ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 08ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ನಿಟ್ಟಿನಲ್ಲಿ ನಾನಾ ರೀತಿಯಲ್ಲಿ ಯೋಜನೆ, ಆಲೋಚನೆ ಶುರು ಆಗಲಿದೆ. ಆಸ್ತಿ ಮಾರಾಟಕ್ಕೆ ಇಟ್ಟಿದ್ದಲ್ಲಿ ಅದಕ್ಕೆ ಬೇಡಿಕೆ ಹೆಚ್ಚಾಗುವಂಥ ಸಾಧ್ಯತೆಗಳಿವೆ. ಇನ್ನು ನಿಮ್ಮಲ್ಲಿ ಕೆಲವರು ಬಾಡಿಗೆ ಆದಾಯವನ್ನು ಹೆಚ್ಚು ಮಾಡಿಕೊಳ್ಳುವುದಕ್ಕಾಗಿ ಮನೆಯನ್ನೋ ಮಳಿಗೆಯನ್ನೋ ನಿರ್ಮಿಸುವ ಬಗ್ಗೆ ಚಿಂತನೆ ನಡೆಸಲಿದ್ದೀರಿ. ದುರ್ಗಾದೇವಿ ಆರಾಧನೆ ಮಾಡುವುದರಿಂದ ಹಾಗೂ ವಿಷ್ಣು ಸಹಸ್ರನಾಮ ಶ್ರವಣ ಅಥವಾ ಪಠಣ ಮಾಡುವುದರಿಂದ ಆಲೋಚನೆಯಲ್ಲಿ ಸ್ಪಷ್ಟತೆ ಇರಲಿದೆ. ಅದೇ ವೇಳೆ ಆತ್ಮವಿಶ್ವಾಸ ಕೂಡ ಹೆಚ್ಚಾಗಲಿದೆ. ಫೋಟೋಗ್ರಫಿಯನ್ನೇ ವೃತ್ತಿ ಮಾಡಿಕೊಂಡಿರುವವರಿಗೆ ಹೊಸ ಹೊಸ ಅವಕಾಶಗಳು ದೊರೆಯುವ ಸಾಧ್ಯತೆಗಳಿವೆ.
ಉದ್ಯೋಗ ಸ್ಥಳದಲ್ಲಿ ನಿರುಮ್ಮಳವಾಗಿ ಕೆಲಸ ಮಾಡುವುದಕ್ಕೆ ಆಗುವುದಿಲ್ಲ. ಯಾವುದೋ ಹಳೇ ಕಡತಗಳನ್ನು ಕೇಳಬಹುದು ಅಥವಾ ಯಾರದೋ ಕೆಲಸವನ್ನು ನಿಮಗೆ ಒಪ್ಪಿಸಿ, ಅದಕ್ಕಾಗಿಯೇ ಬಹಳ ಹೊತ್ತು ಸಮಯ ಇಡಬೇಕಾದ ಸನ್ನಿವೇಶ ಎದುರಾಗಲಿದೆ. ಹಣಕಾಸು ವಿಚಾರದಲ್ಲಿ ನೀವಂದುಕೊಂಡಂತೆ ಏನೂ ಆಗುವುದಿಲ್ಲ. ಒಂದು ವೇಳೆ ಯಾರಾದರೂ ನಿಮಗೆ ಸಾಲ ನೀಡುವುದಾಗಿ ಮಾತು ಕೊಟ್ಟಿದ್ದಲ್ಲಿ ಸದ್ಯಕ್ಕೆ ಸಾಧ್ಯವಿಲ್ಲ ಎಂದು ಹೇಳಿಬಿಡುವ ಸಾಧ್ಯತೆ ಇದೆ. ಅಥವಾ ಅವರಿಗೇ ಹಣಕಾಸಿನ ಬಿಕ್ಕಟ್ಟು ಉಂಟಾಗಬಹುದು. ನಿಮ್ಮಲ್ಲಿ ಕೆಲವರು ಸಣ್ಣ- ಪುಟ್ಟದಾದರೂ ಗಾಯ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಆದ್ದರಿಂದ ಜಾಗ್ರತೆಯಿಂದ ಇರುವುದು ಮುಖ್ಯವಾಗುತ್ತದೆ.
ಸ್ವಂತ ವಿಚಾರದಲ್ಲಿ ಯಾರಾದರೂ ಸಲಹೆ ನೀಡಿದಲ್ಲಿ ಅದನ್ನು ಸರಿಯಾಗಿ ಕೇಳಿಸಿಕೊಳ್ಳಿ. ಹಾಗೂ ಅದನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬ ಬಗ್ಗೆ ಸರಿಯಾದ ಯೋಜನೆ ರೂಪಿಸುವುದು ಮುಖ್ಯ. ಜಮೀನು- ಆಸ್ತಿ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಲಾಭದ ಪ್ರಮಾಣ ಜಾಸ್ತಿ ಆಗುವಂಥ ಸೂಚನೆ ದೊರೆಯಲಿದೆ. ಹೊಸದಾಗಿ ವಾಹನಗಳನ್ನು ಖರೀದಿ ಮಾಡಬೇಕು ಎಂದುಕೊಂಡವರಿಗೆ ಹಣಕಾಸಿನ ಮೂಲ ದೊರೆಯಲಿದೆ. ಸಂಗಾತಿಯ ಜತೆಗೆ ಉತ್ತಮ ಸಮಯ ಕಳೆಯುವುದಕ್ಕೆ ಅವಕಾಶಗಳಿವೆ. ನವದಂಪತಿಗೆ ಹಿಲ್ ಸ್ಟೇಷನ್ ಗೆ ತೆರಳುವಂಥ ಯೋಗ ಇದ್ದು, ಅದರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಿದ್ದೀರಿ.
ಈಗ ಮಾಡುತ್ತಿರುವ ಉದ್ಯೋಗದ ಜತೆಗೆ ಹೆಚ್ಚುವರಿಯಾದ ಆದಾಯ ಮೂಲಕ್ಕೆ ವ್ಯವಸ್ಥೆ ಮಾಡಿಕೊಳ್ಳುವ ಬಗ್ಗೆ ಗಂಭೀರವಾದ ಪ್ರಯತ್ನವನ್ನು ಶುರು ಮಾಡಲಿದ್ದೀರಿ. ಸೈಕ್ಲಿಂಗ್, ವಾಕಿಂಗ್, ಯೋಗ ಮೊದಲಾದ ಆರೋಗ್ಯಕರ ಅಭ್ಯಾಸಗಳನ್ನು ಆರಂಭಿಸುವ ಅಥವಾ ಈಗಾಗಲೇ ಶುರು ಮಾಡಿದ್ದೀರಿ ಆದರೆ ಶಿಸ್ತಿನಿಂದ ಮಾಡುತ್ತಿಲ್ಲ ಎಂದಾದಲ್ಲಿ ಶಿಸ್ತನ್ನು ಪಾಲಿಸುವ ಕುರಿತು ನಿರ್ಧಾರವನ್ನು ಮಾಡಲಿದ್ದೀರಿ. ವೈದ್ಯಕೀಯ ವೃತ್ತಿಯಲ್ಲಿ ಇರುವವರಿಗೆ ಉತ್ತಮವಾದ ಸಮಯ ಇದು. ನಿಮ್ಮ ಸಾಮಾಜಿಕ ಕಾಂಟ್ಯಾಕ್ಟ್ ಹೆಚ್ಚಿಸಿಕೊಳ್ಳುವುದಕ್ಕೆ ವೇದಿಕೆ ದೊರೆಯಲಿದೆ. ಹೂವಿನ ವ್ಯಾಪಾರಿಗಳಿಗೆ ಆದಾಯದಲ್ಲಿ ಇಳಿಕೆ ಆಗಿ, ಆತಂಕ ಎದುರಾಗಬಹುದು.
ಮಾಂಸಾಹಾರ ಸೇವನೆ ಮಾಡುವಂಥವರು ಈ ದಿನ ಬಹಳ ಎಚ್ಚರಿಕೆಯಿಂದ ಇರಬೇಕು, ಹೊಟ್ಟೆಯ ಸಮಸ್ಯೆಗಳು ಕಾಡಬಹುದು. ಅದರಲ್ಲೂ ಮನೆಯ ಹೊರಗಿನ ಆಹಾರವನ್ನು ಸೇವನೆ ಮಾಡುತ್ತಿದ್ದೀರಿ ಎಂದಾದಲ್ಲಿ ಮತ್ತೂ ಎಚ್ಚರಿಕೆಯಿಂದ ಇರಬೇಕು. ನಿಮ್ಮಲ್ಲಿ ಕೆಲವರು ಸ್ನೇಹಿತರ ಹಣದ ಅಗತ್ಯಕ್ಕಾಗಿ ಜಾಮೀನು ನಿಲ್ಲಬೇಕಾಗಬಹುದು. ಮನೆಯಲ್ಲಿ ಮಕ್ಕಳ ವರ್ತನೆಯಿಂದ ಬೇಸರ ಆದೀತು. ಅದರಲ್ಲೂ ಕೂಡು ಕುಟುಂಬದಲ್ಲಿ ಇರುವಂಥವರಿಗೆ ಕಿರಿಕಿರಿ ಜಾಸ್ತಿ ಇರುತ್ತದೆ. ಕೆಲಸ ಬದಲಾವಣೆಗಳಿಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಗೊಂದಲ ಏರ್ಪಡಬಹುದು. ಬದಲಾಯಿಸಬೇಕಾ ಅಥವಾ ಇಲ್ಲಿಯೇ ಮುಂದುವರಿಯಬೇಕಾ ಎಂಬ ಪ್ರಶ್ನೆ ಅದಾಗಿರುತ್ತದೆ.
ನಾನು ನಿರ್ಧರಿಸಿದ ಮೇಲೆ ಇತರರು ಒಪ್ಪಿಯೇ ಒಪ್ಪುತ್ತಾರೆ ಎಂಬ ಧೋರಣೆ ಈ ದಿನ ಯಾವುದೇ ಕಾರಣಕ್ಕೂ ಬೇಡ. ಯಾವುದಾದರೂ ಕೆಲಸದ ನಿಮಿತ್ತವೋ ಅಥವಾ ವಸ್ತುಗಳಿಗೋ ಅಥವಾ ಕಾರ್ಯಕ್ರಮಕ್ಕೋ ನೀವೇ ತೀರ್ಮಾನ ಕೈಗೊಂಡು, ಅಂತಿಮಗೊಳಿಸದಿರುವುದು ಕ್ಷೇಮ. ಮಸಾಲೆಯುಕ್ತ ಪದಾರ್ಥಗಳನ್ನೋ, ಕರಿದ ಪದಾರ್ಥಗಳನ್ನೋ ಈ ದಿನ ಸೇವನೆ ಮಾಡುವುದರಿಂದ ಕಡ್ಡಾಯವಾಗಿ ದೂರ ಇದ್ದುಬಿಡಿ. ಸಬ್ ರಿಜಿಸ್ಸ್ರಾರ್ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಕಣ್ತಪ್ಪಿನಿಂದ ಆದ ತಪ್ಪಿಗೆ ದೊಡ್ಡ ಬೆಲೆ ತೆರಬೇಕಾದೀತು. ಆದ್ದರಿಂದ ಮಾಮೂಲಿ ದಿನಗಳಿಗಿಂತ ಹೆಚ್ಚಿನ ಶ್ರದ್ಧೆ ವಹಿಸಿ ಕೆಲಸ ಮಾಡಿ.
ಅಧ್ಯಾತ್ಮ ವಿಚಾರಗಳಲ್ಲಿ ಈ ದಿನ ನಿಮ್ಮ ಮನಸ್ಸು ಹೆಚ್ಚು ತೊಡಗಿಕೊಳ್ಳಲಿದೆ. ತೀರ್ಥಯಾತ್ರೆಗಳನ್ನು ಕೈಗೊಳ್ಳುವ ಅಥವಾ ದೇವತಾ ಅನುಷ್ಠಾನಗಳಲ್ಲಿ ಭಾಗೀ ಆಗುವಂಥ ಯೋಗ ನಿಮ್ಮ ಪಾಲಿಗಿದೆ. ಅತ್ತೆ- ಮಾವ ಅಥವಾ ತಂದೆ- ತಾಯಿಯ ಕನ್ನಡಕದ ಫ್ರೇಮ್, ಶ್ರವಣ ಸಾಧನ, ಪಾದರಕ್ಷೆಗಳಿಗೆ ಹೆಚ್ಚು ವೆಚ್ಚವಾಗುವಂಥ ಸಾಧ್ಯತೆ ಇದೆ. ಈ ದಿನ ಯಾವುದೇ ಬ್ರ್ಯಾಂಡೆಡ್ ವಸ್ತುಗಳನ್ನು ಖರೀದಿಸುತ್ತಿದ್ದೀರಿ ಎಂದಾದಲ್ಲಿ ವಾರಂಟಿ ಅವಧಿಯ ಬಗ್ಗೆ ಸರಿಯಾಗಿ ವಿಚಾರಿಸಿಕೊಳ್ಳುವುದು ಮುಖ್ಯ. ದ್ವಿಚಕ್ರ ವಾಹನ ಸವಾರರು ಸಾಧ್ಯವಾದಷ್ಟೂ ನಿಧಾನವಾಗಿ ಚಲಾಯಿಸುವುದು ಕ್ಷೇಮ. ಪ್ರೊಟೀನ್ ಸಪ್ಲಿಮೆಂಟ್ ಗಳನ್ನು ತೆಗೆದುಕೊಳ್ಳುತ್ತಿದ್ದಲ್ಲಿ ಪ್ರಮಾಣವನ್ನು ಸರಿಯಾಗಿ ಅನುಸರಿಸಿ.
ಸಂತೆ ಹೊತ್ತಿಗೆ ಮೂರು ಮೊಳ ಎಂಬ ಮಾತಿನಂತೆ ನೀವು ಮಾಡಿದ ಕೆಲಸದಲ್ಲಿನ ಲೋಪಗಳ ಬಗ್ಗೆ ಇತರರು ಟೀಕಿಸಲಿದ್ದಾರೆ. ಅದರ ಗುಣಮಟ್ಟ ಸರಿಯಿಲ್ಲ, ಕಲಾತ್ಮಕವಾಗಿಲ್ಲ ಅಥವಾ ನಿರೀಕ್ಷೆ ಇಟ್ಟುಕೊಂಡಷ್ಟು ಚೆನ್ನಾಗಿ ಬಂದಿಲ್ಲ ಎಂಬೆಲ್ಲ ಟೀಕೆ- ವಿಮರ್ಶೆ, ಆಕ್ಷೇಪಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಯಾರದೋ ಮೇಲಿನ ಕೋಪ ಇನ್ಯಾರದೋ ಮೇಲೆ ತೀರಿಸಿಕೊಳ್ಳುವುದಕ್ಕೆ ಪ್ರಯತ್ನಿಸಲಿದ್ದೀರಿ. ಅದರಿಂದ ಸ್ನೇಹ- ಸಂಬಂಧಕ್ಕೆ ಕುತ್ತು ಬರುವಂಥ ಸಾಧ್ಯತೆ ಇದೆ. ನಿಮಗೆ ಸಮಯ ಸಿಕ್ಕಲ್ಲಿ ಅಥವಾ ಸಮಯ ಮಾಡಿಕೊಂಡೇ ಈ ದಿನ ಹತ್ತು ನಿಮಿಷಗಳ ಕಾಲ ಧ್ಯಾನ ಮಾಡುವುದಕ್ಕೆ ಪ್ರಯತ್ನಿಸಿ. ಜತೆಗೆ ಕೆಲ ಕಾಲ ಮೌನದಿಂದ ಇರುವುದಕ್ಕೂ ಪ್ರಯತ್ನ ಮಾಡಿ.
ನೀವು ಏನೂ ಅಂದುಕೊಳ್ಳದೆಯೇ ಕೆಲವು ಗ್ಯಾಜೆಟ್ ಗಳನ್ನು ಖರೀದಿಸುವಂಥ ಯೋಗ ಈ ದಿನ ಇದೆ. ಈ ನಿರ್ಧಾರದಿಂದ ನಿಮ್ಮ ಭವಿಷ್ಯಕ್ಕೆ ದೊಡ್ಡ ಮಟ್ಟದಲ್ಲಿ ಸಹಾಯ ಆಗಲಿದೆ. ಕಚೇರಿಯಲ್ಲಿ ಉದ್ಯೋಗ ಮಾಡಬೇಕಾದವರಿಗೆ ವಾತಾವರಣ ಒಂದಿಷ್ಟು ಕಿರಿಕಿರಿ ಉಂಟು ಮಾಡಲಿದೆ. ಸರ್ಕಾರಿ ಟೆಂಡರ್ ಗಳನ್ನು ತೆಗೆದುಕೊಂಡು ಕೆಲಸ ಮಾಡಿಸುವಂಥವರಿಗೆ ಒತ್ತಡದ ಸನ್ನಿವೇಶ ಎದುರಾಗಲಿದೆ. ಇತರರು ಬಂದು ತಾವಾಗಿಯೇ ಸಲಹೆ ಕೇಳದ ಹೊರತು ನೀವಾಗಿಯೇ ಏನನ್ನೂ ಹೇಳದಿರುವುದು ಉತ್ತಮ. ದೂರ ಪ್ರಯಾಣಕ್ಕೆ ತೆರಳುತ್ತಿದ್ದಲ್ಲಿ ಮುಖ್ಯವಾದ ವಸ್ತುಗಳು ಎಲ್ಲವನ್ನೂ ಇಟ್ಟುಕೊಂಡಿದ್ದೀರಾ ಎಂಬುದನ್ನು ಒಂದಕ್ಕೆ ನಾಲ್ಕು ಬಾರಿಗೆ ಎಂಬಂತೆ ಪರೀಕ್ಷಿಸಿಕೊಳ್ಳಿ.