರುವವರಲ್ಲಿ ಎಂಥ ಭಾವನೆ ಮೂಡಿಸಬಹುದು ಎಂಬ ಬಗ್ಗೆ ಕ್ಷಣ ಮಾತ್ರ ಆಲೋಚಿಸಿದರೂ ಕೆಲವು ಅನಾಹುತಗಳನ್ನು ತಪ್ಪಿಸಬಹುದು. ಹೆಚ್ಚೆಚ್ಚು ಪದಗಳನ್ನು ಬಳಸಿ ಹೇಳುವಂಥ ಸಂಗತಿಗಳು ಅಂತ ನೀವು ಅಂದುಕೊಳ್ಳುವುದನ್ನು ಸರಳವಾಗಿ ದಾಟಿಸುವುದಕ್ಕೆ ಪ್ರಯತ್ನಿಸಿ, ನೆಮ್ಮದಿಯನ್ನು ಕಾಣಬಹುದು.
ನಿಮ್ಮಿಂದ ಆಗುವಂಥ ಸಹಾಯವನ್ನು ಮಾಡುವುದರಿಂದ ಈ ದಿನ ಬಹಳ ಜನಪ್ರಿಯರಾಗುತ್ತೀರಿ. ಸಾಮಾಜಿಕವಾಗಿ ತುಂಬ ಚಟುವಟಿಕೆಯಿಂದ ತೊಡಗಿಸಿಕೊಳ್ಳುವುದರಿಂದ ಒಂದು ಬಗೆಯ ಹೆಮ್ಮೆ ನಿಮ್ಮಲ್ಲಿ ಮೂಡಲಿದೆ. ಈ ದಿನ ಯಾವುದಾದರೂ ಒಂದು ಹೊಸ ಸಂಗತಿಯನ್ನು ಕಲಿತುಕೊಳ್ಳಲಿದ್ದೀರಿ. ನಿಮಗೆ ನಿತ್ಯವೂ ಸಿಗುವವರು, ಬಹಳ ಪರಿಚಿತರು ಅಚ್ಚರಿ ವ್ಯಕ್ತಪಡಿಸುವಂತೆ ಕೆಲವು ಬದಲಾವಣೆಗಳು ನಿಮ್ಮಲ್ಲಿ ಆಗಲಿದೆ. ಬ್ಯೂಟಿ ಪಾರ್ಲರ್ ನಡೆಸುತ್ತಿರುವವರು, ಡ್ಯಾನ್ಸ್ ಕ್ಲಾಸ್ ಗಳನ್ನು ಮಾಡುತ್ತಿರುವವರು ಅಥವಾ ಜಿಮ್ ಟ್ರೇನರ್ ಗಳಾಗಿ ಇರುವವರಿಗೆ ಶುಭ ಸುದ್ದಿ ಕೇಳಿಬರುವಂಥ ಯೋಗ ಇದೆ. ಹೊಸ ಮನೆ ಖರೀದಿಸಿಯಾಗಿದೆ ಅದರ ಇಂಟೀರಿಯರ್ ಮಾಡಿಸುವುದಕ್ಕೆ ಯೋಜನೆ ರೂಪಿಸುತ್ತಿದ್ದೀರಿ ಅಂತಾದರೆ ನೀವು ಹಾಕಿಕೊಂಡಿದ್ದಕ್ಕಿಂತ ಬಜೆಟ್ ಹೆಚ್ಚು ಮಾಡಿಕೊಳ್ಳಬೇಕಾದ ಸನ್ನಿವೇಶ ಎದುರಾಗಲಿದೆ. ಇದಕ್ಕೆ ನಿಮಗೆ ಹಣಕಾಸಿನ ಹೊಂದಾಣಿಕೆಯೂ ಆಗಲಿದೆ ಎಂಬುದು ಮುಖ್ಯ ವಿಚಾರ.
ಲೇಖನ- ಎನ್.ಕೆ.ಸ್ವಾತಿ