ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್
ಮದುವೆ ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ ಎಂಬುದು ಜನಪ್ರಿಯವಾದ ಮಾತು. ಎಷ್ಟೋ ಮಂದಿಗೆ ಪ್ರಾಪ್ತ ವಯಸ್ಸಿನಲ್ಲಿ ಮದುವೆ ಆಗುವುದಿಲ್ಲ. ಇನ್ನೂ ಕೆಲವರು ಮದುವೆಯೇ ಆಗುವುದಿಲ್ಲ. ಯಾಕೆ ಹಾಗಾಗುತ್ತದೆ ಎಂಬುದನ್ನು ಜ್ಯೋತಿಷ್ಯ (Astrology) ರೀತಿ ಕಾರಣದಿಂದ ವಿಶ್ಲೇಷಣೆ ಮಾಡಿ, ನಿಮ್ಮೆದುರು ಇಡಲಾಗುತ್ತಿದೆ. ಪ್ರೇಮ ವೈಫಲ್ಯ ಹಾಗೂ ಆ ಮೂಲಕ ವಿವಾಹ ವಿಳಂಬ, ಇನ್ನೇನು ಮದುವೇ ಆಗಿಯೇ ಹೋಯಿತು, ಅಂದುಕೊಳ್ಳುವಷ್ಟರಲ್ಲಿ ಮದುವೆ ಮುರಿದು ಬೀಳುವುದು, ಏನೋ ನೆಪಗಳಿಂದ ಮದುವೆ ಕೂಡಿ ಬಾರದಿರುವುದು ಹೀಗೆ ಆಗುವುದಕ್ಕೆ ಕಾರಣ ಏನು ಎಂಬುದನ್ನು ಬಹಳ ಸರಳವಾಗಿ ವಿವರಿಸಲಾಗುತ್ತಿದೆ. ಅದು ಕೂಡ ಮುಖ್ಯಾಂಶಗಳ ರೀತಿಯಲ್ಲಿ ತೆರೆದಿಡಲಾಗುತ್ತಿದೆ.
- ಮೊದಲಿಗೆ, ಆ ಜಾತಕರ ಜನ್ಮ ರಾಶಿ ಹಾಗೂ ಲಗ್ನ ಯಾವುದು ಅಂತ ನೋಡಬೇಕು. ರಾಶಿ ಅಥವಾ ಲಗ್ನದಿಂದ ಏಳನೇ ಮನೆಯಲ್ಲಿ ಶನಿ ಇದ್ದರೆ ಅಥವಾ ಆ ಮನೆಗೆ ಶನಿ ಗ್ರಹವು ಅಧಿಪತಿ ಆಗಿದ್ದರೆ ಅಥವಾ ಶನಿ ಗ್ರಹದ ಪೂರ್ಣ ದೃಷ್ಟಿ ಇದ್ದಲ್ಲಿ (ಶನಿಗೆ ತಾನು ಇರುವ ರಾಶಿಯಿಂದ ಮೂರು, ಏಳು, ಹತ್ತನೇ ಮನೆಯ ಮೇಲೆ ಪೂರ್ಣ ದೃಷ್ಟಿ ಇರುತ್ತದೆ) ಮದುವೆ ತಡವಾಗುತ್ತದೆ. ಶನಿಯು ಯಾವ ಕಾರಕತ್ವದಲ್ಲಿ ಇರುತ್ತದೋ ಅದನ್ನು ನಿಧಾನ ಮಾಡಿಬಿಡುವುದರಿಂದ ಹೀಗಾಗುತ್ತದೆ. ಕರ್ಕಾಟಕ, ಸಿಂಹ ರಾಶಿ ಅಥವಾ ಲಗ್ನದವರಿಗೆ ಏಳನೇ ಮನೆಯ ಅಧಿಪತಿಯೇ ಶನಿ. ಇನ್ನು ಯಾವುದೇ ಲಗ್ನ ಅಥವಾ ರಾಶಿ ಇರಲಿ, ಅದರ ಏಳನೇ ಮನೆಗೆ ಶನಿ ಗ್ರಹದ ದೃಷ್ಟಿಯಿದ್ದಲ್ಲಿ ಆಗಲೂ ಮದುವೆ ತಡವಾಗುತ್ತದೆ.
- ಇನ್ನೊಂದು ಕಾರಣ ಅಂದರೆ, ಕಾರಕೋ ಭಾವ ನಾಶಾಯ ಎಂಬ ಮಾತಿದೆ. ಏಳನೇ ಮನೆಯಲ್ಲಿ (ಕಳತ್ರ ಸ್ಥಾನದಲ್ಲಿ) ಶುಕ್ರ ಇದ್ದಲ್ಲಿ, ಲಗ್ನದಿಂದಾಗಲೀ ಅಥವಾ ರಾಶಿಯಿಂದಾಗಲೀ ಏಳನೇ ಮನೆಯಲ್ಲಿ ಶುಕ್ರನಿದ್ದಾಗ ಆಗ ಕೂಡ ವಿವಾಹ ನಿಧಾನ ಆಗುತ್ತದೆ. ಪ್ರೇಮ ವೈಫಲ್ಯವೂ ಆಗಬಹುದು. ಒಂದು ವೇಳೆ ಮದುವೆ ಆದರೂ ವೈವಾಹಿಕ ಬದುಕು ನೆಮ್ಮದಿ ಆಗಿರುವುದಿಲ್ಲ.
- ಅದೇ ರೀತಿ ಲಗ್ನವೋ ರಾಶಿಯದೋ ಸಪ್ತಮಾಧಿಪತಿ ನೀಚ ಸ್ಥಿತಿಯಲ್ಲಿ ಇದ್ದರೆ ಕೂಡ ವಿವಾಹ ವಿಳಂಬ ಆಗುತ್ತದೆ. ಮೇಷ- ವೃಶ್ಚಿಕಕ್ಕೆ ಕುಜ ಅಧಿಪತಿ, ಕರ್ಕಾಟಕ ರಾಶಿಯಲ್ಲಿ ಕುಜ ನೀಚ. ವೃಷಭ- ತುಲಾಗೆ ಶುಕ್ರ ಅಧಿಪತಿ. ಕನ್ಯಾದಲ್ಲಿ ಶುಕ್ರ ನೀಚ. ಮಿಥುನ- ಕನ್ಯಾಗೆ ಬುಧ ಅಧಿಪತಿ, ಮೀನದಲ್ಲಿ ಬುಧ ನೀಚ. ಕರ್ಕಾಟಕ ರಾಶಿ ಅಧಿಪತಿ ಚಂದ್ರ, ವೃಶ್ಚಿಕದಲ್ಲಿ ನೀಚ. ಸಿಂಹ ರಾಶ್ಯಾಧಿಪತಿ ರವಿ. ತುಲಾದಲ್ಲಿ ನೀಚ. ಧನು- ಮೀನ ರಾಶಿಗೆ ಗುರು ಅಧಿಪತಿ, ಮಕರದಲ್ಲಿ ನೀಚ. ಮಕರ- ಕುಂಭಗಳಿಗೆ ಶನಿ ಅಧಿಪತಿ. ಮೇಷದಲ್ಲಿ ನೀಚವಾಗುತ್ತದೆ. ಉದಾಹರಣೆಗೆ, ವೃಷಭ ರಾಶಿಯೋ ಲಗ್ನವೋ ಆಗಿದ್ದಲ್ಲಿ ಅಲ್ಲಿಂದ ಏಳನೇ ಮನೆಯಾದ ವೃಶ್ಚಿಕ ರಾಶಿಯ ಅಧಿಪತಿಯಾದ ಕುಜ ಕರ್ಕಾಟಕ ರಾಶಿಯಲ್ಲಿ ಇದ್ದರೆ ಆಗ ವಿವಾಹ ತಡ ಆಗುತ್ತದೆ.
- ಮೇಷಕ್ಕೆ ಏಳನೆ ಮನೆ ತುಲಾ, ವೃಷಭಕ್ಕೆ ಏಳನೆ ಮನೆ ವೃಶ್ಚಿಕ, ಮಿಥುನಕ್ಕೆ ಧನು ಏಳನೇ ಸ್ಥಾನ, ಕರ್ಕಾಟಕಕ್ಕೆ ಮಕರ, ಸಿಂಹಕ್ಕೆ ಕುಂಭ ಏಳನೇ ಮನೆ. ಕನ್ಯಾಗೆ ಮೀನ, ತುಲಾಗೆ ಮೇಷ ಏಳನೇ ಸ್ಥಾನ. ವೃಶ್ಚಿಕಕ್ಕೆ ವೃಷಭ, ಧನುವಿಗೆ ಮಿಥುನ ಏಳನೇ ಮನೆ. ಮಕರ- ಕುಂಭಗಳಿಗೆ ಕ್ರಮವಾಗಿ ಕರ್ಕಾಟಕ ಹಾಗೂ ಸಿಂಹ ಏಳನೇ ಮನೆಯಾದಲ್ಲಿ, ಮೀನಕ್ಕೆ ಕನ್ಯಾ ಕಳತ್ರ ಸ್ಥಾನ ಆಗುತ್ತದೆ.
- ಇನ್ನು ವಿವಾಹ ತಡವಾಗುವುದಕ್ಕೆ ಮತ್ತೊಂದು ಕಾರಣ ಏನೆಂದರೆ, ಸಪ್ತಮ ಸ್ಥಾನದ ಅಧಿಪತಿ ಶುಭ ಗ್ರಹ ಆಗಿದ್ದು, ಪಾಪಗ್ರಹ ಜತೆಯಾಗುವುದು, ಅಂದರೆ ಪಾಪಗ್ರಹ ಯುತಿಯಾದಾಗಲೂ ಅಥವಾ ಪಾಪ ಗ್ರಹಗಳೇ ಇದ್ದಾಗಲೂ ವಿವಾಹ ತಡ ಆಗುತ್ತದೆ. ರವಿ, ಕುಜ, ರಾಹು, ಕೇತು, ಶನಿ ಇವಿಷ್ಟನ್ನು ಪಾಪ ಗ್ರಹಗಳೆಂದು ಪರಿಗಣಿಸಲಾಗುತ್ತದೆ. ರಾಶಿ ಅಥವಾ ಲಗ್ನದಿಂದ ಏಳನೇ ಮನೆಯ ಅಧಿಪತಿ ಶುಭ ಗ್ರಹವಾಗಿ, ಜತೆಗೆ ಪಾಪ ಗ್ರಹ ಒಟ್ಟಾದಾಗ ಅಥವಾ ಪಾಪ ಗ್ರಹವೇ ಇದ್ದಾಗಲೂ ಮದುವೆ ವಿಳಂಬವಾಗುತ್ತದೆ. ಯಾವುದೇ ರಾಶಿ- ಲಗ್ನವಾದರೂ ಇದು ಅನ್ವಯ ಆಗುತ್ತದೆ.
- ಸರ್ಪ ಶಾಪ ಇದ್ದರೂ ವಿವಾಹ ವಿಳಂಬ ಆಗುತ್ತದೆ. ಜಾತಕದಲ್ಲಿ ಸರ್ಪ ದೋಷ, ಘಟ ಕಾಳಸರ್ಪ ದೋಷದಿಂದಾಗಿ ವಿವಾಹ ವಿಳಂಬ ಆಗುತ್ತದೆ. ಇನ್ನು ಪಿತೃ ದೋಷದಿಂದಲೂ ಮದುವೆ ತಡವಾಗುತ್ತದೆ. ಈ ದೋಷಗಳು ಇರುವುದು ಗೊತ್ತಾಗುವುದು ಹೇಗೆ ಅಂದರೆ, ಜಾತಕದ ಪರಿಶೀಲನೆ ಮಾಡಿಸಿಕೊಂಡಾಗ ತಿಳಿದುಬರುತ್ತದೆ. ಆದ್ದರಿಂದ ಜಾತಕ ಪರಿಶೀಲನೆ ಮಾಡಿಸಬೇಕು.
- ಮತ್ತೆ ಕೆಲವು ಸಲ ಮನೆಯ ಹಿರಿಯರು, ತಂದೆ- ತಾಯಿ ಯಾವುದಾದರೂ ದೇವರಿಗೆ ಹರಕೆ ಹೇಳಿಕೊಂಡು, ಅದನ್ನು ಈಡೇರಿಸದೆ ಹಾಗೇ ಬಿಟ್ಟಿದ್ದಾಗಲೂ ವಿವಾಹ ವಿಳಂಬ ಆಗುತ್ತದೆ. ಇನ್ನೂ ಕೆಲವರು ತಮ್ಮ ಮನೆದೇವರ ಆರಾಧನೆಯನ್ನು ವರ್ಷಗಟ್ಟಲೆ ಮಾಡಿರುವುದಿಲ್ಲ. ದೇವರಿಗೆ ನಡೆದುಕೊಂಡಿರುವುದಿಲ್ಲ. ಉದಾಹರಣೆಗೆ, ಮುನೇಶ್ವರ, ಗ್ರಾಮದೇವತೆಗಳು ಹೀಗೆ ಆಗಲೂ ಮದುವೆಗೆ ನಾನಾ ವಿಘ್ನಗಳು ಎದುರಾಗುತ್ತವೆ.
- ಕೊನೆಯದು ಹಾಗೂ ಮುಖ್ಯವಾದದ್ದು ಮುತ್ತೈದೆಯರ ಶಾಪ. ಹೆಣ್ಣುಮಕ್ಕಳಿಗೆ ನೋಯಿಸಿದ್ದರೆ, ಅದೇ ದುಃಖದಲ್ಲಿ ಅವರು ಶಾಪ ಹಾಕಿದ್ದರೆ ಆಗಲೂ ವಿವಾಹದಲ್ಲಿ ವಿಳಂಬ ಆಗುತ್ತದೆ. ಗೃಹ ವಾಸ್ತು ದೋಷ ಇದ್ದಲ್ಲಿ, ಉದಾಹರಣೆಗೆ, ಮನೆಯ ಈಶಾನ್ಯ ಅಥವಾ ನೈರುತ್ಯ ದಿಕ್ಕಿನಲ್ಲಿ ಏನಾದರೂ ದೋಷ ಇದಲ್ಲಿ ಆಗಲೂ ಶುಭ ಕಾರ್ಯಗಳು ಮನೆಯಲ್ಲಿ ನಡೆಯುವುದಿಲ್ಲ. ಆದ್ದರಿಂದ ತಜ್ಞ ಜ್ಯೋತಿಷಿಗಳಿಂದ ಜಾತಕ ಹಾಗೂ ಇರುವ ಸ್ಥಳದ ಪರಿಶೀಲನೆ ಮಾಡಿಸಿ, ಆ ನಂತರದಲ್ಲಿ ಸೂಕ್ತ ಪರಿಹಾರ ಮಾಡಿಕೊಂಡಲ್ಲಿ ಸಮಸ್ಯೆ ಬಗೆಹರಿಯುತ್ತದೆ.
(ಲೇಖಕರು: ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಸಂಪರ್ಕ ಸಂಖ್ಯೆ: 6361335497)
ಜ್ಯೋತಿಷ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Saturn Transit In Aquarius: 29 ವರ್ಷಗಳ ನಂತರ ಏ.28ಕ್ಕೆ ಬಲಿಷ್ಠ ಸ್ಥಾನ ಕುಂಭಕ್ಕೆ ಶನಿ ಪ್ರವೇಶ; ಇಡೀ ಜಗತ್ತೇ ಆಗಲಿದೆ ಬದಲಾವಣೆ