ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 17ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನವವಿವಾಹಿತರಿಗೆ ಬಹಳ ಸಂತೋಷವಾಗಿ ಸಮಯವನ್ನು ಕಳೆಯುವಂತಹ ಅವಕಾಶ ದೊರೆಯಲಿದೆ. ಕಿರು ಪ್ರವಾಸವನ್ನಾದರೂ ಮಾಡುವ ಸಾಧ್ಯತೆ ಇದೆ. ವಿದೇಶಗಳಿಂದ ಶುಭ ಸುದ್ದಿ ಕೇಳುವ ಯೋಗ ಇದೆ. ನೀವು ಬರಲಾರದು ಎಂದುಕೊಂಡಿದ್ದ ಕೆಲಸವೋ ಅಥವಾ ಇಂಟರ್ ವ್ಯೂ ಬರುವ ಅವಕಾಶಗಳು ಹೆಚ್ಚಿದೆ. ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಂಥವರಿಗೆ ನೀವು ನಿರೀಕ್ಷೆಯೇ ಮಾಡದ ಮಟ್ಟಿಗೆ ಯಶಸ್ಸು ದೊರೆಯಲಿದೆ. ಆದರೆ ಮಹಿಳೆಯರಿಗೆ ಒಂದು ಎಚ್ಚರಿಕೆ ಇದೆ. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಅನಾರೋಗ್ಯ ಸಮಸ್ಯೆಗಳು ಆಗಬಹುದು. ಆದ್ದರಿಂದ ಸ್ವಚ್ಛತೆಯ ಕಡೆಗೆ ಹೆಚ್ಚಿದ ಗಮನವನ್ನು ನೀಡಿ. ಕೋರ್ಟು ಕಚೇರಿ ವ್ಯಾಜ್ಯಗಳನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಮಾರ್ಗಗಳು ತೆರೆದುಕೊಳ್ಳಲಿವೆ. ಇಂಥ ಸನ್ನಿವೇಶದಲ್ಲಿ ಆಲಸ್ಯ ಮಾಡದೆ ಶೀಘ್ರವಾಗಿ ಸ್ಪಂದಿಸುವ ಕಡೆಗೆ ಗಮನವನ್ನು ನೀಡಿ.
ನಿಮ್ಮ ಜೊತೆಗೆ ಇಷ್ಟು ಸಮಯ ಒಟ್ಟಾಗಿಯೇ ಕೆಲಸ ಮಾಡುತ್ತಿರುವವರಿಗೆ ಕೆಲವು ಆಕ್ಷೇಪಗಳು ಹಾಗೂ ನಿಮ್ಮ ಬಗ್ಗೆ ಅಸಮಾಧಾನ ಕಾಣಿಸಿಕೊಳ್ಳಬಹುದು. ಇದು ಒಂದು ವೇಳೆ ನಿಮ್ಮ ಗಮನಕ್ಕೆ ಬಂದಲ್ಲಿ ಕೂತು ಮಾತನಾಡಿ, ಅಭಿಪ್ರಾಯ ಬೇಧಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ. ಭಾವನಾತ್ಮಕ ಸಂಗತಿಗಳು ಯಾವುವು ಹಾಗೂ ಹಣಕಾಸಿನ ಸಂಗತಿಗಳನ್ನು ಒಳಗೊಂಡಿರುವ ವಿಚಾರಗಳು ಯಾವುವು ಎಂಬ ಬಗ್ಗೆ ಒಂದು ಸ್ಪಷ್ಟತೆ ಇಟ್ಟುಕೊಂಡು ವ್ಯವಹರಿಸುವುದು ಒಳ್ಳೆಯದು. ಕೆಲವು ಕೆಲಸಗಳು ನೀವು ಅಂದುಕೊಂಡಿರುವುದಕ್ಕಿಂತ ಬಹಳ ನಿಧಾನಕ್ಕೆ ಸಾಗುತ್ತಿವೆ ಎಂದು ಈ ದಿನ ಅನಿಸಲಿದೆ. ಆ ಕಾರಣಕ್ಕಾಗಿ ಸಂಬಂಧಪಟ್ಟವರ ಜೊತೆ ಜೋರು ಧ್ವನಿಯಲ್ಲಿ ಮಾತನಾಡುವುದಕ್ಕೆ ಹೋಗಬೇಡಿ. ಅದಕ್ಕೆ ಕಾರಣವನ್ನು ತಿಳಿದುಕೊಂಡು, ಯಾವ ಗಡುವಿನೊಳಗೆ ಕೆಲಸ ನಿಮಗೆ ಮುಗಿಯಬೇಕಿದೆ ಎಂಬುದನ್ನು ಎದುರಿನವರಿಗೆ ಸೌಜನ್ಯದಿಂದ ತಿಳಿಸಿದರೆ ಸಾಕು.
ಈ ದಿನ ನಿಮಗೆ ಇತರರು ಪ್ರತಿಸ್ಪರ್ಧಿಗಳಾಗಿ ಕಾಣುವುದಕ್ಕೆ ಆರಂಭಿಸುತ್ತಾರೆ. ನಿಮಗೆ ಬಹಳ ಆಪ್ತರಾದವರು, ಪ್ರೇಮಿ ಅಥವಾ ಸಂಗಾತಿಯೇ ಒಂದು ಬಗೆಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದೆನಿಸುವುದಕ್ಕೆ ಆರಂಭವಾಗುತ್ತದೆ. ಉದ್ಯೋಗ ಸ್ಥಳದಲ್ಲಿ ನಿಮಗೆ ಅಂತಲೇ ವಹಿಸಿದ ಕೆಲಸವನ್ನು ಅದೆಂತಹ ಸಂದರ್ಭದಲ್ಲಿ ಆದರೂ ಇತರರಿಗೆ ವರ್ಗಾಯಿಸುವುದಕ್ಕೆ ಹೋಗಬೇಡಿ. ಒಂದು ವೇಳೆ ನೀವು ಹೀಗೆ ಮಾಡಿದರೆ ಇದು ಭವಿಷ್ಯದ ಮೇಲೆ, ಉದ್ಯೋಗ ಭವಿಷ್ಯದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಸೋದರ ಮಾವನ ಅನಾರೋಗ್ಯ ಸಮಸ್ಯೆ ನಿಮಗೆ ಚಿಂತೆಗೆ ಈಡು ಮಾಡಬಹುದು. ದೂರ ಪ್ರಯಾಣಗಳು ಇದ್ದಲ್ಲಿ ಮುಖ್ಯವಾದ ಕಾಗದ ಪತ್ರಗಳು ಹಾಗೂ ಬೆಲೆಬಾಳುವ ವಸ್ತುಗಳು ಇದ್ದರೆ ಹೂಗಳ ಬಗ್ಗೆ ಹೆಚ್ಚಿನ ನಿಗಾ ವಹಿಸುವುದು ಮುಖ್ಯ. ಹಲ್ಲು ನೋವಿನ ಕಾರಣಕ್ಕಾಗಿ ಹೆಚ್ಚಿನ ಹಣ ಖರ್ಚಾಗಲಿದೆ. ಯಾವುದೇ ಕಾರಣಕ್ಕೂ ಸ್ವಯಂ ವೈದ್ಯ ಮಾಡಿಕೊಳ್ಳುವುದಕ್ಕೆ ಹೋಗಬೇಡಿ.
ನೀವು ಬಹಳ ನಂಬಿದ ವ್ಯಕ್ತಿಗಳು ಅಥವಾ ಸಂಸ್ಥೆಗಳೇ ವಂಚನೆಯ ಮಾಡುವ ಸಾಧ್ಯತೆಗಳಿವೆ ಎಚ್ಚರ. ಇತರರ ಸಾಲಕ್ಕಾಗಿ ಯಾವುದೇ ಕಾರಣಕ್ಕೂ ಈ ದಿನ ಜಾಮೀನಾಗಿ ನಿಲ್ಲಬೇಡಿ. ನಾಲ್ಕು ಜನರ ಮಧ್ಯೆ ಇರುವಾಗ ಅತ್ಯುತ್ಸಾಹದಲ್ಲಿ ನೀವು ಆಡಿದ ಮಾತುಗಳೇ ಸಮಸ್ಯೆಯಾಗಿ ಪರಿಣಮಿಸಬಹುದು. ಏನನ್ನಾದರೂ ಸರಿ ನಾನು ದಕ್ಕಿಸಿಕೊಳ್ಳಬಲ್ಲೆ ಎಂಬ ಧೋರಣೆ ಈ ದಿನ ಯಾವುದೇ ಕಾರಣಕ್ಕೂ ಬೇಡ. ನೀವು ಯಾರಿಂದ ಅಂತರ ಕಾಯ್ದುಕೊಳ್ಳಬೇಕು ಎಂದುಕೊಳ್ಳುತ್ತೀರೋ ಅವರ ಜೊತೆಗೆ ಕೆಲಸ ಮಾಡುವಂತಹ ಸನ್ನಿವೇಶ ಎದುರಾಗಲಿದೆ. ನಿಮ್ ಹಣಕಾಸಿನ ಸಾಮರ್ಥ್ಯಕ್ಕೆ ಮೀರಿದಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಹೋಗದಿರಿ.
ಕುಟುಂಬ ಸದಸ್ಯರ ಜೊತೆಗೆ ಸೇರಿ ಸೈಟು, ಮನೆ ಅಥವಾ ಅಪಾರ್ಟ್ ಮೆಂಟ್ ಖರೀದಿ ಮಾಡುವ ಬಗ್ಗೆ ಚರ್ಚೆ ನಡೆಸಲಿದ್ದೀರಿ. ಒಂದು ವೇಳೆ ನಿಮ್ಮ ಬಳಿ ಇರುವ ಸೈಟು ಅಥವಾ ಜಮೀನನ್ನು ಮಾರಿ ಅದನ್ನು ಬೇರೆ ಕಡೆ ಹೂಡಿಕೆ ಮಾಡಬೇಕು ಎಂದಿದ್ದಲ್ಲಿ ನೀವು ನಿರೀಕ್ಷೆ ಮಾಡಿದಂತಹ ಬೆಲೆಗೆ ಅದರ ವಿಕ್ರಯ ಆಗುವಂತಹ ಯೋಗ ಸೃಷ್ಟಿಯಾಗಲಿದೆ. ಇಷ್ಟು ಸಮಯ ನಿಮ್ಮ ಜೊತೆಗೆ ಸ್ನೇಹಿತರಂತೆಯೇ ಇದ್ದು, ನಿಮ್ಮ ವಿರುದ್ಧವೇ ಅಪಪ್ರಚಾರ ಮಾಡುತ್ತಿರುವವರು ಯಾರು ಎಂಬುದು ಈ ದಿನ ನಿಮಗೆ ತಿಳಿದು ಬರಲಿದೆ. ವ್ಯಾಪಾರದಲ್ಲಿ ನಿಮ್ಮದೇ ಆದ ರಹಸ್ಯಗಳು ಇರುತ್ತವೆಯಲ್ಲಾ ಅದನ್ನು ಯಾರೊಂದಿಗೂ ಹಂಚಿಕೊಳ್ಳಲು ಹೋಗಬೇಡಿ.
ನನಗೆ ಯಾಕೆ ಬೇಕಿತ್ತು, ಸುಮ್ಮನಿದ್ದರೆ ಆಗುತ್ತಿತ್ತಲ್ಲ ಎಂದು ಹಲವು ಸಲ ಈ ದಿನ ನಿಮಗೆ ಅನಿಸಲಿದೆ. ಬೇರೆಯವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ನೀವು ಸಹಾಯ ಮಾಡಲು ಮುಂದಾಗಿದ್ದು, ಈಗ ನಿಮ್ಮ ವರ್ಚಸ್ಸಿಗೆ ಪೆಟ್ಟು ಬೀಳುವ ಮಟ್ಟಕ್ಕೆ ಸಮಸ್ಯೆಯಾಗಿ ಬೆಳೆಯಲಿದೆ. ವಿದ್ಯಾರ್ಥಿಗಳಿದ್ದಲ್ಲಿ ಓದಿನಲ್ಲಿ ಆಸಕ್ತಿ ಕಡಿಮೆಯಾಗಲಿದೆ. ಕುಟುಂಬದಲ್ಲಿನ ಸಮಸ್ಯೆಗಳ ಕಾರಣಕ್ಕಾಗಿ ಏಕಾಗ್ರತೆಗೆ ಭಂಗವಾಗಲಿದೆ. ಮನೆಯಲ್ಲಿದ್ದ ಮುಖ್ಯ ಕಾಗದ ಪತ್ರಗಳು ಕಾಣೆಯಾಗುವ ಸಾಧ್ಯತೆಗಳಿದ್ದು, ಹಳೆಯ ವಸ್ತುಗಳ ವಿಲೇವಾರಿ ಮಾಡುವುದಕ್ಕೆ ಮುಂದಾಗಿದ್ದೀರಿ ಎಂದಾದರೆ ಯಾವುದೇ ಪತ್ರವನ್ನಾದರೂ ಸರಿ ಒಂದಕ್ಕೆ ನಾಲ್ಕು ಬಾರಿ ಸರಿಯಾಗಿ ಪರಿಶೀಲಿಸಿ, ಆ ನಂತರ ಅದನ್ನು ಬಿಸಾಡಿ.
ನೀವು ಮಾಡಬೇಕು ಅಂದುಕೊಂಡ ಕೆಲಸಕ್ಕೆ ಹೆಚ್ಚು ಸಮಯವನ್ನು ನೀಡುವುದಕ್ಕೆ ಈ ದಿನ ಸಾಧ್ಯವಾಗುವುದಿಲ್ಲ. ಇತರರ ನಿರೀಕ್ಷೆಗಳಿಗೆ ಮತ್ತು ಅಗತ್ಯಗಳಿಗೆ ಹೇಗೆ ಕೆಲಸ ಮಾಡುವುದು ಅನ್ನೋದಕ್ಕೆ ಹೆಚ್ಚಿನ ಸಮಯ ಹೋಗುತ್ತದೆ. ನಿಮ್ಮಲ್ಲಿ ಕೆಲವರು ಈಗಾಗಲೇ ಮಾಡಿರುವಂತಹ ಉಳಿತಾಯ ಅಥವಾ ಬೇರೆ ಎಲ್ಲಾದರೂ ಮಾಡಿರುವಂತಹ ಹೂಡಿಕೆಯನ್ನು ತೆಗೆದು, ಒಂದು ಕಡೆ ಶಾಶ್ವತವಾದ ಆದಾಯ ಬರುವಂಥಲ್ಲಿ ಹಣ ಹಾಕುವುದಕ್ಕೆ ಯೋಚನೆ ಮಾಡಲಿದ್ದೀರಿ. ಕುಟುಂಬ ಸದಸ್ಯರ ಉನ್ನತ ಶಿಕ್ಷಣಕ್ಕಾಗಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈಗಾಗಲೇ ಪ್ರಯತ್ನಪಟ್ಟಿದ್ದೀರಿ ಎಂದಾದರೆ ಅದಕ್ಕೆ ಸಂಬಂಧಪಟ್ಟಂತೆ ಶುಭ ಸುದ್ದಿಯನ್ನು ಕೇಳುವ ಯೋಗ ಈ ದಿನ ನಿಮಗೆ ಇದೆ. ಯಾವುದೋ ಹಳೆ ವಿಚಾರದಲ್ಲಿ ನಿಮ್ಮ ಮನಸ್ಸು ಕಹಿಯಾಗಿದ್ದರೆ ಆ ವಿಚಾರವನ್ನು ಈ ದಿನ ಪದೇಪದೇ ಚರ್ಚಿಸಲು ಹೋಗಬೇಡಿ.
ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಹಣಕಾಸಿನ ಹರಿವು ಆಗಲಿದೆ. ನೀವು ಕೇಳದೆಯೇ ಕೆಲವರು ನಿಮಗೆ ನೆರವನ್ನು ನೀಡಬಹುದು. ಈ ಹಿಂದೆ ನೀವು ಮಾಡಿದ ಸಹಾಯದ ಉಪಕಾರ ಸ್ಮರಣೆಯನ್ನು ಮಾಡಿಕೊಂಡು ಕೆಲವರು ನಿಮ್ಮ ನೆರವಿಗೆ ನಿಲ್ಲಲಿದ್ದಾರೆ. ರುಚಿಕಟ್ಟಾದ ಊಟ ತಿಂಡಿ ಸವಿಯುವಂತಹ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ಎಲೆಕ್ಟ್ರಿಕಲ್ ವಾಹನಗಳನ್ನು ಖರೀದಿ ಮಾಡಬೇಕು ಎಂದಿರುವವರು ಯಾವುದನ್ನು ಖರೀದಿ ಮಾಡಬೇಕು ಎಂಬ ಬಗ್ಗೆ ಅಂತಿಮವಾದ ನಿರ್ಧಾರವನ್ನು ಕೈಗೊಳ್ಳಲಿದ್ದೀರಿ. ಬೆಳ್ಳಿ ಅಥವಾ ಬಂಗಾರದ ವಸ್ತುವನ್ನು ಕೊಳ್ಳುವಂತಹ ಸಾಧ್ಯತೆ ಇದೆ. ಮಕ್ಕಳ ಪ್ರತಿಭೆ ಹಾಗೂ ಅವರ ಸಾಮರ್ಥ್ಯವನ್ನು ಕಂಡು ಒಂದು ಬಗೆಯ ಸಮಾಧಾನ ಈ ದಿನ ನಿಮ್ಮಲ್ಲಿ ಮೂಡಲಿದೆ. ದೀರ್ಘಕಾಲದಿಂದ ನಿಮ್ಮನ್ನು ಕಾಡುತ್ತಿದ್ದ ಆತಂಕಗಳು ದೂರವಾಗಲಿವೆ.
ನಯವಾಗಿ ಮಾಡಿ ಮುಗಿಸಿಕೊಂಡು ಬಿಡೋಣ ಅಂದುಕೊಂಡ ಕೆಲಸ ಈ ದಿನ ಎಲ್ಲರಿಗೂ ತಿಳಿದು ಸಮಸ್ಯೆ ಆಗುವ ಸಾಧ್ಯತೆ ಇದೆ. ಪದೇ ಪದೇ ಅನಿಶ್ಚಿತತೆಯನ್ನು ಕಾಣಲಿದ್ದೀರಿ. ಹೆಚ್ಚೇನು ಖರ್ಚಾಗಲಾರದು, ಸಲೀಸಾಗಿ ಮಾಡಿಕೊಂಡು ಬಿಡೋಣ ಅಂದುಕೊಂಡಿರುತ್ತೀರಿ. ಅಂಥದ್ದಕ್ಕಾಗಿ ತುಂಬಾ ದೊಡ್ಡ ಮೊತ್ತವನ್ನು ನೀಡುವಂತಹ ಪರಿಸ್ಥಿತಿ ಎದುರಾಗುತ್ತದೆ. ಸಿಹಿ ಪದಾರ್ಥಗಳನ್ನು ಹೆಚ್ಚು ಸೇವಿಸುತ್ತೀರಿ ಎಂದಾದರೆ ಈ ದಿನ ಸಾಧ್ಯವಾದಷ್ಟು ಅಂಥದ್ದರಿಂದ ದೂರವಿದ್ದರೆ ಕ್ಷೇಮ. ನಿಮ್ಮಲ್ಲಿ ಕೆಲವರು ಪೊಲೀಸ್ ಠಾಣೆ ಮೆಟ್ಟಿಲೇರುವಂತಹ ಯೋಗ ಇದೆ. ಸಣ್ಣಪುಟ್ಟ ವ್ಯಾಜ್ಯ ಅಥವಾ ಭಿನ್ನಾಭಿಪ್ರಾಯಗಳು ಕಂಡುಬಂದಲ್ಲಿ ಅದನ್ನು ಕೂತು ಮಾತಾಡಿ ಬಗೆಹರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ. ನಿಮಗಿಂತ ಸಣ್ಣ ವಯಸ್ಸಿನವರ ಜೊತೆ ಮಾತನಾಡುತ್ತಿದ್ದೀರಿ ಅಂತಾದಲ್ಲಿ ಆಯ್ಕೆ ಮಾಡಿಕೊಳ್ಳುವ ಪದಗಳ ವಿಚಾರದಲ್ಲಿ ಜಾಗ್ರತೆಯಿಂದ ಇರುವುದು ಒಳ್ಳೆಯದು.
ಲೇಖನ- ಎನ್.ಕೆ.ಸ್ವಾತಿ