Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 28ರ ದಿನಭವಿಷ್ಯ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 28, 2024 | 12:00 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 28ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 28ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 28ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ವಿಜ್ಞಾನಿಗಳು, ಸಮಾಜ ಸೇವೆ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಇರುವಂಥವರಿಗೆ ಸನ್ಮಾನಗಳು ಆಗುವ ಯೋಗ ಇದೆ. ಈ ಹಿಂದಿಗಿಂತ ಹೆಚ್ಚು ಉತ್ಸಾಹದಿಂದ ಕೆಲಸ- ಕಾರ್ಯಗಳಲ್ಲಿ ತೊಡಗುವಂಥ ಹುಮ್ಮಸ್ಸು- ಉತ್ಸಾಹ ಮೂಡಲಿದೆ. ಮನೆಗೆ ದೊಡ್ಡ ಅಳತೆಯ ಟೀವಿ ತರಬಹುದು ಅಥವಾ ನಿಮ್ಮಲ್ಲಿ ಕೆಲವರು ಮನೆಯಲ್ಲಿ ಹೋಮ್ ಥಿಯೇಟರ್ ಅಳವಡಿಸಿಕೊಳ್ಳುವುದಕ್ಕೆ ಸಂಬಂಧಪಟ್ಟವರ ಜತೆಗೆ ಮಾತುಕತೆಯನ್ನು ನಡೆಸಲಿದ್ದೀರಿ. ಸರ್ಕಾರಿ ಉದ್ಯೋಗಕ್ಕಾಗಿ ಪ್ರವೇಶ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು ಎಂದಿರುವವರಿಗೆ ಸೂಕ್ತ ಮಾರ್ಗದರ್ಶನವು ದೊರೆಯಲಿದೆ. ಕೆಲವು ಸಮಯ ಮನೆಯಿಂದ ಹೊರಗೆ ಇದ್ದು, ಪರೀಕ್ಷೆ ಸಲುವಾಗಿ ಸಿದ್ಧತೆಯನ್ನು ಮಾಡಿಕೊಳ್ಳುವುದಕ್ಕೆ ತೀರ್ಮಾನವನ್ನು ಮಾಡಲಿದ್ದೀರಿ. ಇನ್ನು ಈ ದಿನ ಸಾಧ್ಯವಾದಲ್ಲಿ ಶ್ರೀರಾಮನ ಆರಾಧನೆಯನ್ನು ಮಾಡಿ. ನಿಮ್ಮ ಮೊಬೈಲ್ ನ ಸ್ಕ್ರೀನ್ ಸೇವರ್ ಆಗಿ ಕೂಡ ಶ್ರೀರಾಮನ ಚಿತ್ರವನ್ನು ಮಾಡಿಕೊಂಡಲ್ಲಿ ಅನುಕೂಲಗಳು ಒದಗಿಬರಲಿವೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಇನ್ನು ಹಲವು ವಿಚಾರಗಳು ಮುಂಚಿನಂತೆ ಇರುವುದಿಲ್ಲ ಎಂದು ನಿಮಗೇ ಅನಿಸುವುದಕ್ಕೆ ಶುರುವಾಗುತ್ತದೆ. ಸಾಲ ಎಂದು ಪಡೆದಿದ್ದ ಹಣವನ್ನು ಈಗಿಂದ ಈಗಲೇ ಚುಕ್ತಾ ಮಾಡಬೇಕು ಎಂದು ಜನರು ಪಟ್ಟು ಹಿಡಿಯಲಿದ್ದಾರೆ. ಸಮಯ ಬೇಕಾಗುತ್ತದೆ ಎಂದು ಕೇಳಿದರೂ ಅದಕ್ಕೆ ಸಮ್ಮತಿಸುವ ಸ್ಥಿತಿಯಲ್ಲಿ ನಿಮ್ಮ ಎದುರಿಗೆ ಇರುವಂಥ ವ್ಯಕ್ತಿಗಳು ಇರುವುದಿಲ್ಲ. ಕುಟುಂಬ ಸದಸ್ಯರು ಕೇಳುವುದರಿಂದ ನಿಮ್ಮಲ್ಲಿ ಕೆಲವರು ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಸುವುದಕ್ಕೆ ಅಂತ ಹಣ ಹೊಂದಾಣಿಕೆ ಸಹ ಮಾಡಬೇಕಾಗುತ್ತದೆ. ಈ ಹಿಂದೆ ಅರ್ಧಕ್ಕೆ ನಿಂತುಹೋಗಿದ್ದ ಕೆಲವು ವ್ಯವಹಾರಗಳು ಮತ್ತೆ ಜೀವ ಪಡೆದುಕೊಳ್ಳುವ ಅವಕಾಶಗಳು ಚಿಗುರಲಿವೆ. ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುವಂತಹವರಿಗೆ ದೊಡ್ಡ ಹೂಡಿಕೆಯ ವ್ಯವಹಾರವೊಂದು ದೀರ್ಘ ಕಾಲಕ್ಕೆ ನಿಂತುಹೋಗಬಹುದು ಎಂಬ ಸುಳಿವು ಸಿಗಲಿದ್ದು, ಇದರಿಂದ ಭಾರೀ ಬೇಸರ ಆಗಬಹುದು. ಇಂಥ ಸನ್ನಿವೇಶದಲ್ಲಿ ವಾಸ್ತವವನ್ನು ಒಪ್ಪಿಕೊಳ್ಳುವುದು ಮುಖ್ಯವಾಗುತ್ತದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಕೌಟುಂಬಿಕ ವಿಚಾರಗಳಲ್ಲಿ ಇಲ್ಲಿಯ ತನಕ ಇದ್ದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಮಾರ್ಗೋಪಾಯಗಳು ಗೋಚರ ಆಗಲಿವೆ. ಆಲೋಚಿಸಿ, ನೀವು ತೆಗೆದುಕೊಂಡಂಥ ನಿರ್ಧಾರಗಳು ಫಲ ನೀಡುವುದಕ್ಕೆ ಶುರುವಾಗುತ್ತವೆ. ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಲಾಭವನ್ನು ನಿರೀಕ್ಷೆ ಮಾಡಿದಲ್ಲಿ ಅದರ ಪ್ರಕಾರವಾಗಿಯೇ ದೊರೆಯಲಿದೆ. ನಿಮಗೆ ಬಂದಂಥ ಆದಾಯದ ಅವಕಾಶಗಳನ್ನು ನಿಮ್ಮ ಸ್ನೇಹಿತ ಅಥವಾ ಸ್ನೇಹಿತೆಯರಿಗೆ ಬಿಟ್ಟುಕೊಡುವ ಮನಸ್ಸು ಮಾಡಲಿದ್ದೀರಿ. ಸಣ್ಣ ಪ್ರಮಾಣದಲ್ಲಿ ಆರಂಭಿಸಿದ್ದ ವ್ಯವಹಾರವೊಂದನ್ನು ದೊಡ್ಡ ಮಟ್ಟದಲ್ಲಿ ಮುಂದುವರಿಸುವುದಕ್ಕೆ ಬೇಕಾದಂಥ ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ಈ ಹಿಂದೆ ಅನುಭವಿಸಿದ್ದ ಕಾಯಿಲೆಗಳು ಮರುಕಳಿಸಿ, ಸೂಕ್ತ ವೈದ್ಯೋಪಚಾರ ಪಡೆದುಕೊಳ್ಳುವುದಕ್ಕೆ ಹೆಚ್ಚಿನ ಖರ್ಚಾಗಲಿವೆ. ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿರುವವರು ಅಧ್ಯಯನ ಪ್ರವಾಸಕ್ಕೆ ತೆರಳಬೇಕಾಗಬಹುದು.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಮಕ್ಕಳ ಶೈಕ್ಷಣಿಕ ಬೆಳವಣಿಗೆಯಿಂದ ನೆಮ್ಮದಿ ದೊರೆಯುತ್ತದೆ. ಒಂದು ವೇಳೆ ಮಕ್ಕಳಿಗಾಗಿ ಟ್ಯೂಷನ್ ಹೇಳಿಕೊಡುವಂಥ ಸಮರ್ಥ ಶಿಕ್ಷಕರ ಹುಡುಕಾಟದಲ್ಲಿ ಇರುವವರಿಗೆ ಇಷ್ಟು ಸಮಯದ ನಿಮ್ಮ ಹುಡುಕಾಟ ಕೊನೆ ಆಗುವ ಅವಕಾಶಗಳಿವೆ. ಹೋಟೆಲ್ ಉದ್ಯಮ ನಡೆಸುತ್ತಿರುವವರು ಈಗಿರುವುದರ ಜೊತೆಗೆ ಹೊಸ ಸ್ಥಳಗಳಲ್ಲಿ ಶಾಖೆ ತೆರೆಯುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಲಿದ್ದೀರಿ. ಅದೇ ರೀತಿ ಇದರ ಮೇಲುಸ್ತುವಾರಿಯನ್ನು ಯಾರಿಗೆ ನೀಡಬೇಕು ಎಂಬುದನ್ನು ಸಹ ಅಂತಿಮಗೊಳಿಸುವ ಸಾಧ್ಯತೆಗಳಿವೆ. ಸರ್ಕಾರದಿಂದ ಟೆಂಡರ್ ಪಡೆದು, ಈಗಾಗಲೇ ಕೆಲಸ ಮಾಡಿ, ಮುಗಿಸಿಯಾಗಿದೆ. ಆದರೆ ಹಣ ಬರುವುದು ಬಾಕಿ ಇದೆ ಎಂದಾದಲ್ಲಿ ನೀವು ಈ ದಿನ ಸ್ವಲ್ಪ ಪ್ರಯತ್ನ ಪಟ್ಟರೂ ಪ್ರಭಾವಿಗಳ ನೆರವು ನಿಮಗೆ ದೊರೆಯಲಿದೆ. ಅವರ ಮೂಲಕವಾಗಿ ನಿಮಗೆ ಬರಬೇಕಾದ ಹಣವನ್ನು ಪಡೆಯುವುದಕ್ಕೆ ಪ್ರಯತ್ನ ಪಟ್ಟಲ್ಲಿ ಅದು ಸಾಧ್ಯವಾಗಲಿದೆ. ನಿಮ್ಮ ವ್ಯಾಪಾರ- ವ್ಯವಹಾರದ ರಹಸ್ಯವನ್ನು ಹೊಸಬರ ಜತೆಗೆ ಹಂಚಿಕೊಳ್ಳಬೇಡಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿಮ್ಮಿಂದ ಸಹಾಯ ಕೇಳಿಕೊಂಡು ಬರುವವರಿಗೆ ಸಾಧ್ಯವಾದಷ್ಟು ನೆರವು ನೀಡಬೇಕು ಎಂದು ಆಲೋಚನೆ ಮೂಡಲಿದೆ. ಆರೋಗ್ಯದ ಮೇಲಿನ ಕಾಳಜಿಯಿಂದ ಜಿಮ್, ಯೋಗ, ಪ್ರಾಣಾಯಾಮ ಇಂಥವುಗಳನ್ನು ಆರಂಭಿಸುವುದಕ್ಕೆ ನಿರ್ಧಾರವನ್ನು ಮಾಡಲಿದ್ದೀರಿ. ಇನ್ನು ನಿಮ್ಮಲ್ಲಿ ಕೆಲವರು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸುವ ಸಾಧ್ಯತೆಗಳು ಸಹ ಇವೆ. ಹಣಕಾಸು ವಿಚಾರಗಳಲ್ಲಿ ಗೊಂದಲ ಸೃಷ್ಟಿ ಆಗಲಿದೆ. ನಿಮ್ಮ ಬಳಿ ಇರುವ ಹಣದ ವಿವರವನ್ನು ತಿಳಿದುಕೊಂಡ ಕೆಲವರು ನಾನಾ ರೀತಿಯ ಆಮಿಷಗಳನ್ನು ಒಡ್ಡಿ, ಹಣವನ್ನು ಪಡೆದುಕೊಳ್ಳುವುದಕ್ಕೆ ಪ್ರಯತ್ನ ಮಾಡಲಿದ್ದಾರೆ. ನೀವು ಒಂದು ಬಾರಿ ತೆಗೆದುಕೊಂಡ ತೀರ್ಮಾನವನ್ನು ಬದಲಿಸಿಕೊಳ್ಳದಿರುವುದು ಉತ್ತಮ. ಚಿನ್ನ- ಬೆಳ್ಳಿಯ ಒಡವೆಗಳನ್ನು ಖರೀದಿ ಮಾಡುವುದಕ್ಕೆ ಹಣ ಖರ್ಚು ಮಾಡಬೇಕಾಗುತ್ತದೆ. ಕುಟುಂಬದಲ್ಲಿನ ಸದಸ್ಯರ ದಿಢೀರ್ ತೀರ್ಮಾನದಿಂದಾಗಿ ಈ ರೀತಿಯ ಖರೀದಿ ಮಾಡುವುದು ಅನಿವಾರ್ಯ ಎಂಬ ಸ್ಥಿತಿ ನಿಮ್ಮದಾಗುತ್ತದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಮನಸ್ಸು ಪ್ರಶಾಂತವಾಗಿ ಇರಿಸಿಕೊಳ್ಳಿ. ಒತ್ತಡದಲ್ಲೂ ತಪ್ಪು ನಿರ್ಧಾರಗಳು ಆಗದಂತೆ ನೋಡಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ. ಇನ್ನು ನೀವೇ ಇಟ್ಟಿದ್ದ ವಸ್ತುಗಳು ಹುಡುಕುವಾಗ ತಕ್ಷಣಕ್ಕೆ ಸಿಗದೆ ಆತಂಕಗೊಳ್ಳುವಂತೆ ಆಗುತ್ತದೆ. ಆದ್ದರಿಂದ ನೀವು ಇಟ್ಟಿರುವಂಥ ಮುಖ್ಯ ವಸ್ತುಗಳು ಎಲ್ಲಿವೆ ಎಂಬುದು ಒಮ್ಮೆ ನೋಡಿಕೊಂಡು ಬಿಡುವುದು ಬಹಳ ಉತ್ತಮ. ಸ್ವಂತ ಸ್ಥಳದಲ್ಲಿ ವ್ಯವಹಾರ ಮಾಡುತ್ತಿರುವವರು ನಿಮ್ಮ ಜಾಗದಲ್ಲಿ ಸ್ವಲ್ಪ ಭಾಗವನ್ನು ಇತರರಿಗೆ ಭೋಗ್ಯಕ್ಕೋ ಅಥವಾ ಬಾಡಿಗೆಗೆ ನೀಡುವುದಕ್ಕೆ ಆಲೋಚನೆ ಮಾಡುತ್ತೀರಿ. ಮಾರ್ಕೆಟಿಂಗ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಲ್ಲಿ ಯಾವುದೇ ಕೆಲಸ ಆಗುವ ಶೇಕಡಾ ಹತ್ತರಷ್ಟು ಅವಕಾಶ ಇದ್ದರೂ ಅದನ್ನು ಮಾಡಿಕೊಂಡು ಬರುವುದಾಗಿ ನೀವಾಗಿಯೇ ಜವಾಬ್ದಾರಿ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ತುಂಬ ಹತ್ತಿರದಿಂದ ಬಲ್ಲಂಥ ಕೆಲವು ವ್ಯಕ್ತಿಗಳು ನಿಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಗುಮಾನಿ ಬರಲಿದೆ. ಆದರೆ ಇದಕ್ಕಾಗಿ ಎಲ್ಲರನ್ನೂ ಎದುರು ಹಾಕಿಕೊಳ್ಳುವುದು ಬುದ್ಧಿವಂತಿಕೆಯಲ್ಲ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಸ್ನೇಹ ಇದೆ ಅಂತಲೋ ಅಥವಾ ಇನ್ನೊಬ್ಬರಿಗೆ ಸಹಾಯ ಆಗುವುದಾದರೆ ಆಗಲಿ ಅಂತಲೋ ಈ ಹಿಂದೆ ನೀವು ಇದ್ದ ರೀತಿಯಲ್ಲಿ ಸಹಾಯ ಮಾಡುವ ಮನಸ್ಥಿತಿಯಲ್ಲಿ ಈ ದಿನ ಇರುವುದಿಲ್ಲ. ಹಣಕಾಸು ವಿಚಾರಗಳು ಮುಂಚಿನಷ್ಟು ಒತ್ತಡವನ್ನು ಉಂಟು ಮಾಡುವುದಿಲ್ಲ ಎಂಬ ಸಂಗತಿ ಆತ್ಮವಿಶ್ವಾಸವನ್ನು ತುಂಬುತ್ತದೆ. ನಿಮ್ಮಲ್ಲಿ ಕೆಲವರು ಮನೆ ಬದಲಾವಣೆ ಮಾಡುವುದಕ್ಕಾಗಿ ಬಾಡಿಗೆ ಮನೆಗಳ ಹುಡುಕಾಟವನ್ನು ನಡೆಸಲಿದ್ದೀರಿ. ಮತ್ತೆ ಕೆಲವರು ಗೇಟೆಡ್ ಕಮ್ಯುನಿಟಿಯಲ್ಲಿ ಸೈಟು ಹುಡುಕಾಡುತ್ತಿರುವವರಿಗೆ ಮನಸ್ಸಿಗೆ ಇಷ್ಟವಾಗುವಂಥದ್ದು ದೊರೆಯುವ ಅವಕಾಶ ಇದೆ. ನೀವು ಈಗಾಗಲೇ ಹಾಕಿರುವಂಥ ಚೀಟಿ, ಮ್ಯೂಚುವಲ್ ಫಂಡ್ಸ್ ಅಥವಾ ಫಿಕ್ಸೆಡ್ ಡೆಪಾಸಿಟ್ ಹಿಂತೆಗೆದುಕೊಳ್ಳುವುದಕ್ಕೆ ಆಲೋಚನೆ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಗ್ಯಾಜೆಟ್ ಅಥವಾ ಮೊಬೈಲ್ ಫೋನ್ ಖರೀದಿಸಲಿದ್ದೀರಿ. ಸೋದರ ಸಂಬಂಧಿಗಳ ಹಣಕಾಸು ಅಗತ್ಯಗಳಿಗಾಗಿ ನೀವು ಜಾಮೀನು ನಿಲ್ಲಬೇಕಾಗಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಹಳೇ ವ್ಯವಹಾರಗಳಲ್ಲಿ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳುವ ಸೂಚನೆ ದೊರೆಯಲಿದೆ. ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಉತ್ತಮ. ಮೇಲುನೋಟಕ್ಕೆ ಕಾಣಿಸುವುದನ್ನೇ ನೆಚ್ಚಿಕೊಂಡು ಮುಂದುವರಿದಲ್ಲಿ ಆ ನಂತರ ಪರಿತಪಿಸುವಂತೆ ಆಗುತ್ತದೆ. ದೇವತಾ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ನಿಮ್ಮ ಜವಾಬ್ದಾರಿಗಳನ್ನು ಮಾಡಿ ಮುಗಿಸುವುದಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಿದ್ದೀರಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಕೆಲಸದ ಒತ್ತಡ ಇರುತ್ತದೆ. ಇನ್ನು ನಿಮ್ಮಲ್ಲಿ ಯಾರು ಚಿನ್ನವನ್ನು ಅಡವಿಟ್ಟು ಸಾಲ ಪಡೆದುಕೊಂಡಿರುವಿರೋ ಅಂಥವರು ಅದನ್ನು ಬಿಡಿಸಿಕೊಳ್ಳುವುದಕ್ಕೆ ಹಣಕಾಸು ಹೊಂದಿಸಿಕೊಳ್ಳುವುದರಲ್ಲಿ ಸಫಲರಾಗುವ ಅವಕಾಶಗಳುನ ಹೆಚ್ಚಿವೆ. ವಿದೇಶದಲ್ಲಿ ವ್ಯಾಸಂಗ- ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ವೀಸಾಗೆ ಅಡೆತಡೆಗಳು ಎದುರಾಗಿದ್ದಲ್ಲಿ ಅದು ನಿವಾರಿಸಿಕೊಳ್ಳುವುದಕ್ಕೆ ಮಾರ್ಗೋಪಾಯಗಳು ದೊರೆಯಲಿವೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಸಂಗಾತಿಯ ಸ್ವಭಾವ ನಿಮಗೆ ಮುಜುಗರ ತರುತ್ತದೆ. ನೀವು ನಿರೀಕ್ಷೆಯೇ ಮಾಡದ ರೀತಿಯಲ್ಲಿ ಕೆಲವು ಬೆಳವಣಿಗೆಗಳು ಆಗಲಿವೆ. ತಂದೆ- ತಾಯಿ ಅಥವಾ ತಂದೆ- ತಾಯಿ ಸಮಾನರಾದವರ ಆರೋಗ್ಯ ವಿಚಾರಕ್ಕೆ ಕೆಲವು ನಿರ್ಧಾರಗಳನ್ನು ಮಾಡಲೇಬೇಕಾಗುತ್ತದೆ. ನಲವತ್ತು ವರ್ಷ ಮೇಲ್ಪಟ್ಟವರು ರಿಟೈರ್ ಮೆಂಟ್ ಗಾಗಿ ಉಳಿತಾಯ ಯೋಜನೆಗಳನ್ನು ಕೆಲವು ಆರಿಸಿಕೊಳ್ಳಲಿದ್ದೀರಿ. ಪಿತ್ರಾರ್ಜಿತವಾಗಿ ಬಂದಂಥ ಆಸ್ತಿಯನ್ನು ಮಾರಾಟ ಮಾಡುವುದಕ್ಕೆ ಆಲೋಚನೆಯನ್ನು ಮಾಡಲಿದ್ದೀರಿ. ಕಣ್ಣಿಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಡುತ್ತಿದ್ದಲ್ಲಿ, ಅಂದರೆ ಕಣ್ಣುರಿ, ಕಣ್ಣಿನ ಊತ, ಮಬ್ಬಾಗುವುದು ಇಂಥದ್ದು ಕಾಡಬಹುದು. ಸೂಕ್ತ ವೈದ್ಯೋಪಚಾರ ಮಾಡಿಸಿಕೊಳ್ಳುವ ಕಡೆಗೆ ಗಮನ ನೀಡುವುದು ಮುಖ್ಯವಾಗುತ್ತದೆ. ಇನ್ನು ನಿಮ್ಮಲ್ಲಿ ಸ್ವಂತ ಮನೆ ಇರುವಂಥವರು ಮನೆಯಲ್ಲಿ ನೀರಿನ ಮೋಟಾರ್, ಸೋಲಾರ್ ಉಪಕರಣಗಳನ್ನು ರಿಪೇರಿ ಮಾಡಿಸುವುದಕ್ಕೆ ಹೆಚ್ಚಿನ ಖರ್ಚು ಮಾಡಬೇಕಾಗುತ್ತದೆ.

ಲೇಖನ- ಎನ್‌.ಕೆ.ಸ್ವಾತಿ