
2026ನೇ ಇಸವಿಯಲ್ಲಿ ಇಡೀ ವರ್ಷ ಶನಿ ಗ್ರಹ ನಿಮ್ಮ ರಾಶಿಗೆ 5ನೇ ಮನೆಯಲ್ಲಿ ಸಂಚಾರ ಮಾಡುತ್ತದೆ. ಇನ್ನು ಗುರು ಗ್ರಹವು ಜನವರಿಯಿಂದ ಜೂನ್ ಒಂದನೇ ತಾರೀಕಿನ ತನಕ 8ನೇ ಮನೆ, ಅಂದರೆ ಆಯುಷ್ಯ ಸ್ಥಾನದಲ್ಲಿ ಇರುತ್ತದೆ. ಆ ನಂತರ ಅಕ್ಟೋಬರ್ 31ನೇ ತಾರೀಕಿನವರೆಗೆ ಪಿತೃ- ಅದೃಷ್ಟದ ಸ್ಥಾನ, ಅಂದರೆ 9ನೇ ಮನೆಯಾದ ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತದೆ. ನವೆಂಬರ್ ಹಾಗೂ ಡಿಸೆಂಬರ್ ಈ ಎರಡೂ ತಿಂಗಳು, ಕರ್ಮ ಸ್ಥಾನ ಅಂದರೆ 10ನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಆಗುತ್ತದೆ. ಇನ್ನು ಬಹುತೇಕ ಇಡೀ ವರ್ಷ ರಾಹು ಗ್ರಹವು ನಿಮ್ಮ ರಾಶಿಗೆ 4ನೇ ಮನೆ ಆಗುವಂಥ ಕುಂಭದಲ್ಲಿಯೂ ಹಾಗೂ ಕೇತು ಗ್ರಹವು 10ನೇ ಮನೆ, ಅಂದರೆ ಕರ್ಮ ಸ್ಥಾನದಲ್ಲಿ ಸಂಚರಿಸುತ್ತದೆ. 2026ನೇ ಇಸವಿಯ ಡಿಸೆಂಬರ್ 5ನೇ ತಾರೀಕಿಗೆ ರಾಹು ಗ್ರಹವು 3ನೇ ಮನೆಯಾದ ಮಕರ ರಾಶಿಗೂ ಹಾಗೂ ಕೇತು ಗ್ರಹ ನಿಮ್ಮ ರಾಶಿಗೆ 9ನೇ ಮನೆಗೂ ಪ್ರವೇಶಿಸುತ್ತದೆ.
ವಿಶಾಖ ನಕ್ಷತ್ರದ ನಾಲ್ಕನೇ ಪಾದ, ಅನೂರಾಧಾ ನಕ್ಷತ್ರದ ನಾಲ್ಕೂ ಪಾದ, ಜ್ಯೇಷ್ಠಾ ನಕ್ಷತ್ರದ ನಾಲ್ಕೂ ಪಾದ ಸೇರಿ ವೃಶ್ಚಿಕ ರಾಶಿ ಆಗುತ್ತದೆ. ಈ ರಾಶಿಯ ಅಧಿಪತಿ ಕುಜ.
ನಿಮ್ಮ ರಾಶಿಗೆ ತೃತೀಯ ಹಾಗೂ ಚತುರ್ಥ ಸ್ಥಾನಗಳ ಅಧಿಪತಿ ಆದಂಥ ಶನೈಶ್ಚರನು ಐದನೇ ಮನೆಯಲ್ಲಿ ಸಂಚರಿಸುತ್ತಾನೆ. ನೀವು ಉಳಿಸಿಕೊಂಡು ಬಂದಂಥ ಹೆಸರು, ಖ್ಯಾತಿ ಕಳೆದುಕೊಳ್ಳುವಂತೆ ಆಗಲಿದೆ. ನಿಮ್ಮ ಸೋದರ ಸಂಬಂಧಿಗಳೇ ಅಪಪ್ರಚಾರ ಮಾಡಲಿದ್ದಾರೆ. ಇನ್ನೇನು ನಿಮ್ಮ ಶ್ರಮದ ಫಲ ಕೈಗೆ ಸಿಗಬೇಕು ಎನ್ನುವಷ್ಟರಲ್ಲಿ ಸಿಗದಂತೆ ಆಗಲಿದೆ. ನಿಮಗೆ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಯ ಮೂಲ ಯಾವುದು ಎಂಬುದನ್ನು ಗುರುತಿಸುವುದಕ್ಕೆ ಸಾಧ್ಯವಾಗುವುದಿಲ್ಲ. ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿದ ನಂತರವೂ ಯಾವ ಕಾರಣಕ್ಕೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೀರಿ ಎಂಬುದು ತಿಳಿಯುವುದಿಲ್ಲ. ಈ ಹಿಂದೆ ನಿಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಆದ ತಪ್ಪುಗಳಿಗೆ ಶಿಕ್ಷೆಯನ್ನು ಈಗ ಅನುಭವಿಸುವಂತೆ ಆಗಲಿದೆ. ಮಕ್ಕಳ ವಿಚಾರವು ಬಹಳ ಚಿಂತೆಯನ್ನು ನೀಡುತ್ತದೆ. ಸಂತಾನಕ್ಕೆ ಪ್ರಯತ್ನಿಸುತ್ತಾ ಇರುವವರಿಗೆ ನಾನಾ ಅಡೆತಡೆಗಳು ಎದುರಾಗಲಿವೆ. ಮನೆ ರಿನೊವೇಷನ್ ಅಥವಾ ಈಗಿರುವ ಮನೆಯ ಕೆಲವು ಭಾಗವನ್ನು ಕೆಡವಿ, ಮತ್ತೆ ನಿರ್ಮಾಣ ಮಾಡಬೇಕು ಎಂದೇನಾದರೂ ಅಂದುಕೊಳ್ಳುತ್ತಾ ಇದ್ದಲ್ಲಿ ಒಂದಕ್ಕೆ ನಾಲ್ಕು ಬಾರಿಗೆ ಆಲೋಚನೆಯನ್ನು ಮಾಡಿಕೊಳ್ಳಿ. ಏಕೆಂದರೆ ನೀವು ಅಂದುಕೊಂಡ ಬಜೆಟ್ ನಲ್ಲಿ ಕೆಲಸಗಳು ಪೂರ್ಣ ಅಗುವುದಿಲ್ಲ. ಉದ್ಯೋಗ ಬದಲಾವಣೆ ಮಾಡಬೇಕು ಎಂದೇನಾದರೂ ಇದ್ದಲ್ಲಿ ಅಲ್ಲಿನ ನಿಯಮಾವಳಿಗಳು- ನಿರೀಕ್ಷೆಗಳನ್ನು ಸರಿಯಾಗಿ ವಿಚಾರಿಸಿಕೊಂಡು, ಆ ನಂತರ ಮುಂದುವರಿಯುವುದು ಒಳ್ಳೆಯದು. ಆಲಸ್ಯ- ನಿರ್ಲಕ್ಷ್ಯದ ಕಾರಣಕ್ಕೆ ಕೆಲವು ಅವಕಾಶಗಳನ್ನು ಕೈಯ್ಯಾರೆ ಕಳೆದುಕೊಳ್ಳುವಂತೆ ಆಗಲಿದೆ. ನಿಮ್ಮ ಅನುಕೂಲಕ್ಕೆ ಎಂದು ತಂದುಕೊಂಡಂಥ ವಾಹನಗಳು, ಐಷಾರಾಮಿ ವಸ್ತುಗಳನ್ನು ನೀವೇ ಬಳಕೆ ಮಾಡುವುದಕ್ಕೆ ಸಾಧ್ಯವಾಗದಂಥ ಸನ್ನಿವೇಶ ಸೃಷ್ಟಿ ಆಗುತ್ತದೆ. ಸಾಧ್ಯವಾದಷ್ಟೂ ಈ ಅವಧಿಯಲ್ಲಿ ಸೆಕೆಂಡ್ ಹ್ಯಾಂಡ್ ವಸ್ತು- ವಾಹನಗಳ ಖರೀದಿ ಮಾಡದಿರುವುದು ಕ್ಷೇಮ- ಉತ್ತಮ.
ಇದನ್ನೂ ಓದಿ: 2026ನೇ ಹೊಸ ವರ್ಷ ಮಿಥುನ ರಾಶಿಯವರಿಗೆ ಹೇಗಿರಲಿದೆ? ವರ್ಷ ಭವಿಷ್ಯ ಇಲ್ಲಿದೆ
ಜನವರಿಯಿಂದ ಮೇ ತಿಂಗಳ ಕೊನೆಯ ತನಕ ನಿಮ್ಮ ರಾಶಿಗೆ ಎಂಟನೇ ಮನೆಯ ಗುರು ಸಂಚಾರವು ಆರೋಗ್ಯ ಸಮಸ್ಯೆಗಳನ್ನು ತರುತ್ತದೆ. ಆರ್ಥಿಕ ವಿಚಾರದಲ್ಲಿ ಕುಗ್ಗುವಂತೆ ಮಾಡುತ್ತದೆ. ನೀವೇನಾದರೂ ಫ್ರೀಲ್ಯಾನ್ಸರ್ ಆಗಿದ್ದಲ್ಲಿ ಎಷ್ಟು ಹಣ ಚಾರ್ಜ್ ಮಾಡುತ್ತೀರಿ ಎಂಬ ಬಗ್ಗೆ ಸ್ಪಷ್ಟವಾದ ಮಾತುಗಳಲ್ಲಿ ಮೊದಲಿಗೆ ಹೇಳಿಕೊಂಡು ಬಿಡುವುದು ಉತ್ತಮ. ವ್ಯಾಪಾರ- ವ್ಯವಹಾರಸ್ಥರು ಆಗಿದ್ದಲ್ಲಿ ಒಪ್ಪಂದಗಳನ್ನು ಸರಿಯಾಗಿ ಮಾಡಿಕೊಳ್ಳಿ. ಸರ್ಕಾರದಿಂದ ಪಡೆಯಬೇಕಾದ ಅನುಮತಿ, ಪರವಾನಗಿ ಇಂಥವುಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಿ. ಕಾನೂನು ವ್ಯಾಜ್ಯಗಳು ಈಗಾಗಲೇ ಇದ್ದಲ್ಲಿ ಅವುಗಳಲ್ಲಿ ಹಿನ್ನಡೆ ಅನುಭವಿಸ ಬೇಕಾಗುತ್ತದೆ. ನೀವಾಗಿಯೇ ಕೆಲವರು ಹೊಸದಾಗಿ ಮೊಕದ್ದಮೆ ಹೂಡಿ, ಕೋರ್ಟ್- ಕಚೇರಿ ಅಂತ ಅಲೆದಾಡುತ್ತೀರಿ. ಪೊಲೀಸ್ ಸ್ಟೇಷನ್ ಗೆ ಒಂದಲ್ಲಾ ಒಂದು ಕಾರಣದಿಂದ ಅಲೆದಾಡುವಂತೆ ಆಗಲಿದೆ. ಮಕ್ಕಳ ಶಿಕ್ಷಣ ವಿಚಾರದಲ್ಲಿ ಗೊಂದಲಗಳು ಕಾಡುತ್ತವೆ. ನಿಮ್ಮ ಮಾತಿಗೆ ಮನ್ನಣೆ ಕೊಡುತ್ತಿಲ್ಲ ಎಂಬುದು ಸಿಟ್ಟಿಗೆ ಕಾರಣ ಆಗಲಿದೆ. ಗರ್ಭ ಧರಿಸಿದಂಥ ಹೆಣ್ಣುಮಕ್ಕಳು ಹೆಚ್ಚು ಜಾಗ್ರತೆಯಿಂದ ಇರುವುದು ಮುಖ್ಯ. ಐವಿಎಫ್ ವಿಧಾನದ ಮೂಲಕ ಪ್ರಯತ್ನ ಮಾಡಬೇಕು ಎಂದೇನಾದರೂ ಇದ್ದಲ್ಲಿ, ಇದನ್ನು ತಕ್ಷಣಕ್ಕೆ ಮಾಡದೆ ಕೆಲ ಸಮಯ ಮುಂದೂಡಲು ಸಾಧ್ಯವೂ ಇದ್ದರೆ ಮುಂದಕ್ಕೆ ಹಾಕಿ. ಜೂನ್ ನಿಂದ ಅಕ್ಟೋಬರ್ ತಿಂಗಳ ಕೊನೆ ತನಕ ಒಂಬತ್ತನೇ ಮನೆಯಲ್ಲಿ ಗುರು ಸಂಚಾರ ಹಲವು ವಿಚಾರಗಳಲ್ಲಿ ಶುಭವನ್ನು ತರಲಿದೆ. ಹಣಕಾಸಿನ ಹರಿವು ಸರಾಗವಾಗಿ ಆಗುತ್ತದೆ. ಮದುವೆಗೆ ಪ್ರಯತ್ನಿಸುತ್ತಾ ಇರುವವರು, ಸಂತಾನಕ್ಕೆ ಯತ್ನಿಸುತ್ತಿರವವರು ಎಲ್ಲರಿಗೂ ಒಳ್ಳೆ ಸಮಯ ಇದಾಗಿರುತ್ತದೆ. ಪಿತ್ರಾರ್ಜಿತ ಆಸ್ತಿ ವಿಚಾರಗಳು ಬಗೆಹರಿಯುತ್ತವೆ. ಅದೃಷ್ಟದ ಆಧಾರದಲ್ಲಿ ಆಗಬೇಕಾದ ಕೆಲಸ- ಕಾರ್ಯಗಳು ಪೂರ್ಣಗೊಳ್ಳಲಿವೆ. ನವೆಂಬರ್- ಡಿಸೆಂಬರ್ ತಿಂಗಳಲ್ಲಿ ಹತ್ತನೇ ಮನೆಯಲ್ಲಿ ಗುರು ಸಂಚಾರದ ವೇಳೆ ಮಿಶ್ರ ಫಲಗಳನ್ನು ಅನುಭವಿಸುತ್ತೀರಿ. ಉದ್ಯೋಗ ಕ್ಷೇತ್ರ, ವೃತ್ತಿಯಲ್ಲಿ ಒಳ್ಳೆ ಹಾಗೂ ಕೆಟ್ಟ ಬೆಳವಣಿಗೆಗಳು ಆಗಲಿವೆ. ನಿಮ್ಮ ಆಪ್ತರಿಂದ ದೂರ ಆಗುವಂತೆ ಆಗಲಿದೆ.
ನಿಮ್ಮ ರಾಶಿಗೆ ನಾಲ್ಕನೇ ಮನೆಯಲ್ಲಿ ರಾಹು ಸಂಚಾರ ಇರುತ್ತದೆ. ತಾಯಿಯ- ತಾಯಿ ಸಮಾನರಾದವರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ಮನೆಯೋ ಸೈಟೋ ಅಥವಾ ಜಮೀನೋ ಯಾವುದೋ ಲೆಕ್ಕಾಚಾರ ಇಟ್ಟುಕೊಂಡು, ಮಾರಾಟ ಮಾಡಿದಲ್ಲಿ ಆ ನಂತರ ಪರಿತಪಿಸುವಂತೆ ಆಗಲಿದೆ. ಭೂಮಿ ಖರೀದಿ ಮಾಡಬೇಕು ಎಂದೇನಾದರೂ ಇದ್ದಲ್ಲಿ ಕಾಗದ- ದಾಖಲಾತಿಗಳ ವಿಷಯದಲ್ಲಿ ಯಾವುದೇ ರಾಜೀ ಮಾಡಿಕೊಳ್ಳಬೇಡಿ. ವಕೀಲರ ಸಲಹೆಯನ್ನು ಪಡೆದುಕೊಳ್ಳದೆ ಹೆಜ್ಜೆ ಮುಂದಕ್ಕೆ ಇಡಬೇಡಿ. ಗ್ಯಾಜೆಟ್ ಗಳು- ಮೊಬೈಲ್- ಲ್ಯಾಪ್ ಟಾಪ್ ಇಂಥವುಗಳು ಏನೇ ಖರೀದಿ ಮಾಡಬೇಕು ಎಂದಾದರೂ ಅಗತ್ಯ ಇದ್ದರಷ್ಟೇ ಮಾತ್ರ ಕೊಂಡುಕೊಳ್ಳಿ. ಉದ್ಯೋಗ ಸ್ಥಳದಲ್ಲಿ ಕೆಲವು ಸನ್ನಿವೇಶ ನಿಮಗೆ ಮಾನಸಿಕ ಖಿನ್ನತೆ ತರಲಿದೆ. ನಿಮಗಿಂತ ಹಿರಿಯ ಸ್ಥಾನದಲ್ಲಿ ಇರುವವರು ಆಡುವಂಥ ಮಾತುಗಳಿಂದ ಬೇಸರ ಆಗಲಿದೆ. ನಿಮ್ಮ ಏಳ್ಗೆ, ಶ್ರೇಯಸ್ಸು ಸಹಿಸಲು ಸಾಧ್ಯವಾಗದೆ ಕೆಲವರು ದೂರುಗಳನ್ನು ನೀಡಿದ್ದಾರೆ. ಇದರಿಂದ ನಿಮಗೆ ತೊಂದರೆ ಅಂತೇನೂ ಆಗದಿದ್ದರೂ ಮಾನಸಿಕವಾದ ಕಿರಿಕಿರಿ ಇರಲಿದೆ. ಕುಟುಂಬದಲ್ಲಿನ ಹಿರಿಯ ಸದಸ್ಯರೊಬ್ಬರ ಆರೋಗ್ಯ ಸಮಸ್ಯೆ ಆತಂಕಕ್ಕೆ ಕಾರಣ ಆಗಲಿದೆ.
ಪರಿಹಾರ: ಶನಿ- ಗುರು ಆರಾಧನೆ ಮಾಡಿಕೊಳ್ಳಿ. ದುರ್ಗಾದೇವಿ- ಗಣಪತಿಯ ಸ್ತೋತ್ರಗಳನ್ನು ಹೇಳಿಕೊಳ್ಳಿ- ಕೇಳಿಸಿಕೊಳ್ಳಿ.
ಲೇಖನ- ಸ್ವಾತಿ ಎನ್.ಕೆ.
Published On - 2:32 pm, Fri, 12 December 25