ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 18ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಯಾವುದೂ ಅಂದುಕೊಂಡಂತೆ ಆಗುತ್ತಿಲ್ಲ ಎಂದು ಈ ದಿನ ಬಹಳ ಚಿಂತೆಗೆ ಕಾರಣ ಆಗಲಿದೆ. ಉದ್ಯೋಗ ಸ್ಥಳದಲ್ಲಿ ನಿಮ್ಮದಲ್ಲದ ತಪ್ಪಿಗೆ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡಿ, ಆತ್ಮಸ್ಥೈರ್ಯ ಕುಗ್ಗಿಸುವಂಥ ಪ್ರಯತ್ನ ಆಗಲಿದೆ. ಒಂದೇ ಸಲಕ್ಕೆ ಆಗಬಹುದು ಎಂದುಕೊಂಡ ಕೆಲಸಗಳಿಗೆ ನಾಲ್ಕೈದು ಬಾರಿ ಪ್ರಯತ್ನಿಸಬೇಕಾಗುತ್ತದೆ. ಅಷ್ಟಾದರೂ ಆ ಕೆಲಸ ಸಂಪೂರ್ಣವಾಗಿ ಆಗುತ್ತದೆ ಎಂಬ ಖಾತ್ರಿ ಇರುವುದಿಲ್ಲ. ಈ ದಿನಾ ಯಾವ ಕಾರಣಕ್ಕೂ ಇತರರ ವಸ್ತುಗಳನ್ನು ಬಳಸುವುದಕ್ಕೆ ಹೋಗಬೇಡಿ. ಹಾಗೊಂದು ವೇಳೆ ಮಾಡಿದಲ್ಲಿ ಕೈಯಿಂದ ಹಣ ಕಟ್ಟಿಕೊಡುವಂತಹ ಸನ್ನಿವೇಶ ಎದುರಾಗಬಹುದು. ಬ್ರ್ಯಾಂಡೆಡ್ ವಸ್ತುಗಳ ಖರೀದಿ ಮಾಡಲೇಬೇಕು ಎಂಬ ಕಾರಣಕ್ಕೆ ಕ್ರೆಡಿಟ್ ಕಾರ್ಡ್ ಬಳಸೋಣ ಎಂದುಕೊಂಡರೆ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ವೆಚ್ಚ ಆಗುತ್ತದೆ. ಇದರಿಂದ ಆ ನಂತರ ಬೇಸರ ಪಡುವಂತಾಗುತ್ತದೆ.
ಗೆಳೆಯರ ಸಹಾಯದಿಂದ ಈ ದಿನ ಕೆಲವು ಕೆಲಸಗಳು ಸರಾಗವಾಗಿ ಆಗಲಿವೆ. ನಿಮ್ಮ ಜತೆಗೆ ಇರುವಂಥ ಅಥವಾ ನಿಮ್ಮ ಕೈ ಕೆಳಗೆ ಕೆಲಸ ಮಾಡುತ್ತಿರುವವರಿಗೆ ದೊಡ್ಡ ಮಟ್ಟದ ಸಹಾಯವನ್ನು ಮಾಡಲಿದ್ದೀರಿ. ಈ ಕಾರಣದಿಂದ ನಿಮ್ಮ ಬಗ್ಗೆ ಇರುವಂಥ ಕೃತಜ್ಞತಾ ಭಾವ ಜಾಸ್ತಿ ಆಗಲಿದೆ. ಯಾರು ವೃತ್ತಿನಿರತರಿದ್ದೀರಿ ಅಂಥವರಿಗೆ ಇಲ್ಲಿಯವರೆಗೆ ಪಡೆಯುತ್ತಿದ್ದ ಸೇವಾ ಶುಲ್ಕವನ್ನು ಹೆಚ್ಚು ಮಾಡಿಕೊಳ್ಳುವುದಕ್ಕೆ ಸರಿಯಾದ ಮಾರ್ಗ ಹಾಗೂ ಸಮಯದ ಸುಳಿವು ದೊರೆಯಲಿದೆ. ಮದುವೆಗೆ ಸೂಕ್ತ ಸಂಬಂಧದ ಹುಡುಕಾಟದಲ್ಲಿ ಇರುವಂಥವರು ಈ ದಿನ ಮಹತ್ವದ ಬೆಳವಣಿಗೆಯನ್ನು ನಿರೀಕ್ಷೆ ಮಾಡಬಹುದು. ಉದ್ಯೋಗ ಬದಲಾವಣೆಗಾಗಿ ನೀವಾಗಿಯೇ ಪ್ರಯತ್ನ ಮಾಡದಿದ್ದರೂ ಪ್ರತಿಷ್ಠಿತ ಸಂಸ್ಥೆಗಳಿಂದ ಕರೆ ಬರುವಂಥ ಸಾಧ್ಯತೆಗಳಿವೆ. ನಿಮ್ಮ ಸೋಷಿಯಲ್ ಕಾಂಟ್ಯಾಕ್ಟ್ ಗಳು ನಿಮಗೆ ಸಹಾಯ ಮಾಡಲಿವೆ.
ಒಂದೇ ಥರದ ಕೆಲಸ ಮಾಡುತ್ತಾ ಬೇಸರ ಆಗಿರುವವರಿಗೆ ಬದಲಾವಣೆಗೆ ಅವಕಾಶಗಳು ತೆರೆದುಕೊಳ್ಳಲಿವೆ. ನಿಮ್ಮಲ್ಲಿ ಯಾರು ಕುಟುಂಬ ವ್ಯವಹಾರವನ್ನು ಮುಂದುವರಿಸಿಕೊಂಡು ಹೋಗುವ ಬಗ್ಗೆ ಆಲೋಚನೆ ಮಾಡುತ್ತಿರುತ್ತೀರಿ ಅಂಥವರಿಗೆ ಈ ದಿನ ಒಂದು ಗಟ್ಟಿ ನಿರ್ಧಾರ ಮಾಡುವುದಕ್ಕೆ ಕೆಲವು ಸನ್ನಿವೇಶಗಳು ಸಹಾಯ ಮಾಡಲಿವೆ. ನಿಮ್ಮ ಸಾಮರ್ಥ್ಯ ಹಾಗೂ ಹಿನ್ನೆಲೆಯ ಬಗ್ಗೆ ಅಪಾರ ವಿಶ್ವಾಸ ಇರುವಂಥ ವ್ಯಕ್ತಿಗಳು ತಾವು ಬಂಡವಾಳ ಹೂಡುವುದಾಗಿಯೂ ನೀವು ಉಸ್ತುವಾರಿ ನೋಡಿಕೊಳ್ಳುವಂತೆಯೂ ಪ್ರಸ್ತಾವವನ್ನು ಮುಂದಿಡಬಹುದು. ನಿಮ್ಮ ಮೇಲೆ ಒತ್ತಡ ಎಂಬಂತೆ ಇರುವಂಥ ಕೆಲವು ಕೆಲಸಗಳನ್ನು ಮುಗಿಸುವುದಕ್ಕೆ ಮಾರ್ಗೋಪಾಯಗಳು ಗೋಚರ ಆಗುತ್ತವೆ. ಇತರರಿಗೆ ನಿಮ್ಮ ಆತ್ಮವಿಶ್ವಾಸದ ಬಗ್ಗೆ ಆಶ್ಚರ್ಯ ಮೂಡಬಹುದು. ಆದರೆ ಈ ಕಾರಣದಿಂದ ನಿಮ್ಮ ಅಹಂಕಾರ ಜಾಸ್ತಿ ಆಗದಂತೆ ನೋಡಿಕೊಳ್ಳಿ.
ಯಾರದೋ ದುಡ್ಡು ಉಳಿಸುವ ಪ್ರಯತ್ನದಲ್ಲಿ, ಅವರಿಗೇನೋ ಉಳಿತಾಯ ಮಾಡಿಸಿಕೊಡುವುದಕ್ಕೆ ನಿಮ್ಮ ಸಮಯ, ಆರೋಗ್ಯ, ನೆಮ್ಮದಿ ಹಾಳಾಗುವಂಥ ಸಾಧ್ಯತೆಗಳಿವೆ. ಆದ್ದರಿಂದ ನಿಮ್ಮ ಉದ್ದೇಶ ಇತರರಿಗೆ ಸಹಾಯ ಮಾಡಬೇಕು ಎಂಬುದೇ ಆದರೂ ಆ ಪ್ರಯತ್ನದಲ್ಲಿ ನಿಮಗೆ ನಷ್ಟವಾಗದಂತೆ ನೋಡಿಕೊಳ್ಳಿ. ಹೊಸ ಬಟ್ಟೆ, ಸ್ಮಾರ್ಟ್ ವಾಚ್, ಜಿಮ್ ಸಲಕರಣೆಗಳು ಇಂಥವನ್ನು ಖರೀದಿ ಮಾಡುವಂಥ ಯೋಗ ಈ ದಿನ ನಿಮ್ಮ ಪಾಲಿಗಿದೆ. ಆದರೆ ಇದನ್ನು ಯಾರದೋ ಮೇಲಿನ ಸವಾಲಿಗೆ ಅಥವಾ ಪ್ರತಿಷ್ಠೆಗೆ ಮಾಡುವುದಕ್ಕೆ ಹೋಗಬೇಡಿ. ನಿಮಗೆ ಅಗತ್ಯವಿದೆಯೇ ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಿ ಹಾಗೂ ಇಷ್ಟು ಹಣ ಖರ್ಚು ಮಾಡಿ ಖರೀದಿ ಮಾಡಬೇಕಾ ಎಂಬುದನ್ನು ಸಹ ಪ್ರಶ್ನೆ ಮಾಡಿಕೊಂಡು, ಆ ನಂತರವೇ ತೀರ್ಮಾನವನ್ನು ಕೈಗೊಳ್ಳಿ. ಯಾವುದಾದರೂ ಪ್ರಮುಖ ಕಾಗದ-ಪತ್ರಗಳ ವ್ಯವಹಾರ ಇದ್ದಲ್ಲಿ ಇದೊಂದು ದಿನದ ಮಟ್ಟಿಗೆ ಮುಂದೂಡುವುದು ಉತ್ತಮ.
ಬೇರೆಯವರಿಗೆ ಸಲಹೆ ಅಥವಾ ಉಪದೇಶ ನೀಡುವುದು ಸಲೀಸು. ಆದರೆ ಅದೇ ವಿಚಾರವನ್ನು ನಾವು ಅಳವಡಿಸಿಕೊಳ್ಳಬೇಕು ಎಂದಾಗ ಅದರಲ್ಲಿ ಸವಾಲುಗಳೇನು ಎಂಬುದು ಅರಿವಿಗೆ ಬರುತ್ತದೆ. ನಿಮ್ಮ ವಿಚಾರದಲ್ಲಿ ಈ ದಿನ ಇಂಥದ್ದೊಂದು ಅನುಭವ ಆಗುತ್ತದೆ. ದೇಹದ ತೂಕ ಇಳಿಸಬೇಕು, ನಿಮಗಿರುವ ದುರಭ್ಯಾಸವೊಂದನ್ನು ಬಿಡಲೇಬೇಕು ಎಂದು ವೈದ್ಯರು ಅಥವಾ ನೀವು ಬಹಳ ಗೌರವಿಸುವಂಥ ವ್ಯಕ್ತಿಯೇ ಹೇಳುವ ಸಾಧ್ಯತೆ ಇದೆ. ಆದರೆ ಅದನ್ನು ಅಳವಡಿಸಿಕೊಳ್ಳುವುದು ಬಹಳ ಕಷ್ಟ ಎಂಬುದು ನಿಮ್ಮ ಗಮನಕ್ಕ ಬರಲಿದೆ. ಇನ್ನು ನೀವು ಬಹಳ ಇಷ್ಟಪಟ್ಟು ತಂದಿದ್ದ ವಸ್ತುವನ್ನೋ ಅಥವಾ ಸಾಕು ಪ್ರಾಣಿಯನ್ನೋ ನಿಮಗೆ ಬಹಳ ಆಪ್ತರಾದವರೇ ಕೇಳಲಿದ್ದಾರೆ. ಅವರಿಗೆ ಇಲ್ಲ ಎಂದು ಹೇಳುವುದಕ್ಕೆ ಸಾಧ್ಯವಾಗದೆ, ಅವರಿಗೆ ಅದನ್ನು ನೀಡಿದ ಮೇಲೆ ಪರಿತಪಿಸುವಂತೆ ಆಗುತ್ತದೆ. ಯುಪಿಐ ಅನ್ನು ಹೆಚ್ಚು ಬಳಸುವಂಥವರು ಸಣ್ಣ ಮೊತ್ತದ ನಷ್ಟವನ್ನಾದರೂ ಅನುಭವಿಸುತ್ತೀರಿ.
ನೀವು ನಿರೀಕ್ಷೆಯೇ ಮಾಡದ ರೀತಿಯಲ್ಲಿ ತೀರ್ಥಯಾತ್ರೆಯನ್ನು ಕೈಗೊಳ್ಳುವಂಥ ಯೋಗ ನಿಮಗಿದೆ. ನಿಮ್ಮ ಸ್ನೇಹಿತರೋ ಅಥವಾ ಸಂಬಂಧಿಕರೋ ದಿಢೀರನೇ ಬಂದು ಅಥವಾ ಫೋನ್ ಮೂಲಕವಾಗಿ ಕರೆ ಮಾಡಿ, ತಕ್ಷಣವೇ ಬಟ್ಟೆ-ಬರೆಗಳೊಂದಿಗೆ ಸಿದ್ಧವಾಗುವಂತೆ ತಿಳಿಸಬಹುದು. ನಿಮ್ಮ ಪೈಕಿ ಕೆಲವರಿಗೆ ಒಂದೇ ಒಂದು ರೂಪಾಯಿ ಕೂಡ ಖರ್ಚಿಲ್ಲದಂತೆ ತೀರ್ಥ ಯಾತ್ರೆ ಕೈಗೊಳ್ಳುವ ಯೋಗ ಇದೆ. ಸಂಬಂಧದ ವಿಚಾರದಲ್ಲಿ ಇಷ್ಟು ಸಮಯ ನಿಮಗೆ ಗೊಂದಲವೇನಾದರೂ ಕಾಡುತ್ತಿದ್ದಲ್ಲಿ ಅದು ನಿವಾರಣೆ ಆಗಲಿದೆ. ಅದರಲ್ಲೂ ಯಾವುದಾದರೂ ನಿರ್ದಿಷ್ಟ ವ್ಯಕ್ತಿಯ ಬಗ್ಗೆ ನಿಮಗೆ ಇರುವುದು ಪ್ರೀತಿಯೋ ಸ್ನೇಹವೋ ಎಂದು ನಿರ್ಧರಿಸಲಾಗದ ಸ್ಥಿತಿಯಲ್ಲಿ ನೀವಿದ್ದೀರಿ ಎಂದಾದರೆ ಅಂತಿಮ ನಿರ್ಧಾರಕ್ಕೆ ಬರುವುದು ಸಾಧ್ಯವಾಗುತ್ತದೆ. ಸಣ್ಣ ಕೆಲಸ ಬಂದಿದೆ, ಅವರಿಗೆ ಅದನ್ನು ಮಾಡಿಕೊಡುವ ಮೂಲಕ ಸಹಾಯ ಮಾಡೋಣ ಎಂದುಕೊಂಡಿದ್ದರಿಂದ ದೀರ್ಘಾವಧಿಯಲ್ಲಿ ಅನುಕೂಲ ಆಗಲಿದೆ.
ನಿಮ್ಮೆದುರು ಯಾವುದೇ ವ್ಯಾಪಾರ- ವ್ಯವಹಾರ ಅಥವಾ ಏನೇ ಮಾತುಕತೆಗಳು ಆಗುತ್ತಿದ್ದರೂ ತುಟಿ ಬಿಚ್ಚದೆ ಸುಮ್ಮನಿರುವುದಕ್ಕೆ ಪ್ರಯತ್ನಿಸಿ. ಏಕೆಂದರೆ ನಿಮ್ಮ ಅತ್ಯುತ್ಸಾಹವೋ ಅಥವಾ ಇತರರಿಗೆ ನಿಮ್ಮ ಸಲಹೆ- ಸೂಚನೆಗಳಿಂದ ಸಹಾಯ ಮಾಡಬಹುದು ಎಂಬ ಲೆಕ್ಕಾಚಾರವೋ ಸಮಸ್ಯೆಯನ್ನು ತಂದೊಡ್ಡಲಿದೆ. ದ್ವಿಚಕ್ರ ವಾಹನದಲ್ಲಿ ದೂರಕ್ಕೆ ಸಂಚಾರ ಮಾಡುವಂಥವರು ಈ ದಿನ ಬಹಳ ಎಚ್ಚರಿಕೆಯಿಂದ ಇರಬೇಕು. ಒಂದು ವೇಳೆ ಬಹಳ ಸಮಯದಿಂದ ವಾಹನದ ಸರ್ವೀಸ್ ಮಾಡಿಸಿಲ್ಲ ಅಂತಾದರೆ ಅದನ್ನು ಮಾಡಿಸುವುದು ಉತ್ತಮ. ನಿಮ್ಮಿಂದ ಆಗುವಂಥ ಸಣ್ಣ ಮಟ್ಟದ ನಿರ್ಲಕ್ಷ್ಯ ಸಹ ದೊಡ್ಡ ಮಟ್ಟದ ಬೆಲೆ ತೆರುವಂತೆ ಮಾಡುತ್ತದೆ. ಆಸ್ತಿಗೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ಗೊಂದಲ ಜಾಸ್ತಿ ಆಗಲಿದೆ. ಎಲ್ಲ ಸಮಸ್ಯೆಗಳು ಬಗೆಹರಿಯುತ್ತದೆ ಎಂದು ತುಂಬ ನಿರೀಕ್ಷೆ ಇರಿಸಿಕೊಂಡಿದ್ದ ವ್ಯವಹಾರ ಅಂದುಕೊಂಡಂತೆ ನಡೆಯುವುದಿಲ್ಲ.
ನಿಮ್ಮ ಕಣ್ಣೆದುರಿಗೇ ಆಗುವಂಥ ನಷ್ಟವನ್ನು ತಪ್ಪಿಸುವುದಕ್ಕೆ ಸಾಧ್ಯವಾಗುವುದಿಲ್ಲ. ನಿಮ್ಮಲ್ಲಿ ಕೆಲವರಿಗೆ ಕಣ್ಣಿಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅಥವಾ ಬೇರೆ ಯಾವುದಾದರೂ ಕಾರಣದಿಂದ ಆಸ್ಪತ್ರೆಗೆ ಹೋಗಿ, ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡ ವೇಳೆ ನಿಮಗೆ ಕಣ್ಣಿನ ಸಮಸ್ಯೆ ಇರುವುದರಿಂದಲೇ ಬೇರೆ ಸಮಸ್ಯೆಗಳು ಆಗುತ್ತಿವೆ ಎಂಬುದನ್ನು ಹೇಳಬಹುದು. ಇನ್ನು ನಿಮ್ಮ ತಂದೆ ಕಡೆಯ ಸಂಬಂಧಿಕರು ಹಣಕಾಸಿನ ಸಹಾಯಕ್ಕಾಗಿ ಕೇಳಿಕೊಂಡು ಬರುವ ಸಾಧ್ಯತೆಗಳಿವೆ. ಈ ವೇಳೆ ಸಣ್ಣ- ಪುಟ್ಟ ವಾಗ್ವಾದಗಳು ಆಗಬಹುದು. ನೀವು ಬಳಸುವ ಪದಗಳ ಮೇಲೆ ನಿಗಾ ಇರಿಸಿಕೊಳ್ಳಿ. ಒಂದು ವೇಳೆ ಇಲ್ಲ ಎಂಬ ಉತ್ತರವನ್ನು ನೀಡುವುದೇ ಆದರೂ ಎದುರಿನಲ್ಲಿ ಇರುವವರಿಗೆ ನೋವು- ಬೇಸರ ಆಗದಂತೆ ಹೇಳುವುದಕ್ಕೆ ಪ್ರಯತ್ನಿಸಿ. ಹೋಟೆಲ್ ಉದ್ಯಮದಲ್ಲಿ ಇರುವಂಥವರಿಗೆ ಆದಾಯದಲ್ಲಿ ಭಾರೀ ಪ್ರಮಾಣದ ಇಳಿಕೆ ಆಗಿ, ಆತಂಕಕ್ಕೆ ಕಾರಣ ಆಗಲಿದೆ.
ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸಗಳು ಇದ್ದಲ್ಲಿ ಈ ದಿನ ಗಟ್ಟಿಯಾಗಿ ಪ್ರಯತ್ನ ಮಾಡಿದಲ್ಲಿ ಅವು ಆಗುವ ಸಾಧ್ಯತೆಗಳು ಹೆಚ್ಚಿವೆ. ಇನ್ನು ಈಗಾಗಲೇ ಪ್ರಯತ್ನ ಹಾಕಿದ್ದೀರಿ ಎಂದಾದಲ್ಲಿ ಅದರ ಫಲಿತಾಂಶ ಏನು ಎಂಬುದು ಈ ದಿನ ಗೊತ್ತಾಗುತ್ತದೆ. ಇನ್ನು ನಿಮ್ಮ ಪ್ರಭಾ ವಲಯ ವಿಸ್ತರಣೆ ಆಗಲಿದೆ. ಈ ಹಿಂದೆ ಯಾವಾಗಲೋ ನೀವು ಮಾಡಿದ್ದ ಹೂಡಿಕೆ ನಷ್ಟದಲ್ಲಿತ್ತು ಎಂದುಕೊಂಡು ಮರೆತು ಸುಮ್ಮನಾಗಿದ್ದು ಈ ದಿನ ಲಾಭಕರವಾಗಿ ಬದಲಾಗಿದೆ ಎಂದು ತಿಳಿದುಬರಬಹುದು ಅಥವಾ ನಿಮ್ಮ ಅಸಲು ಮೊತ್ತವಾದರೂ ಸಿಗುತ್ತದೆ ಎಂಬ ಮಟ್ಟಕ್ಕೆ ಆಗುತ್ತದೆ. ಕೃಷಿ ಜಮೀನು ಅಥವಾ ಕೋಳಿ ಫಾರ್ಮ್, ಮೀನು ಸಾಕಣೆ, ಕುರಿ ಸಾಕಣೆ ಇಂಥದ್ದನ್ನು ಮಾಡಬೇಕು ಎಂಬ ಕಾರಣಕ್ಕೆ ಸೂಕ್ತ ಸ್ಥಳಕ್ಕಾಗಿ ಹುಡುಕಾಟ ನಡೆಸುತ್ತಿದ್ದಲ್ಲಿ ಅಂಥವರಿಗೆ ಈ ದಿನ ದೊರೆಯುವ ಸಾಧ್ಯತೆ ಹೆಚ್ಚಿದೆ. ಅಷ್ಟೇ ಅಲ್ಲ, ಒಂದು ವೇಳೆ ಕಾರ್ಮಿಕರ ಹುಡುಕಾಟ ನಡೆಸುತ್ತಿದ್ದಲ್ಲಿ ಅದು ಕೂಡ ಸಫಲವಾಗಲಿದೆ.
ಲೇಖನ- ಎನ್.ಕೆ.ಸ್ವಾತಿ