ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 12ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಭಾವನಾತ್ಮಕವಾಗಿ ಬಹಳ ಗೊಂದಲಗಳಿಂದ ಕೂಡಿರುವಂತಹ ದಿನ ಇದಾಗಿರುತ್ತದೆ. ಕೆಲವು ನಿರ್ಧಾರಗಳನ್ನು ಮಾಡುವುದಕ್ಕೆ ನಿಮ್ಮದೇ ಒಳ ಮನಸು ವಿರೋಧಿಸಬಹುದು. ಆದರೆ ಯಾರದು ಮೇಲಿನ ಪ್ರೀತಿ ಅಥವಾ ವಿಶ್ವಾಸಕ್ಕಾಗಿ ಅದನ್ನು ಮಾಡಲೇಬೇಕಾದ ಸನ್ನಿವೇಶ ಎದುರಾಗುತ್ತದೆ. ಅತಿಯಾದ ನಿರೀಕ್ಷೆಯ ಭಾರದಿಂದ ಒತ್ತಡಕ್ಕೆ ಸಿಲುಕಿಕೊಳ್ಳಲಿದ್ದೀರಿ. ತಂದೆ ತಾಯಿಯ ಆರೋಗ್ಯ ಸಮಸ್ಯೆ ಕೂಡ ನಿಮ್ಮನ್ನು ವಿಚಲಿತಗೊಳಿಸಲಿದೆ. ಬೆಂಕಿಯ ಮುಂದೆ ನಿಂತು ಕೆಲಸ ಮಾಡುವಂಥವರು ಹಾಗೂ ಚೂಪಾದ ವಸ್ತುಗಳನ್ನು ಇಟ್ಟುಕೊಂಡು ಕೆಲಸ ಮಾಡುವಂಥವರು ಸಾಮಾನ್ಯ ದಿನಗಳಿಗಿಂತ ಹೆಚ್ಚು ಗಮನ ವಹಿಸಿ ಕೆಲಸವನ್ನು ಮಾಡಬೇಕಾಗುತ್ತದೆ.
ನಿಮ್ಮ ಜೊತೆಗೆ ಇರುವಂತಹವರ ವರ್ತನೆ ಬೇಸರ ಮೂಡಿಸಲಿದೆ. ಕೆಲವು ಕೆಲಸಗಳನ್ನು ನೀವು ಏಕಾಂಗಿಯಾಗಿಯೇ ಮಾಡಿ ಮುಗಿಸಬೇಕಾದಂತಹ ಸನ್ನಿವೇಶ ಎದುರಾಗಲಿದೆ. ನಿಮ್ಮಷ್ಟಕ್ಕೆ ನೀವಿದ್ದರೂ ಕೆಲವು ವಿವಾದಗಳಿಗೆ ನಿಮ್ಮ ಹೆಸರನ್ನು ಎಳೆದು ತರಲಾಗುತ್ತದೆ. ಈ ದಿನ ತಾಳ್ಮೆ ಹಾಗೂ ಸಂಯಮ ಬಹಳ ಮುಖ್ಯವಾಗಿರುತ್ತದೆ. ಸುಲಭಕ್ಕೆ ಮುಗಿಯಲಾರದ ಕೆಲಸ ಒಂದಕ್ಕೆ ಗಡುವು ಸಹ ವಿಧಿಸಿ, ಇಷ್ಟೇ ಸಮಯದಲ್ಲಿ ಮಾಡಿ ಮುಗಿಸುವಂತೆ ಒತ್ತಡ ಹೇರಲಾಗುತ್ತದೆ. ನಿಮ್ಮ ಕೈಕೆಳಗೆ ಕೆಲಸ ಮಾಡುವವರಿಂದ ನಿಮ್ಮ ನಿರ್ಧಾರಗಳಿಗೆ ವಿರೋಧ ವ್ಯಕ್ತವಾಗಲಿದೆ. ಇದರಿಂದ ನಿಮ್ಮ ಮಾನಸಿಕ ಸ್ಥೈರ್ಯ ಕುಗ್ಗಲಿದೆ. ನಿಮಗೆ ಯಾವುದೇ ವ್ಯಕ್ತಿಯ ಬಗ್ಗೆ ಅಸಮಾಧಾನ ಇದ್ದಲ್ಲಿ ಅವರ ಎದುರಲ್ಲೇ ಹೇಳಿ. ಅದರ ಬದಲಿಗೆ ಇತರರ ಮುಂದೆ ಹೇಳಿದಲ್ಲಿ ನಿಮ್ಮ ಬಗ್ಗೆ ನಕಾರಾತ್ಮಕವಾದ ಭಾವನೆ ಮೂಡಲಿದೆ.
ಹಲವು ವಿಚಾರಗಳು ನೀವು ಲೆಕ್ಕ ಹಾಕಿಕೊಂಡಿದ್ದಂತಹ ಮಾರ್ಗದಲ್ಲಿಯೇ ಸಾಗಲಿವೆ. ಸ್ನೇಹಿತರು ಅಥವಾ ಸಂಗಾತಿ ಜೊತೆಗೆ ಈಗಾಗಲೇ ಅಭಿಪ್ರಾಯ ಭೇದಗಳು ಏನಾದರೂ ಇದ್ದಲ್ಲಿ ಅದನ್ನು ನಿವಾರಿಸಿಕೊಳ್ಳುವುದಕ್ಕೆ ಅವಕಾಶಗಳು ದೊರೆಯಲಿವೆ. ನೀವಾಗಿಯೇ ವಹಿಸಿಕೊಂಡಿದ್ದ ಜವಾಬ್ದಾರಿಗಳನ್ನು ಒಂದೊಂದಾಗಿ ಮುಗಿಸುವುದಕ್ಕೆ ಸಾಧ್ಯವಾಗಲಿದೆ. ಮಕ್ಕಳ ಶಿಕ್ಷಣದ ವಿಚಾರವೂ ಪ್ರಾಮುಖ್ಯ ಪಡೆಯಲಿದ್ದು, ಇದಕ್ಕಾಗಿ ಕೆಲವು ಪ್ರಮುಖ ನಿರ್ಧಾರಗಳನ್ನು ಈ ದಿನ ತೆಗೆದುಕೊಳ್ಳಲಿದ್ದೀರಿ. ಕೃಷಿಕರಿಗೆ ಆದಾಯದ ಮೂಲಗಳನ್ನು ಜಾಸ್ತಿ ಮಾಡಿಕೊಳ್ಳುವುದಕ್ಕೆ ಮಾರ್ಗಗಳು ಗೋಚರ ಆಗಲಿವೆ. ಇದಕ್ಕೆ ಕುಟುಂಬ ಸದಸ್ಯರ ನೆರವು ಸಹ ದೊರೆಯಲಿದೆ.
ನಿಮ್ಮ ಏಕಾಗ್ರತೆ ಕೊರತೆಯಿಂದ ಕೆಲವು ಅವಕಾಶಗಳನ್ನು ಕಳೆದುಕೊಳ್ಳಲಿದ್ದೀರಿ. ಸಣ್ಣಪುಟ್ಟ ಸಂಗತಿಗಳು ಎಂದು ಯಾವುದನ್ನೂ ನಿರ್ಲಕ್ಷ್ಯ ಮಾಡಬೇಡಿ. ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡುವಾಗ ಅಕೌಂಟ್ ನಂಬರ್ ಸರಿಯಾಗಿ ಬರೆದಿದ್ದೀರಿ ಎಂಬುದನ್ನು ಒಂದಕ್ಕೆ ನಾಲ್ಕು ಬಾರಿ ಖಾತ್ರಿ ಮಾಡಿಕೊಳ್ಳಿ. ನೀವು ಕಾರ್ಯನಿರ್ವಹಿಸುವ ಕ್ಷೇತ್ರದಲ್ಲಿ ಯಾವುದೇ ನಿಯಮಗಳ ಬಗ್ಗೆ ನಿಮಗೆ ಅನುಮಾನ ಮೂಡಿದಲ್ಲಿ ಕೂಡಲೇ ಸಂಬಂಧಪಟ್ಟವರನ್ನು ಕೇಳಿ ತಿಳಿದುಕೊಳ್ಳಿ. ಉದ್ಯಮ ಅಥವಾ ವ್ಯವಹಾರವನ್ನು ನಡೆಸುತ್ತಿರುವವರು ಅದಕ್ಕೆ ಸಂಬಂಧಪಟ್ಟ ರಹಸ್ಯವನ್ನು ಯಾರ ಜೊತೆಗೂ ಹಂಚಿಕೊಳ್ಳಬೇಡಿ. ನೀವು ಯಾರ ಕೆಲಸಕ್ಕಾಗಿ ಬಹಳ ಶ್ರಮ ಪಡುತ್ತಿರುತ್ತೀರೋ ಅವರೇ ತಮ್ಮ ಕೆಲಸದಲ್ಲಿ ಕಳೆದುಕೊಳ್ಳಲಿದ್ದಾರೆ. ಇದರಿಂದ ನಿಮಗೆ ಬೇಸರ ಆಗಲಿದೆ.
ಯಾವುದು ಬಹಳ ದೊಡ್ಡ ಸಮಸ್ಯೆ ಆಗಬಹುದು ಎಂದು ಅಂದುಕೊಂಡಿರುತ್ತೀರೋ ಅದು ಈ ದಿನ ಬಹಳ ಸರಳವಾಗಿ ಬಗೆಹರಿಯಲಿದೆ. ವಿವಾಹ ವಯಸ್ಕರಾಗಿದ್ದು ವಧು ಅಥವಾ ವರಾನ್ವೇಷಣೆಯಲ್ಲಿ ತೊಡಗಿರುವವರಿಗೆ ಮನಸ್ಸಿಗೆ ಒಪ್ಪುವಂತಹ ಸಂಬಂಧ ದೊರೆಯಲಿದೆ. ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನ ಪಡುತ್ತಿರುವವರಿಗೆ ಅಥವಾ ವ್ಯಾಸಂಗ ಮಾಡಬೇಕು ಅಂದುಕೊಳ್ಳುತ್ತಿರುವವರಿಗೆ ಸ್ನೇಹಿತರು ಅಥವಾ ಸಂಬಂಧಿಕರ ಮೂಲಕ ಸಹಾಯ ಆಗಲಿದೆ. ಸರ್ಕಾರಿ ಉದ್ಯೋಗದಲ್ಲಿ ಇರುವಂತಹವರಿಗೆ ನೀವು ಇಷ್ಟು ಸಮಯ ಬಯಸಿದಂತಹ ಜಾಗಕ್ಕೆ ವರ್ಗಾವಣೆ ದೊರೆಯಬಹುದು ಅಥವಾ ಪ್ರಮುಖ ಹುದ್ದೆಯೊಂದು ಹೆಚ್ಚುವರಿ ಜವಾಬ್ದಾರಿಯಾಗಿ ನಿಮ್ಮ ಹೆಗಲೇರಬಹುದು.
ನಿಮ್ಮ ಆತ್ಮವಿಶ್ವಾಸ ಜಾಸ್ತಿ ಆಗುವಂತಹ ಕೆಲವು ಬೆಳವಣಿಗೆಗಳು ಆಗಲಿವೆ. ನಿಮ್ಮನ್ನು ಬಿಟ್ಟು ಅಥವಾ ಒಂದು ಪ್ರಾಜೆಕ್ಟ್ ನಿಂದ ಹೊರಗೆ ಇಟ್ಟು ಕೆಲಸ ಮಾಡುತ್ತಿದ್ದಂತಹವರಿಗೆ ನಿಮ್ಮ ಸಹಾಯ ಅನಿವಾರ್ಯ ಆಗಲಿದೆ. ಸರ್ಕಾರದ ಮಟ್ಟದಲ್ಲಿ ಯಾವುದಾದರೂ ಕೆಲಸಕ್ಕಾಗಿ ಅಥವಾ ಟೆಂಡರ್ ಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಶುಭ ಸುದ್ದಿ ಕೇಳಿ ಬರಲಿದೆ. ಯಾವ ಕೆಲಸ ನೀವು ಅಂದುಕೊಂಡ ಸಮಯದಲ್ಲಿ ಮುಗಿಯದೆ ವಿಳಂಬ ಆಗುತ್ತಾ ಬರುತ್ತಿತ್ತು ಅಂತಹ ಕೆಲಸ ಇಂದು ವೇಗ ಪಡೆದುಕೊಳ್ಳಲಿದೆ. ಸ್ವಂತ ಉದ್ಯಮ ಅಥವಾ ವ್ಯವಹಾರ ಮಾಡುವವರಿಗೆ ವಿಸ್ತರಣೆಗೆ ಬೇಕಾದ ಬೆಂಬಲ ಹಾಗೂ ಹಣಕಾಸು ನೆರವು ದೊರೆಯಲಿದೆ. ಹಳೆ ಸಾಲ ಅಥವಾ ನೀವು ಈಗಾಗಲೇ ಕೆಲಸ ಮಾಡಿ ಅದರ ಹಣ ಬಂದಿಲ್ಲ ಎಂದರೆ ಈ ದಿನ ಗಟ್ಟಿಯಾಗಿ ಪ್ರಯತ್ನಿಸಿ.
ಯಾರ ಮೇಲೆ ಬಹಳ ನಂಬಿಕೆ ಇಟ್ಟು ಮುಖ್ಯ ಜವಾಬ್ದಾರಿಯನ್ನು ವಹಿಸಿರುತ್ತೀರೋ ಅವರು ಮತ್ತೊಬ್ಬರ ಕೆಲಸವನ್ನು ವಹಿಸಿಕೊಂಡು,ನಿಮ್ಮ ನಿರೀಕ್ಷೆಯನ್ನು ಸುಳ್ಳು ಮಾಡಲಿದ್ದಾರೆ. ಚಿನ್ನ ಬೆಳ್ಳಿ ಸೇರಿದಂತೆ ಯಾವುದೇ ಪ್ರಮುಖ ದಾಖಲೆ ಪತ್ರಗಳನ್ನು ಇಡುವಾಗ ಮಾಮೂಲಿ ದಿನಗಳಿಗಿಂತ ಹೆಚ್ಚು ಎಚ್ಚರಿಕೆಯನ್ನು ವಹಿಸಿ. ಇವುಗಳನ್ನು ಎಲ್ಲೋ ಇಟ್ಟು, ಬೇರೆಲ್ಲೋ ಹುಡುಕುವಂಥ ಪರಿಸ್ಥಿತಿಯನ್ನು ತಂದುಕೊಳ್ಳಬೇಡಿ. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಕೊನೆಯ ದಿನಾಂಕ ಯಾವಾಗ ಎಂಬುದನ್ನು ಒಮ್ಮೆ ನೋಡಿಕೊಳ್ಳಿ. ದೂರ ಪ್ರಯಾಣ ತೆರಳುವಂತಹವರು ಸರಿಯಾದ ಸಿದ್ಧತೆ ಮಾಡಿಕೊಂಡಿದ್ದೀರಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.
ಮನೆಗೆ ಗೃಹೋಪಯೋಗಿ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರ ಮೂಲಕವಾಗಿ ನಿಮಗೆ ಖರೀದಿಯಲ್ಲಿ ದೊಡ್ಡಮಟ್ಟದ ಉಳಿತಾಯ ಮಾಡುವುದಕ್ಕೆ ಅವಕಾಶಗಳು ದೊರೆಯಲಿವೆ. ಗೇಟೆಡ್ ಕಮ್ಯೂನಿಟಿಯಲ್ಲಿ ಸೈಟು ಹುಡುಕುತ್ತಿರುವವರು ಅಥವಾ ಅಪಾರ್ಟ್ ಮೆಂಟ್ ಹುಡುಕುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವಂತಹ ಯೋಗ ಇದೆ. ಇದೇ ಮೊದಲ ಬಾರಿಗೆ ಎಂಬಂತೆ ನೀವು ಮಾಡಿದ ಕೆಲಸಗಳಲ್ಲಿ ಉತ್ತಮವಾದ ಯಶಸ್ಸು ಕಾಣಲಿದ್ದೀರಿ. ಕ್ಯಾಟರಿಂಗ್ ಮಾಡುತ್ತಿರುವವರಿಗೆ ಹೊಸದಾಗಿ ದೊಡ್ಡ ಆರ್ಡರ್ ಒಂದು ದೊರೆಯುವ ಯೋಗ ಇದೆ.
ನಿಮ್ಮ ಕೆಲಸದಲ್ಲಿ ಕೆಲವರು ಬೇಕೆಂತಲೇ ತಪ್ಪುಗಳನ್ನು ಹುಡುಕಲಿದ್ದಾರೆ. ನಿಮ್ಮ ಆತ್ಮವಿಶ್ವಾಸ ಹಾಗೂ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನವಾಗಿ ಹೀಗೆ ಮಾಡಲಿದ್ದಾರೆ. ನಿಮಗೆ ಸರಿ ಎಂದು ಶೇಕಡಾ ನೂರರಷ್ಟು ಖಾತ್ರಿ ಆದ ಕೆಲಸದಲ್ಲಿ ಯಾವುದೇ ಕಾರಣಕ್ಕೂ ಗಾಬರಿ ಆಗಬೇಡಿ. ಹೊಸದಾಗಿ ಪರಿಚಯ ಆದವರ ಜೊತೆ ಮಾತನಾಡುವಾಗ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಲು ಹೋಗಬೇಡಿ. ಸೋಶಿಯಲ್ ಮೀಡಿಯಾ ಬಳಸುವಂಥವರ ಖಾತೆ ದುರ್ಬಳಕೆ ಆಗುವ ಸಾಧ್ಯತೆ ಇದ್ದು, ಈ ಬಗ್ಗೆ ಜಾಗ್ರತೆಯನ್ನು ವಹಿಸಿ. ಸಾರ್ವಜನಿಕ ಸಾರಿಗೆಯಲ್ಲಿ ಸಂಚಾರ ಮಾಡುವಂಥವರು ಮೊಬೈಲ್ ಮೊದಲಾದ ಗ್ಯಾಜೆಟ್ ಗಳ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಿ.
ಲೇಖನ- ಎನ್.ಕೆ.ಸ್ವಾತಿ
Published On - 1:00 am, Tue, 12 December 23