ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 07ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಭವಿಷ್ಯದಲ್ಲಿ ನಡೆಯುವಂತಹ ಸಂಗತಿಯೊಂದರ ಸುಲಭ- ಸೂಕ್ಷ್ಮ ನಿಮಗೆ ಈ ದಿನ ಗಮನಕ್ಕೆ ಬರಲಿದೆ. ಅದನ್ನು ಗಂಭೀರವಾಗಿ ಪರಿಗಣಿಸುವುದು ಒಳ್ಳೆಯದು. ಹೀಗೊಂದು ಆಲೋಚನೆ ಬರುತ್ತಿದೆ, ಹಾಗೆಂದ ಮಾತ್ರಕ್ಕೆ ಅದು ನಿಜವಾದೀತೆ ಎಂದು ನಿರ್ಲಕ್ಷ್ಯ ಮಾಡಬೇಡಿ. ನಿಮ್ಮಲ್ಲಿ ಯಾರು ಸಂಗೀತ ಕ್ಷೇತ್ರವನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದ್ದೀರಿ ಅಂಥವರ ಪಾಲಿಗೆ ಈ ದಿನ ಬಹಳ ಮಹತ್ತರವಾಗಿ ಇರುತ್ತದೆ. ಏಕೆಂದರೆ ಒಂದು ಅದ್ಭುತವಾದ ಅವಕಾಶ ಹುಡುಕಿಕೊಂಡು ಬರಲಿದೆ. ನಿಮಗೆ ಇದನ್ನು ಒಪ್ಪಿಕೊಳ್ಳುವುದು ಒತ್ತಡ ಎಂಬಂತೆ ಅನಿಸಬಹುದು. ಆರಂಭದಲ್ಲಿ ಅದು ನಿಜವೂ ಆಗಿರುತ್ತದೆ. ಆದರೆ ಕ್ರಮೇಣ ದೊಡ್ಡ ಸಕಾರಾತ್ಮಕ ಬದಲಾವಣೆಗೆ ಕಾರಣ ಆಗಲಿದೆ. ಸಂಬಂಧ- ಸ್ನೇಹಗಳ ವಿಚಾರದಲ್ಲಿ ಸ್ವಲ್ಪ ಮಟ್ಟಿಗಿನ ನಿರ್ಲಕ್ಷ್ಯ ಮಾಡಿದರೂ ದೊಡ್ಡ ಮಟ್ಟದಲ್ಲಿ ಬೆಲೆ ಕಟ್ಟುವಂತಾಗುತ್ತದೆ, ಜಾಗ್ರತೆ.
ನೀವು ಬಹಳ ನಂಬುವ ಹಾಗೂ ಎಲ್ಲ ಸಂದರ್ಭದಲ್ಲೂ ಗೌರವದಿಂದ ನೋಡುವಂಥ ವ್ಯಕ್ತಿಯ ವರ್ತನೆ ನಿಮಗೆ ಕಿರಿಕಿರಿ ಉಂಟು ಮಾಡುತ್ತದೆ. ನಿಮ್ಮ ಅಗತ್ಯಕ್ಕೆ ಹಾಗೂ ಪರಿಸ್ಥಿತಿ- ಸನ್ನಿವೇಶಕ್ಕೆ ತುಂಬ ವಿರುದ್ಧವಾದ ರೀತಿಯಲ್ಲಿ ಮಾತನಾಡುವವರನ್ನು ಸಹಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಏಳ್ಗೆಯನ್ನು ಸಹಿಸಲು ಆಗದೆ ಹೀಗೇನಾದರೂ ಮಾತನಾಡುತ್ತಾ ಇದ್ದಾರಾ ಎಂಬ ಅನುಮಾನ ಸಹ ನಿಮ್ಮಲ್ಲಿ ಮೂಡಲಿದೆ. ನೀವು ಉದ್ಯೋಗ ಮಾಡುವ ಸ್ಥಳದಲ್ಲಿ ಬೆಲೆ ಬಾಳುವ ವಸ್ತುಗಳು ಕಾಣೆಯಾಗಿ ಅಥವಾ ಕಳುವಾಗಿ ನೀವು ಒತ್ತಡಕ್ಕೆ ಸಿಲುಕಿಕೊಳ್ಳುವಂತೆ ಆಗುತ್ತದೆ. ಇಷ್ಟು ಸಮಯ ನೀವು ತೋರಿದ್ದ ತಾಳ್ಮೆ, ಇತರರಿಗೆ ಅನುಕೂಲ ಆಗಲಿ ಎಂದು ತೆಗೆದುಕೊಂಡ ತೀರ್ಮಾನಗಳು ಮರೆಯುವ ರೀತಿಯಲ್ಲಿ ಕೆಲವರು ನಿಮ್ಮನ್ನು ತಿರಸ್ಕಾರ ಭಾವದಿಂದ ನೋಡಬಹುದು. ಆದ್ದರಿಂದ ಯಾವುದೇ ನಿಮ್ಮ ನಡೆಯು ಅನುಮಾನಕ್ಕೆ ಎಡೆ ಮಾಡಿಕೊಡದಿರಲಿ.
ಕಚೇರಿ ಅಥವಾ ನೀವು ಮಾಡುವ ಸಂಸ್ಥೆಯಲ್ಲಿನ ಅತಿ ಮುಖ್ಯವಾದ ಕೆಲಸವನ್ನು ನಿಮಗೆ ಒಪ್ಪಿಸುವಂಥ ಸಾಧ್ಯತೆ ಇದೆ. ನಿಮಗಿಂತ ಹಿರಿಯರು, ಅನುಭವಿಗಳು ಹಾಗೂ ಹೆಚ್ಚು ಸಮರ್ಥರು ಎಂದೆನಿಸಿಕೊಂಡವರನ್ನೆಲ್ಲ ಬಿಟ್ಟು, ನಿಮಗೇ ಈ ಕೆಲಸವನ್ನು ವಹಿಸುವ ಅವಕಾಶಗಳಿವೆ. ಯಾವುದೇ ಸ್ಥಳಕ್ಕೆ ತೆರಳುವಂತೆ ಇದ್ದರೆ ಹತ್ತು ನಿಮಿಷ ಮುಂಚಿತವಾಗಿಯೇ ಅಲ್ಲಿಗೆ ತಲುಪುವ ರೀತಿಯಲ್ಲಿ ಯೋಜನೆಯನ್ನು ಹಾಕಿಕೊಳ್ಳಿ. ಸ್ವಾದಿಷ್ಟವಾದ ಊಟ- ತಿಂಡಿಗಳನ್ನು ಮಾಡುವ ಯೋಗ ನಿಮ್ಮ ಪಾಲಿಗೆ ಇದೆ. ಬಹಳ ಸಮಯದಿಂದ ಬಾಕಿ ಉಳಿದುಹೋಗಿದ್ದ ಕೆಲಸ- ಕಾರ್ಯಗಳು ಮುಗಿಯುವಂತಹ ಸೂಚನೆ ಈ ದಿನ ನಿಮಗೆ ದೊರೆಯಲಿದೆ. ಇದೇ ಮೊದಲ ಬಾರಿಗೆ ಎಂಬಂತೆ ಸವಾಲು ಮೈ ಮೇಲೆ ಎಳೆದುಕೊಂಡು ನೀವು ಮಾಡಿದ ಕೆಲಸದಲ್ಲಿ ಅದ್ಭುತವಾದ ಯಶಸ್ಸು ನಿಮ್ಮದಾಗಲಿದೆ.
ಯಾರು, ಯಾವ ಮಾತು ಹೇಳಿದರು ಹಾಗೂ ಅದನ್ನು ಎಷ್ಟರ ಮಟ್ಟಿಗೆ ಪಾಲಿಸಬೇಕು ಎಂಬ ಬಗ್ಗೆ ಸರಿಯಾದ ವಿವೇಚನೆಯನ್ನು ಇರಿಸಿಕೊಳ್ಳುವುದು ಮುಖ್ಯವಾಗುತ್ತದೆ. ಪುರುಷರಾಗಿದ್ದಲ್ಲಿ ಸ್ತ್ರೀಯರ ವಿಚಾರಕ್ಕೆ ಹಾಗೂ ಸ್ತ್ರೀಯರಾಗಿದ್ದಲ್ಲಿ ಪುರುಷರ ವಿಚಾರಕ್ಕೆ ಜನರ ಆಕ್ಷೇಪಕ್ಕೆ ಗುರಿ ಆಗಲಿದ್ದೀರಿ. ನೀವು ಬಂದೇ ಬರುತ್ತದೆ ಎಂದು ಭಾವಿಸಿದ್ದ ಕೆಲಸ ಅಥವಾ ಪ್ರಾಜೆಕ್ಟ್ ನಿಮ್ಮ ಕೈ ತಪ್ಪುವ ಸಾಧ್ಯತೆಗಳಿವೆ. ಈ ಹಿಂದೆ ನೀವು ಯಾವಾಗಲೋ ಆಡಿದ್ದ ಮಾತಿನ ಪರಿಣಾಮವನ್ನು ಈ ದಿನ ಅನುಭವಿಸಲಿದ್ದೀರಿ. ಮುಖ್ಯವಾದ ಕೆಲಸ- ಕಾರ್ಯಗಳಿಗೆ ತೆರಳುವಂಥವರು ಸಮಾಧಾನದಿಂದ ವರ್ತಿಸಿ. ನಿಮ್ಮ ಎದುರಿಗೆ ಇರುವಂಥ ವ್ಯಕ್ತಿಯು ನೀವು ಸಿಟ್ಟಿಗೇಳುವಂಥ ಮಾತುಗಳನ್ನು ಆಡುವ ಸಾಧ್ಯತೆಗಳಿವೆ. ಆದರೆ ಸಮಾಧಾನದಿಂದ ಉತ್ತರಿಸಿ. ದ್ವಿಚಕ್ರ ವಾಹನದಲ್ಲಿ ಸಂಚರಿಸುವಂಥವರು ಮಾಮೂಲಿ ದಿನಕ್ಕಿಂತ ಎಚ್ಚರಿಕೆಯಿಂದ ಇರಿ.
ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುವಂಥವರಿಗೆ ಬಹಳ ಮುಖ್ಯವಾದ ಸುದ್ದಿಯೊಂದು ಕೇಳಿಬರಲಿದೆ. ಅಂದ ಹಾಗೆ ವೃತ್ತಿನಿರತರು ಯಾರಿದ್ದೀರಿ ಅಂಥವರಿಗೆ ವಿದೇಶ ಪ್ರಯಾಣ ತೆರಳುವ ಯೋಗ ಕಂಡುಬರುತ್ತಿದ್ದು, ಆ ಬಗ್ಗೆ ನಿಮಗೆ ಮಾಹಿತಿ ದೊರೆಯಲಿದೆ ಅಥವಾ ನೀವು ವಿದೇಶಕ್ಕೆ ತೆರಳಬೇಕು, ಅದಕ್ಕೆ ಬೇಕಾದಂಥ ಸಿದ್ಧತೆಯನ್ನು ಮಾಡಿಕೊಳ್ಳಿ ಅಂತ ತಿಳಿಸುವ ಸಾಧ್ಯತೆಗಳಿವೆ. ಉದ್ಯೋಗನಿರತರು ಮೇಲಧಿಕಾರಿಗಳ ಗಮನವನ್ನು ಸೆಳೆಯಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ಬಡ್ತಿ ಅಥವಾ ವೇತನ ಹೆಚ್ಚಳ ಆಗುವ ಬಗ್ಗೆ ಸುಳಿವು ಸಿಗಬಹುದು. ಆದರೆ ನೀವು ನೆನಪಿನಲ್ಲಿ ಇಡಬೇಕಾದ ಸಂಗತಿ ಏನೆಂದರೆ, ಯಾರ ಬಗ್ಗೆಯೂ ನೆಗೆಟಿವ್ ಆದಂಥ ಮಾತುಗಳನ್ನು ಆಡಬೇಡಿ. ಅದರಲ್ಲೂ ನೀವು ಎಲ್ಲಿ ಕೆಲಸ ಮಾಡುತ್ತಿದ್ದೀರೋ ಅದೇ ಸಂಸ್ಥೆಯಲ್ಲಿ ಇರುವಂಥವರ ಎದುರು ಏನನ್ನೂ ಮಾತನಾಡಬೇಡಿ.
ನೀವು ತೋರಿಸುವಷ್ಟು ಪ್ರೀತಿ, ಇಟ್ಟುಕೊಂಡಿರುವ ಕಾಳಜಿಯನ್ನು ಇತರರು ನಿಮ್ಮ ಬಗ್ಗೆ ಇಟ್ಟುಕೊಂಡಿಲ್ಲ ಎಂದು ತುಂಬ ಬಲವಾಗಿ ಅನಿಸುವುದಕ್ಕೆ ಆರಂಭವಾಗುತ್ತದೆ. ಹಳೇ ಘಟನೆ, ಸನ್ನಿವೇಶಗಳು, ಇತರರು ನಿಮ್ಮ ಬಗ್ಗೆಯೇ ಆಡಿದ್ದ ಮಾತುಗಳು ಸಿಕ್ಕಾಪಟ್ಟೆ ನೆನಪಾಗಲಿವೆ. ಮನಸ್ಸಿನಲ್ಲಿ ಒಂದು ಬಗೆಯ ಪ್ರತೀಕಾರ ಭಾವನೆ ಕಾಡಲಿದೆ. ಸಾರ್ವಜನಿಕ ಸಾರಿಗೆಯಲ್ಲಿ ಸಂಚಾರ ಮಾಡುವಂಥವರಿದ್ದಲ್ಲಿ ಈ ದಿನ ಒಂದಿಷ್ಟು ಜಾಗ್ರತೆಯಿಂದ ಇರಬೇಕು. ಏಕೆಂದರೆ, ಅಲ್ಲಿಂದ ಬಿದ್ದು, ಗಾಯ ಮಾಡಿಕೊಳ್ಳುವಂಥ ಸಾಧ್ಯತೆಗಳಿವೆ. ಈಗಾಗಲೇ ಸೊಂಟ ನೋವು ಅಥವಾ ಬೆನ್ನು ನೋವು ಕಾಡುತ್ತಾ ಇದ್ದಲ್ಲಿ ಅದು ಉಲ್ಬಣ ಆಗಬಹುದು. ನೀವು ಮಾಡುವ ಕೆಲಸ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ್ದು ಅಂತಾದಲ್ಲಿ ಏಕಾಗ್ರತೆ ಸಾಧ್ಯವಾಗುತ್ತಿಲ್ಲ ಎಂದಾದರೆ ರಜಾ ಹಾಕಿಕೊಳ್ಳುವುದು ಕ್ಷೇಮ ಅಥವಾ ಆ ಜವಾಬ್ದಾರಿ ಬೇರೆಯವರಿಗೆ ವಹಿಸಿ.
ನಿಮಗೆ ಬಾಕಿ ಬರಬೇಕಾದ ಪಿಎಫ್, ಗ್ರಾಚ್ಯುಟಿ ಅಥವಾ ಯಾವುದೇ ಹಣ ಇರಬಹುದು, ಈ ದಿನ ಅದಕ್ಕಾಗಿ ಬಲವಾದ ಪ್ರಯತ್ನ ಮಾಡಿ. ಈ ಹಿಂದೆ ನೀವು ಪಟ್ಟಂಥ ಶ್ರಮಕ್ಕೆ ಈಗ ಪ್ರತಿಫಲ ದೊರೆಯಲಿದೆ. ಮನೆಗೆ ಸಂಬಂಧಿಸಿದಂತೆ ಸ್ಟೀಲ್ ಕೆಲಸ ಮಾಡುವಂಥವರು, ಹೋಮ್ ಆಟೋಮೆಷನ್ ಮಾಡುವಂಥವರಿಗೆ ಆದಾಯದಲ್ಲಿ ಹೆಚ್ಚಳ ಆಗುವಂಥ ಯೋಗ ಕಂಡುಬರುತ್ತಿದೆ. ನಿಮ್ಮಲ್ಲಿ ಕೆಲವರು ಪ್ರತಿಷ್ಠಿತ ಸಂಸ್ಥೆಗಳಿಂದ ಉದ್ಯೋಗಾವಕಾಶ ಪಡೆಯುವ ಸಾಧ್ಯತೆಗಳಿವೆ. ಇನ್ನು ನಿಮ್ಮಲ್ಲಿ ಯಾರು ಸ್ವಂತ ವ್ಯವಹಾರ, ವ್ಯಾಪಾರ ಅಥವಾ ಉದ್ಯಮವನ್ನು ಆರಂಭಿಸಬೇಕು ಎಂದು ಬಹು ಕಾಲದಿಂದ ಅಂದುಕೊಳ್ಳುತ್ತಾ ಇರುತ್ತೀರಿ ಅಂಥವರಿಗೆ ಅವಕಾಶಗಳು ತೆರೆದುಕೊಳ್ಳಲಿವೆ. ಉದ್ಯೋಗವನ್ನು ಬಿಟ್ಟು, ಈ ವ್ಯವಹಾರವನ್ನು ಶುರು ಮಾಡುವ ಬಗ್ಗೆ ಗಟ್ಟಿಯಾದ ನಿರ್ಧಾರಗಳನ್ನು ಮಾಡುವ ಸಾಧ್ಯತೆಗಳಿವೆ.
ಕರಿದ ಪದಾರ್ಥಗಳು, ಮಸಾಲೆಯುಕ್ತ ಪದಾರ್ಥಗಳಿಂದ ಈ ದಿನ ದೂರವಿದ್ದಷ್ಟೂ ಒಳ್ಳೆಯದು. ನೀವೇನಾದರೂ ಮಾಂಸಾಹಾರಿಗಳು ಆದಲ್ಲಿ ಖಂಡಿತಾ ಅದರಿಂದ ದೂರ ಇದ್ದುಬಿಡಿ. ಬಾಯಿ ಚಪಲಕ್ಕೆ ಬಿದ್ದು, ಏನಾದರೂ ಸೇವನೆ ಮಾಡಿದಿರೋ ನಾನಾ ರೀತಿಯ ಅನಾರೋಗ್ಯ ಸಮಸ್ಯೆಗಳು ಎದುರಿಸಬೇಕಾದೀತು. ಭೂಮಿ ವ್ಯವಹಾರಗಳಿಗೆ ಸಂಬಂಧಿಸಿದ ಮಾತುಕತೆಗಳು ಏನಾದರೂ ಈ ದಿನ ಇದ್ದಲ್ಲಿ ಸಾಧ್ಯವಾದರೆ ಮುಂದಕ್ಕೆ ಹಾಕಿ. ಏಕೆಂದರೆ ಸಣ್ಣ ಸಂಗತಿಯಾದರೂ ದೊಡ್ಡ ಮಟ್ಟದ ಅಭಿಪ್ರಾಯ ಭೇದ, ಮನಸ್ತಾಪಗಳು ಕಾಣಿಸಿಕೊಂಡು ಆ ವ್ಯವಹಾರವೇ ಮುರಿದು ಬೀಳಬಹುದು. ಆದ್ದರಿಂದ ಜಾಗ್ರತೆಯಿಂದ ಇರಿ. ಇನ್ನು ನಿಮ್ಮಲ್ಲಿ ಯಾರು ಹೂವು- ಹಣ್ಣಿನ ವ್ಯಾಪಾರವನ್ನು ಮಾಡುತ್ತಿದ್ದೀರೋ ಅಂಥವರಿಗೆ ಒತ್ತಡದ ದಿನ ಇದಾಗಿರುತ್ತದೆ. ಅನಿವಾರ್ಯವಾಗಿ ಸಾಲ ಮಾಡಬೇಕಾಗಿ ಬರಬಹುದು.
ನೀವು ಮರೆತೇ ಹೋದಂತಹ ಕೆಲವು ವಿಚಾರಗಳನ್ನು ನಿಮ್ಮ ಆಪ್ತರೇ ನೆನಪು ಮಾಡಲಿದ್ದಾರೆ. ಭವಿಷ್ಯದಲ್ಲಿ ನಿಮಗೆ ಅನುಕೂಲ ಆಗುವಂಥ ವಿಚಾರಗಳು ಆದಲ್ಲಿ ಅದನ್ನು ನೀವು ಹೇಗೆ ಸಾಧಕವಾಗಿ ಮಾಡಿಕೊಳ್ಳಬಹುದು ಎಂಬುದನ್ನು ಸರಿಯಾಗಿ ಯೋಜನೆ ಹಾಕಿಕೊಳ್ಳಿ. ಇತರರು ಬೇಸರ ಮಾಡಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ಹೊಂದಾಣಿಕೆ ಮಾಡಿಕೊಂಡು ನೀವೇನೋ ಹೋದಿರಿ ಎಂದುಕೊಳ್ಳಿ. ಆದರೆ ನಿಮ್ಮ ಜತೆಗೆ ಇರುವಂಥವರು ಅಥವಾ ನಿಮ್ಮಿಂದ ಯಾರು ಸಹಾಯ ಪಡೆದುಕೊಳ್ಳುತ್ತಾರೋ ಅವರಿಗೆ ಆ ಭಾವನೆ ಇರುವುದಿಲ್ಲ. ನಿಶ್ಚಿತವಾದ ಆದಾಯ ಬರಲಿ ಎಂಬ ಕಾರಣಕ್ಕೆ ಹೂಡಿಕೆ ಮಾಡುವುದರ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಇನ್ನು ನಿಮ್ಮಲ್ಲಿ ಯಾರಾದರೂ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಲ್ಲಿ ಸ್ವಲ್ಪ ಮಟ್ಟಿಗೆ ನಷ್ಟ ಕಾಣುವಂಥ ಯೋಗ ನಿಮ್ಮ ಪಾಲಿಗೆ ಇದೆ.
ಲೇಖನ- ಎನ್.ಕೆ.ಸ್ವಾತಿ