ಡಿಸೆಂಬರ್ 26ರ ನಂತರ ಜಾಗತಿಕ ಮಟ್ಟದಲ್ಲಿ ಅಲ್ಲೋಲ ಕಲ್ಲೋಲ; ಕರ್ನಾಟಕದ ಖ್ಯಾತ ಜ್ಯೋತಿಷಿ ಸ್ಫೋಟಕ ಭವಿಷ್ಯ
ಕರ್ನಾಟಕದ ಖ್ಯಾತ ಜ್ಯೋತಿಷಿಗಳಾದ- ಉಡುಪಿಯ ಕಾಪು ಮೂಲದ ಪ್ರಕಾಶ್ ಅಮ್ಮಣ್ಣಾಯ ಅವರು ತಮ್ಮ ಫೇಸ್ ಬುಕ್ ನಲ್ಲಿ ಸ್ಫೋಟಕವಾದ ಭವಿಷ್ಯವೊಂದನ್ನು ಹಾಕಿದ್ದಾರೆ. ಅವರು ಅಲ್ಲಿ ಹಾಕಿರುವಂಥ ಪೋಸ್ಟ್ ಬಹಳ ಕುತೂಹಲ ಮೂಡಿಸಿದೆ. ಅವರು ತಿಳಿಸಿರುವಂತೆ ಜ್ಯೋತಿಷ್ಯದ ಗ್ರಹಗತಿಗಳ ಪ್ರಕಾರವಾಗಿ ಇದೇ ಡಿಸೆಂಬರ್ ತಿಂಗಳ 26ನೇ ತಾರೀಕಿನಿಂದ ಮುಂದಿನ ಜನವರಿ 14ನೇ ತಾರೀಕಿನ ಮಧ್ಯೆ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಅನಾಹುತಗಳು ಸಂಭವಿಸಲಿವೆ. ಇಂಥದ್ದೊಂದು ಪರಿಸ್ಥಿತಿ ಸೃಷ್ಟಿ ಆಗುವುದಕ್ಕೆ ಕಾರಣ ಆಗುವಂಥ ಗ್ರಹಗತಿಗಳು ಯಾವುವು? ಮತ್ತು ಏನೇನು ಅನಾಹುತ ಸಂಭವಿಸಬಹುದು ಎಂಬ ಬಗ್ಗೆ ಟಿವಿ9 ಕನ್ನಡ ವೆಬ್ ಸೈಟ್ ಗೆ ಎಕ್ಸ್ ಕ್ಲೂಸಿವ್ ಆದ ಮಾಹಿತಿಯನ್ನು ಪ್ರಕಾಶ್ ಅಮ್ಮಣ್ಣಾಯ ಅವರು ಹಂಚಿಕೊಂಡಿದ್ದಾರೆ.

“ಮುಂದಿನ ಡಿಸೆಂಬರ್ 26ರ ನಂತರ ಜನವರಿ 14ನೇ ತಾರೀಕಿನ ಮಧ್ಯೆ ಇಡೀ ಜಗತ್ತಿಗೆ ನಾನಾ ಬಗೆಯ ಸಂಕಷ್ಟಗಳು ಎದುರಾಗಲಿವೆ. ಮುಖ್ಯವಾಗಿ ಅಮಾಯಕರ ಸಾವು- ನೋವು ಸಂಭವಿಸಲಿದೆ. ಇದಕ್ಕೆ ವೈಯಕ್ತಿಕ ನೆಲೆಯಲ್ಲಿ ಮುಂಜಾಗ್ರತೆ ವಹಿಸುವುದೇ ಪರಿಹಾರವೇ ವಿನಾ ಬೇರೆ ಯಾವುದೇ ರೀತಿಯಲ್ಲಿ ಇದರಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ,” ಎಂದು ನಿಶ್ಚಿತವಾದ ಧ್ವನಿಯಲ್ಲಿ ಹೇಳಿದರು ಉಡುಪಿಯ ಕಾಪು ಮೂಲದ ಖ್ಯಾತ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ (Prakash Ammannaya) ಅವರು ಹೀಗೆ ಭವಿಷ್ಯ ನುಡಿಯಲು ಏನು ಕಾರಣ ಎಂಬುದನ್ನು ತಿಳಿಯುವುದು ನಮ್ಮ ಪ್ರಶ್ನೆಯಾಗಿತ್ತು. ಯಾವ ಗ್ರಹಗತಿಯಿಂದ ಹೀಗಾಗಲಿದೆ ಮತ್ತು ಏನು ಅನಾಹುತಗಳು ಸಂಭವಿಸುತ್ತವೆ, ಏನು ಮುಂಜಾಗ್ರತೆ ಮಾಡಬಹುದು – ಹೀಗೆ ಹಲವು ಪ್ರಶ್ನೆಗಳನ್ನು ಅವರ ಮುಂದೆ ಇಟ್ಟ ಮೇಲೆ ಅಮ್ಮಣ್ಣಾಯ ಅವರು ಹೇಳಿದ್ದು ಹೀಗೆ:
“ಡಿಸೆಂಬರ್ ಇಪ್ಪತ್ತಾರನೇ ತಾರೀಕಿನಂದು ಧನುಸ್ಸು ರಾಶಿಯಲ್ಲಿ ಕುಜ-ಶುಕ್ರ ಇದ್ದು, ಅದನ್ನು ಭೃಗು-ಅಂಗಾರಕ ಯೋಗ ಎನ್ನಲಾಗುತ್ತದೆ. ಅಲ್ಲಿಂದ ಮೂರು ದಿನಕ್ಕೆ ಬುಧ ಗ್ರಹ ಕೂಡ ಅದೇ ರಾಶಿಗೆ ಬರುತ್ತದೆ. ಆದರೆ ಅದಕ್ಕಿಂತ ಬಹಳ ಮುಂಚೆಯೇ ರವಿ ಗ್ರಹ ಧನುಸ್ಸು ರಾಶಿಯಲ್ಲಿ ಇರಲಿದೆ. ಅಲ್ಲಿಂದ ನಾಲ್ಕನೇ ಕಾಲು ಭಾಗದ ದೃಷ್ಟಿಯಲ್ಲಿ ಮೀನ ರಾಶಿಯಲ್ಲಿ ಇರುವಂಥ ಶನಿ ಗ್ರಹದ ವೀಕ್ಷಣೆ ಮಾಡಲಿದೆ. ಆಗ ಮೀನ ರಾಶಿಯು ಭೂಕಂಪ ಲಗ್ನ ಆಗಲಿದೆ. ಇನ್ನು ಇದೇ ಸಮಯದಲ್ಲಿ ಧನು ರಾಶಿಯಲ್ಲಿ ಇರುವ ಈ ಗ್ರಹ ಸ್ಥಿತಿಗೆ ಮಿಥುನ ರಾಶಿಯಲ್ಲಿ ಸಂಚಾರ ಮಾಡುತ್ತಿರುವ ಗುರು ಗ್ರಹದ ಪೂರ್ಣ ವೀಕ್ಷಣೆ ಆಗುತ್ತದೆ. ಅಲ್ಲಿಗೆ ಈ ಅನಾಹುತಕ್ಕೆ ದೈವಿಕವಾದ ಪರಿಹಾರ ಕಂಡುಕೊಳ್ಳುವುದು ಅಸಾಧ್ಯವಾಗುತ್ತದೆ.
“ಧನುಸ್ಸು ರಾಶಿಯಲ್ಲಿ ಇರುವಂಥ ಕುಜ ಗ್ರಹದ ಪೂರ್ಣ ನಾಲ್ಕನೆಯ ದೃಷ್ಟಿಯೂ ಶನಿಯ ಮೇಲೆ ಇರಲಿದೆ. ಯಾವ ಗ್ರಹನ ಪೂರ್ಣ ದೃಷ್ಟಿಯು ಇದ್ದಾಗ ಆ ಗ್ರಹದ ಜೊತಗೆ (ಯುತಿಯಲ್ಲಿ) ಇರುವಂಥ ಇತರ ಗ್ರಹಗಳ ಕಾಲು, ಅರ್ಧ, ಮುಕ್ಕಾಲು ದೃಷ್ಟಿಯೂ ಪೂರ್ಣ ದೃಷ್ಟಿಯ ಫಲ ಕೊಡುತ್ತದೆ ಎಂದು ಜ್ಯೋತಿಷ್ಯದಲ್ಲಿ ಇದೆ. ಭಿನ್ನಮತ ಜಾಸ್ತಿಯಾಗಿ, ಭದ್ರತಾ ವೈಫಲ್ಯತೆ ಉಂಟಾಗುವಂಥ ಪರಿಸ್ಥಿತಿ ಇದಾಗಿರಲಿದೆ.
“ಜಾಗತಿಕ ಮಟ್ಟದ ಪ್ರಮುಖ ನಾಯಕರೊಬ್ಬರ ಹತ್ಯೆ ಸಹ ಆಗಬಹುದು. ಭಯೋತ್ಪಾದಕರಿಂದ ತೀಕ್ಷ್ಣ- ತೀವ್ರ ದಾಳಿಗಳಾಗಿ ಇದರಲ್ಲಿ ಅಮಾಯಕರ ಸಾವು- ನೋವು ಆಗಲಿದೆ. ಈ ಅವಧಿಯಲ್ಲಿಯೇ ಹೊಸ ವರ್ಷಾಚರಣೆಯೂ ಬರುವುದರಿಂದ ಆ ವೇಳೆ ಭಾರೀ ಸಾವು- ನೋವುಗಳು ಸಂಭವಿಸಲಿದೆ. ಇಡೀ ಜಗತ್ತಿಗೆ ಇದು ಆತಂಕದ ಪರಿಸ್ಥಿತಿಯಾದ್ದರಿಂದ ಗರಿಷ್ಠ ಪ್ರಮಾಣದಲ್ಲಿ ವೈಯಕ್ತಿಕ ಮಟ್ಟದಲ್ಲಿಯೇ ಎಚ್ಚರಿಕೆ ತೆಗೆದುಕೊಳ್ಳುವುದು ಕ್ಷೇಮ ಹಾಗೂ ಉತ್ತಮ. ಈ ಗ್ರಹ ಸ್ಥಿತಿಯು ಹೇಗಿದೆ ಅಂದರೆ, ಕೇಡು ಬಯಸುವವರನ್ನು ತಡೆಯುವ ಯಾವ ಪ್ರಯತ್ನಗಳು ಸಹ ಫಲಿಸುವಂತೆ ಕಾಣುವುದಿಲ್ಲ.
ಇದನ್ನೂ ಓದಿ: ಕುಜ-ಶುಕ್ರ ಸಂಯೋಗದಿಂದ ಈ ರಾಶಿಯ ಪ್ರೇಮ ಸಂಬಂಧದಲ್ಲಿ ಪ್ರಮುಖ ಬದಲಾವಣೆ
“ಭಾರೀ ಭೂಕಂಪಗಳು, ಸುನಾಮಿ, ಚಂಡಮಾರುತ ಇಂಥ ವೈಪರೀತ್ಯಗಳಿಂದಲೂ ಭಾರೀ ಸಾವು- ನೋವು ಸಂಭವಿಸಬಹುದು. ಭೃಗು- ಅಂಗಾರಕ ಯೋಗವೂ ಇರುವುದರಿಂದ ಜಾಗತಿಕ ಮಹಾ ಆರ್ಥಿಕ ಕುಸಿತದ ಮುನ್ಸೂಚನೆಗಳು ಸಿಗಲಿವೆ. ಅಲ್ಲಿಂದ ಆಚೆಗೆ ಆಗುವಂಥ ಜಾಗತಿಕ ಆರ್ಥಿಕ ಹಿಂಜರಿತ ಅಥವಾ ಜಾಗತಿಕ ಆರ್ಥಿಕ ಕುಸಿತದ ಮುನ್ನುಡಿಯಾಗಿ ದಾಖಲು ಆಗಲಿದೆ. ಸರ್ಕಾರಗಳ ಮೇಲೆ ಆಯಾ ನಾಯಕರು ತಮ್ಮ ಹಿಡಿತವನ್ನು ಕಳೆದುಕೊಳ್ಳಲಿದ್ದಾರೆ. ಅಲ್ಲಿಯ ತನಕ ಯಾರೆಲ್ಲ ಪ್ರಬಲ ನಾಯಕರು ಎಂದು ತಮ್ಮನ್ನು ಅಂದುಕೊಂಡಿರುತ್ತಾರೋ ಅವರ ಆತ್ಮವಿಶ್ವಾಸವೇ ಕುಗ್ಗಿ ಹೋಗುವಂತೆ, ಜನರ ನಂಬಿಕೆಯನ್ನು ಕಳೆದುಕೊಳ್ಳುವಂತೆ ಆಗಲಿದೆ.
“ಜನವರಿ ಹದಿನಾಲ್ಕನೇ ತಾರೀಕಿನಂದು ರವಿ ಗ್ರಹ ಮಕರ ರಾಶಿಗೆ ಪ್ರವೇಶ ಮಾಡುವುದರೊಂದಿಗೆ ಈ ಸ್ಥಿತಿಯಿಂದ ಬಿಡುಗಡೆ ಆಗುತ್ತದೆ. ಆದರೂ ಬೆಂಕಿ ಅವಘಡ, ವಿದ್ಯುತ್ ಅವಘಡ, ಭಾರೀ ಪ್ರಮಾಣದ ಭೂಕಂಪನ ಇವೇ ಸುದ್ದಿಯನ್ನು ಕೇಳಿಸಿಕೊಂಡು ಜನ ಗಾಬರಿ ಬೀಳುವಷ್ಟರ ಮಟ್ಟಿಗೆ ವಿಕೋಪಕ್ಕೆ ಹೋಗಲಿದೆ. ಇನ್ನು ಈ ಅವಧಿಯಲ್ಲಿ ಸಾಮಾಜಿಕ ಮಾಧ್ಯಮ ಹಾಗೂ ಇತರ ಮಾಧ್ಯಮಗಳಿಂದ ಹರಡುವ ಗಾಳಿ ಸುದ್ದಿ ತನ್ನದೇ ರೀತಿಯಲ್ಲಿ ಅನಾಹುತ ಮಾಡಲಿದೆ. ಜನರ ಮಧ್ಯೆ ದ್ವೇಷದ- ಆತಂಕದ ಬೀಜವನ್ನು ಬಿತ್ತಲಿದೆ. ಯಾವುದು ನಿಜ ಹಾಗೂ ಯಾವುದು ಸುಳ್ಳು ಎಂಬ ಸ್ಪಷ್ಟತೆ ಸಿಗುವುದರ ಒಳಗಾಗಿ ಕೆಲವು ಅನಾಹುತಗಳು ಜರುಗಿ ಹೋಗುತ್ತದೆ.
“ಜಾಗತಿಕ ಮಟ್ಟದಲ್ಲಿ ತುಂಬ ಶಕ್ತಿಶಾಲಿ ನಾಯಕ ಹಾಗೂ ಪ್ರಭಾವಶಾಲಿ ಎಂದು ಚಲಾವಣೆಯಲ್ಲಿ ಇರುವ ನಾಯಕ ಒಬ್ಬರಿಗೆ ಜೀವಕ್ಕೆ ತೊಂದರೆ ಆಗಬಹುದು. ಹತ್ಯಾ ಯತ್ನಗಳಂತೂ ತಳ್ಳಿ ಹಾಕುವಂತೆ ಇಲ್ಲ. ಹಲವಾರು ಕಡೆಗಳಲ್ಲಿ ಗುಪ್ತಚರ ವೈಫಲ್ಯಗಳು ಭಾರೀ ಅನಾಹುತಗಳಿಗೆ ದಾರಿ ಮಾಡಿಕೊಡುತ್ತವೆ. ಆತಂಕ ಸೃಷ್ಟಿಸುವವರು ಅದನ್ನು ತಡೆಯುವವರಿಗಿಂತ ಒಂದು ಹೆಜ್ಜೆ ಮುಂದೆ ಇರುವಂತೆ ಆಗಲಿದೆ. ಪ್ರಾಕೃತಿಕ ವಿಕೋಪಗಳು ಮನುಷ್ಯ ಮಾತ್ರರ ಊಹೆಗೆ ಸಹ ನಿಲುಕದ ಮಟ್ಟಕ್ಕೆ ಹೋಗಲಿದೆ.
“ಈ ವಿಚಾರಗಳನ್ನು ಅಧ್ಯಯನ ಹಾಗೂ ಅನುಭವದ ಆಧಾರದಲ್ಲಿ ತಿಳಿಸಿದ್ದೇನೆ. ಮೀನ ರಾಶಿಯಲ್ಲಿ ಇರುವ ಶನಿ ಗ್ರಹಕ್ಕೆ ರವಿಯು ಬಲ ತುಂಬುವುದರಿಂದ ಖಂಡಿತವಾಗಿಯೂ ಇದು ಭೀಕರದ ಸನ್ನಿವೇಶಗಳನ್ನು ಸೃಷ್ಟಿ ಮಾಡಲಿದೆ. ಈ ಅವಧಿಯಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರುವ ಪ್ರದೇಶಗಳಿಗೆ, ಕಾರ್ಯಕ್ರಮಗಳಿಗೆ ಹೋಗುವಾಗ ಎಚ್ಚರಿಕೆಯನ್ನು ತೆಗೆದುಕೊಳ್ಳುವುದು ಒಳ್ಳೆಯದು. ಉಳಿದಂತೆ ಆ ಭಗವಂತನ ಇಚ್ಛೆ,” ಎಂದು ಪ್ರಕಾಶ್ ಅಮ್ಮಣ್ಣಾಯ ಅವರು ತಮ್ಮ ವಿಶ್ಲೇಷಣೆಯನ್ನು ನಿಲ್ಲಿಸಿದರು.
ಲೇಖನ- ಪ್ರಕಾಶ್ ಅಮ್ಮಣ್ಣಾಯ
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




