Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 23ರಿಂದ 29ರ ತನಕ ವಾರಭವಿಷ್ಯ
ನವೆಂಬರ್ 23ರಿಂದ 29ರವರೆಗಿನ ನಿಮ್ಮ ವಾರಭವಿಷ್ಯವನ್ನು ಸಂಖ್ಯಾಶಾಸ್ತ್ರದ ಆಧಾರದಲ್ಲಿ ತಿಳಿಯಿರಿ. ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಈ ವಾರ ಪ್ರೇಮ, ವೃತ್ತಿ, ಹಣಕಾಸು ಮತ್ತು ಆರೋಗ್ಯ ಹೇಗಿರಲಿದೆ ಎಂಬುದರ ಸಮಗ್ರ ಮಾಹಿತಿ ಇಲ್ಲಿದೆ. ಸಂಖ್ಯಾಶಾಸ್ತ್ರದ ಈ ವಾರದ ಭವಿಷ್ಯವು ನಿಮ್ಮ ಮುಂದಿನ ಹೆಜ್ಜೆಗಳಿಗೆ ಮಾರ್ಗದರ್ಶನ ನೀಡುತ್ತದೆ ಮತ್ತು ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ.

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 23ರಿಂದ 29ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಸಂಗಾತಿಯ ಆದಾಯ ಚಿಂತೆಗೆ ಕಾರಣ ಆಗಲಿದೆ. ಇಷ್ಟು ಸಮಯ ಇದ್ದಂತೆ ಈಗಲೂ ಮುಂದುವರಿದರೆ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ ಎಂಬುದನ್ನು ಹೇಳಲಿದ್ದೀರಿ. ಆದರೆ ಇದೇ ವಿಷಯಕ್ಕೆ ವೈಮನಸ್ಯ ಹಾಗೂ ಮನಸ್ಸಿಗೆ ಹಿತ ಎನಿಸದ ಮಾತುಗಳ ವಿನಿಮಯ ಆಗಲಿವೆ. ಸರ್ಕಾರಿ ಕೆಲಸದಲ್ಲಿ ಇರುವವರಿಗೆ ತಮಗಿರುವ ಸೌಕರ್ಯ- ಸವಲತ್ತುಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ದೂರು ಬರಬಹುದು. ಇಂಥವುಗಳನ್ನು ಯಾವುದೇ ಸಮಯದಲ್ಲೂ ನಿರ್ಲಕ್ಷ್ಯ ಮಾಡಬೇಡಿ. ಕಟ್ಟಿರುವ ಮನೆಯನ್ನು ಖರೀದಿ ಮಾಡಬೇಕು ಎಂದು ಪ್ರಯತ್ನ ಮಾಡುತ್ತಾ ಇರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಸಾಧ್ಯತೆ ಇದೆ. ನಿಮ್ಮಲ್ಲಿ ಕೆಲವರಿಗೆ ಮನೆಯ ಹಿರಿಯರು ತಮ್ಮ ಹಣವನ್ನೋ ಅಥವಾ ಒಡವೆಯನ್ನೋ ಉಡುಗೊರೆಯಾಗಿ ನೀಡುವ ಯೋಗ ಇದೆ. ಕೆಲಸದ ನಿಮಿತ್ತವಾಗಿ ಒಬ್ಬ ವ್ಯಕ್ತಿಯನ್ನು ಭೇಟಿ ಮಾಡುವುದಕ್ಕೆ ದೂರದ ಪ್ರಯಾಣ ಮಾಡುತ್ತೀರಿ ಅಂತಾದಲ್ಲಿ ಸಂಬಂಧಪಟ್ಟವರು ಸಿಗುತ್ತಾರೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳುವುದು ಬಹಳ ಮುಖ್ಯ ಎಂಬುದು ಗೊತ್ತಿರಲಿ. ಇಂಟಿರೀಯರ್ ಡೆಕೊರೇಷನ್ ಮಾಡುವುದನ್ನು ಕಾಂಟ್ರಾಕ್ಟ್ ತೆಗೆದುಕೊಂಡು ಮಾಡಿಸುತ್ತಾ ಇರುವವರಿಗೆ ಕೈಯಿಂದ ಹಣ ಕಳೆದುಕೊಳ್ಳುವಂಥ ಸನ್ನಿವೇಶ ಎದುರಾಗಲಿದೆ. ಕೃಷಿಕರಿಗೆ ತಮ್ಮ ನಿರ್ಧಾರಗಳ ಬಗ್ಗೆ ಅನುಮಾನ ಕಾಡಲಿಕ್ಕೆ ಶುರುವಾಗಲಿದೆ. ಇನ್ನೂ ಒಂದಿಷ್ಟು ಮೊತ್ತವನ್ನು ಸಾಲ ತಂದಾದರೂ ಜಮೀನಿನಲ್ಲಿ ಹೂಡಿಕೆ ಮಾಡಬೇಕು ಅಂದುಕೊಂಡಿದ್ದವರು ಸದ್ಯಕ್ಕೆ ಬೇಡ ಅಂದುಕೊಳ್ಳುವ ಸಾಧ್ಯತೆ ಇದೆ. ಕುಟುಂಬ ಸದಸ್ಯರ ಕೆಲವು ಆಲೋಚನೆಗಳು ನಿಮ್ಮ ಚಿಂತನೆಗೆ ಸಂಪೂರ್ಣವಾಗಿ ನಿಮಗೆ ವಿರುದ್ಧವಾಗಿದೆ ಎಂಬುದು ಗಮನಕ್ಕೆ ಬರಲಿದ್ದು, ಇದು ಚಿಂತೆಗೆ ಕಾರಣ ಆಗಲಿದೆ. ವೃತ್ತಿನಿರತರು ಎಲ್ಲಿ ಯಾವ ಮಾತನ್ನು ಆಡಬಾರದೋ ಅಂಥದನ್ನೇ ಮಾತನಾಡಿ ಸಮಸ್ಯೆಗಳನ್ನು ತಂದುಕೊಳ್ಳಲಿದ್ದೀರಿ. ನಿಮಗಿಂತ ಚಿಕ್ಕ ವಯಸ್ಸಿನವರು ನಿಮಗೆ ಬುದ್ಧಿ ಹೇಳುವಂಥ ಕೆಲವು ಸನ್ನಿವೇಶಗಳು ಸೃಷ್ಟಿ ಆಗಲಿವೆ. ನೀವು ಆಡಿದ ಮಾತಿನ ಬಗ್ಗೆ ಏನೇ ಸಮಜಾಯಿಷಿ ಹೇಳುವುದಕ್ಕೆ ಪ್ರಯತ್ನ ಪಟ್ಟರೂ ಅದು ಇನ್ನಷ್ಟು ಕಗ್ಗಂಟು ಆಗುತ್ತಾ ಹೋಗುತ್ತದೆಯೇ ವಿನಾ ಪರಿಹಾರ ಸಿಗುವುದಿಲ್ಲ. ವಿದ್ಯಾರ್ಥಿಗಳು ವಯೋಸಹಜ ಆಕರ್ಷಣೆಗೆ ಬಿದ್ದು, ತಂದೆ- ತಾಯಿಯಿಂದ ಬೈಗುಳ ಕೇಳಿಸಿಕೊಳ್ಳಬೇಕಾಗುತ್ತದೆ. ಇಷ್ಟು ಸಮಯ ಯಾರು ನಿಮ್ಮ ಬಗ್ಗೆ ಪ್ರೀತಿ- ಅಕ್ಕರೆಯಿಂದ ಮಾತನಾಡುತ್ತಿದ್ದರೋ ಅಂಥವರೇ ಮೂಗು ಮುರಿಯವಂತೆ ಆಗಲಿದೆ. ಅಷ್ಟೇನೂ ತೊಂದರೆ ಆಗಲಿಕ್ಕಿಲ್ಲ ಎಂದು ಸಣ್ಣ- ಪುಟ್ಟ ಸುಳ್ಳನ್ನು ಸಹ ಹೇಳಲಿಕ್ಕೆ ಹೋಗಬೇಡಿ. ಇದರಿಂದ ನಿಮ್ಮ ಸಮಸ್ಯೆ ಇನ್ನಷ್ಟು ಜಾಸ್ತಿ ಆಗುತ್ತದೆ. ಮಹಿಳೆಯರು ತಾವು ಮಾಡಿದ ಸಹಾಯಕ್ಕೋ ಅಥವಾ ಕೆಲಸ- ಕಾರ್ಯಗಳಿಗೆ ಹಣದ ಪ್ರತಿಫಲಾಪೇಕ್ಷೆಯಲ್ಲಿ ಇದ್ದರೆ ಅದನ್ನು ಬಾಯಿ ಬಿಟ್ಟು ಹೇಳಿ, ಪಡೆಯುವುದು ಉತ್ತಮ. ನೀವು ಏನನ್ನೂ ಹೇಳದೆ ಆ ನಂತರದಲ್ಲಿ ಸಂಬಂಧಿಸಿದ ವ್ಯಕ್ತಿಗಳ ಬಗ್ಗೆ ಹಗುರವಾಗಿ ಮಾತನಾಡಿದಲ್ಲಿ ಸ್ನೇಹ- ಸಂಬಂಧ ಹಾಳಾಗುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಮುಖ್ಯ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಯಾವುದನ್ನೂ- ಯಾರನ್ನೂ ಏಕಾಏಕಿ ನಂಬಬಾರದು ಎಂಬ ಅಂಶ ನಿಮ್ಮ ಮನಸ್ಸಿನಲ್ಲಿ ಗಟ್ಟಿಯಾಗಿ ಕೂರಲಿದೆ. ನೀವು ಮಾಡುವ ವ್ಯವಹಾರದಲ್ಲಿ ಸಹಾಯ ಮಾಡುವುದಾಗಿ ಹೇಳಿ ಬರುವಂಥ ವ್ಯಕ್ತಿಯೊಬ್ಬರು ಅದರಿಂದ ತಾವು ಹಣ ಮಾಡುವ ಉದ್ದೇಶದಿಂದ ಇದ್ದಾರೆ ಎಂಬುದು ಗುರುತಿಸಲಿದ್ದೀರಿ. ಆಹಾರ ತಜ್ಞರಾದವರಿಗೆ ಜನಪ್ರಿಯತೆ, ಕೀರ್ತಿ, ಹಣ ಇತ್ಯಾದಿಗಳು ದೊರೆಯಲಿವೆ. ಸ್ವಂತ ಕ್ಲಿನಿಕ್ ಆರಂಭ ಮಾಡುವ ಬಗ್ಗೆ ನೀವು ಆಲೋಚಿಸುವುದಕ್ಕೆ ಆರಂಭಿಸುತ್ತೀರಿ. ಆಸ್ತಿಯ ಕಾಗದ, ದಾಖಲೆ- ಪತ್ರಗಳು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳು ಶುರು ಮಾಡುತ್ತೀರಿ. ನಿಮ್ಮ ಮುಂದಾಲೋಚನೆ ಕಾರಣದಿಂದ ದೊಡ್ಡ ನಷ್ಟಗಳು ತಪ್ಪಲಿವೆ. ಇವೆಂಟ್ ಮ್ಯಾನೇಜ್ ಮೆಂಟ್ ಅಥವಾ ಅಡುಗೆ ಕಾಂಟ್ರಾಕ್ಟ್ ಮಾತ್ರ ಮಾಡಿಸುತ್ತಾ ಇರುವವರಿಗೆ ಮೇಲಿಂದ ಮೇಲೆ ಒಬ್ಬ ವ್ಯಕ್ತಿಯ ಕಡೆಯಿಂದ ಆರ್ಡರ್ ಗಳು ದೊರೆಯುವ ಕಮಿಟ್ ಮೆಂಟ್ ಸಿಗುತ್ತದೆ. ಹೊಸದಾಗಿ ಹೂಡಿಕೆ ಮಾಡಬೇಕು ಎಂದುಕೊಂಡಿರುವವರು ಈಗ ಮಾಡಿರುವ ಉಳಿತಾಯವನ್ನು ಹೊರಗೆ ತೆಗೆಯುವುದಕ್ಕೆ ತೀರ್ಮಾನ ಮಾಡಲಿದ್ದೀರಿ. ಪ್ರಭಾವಿ ವ್ಯಕ್ತಿಗಳ ಸಹಾಯದಿಂದ ನಿಮಗೆ ಕೆಲವು ಅನುಕೂಲಗಳು ಆಗಲಿವೆ. ಕೃಷಿಕರು ನಿಮ್ಮ ಕುಟುಂಬಕ್ಕೆ ಅಗತ್ಯ ಇರುವ ವಾಹನಗಳನ್ನು ಖರೀದಿ ಮಾಡುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ದೀರ್ಘ ಕಾಲದ ಸಾಲವನ್ನು ತೀರಿಸುವ ತೀರ್ಮಾನಕ್ಕೆ ಬಂದು, ಹೂಡಿಕೆ ಎಂಬ ಕಾರಣಕ್ಕೆ ಖರೀದಿ ಮಾಡಿದ್ದ ಸ್ಥಳದ ಮಾರಾಟ ಮಾಡುವುದಕ್ಕೆ ಪ್ರಯತ್ನವನ್ನು ಶುರು ಮಾಡಲಿದ್ದೀರಿ. ನಿಮ್ಮ ಯಾವುದೇ ಕೆಲಸ ಪೂರ್ತಿ ಆಗುವ ಮುನ್ನ ಎಲ್ಲಿಯೂ ಹೇಳಿಕೊಂಡು ಬರಬೇಡಿ. ಅದರಲ್ಲೂ ಸಂಬಂಧಿಕರ ಎದುರಂತೂ ಆ ಬಗ್ಗೆ ಮಾತನಾಡುವುದಕ್ಕೆ ಹೋಗದಿರುವುದು ಉತ್ತಮ. ವೃತ್ತಿನಿರತರು ಸಮಯಕ್ಕೆ ಸರಿಯಾಗಿ ತೋರಿಸಿದ ಬುದ್ಧಿವಂತಿಕೆಯಿಂದ ಪ್ರತಿಫಲವನ್ನು ಪಡೆದುಕೊಳ್ಳಲಿದ್ದೀರಿ. ನೀವು ಎಲ್ಲ ಕಡೆಗೂ ಗಮನವಿಟ್ಟು ಕಾರ್ಯ ನಿರ್ವಹಿಸುವುದನ್ನು ಗಮನಿಸದ ಕೆಲವು ವ್ಯಕ್ತಿಗಳು, ಕಡಿಮೆ ಅಂದಾಜು ಮಾಡಿದ್ದಕ್ಕಾಗಿ ಪರಿತಪಿಸುವಂತೆ ಆಗಲಿದೆ. ನಿಮ್ಮ ವೃತ್ತಿಗೆ ಅಡೆತಡೆಯಂತೆ ಇದ್ದ ಕೆಲವು ತಾಂತ್ರಿಕ ಅಂಶಗಳನ್ನು ಸರಿಪಡಿಸಿಕೊಂಡು ಮುಂದುವರಿಯಲಿದ್ದೀರಿ. ವಿದ್ಯಾರ್ಥಿಗಳು ವಿಚಲಿತರಾಗುವಂಥ ಕೆಲವು ಸವಾಲುಗಳನ್ನು ಎದುರಿಸಲಿದ್ದೀರಿ. ಆದರೆ ಅದನ್ನು ಮೀರಿ ನಿಲ್ಲುವುದಕ್ಕೆ ವಿವಿಧ ಕಡೆಗಳಿಂದ ಬೆಂಬಲ ದೊರೆಯಲಿದೆ. ಈ ಹಿಂದಿಗಿಂತ ನಿಮ್ಮ ಮೇಲೆ ವಿಶ್ವಾಸಾರ್ಹತೆ ಜಾಸ್ತಿ ಆಗುವಂಥ ಬೆಳವಣಿಗೆಗಳು ಆಗಲಿವೆ. ಪಾರದರ್ಶಕತೆ ಹಾಗೂ ನೇರವಂತಿಕೆ ಸಹ ನಿಮ್ಮ ಸಹಾಯಕ್ಕೆ ಬರಲಿದ್ದು, ಈ ಬೆಳವಣಿಗೆಯನ್ನು ನಿಮ್ಮ ಅನುಕೂಲಕ್ಕೆ ಬಳಸಿಕೊಳ್ಳಲಿದ್ದೀರಿ. ಮಹಿಳೆಯರಿಗೆ ಆಹಾರ ಪದಾರ್ಥಗಳ ಮಾರಾಟದಲ್ಲಿ ತೊಡಗಿದ್ದಲ್ಲಿ ಆದಾಯದ ಹರಿವು ಹೆಚ್ಚಳ ಆಗಲಿದೆ. ದೀರ್ಘ ಕಾಲದ ಆರ್ಡರ್ ನೀಡುವುದಕ್ಕೆ ಕೆಲವು ಮುಂದೆ ಬರಲಿದ್ದಾರೆ. ಇನ್ನು ನಿಮ್ಮಲ್ಲಿ ಕೆಲವರು ಸೋದರ ಅಥವಾ ಸೋದರಿಯ ವಿವಾಹಕ್ಕಾಗಿ ಹೆಚ್ಚಿನ ಓಡಾಟ ನಡೆಸಲಿದ್ದೀರಿ, ದೂರದ ಪ್ರಯಾಣ ಮಾಡಬೇಕಾಗಬಹುದು.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಐಎಎಸ್, ಐಪಿಎಸ್ ಈ ರೀತಿಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ, ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಆಯಕಟ್ಟಿನ ಮುಖ್ಯ ಜವಾಬ್ದಾರಿಗಳು ದೊರೆಯುವ ಬಗ್ಗೆ ಸುಳಿವು- ಸೂಚನೆ ಸಿಗಲಿದೆ. ಹಣಕಾಸಿನ ವಿಚಾರಕ್ಕೆ ಹೊಂದಾಣಿಕೆ ಮಾಡುವುದಕ್ಕೆ ಆಗುತ್ತದೋ ಇಲ್ಲವೋ ಎಂಬ ಅಳುಕು ಇದ್ದಲ್ಲಿ ಅದು ದೂರವಾಗಲಿದ್ದು, ಸ್ಥಿರಾಸ್ತಿ ಖರೀದಿ ಮಾಡಬೇಕು ಎಂದು ಪ್ರಯತ್ನಿಸುತ್ತಾ ಇರುವವರಿಗೆ ಅನುಕೂಲಗಳು ಒದಗಿ ಬರಲಿವೆ. ಸಾವಯವ ಆಹಾರ ಪದಾರ್ಥಗಳ ಸಗಟು ವಿತರಕರಾಗಿ ಅದರ ಮೂಲಕ ಆದಾಯ ಗಳಿಸುತ್ತಾ ಇರುವವರಿಗೆ ಹಣಕಾಸಿನ ಹರಿವಿನಲ್ಲಿ ಭಾರೀ ಏರಿಕೆ ಆಗಲಿದೆ. ಪ್ರೇಮಿಗಳಿಗೆ ಸಣ್ಣ ಪುಟ್ಟ ಕಾರಣಗಳಿಗೆ ಮುನಿಸು- ಮನಸ್ತಾಪ ಕಾಣಿಸಿಕೊಳ್ಳಬಹುದು. ಹಳೆಯ ವಿಷಯಗಳನ್ನು ಕೆದಕುತ್ತಾ ಮತ್ತಷ್ಟು ರಾದ್ಧಾಂತ ಆಗದಂತೆ ನೋಡಿಕೊಳ್ಳಿ. ಮನೆಯಲ್ಲಿ ಕೆಲಸ ಮಾಡುವುದಕ್ಕಾಗಿ ಕೆಲಸದವರನ್ನು ಹುಡುಕಾಡುತ್ತಿರುವವರಿಗೆ ನಿಮ್ಮ ನಿರೀಕ್ಷೆ- ಅಪೇಕ್ಷೆಗೆ ತಕ್ಕಂತೆ ಜನ ಸಿಗಲಿದ್ದು, ಇದರಿಂದ ಕೆಲ ಸಮಯದಿಂದಲೂ ನಿಮ್ಮನ್ನು ಕಾಡುತ್ತಿದ್ದ ಚಿಂತೆಯೊಂದು ದೂರವಾಗಲಿದೆ. ಹೊರಗಿನ ಆಹಾರ ಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವವರು ಅಂಥ ಆಹಾರಗಳಿಂದ ದೂರವಿರಿ. ಕೃಷಿಕರು ತಾವು ಅಂದುಕೊಂಡಂತೆಯೇ ಪ್ರತಿಫಲವನ್ನು ಪಡೆದುಕೊಳ್ಳಲಿದ್ದೀರಿ. ತುಂಬ ಲೆಕ್ಕಾಚಾರದಿಂದ ಇಟ್ಟ ಹೆಜ್ಜೆಗಳು ಫಲಿತಾಂಶವನ್ನು ನೀಡುತ್ತವೆ. ಜಮೀನಿಗಾಗಿ ಕೆಲವು ಉಪಕರಣಗಳನ್ನು ಖರೀದಿ ಅಥವಾ ಸೋಲಾರ್ ಕ್ಯಾಮೆರಾ ಅಥವಾ ಸೋಲಾರ್ ಪಂಪ್ ಇತ್ಯಾದಿಗಳನ್ನು ಅಳವಡಿಸುವ ಚಿಂತನೆ ಮಾಡಲಿದ್ದು, ಇದಕ್ಕೆ ಸಿಗುವ ಸಬ್ಸಿಡಿ ಮತ್ತಿತರ ವಿಚಾರಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಿದ್ದೀರಿ. ಸಾಲಕ್ಕಾಗಿ ಪ್ರಯತ್ನ ಮಾಡುತ್ತಾ ಇರುವವರಿಗೆ ಮಂಜೂರು ಆಗಲಿದೆ. ವೃತ್ತಿನಿರತರು ಅಗತ್ಯವೇ ಇಲ್ಲದ ಕೆಲಸಗಳಿಗೆ ಹೆಚ್ಚು ಸಮಯವನ್ನು ಇಡುವಂತೆ ಆಗಲಿದೆ. ನಿಮ್ಮ ಬಗ್ಗೆ ಕ್ಲೈಂಟ್ ಗಳು ಏನಂದುಕೊಂಡಾರು ಅತಿಯಾದ ಆಲೋಚನೆಯೇ ನಿಮಗೆ ಭಾರವಾಗಿ ಪರಿಣಮಿಸಲಿದೆ. ನಿಮ್ಮದೇ ವೃತ್ತಿಯ ವಿಸ್ತರಣೆ ಭಾಗವಾಗಿ ಕೆಲವು ಪ್ರಮೋಷನಲ್ ಚಟುವಟಿಕೆಗಳನ್ನು ಕೈಗೊಳ್ಳಲಿದ್ದೀರಿ. ಇದರಿಂದ ನಿಮಗೆ ಕೆಲವು ಅನುಕೂಲಗಳು ಸಹ ಆಗಲಿವೆ. ದೀರ್ಘ ಕಾಲದ ಯೋಜನೆಗಳನ್ನು ಕೆಲವು ಅನುಷ್ಠಾನಕ್ಕೆ ತರಲಿದ್ದೀರಿ. ವಿದ್ಯಾರ್ಥಿಗಳು ಇಲ್ಲಿಯ ತನಕ ಮಾಡಿಕೊಂಡು ಬಂದಂಥ ಮುಖ್ಯ ಅಭ್ಯಾಸ ಒಂದನ್ನು ನಿಲ್ಲಿಸಿಬಿಡಬೇಕು ಎಂದು ಆಲೋಚಿಸಲಿದ್ದೀರಿ. ಈ ನಿರ್ಧಾರದಿಂದ ನಿಮ್ಮ ಮೇಲಿನ ಒತ್ತಡ ಕಡಿಮೆ ಆಗಲಿದೆ. ಇನ್ನು ನಿಮ್ಮಲ್ಲಿ ಕೆಲವರು ಸಂಗೀತ ಸಾಧನಗಳು, ನೃತ್ಯ ಈ ರೀತಿಯ ಹವ್ಯಾಸಗಳನ್ನು ಮುಂದುವರಿಸಲು ತರಬೇತಿಗೆ ಸೇರ್ಪಡೆ ಆಗಲಿದ್ದೀರಿ. ಮಹಿಳೆಯರು ತಮ್ಮ ಹಣಕಾಸು ಉಳಿತಾಯ, ಹೂಡಿಕೆ ಹಾಗೂ ಅದರ ಸರಿಯಾದ ನಿರ್ವಹಣೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಿದ್ದೀರಿ. ಒಂದು ವೇಳೆ ಚಿನ್ನದ ಒಡವೆಗಳನ್ನು ಏನಾದರೂ ಅಡಮಾನ ಮಾಡಿದ್ದಲ್ಲಿ ಅದನ್ನು ಬಿಡಿಸಿಕೊಳ್ಳಲು ಬೇಕಾದ ಹಣಕಾಸಿನ ಹೊಂದಾಣಿಕೆ ಮಾಡಿಕೊಳ್ಳಲಿದ್ದೀರಿ. ಕೌಟುಂಬಿಕ ಜೀವನ ಸಂತುಷ್ಟವಾಗಿರುತ್ತದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಇತರರು ಹೊಗಳಿದರು ಎಂಬ ಕಾರಣಕ್ಕೆ ನಿಮ್ಮ ಸಾಮರ್ಥ್ಯವನ್ನು ಮೀರಿದ ಕೆಲಸ- ಕಾರ್ಯಗಳನ್ನು ಮಾಡುತ್ತೇನೆ ಎಂದು ಹೊರಟು ಬಿಡಬೇಡಿ. ಇಷ್ಟು ಕಾಲ ನೀವು ಹೇಗೋ ನಿಭಾಯಿಸಿಕೊಂಡು ಬಂದಂಥ ಕೆಲವು ಸಾಲಗಾರರು ತಮಗೆ ನಿಂತ ನಿಲುವಿನಲ್ಲೇ ತಮ್ಮ ಹಣ ವಾಪಸ್ ಬೇಕು ಎಂದು ಪಟ್ಟು ಹಿಡಿಯಲಿದ್ದಾರೆ. ನಿಮ್ಮಲ್ಲಿ ಬೇಕರಿ ನಡೆಸುವವರ ಪೈಕಿ ಕೆಲವರು ತಮ್ಮ ವ್ಯವಾಹರಕ್ಕೆ ಹೊಸ ಪಾಲುದಾರರನ್ನು ಹುಡುಕುವ ಸಾಧ್ಯತೆ ಇದೆ. ನೀವು ಒಪ್ಪಿಕೊಳ್ಳುವ ಕೆಲಸಕ್ಕೆ ಎಷ್ಟು ಹಣ ಚಾರ್ಜ್ ಮಾಡುತ್ತೀರಿ ಎಂಬುದನ್ನು ನೇರವಾಗಿ ಆರಂಭದಲ್ಲಿಯೇ ಹೇಳಿಬಿಡುವುದು ಉತ್ತಮ. ಇಲ್ಲದಿದ್ದಲ್ಲಿ ಕೆಲಸ ಮುಗಿದ ಮೇಲೆ ನೀವು ಕೇಳಿದಷ್ಟು ಅವರು ಹಣ ನೀಡುವುದಿಲ್ಲ, ನಿಮಗೆ ಆ ವ್ಯವಹಾರ ಮಾಡಿದವರ ಜೊತೆಗೊಂದು ಕಹಿ ಅನುಭವ ಹಾಗೇ ಉಳಿದುಬಿಡುತ್ತದೆ. ಜಂಕ್ ಫುಡ್ ಗಳ ಸೇವನೆಯಿಂದ ನಿಮ್ಮಲ್ಲಿ ಕೆಲವರಿಗೆ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯಗಳು ಕಾಡಬಹುದು. ಪಾರ್ಟಿ, ಗೆಟ್ ಟು ಗೆದರ್ ಗಳಿಗೆ ನಿಮಗೆ ಆಹ್ವಾನ ಬಂದರೂ ಅಲ್ಲಿನ ಆಹಾರ ಪದಾರ್ಥಗಳ ಸೇವನೆ ಮಾಡುವ ಮುನ್ನ ನಾಲ್ಕಾರು ಬಾರಿ ಆಲೋಚಿಸುವುದು ಉತ್ತಮ. ಕೃಷಿಕರು ತಮ್ಮ ಜಮೀನಿನಲ್ಲಿ ಹೊಸ ತಳಿಯ ಬೀಜ ಬಿತ್ತನೆ ಮಾಡಿಸಿ, ಕೆಲವು ಪ್ರಯೋಗಗಳನ್ನು ಕೈಗೊಳ್ಳುವ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ. ಇದಕ್ಕೆ ನಿಮ್ಮ ಸ್ನೇಹ ವಲಯದಿಂದ ಬೆಂಬಲ ಮತ್ತು ಸಹಕಾರ ದೊರೆಯಲಿದೆ. ನಿಮ್ಮಲ್ಲಿ ಕೆಲವರು ಸಹಕಾರಿ ಸಂಘಗಳ ಪದಾಧಿಕಾರಿಗಳು ಅಥವಾ ಗೌರವ ಹುದ್ದೆಗಳನ್ನು ವಹಿಸಿಕೊಳ್ಳುವ ಸಾಧ್ಯತೆ ಇದೆ. ನಿರಂತರವಾಗಿ ನೀವು ಪ್ರಯತ್ನ ಮಾಡುತ್ತಾ ಬಂದಿದ್ದ ಕೆಲವು ಭೂಮಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಸೂಕ್ತವಾದ ವೇದಿಕೆ ದೊರೆಯಲಿದೆ. ವೃತ್ತಿನಿರತರಿಗೆ ಮರೆವಿನ ಸಮಸ್ಯೆ ಕಾಡಲಿದೆ. ಬಹಳ ಮುಖ್ಯವಾಗಿ ಮಾಡಲೇಬೇಕಾದ ಕೆಲಸ- ಕಾರ್ಯಗಳನ್ನು ಒಂದು ಕಡೆಗೆ ಬರೆದಿಟ್ಟುಕೊಳ್ಳುವುದು ಉತ್ತಮ. ಇಲ್ಲದಿದ್ದಲ್ಲಿ ನೀವು ನಿಜವೇ ಹೇಳಿದರೂ ನೆಪಗಳನ್ನು ನೀಡುತ್ತಿದ್ದೀರಿ ಎಂದು ಇತರರು ಭಾವಿಸುವ ಸಾಧ್ಯತೆ ಇದೆ. ವೃತ್ತಿಯಲ್ಲಿ ತೀವ್ರವಾದ ಸ್ಪರ್ಧೆ ನೀಡುತ್ತಾ ಇದ್ದು, ಅಂಥವರ ಜೊತೆಗೆ ಮಾತುಕತೆ ಮೂಲಕ ಕೆಲವು ಒಪ್ಪಂದ ಮಾಡಿಕೊಳ್ಳಬೇಕು ಎಂದು ಆಲೋಚಿಸುತ್ತಾ ಇರುವವರಿಗೆ ಮೂರನೇ ವ್ಯಕ್ತಿಗಳ ಸಹಾಯದ ಮೂಲಕ ಉದ್ದೇಶಿತ ಕಾರ್ಯಗಳು ಈಡೇರುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ನಿಮ್ಮಲ್ಲಿ ಕೆಲವರಿಗೆ ಅನಾರೋಗ್ಯ ಕಾರಣದಿಂದ ವಾರದಲ್ಲಿ ಬಹುತೇಕ ದಿನ ತರಗತಿಗಳಿಗೆ ತೆರಳುವುದಕ್ಕೆ ಸಾಧ್ಯವಿಲ್ಲದ ಸನ್ನಿವೇಶ ಎದುರಾಗಲಿದೆ. ಸಾರ್ವಜನಿಕ ಸಾರಿಗೆಯಲ್ಲಿ ಸಂಚಾರ ಮಾಡುವಾಗ ಸಾಮಾನ್ಯ ಸಮಯದಲ್ಲಿ ತೆಗೆದುಕೊಳ್ಳುವಂಥ ಮುಂಜಾಗ್ರತೆಗಿಂತ ಈ ವಾರ ಹೆಚ್ಚು ಎಚ್ಚರಿಕೆಯನ್ನು ತೆಗೆದುಕೊಳ್ಳುವುದು ಒಳ್ಳೆಯದು. ಏಕೆಂದರೆ ಕೈ ಅಥವಾ ಕಾಲು ಮೂಳೆ ಮುರಿತದಂಥದ್ದು ಆಗುವ ಸಾಧ್ಯತೆ ಸಹ ಇದೆ. ಮಹಿಳೆಯರಿಗೆ ನಿಮಗಿಂತ ಬಹಳ ಹಿರಿಯರಿಗೆ ಅಗತ್ಯ ಇರುವ ನೆರವು ನೀಡುವುದಕ್ಕೆ ಹೆಚ್ಚಿನ ಸಮಯ ಮೀಸಲಿಡಬೇಕಾಗುತ್ತದೆ. ಅಂಥವರ ಜೊತೆಗೆ ನಿಮ್ಮ ಬಾಂಧವ್ಯ ಕೂಡ ವೃದ್ಧಿ ಆಗಲಿದೆ. ಚಿನ್ನಾಭರಣಕ್ಕೆ ಪಾಲಿಷ್ ಮಾಡಿಸುವುದು, ಸಣ್ಣ- ಪುಟ್ಟ ರಿಪೇರಿಗಳಿದ್ದಲ್ಲಿ ಅದನ್ನು ಮಾಡಿಸುವುದು ಈ ರೀತಿ ಕೆಲಸಗಳನ್ನು ಆದ್ಯತೆ ಮೇಲೆ ಮಾಡಿ ಮುಗಿಸಲಿದ್ದೀರಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಬಿಡುವಿಲ್ಲದಂಥ ಕೆಲಸ- ಕಾರ್ಯಗಳು, ಸಂತೋಷದ ಘಟನೆಗಳು, ಈ ಹಿಂದಿನ ಕೆಲವು ನೆನಪುಗಳನ್ನು ನೆನೆಸಿಕೊಂಡೇ ನಿಮ್ಮಲ್ಲಿ ಹಲವರಿಗೆ ಈ ವಾರ ಕಳೆದುಹೋಗಲಿದೆ. ಯಾವ ವಿಷಯ ಹೇಳಲು ಇಷ್ಟು ಸಮಯ ನಿಮ್ಮನ್ನು ದಯಾ- ದಾಕ್ಷಿಣ್ಯ ಎಂದು ತಡೆಯುತ್ತಾ ಬಂದಿತ್ತೋ ಅಂತಹವು ಎಲ್ಲದರಿಂದ ಆಚೆ ಬರಲಿದ್ದೀರಿ. ವಿವಾಹಕ್ಕೆ ಪ್ರಯತ್ನ ಮಾಡುತ್ತಾ ಇರುವವರಿಗೆ ಸೂಕ್ತ ಸಂಬಂಧ ದೊರೆಯುವ ಅವಕಾಶಗಳು ಹೆಚ್ಚಿವೆ. ಇನ್ನು ನಿಮ್ಮಲ್ಲಿ ಕೆಲವರು ಜಾತಕದಲ್ಲಿನ ದೋಷ ಪರಿಹಾರಗಳಿಗೆ ಅಂತಲೋ ಅಥವಾ ದೇವರಿಗಾಗಿ ಹರಕೆ ಹೊತ್ತಿದ್ದನ್ನು ತೀರಿಸಬೇಕು ಅಂತಲೋ ತೀರ್ಥಕ್ಷೇತ್ರಕ್ಕೆ ತೆರಳುವಂಥ ಯೋಗ ಇದೆ. ಇದು ಒಂದು ವಿಷಯವನ್ನು ಯಾರ ಬಳಿಯೂ ಹೇಳಬೇಡ ಎಂದು ನೀವು ಪರಿಪರಿಯಾಗಿ ಕೇಳಿಕೊಂಡಿದ್ದ ನಂತರವೂ ನಿಮಗೆ ಬಹಳ ಆಪ್ತರಾದವರೊಬ್ಬರು ಎಲ್ಲರಿಗೂ ಆ ವಿಷಯವನ್ನು ತಿಳಿಯುವಂತೆ ಮಾಡಲಿದ್ದಾರೆ. ಈ ಕಾರಣಕ್ಕೆ ಆ ವ್ಯಕ್ತಿಯ ಜೊತೆಗೆ ಇನ್ನು ಮಾತನಾಡಲೇಬಾರದು ಎಂಬ ನಿರ್ಧಾರಕ್ಕೆ ಬರುವಂತಾಗಲಿದೆ. ಸರ್ಕಾರಿ ಉದ್ಯೋಗದಲ್ಲಿ ಇರುವವರಿಗೆ ನಿಯೋಜನೆ ಮೇಲೆ ಹೆಚ್ಚಿನ ಜವಾಬ್ದಾರಿ ನೀಡಿ, ತಾತ್ಕಾಲಿಕವಾಗಿ ಬೇರೆ ಕಡೆಗೆ ವರ್ಗಾವಣೆ ಮಾಡಬಹುದು. ಕೃಷಿಕರು ದೂರ ಪ್ರಯಾಣಕ್ಕೆ ಕೃಷಿಯ ಉದ್ದೇಶಕ್ಕಾಗಿಯೇ ತೆರಳಲಿದ್ದೀರಿ. ಬೇರೆ ಪ್ರದೇಶದಲ್ಲಿ ಅಳವಡಿಕೆ ಮಾಡಿಕೊಂಡಿರುವಂಥ ಕೃಷಿ ಪದ್ಧತಿಯನ್ನು ನೀವು ಸಹ ಅಳವಡಿಸಿಕೊಳ್ಳುವ ಬಗ್ಗೆ ಆಲೋಚಿಸಿ, ಜತೆಗೊಂದಿಷ್ಟು ಗೆಳೆಯರನ್ನು ಒಟ್ಟುಗೂಡಿಸಿಕೊಂಡು ಹೋಗುವಂಥ ಯೋಗ ಇದೆ. ನಿಮ್ಮಲ್ಲಿ ಕೆಲವರಿಗೆ ಪಿತ್ರಾರ್ಜಿತವಾಗಿ ಬಂದಂಥ ಆಸ್ತಿಯಲ್ಲಿನ ಸ್ವಲ್ಪ ಭಾಗವನ್ನು ಶಾಲೆ ನಿರ್ಮಾಣಕ್ಕೆ ಅಥವಾ ದೇವಸ್ಥಾನ ಕಟ್ಟುವುದಕ್ಕೆ ಅಥವಾ ಆಸ್ಪತ್ರೆ ಕಟ್ಟಡ, ಕಚೇರಿ ಹೀಗೆ ಜನರಿಗೆ ಉಪಯೋಗ ಆಗುವಂಥದ್ದಕ್ಕೆ ನೀಡುವ ಸಾಧ್ಯತೆ ಇದೆ. ವೃತ್ತಿನಿರತರು ನಿಮ್ಮ ವೃತ್ತಿಗೆ ಅಗತ್ಯ ಇರುವ ಸಲಕರಣೆ, ಉಪಕರಣ ಖರೀದಿ ಮಾಡಬೇಕು ಎಂದಿದ್ದಲ್ಲಿ ಅಥವಾ ಕಚೇರಿಯ ರಿನೋವೇಷನ್ ಇತ್ಯಾದಿಗಳನ್ನು ಮಾಡುವುದಕ್ಕೆ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡುವುದಕ್ಕೆ ಯೋಜನೆ ಹಾಕಿಕೊಂಡಿದ್ದೀರಿ ಅಂತಾದಲ್ಲಿ ಇದೊಂದು ವಾರದ ಮಟ್ಟಿಗೆ ತೀರ್ಮಾನವನ್ನು ಮುಂದಕ್ಕೆ ಹಾಕುವುದು ಒಳ್ಳೆಯದು. ಈ ವಿಚಾರದಲ್ಲಿ ನಿಮ್ಮದೇ ವೃತ್ತಿಯಲ್ಲಿ ಇರುವ ಗೆಳೆಯ- ಗೆಳತಿಯರ ಅಭಿಪ್ರಾಯವನ್ನು ಸಂಗ್ರಹಿಸಿ, ಆ ನಂತರ ಮುಂದುವರಿಯುವುದು ಒಳ್ಳೆಯದು. ವಿದ್ಯಾರ್ಥಿಗಳು ತಮಗೆ ಸಿಕ್ಕ ಅವಕಾಶವನ್ನು ಇತರರಿಗಾಗಿ ಬಿಟ್ಟು ಕೊಡಲಿದ್ದೀರಿ. ನಿಮ್ಮಲ್ಲಿ ಕೆಲವರು ಉಳಿತಾಯ ಮಾಡಿದ್ದಂಥ ಹಣವನ್ನು ಟೀವಿ- ಕಂಪ್ಯೂಟರ್ ಗೇಮ್ ಸಬ್ ಸ್ಕ್ರಿಪ್ಷನ್ ಅಥವಾ ಪ್ಲೇಸ್ಟೇಷನ್ ಇಂಥವುಗಳನ್ನು ಖರೀದಿ ಮಾಡುವುದಕ್ಕೆ ಬಳಸುವಂತೆ ಆಗಲಿದೆ. ಮಹಿಳೆಯರಿಗೆ ಆರೋಗ್ಯದ ಮೇಲೆ ಹೆಚ್ಚಿನ ಗಮನ ನೀಡಲೇಬೇಕಾದ ಸನ್ನಿವೇಶ ಎದುರಾಗಲಿದೆ. ಉದ್ಯೋಗಸ್ಥರಾಗಿದ್ದಲ್ಲಿ ದೀರ್ಘ ರಜಾ ತೆಗೆದುಕೊಳ್ಳುವುದಕ್ಕೋ ಅಥವಾ ಕೆಲಸವನ್ನೇ ಬಿಡುವುದಕ್ಕೋ ವೈದ್ಯರೇ ಸಲಹೆ ನೀಡಬಹುದು. ಮಕ್ಕಳನ್ನು ಮಾಡಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಿರುವವರಿಗೆ ಈ ನಿರ್ಧಾರ ಒತ್ತಡದವನ್ನು ಸೃಷ್ಟಿಸಲಿದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಕಡಿಮೆ ಬೆಲೆಗೆ ಸಿಗುತ್ತಿದೆ ಎಂಬ ಕಾರಣಕ್ಕೆ ಕೆಲವು ವಸ್ತುಗಳನ್ನು ಸಾಲ ಮಾಡಿಯೋ ಅಥವಾ ಕ್ರೆಡಿಟ್ ಕಾರ್ಡ್ ಬಳಸಿಯೋ ಖರೀದಿ ಮಾಡಿಬಿಡುತ್ತೀರಿ. ಪಿ.ಜಿ.ಗಳಲ್ಲಿ ವಾಸ ಇರುವಂಥವರಿಗೆ ಏನಾದರೂ ಒಂದು ಕಾರಣದಿಂದ ಅಲ್ಲಿಂದ ಬೇರೆ ಸ್ಥಳಕ್ಕೆ ಹೋಗಬೇಕು ಎಂಬ ಸನ್ನಿವೇಶ ಸೃಷ್ಟಿ ಆಗಲಿದೆ. ಲ್ಯಾಪ್ ಟಾಪ್, ಗ್ಯಾಜೆಟ್ ಗಳನ್ನು ಚಾರ್ಜ್ ಗೆ ಹಾಕುವಾಗ ಬಹಳ ಎಚ್ಚರಿಕೆಯನ್ನು ವಹಿಸಿ. ಇಲ್ಲದಿದ್ದಲ್ಲಿ ವಿದ್ಯುತ್ ಗೆ ಸಂಬಂಧಿಸಿದ ತೊಂದರೆಗಳಿಂದ ನಿಮ್ಮ ವಸ್ತುಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಚರ್ಮದ ಸೌಂದರ್ಯದ ಕಡೆಗೆ ನೀವು ಹೆಚ್ಚಿನ ಗಮನವನ್ನು ನೀಡಲಿದ್ದೀರಿ. ಒಂದೋ ಇದಕ್ಕಾಗಿ ವೈದ್ಯರ ಬಳಿ ತೆರಳಿ, ನಿಮಗಿರುವ ಸಮಸ್ಯೆಗಳಿಗೆ ಪರಿಹಾರವಾಗಿ ಔಷಧೋಪಚಾರ ಮಾಡಿಕೊಳ್ಳಲಿದ್ದೀರಿ. ಅಥವಾ ನಿಮ್ಮ ಸ್ನೇಹಿತರೋ ಅಥವಾ ಸಂಬಂಧಿಗಳಿಂದಲೋ ಸಲಹೆಯನ್ನು ಪಡೆದುಕೊಂಡು ಕೆಲವು ದುಬಾರಿ ಕ್ರೀಮ್- ಲೋಷನ್ ಗಳನ್ನು ಖರೀದಿ ಮಾಡಲಿದ್ದೀರಿ. ಈ ವಾರವಿಡೀ ಒಂದಲ್ಲಾ ಒಂದು ಕಾರಣದಿಂದ ಊಟ- ತಿಂಡಿಯನ್ನು ಸಮಯಕ್ಕೆ ಸರಿಯಾಗಿ ಮಾಡುವುದಕ್ಕೆ ಸಾಧ್ಯವಾಗದೇ ಹೋಗಬಹುದು. ಇದರಿಂದಾಗಿ ನಿಮ್ಮ ಬಗ್ಗೆ ನಿಮಗೇ ಬೇಸರ ಕಾಡಲಿದೆ. ಕೃಷಿಕರಿಗೆ ಮೊದಲಿನ ಉತ್ಸಾಹದಲ್ಲಿ ಎಲ್ಲ ಕೆಲಸ- ಕಾರ್ಯಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬಲವಾಗಿ ಅನಿಸಲಿದೆ. ಇತರರ ಸಾಲಕ್ಕೆ ನೀವು ಹಾಕಿದ್ದ ಜಾಮೀನು ಕಾರಣದಿಂದ ಬಹಳ ಕಿರಿಕಿರಿ ಅನುಭವಿಸುವಂತೆ ಆಗಲಿದೆ. ನಿಮ್ಮ ನಿರ್ಧಾರಕ್ಕೆ ಮನೆಯಲ್ಲಿಯೂ ಚುಚ್ಚು ಮಾತುಗಳನ್ನು ಕೇಳಿಸಿಕೊಳ್ಳುವಂತೆ ಆಗಲಿದ್ದು, ಮಾನಸಿಕವಾಗಿ ಖಿನ್ನತೆ ಅನುಭವಿಸುವಂತೆ ಮಾಡಲಿದೆ. ಕಾಲಭೈರವೇಶ್ವರನ ಆರಾಧನೆ ಮಾಡುವುದರಿಂದ ನಿಮಗೆ ಇರುವಂಥ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮಾರ್ಗೋಪಾಯ ಸಿಗಲಿದೆ. ವೃತ್ತಿನಿರತರು ವಿಪರೀತ ನಿರೀಕ್ಷೆ ಮಾಡುವ ಕ್ಲೈಂಟ್ ನಿಂದ ಹೈರಾಣಾಗುವಂತೆ ಆಗಲಿದೆ. ನಿಮ್ಮ ಬುದ್ಧಿಯೆಲ್ಲ ಖರ್ಚು ಮಾಡಿದರೂ ಈ ಸಮಸ್ಯೆಯಿಂದ ಹೊರಬರುವುದು ಹೇಗೆ ಎಂಬುದು ತಿಳಿಯದೆ ಚಿಂತೆಗೆ ಗುರಿ ಆಗುತ್ತೀರಿ. ಇನ್ನು ಕೋರ್ಟ್- ಕಚೇರಿಯಲ್ಲಿ ನಡೆಯುತ್ತಿರುವ ವ್ಯಾಜ್ಯಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಪ್ರಸ್ತಾವ ಬರಲಿದೆ. ಇದನ್ನು ಗುಮಾನಿಯಿಂದ ನೋಡದೆ ನಿಮಗೆ ಸಾಧಕವಾಗಿ ಹೇಗೆ ಮಾಡಿಕೊಳ್ಳಬಹುದು ಎಂದು ಆಲೋಚಿಸಿ. ವಿದ್ಯಾರ್ಥಿಗಳು ಅತ್ಯುತ್ಸಾಹದಲ್ಲಿ ಆರಂಭ ಮಾಡಿದ್ದ ಕೆಲಸಗಳನ್ನು ಅರ್ಧದಲ್ಲೇ ನಿಲ್ಲಿಸಬೇಕಾದ ಸನ್ನಿವೇಶ ಎದುರಾಗಲಿದೆ. ಎಂಥ ಸನ್ನಿವೇಶದಲ್ಲೂ ನಿಮ್ಮ ಜತೆಗೆ ನಿಲ್ಲುವುದಾಗಿ ಹೇಳಿದ್ದ ಸ್ನೇಹಿತ- ಸ್ನೇಹಿತೆಯರು ತಮ್ಮದೇ ಕಾರಣಗಳನ್ನು ನೀಡಿ, ನಿಮಗೆ ನೆರವು ನೀಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಲಿದ್ದಾರೆ. ವಾಸ್ತವವನ್ನು ಒಪ್ಪಿಕೊಳ್ಳುವುದು ಈ ಸಂದರ್ಭದಲ್ಲಿ ಬಹಳ ಮುಖ್ಯವಾಗುತ್ತದೆ. ಮಹಿಳೆಯರು ಯಾರದೋ ತರಲೆ- ತಾಪತ್ರಯದಲ್ಲಿ ಹೋಗಿ ನೀವು ಸಿಕ್ಕಿ ಬೀಳಲಿದ್ದೀರಿ. ನಿಮ್ಮ ನೆಮ್ಮದಿ- ಸಮಾಧಾನಕ್ಕಾಗಿ ಇತರರು ಕಟ್ಟಬೇಕಾಗಿದ್ದ ಹಣದ ಜವಾಬ್ದಾರಿಯನ್ನೋ ಅಥವಾ ಮಾಡಿಕೊಡುತ್ತೇನೆ ಎಂದು ಹೇಳಿದ್ದ ಕೆಲಸ- ಕಾರ್ಯಗಳನ್ನು ನೀವು ಮುಗಿಸಿಕೊಡುವುದಾಗಿ ಮಾತು ನೀಡುವಂತೆ ಆಗಲಿದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಯಾವುದಕ್ಕೆ ಹೇಗೆ ಸಿದ್ಧವಾಗಬೇಕು ಎಂಬ ಚಿಂತನೆ ಹಾಗೂ ಅದರ ಕಡೆಗೆ ಹೆಜ್ಜೆ ಹಾಕುವುದಕ್ಕೆ ಅಂತಲೇ ಸಮಯವನ್ನು ಮೀಸಲು ಇಡಲಿದ್ದೀರಿ. ಆರ್ಥಿಕ ವಿಚಾರ, ಆರೋಗ್ಯ, ಉದ್ಯೋಗ, ವ್ಯವಹಾರ ಹೀಗೆ ಎಲ್ಲದರಲ್ಲಿಯೂ ಇಲ್ಲಿಯವರೆಗೆ ನೀವೇ ಕಟ್ಟಿ ನಿಲ್ಲಿಸಿದ ನಂಬಿಕೆಗಳನ್ನು ಕೆಡವಿ ಹೊಸ ದಾರಿಗೆ ಹೊರಳಲಿದ್ದೀರಿ. ಇಷ್ಟು ಕಾಲ ಯಾವುದಕ್ಕೆ ಕೊನೆ ಕ್ಷಣದ ತನಕ ಕಾಯ್ದು ನೋಡುವ ಪರಿಪಾಠ ಇಟ್ಟುಕೊಂಡಿದ್ದಿರೋ ಇನ್ನು ಮುಂದೆ ಹಾಗಿರಬಾರದು ಎಂಬ ಸಂಕಲ್ಪ ಮಾಡುವ ಸಾಧ್ಯತೆ ಇದೆ. ಭರವಸೆ ಇಟ್ಟು ಮಾಡಿದ್ದ ಪ್ರಾಜೆಕ್ಟ್ ಗಳು ನಿಮ್ಮ ಕೈ ಹಿಡಿಯಲಿವೆ. ಹೊಂದಾಣಿಕೆ ಮಾಡಿಕೊಂಡು ಮುನ್ನಡೆದರೆ ದೊಡ್ಡದನ್ನು ಸಾಧಿಸಬಹುದು ಎಂಬ ಸುಳಿವು ದೊರೆಯಲಿದೆ. ನಿಮ್ಮಲ್ಲಿ ಕೆಲವರು ಹೂಡಿಕೆ ಉದ್ದೇಶ ಇರಿಸಿಕೊಂಡು ಸೈಟುಗಳನ್ನು ಹುಡುಕಾಡಲಿದ್ದೀರಿ. ಕುಟುಂಬ ಸದಸ್ಯರಿಂದ ನಿಮ್ಮ ನಿರ್ಧಾರಕ್ಕೆ ದೊಡ್ಡ ಮಟ್ಟದ ಬೆಂಬಲ ದೊರೆಯಲಿದೆ. ಪ್ರಯಾಣಕ್ಕೆ ತೆರಳಬೇಕು, ಅಲ್ಲಿಗೆ ಹೋದಾಗ ಬೇಕು ಎಂದುಕೊಂಡು ಖರೀದಿ ಮಾಡಿದ್ದ ಕೆಲವು ವಸ್ತುಗಳನ್ನು ಉಚಿತವಾಗಿಯೇ ಅಥವಾ ಕಡಿಮೆ ಬೆಲೆಗೆ ಬೇರೆಯವರಿಗೆ ಕೊಡುವಂತೆ ಆಗಬಹುದು. ಕೃಷಿಕರು ಆರ್ಥಿಕವಾಗಿ ಬಲಿಷ್ಠರಾಗುವುದಕ್ಕೆ ತಾಂತ್ರಿಕವಾಗಿ ಹಾಗೂ ವ್ಯಾವಹಾರಿಕವಾಗಿ ಏನೇನು ಅಳವಡಿಸಿಕೊಳ್ಳಬೇಕು ಹಾಗೂ ಹೊಸದಾಗಿ ಎಷ್ಟು ಹೂಡಿಕೆ ಮಾಡಬೇಕು ಅದರ ಕಡೆಗೆ ಗಮನವನ್ನು ನೀಡಲಿದ್ದೀರಿ. ನಿಮ್ಮ ಪರಿಸ್ಥಿತಿ ಕಂಡು ಯಾರು ಹೀಯಾಳಿಸಿರುತ್ತಾರೋ ಅಂಥವರೇ ನಿಮ್ಮಿಂದ ಸಹಾಯ ಅಪೇಕ್ಷಿಸಿ ಬರಲಿದ್ದಾರೆ. ಆಹಾರ ಧಾನ್ಯಗಳು ಹಾಗೂ ಸಿರಿಧಾನ್ಯಗಳನ್ನು ಬೆಳೆಯುವಂಥವರಿಗೆ ಕೆಲವು ಸಂಸ್ಥೆಗಳು ನಿಮ್ಮಲ್ಲಿಯೇ ಬಂದು ಉತ್ಪನ್ನಗಳ ಖರೀದಿಗೆ ಒಪ್ಪಂದ ಮಾಡಿಕೊಳ್ಳುವ ಯೋಗ ಇದೆ. ವೃತ್ತಿನಿರತರು ಹೊಸ ಹೊಸ ಅವಕಾಶಗಳನ್ನು ಹುಡುಕಿಕೊಳ್ಳಲಿದ್ದೀರಿ. ನಿಮ್ಮ ಸಮಯ ಪ್ರಜ್ಞೆ ಹಾಗೂ ವೇಗಕ್ಕೆ ನಿಮ್ಮದೇ ವೃತ್ತಿಯಲ್ಲಿ ಇರುವಂಥ ಸ್ನೇಹಿತರು ಆಶ್ಚರ್ಯ ಹಾಗೂ ಅಸೂಯೆ ಪಡೆಯುವಂತೆ ಆಗಲಿದೆ. ನಿಮ್ಮ ಸಂಬಂಧಿಗಳು ಪೈಕಿ ನೀವು ತುಂಬ ಗೌರವ ನೀಡುವಂಥ ಒಬ್ಬರು ತಮ್ಮ ಮಗನಿಗೋ ಅಥವಾ ಮಗಳಿಗೋ ನಿಮ್ಮ ಸಂಸ್ಥೆಯಲ್ಲಿ ಕೆಲಸ ನೀಡುವಂತೆ ಕೇಳಿಕೊಂಡು ಬರಲಿದ್ದಾರೆ. ಇಷ್ಟು ಸಮಯ ಆಗುತ್ತಿದ್ದ ಆದಾಯ ಸೋರಿಕೆಯನ್ನು ಪತ್ತೆ ಹಚ್ಚಿ, ಅದನ್ನು ನಿಲ್ಲಿಸುವ ನಿಟ್ಟಿನಲ್ಲಿ ನಿಮ್ಮ ಪ್ರಯತ್ನ ಫಲ ನೀಡಲಿದೆ. ಇದರಿಂದ ನಿಮಗೊಂದು ಆತ್ಮತೃಪ್ತಿ ಸಹ ದೊರೆಯಲಿದೆ. ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣಕ್ಕೆ ಬಹಳ ಮುಖ್ಯವಾದ ಕೆಲವು ಪ್ರವೇಶ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಬಗ್ಗೆ ತೀರ್ಮಾನ ಮಾಡಲಿದ್ದೀರಿ. ಇದರ ಜೊತೆಗೆ ಅದಕ್ಕಾಗಿ ಟ್ಯೂಷನ್ ಗೆ ಸೇರುವುದಕ್ಕೆ- ಎಲ್ಲಿ ಸೂಕ್ತ ತರಬೇತಿ ಸಿಗುತ್ತದೆ ಅಂಥವುಗಳ ಬಗ್ಗೆ ಹುಡುಕಾಟ ನಡೆಸಲಿದ್ದೀರಿ. ನಿಮ್ಮ ಆತ್ಮವಿಶ್ವಾಸ ಹೆಚ್ಚುವ ರೀತಿಯಲ್ಲಿ ಕೆಲವು ಬೆಳವಣಿಗೆಳು ಆಗಲಿವೆ. ಮಹಿಳೆಯರು ಈಗ ಹೊಸದಾಗಿ ಉದ್ಯೋಗಕ್ಕೆ ಪ್ರಯತ್ನ ಮಾಡುತ್ತಿದ್ದೀರಿ ಅಂತಾದಲ್ಲಿ ಹೆಸರಾಂತ ಸಂಸ್ಥೆಗಳಲ್ಲಿ ಉತ್ತಮ ವೇತನಕ್ಕೆ ಉದ್ಯೋಗ ದೊರೆಯುವ ಸಾಧ್ಯತೆ ಹೆಚ್ಚಿದೆ. ಈ ಹಿಂದಿನ ವಾರಗಳಲ್ಲಿ ನೀವು ಅಟೆಂಡ್ ಮಾಡಿದ್ದ ಇಂಟರ್ ವ್ಯೂಗಳಲ್ಲಿ ಆಯ್ಕೆಯಾಗಿರುವ ಬಗ್ಗೆ ಸುದ್ದಿ ಸಹ ಬರಬಹುದು.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಪ್ರಾಪಂಚಿಕ ವಿಷಯಗಳ ಸಹವಾಸವೇ ಬೇಡ ಎಂಬಷ್ಟು ವೈರಾಗ್ಯ ನಿಮ್ಮಲ್ಲಿ ಕೆಲವರನ್ನು ಕಾಡಲಿದೆ. ಸ್ನೇಹಿತರೊಬ್ಬರ ಅನಾರೋಗ್ಯ ಸಮಸ್ಯೆಯು ತೀವ್ರವಾಗಿ ದುಃಖಕ್ಕೆ ಗುರಿ ಮಾಡಲಿದೆ. ರಾತ್ರಿ ವೇಳೆ ಬಹಳ ಸಮಯದ ತನಕ ನಿದ್ರೆ ಮಾಡದೆ ಎಚ್ಚರ ಇರುವವರಿಗೆ ಕೆಲವು ಆರೋಗ್ಯ ತೊಂದರೆಗಳು ಕಾಡಲಿವೆ. ಕುಟುಂಬದಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂಬ ಸಂಗತಿಗಳು ಒಂದು ಕಡೆ ಕೂತು ಮಾತುಕತೆ ಮೂಲಕ ಸಹಮತಕ್ಕೆ ಬರುವುದಕ್ಕೆ ವೇದಿಕೆ ದೊರೆಯಲಿದೆ. ಯೂಟ್ಯೂಬರ್ ಗಳಾಗಿ ಅದರಿಂದಲೇ ಆದಾಯ ಮೂಲವನ್ನು ಹುಡುಕಿಕೊಂಡು ಇರುವವರಿಗೆ ಇನ್ನೂ ಹೆಚ್ಚು ಆಕ್ರಮಣಕಾರಿಯಾಗಿ ಆಲೋಚಿಸಬೇಕು, ಕಂಟೆಂಟ್ ಪ್ಲಾನಿಂಗ್ ನಲ್ಲಿ ಪ್ರಮುಖ ಬದಲಾವಣೆ ಮಾಡಿಕೊಳ್ಳಲೇಬೇಕು ಎಂದೆನಿಸಲಿದೆ. ಕಟ್ಟಡ ಕಾಂಟ್ರಾಕ್ಟರ್ ಗಳಾಗಿ ಇರುವಂಥವರಿಗೆ ಸಮಯಕ್ಕೆ ಸರಿಯಾಗಿ ಮಟೀರಿಯಲ್ ಗಳು ಬಾರದ ಕಾರಣದಿಂದ ದೈನಂದಿನ ಕೆಲಸ- ಕಾರ್ಯಗಳು ಅಸ್ತವ್ಯಸ್ತ ಆಗಲಿವೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ವಿರುದ್ಧವಾಗಿ ಮೇಲಧಿಕಾರಿಗಳಿಗೆ ದೂರು ಹೋಗುವ ಸಾಧ್ಯತೆ ಇದ್ದು, ಇಂಥ ಸನ್ನಿವೇಶವನ್ನು ತಾಳ್ಮೆಯಿಂದ ನಿಭಾಯಿಸಿ. ಕೃಷಿಕರು ಹೂವಿನ ಬೆಳೆ ಬೆಳೆಯುವವರಾಗಿದ್ದಲ್ಲಿ ಆದಾಯದ ಪ್ಯಾಟರ್ನ್ ನಲ್ಲಿ ಬದಲಾವಣೆ ತಂದುಕೊಳ್ಳುವ ನಿಟ್ಟಿನಲ್ಲಿ ಕೃಷಿ ಪಂಡಿತರು, ಕೃಷಿ ವಿಜ್ಞಾನಿಗಳಿಂದ ಸಲಹೆ- ಮಾರ್ಗದರ್ಶನವನ್ನು ಪಡೆಯಲಿದ್ದೀರಿ. ಇಷ್ಟು ಸಮಯ ಕೃಷಿ ಮಾಡದೆ ಹಾಗೇ ಬಿಟ್ಟಿದ್ದ ಭೂಮಿಯಲ್ಲಿ ದೀರ್ಘಾವಧಿಗೆ ಆದಾಯ ತರುವಂಥ ಮರ ಕೃಷಿಯಂಥದ್ದನ್ನು ಕೆಲವರು ಯೋಜನೆ ಹಾಕಿಕೊಳ್ಳಲಿದ್ದೀರಿ. ಮತ್ತೆ ಕೆಲವರು ಅಡಿಕೆ, ಮಾವು ಅಥವಾ ತೆಂಗಿನಂಥ ತೋಟಗಾರಿಕೆ ಬೆಳೆ ಬೆಳೆಯುವುದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ಇನ್ನು ನಿಮ್ಮಲ್ಲಿ ಯಾರು ಜೇನು ಕೃಷಿ ಮಾಡುತ್ತಾ ಇದ್ದೀರಿ ಅಂಥವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಮತ್ತು ನೀವು ಈಗ ಮಾಡುತ್ತಿರುವ ಜೇನು ಕೃಷಿಯ ಪ್ರಮಾಣವನ್ನು ಹೆಚ್ಚಳ ಮಾಡಲಿದ್ದೀರಿ. ವೃತ್ತಿನಿರತರು ಈ ಹಿಂದೆ ಆಗಿದ್ದ ಕೆಲವು ತಪ್ಪುಗಳನ್ನು ತಿದ್ದಿಕೊಳ್ಳುವುದಕ್ಕೆ, ನಿಮ್ಮದೇ ಕೆಲಸದ ವೈಖರಿಯಲ್ಲಿ, ನಿಮ್ಮ ಬಳಿ ಈ ತನಕ ಅನುಸರಿಸಿಕೊಂಡು ಬಂದಂಥ ನಿಯಮಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ಮಾಡಲಿದ್ದೀರಿ. ಈ ಅವಧಿಯಲ್ಲಿಯೇ ನಿಮಗೆ ತಿಂಗಳಾ ತಿಂಗಳು ಆಗುತ್ತಾ ಇರುವ ಖರ್ಚಿನ ಪ್ರಮಾಣದಲ್ಲಿ ಏರಿಕೆಯನ್ನು ಕಾಣುವಂತೆ ಆಗಲಿದೆ. ವಿದ್ಯಾರ್ಥಿಗಳು ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ಮಾರ್ಪಾಡು ಮಾಡಿಕೊಂಡು, ದೈಹಿಕ ದೃಢತೆ ಕಡೆಗೆ ಹೆಚ್ಚಿನ ಲಕ್ಷ್ಯವನ್ನು ನೀಡಲಿದ್ದೀರಿ. ಭಾರತೀಯ ಸೇನೆಗೆ ಸೇರಬೇಕು ಎಂಬ ಗುರಿಯನ್ನು ಇಟ್ಟುಕೊಂಡಿರುವವರು ಅದಕ್ಕಾಗಿ ಕೆಲವು ತರಬೇತಿಗಳಿಗೆ ಸೇರ್ಪಡೆ ಆಗುವಂಥ ಸಾಧ್ಯತೆ ಇದೆ. ಮಹಿಳೆಯರಿಗೆ ರಕ್ತಹೀನತೆ, ನರಕ್ಕೆ ಸಂಬಂಧಿಸಿದ ಸಮಸ್ಯೆ ಕಾಡಬಹುದು. ದೇಹದ ತೂಕ ಇಳಿಸಿಕೊಳ್ಳಬೇಕು ಎಂಬ ಉದ್ದೇಶ ಇಟ್ಟುಕೊಂಡು ಯಾರು ಆಹಾರ ಪಥ್ಯವನ್ನು ಅನುಸರಿಸುತ್ತಾ ಇದ್ದೀರಿ ಅಂಥವರಿಗೆ ಏಕಾಏಕಿ ದೇಹದ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಯಾಗಿ, ವಿಪರೀತ ಸುಸ್ತು ಸೇರಿದಂತೆ ಇತರೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು, ಆಸ್ಪತ್ರೆಗೆ ದಾಖಲಾಗಬೇಕಾದ ಸನ್ನಿವೇಶ ಸಹ ಬರಬಹುದು, ಎಚ್ಚರಿಕೆಯಿಂದ ಇರಿ.
ಇದನ್ನೂ ಓದಿ: ನವೆಂಬರ್ 23ರಿಂದ 29 ರವರೆಗೆ ರಾಶಿ ಭವಿಷ್ಯ: ಆನಂದದಿಂದ ಕರ್ತವ್ಯ ನಿರ್ವಹಿಸಿದರೆ ಲಾಭ ಖಚಿತ
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಒಮ್ಮೆ ಹೇಳಿದ್ದನ್ನೇ ಅದೆಷ್ಟು ಸಲ ತಿರುಗಾ ಮುರುಗಾ ಮಾಡಿ ಹೇಳ್ತೀರಿ ಎಂದು ಹಲವರನ್ನು ಕೇಳುವಂತೆ ಈ ವಾರ ನಿಮಗೆ ಆಗಲಿದೆ. ನಿಮ್ಮಿಂದ ಸಹಾಯ ಆಗಬೇಕು ಎಂಬ ನೆಪದಿಂದ ಗಂಟು ಬೀಳುವವರು ಅಕ್ಷರಶಃ ಹೈರಾಣ ಮಾಡಲಿದ್ದಾರೆ. ಉದ್ಯೋಗ ಸ್ಥಳದಲ್ಲಿ ಯಾಕಿಷ್ಟು ಸಮಯ ವ್ಯರ್ಥ ಆಗುತ್ತದೆ ಹಾಗೂ ಏನೂ ಫಲಿತಾಂಶ ಸಿಗುತ್ತಿಲ್ಲ ಯಾಕೆ ಎಂಬ ಚಿಂತೆಯಲ್ಲಿ ನರಳಿ ಹೋಗುವಂತೆ ಆಗಲಿದೆ. ತರ್ಕದ ಹಿನ್ನೆಲೆಯಲ್ಲಿ ಯೋಚನೆ ಮಾಡುವುದನ್ನೇ ಬಿಟ್ಟು ಬಿಡಬೇಕು ಅನ್ನೋ ಪರಿಯಲ್ಲಿ ನಿಮ್ಮ ಬದುಕಿನಲ್ಲಿ ಮ್ಯಾಜಿಕ್ ಗಳನ್ನು ಕಾಣಲಿದ್ದೀರಿ. ಈ ವ್ಯಕ್ತಿಯಿಂದ ಯಾವತ್ತಿಗೂ ನಯಾ ಪೈಸೆ ಸಹಾಯ ಆಗುವುದಿಲ್ಲ ಎಂದು ನಿರ್ಲಕ್ಷ್ಯ ಮಾಡಿದಂಥವರಿಂದಲೇ ನಿಮಗೆ ಬೇಕಾದ ಕೆಲಸಗಳು ಆಗಲಿವೆ. ಸೀರೆ ವ್ಯಾಪಾರ ಮಾಡುತ್ತಿರುವವರಿಗೆ ಲಾಭದಲ್ಲಿ ಹೆಚ್ಚಳ ಆಗಲಿದೆ. ಹೊಸ ಹೊಸ ಸಗಟು ಮಾರಾಟಗಾರರ ಪರಿಚಯದಿಂದ ನಿಮ್ಮ ಆಲೋಚನಾ ಕ್ರಮದಲ್ಲಿಯೂ ಬದಲಾವಣೆ ಆಗಲಿದೆ. ನಿಮ್ಮಲ್ಲಿ ಕೆಲವರು ಪಿಎಫ್ ಹಣ ವಿಥ್ ಡ್ರಾ ಮಾಡುವ ಬಗ್ಗೆ ಆಲೋಚನೆ ಮಾಡುತ್ತೀರಿ, ನಿಮ್ಮಲ್ಲಿ ಕೆಲವರು ಅಪ್ಲೈ ಮಾಡಿಯೇ ಬಿಡುತ್ತೀರಿ. ಕೃಷಿಕರು ತಮ್ಮ ಜಮೀನಿನಲ್ಲಿ ನೀರಿನ ಕೊರತೆಯನ್ನು ಎದುರಿಸುತ್ತಾ ಇದ್ದಲ್ಲಿ ಅದನ್ನು ನಿವಾರಿಸಿಕೊಳ್ಳುವುದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಳ್ಳುವತ್ತ ಹೆಚ್ಚು ಗಮನವನ್ನು ನೀಡಲಿದ್ದೀರಿ. ಸರ್ಕಾರದಿಂದ ಬರಬೇಕಾದ ಅನುಮತಿ ಹಾಗೂ ಆಗಬೇಕಾದ ಕೆಲಸ- ಕಾರ್ಯಗಳನ್ನು ಶೀಘ್ರವಾಗಿ ಮುಗಿಸಿಕೊಳ್ಳುವುದಕ್ಕೆ ಪ್ರಯತ್ನವನ್ನು ತೀವ್ರ ಮಾಡಲಿದ್ದೀರಿ. ಇದರ ಜತೆಗೆ ಬಾಕಿ ಇರುವಂಥ ನಿಮ್ಮ ಗೆಳೆಯರ- ಸಂಬಂಧಿಗಳ ಸರ್ಕಾರಿ ಕೆಲಸ- ಕಾರ್ಯಗಳಿಗೂ ನೀವೇ ಓಡಾಡಿ, ಪೂರ್ಣ ಮಾಡಿಕೊಡಲಿದ್ದೀರಿ. ವೃತ್ತಿನಿರತರು ಈ ವಾರ ಸ್ವಲ್ಪ ವಿರಾಮ ತೆಗೆದುಕೊಂಡು, ವೈಯಕ್ತಿಕವಾಗಿ ಬಾಕಿ ಇರುವಂತಹ ಕೆಲಸ-ಕಾರ್ಯಗಳನ್ನು ಮುಗಿಸಿಕೊಳ್ಳುವ ಕಡೆಗೆ ಗಮನವನ್ನು ನೀಡಲಿದ್ದೀರಿ. ಕೌಟುಂಬಿಕವಾಗಿಯೂ ನೀವೇ ನಿರ್ವಹಿಸಬೇಕಾದ ಜವಾಬ್ದಾರಿಗಳು ಬಾಕಿ ಉಳಿದು ಹೋಗಿದ್ದಲ್ಲಿ ಅದರ ಕಡೆಗೂ ಲಕ್ಷ್ಯವನ್ನು ನೀಡಲಿದ್ದೀರಿ. ಇನ್ನು ನಿಮ್ಮಲ್ಲಿ ಕೆಲವರು ಈಗಾಗಲೇ ವೈದ್ಯರು ಸೂಚಿಸಿ, ಹಾಗೇ ಬಾಕಿ ಉಳಿದುಹೋಗಿದ್ದ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವ ಸಾಧ್ಯತೆ ಸಹ ಇದೆ. ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವಂಥವರಾದಲ್ಲಿ ನಿಮ್ಮಿಂದ ಶಿಕ್ಷಣ ಸಂಸ್ಥೆಗೆ ಉತ್ತಮವಾದ ಹೆಸರು ಬರಲಿದೆ. ನಿಮ್ಮ ತರಬೇತಿ ವೆಚ್ಚವನ್ನು ಶಿಕ್ಷಣ ಸಂಸ್ಥೆಯವರೇ ಭರಿಸುವ ಬಗ್ಗೆ ಭರವಸೆಯನ್ನು ಸಹ ನೀಡಬಹುದು. ಕೆಲವು ಪ್ರಾಯೋಜಕರು ಸಹ ಮುಂದೆ ಬರುವಂಥ ಯೋಗ ಇದೆ. ಇದರಿಂದಾಗಿ ಭವಿಷ್ಯದ ಸಾಧನೆಗೆ ನೆರವಾಗಲಿದೆ. ಮಹಿಳೆಯರು ತಮ್ಮದೇ ಸ್ವಂತ ಹಣದಲ್ಲಿ ವಿಲಾಸಿ ಕಾರು, ದುಬಾರಿ ಬೈಕ್- ಸ್ಕೂಟರ್ ಖರೀದಿ ಮಾಡುವಂಥ ಯೋಗ ಇದೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿರುವವರಿಗೆ ತುಂಬ ಒಳ್ಳೆ ಲಾಭ ಕೈ ಸೇರುವಂಥ ಯೋಗ ಇದೆ. ತಂದೆ- ತಾಯಿಗಳನ್ನು ಕರೆದುಕೊಂಡು, ವಿದೇಶಕ್ಕೆ ಪ್ರವಾಸ ಹೋಗುವ ಬಗ್ಗೆ ನಿಮ್ಮಲ್ಲಿ ಕೆಲವರು ಆಲೋಚನೆ ಮಾಡಲಿದ್ದೀರಿ.
ಲೇಖನ- ಎನ್.ಕೆ.ಸ್ವಾತಿ
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:05 pm, Sat, 22 November 25




